ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನಕ್ಕೆ ಒತ್ತಾಯ
ಬಿತ್ತನೆ ಕಾರ್ಯದಲ್ಲಿ ಬ್ಯುಸಿ ಆದ ಅನ್ನದಾತರು!
ಮುಖ್ಯಮಂತ್ರಿ ಯಾರೇ ಆದರೂ ಕಾಂಗ್ರೆಸ್ ಆಡಳಿತ ಶಾಶ್ವತ: ಕುರಿ ಶಿವಮೂರ್ತಿ
“ಮುಖ್ಯಮಂತ್ರಿ ಯಾರೇ ಆದರೂ ಕಾಂಗ್ರೆಸ್ ಆಡಳಿತ ಮಾತ್ರ ಐದು ವರ್ಷಪೂರ್ಣಗೊಳಿಸಿ ಶಾಶ್ವತ ಅಸ್ತಿತ್ವ ಪಡೆಯಲಿದೆ.”ಕುರಿ ಶಿವಮೂರ್ತಿವಿಜಯನಗರ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ
ವರದಕ್ಷಿಣೆಗಾಗಿ ಪತ್ನಿಯ ಕೊಲೆ! ಆಸ್ಪತ್ರೆಯಲ್ಲಿ ಶವ ಇಟ್ಟು ಎಸ್ಕೇಪ್ ಆದ ಗಂಡ!
ಹಾಸನ: ಚನ್ನರಾಯಪಟ್ಟಣದ ಕಂಚಾಗಾರ ಬೀದಿಯಲ್ಲಿ ವರದಕ್ಷಿಣೆಗಾಗಿ ಪತ್ನಿಯನ್ನು ಕೊಲೆ ಮಾಡಿ ನಂತರ ಮೃತದೇಹವನ್ನು ಆಸ್ಪತ್ರೆಯಲ್ಲಿ ಇಟ್ಟು ಪತಿ ಎಸ್ಕೇಪ್ ಆದ ಘಟನೆ ನಡೆದಿದೆ.
ಗುಲ್ಷನ್ ಬಾನು (34) ಮೃತ ಮಹಿಳೆಯಾಗಿದ್ದು, ಪತಿ ಸೈಫ್ ಅಲಿಖಾನ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಇಬ್ಬರು 14 ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಮದುವೆಯ ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ನಂತರ ವರದಕ್ಷಿಣೆ ಹಣಕ್ಕಾಗಿ ಜಗಳ ಆರಂಭಗೊಂಡಿದ್ದು, ಪತ್ನಿಗೆ ನಿರಂತರ ಕಿರುಕುಳ ಮತ್ತು ಹಲ್ಲೆ ನಡೆಯುತ್ತಿದ್ದುದಾಗಿ ಆರೋಪಿಸಲಾಗಿದೆ. ಈ ಕುರಿತು ಚನ್ನರಾಯಪಟ್ಟಣ ಹಾಗೂ ಹಾಸನ ಮಹಿಳಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಕುಟುಂಬಸ್ಥರು ಹಲವು ಬಾರಿ ರಾಜಿ ಪಂಚಾಯ್ತಿ ನಡೆಸಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ ಎಂದು ತಿಳಿದುಬಂದಿದೆ. ಇತ್ತೀಚೆಗೆ ಹಬ್ಬಕ್ಕೆ ಹಣವಿಲ್ಲ ಎಂಬ ಕಾರಣಕ್ಕೆ ಜಗಳ ನಡೆದಿದ್ದು, ಆ ಸಂದರ್ಭದಲ್ಲಿ ಪತ್ನಿಯನ್ನು ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ನಂತರ ಮೃತದೇಹವನ್ನು ಚನ್ನರಾಯಪಟ್ಟಣ ಆಸ್ಪತ್ರೆಗೆ ಆಟೋದಲ್ಲಿ ತಂದು ಬಿಟ್ಟು ಆರೋಪಿ ಸೈಫ್ ಅಲಿಖಾನ್ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆಸ್ಪತ್ರೆಯಲ್ಲಿ ಮೃತದೇಹ ಕಂಡು ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮರಣೋತ್ತರ ಪರೀಕ್ಷೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ನಡೆಸಲಾಗಿದೆ.
ಬೆಂಗಳೂರಿನಲ್ಲಿ ಮಳೆ ಅವಾಂತರ: ಕ್ಲಬ್ ಕಾಂಪೌಂಡ್ ಕುಸಿದು ಆಟೋ ಚಾಲಕ ಸಾವು!
ಬೆಂಗಳೂರು:- ಇಂದು ನಗರದಲ್ಲಿ ಸುರಿದ ಭಾರೀ ಮಳೆಗೆ ದುರಂತವೊಂದು ಸಂಭವಿಸಿದೆ.
ಭಾರೀ ಮಳೆ ಹಿನ್ನೆಲೆ ಕ್ಲಬ್ ಕಾಂಪೌಂಡ್ ಕುಸಿದು ಆಟೋ ಮೇಲೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ. ಗಂಗೊಂಡನಹಳ್ಳಿ ನಿವಾಸಿಯಾದ ಶಿವಬೋರಯ್ಯ (56) ಮೃತ ವ್ಯಕ್ತಿ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ನಗರದಾದ್ಯಂತ ಸಂಜೆ ವೇಳೆ ಮತ್ತೆ ಮಳೆರಾಯ ಅಬ್ಬರಿಸಿದ್ದು, ರಸ್ತೆಗಳು ಸೇರಿ ಅಂಡರ್‌ಪಾಸ್‌ಗಳು ಜಲಾವೃತಗೊಂಡಿದೆ. ಅಷ್ಟೇ ಅಲ್ಲ ಕೆಲವೆಡೆ ಮರಗಳು ಧರೆಗುರುಳಿದ ಘಟನೆಗಳು ಕೂಡ ವರದಿಯಾಗಿವೆ.
ಕೆ.ಆರ್. ಸರ್ಕಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಮಧ್ಯೆ GBA ಕಮಿಷನರ್ ಮಹೇಶ್ವರ್ ರಾವ್ ಅವರು ಅಂಡರ್‌ಪಾಸ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಅಂಡರ್‌ಪಾಸ್‌ಗಳಲ್ಲಿ ನೀರು ಸಂಗ್ರಹವಾಗದಂತೆ ಹಾಗೂ ರಸ್ತೆಗಳಲ್ಲಿ ಸರಾಗವಾಗಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕಸದ ಸಮರ್ಪಕ ವಿಲೇವಾರಿ ಮತ್ತು ಒಣಗಿದ ಮರಗಳ ತೆರವಿಗೆ ವಿಶೇಷ ಗಮನ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ತ್ರಿಕೋನ ಪ್ರೇಮಕ್ಕೆ 18 ವರ್ಷದ ಯುವಕ ಬಲಿ! ನಾಟಕ ನೋಡಲು ಹೋದವನ ದುರಂತ ಅಂತ್ಯ
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕು ವ್ಯಾಪ್ತಿಯ ಗಿರಿಸಾಗರ ಗ್ರಾಮದಲ್ಲಿ ನಡೆದ ನಿಗೂಢ ನಾಪತ್ತೆ ಪ್ರಕರಣವು ಇದೀಗ ಭೀಕರ ಕೊಲೆ ಪ್ರಕರಣವಾಗಿ ಬೆಳಕಿಗೆ ಬಂದಿದೆ.
18 ವರ್ಷದ ಯುವಕ ವಿಕಾಸ್ ದಳವಾಯಿ ಹತ್ಯೆಯಾಗಿರುವುದು ದೃಢಪಟ್ಟಿದ್ದು, ಪ್ರೇಮ ಸಂಬಂಧದ ತ್ರಿಕೋನವೇ ಈ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 20ರಂದು ಓಂಕಾರೇಶ್ವರ ದೇವಿ ಜಾತ್ರೆ ಸಂದರ್ಭದಲ್ಲಿ ಗ್ರಾಮದಲ್ಲಿ ನಡೆದ ನಾಟಕ ವೀಕ್ಷಿಸಲು ಹೋಗಿದ್ದ ವಿಕಾಸ್ ದಳವಾಯಿ ಮನೆಗೆ ಮರಳದೆ ನಾಪತ್ತೆಯಾಗಿದ್ದ. ಬಳಿಕ ಕುಟುಂಬಸ್ಥರು ಬೀಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಆರಂಭದಲ್ಲಿ ಸುಳಿವು ಸಿಗದೇ ಇದ್ದರೂ, ನಂತರದ ವಿಚಾರಣೆಯಲ್ಲಿ ಪ್ರಕರಣಕ್ಕೆ ಭೀಕರ ತಿರುವು ಸಿಕ್ಕಿದೆ.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಯುವತಿಯನ್ನೇ ಕೇಂದ್ರವಾಗಿಸಿಕೊಂಡ ತ್ರಿಕೋನ ಪ್ರೇಮಕಥೆಯಲ್ಲಿ ಮತ್ತೊಬ್ಬ ಪ್ರೇಮಿ ಕೃಷ್ಣಾ ಹಾಗೂ ಆಕೆಯ ಸಹೋದರ ರಾಜು ಸೇರಿಕೊಂಡು ವಿಕಾಸ್‌ನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ನಂತರ ಸಾಕ್ಷ್ಯ ನಾಶಪಡಿಸಲು ಶವವನ್ನು ಗೋಣಿ ಚೀಲದಲ್ಲಿ ತುಂಬಿ, ಕಲ್ಲುಗಳನ್ನು ಕಟ್ಟಿಹಾಕಿ ಘಟಪ್ರಭಾ ನದಿಗೆ ಎಸೆದಿರುವುದು ತಿಳಿದುಬಂದಿದೆ.
ನಾಪತ್ತೆ ಪ್ರಕರಣದ ತನಿಖೆ ಮುಂದುವರಿದಂತೆ ಶಂಕೆಯ ಆಧಾರದ ಮೇಲೆ ರಾಜುವಿನ ಸಹೋದರ ರವಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ತಿಳಿದುಬಂದಿದೆ.
ಈಗ ಪ್ರಮುಖ ಆರೋಪಿಗಳಾದ ಕೃಷ್ಣಾ ಮತ್ತು ರಾಜು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಮೃತ ಯುವಕನ ಕುಟುಂಬದಲ್ಲಿ ಆಕ್ರಂದನ ಮಡುಗಟ್ಟಿದ್ದು, ಗ್ರಾಮದಲ್ಲಿ ಶೋಕವಾತಾವರಣ ನಿರ್ಮಾಣವಾಗಿದೆ.
3 ತಿಂಗಳೊಳಗೆ ಅಂತಿಮ ತೀರ್ಪು ಕಡ್ಡಾಯ: ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಆದೇಶ!
ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತೀರ್ಪು ವಿಳಂಬದ ಸಮಸ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಮತ್ತು ಐತಿಹಾಸಿಕ ಆದೇಶವನ್ನು ಹೊರಡಿಸಿದೆ.
ವಾದ–ಪ್ರತಿವಾದ ಮುಗಿದು ತೀರ್ಪು ಕಾಯ್ದಿರಿಸಿದ ನಂತರ ಗರಿಷ್ಠ 3 ತಿಂಗಳ ಒಳಗಾಗಿ ಎಲ್ಲಾ ಹೈಕೋರ್ಟ್‌ಗಳು ಅಂತಿಮ ತೀರ್ಪು ನೀಡಲೇಬೇಕು ಎಂದು ಕಡ್ಡಾಯಗೊಳಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ ಅವರ ಪೀಠವು ಈ ನಿರ್ದೇಶನ ನೀಡಿದ್ದು, ತೀರ್ಪು ವಿಳಂಬವಾಗುವುದರಿಂದ ಕಕ್ಷಿದಾರರಿಗೆ ಅನ್ಯಾಯವಾಗುತ್ತದೆ ಮತ್ತು ನ್ಯಾಯಾಂಗದ ಮೇಲಿನ ನಂಬಿಕೆ ಕುಸಿಯುತ್ತದೆ ಎಂದು ಗಂಭೀರವಾಗಿ ಅಭಿಪ್ರಾಯಪಟ್ಟಿದೆ.
ಹೆಚ್ಚುವರಿ ಸಮಯಕ್ಕೂ ಮಿತಿ:
ಹೊಸ ಆದೇಶದ ಪ್ರಕಾರ, 3 ತಿಂಗಳೊಳಗೆ ತೀರ್ಪು ನೀಡದಿದ್ದರೆ ಪ್ರಕರಣವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಬೇಕು. ಅವರು ಗರಿಷ್ಠ 2 ವಾರಗಳ ಹೆಚ್ಚುವರಿ ಸಮಯ ಮಾತ್ರ ನೀಡಬಹುದು. ಅದಾದ ಮೇಲೂ ತೀರ್ಪು ಹೊರಬರದಿದ್ದರೆ, ಪ್ರಕರಣವನ್ನು ಹೊಸ ಪೀಠಕ್ಕೆ ವರ್ಗಾಯಿಸಿ ಮರು ವಿಚಾರಣೆ ನಡೆಸಲು ಕಕ್ಷಿದಾರರಿಗೆ ಅವಕಾಶ ನೀಡಬಹುದು.
ಜಾಮೀನು ಪ್ರಕರಣಗಳಿಗೆ ತ್ವರಿತ ತೀರ್ಪು:
ಜಾಮೀನು ಅರ್ಜಿಗಳ ವಿಚಾರಣೆಯಾದ ದಿನವೇ ಅಥವಾ ಮರುದಿನವೇ ತೀರ್ಪು ಪ್ರಕಟಿಸಿ, ಅದನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಸೂಚಿಸಿದೆ. ಜಾಮೀನು ಮಂಜೂರಾದರೆ ಕೈದಿಗಳನ್ನು ತಕ್ಷಣವೇ ಬಿಡುಗಡೆ ಮಾಡುವ ವ್ಯವಸ್ಥೆ ಕಲ್ಪಿಸಬೇಕೆಂದು ಸಹ ಹೇಳಲಾಗಿದೆ.
ಪಾರದರ್ಶಕತೆ ಮತ್ತು ಆನ್‌ಲೈನ್ ಮೇಲ್ವಿಚಾರಣೆ:
ಕಾಯ್ದಿರಿಸಿದ ತೀರ್ಪುಗಳ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು. ಪ್ರತಿ ತಿಂಗಳು ಬಾಕಿ ಇರುವ ಪ್ರಕರಣಗಳ ಕುರಿತು ನ್ಯಾಯಾಂಗ ಸಿಬ್ಬಂದಿಗೆ ಸ್ವಯಂಚಾಲಿತ ಎಚ್ಚರಿಕೆ (ಅಲರ್ಟ್) ಹೋಗುವಂತೆ ಹೈಕೋರ್ಟ್ ವೆಬ್‌ಸೈಟ್‌ಗಳನ್ನು ನವೀಕರಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಕಾರಣಗಳಿಲ್ಲದ ತೀರ್ಪಿಗೆ ತೀವ್ರ ಟೀಕೆ:
ಕೇವಲ “ಅರ್ಜಿ ಅಂಗೀಕರಿಸಲಾಗಿದೆ” ಅಥವಾ “ವಜಾ ಮಾಡಲಾಗಿದೆ” ಎಂಬ ರೀತಿಯಲ್ಲಿ ಕಾರಣವಿಲ್ಲದೆ ತೀರ್ಪುಗಳನ್ನು ಕಾಯ್ದಿರಿಸುವ ಪದ್ಧತಿಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. ಪ್ರತಿಯೊಂದು ಆದೇಶಕ್ಕೂ ಕಾನೂನುಬದ್ಧ ಕಾರಣಗಳನ್ನು ದಾಖಲಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ.
ಈ ಮಾರ್ಗಸೂಚಿಗಳು ಹೈಕೋರ್ಟ್‌ಗಳಷ್ಟೇ ಅಲ್ಲದೆ ದೇಶದ ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೂ ಅನ್ವಯವಾಗಲಿವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಗರ್ಭಿಣಿಯರ ಸ್ಟ್ರೆಸ್ ಮಗುವಿನ ಆರೋಗ್ಯಕ್ಕೂ ಅಪಾಯಕಾರಿಯೇ? ತಜ್ಞರ ಎಚ್ಚರಿಕೆ
ಗರ್ಭಾವಸ್ಥೆ ಮಹಿಳೆಯ ಜೀವನದ ಅತ್ಯಂತ ಮಹತ್ವದ ಹಂತವಾಗಿದ್ದು, ಈ ಅವಧಿಯಲ್ಲಿ ದೇಹದಲ್ಲಿ ಹಲವು ಹಾರ್ಮೋನ್ ಬದಲಾವಣೆಗಳು ನಡೆಯುತ್ತವೆ.
ಜೊತೆಗೆ ಮಾನಸಿಕ ಒತ್ತಡ, ಆತಂಕ ಮತ್ತು ಭಾವನಾತ್ಮಕ ಏರುಪೇರುಗಳೂ ಸಹ ಸಾಮಾನ್ಯವಾಗಿರುತ್ತವೆ. ಆದರೆ ಈ ಸಮಯದಲ್ಲಿ ಅತಿಯಾದ ಒತ್ತಡ, ಕೋಪ ಮತ್ತು ಚಿಕ್ಕ ವಿಷಯಕ್ಕೂ ಹೆಚ್ಚು ಸ್ಟ್ರೆಸ್ ತೆಗೆದುಕೊಳ್ಳುವುದು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಅಧ್ಯಯನಗಳ ಪ್ರಕಾರ, ದೀರ್ಘಕಾಲ ಮಾನಸಿಕ ಒತ್ತಡದಲ್ಲಿರುವ ಗರ್ಭಿಣಿಯರಲ್ಲಿ ಹಾರ್ಮೋನ್ ಬದಲಾವಣೆಗಳು ಕಂಡುಬರುತ್ತವೆ. ಇದು ತಾಯಿಯ ಆರೋಗ್ಯದ ಜೊತೆಗೆ ಗರ್ಭದಲ್ಲಿರುವ ಮಗುವಿನ ಮೆದುಳಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರಬಹುದು.
ತಜ್ಞರ ಅಭಿಪ್ರಾಯದಂತೆ, ಗರ್ಭಾವಸ್ಥೆಯಲ್ಲಿ ನಿರಂತರ ಒತ್ತಡದಲ್ಲಿರುವುದರಿಂದ ಮಗುವಿನ ಭಾವನಾತ್ಮಕ ಬೆಳವಣಿಗೆ, ವರ್ತನೆ ಹಾಗೂ ಏಕಾಗ್ರತೆಯ ಸಾಮರ್ಥ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಕೆಲವು ಮಕ್ಕಳಲ್ಲಿ ಚಿಡಿಚಿಡಿತನ, ಆತಂಕ ಅಥವಾ ಗಮನ ಕೇಂದ್ರೀಕರಿಸುವಲ್ಲಿ ತೊಂದರೆಗಳೂ ಕಾಣಿಸಬಹುದು. ಆದರೆ ಪ್ರತಿಯೊಬ್ಬ ಗರ್ಭಿಣಿಯಲ್ಲೂ ಇದೇ ರೀತಿಯ ಪರಿಣಾಮ ಕಾಣಿಸಿಕೊಳ್ಳುತ್ತದೆ ಎನ್ನಲು ಸಾಧ್ಯವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ನಿರ್ಲಕ್ಷಿಸಬಾರದ ಲಕ್ಷಣಗಳು:
- ನಿರಂತರ ಆತಂಕ ಅಥವಾ ಭಯ
- ಹೆಚ್ಚು ಕೋಪ ಅಥವಾ ಚಿಡಿಚಿಡಿತನ
- ನಿದ್ರೆಯ ಕೊರತೆ
- ಹೆಚ್ಚು ದುಃಖ ಅಥವಾ ಏಕಾಂಗಿತನ
- ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆಯಾಗುವುದು
ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ವೈದ್ಯರು ಅಥವಾ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.
ಒತ್ತಡ ಕಡಿಮೆ ಮಾಡಲು ಸಲಹೆಗಳು:
ಗರ್ಭಿಣಿಯರು ಸಾಕಷ್ಟು ವಿಶ್ರಾಂತಿ ಪಡೆಯುವುದು ಮತ್ತು ಉತ್ತಮ ನಿದ್ರೆ ಮಾಡುವುದು ಮುಖ್ಯ. ಕುಟುಂಬದವರೊಂದಿಗೆ ಮಾತುಕತೆ ನಡೆಸುವುದು ಭಾವನಾತ್ಮಕ ಬೆಂಬಲ ನೀಡುತ್ತದೆ. ಲಘು ವ್ಯಾಯಾಮ, ಧ್ಯಾನ ಹಾಗೂ ಸಮತೋಲನ ಆಹಾರ ಪದ್ಧತಿ ಮಾನಸಿಕ ಆರೋಗ್ಯ ಕಾಪಾಡಲು ಸಹಕಾರಿ. ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ.
15ರ ಹುಡುಗನಿಗೆ ಪಾಕಿಸ್ತಾನದಿಂದಲೂ ಸಲಾಂ! ವೈಭವ್ ಆಟ ನೋಡಿ ಬೆರಗಾದ ಪಿಎಸ್‌ಎಲ್ ಫ್ರಾಂಚೈಸಿ ಮಾಲೀಕ
ಇಸ್ಲಾಮಾಬಾದ್: ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಜಾಗತಿಕ ಕ್ರಿಕೆಟ್ ವಲಯದ ಗಮನ ಸೆಳೆದಿದ್ದು, ಇದೀಗ ಪಾಕಿಸ್ತಾನ ಸೂಪರ್ ಲೀಗ್ ಫ್ರಾಂಚೈಸಿಯ ಮಾಲೀಕರಿಂದಲೂ ಭರ್ಜರಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಪೇಶಾವರ್ ಝಲ್ಮಿ ತಂಡದ ಮಾಲೀಕ ಜಾವೇದ್ ಅಫ್ರಿದಿ, 15 ವರ್ಷದ ವೈಭವ್ ಪ್ರದರ್ಶನವನ್ನು ಕೊಂಡಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸಂದೇಶ ಹಂಚಿಕೊಂಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಪ್ರತಿಭೆ ಅಪರೂಪ. ಅವರ ಬ್ಯಾಟಿಂಗ್ ಶೈಲಿ ಮತ್ತು ಆತ್ಮವಿಶ್ವಾಸ ನಿಜಕ್ಕೂ ಅಚ್ಚರಿ ಮೂಡಿಸಿದೆ. ಭವಿಷ್ಯದಲ್ಲಿ ವಿಶ್ವ ಕ್ರಿಕೆಟ್‌ನ ಸೂಪರ್‌ಸ್ಟಾರ್ ಆಗುವ ಎಲ್ಲಾ ಗುಣಗಳು ಅವರಲ್ಲಿವೆ ಎಂದು ಅವರು ಬರೆದಿದ್ದಾರೆ.
ವೈಭವ್ ಸೂರ್ಯವಂಶಿಯಂತಹ ಯುವ ಆಟಗಾರರಿಗೆ ಐಪಿಎಲ್ ಅತ್ಯುತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟ ಜಾವೇದ್ ಅಫ್ರಿದಿ, ಪಾಕಿಸ್ತಾನದಲ್ಲೂ ಯುವ ಪ್ರತಿಭೆಗಳನ್ನು ಬೆಳೆಸಲು ಪಿಎಸ್‌ಎಲ್‌ನಂತಹ ಟೂರ್ನಿಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದ್ದಾರೆ. ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ಮತ್ತು ವೇದಿಕೆಗಳನ್ನು ಕಲ್ಪಿಸುವ ಅಗತ್ಯವಿದೆ ಎಂದೂ ಅವರು ಒತ್ತಿ ಹೇಳಿದ್ದಾರೆ.
ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿರುವ ವೈಭವ್, ಪ್ರಸ್ತುತ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. 15 ಪಂದ್ಯಗಳಲ್ಲಿ 680 ರನ್ ಕಲೆಹಾಕಿರುವ ಅವರು, 242.85 ಸ್ಟ್ರೈಕ್‌ರೇಟ್‌ನೊಂದಿಗೆ ಟೂರ್ನಿಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಇತ್ತೀಚೆಗೆ ಹೈದರಾಬಾದ್ ವಿರುದ್ಧ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿ ವೈಭವ್ ಎಲ್ಲರ ಗಮನ ಸೆಳೆದಿದ್ದರು. ಕೇವಲ ಮೂರು ರನ್‌ಗಳಿಂದ ಶತಕ ವಂಚಿತರಾದರೂ, ಅವರ ಸ್ಫೋಟಕ ಇನ್ನಿಂಗ್ಸ್ ಕ್ರಿಕೆಟ್ ಅಭಿಮಾನಿಗಳನ್ನು ರೋಮಾಂಚನಗೊಳಿಸಿತ್ತು.
ವೈಭವ್ ಪ್ರದರ್ಶನಕ್ಕೆ ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ವೆಸ್ಟ್ ಇಂಡೀಸ್ ದಂತಕಥೆ ಕ್ರಿಸ್ ಗೇಲ್ ಸೇರಿದಂತೆ ಹಲವು ಮಾಜಿ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯಶಸ್ಸಿನಲ್ಲಿ ವೈಭವ್ ನಿರ್ಣಾಯಕ ಪಾತ್ರ ವಹಿಸಿರುವುದು ಗಮನಾರ್ಹ.

