Home Blog Page 60

ಶಿರಸಿ ಚಾಕು ಇರಿತ ಪ್ರಕರಣ: ಅಣ್ಣನ ಸಾವಿಗೆ ಕಾರಣರಾದವರಿಗೆ ಜೀವಾವಧಿ ಶಿಕ್ಷೆ ವಿಧಿಸಿ – ಗಾಯಾಳು ಮಹೇಶ್ ಆಗ್ರಹ

0

ಉತ್ತರ ಕನ್ನಡ: ಜಿಲ್ಲೆಯ ಶಿರಸಿಯಲ್ಲಿ ನಡೆದ ಭೀಕರ ಚಾಕು ಇರಿತ ಪ್ರಕರಣದಲ್ಲಿ ಗಾಯಗೊಂಡಿರುವ ಮಹೇಶ್ ಇದೀಗ ಕಠಿಣ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಆಸ್ಪತ್ರೆಯಿಂದಲೇ ಪ್ರತಿಕ್ರಿಯೆ ನೀಡಿರುವ ಅವರು, “ನನ್ನ ಅಣ್ಣನ ಸಾವಿಗೆ ಕಾರಣರಾದ ಯಾರಿಗೂ ಯಾವುದೇ ವಿನಾಯಿತಿ ನೀಡಬಾರದು” ಎಂದು ಆಗ್ರಹಿಸಿದ್ದಾರೆ.

ಘಟನೆಯ ಹಿನ್ನೆಲೆ ವಿವರಿಸಿದ ಮಹೇಶ್, ತನ್ನ ಪತ್ನಿ ಸುಚಿತ್ರಾ ಕಳೆದ ಐದು ತಿಂಗಳ ಹಿಂದೆ ಮಕ್ಕಳೊಂದಿಗೆ ಶಿವಮೊಗ್ಗಕ್ಕೆ ತೆರಳಿದ್ದಳು ಎಂದು ತಿಳಿಸಿದ್ದಾರೆ. ಅಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಜೊತೆ ಆಕೆ ಸಂಪರ್ಕದಲ್ಲಿದ್ದಳು. ಆತನ ಜೊತೆಗೇ ಓಡಾಡುತ್ತಿದ್ದಳು ಎಂಬ ಆರೋಪವನ್ನು ಮಹೇಶ್ ಮಾಡಿದ್ದಾರೆ.

ಸಿದ್ದಾಪುರ ಭಾಗದಲ್ಲಿ ಆ ಗುರೂಜಿಗೆ ಒಳ್ಳೆಯ ಹೆಸರು ಇಲ್ಲ. ಆತನ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯವಿದೆ. ಈ ಎಲ್ಲಾ ಹಿನ್ನೆಲೆಯಲ್ಲಿಯೇ ಈ ಕೃತ್ಯ ನಡೆದಿದೆ ಎಂದು ಮಹೇಶ್ ಶಂಕೆ ವ್ಯಕ್ತಪಡಿಸಿದ್ದಾರೆ. ದಾಳಿಯ ವೇಳೆ ಹಂತಕರು ಮಹೇಶ್ ಅವರನ್ನು ಗುರಿಯಾಗಿಸಿಕೊಂಡಿದ್ದು, ತಮ್ಮ ತಮ್ಮನನ್ನು ಉಳಿಸಲು ಮಧ್ಯ ಪ್ರವೇಶಿಸಿದ ಅಣ್ಣ ಚಾಕು ಇರಿತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

“ನನ್ನ ತಪ್ಪಿಸಲು ಬಂದ ನನ್ನ ಅಣ್ಣ ಬಲಿಯಾದ. ಅವನ ಸಾವಿಗೆ ನ್ಯಾಯ ಸಿಗಬೇಕು” ಎಂದು ಮಹೇಶ್ ಕಣ್ಣೀರಿಟ್ಟಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಸುಚಿತ್ರಾ ಸೇರಿದಂತೆ ಎಲ್ಲ ಆರೋಪಿಗಳಿಗೆ ಕಠಿಣ ಶಿಕ್ಷೆ, ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ನಡುವೆ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದು, ಎಲ್ಲ ಆರೋಪಗಳನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Gold Price Today: ಇಳಿಕೆ ಕಂಡಿದ್ದ ಚಿನ್ನ, ಬೆಳ್ಳಿ ಬೆಲೆ ಮತ್ತೆ ಏರಿಕೆ! ಮಾರುಕಟ್ಟೆ ರೇಟ್ ಹೀಗಿದೆ ನೋಡಿ

0

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಮತ್ತೆ ಭಾರಿ ಏರಿಕೆ ಕಂಡುಬಂದಿದೆ. ಅಮೆರಿಕ ಮತ್ತು ಭಾರತ ನಡುವಿನ ಸುಂಕ ಸಮರ ಸ್ಪಷ್ಟವಾದ ಬಳಿಕ ಷೇರು ಮಾರುಕಟ್ಟೆಯಲ್ಲಿ ಜಿಗಿತ ಕಂಡುಬಂದಿದ್ದು, ಇದರ ಪರಿಣಾಮವಾಗಿ ಚಿನ್ನದ ಮೇಲಿನ ಹೂಡಿಕೆಯೂ ಹೆಚ್ಚಳವಾಗಿದ್ದು, ಬೆಲೆ ಏರಿಕೆಗೆ ಮತ್ತಷ್ಟು ಬಲ ನೀಡಿದಂತಾಗಿದೆ.

ಫೆಬ್ರವರಿ 4, 2026 (ಬುಧವಾರ) ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಒಂದೇ ದಿನಕ್ಕೆ 660 ರೂಪಾಯಿ ಏರಿಕೆಯಾಗಿದೆ. ಇದರಿಂದ 10 ಗ್ರಾಂ ಚಿನ್ನದ ಬೆಲೆ 6,600 ರೂಪಾಯಿ ಹೆಚ್ಚಳಗೊಂಡಿದೆ. ಆ ಮೂಲಕ 1 ಗ್ರಾಂ ಚಿನ್ನದ ಬೆಲೆ 16,053 ರೂಪಾಯಿಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 1,60,530 ರೂಪಾಯಿಗೆ ಏರಿಕೆಯಾಗಿದೆ.

ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, 1 ಗ್ರಾಂಗೆ 605 ರೂಪಾಯಿ ಹಾಗೂ 10 ಗ್ರಾಂಗೆ 6,050 ರೂಪಾಯಿ ಹೆಚ್ಚಳವಾಗಿದೆ. ಇದರಿಂದ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1,47,150 ರೂಪಾಯಿಗೆ ತಲುಪಿದೆ.

ಬೆಂಗಳೂರು ಮಾರುಕಟ್ಟೆಯಲ್ಲಿ ಪ್ರಸ್ತುತ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 16,053 ರೂಪಾಯಿಯಾಗಿದ್ದು, 10 ಗ್ರಾಂ ಶುದ್ಧ ಚಿನ್ನದ ಬೆಲೆ 1,60,530 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲದ ಕಾರಣ, ಆಭರಣ ಮಳಿಗೆಗಳಲ್ಲಿ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುವ ಸಾಧ್ಯತೆ ಇದೆ.

ಇತ್ತ ಬೆಳ್ಳಿ ದರದಲ್ಲೂ ಏರಿಕೆ ದಾಖಲಾಗಿದ್ದು, ಇಂದು ಪ್ರತಿ ಗ್ರಾಂಗೆ 40 ರೂಪಾಯಿ ಹೆಚ್ಚಳವಾಗಿದೆ. ಇದರೊಂದಿಗೆ ಬೆಳ್ಳಿಯ 1 ಗ್ರಾಂ ಬೆಲೆ 320 ರೂಪಾಯಿಯಾಗಿದ್ದು, ಪ್ರತಿ ಕೆಜಿಗೆ 40,000 ರೂಪಾಯಿ ಏರಿಕೆಯಾಗಿ, 1 ಕೆಜಿ ಬೆಳ್ಳಿ ಬೆಲೆ 3,20,000 ರೂಪಾಯಿಗೆ ತಲುಪಿದೆ.

ಪ್ರಯಾಣಿಕರ ವಿರೋಧದ ನಡುವೆಯೂ ಮೆಟ್ರೋ ದರ ಏರಿಕೆ: ಸರ್ಕಾರದ ತೀರ್ಮಾನಕ್ಕೆ BMRCL ಗ್ರೀನ್ ಸಿಗ್ನಲ್

0

ಬೆಂಗಳೂರು: ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರ ಮತ್ತೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಬೋರ್ಡ್ ಸಭೆಯಲ್ಲಿ ಶೇ 5ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ಆದರೆ ಈ ದರ ಏರಿಕೆ ತಕ್ಷಣ ಜಾರಿಗೆ ಬರುವುದಿಲ್ಲ. ಇದಕ್ಕೆ ರಾಜ್ಯ ಸರ್ಕಾರದ ಅಂತಿಮ ಅನುಮತಿ ಅಗತ್ಯವಿದ್ದು, ಸರ್ಕಾರದ ಒಪ್ಪಿಗೆ ಪಡೆಯಲು ಬಿಎಂಆರ್‌ಸಿಎಲ್ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ.

ಕಳೆದ ವರ್ಷ ಫೆಬ್ರವರಿ 9ರಂದು ಮೆಟ್ರೋ ಟಿಕೆಟ್ ದರವನ್ನು ಶೇ 101.5ರಷ್ಟು ಏರಿಕೆ ಮಾಡಲಾಗಿತ್ತು. ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇವಲ ಮೂರು ದಿನಗಳಲ್ಲೇ ದರವನ್ನು ಶೇ 71.5ಕ್ಕೆ ಇಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ವಿವಾದದ ಕಹಿ ನೆನಪು ಮಾಸುವ ಮೊದಲೇ ಮತ್ತೊಮ್ಮೆ ದರ ಏರಿಕೆ ಚರ್ಚೆ ಆರಂಭವಾಗಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಈಗ ಬಿಎಂಆರ್‌ಸಿಎಲ್ ಬೋರ್ಡ್ ಸಭೆಯಲ್ಲಿ ಶೇ 5ರಷ್ಟು ದರ ಏರಿಕೆಗೆ ಒಪ್ಪಿಗೆ ದೊರೆತಿದ್ದು, ಸರ್ಕಾರದ ಅಂತಿಮ ನಿರ್ಧಾರಕ್ಕಾಗಿ ಕಾಯಲಾಗುತ್ತಿದೆ. ಪ್ರಯಾಣಿಕರ ತೀವ್ರ ವಿರೋಧದ ನಡುವೆಯೂ ಮೆಟ್ರೋ ನಿಗಮ ದರ ಏರಿಕೆಗೆ ಪಟ್ಟು ಹಿಡಿದಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

Steve Smith: ಐಪಿಎಲ್ʼನಲ್ಲಿ ಅನ್ ಸೋಲ್ಡ್ ಆದ ಸ್ಟೀವ್ ಸ್ಮಿತ್ PSL 2026ಕ್ಕೆ ಎಂಟ್ರಿ..!

0

ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ (Steve Smith) ಪಾಕಿಸ್ತಾನ್ ಸೂಪರ್ ಲೀಗ್ (PSL) 2026ರಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ವಿಶೇಷವೆಂದರೆ, ಈ ಬಾರಿ ಅವರು ಪಿಎಸ್‌ಎಲ್‌ನ ಹೊಸ ಫ್ರಾಂಚೈಸಿ ತಂಡವಾದ ‘ಸಿಯಾಲ್ಕೋಟ್ ಸ್ಟಾಲಿಯನ್ಸ್’ ಪರ ಆಡಲಿದ್ದಾರೆ.

ಪಾಕಿಸ್ತಾನ್ ಸೂಪರ್ ಲೀಗ್‌ನ 11ನೇ ಸೀಸನ್ ಮೂಲಕ ಸಿಯಾಲ್ಕೋಟ್ ಸ್ಟಾಲಿಯನ್ಸ್ ಫ್ರಾಂಚೈಸಿ ಟೂರ್ನಿಗೆ ಅಧಿಕೃತವಾಗಿ ಪ್ರವೇಶ ಪಡೆಯುತ್ತಿದ್ದು, ಈ ಹೊಸ ತಂಡವು ಸ್ಟೀವ್ ಸ್ಮಿತ್ ಅವರನ್ನು ನೇರ ಆಯ್ಕೆ (Direct Signing) ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ. ಇದರೊಂದಿಗೆ ಪಿಎಸ್‌ಎಲ್ 2026ರಲ್ಲಿ ಸ್ಮಿತ್ ಸಿಯಾಲ್ಕೋಟ್ ಸ್ಟಾಲಿಯನ್ಸ್ ಪರ ಕಣಕ್ಕಿಳಿಯಲಿದ್ದಾರೆ.

ಅಷ್ಟೇ ಅಲ್ಲದೆ, ಸ್ಟೀವ್ ಸ್ಮಿತ್ ತಂಡದ ನಾಯಕನಾಗುವ ಸಾಧ್ಯತೆಯೂ ಹೆಚ್ಚಾಗಿದೆ. ಸಿಯಾಲ್ಕೋಟ್ ಸ್ಟಾಲಿಯನ್ಸ್ ತಂಡದ ಮುಖ್ಯ ಕೋಚ್ ಆಗಿರುವ ಆಸ್ಟ್ರೇಲಿಯಾ ಮಾಜಿ ನಾಯಕ ಟಿಮ್ ಪೈನ್ ಅವರ ಶಿಫಾರಸ್ಸಿನ ಮೇರೆಗೆ, ಫ್ರಾಂಚೈಸಿಯು ಸ್ಮಿತ್ ಅವರನ್ನು ಮಾರ್ಕ್ಯೂ ಆಟಗಾರ (Marquee Option) ಆಗಿ ಆಯ್ಕೆ ಮಾಡಿಕೊಂಡಿದೆ ಎಂದು ವರದಿಯಾಗಿದೆ.

ಸ್ಟೀವ್ ಸ್ಮಿತ್ ಈಗಾಗಲೇ ಅತ್ಯುತ್ತಮ ನಾಯಕತ್ವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು, ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಹಲವು ಪ್ರಮುಖ ಟ್ರೋಫಿಗಳನ್ನು ಗೆದ್ದುಕೊಂಡಿದೆ. ಇತ್ತೀಚೆಗೆ ಮೇಜರ್ ಲೀಗ್ ಕ್ರಿಕೆಟ್ (MLC) ಟೂರ್ನಿಯಲ್ಲಿ ಸಹ, ಸ್ಮಿತ್ ನಾಯಕತ್ವದಡಿ ಆಡಿದ್ದ ವಾಷಿಂಗ್ಟನ್ ಫ್ರೀಡಂ ತಂಡ ಚಾಂಪಿಯನ್ ಪಟ್ಟವನ್ನು ಗೆದ್ದಿತ್ತು.

ಈ ಹಿನ್ನಲೆಯಲ್ಲಿ, ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಸಿಯಾಲ್ಕೋಟ್ ಸ್ಟಾಲಿಯನ್ಸ್ ತಂಡವೂ ಸ್ಟೀವ್ ಸ್ಮಿತ್ ಅವರ ಮುಂದಾಳತ್ವದಲ್ಲೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ ಎಂಬ ನಿರೀಕ್ಷೆ ಮೂಡಿದೆ.

ಲಿಬಿಯಾದಲ್ಲಿ ಮತ್ತೆ ರಕ್ತಪಾತ! ಗಡಾಫಿಯ ಪುತ್ರ ಸೈಫ್ ಅಲ್–ಇಸ್ಲಾಂ ಗುಂಡಿನ ದಾಳಿಯಲ್ಲಿ ಹತ್ಯೆ

0

ಲಿಬಿಯಾ: ಲಿಬಿಯಾದಲ್ಲಿ ರಾಜಕೀಯ ಉದ್ವಿಗ್ನತೆ ಮತ್ತೊಮ್ಮೆ ಭುಗಿಲೆದ್ದಿದೆ. ಲಿಬಿಯಾದ ಮಾಜಿ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯ ಪುತ್ರ ಸೈಫ್ ಅಲ್–ಇಸ್ಲಾಂ ಗಡಾಫಿಯನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ವಾಯುವ್ಯ ಲಿಬಿಯಾದ ಜಿಂಟಾನ್ ನಗರದಲ್ಲಿರುವ ಅವರ ನಿವಾಸದ ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಭೀಕರ ದಾಳಿ ನಡೆದಿದೆ. ಸೈಫ್ ಅಲ್–ಇಸ್ಲಾಂಗೆ 53 ವರ್ಷ ವಯಸ್ಸಾಗಿತ್ತು.

ಲಿಬಿಯಾದ ಅಧಿಕಾರಿಗಳು ಮತ್ತು ಕುಟುಂಬ ಮೂಲಗಳು ಮಂಗಳವಾರ ಈ ಘಟನೆಯನ್ನು ಅಧಿಕೃತವಾಗಿ ದೃಢಪಡಿಸಿವೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ನಾಲ್ವರು ಮುಸುಕುಧಾರಿ ಬಂದೂಕುಧಾರಿಗಳು ಸೈಫ್ ಅಲ್–ಇಸ್ಲಾಂ ಅವರ ಮನೆಗೆ ನುಗ್ಗಿ, ಭದ್ರತಾ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿ, ನಂತರ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ.

ಸೈಫ್ ಅಲ್–ಇಸ್ಲಾಂ ಗಡಾಫಿ ತಮ್ಮ ತಂದೆ ಮುಅಮ್ಮರ್ ಗಡಾಫಿಯ ಆಡಳಿತದ ಅವಧಿಯಲ್ಲಿ ಅತ್ಯಂತ ಪ್ರಭಾವಿ ಮತ್ತು ಶಕ್ತಿಶಾಲಿ ನಾಯಕನಾಗಿದ್ದರು. ಅವರ ಹತ್ಯೆಯ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ, ಈ ಘಟನೆ ಲಿಬಿಯಾದ ಅಸ್ಥಿರ ಭದ್ರತಾ ವ್ಯವಸ್ಥೆ ಮತ್ತು ವರ್ಷಗಳಿಂದ ಮುಂದುವರೆದ ರಾಜಕೀಯ ಸಂಘರ್ಷವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.

ಲಿಬಿಯಾದ ಭದ್ರತಾ ಸಂಸ್ಥೆಗಳು ಪ್ರಕರಣದ ತನಿಖೆಯನ್ನು ಆರಂಭಿಸಿದ್ದು, ದಾಳಿಕೋರರು ಕಮಾಂಡೋ ತರಬೇತಿ ಪಡೆದ ತಂಡವಾಗಿರಬಹುದೆಂದು ಶಂಕಿಸಲಾಗಿದೆ. ಹತ್ಯೆಯ ಹಿಂದೆ ರಾಜಕೀಯ ಸಂಚು ಇದೆಯೇ ಎಂಬ ಕೋನದಲ್ಲಿಯೂ ತನಿಖೆ ನಡೆಯುತ್ತಿದೆ.

ಆನ್‌ಲೈನ್ ಗೇಮ್ ನಿಷೇಧಿಸಿದ ಪೋಷಕರು… 9ನೇ ಮಹಡಿಯಿಂದ ಹಾರಿ ಮೂವರು ಸಹೋದರಿಯರ ದಾರುಣ ಅಂತ್ಯ!

0

ಗಾಜಿಯಾಬಾದ್: ಆನ್‌ಲೈನ್ ಗೇಮ್ ಆಡಬೇಡಿ ಎಂದು ಪೋಷಕರು ಎಚ್ಚರಿಸಿದ್ದಕ್ಕೆ, ಮೂವರು ಅಪ್ರಾಪ್ತ ಸಹೋದರಿಯರು ಹೌಸಿಂಗ್ ಸೊಸೈಟಿಯ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಮಂಗಳವಾರ ತಡರಾತ್ರಿ ಈ ಭೀಕರ ಘಟನೆ ನಡೆದಿದ್ದು, ಇಡೀ ಪ್ರದೇಶವನ್ನು ಶೋಕಸಾಗರಕ್ಕೆ ತಳ್ಳಿದೆ.

ಮೃತ ಬಾಲಕಿಯರನ್ನು ಪಾಖಿ (12), ಪ್ರಾಚಿ (14) ಮತ್ತು ವಿಶಿಕಾ (16) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಕೋವಿಡ್-19 ಸಾಂಕ್ರಾಮಿಕ ಸಮಯದಿಂದಲೇ ಈ ಮೂವರು ಆನ್‌ಲೈನ್ ವಿಡಿಯೋ ಗೇಮ್‌ಗಳಿಗೆ ತೀವ್ರವಾಗಿ ವ್ಯಸನಿಯಾಗಿದ್ದರು. ವಿಶೇಷವಾಗಿ ಟಾಸ್ಕ್ ಆಧಾರಿತ ಕೊರಿಯನ್ ಲವ್ ಗೇಮ್‌ಗಳನ್ನು ಆಡುತ್ತಿದ್ದರು ಎನ್ನಲಾಗಿದೆ.

ಆಟದ ವ್ಯಸನ ಇಷ್ಟರ ಮಟ್ಟಿಗೆ ತಲುಪಿತ್ತು ಎನ್ನುವುದಕ್ಕೆ, ಹುಡುಗಿಯರು ಶಾಲೆಗೆ ಹೋಗುವುದನ್ನೇ ನಿಲ್ಲಿಸಿ ಹೆಚ್ಚಿನ ಸಮಯವನ್ನು ಮೊಬೈಲ್ ಮತ್ತು ಗೇಮಿಂಗ್‌ನಲ್ಲಿ ಕಳೆಯುತ್ತಿದ್ದರು ಎಂಬುದು ಸ್ಪಷ್ಟ ಸಾಕ್ಷಿ. ಇದನ್ನು ವಿರೋಧಿಸಿ ಪೋಷಕರು ಆನ್‌ಲೈನ್ ಗೇಮಿಂಗ್ ನಿಲ್ಲಿಸುವಂತೆ ಎಚ್ಚರಿಸಿದ್ದರು. ಇದೇ ವಿಚಾರವೇ ಈ ದಾರುಣ ಘಟನೆಯ ಹಿಂದಿನ ಪ್ರಮುಖ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.

ಬೆಳಗಿನ ಜಾವ 2 ಗಂಟೆ ಸುಮಾರಿಗೆ ಗಾಜಿಯಾಬಾದ್‌ನ ಭಾರತ್ ಸಿಟಿ ವಸತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಾಲ್ಕನಿಯಲ್ಲಿ ಪ್ಲಾಸ್ಟಿಕ್ ಕುರ್ಚಿಯನ್ನು ಇಟ್ಟುಕೊಂಡು, ಮೂವರು ಸಹೋದರಿಯರು ಒಬ್ಬೊಬ್ಬರಾಗಿ 9ನೇ ಮಹಡಿಯಿಂದ ಹಾರಿದ್ದಾರೆ. ಕೆಳಗೆ ಬಿದ್ದ ಪರಿಣಾಮ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಕುಟುಂಬ ಸದಸ್ಯರು ಮತ್ತು ಸ್ಥಳೀಯರು ನೋಡುತ್ತಿದ್ದಂತೆಯೇ ಎಲ್ಲವೂ ಮುಗಿದಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ವೈದ್ಯರು ಮೂವರನ್ನೂ ಮೃತರೆಂದು ಘೋಷಿಸಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ವಿಶೇಷ ಅಧಿವೇಶನ ಮಧ್ಯೆಯೇ ದಲಿತ ಶಕ್ತಿ ಪ್ರದರ್ಶನ! ಪರಮೇಶ್ವರ್ ನೇತೃತ್ವದಲ್ಲಿ SC–ST ನಾಯಕರ ಗುಪ್ತ ಸಭೆ

0

ಬೆಂಗಳೂರು: ವಿಶೇಷ ಅಧಿವೇಶನದ ಗದ್ದಲದ ನಡುವೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್‌ನ SC, ST ಸಚಿವರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಖಾಸಗಿ ಹೋಟೆಲಿನಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಅಧಿಕಾರ ಹಂಚಿಕೆ ವಿಚಾರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಸಭೆ ನಡೆದಿರುವುದು ರಾಜಕೀಯವಾಗಿ ಭಾರೀ ಮಹತ್ವ ಪಡೆದುಕೊಂಡಿದೆ.

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೀಡಿದ್ದ ಸೂಚನೆಯಂತೆ ಈ ಸಭೆ ನಡೆದಿದೆ ಎನ್ನಲಾಗುತ್ತಿದ್ದು, ಪಕ್ಷದ ಒಳಗಿನ ಅಸಮಾಧಾನ ಈಗ ಬಹಿರಂಗ ರೂಪ ಪಡೆಯುತ್ತಿರುವ ಸೂಚನೆಗಳು ಕಾಣಿಸುತ್ತಿವೆ. ಸಭೆಯಲ್ಲಿ ಸಚಿವರಾದ ಪರಮೇಶ್ವರ್, ಮುನಿಯಪ್ಪ, ಹೆಚ್.ಸಿ.ಮಹದೇವಪ್ಪ, ಶಿವರಾಜ ತಂಗಡಗಿ, ಮಾಜಿ ಸಚಿವ ಕೆ.ಎನ್.ರಾಜಣ್ಣ ಸೇರಿ 20ಕ್ಕೂ ಹೆಚ್ಚು SC, ST ಶಾಸಕರು ಹಾಗೂ ಪರಿಷತ್ ಸದಸ್ಯರು ಭಾಗವಹಿಸಿದ್ದರು.

SCSP–TSP ಅನುದಾನ ಬಳಕೆ ವಿಚಾರವೇ ಸಭೆಯ ಪ್ರಮುಖ ಅಜೆಂಡಾಗಿತ್ತು. ಈ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಸ್ತಿರುವುದಕ್ಕೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಬಜೆಟ್‌ನಲ್ಲಿ SC, ST ಸಮುದಾಯಕ್ಕೆ ವಿಶೇಷ ಕೊಡುಗೆ ನೀಡಬೇಕು ಹಾಗೂ SCSP–TSP ಹಣ ಯಾವ ಉದ್ದೇಶಕ್ಕೆ ಮೀಸಲಾಗಿದೆಯೋ ಅದಕ್ಕೆ ಮಾತ್ರ ಬಳಸಬೇಕು ಎಂಬ ಒಗ್ಗಟ್ಟಿನ ಧ್ವನಿ ಸಭೆಯಲ್ಲಿ ಕೇಳಿಬಂದಿದೆ.

ಇದೇ ವೇಳೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ನೇರವಾಗಿ ಮಂಡಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಜೊತೆಗೆ, ದಲಿತ ಸಿಎಂ ಬೇಡಿಕೆಯನ್ನು ಹೈಕಮಾಂಡ್ ಮುಂದೆ ಪ್ರಸ್ತಾಪಿಸುವ ಬಗ್ಗೆ ಸಮುದಾಯದ ನಾಯಕರು ಸಮಾಲೋಚನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿಂದೆ ಸಚಿವ ಸಂಪುಟ ಸಭೆಯಲ್ಲೇ SCSP–TSP ಅನುದಾನ ಹಂಚಿಕೆ ವಿಚಾರವಾಗಿ ಸಚಿವ ಹೆಚ್.ಸಿ.ಮಹದೇವಪ್ಪ ರೋಷಾವೇಶ ಪ್ರದರ್ಶಿಸಿದ್ದರು. “SCSP–TSP ಹಣ ಯಾಕೆ ನೀಡಿಲ್ಲ? ಬೇರೆ ಕಡೆ ಬಳಸುತ್ತಿದ್ದೀರಾ? ಸಮುದಾಯಕ್ಕೆ ಅನ್ಯಾಯವಾಗುತ್ತಿದೆ” ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದ್ದ ಪ್ರಸಂಗ ಇನ್ನೂ ತಾಜಾ. ಆ ಘಟನೆಯ ಬೆನ್ನಲ್ಲೇ ಈಗ ಈ ಸಭೆ ನಡೆದಿರುವುದು ಕಾಂಗ್ರೆಸ್ ಒಳರಾಜಕಾರಣದಲ್ಲಿ ಹೊಸ ಬಿರುಕು ಮೂಡಿಸಿದೆ.

ಮೂರುವರೆ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಜೀವಾವಧಿ ಶಿಕ್ಷೆ ಬದಲು ಬಾಲಾಪರಾಧಿಗೆ 35 ವರ್ಷ ಜೈಲು

0

ರಾಜಸ್ಥಾನ: ಮೂರುವರೆ ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಬಂಧನದಲ್ಲಿದ್ದ ಬಾಲಾಪರಾಧಿಯ ಜೀವಾವಧಿ ಶಿಕ್ಷೆಯನ್ನು ಮಾರ್ಪಡಿಸಿ, 35 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶಿಸಿದೆ. ಜೊತೆಗೆ ಆರೋಪಿಗೆ 1.40 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ.

ಅತ್ಯಾಚಾರ ಪ್ರಕರಣದಲ್ಲಿ ತನಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಕಡಿತಗೊಳಿಸುವಂತೆ ಕೋರಿ ಬಾಲಾಪರಾಧಿ ಹೈಕೋರ್ಟ್ ಮೆಟ್ಟಿಲೇರಿದ್ದ. ಈ ಅರ್ಜಿಯನ್ನು ಹೈಕೋರ್ಟ್ ಬಾಲ ನ್ಯಾಯಮಂಡಳಿಗೆ ವರ್ಗಾಯಿಸಿತ್ತು. ಅಪರಾಧದ ತೀವ್ರತೆಯನ್ನು ಪರಿಗಣಿಸಿದ ಬಾಲ ನ್ಯಾಯಮಂಡಳಿ, ಪ್ರಕರಣವನ್ನು ಮತ್ತೆ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲೇ ಮರು ವಿಚಾರಣೆ ನಡೆಸುವಂತೆ ಸೂಚನೆ ನೀಡಿತ್ತು.

ನ್ಯಾಯಾಲಯದ ಸೂಚನೆಯಂತೆ ಪೋಕ್ಸೋ ವಿಶೇಷ ನ್ಯಾಯಾಲಯ ಪ್ರಕರಣದ ಮರು ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಸಲ್ಲಿಸಿದ 23 ಸಾಕ್ಷಿಗಳು ಹಾಗೂ 40 ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶೆ ಶಹನಾಜ್ ಪರ್ವೀನ್, ಆರೋಪಿಯು ತಪ್ಪಿತಸ್ಥನೆಂದು ನಿರ್ಣಯಿಸಿದರು. ಮೂರೂವರೆ ವರ್ಷದ ಮಗುವಿಗೆ ತೀವ್ರ ಶಾರೀರಿಕ ಹಾಗೂ ಮಾನಸಿಕ ಹಾನಿ ಉಂಟು ಮಾಡಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಈ ಹಿನ್ನೆಲೆಯಲ್ಲಿ, ಪೋಕ್ಸೋ ಕಾಯ್ದೆಯ ಸೆಕ್ಷನ್ 363ರ ಅಡಿ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ, ಸೆಕ್ಷನ್ 307ರ ಅಡಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 3/4ರ ಅಡಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಒಟ್ಟಾರೆ ಆರೋಪಿಗೆ 35 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1.40 ಲಕ್ಷ ರೂ. ದಂಡ ವಿಧಿಸಲಾಗಿದೆ.

ಬೆಳಗಾವಿ| ಚಲಿಸುತ್ತಿದ್ದ ಲಾರಿ ಏರಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ!

0

ಬೆಳಗಾವಿ:- ನಗರದ ಕ್ಲಬ್ ರಸ್ತೆಯ ಶಂಕರಾನಂದ ಪುತ್ಥಳಿ ಬಳಿ ಚಲಿಸುತ್ತಿದ್ದ ಲಾರಿ ಏರಿ ಸಿನಿಮಾ ಸ್ಟೈಲ್​​ನಲ್ಲಿ ಡ್ರೈವರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಜರುಗಿದೆ.

ಅಯಾಜ್ ಸವಣೂರ(36) ದಾಳಿಗೊಳಗಾದ ವ್ಯಕ್ತಿಯಾಗಿದ್ದು, ಎಂಟು ಜನರಿಂದ ಮಾರಣಾಂತಿಕ ಹಲ್ಲೆ ಆರೋಪ ಕೇಳಿಬಂದಿದೆ. ಮೂಲಗಳ ಪ್ರಕಾರ ಹಿಂಡಲಗಾ ಬಳಿ ನಡೆದ ಅಪಘಾತವೇ ಘಟನೆಗೆ ಕಾರಣ ಎನ್ನಲಾಗಿದೆ. ಆ್ಯಕ್ಸಿಡೆಂಟ್ ಮಾಡಿ ಲಾರಿ ನಿಲ್ಲಿಸದೇ ಬಂದ ಕಾರಣ, ಬೆನ್ನುಹತ್ತಿ ಬಂದು ಚಾಲಕನ ಮೇಲೆ ನಡೆಸಿರುವ ಮಾಹಿತಿ ಲಭ್ಯವಾಗಿದೆ.

ಲಾರಿ ಚಾಲಕ ಅಯಾಜ್ ಸವಣೂರ ತೊಡೆ, ಕಿವಿ, ಬೆನ್ನು ಮತ್ತು ತಲೆ ಭಾಗಕ್ಕೆ ದುಷ್ಕರ್ಮಿಗಳು ಚಾಕುವಿನಿಂದ ಮನಬಂದತೆ ಇರಿದಿದ್ದು, ಲಾರಿ ಮೇಲೂ ಕಲ್ಲು ತೂರಾಟ ನಡೆಸಿ, ಗಾಜು ಒಡೆದು ಅಟ್ಟಹಾಸ ಮೆರೆದಿದ್ದಾರೆ. ಗಂಭೀರ ಗಾಯಗೊಂಡ ಅಯಾಜ್​​ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಘಟನಾ ಸ್ಥಳಕ್ಕೆ ಬೆಳಗಾವಿ ಪೊಲೀಸರ ತಂಡ ಮತ್ತು ಸೋಕೋ ಟೀಮ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಚಳಿಗಾಲದಲ್ಲಿ ಖರ್ಜೂರ ತಿನ್ನಬೇಕಾ? ಬಾದಾಮಿ ತಿನ್ನಬೇಕಾ? ಯಾವುದು ಹೆಚ್ಚು ಆರೋಗ್ಯಕರ?

0

ಚಳಿಗಾಲದಲ್ಲಿ ದೇಹದ ರೋಗನಿರೋಧಕ ಶಕ್ತಿ ಸ್ವಲ್ಪ ಮಟ್ಟಿಗೆ ದುರ್ಬಲಗೊಳ್ಳುವುದು ಸಾಮಾನ್ಯ. ಪರಿಣಾಮವಾಗಿ, ಶೀತ, ಜ್ವರ ಸೇರಿದಂತೆ ಕಾಲೋಚಿತ ಕಾಯಿಲೆಗಳು ಬೇಗನೆ ಕಾಡುವ ಸಾಧ್ಯತೆ ಹೆಚ್ಚಾಗುತ್ತದೆ. ಹೀಗಾಗಿ ಈ ಋತುವಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಾಗೂ ದೇಹವನ್ನು ಒಳಗಿನಿಂದ ಬೆಚ್ಚಗಿಡುವ ಆಹಾರ ಸೇವನೆ ಮಾಡುವುದು ಬಹಳ ಮುಖ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ಖರ್ಜೂರ ಮತ್ತು ಬಾದಾಮಿಯಂತಹ ಒಣಹಣ್ಣುಗಳನ್ನು ನಿಯಮಿತವಾಗಿ ಸೇವಿಸುವಂತೆ ಸಲಹೆ ನೀಡುತ್ತಾರೆ. ಇವೆರಡೂ ಆರೋಗ್ಯಕ್ಕೆ ಉತ್ತಮವಾದರೂ, ಅವುಗಳ ಪ್ರಯೋಜನಗಳು ವಿಭಿನ್ನವಾಗಿವೆ. ಹಾಗಾದರೆ ಚಳಿಗಾಲದಲ್ಲಿ ಯಾವುದು ಹೆಚ್ಚು ಉಪಯುಕ್ತ? ಅದರ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಚಳಿಗಾಲದಲ್ಲಿ ಖರ್ಜೂರ ಸೇವನೆಯ ಪ್ರಯೋಜನಗಳು

ಖರ್ಜೂರದಲ್ಲಿ ಗ್ಲೂಕೋಸ್ ಮತ್ತು ಫ್ರಕ್ಟೋಸ್‌ನಂತಹ ನೈಸರ್ಗಿಕ ಸಕ್ಕರೆ ಅಂಶಗಳು ಅಧಿಕವಾಗಿವೆ. ಇದರಿಂದ ದೇಹಕ್ಕೆ ತಕ್ಷಣ ಶಕ್ತಿ ದೊರೆಯುತ್ತದೆ. ಬೆಳಿಗ್ಗೆ 2 ರಿಂದ 3 ಖರ್ಜೂರ ತಿನ್ನುವುದರಿಂದ ಆಯಾಸ ಕಡಿಮೆಯಾಗುತ್ತದೆ. ಖರ್ಜೂರದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುವುದರಿಂದ, ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಮತ್ತು ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ದೌರ್ಬಲ್ಯವನ್ನು ತಡೆಯಲು ಸಹಕಾರಿಯಾಗುತ್ತದೆ.

ಇದಲ್ಲದೆ, ಖರ್ಜೂರದಲ್ಲಿರುವ ನಾರಿನ ಅಂಶ ಜೀರ್ಣಕ್ರಿಯೆಯನ್ನು ಸುಧಾರಿಸಿ ಮಲಬದ್ಧತೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಖರ್ಜೂರ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದಾದ್ದರಿಂದ, ಮಿತವಾಗಿ ಸೇವಿಸುವುದು ಅಗತ್ಯ.

ಬಾದಾಮಿ ತಿನ್ನುವುದರಿಂದಾಗುವ ಆರೋಗ್ಯ ಲಾಭಗಳು

ಬಾದಾಮಿ ತಕ್ಷಣ ಶಕ್ತಿ ನೀಡದಿದ್ದರೂ, ದೀರ್ಘಕಾಲದವರೆಗೆ ನಿರಂತರ ಶಕ್ತಿ ಒದಗಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಇರುವ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಫೈಬರ್ ಅಂಶಗಳು ಚಳಿಗಾಲದಲ್ಲಿ ದೇಹವನ್ನು ಬಲವಾಗಿ ಹಾಗೂ ಬೆಚ್ಚಗಿಡಲು ಸಹಕಾರಿಯಾಗುತ್ತವೆ. ಬಾದಾಮಿಯಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಒಣ ಚರ್ಮದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಅಷ್ಟೇ ಅಲ್ಲ, ಬಾದಾಮಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಮೆದುಳಿನ ಆರೋಗ್ಯಕ್ಕೂ ಅತ್ಯಂತ ಉಪಯುಕ್ತವಾಗಿದೆ. ರಾತ್ರಿಯಿಡೀ ನೀರಿನಲ್ಲಿ ನೆನೆಸಿದ ಬಾದಾಮಿಯನ್ನು ಬೆಳಿಗ್ಗೆ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಖರ್ಜೂರ ಅಥವಾ ಬಾದಾಮಿ – ಚಳಿಗಾಲಕ್ಕೆ ಯಾವುದು ಉತ್ತಮ?

ಚಳಿಗಾಲದಲ್ಲಿ ಖರ್ಜೂರ ಮತ್ತು ಬಾದಾಮಿ ಎರಡೂ ಆರೋಗ್ಯಕ್ಕೆ ಲಾಭದಾಯಕವಾಗಿವೆ. ಶೀತ, ದಣಿವು ಅಥವಾ ತಕ್ಷಣ ಶಕ್ತಿ ಬೇಕಾದವರಿಗೆ ಖರ್ಜೂರ ಉತ್ತಮ ಆಯ್ಕೆಯಾಗಿದೆ. ಆದರೆ ದೀರ್ಘಕಾಲೀನ ಶಕ್ತಿ, ಉತ್ತಮ ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳಲು ಬಾದಾಮಿ ಹೆಚ್ಚು ಪ್ರಯೋಜನಕಾರಿಯಾಗಿದೆ.

ಆಹಾರದಲ್ಲಿ ಖರ್ಜೂರ ಮತ್ತು ಬಾದಾಮಿ ಎರಡನ್ನೂ ಸಮತೋಲಿತವಾಗಿ ಸೇರಿಸಿಕೊಳ್ಳುವುದು ಅತ್ಯುತ್ತಮ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೆಳಿಗ್ಗೆ 10 ರಿಂದ 12 ನೆನೆಸಿದ ಬಾದಾಮಿ ಸೇವಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

error: Content is protected !!