Home Blog Page 4

ವಿದ್ಯುತ್ ಇಲ್ಲದೆ ಕಂಗಾಲಾದ ರೈತರು: ಹೆಸ್ಕಾಂ ಕಚೇರಿಗೆ ಬೀಗ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೆ ನೀರಾವರಿ ಬೆಳೆಗಳು ಒಣಗುತ್ತಿವೆ ಎಂದು ಆರೋಪಿಸಿ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಗುರುವಾರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಕಚೇರಿಗೆ ಬೀಗ ಜಡಿದು ತೀವ್ರ ಪ್ರತಿಭಟನೆ ನಡೆಸಿದರು. ಈ ವೇಳೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ರೈತರು, ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು.

ಮಳೆಯ ಕೊರತೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ರೈತರಿಗೆ ನೀರಾವರಿಯೇ ಆಸರೆಯಾಗಿದ್ದು, ಹಗಲಿನಲ್ಲಿ ಐದು ಗಂಟೆ ವಿದ್ಯುತ್ ನೀಡುವುದಾಗಿ ಹೇಳಿದರೂ ಮಧ್ಯದಲ್ಲೇ ಕೈಕೊಡುತ್ತಿದೆ. ರಾತ್ರಿ ಎರಡು ಗಂಟೆಗೆ ವಿದ್ಯುತ್ ನೀಡುವುದಾಗಿ ಸಂದೇಶ ಕಳುಹಿಸಿದರೂ ಮಧ್ಯರಾತ್ರಿವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ರೈತರು ಆರೋಪಿಸಿದರು.

ಲೈನ್‌ಮೆನ್‌, ಸೆಕ್ಷನ್ ಅಧಿಕಾರಿಗಳು ಹಾಗೂ ಮೇಲಾಧಿಕಾರಿಗಳಿಗೆ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಕಚೇರಿ ದೂರವಾಣಿ ಸದಾ ಸ್ವಿಚ್‌ಆಫ್ ಆಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ತಮ್ಮ ಅಹವಾಲು ಯಾರಿಗೆ ಸಲ್ಲಿಸಬೇಕು ಎಂದು ಪ್ರಶ್ನಿಸಿದರು.

ಒಂದು ಟ್ರಾನ್ಸ್‌ಫಾರ್ಮರ್‌ಗೆ ನಿಗದಿತ ಸಂಖ್ಯೆಗಿಂತ ಹೆಚ್ಚು ವಿದ್ಯುತ್ ಸಂಪರ್ಕಗಳನ್ನು ನೀಡಿರುವುದರಿಂದ ಮೊದಲು ಮೋಟಾರ್ ಚಾಲನೆ ಮಾಡಿದವರಿಗೆ ಮಾತ್ರ ನೀರು ದೊರೆಯುತ್ತಿದ್ದು, ಉಳಿದವರು ಚಾಲನೆ ಮಾಡಿದ ಕೂಡಲೇ ಟ್ರಿಪ್ ಆಗುತ್ತಿದೆ. ನಿಯಮ ಉಲ್ಲಂಘಿಸಿ ಹಣ ಪಡೆದು ಬೇಕಾಬಿಟ್ಟಿ ಸಂಪರ್ಕಗಳನ್ನು ನೀಡಲಾಗಿದೆ ಎಂದು ರೈತರು ಗಂಭೀರ ಆರೋಪ ಮಾಡಿದರು.

ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಎಇಇ ಆಂಜನೇಯಪ್ಪ ರೈತರನ್ನು ಸಮಾಧಾನಪಡಿಸಲು ಯತ್ನಿಸಿದರೂ, ರೈತರ ಆಕ್ರೋಶಕ್ಕೆ ಗುರಿಯಾದರು. ನೀರಿನ ಕೊರತೆಯಿಂದ ಮೆಕ್ಕೆಜೋಳ ಸೇರಿದಂತೆ ಬೆಳೆಗಳು ಒಣಗುತ್ತಿದ್ದು, ರೈತರ ನಷ್ಟಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದರು.

ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಪ್ರತಿಭಟನೆಗೆ ಬೆಂಬಲ ಸೂಚಿಸಿ, ರೈತರ ಸಮಸ್ಯೆಗೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ, ಲೋಕೇಶ ಸುತಾರ ಸೇರಿದಂತೆ ಹಲವರು ಹಾಜರಿದ್ದರು.

ಪ್ರತಿಭಟನೆಯಲ್ಲಿ ಹರದಗಟ್ಟಿ, ಆಡರಕಟ್ಟಿ, ಮುನಿಯನ ತಾಂಡಾ, ಉಂಡೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರಾದ ಇಮಾಮಹುಸೇನ ದೊಡ್ಡಮನಿ, ಸುರೇಶ ಮಾಳಗಿಮನಿ, ರಾಮಪ್ಪ ಲಮಾಣಿ, ನೂರಅಹ್ಮದ ದೊಡ್ಡಮನಿ, ರವಿ ಲಮಾಣಿ, ಮಹಮ್ಮದಸಾಬ್ ದೊಡ್ಡಮನಿ, ಶಿವಪ್ಪ ಲಮಾಣಿ, ಬಸವರಾಜ ಲಮಾಣಿ, ಕೃಷ್ಣಾ ಲಮಾಣಿ, ಸೋಮು ಉಮಚಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತಿಭಟನೆ ವೇಳೆ ಕೆಲ ರೈತರು ವಿಷದ ಬಾಟಲಿಗಳನ್ನು ಹಿಡಿದು ಬಂದಿದ್ದು, ಪರಿಸ್ಥಿತಿ ಗಂಭೀರವಾಗುವ ಮುನ್ನ ಪೊಲೀಸರು ಅವುಗಳನ್ನು ವಶಪಡಿಸಿಕೊಂಡರು.

“ಈ ಬಾರಿ ಮಳೆ ಇಲ್ಲದೆ ಈಗಾಗಲೇ ಕಂಗಾಲಾಗಿದ್ದೇವೆ. ಉಳಿದಿರುವ ಸ್ವಲ್ಪ ಬೆಳೆಯನ್ನಾದರೂ ನೀರಾವರಿ ಮೂಲಕ ಉಳಿಸಿಕೊಳ್ಳಬೇಕೆಂದರೆ ಅದಕ್ಕೂ ಅವಕಾಶವಿಲ್ಲದಂತಾಗಿದೆ. ವಿದ್ಯುತ್ ಪೂರೈಕೆ ಮಾಡುವವರು ರೈತರನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಬೆಳೆಗಳು ಕಣ್ಣೆದುರೇ ಒಣಗುತ್ತಿವೆ. ನಾವೇ ರೈತರು ಬೆಳೆ ಬೆಳೆಯದಿದ್ದರೆ ನೀವೇನು ತಿನ್ನುತ್ತೀರಾ? ನಮಗೆ ಇಂತಹ ವಿದ್ಯುತ್ ಸಂಪರ್ಕವೇ ಬೇಡ, ಎಲ್ಲವನ್ನೂ ಕಿತ್ತುಕೊಂಡು ಹೋಗಿ.”

– ದೇವಪ್ಪ ಲಮಾಣಿ (ಮಾಳಗಿಮನಿ), ರೈತ, ಹರದಗಟ್ಟಿ

ಉತ್ತರ ಕರ್ನಾಟಕ ರೈತರಿಗೆ ಗುಡ್ ನ್ಯೂಸ್; ಬೆಳೆ ವಿಮೆ ನೋಂದಣಿ ಅವಧಿ ಜುಲೈ 31ರವರೆಗೆ ವಿಸ್ತರಣೆ!

ಹುಬ್ಬಳ್ಳಿ: ಮಳೆ ಕೊರತೆಯಿಂದ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಲು ತೊಂದರೆ ಎದುರಿಸುತ್ತಿದ್ದ ಉತ್ತರ ಕರ್ನಾಟಕದ ರೈತರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ.

ಧಾರವಾಡ, ಗದಗ, ಹಾವೇರಿ ಹಾಗೂ ಬಾಗಲಕೋಟೆ ಜಿಲ್ಲೆಗಳ ರೈತರಿಗೆ ಬೆಳೆ ವಿಮೆ ನೋಂದಣಿ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ.

ಈ ಮೊದಲು ಬೆಳೆ ವಿಮೆ ನೋಂದಣಿಗೆ ಜುಲೈ 15 ಕೊನೆಯ ದಿನವಾಗಿತ್ತು. ಆದರೆ ಮಳೆ ಅಭಾವದ ಹಿನ್ನೆಲೆಯಲ್ಲಿ ರೈತರು ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದು, ಬೆಳೆ ವಿಮೆ ಪಾವತಿಸುವಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು.

ಈ ಸಮಸ್ಯೆಯನ್ನು ಗಮನಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರೊಂದಿಗೆ ಚರ್ಚಿಸಿ, ನೋಂದಣಿ ಅವಧಿ ವಿಸ್ತರಿಸುವಂತೆ ಮನವಿ ಮಾಡಿದ್ದರು.

ಧಾರವಾಡ ಲೋಕಸಭಾ ಕ್ಷೇತ್ರದ ರೈತರು ಹಾಗೂ ಶಾಸಕರಾದ ಸಿ.ಸಿ. ಪಾಟೀಲ್, ಎಂ.ಆರ್. ಪಾಟೀಲ್ ಸೇರಿದಂತೆ ಹಲವರು ಈ ಸಮಸ್ಯೆಯನ್ನು ಜೋಶಿ ಅವರ ಗಮನಕ್ಕೆ ತಂದಿದ್ದರು. ಬಳಿಕ ರಾಜ್ಯ ಕೃಷಿ ಇಲಾಖೆ ಜುಲೈ 15ರಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಪ್ರಸ್ತಾವನೆ ಸಲ್ಲಿಸಿದ ಕೇವಲ 24 ಗಂಟೆಗಳಲ್ಲೇ ಕೇಂದ್ರ ಸರ್ಕಾರ ಸ್ಪಂದಿಸಿ, ರೈತರ ಹಿತದೃಷ್ಟಿಯಿಂದ ಬೆಳೆ ವಿಮೆ ನೋಂದಣಿ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಿದೆ ಎಂದು ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಮಳೆ ಕೊರತೆ ಹಾಗೂ ತಾಂತ್ರಿಕ ಕಾರಣಗಳಿಂದ ಬೆಳೆ ವಿಮೆ ಮಾಡಿಸಿಕೊಳ್ಳಲಾಗದ ಅರ್ಹ ರೈತರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಸಚಿವರು ಮನವಿ ಮಾಡಿದ್ದಾರೆ.

ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನಾಭರಣ, ₹1.30 ಲಕ್ಷ ನಗದು ದೋಚಿದ ನಕಲಿ ಸ್ವಾಮೀಜಿ!

ನೆಲಮಂಗಲ: ಪೂಜೆ ಮಾಡುವ ನೆಪದಲ್ಲಿ ಮನೆಗೆ ಬಂದು ಮಹಿಳೆಯಿಂದ 43 ಗ್ರಾಂ ಚಿನ್ನಾಭರಣ ಹಾಗೂ ₹1.30 ಲಕ್ಷ ನಗದು ದೋಚಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಾಗಲಗುಂಟೆಯಲ್ಲಿ ನಡೆದಿದೆ.

ಗೀತಾ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ನಿತಿನಿ ಅಲಿಯಾಸ್ ಶಿವಕಾಳಿ ಸ್ವಾಮೀಜಿ ವಿರುದ್ಧ ಆರೋಪ ಕೇಳಿಬಂದಿದೆ. ಗೀತಾ ಅವರ ಎರಡನೇ ಮಗಳ ದಾಂಪತ್ಯ ಜೀವನದಲ್ಲಿ ಆಗಾಗ ಕಲಹ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಪರಿಚಯಸ್ಥರ ಮೂಲಕ ಶಿವಕಾಳಿ ಸ್ವಾಮೀಜಿಯನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ.

ಪೂಜೆ ವೇಳೆ ಅಳಿಯನಿಗೆ ಸಾವಿನ ಗಂಡಾಂತರವಿದೆ ಎಂದು ಹೇಳಿದ್ದ ಸ್ವಾಮೀಜಿ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಶೇಷ ಪೂಜೆ ನಡೆಸಬೇಕು ಎಂದು ಸೂಚಿಸಿದ್ದ. ಅಲ್ಲದೆ ಪೂಜೆಗೆ ಚಿನ್ನಾಭರಣ ಹಾಗೂ ನಗದು ಇಡಲು ಹೇಳಿದ್ದಾನೆ.

ಸ್ವಾಮೀಜಿಯ ಮಾತನ್ನು ನಂಬಿದ ಗೀತಾ, 43 ಗ್ರಾಂ ಚಿನ್ನಾಭರಣ ಹಾಗೂ ₹1.30 ಲಕ್ಷ ನಗದನ್ನು ಪೂಜೆಗಾಗಿ ಇಟ್ಟಿದ್ದರು. ಬಳಿಕ ಬೂದಿ ಎರಚಿ ಬೆನ್ನಿಗೆ ಹೊಡೆದ ಪರಿಣಾಮ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಚಿನ್ನಾಭರಣ ಹಾಗೂ ನಗದನ್ನು ದೋಚಿಕೊಂಡು ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ; ಕ್ಲಿನಿಕ್‌ಗೆ ₹50 ಸಾವಿರ ದಂಡ!

ಬೆಂಗಳೂರು: ಗುರಪ್ಪನಪಾಳ್ಯದ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪಾಲಿಕೆ ಅಧಿಕಾರಿಗಳು ಸಂಬಂಧಿತ ಕ್ಲಿನಿಕ್‌ಗೆ ₹50 ಸಾವಿರ ದಂಡ ವಿಧಿಸಿದ್ದಾರೆ.

ರಸ್ತೆ ಬದಿಯಲ್ಲಿ ಸೂಜಿ, ಸಿರಿಂಜ್, ಪ್ಲಾಸ್ಟರ್, ಇಂಜೆಕ್ಷನ್ ಪೈಪ್ ಸೇರಿದಂತೆ ವಿವಿಧ ವೈದ್ಯಕೀಯ ತ್ಯಾಜ್ಯಗಳು ಬಿದ್ದಿರುವುದನ್ನು ಪೌರಕಾರ್ಮಿಕರು ಗಮನಿಸಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮಾರ್ಷಲ್‌ಗಳ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತು.

ಪರಿಶೀಲನೆ ವೇಳೆ ತ್ಯಾಜ್ಯದಲ್ಲಿ ಪತ್ತೆಯಾದ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಆಧರಿಸಿ ಗುರಪ್ಪನಪಾಳ್ಯದ ಪಲ್ಸ್ ಪಾಲಿ ಕ್ಲಿನಿಕ್‌ನಿಂದ ತ್ಯಾಜ್ಯ ವಿಲೇವಾರಿಯಾಗಿರುವುದು ಬೆಳಕಿಗೆ ಬಂದಿದೆ. ವೈದ್ಯಕೀಯ ತ್ಯಾಜ್ಯವನ್ನು ಸರ್ಕಾರ ನಿಗದಿಪಡಿಸಿದ ಸಂಸ್ಥೆ ಮೂಲಕ ವಿಲೇವಾರಿ ಮಾಡದೇ, ಸಾರ್ವಜನಿಕ ಸ್ಥಳದಲ್ಲಿ ಎಸೆದಿರುವುದು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ವಿಭಾಗವು ಕ್ಲಿನಿಕ್‌ಗೆ ₹50 ಸಾವಿರ ದಂಡ ವಿಧಿಸಿ ಕ್ರಮ ಕೈಗೊಂಡಿದೆ.

ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ಮುಂದೆಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಟ್ರ್ಯಾಕ್ಟರ್ ಪಲ್ಟಿ: ಮಹಿಳೆ ಸ್ಥಳದಲ್ಲೇ ಸಾವು; 15ಕ್ಕೂ ಹೆಚ್ಚು ಮಂದಿಗೆ ಗಾಯ

ಗದಗ: ಶುಭ ಕಾರ್ಯದಲ್ಲಿ ಭಾಗವಹಿಸಲು ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದವರ ಸಂಭ್ರಮ ಕ್ಷಣಾರ್ಧದಲ್ಲಿ ಶೋಕವಾಗಿ ಮಾರ್ಪಟ್ಟ ಘಟನೆ ಗದಗ ತಾಲೂಕಿನ ತಿಮ್ಮಾಪುರ ಗ್ರಾಮದ ಸಮೀಪ ಗುರುವಾರ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ರಸ್ತೆ ಬದಿಗೆ ಪಲ್ಟಿಯಾಗಿದ್ದು, ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಬಸವ್ವ ಸತ್ಯಪ್ಪನವರ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳು ಸಮೀಪದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಿಮ್ಮಾಪುರ ಗ್ರಾಮದಿಂದ ಕೊಪ್ಪಳ ಜಿಲ್ಲೆಯ ಬೀಡನಾಳ ಗ್ರಾಮಕ್ಕೆ ಶುಭ ಕಾರ್ಯದ ನಿಮಿತ್ತ ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್ ವೇಗವಾಗಿ ಸಾಗುತ್ತಿದ್ದಾಗ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾದ ಪರಿಣಾಮ ಪ್ರಯಾಣಿಕರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಘಟನಾ ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

ಹಾವೇರಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ; ಡ್ರಗ್ಸ್–ಸಾರಾಯಿ ದಂಧೆಗೆ ಪೊಲೀಸರ ಬೆಂಬಲ – ಬೊಮ್ಮಾಯಿ ಆರೋಪ

ಹಾವೇರಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಹಾವೇರಿ ಜಿಲ್ಲೆಯಲ್ಲಿ ಡ್ರಗ್ಸ್ ಪೆಡ್ಲರ್‌ಗಳು, ಅಕ್ರಮ ಜೂಜಾಟ (ಒಸಿ) ನಡೆಸುವವರು ಹಾಗೂ ಸಾರಾಯಿ ಮಾರಾಟಗಾರರೊಂದಿಗೆ ಪೊಲೀಸರೇ ಕೈಜೋಡಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ.

ಇದೇ ವೇಳೆ, ರಾಜ್ಯ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗಬೇಕು ಎಂದು ಅವರು ಹೇಳಿದರು.

ಹಾವೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಬೊಮ್ಮಾಯಿ, ಹಾವೇರಿ ಜಿಲ್ಲೆ ಸರ್ವಜ್ಞ, ಕನಕದಾಸ ಮತ್ತು ಶಿಶುನಾಳ ಶರೀಫರಂತಹ ಮಹನೀಯರ ನಾಡಾಗಿದ್ದು, ಶಾಂತಿ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಜಿಲ್ಲೆಯ ಪರಿಸ್ಥಿತಿ ಹದಗೆಟ್ಟಿದ್ದು, ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಗಡಿಪಾರಾದವರು ಹಾಗೂ ಗೂಂಡಾ ಪಟ್ಟಿಯಲ್ಲಿದ್ದವರೇ ಪೊಲೀಸ್ ಠಾಣೆಗಳಲ್ಲಿ ಪ್ರಭಾವ ಬೀರುತ್ತಿದ್ದಾರೆ. ಬಹಿರಂಗವಾಗಿ ಇಸ್ಪೀಟ್ ಅಡ್ಡೆಗಳು ನಡೆಯುತ್ತಿದ್ದು, ಬೀಡಿ ಅಂಗಡಿಗಳಲ್ಲಿ ಒಸಿ ಮತ್ತು ಕಿರಾಣಿ ಅಂಗಡಿಗಳಲ್ಲೇ ಅಕ್ರಮವಾಗಿ ಸಾರಾಯಿ ಮಾರಾಟವಾಗುತ್ತಿದೆ ಎಂದು ಅವರು ದೂರಿದರು.

ಹಾವೇರಿಯ ಬಹುತೇಕ ಕಾಲೇಜುಗಳ ಸುತ್ತಮುತ್ತ ಡ್ರಗ್ಸ್ ಜಾಲ ಸಕ್ರಿಯವಾಗಿದೆ. ಈ ಕುರಿತು ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಿದಾಗ ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ಯಾವುದೇ ಡ್ರಗ್ಸ್ ಪೆಡ್ಲರ್ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಬೊಮ್ಮಾಯಿ ಆರೋಪಿಸಿದರು.

ಡ್ರಗ್ಸ್ ಮಾರಾಟ, ಅಕ್ರಮ ಜೂಜಾಟ ಹಾಗೂ ಸಾರಾಯಿ ದಂಧೆಯಲ್ಲಿ ತೊಡಗಿರುವವರೊಂದಿಗೆ ಪೊಲೀಸರೇ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿರುವಂತಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಪೊಲೀಸರ ಬದಲು ಏಜೆಂಟರಿಗೆ ಯೂನಿಫಾರ್ಮ್ ನೀಡಿ ಅಧಿಕಾರ ವಹಿಸಿಬಿಡಿ ಎಂದು ಸರ್ಕಾರವನ್ನು ಟೀಕಿಸಿದರು.

ಮತ್ತೆ ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್: 40ಕ್ಕೂ ಹೆಚ್ಚು ಸಚಿವಾಕಾಂಕ್ಷಿಗಳಿಗೆ ನಿರಾಸೆ!

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ರಾಜಕೀಯ ವಲಯದಲ್ಲಿ ಮೂಡಿದ್ದ ನಿರೀಕ್ಷೆಗೆ ಸದ್ಯ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಮಹತ್ವದ ಸಭೆಗಳು ನಡೆದಿದ್ದರೂ, ಸಂಪುಟ ವಿಸ್ತರಣೆ ಕುರಿತು ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳದೆ, ಪ್ರಕ್ರಿಯೆಯನ್ನು ಸದ್ಯಕ್ಕೆ ಒಂದು ವಾರ ಮುಂದೂಡಲಾಗಿದೆ ಎನ್ನಲಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ದೆಹಲಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ, ಪಕ್ಷ ಸಂಘಟನೆ ಹಾಗೂ ರಾಜ್ಯದ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಈ ಕುರಿತು ಮಾಹಿತಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, “ರಾಹುಲ್ ಗಾಂಧಿ ಅವರೊಂದಿಗೆ ಪಕ್ಷದ ಸಂಘಟನೆ ಹಾಗೂ ರಾಜ್ಯದ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ” ಎಂದು ತಿಳಿಸಿದ್ದರು.

ಸಂಪುಟ ವಿಸ್ತರಣೆಯ ವಿಚಾರವಾಗಿಯೇ ರಾಜ್ಯ ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿದ್ದ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳಲ್ಲಿ ಭಾರೀ ನಿರೀಕ್ಷೆ ಮೂಡಿತ್ತು. ಖಾಲಿ ಇರುವ 20 ಸಚಿವ ಸ್ಥಾನಗಳಿಗೆ 50ಕ್ಕೂ ಹೆಚ್ಚು ಶಾಸಕರು ಆಕಾಂಕ್ಷಿಗಳಾಗಿರುವುದರಿಂದ ಯಾರಿಗೆ ಅವಕಾಶ ನೀಡಬೇಕು ಎಂಬ ವಿಚಾರದಲ್ಲಿ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.

ಸಿಎಂ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದಲ್ಲಿ ಸ್ಥಾನ ನೀಡಬಹುದಾದವರ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ್ದರೆಂಬ ಮಾಹಿತಿ ಇದೆ. ಈ ನಡುವೆ ರಾಜ್ಯದಲ್ಲಿ ಮಳೆ ಕೊರತೆ, ಬರ ಪರಿಸ್ಥಿತಿ ಸೇರಿದಂತೆ ಹಲವು ಆಡಳಿತಾತ್ಮಕ ಸವಾಲುಗಳ ನಡುವೆಯೂ ಸಂಪುಟ ವಿಸ್ತರಣೆ ಶೀಘ್ರವಾಗಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಖಾಸಗಿ ಕಾರಣದಿಂದ ದಿಢೀರ್ ಬೆಂಗಳೂರಿಗೆ ಮರಳಿರುವ ಹಿನ್ನೆಲೆಯಲ್ಲಿ, ಸಂಪುಟ ವಿಸ್ತರಣೆ ಕುರಿತ ಚರ್ಚೆ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಖರ್ಗೆ ಅವರು ಮತ್ತೆ ದೆಹಲಿಗೆ ಮರಳಿದ ಬಳಿಕ ಹೈಕಮಾಂಡ್ ಮತ್ತೊಮ್ಮೆ ಸಭೆ ನಡೆಸಿ ಸಚಿವ ಸಂಪುಟ ವಿಸ್ತರಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಜೈಲಿಗೆ ಕರೆದೊಯ್ಯುವಾಗಲೇ ಆರೋಪಿ ಎಸ್ಕೇಪ್! ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಖೈದಿ

0

ಶಿವಮೊಗ್ಗ: ನ್ಯಾಯಾಂಗ ಬಂಧನಕ್ಕೊಳಗಾದ ಆರೋಪಿಯೊಬ್ಬ ಜೈಲಿಗೆ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಹಲ್ಲೆ ಮಾಡಿ ಪರಾರಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ. ಕಲಬುರಗಿ ಕೇಂದ್ರ ಕಾರಾಗೃಹದಿಂದ ಖೈದಿಗಳ ಪರಾರಿಯ ಪ್ರಕರಣದ ಬೆನ್ನಲ್ಲೇ ಈ ಘಟನೆ ಭದ್ರತಾ ವ್ಯವಸ್ಥೆಯ ಕುರಿತು ಪ್ರಶ್ನೆ ಎಬ್ಬಿಸಿದೆ.

ಪರಾರಿಯಾದ ಆರೋಪಿಯನ್ನು ಹೊಸನಗರ ತಾಲೂಕಿನ ಅಡುಗೋಡಿ ಗ್ರಾಮದ ವೆಂಕಟೇಶ್ (36) ಎಂದು ಗುರುತಿಸಲಾಗಿದೆ. 2019-20ರಲ್ಲಿ ಅರಣ್ಯ ವೀಕ್ಷಕ ಅಯಾನ್ ಬೆಡೆಭಾಯಿ ಹಾಗೂ ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿ ಚಕ್ರಪಾಣಿ ಅವರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು.

ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಹೊಸನಗರದ ಬಟ್ಟೆಮಲ್ಲಪ್ಪ ಸರ್ಕಲ್ ಬಳಿ ತಲುಪಿದಾಗ ಹಸಿವಾಗಿದೆ ಎಂದು ಊಟ ಕೇಳಿದ ಆರೋಪಿ, ಸಿಬ್ಬಂದಿಯ ಗಮನ ಬೇರೆಡೆ ಸೆಳೆದಿದ್ದಾನೆ.

ಡಿಆರ್‌ಎಫ್‌ಒ ಸುನೀಲ್ ಡಿ. ಕುಂಬಾರ್ ಹಾಗೂ ಸಿಬ್ಬಂದಿ ಇಬ್ರಾಹಿಂ ಊಟ ತರಲು ತೆರಳಿದ ವೇಳೆ, ಜೀಪ್‌ನಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ವೆಂಕಟೇಶ್ ಪರಾರಿಯಾಗಿದ್ದಾನೆ.

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಬಟ್ಟೆಮಲ್ಲಪ್ಪ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಶೀಘ್ರ ಬಂಧಿಸಲು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ.

AI ಎಡಿಟ್‌ನಿಂದ ದೀಪಿಕಾ ಹೆಸರಲ್ಲಿ ಫೇಕ್ ಪೋಸ್ಟ್ ವೈರಲ್! ಸೋನಂ ವಾಂಗ್‌ಚುಕ್ ಬೆಂಬಲದ ಸುದ್ದಿ ಸಂಪೂರ್ಣ ಸುಳ್ಳು

ನವದೆಹಲಿ: ನಟಿ ದೀಪಿಕಾ ಪಡುಕೋಣೆ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಇನ್‌ಸ್ಟಾಗ್ರಾಮ್ ಸ್ಟೋರಿ ಸಂಪೂರ್ಣ ನಕಲಿಯಾಗಿದೆ. ಸಾಮಾಜಿಕ ಹೋರಾಟಗಾರ ಸೋನಂ ವಾಂಗ್‌ಚುಕ್ ಅವರಿಗೆ ದೀಪಿಕಾ ಬೆಂಬಲ ಸೂಚಿಸಿದ್ದಾರೆ, ಬಳಿಕ ಪೋಸ್ಟ್ ಡಿಲೀಟ್ ಮಾಡಿದ್ದಾರೆ ಎಂಬ ಹೇಳಿಕೆಗೆ ಯಾವುದೇ ಅಧಿಕೃತ ಆಧಾರ ಇಲ್ಲ ಎಂದು ಸ್ಪಷ್ಟವಾಗಿದೆ.

ವೈರಲ್ ಆಗಿರುವ ಸ್ಕ್ರೀನ್‌ಶಾಟ್‌ನಲ್ಲಿ, “ಅವರು ಉಪವಾಸ ಮಾಡುತ್ತಿದ್ದಾರೆ, ನಾವು ಸ್ಕ್ರಾಲ್ ಮಾಡುತ್ತಿದ್ದೇವೆ” ಎಂಬ ಸಂದೇಶದೊಂದಿಗೆ, “ಪ್ರಜಾಪ್ರಭುತ್ವದ ಕರಾಳ ದಿನಗಳಲ್ಲಿ ನಾವಿದ್ದೇವೆ. ಸೋತ ನಾಯಕನನ್ನು ವೈಭವೀಕರಿಸಲು ಎಷ್ಟು ಸಿನಿಮಾಗಳನ್ನು ಮಾಡಿದರೂ ಸತ್ಯ ಬದಲಾಗುವುದಿಲ್ಲ” ಎಂಬ ಹೇಳಿಕೆಯನ್ನು ದೀಪಿಕಾ ಹೆಸರಲ್ಲಿ ಹರಡಲಾಗಿದೆ. ಆದರೆ, ಈ ಪೋಸ್ಟ್ ಅವರ ಅಧಿಕೃತ ಖಾತೆಯಲ್ಲಿ ಎಂದಿಗೂ ಪ್ರಕಟವಾಗಿಲ್ಲ.

ಫ್ಯಾಕ್ಟ್ ಚೆಕ್ ವರದಿಗಳ ಪ್ರಕಾರ, ವೈರಲ್ ಸ್ಕ್ರೀನ್‌ಶಾಟ್ ಎಐ ಆಧಾರಿತ ಡಿಜಿಟಲ್ ಎಡಿಟಿಂಗ್ ಮೂಲಕ ಸೃಷ್ಟಿಸಲಾದ ನಕಲಿ ಚಿತ್ರವಾಗಿದೆ. ದೀಪಿಕಾ ಅವರ ಯಾವುದೇ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಇಂತಹ ಪೋಸ್ಟ್ ದಾಖಲಾಗಿಲ್ಲ.

ಇದು ಕಳೆದ ಆರು ತಿಂಗಳಲ್ಲಿ ದೀಪಿಕಾ ಹೆಸರಿನಲ್ಲಿ ವೈರಲ್ ಆಗಿರುವ ಎರಡನೇ ಫೇಕ್ ಸ್ಕ್ರೀನ್‌ಶಾಟ್. ಈ ಹಿಂದೆ ಮಾರ್ಚ್‌ನಲ್ಲಿ ರಣವೀರ್ ಸಿಂಗ್ ಅಭಿನಯದ ಧುರಂಧರ್ ಚಿತ್ರದ ವಿರುದ್ಧ ದೀಪಿಕಾ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಸುಳ್ಳು ಪೋಸ್ಟ್ ವೈರಲ್ ಆಗಿತ್ತು.

ಗಮನಾರ್ಹ ಸಂಗತಿಯೆಂದರೆ, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಆಮಿರ್ ಖಾನ್ ಹಾಗೂ ಶಾರುಖ್ ಖಾನ್ ಸೇರಿದಂತೆ ಯಾವುದೇ ಪ್ರಮುಖ ಬಾಲಿವುಡ್ ನಟ-ನಟಿಯರು ಇದುವರೆಗೆ ಸೋನಂ ವಾಂಗ್‌ಚುಕ್ ಅವರ ಹೋರಾಟದ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ.

ಎಐ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಪೋಸ್ಟ್‌ಗಳು, ಮಾರ್ಫ್ ಮಾಡಿದ ಚಿತ್ರಗಳು ಮತ್ತು ಸುಳ್ಳು ಹೇಳಿಕೆಗಳನ್ನು ಹರಡುವ ಪ್ರಕರಣಗಳು ಹೆಚ್ಚುತ್ತಿವೆ. ಈ ಬೆಳವಣಿಗೆ ಡಿಜಿಟಲ್ ವೇದಿಕೆಗಳಲ್ಲಿ ಮಾಹಿತಿ ಪರಿಶೀಲನೆಯ ಅಗತ್ಯವನ್ನು ಮತ್ತಷ್ಟು ಒತ್ತಿಹೇಳುತ್ತಿದೆ.

ಇನ್ಮುಂದೆ ಪಿಯುಸಿ ಉಪನ್ಯಾಸಕರಿಗೆ 9 ಮತ್ತು 10ನೇ ತರಗತಿಗೂ ಪಾಠ ಕಡ್ಡಾಯ: ರಾಜ್ಯ ಸರ್ಕಾರದ ಆದೇಶ

ಬೆಂಗಳೂರು: ರಾಜ್ಯದ ಪಿಯುಸಿ ಉಪನ್ಯಾಸಕರ ಕರ್ತವ್ಯ ವ್ಯಾಪ್ತಿಗೆ ಮಹತ್ವದ ಬದಲಾವಣೆ ತರಲಾಗಿದ್ದು, ಇನ್ನು ಮುಂದೆ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿ ಪಾಠ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ 2013ರ ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ.

ಹೊಸ ನಿಯಮದ ಪ್ರಕಾರ, ನೇರ ನೇಮಕಾತಿ ಹಾಗೂ ಬಡ್ತಿಯ ಮೂಲಕ ನೇಮಕಗೊಂಡಿರುವ ಎಲ್ಲಾ ಪಿಯುಸಿ ಉಪನ್ಯಾಸಕರು ಪ್ರೌಢಶಾಲೆಯ 9 ಮತ್ತು 10ನೇ ತರಗತಿಗಳಿಗೂ ಬೋಧನೆ ಮಾಡುವುದು ಕಡ್ಡಾಯವಾಗಲಿದೆ. ಈ ತಿದ್ದುಪಡಿ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದರ ಜೊತೆಗೆ ರಾಜ್ಯ ಸರ್ಕಾರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೂ ಚಾಲನೆ ನೀಡಿದೆ. ಒಟ್ಟು 15 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರಡು ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ.

ನೇಮಕಾತಿ ಪ್ರಕ್ರಿಯೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 6,905 ಹುದ್ದೆಗಳು ಹಾಗೂ ರಾಜ್ಯದ ಇತರೆ ಜಿಲ್ಲೆಗಳಿಗೆ 8,095 ಹುದ್ದೆಗಳು ಮೀಸಲಿರಿಸಲ್ಪಟ್ಟಿವೆ. ಆಕ್ಷೇಪಣೆಗಳ ಪರಿಶೀಲನೆಯ ಬಳಿಕ ಅಂತಿಮ ಅಧಿಸೂಚನೆ ಪ್ರಕಟಿಸಿ ನೇಮಕಾತಿ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಸರ್ಕಾರ ತಿಳಿಸಿದೆ.