HomeKarnataka Newsಈ ದಾಖಲೆ ಇಲ್ಲದಿದ್ದರೆ ಗೃಹಲಕ್ಷ್ಮಿ ಯೋಜನೆಯಿಂದ ಹೆಸರು ಡಿಲೀಟ್? ಇದೇ ವಾರದಿಂದ ಮನೆ ಮನೆ ಸಮೀಕ್ಷೆ...

ಈ ದಾಖಲೆ ಇಲ್ಲದಿದ್ದರೆ ಗೃಹಲಕ್ಷ್ಮಿ ಯೋಜನೆಯಿಂದ ಹೆಸರು ಡಿಲೀಟ್? ಇದೇ ವಾರದಿಂದ ಮನೆ ಮನೆ ಸಮೀಕ್ಷೆ ಆರಂಭ

For Dai;y Updates Join Our whatsapp Group

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಲ್ಲಿ ಅರ್ಹರನ್ನು ಗುರುತಿಸಲು ಬಯೋಮೆಟ್ರಿಕ್ ಹಾಗೂ ಫೇಶಿಯಲ್ ಅಥೆಂಟಿಕೇಷನ್ ಮೂಲಕ ಮರುಪರಿಶೀಲನೆ ನಡೆಸಲು ಸರ್ಕಾರ ಮುಂದಾಗಿದೆ. ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುವ ಮೂಲಕ ಆರ್ಥಿಕ ಬಲ ತುಂಬುವ ಈ ಯೋಜನೆಗೆ ಮೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

2023ರ ಆಗಸ್ಟ್‌ನಿಂದ ಈವರೆಗೆ 1.24 ಕೋಟಿ ಫಲಾನುಭವಿಗಳಿಗೆ 32 ಕಂತುಗಳಲ್ಲಿ 7,69,751.13 ಕೋಟಿ ರೂಪಾಯಿ ಸಹಾಯಧನ ಪಾವತಿಸಲಾಗಿದೆ. ಆದರೆ ಈ ಅವಧಿಯಲ್ಲಿ ಮರಣ ಹೊಂದಿದವರು ಹಾಗೂ ವಲಸೆ ಹೋದವರು ಸೇರಿದಂತೆ ಅನರ್ಹರಿಗೂ ಗೃಹಲಕ್ಷ್ಮಿ ಹಣ ಸಂದಾಯವಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅನರ್ಹರನ್ನು ಕೈಬಿಟ್ಟು ಯೋಜನೆ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ.

ಇದೇ ವಾರದಿಂದ ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮನೆ ಮನೆಗೆ ತೆರಳಿ ಫಲಾನುಭವಿಗಳ ಪರಿಶೀಲನೆ ನಡೆಯಲಿದ್ದು, ವೋಟರ್ ಐಡಿ ಇಲ್ಲದಿದ್ದಲ್ಲಿ ಯೋಜನೆಯಿಂದ ಹೆಸರು ಕೈಬಿಡಲಾಗುವುದು ಎಂದು ಅವರು ಹೇಳಿದ್ದಾರೆ.

ಚುನಾವಣಾ ಆಯೋಗ ನಡೆಸಿದ ಎಸ್ಐಆರ್ ಪ್ರಕ್ರಿಯೆಯಲ್ಲಿ ಹೆಸರು ಕೈಬಿಟ್ಟಿದ್ದರೆ, ಅಂತಹವರ ಹೆಸರು ಗೃಹಲಕ್ಷ್ಮಿ ಯೋಜನೆಯಿಂದಲೂ ತೆಗೆದುಹಾಕಲಾಗುವುದು. ಮನೆ ಮನೆಗೆ ತೆರಳುವ ಸಿಬ್ಬಂದಿ ಮರುಪರಿಶೀಲನೆ ವೇಳೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ. ಮನೆಯಲ್ಲೇ ಫೇಸ್ ರೆಕಗ್ನಿಷನ್ ನಡೆಸಲಾಗುವುದು; ಅದು ಸಾಧ್ಯವಾಗದಿದ್ದಲ್ಲಿ ಬಯೋಮೆಟ್ರಿಕ್ ಕಡ್ಡಾಯಗೊಳಿಸಲಾಗಿದೆ. ಇದಲ್ಲದೆ ಬೆಂಗಳೂರು ಒನ್, ಕರ್ನಾಟಕ ಒನ್, ಸೇವಾ ಕೇಂದ್ರ ಹಾಗೂ ಪಡಿತರ ಕೇಂದ್ರಗಳಲ್ಲೂ ಬಯೋಮೆಟ್ರಿಕ್ ಪರಿಶೀಲನೆಗೆ ಅವಕಾಶ ಕಲ್ಪಿಸಲಾಗಿದೆ.

ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ಸ್ ಸರ್ವೀಸಸ್ ನಿರ್ದೇಶನಾಲಯ ಅಭಿವೃದ್ಧಿಪಡಿಸಿರುವ ತಂತ್ರಾಂಶ ಹಾಗೂ ಮೊಬೈಲ್ ಅಪ್ಲಿಕೇಷನ್ ಮೂಲಕ ಮನೆ ಮನೆ ಸಮೀಕ್ಷೆ ನಡೆಯಲಿದೆ. ಇದಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮರುಪರಿಶೀಲನಾ ಸಮೀಕ್ಷೆಯ ಮಾದರಿ ನಮೂನೆಗಳನ್ನು ಸಿದ್ಧಪಡಿಸಲಿದೆ. ಆಗಸ್ಟ್ 30ರಿಂದ ಒಂದು ತಿಂಗಳೊಳಗೆ ಕ್ಷೇತ್ರ ಪರಿಶೀಲನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಗ್ಯಾರಂಟಿ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿ ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸಲಿದ್ದು, ಫಲಾನುಭವಿಗಳು ಅದನ್ನು ಭರ್ತಿ ಮಾಡಿ ಅಲ್ಲಿಯೇ ಹಿಂತಿರುಗಿಸಬೇಕಿದೆ. ಈ ವೇಳೆ ಗಣತಿದಾರರು ಮೊಬೈಲ್ ಆ್ಯಪ್ ಬಳಸಿ ಫಲಾನುಭವಿಯ ಫೋಟೋ, ಮನೆಯ ಫೋಟೋ ಹಾಗೂ ಸ್ವಯಂಚಾಲಿತ ಜಿಪಿಎಸ್ ನಿರ್ದೇಶಾಂಕಗಳನ್ನು ದಾಖಲಿಸಲಿದ್ದಾರೆ.

ಈ ಹಿಂದೆ ಈ ಬಗ್ಗೆ ಮಾತನಾಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹಲಕ್ಷ್ಮಿ ಯೋಜನೆಗೆ ಮತದಾರರ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗುವುದು ಎಂದಿದ್ದರು. ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ವೋಟರ್ ಐಡಿ ಕೈಬಿಡದಂತೆ ಎಚ್ಚರಿಕೆ ವಹಿಸುವಂತೆಯೂ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img