HomeGadag News'ಬೆಳೆ ಉಳಿಸಬೇಕಾದರೆ ವಿದ್ಯುತ್ ಕೊಡಿ': ಕೆಇಬಿ ಕಚೇರಿ ಎದುರು ರೈತರ ಆಕ್ರೋಶ

‘ಬೆಳೆ ಉಳಿಸಬೇಕಾದರೆ ವಿದ್ಯುತ್ ಕೊಡಿ’: ಕೆಇಬಿ ಕಚೇರಿ ಎದುರು ರೈತರ ಆಕ್ರೋಶ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ಸಮೀಪದ ಅಬ್ಬಿಗೇರಿ ಗ್ರಾಮದ ರೈತರು ಮಂಗಳವಾರ ನರೇಗಲ್ಲ ಕೆಇಬಿ ಗ್ರಿಡ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೆಇಬಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ರೈತರಿಗೆ ಗ್ರಾಮಸ್ಥರೂ ಬೆಂಬಲ ಸೂಚಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಸಂಗಪ್ಪ ಕುಂಬಾರ, ಸರ್ಕಾರ ರೈತರಿಗೆ ಏಳು ತಾಸು ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿಗೆ ತಂದಿದ್ದರೂ, ಅದು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ವಿದ್ಯುತ್ ಪೂರೈಕೆಯಲ್ಲಿ ಆಗಾಗ ವ್ಯತ್ಯಯ ಉಂಟಾಗುತ್ತಿರುವುದರಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಮಳೆಯ ಕೊರತೆ ಎದುರಾಗಿರುವ ಸಂದರ್ಭದಲ್ಲಿ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ತ್ರಿಫೇಸ್ ವಿದ್ಯುತ್ ಪೂರೈಕೆ ಅತ್ಯಗತ್ಯವಾಗಿದೆ. ಆದರೆ ಅಗತ್ಯ ಪ್ರಮಾಣದಲ್ಲಿ ವಿದ್ಯುತ್ ಸಿಗದ ಕಾರಣ ಕೃಷಿ ಚಟುವಟಿಕೆಗಳಿಗೆ ತೀವ್ರ ಅಡಚಣೆ ಉಂಟಾಗುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡ ಬಸವರಾಜ ತಳವಾರ ಮಾತನಾಡಿ, ಬರದ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಸರ್ಕಾರ ಮತ್ತು ಕೆಇಬಿ ಇಲಾಖೆ ಧಾವಿಸಬೇಕು. ಕನಿಷ್ಠ ಏಳು ತಾಸು ನಿರಂತರ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಕೆಇಬಿ ಸೆಕ್ಷನ್ ಅಧಿಕಾರಿ ವಿರೂಪಾಕ್ಷ ಸರ್ವಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೊಚ್ಚಿ ಹಾಗೂ ಕಾರ್ಯನಿರ್ವಾಹಕ ಅಭಿಯಂತರ ರಾಜೂರ ರೈತರ ಅಹವಾಲು ಆಲಿಸಿ, ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಧಿಕಾರಿಗಳ ಭರವಸೆಯ ಬಳಿಕ ರೈತರು ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆಯಲ್ಲಿ ಸುರೇಶ ನಾಯ್ಕರ್, ಶಿವಕುಮಾರ ಮಲ್ಲಾಪೂರ, ಶಿದ್ದಪ್ಪ ಹನಮನಾಳ, ರವಿ ಯತ್ನಟ್ಟಿ, ಮಂಜುನಾಥ ಡಂಬಳ, ಗಣೇಶ ಬಂಡಿವಡ್ಡರ, ದೇವಪ್ಪ ಜಂತ್ಲಿ, ರಮೇಶ ಬಸವರಡ್ಡಿ, ಉಮೇಶ ಹೊಸಮನಿ, ದೇವೇಂದ್ರ ಮುನೆನಕೊಪ್ಪ, ಪ್ರಮೋದ ಅಣ್ಣಿಗೇರಿ, ದೇವರಾಜ ಉಪಾದ್ಯ ಸೇರಿದಂತೆ ಅನೇಕ ರೈತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

“ಸರ್ಕಾರ ಏಳು ತಾಸು ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದರೂ ರೈತರಿಗೆ ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ. ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕೂಡಲೇ ನಿರಂತರ ತ್ರಿಫೇಸ್ ವಿದ್ಯುತ್ ಪೂರೈಕೆ ಕಲ್ಪಿಸಬೇಕು.”

– ಸಂಗಪ್ಪ ಕುಂಬಾರ, ರೈತ ಮುಖಂಡ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img