Home Blog Page 59

ಸಚಿವ ಅಶ್ವಿನಿ ವೈಷ್ಣವ್- ಹೆಚ್.ಡಿ. ಕುಮಾರಸ್ವಾಮಿ ಭೇಟಿ: ರಾಜ್ಯಕ್ಕೆ ಇನ್ನೊಂದು ಹೈ ಸ್ಪೀಡ್ ರೈಲ್ವೆ ಕಾರಿಡಾರ್

0

ನವದೆಹಲಿ: ಬಜೆಟ್ ನಂತರ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಮಾಹಿತಿ ಪ್ರಸಾರ ಖಾತೆ ಸಚಿವರಾದ ಸಚಿವ ಅಶ್ವಿನಿ ವೈಷ್ಣವ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿ ರೈಲ್ವೆ ಮೂಲಸೌಕರ್ಯ ವೃದ್ಧಿಸುವ ಹಾಗೂ ರಾಜ್ಯದ ಇನ್ನೂ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ಅವರು ಮಾತುಕತೆ ನಡೆಸಿದರು.

ಈಗಾಗಲೇ ರಾಜ್ಯಕ್ಕೆ ಹೈ ಸ್ಪೀಡ್ ರೈಲು ಕಾರಿಡಾರ್ ಗಳನ್ನು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಅದಕ್ಕೆ ಹೆಚ್ಚುವರಿಯಾಗಿ ಬೆಂಗಳೂರು-ಪುಣೆ ಹೈ-ಸ್ಪೀಡ್ ರೈಲು ಕಾರಿಡಾರ್ ನೀಡಲಾಗಿದೆ. ಈ ಮಾರ್ಗವು ಹುಬ್ಬಳ್ಳಿ, ಬೆಳಗಾವಿ ಮೂಲಕ ಹಾದು ಹೋಗಲಿದೆ ಎಂಬುದಾಗಿ ರೇಲ್ವೆ ಸಚಿವರು ತಮಗೆ ತಿಳಿಸಿದರು ಎಂದು ಸಚಿವರು ಕುಮಾರಸ್ವಾಮಿ ಅವರು ಹೇಳಿದರು.

ಅಲ್ಲದೆ, ಬೆಂಗಳೂರು-ಮುಂಬಯಿಗೆ ಹೊಸ ರೈಲು ಆರಂಭಿಸಲಾಗುವುದು ಎನ್ನುವ ಮಾಹಿತಿಯನ್ನು ರೈಲ್ವೆ ಸಚಿವರು ತಮಗೆ ನೀಡಿದರು. ಬೆಂಗಳೂರು-ಪುಣೆ ಹೈ ಸ್ಪೀಡ್ ರೈಲು ಕಾರಿಡಾರ್ ಹಾಗೂ ಬೆಂಗಳೂರು-ಮುಂಬಯಿ ನಡುವಿನ ಹೊಸ ರೈಲಿನಿಂದ ಕರ್ನಾಟಕಕ್ಕೆ ಮತ್ತಷ್ಟು ಅನುಕೂಲ ಆಗಲಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಹೊಸ ರೈಲು ಸಂಪರ್ಕ ಮತ್ತು ಹಾಲಿ ರೈಲು ಮಾರ್ಗಗಳಲ್ಲಿ ವನ್ಯಜೀವಿಗಳ ಅಪಘಾತಗಳನ್ನು ತಡೆಗಟ್ಟಲು ರೈಲ್ವೆ ಬೇಲಿ ಮತ್ತು ಬ್ಲಾಕ್ ಕಾರಿಡಾರ್‌ಗಳ ಅನುಷ್ಠಾನದ ಕುರಿತು ವಿವರವಾದ ಮಾತುಕತೆ ನಡೆಸಲಾಯಿತು ಎಂದು ಸಚಿವರು ಹೇಳಿದರು.

ನಿಧಿ ಹಿಂತಿರುಗಿಸಿದ ಪ್ರಾಮಾಣಿಕತೆಗೆ ಶಿಕ್ಷೆಯೇ? ಪತ್ರದ ಬಹುಮಾನ, ಖಾತೆಗೆ ಬಂದಿಲ್ಲ ಹಣ!

0

ಗದಗ Exclusive: ನಿಧಿ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಸರ್ಕಾರದಿಂದ ಭಾರೀ ಅನ್ಯಾಯವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಗಣರಾಜ್ಯೋತ್ಸವದಂದು ಐದು ಲಕ್ಷ ರೂ. ಬಹುಮಾನ ಘೋಷಣೆ ಮಾಡಿ ಸರ್ಕಾರ ಬಿಲ್ಡಪ್ ಪಡೆದಿದ್ದರೂ, 10 ದಿನಗಳು ಕಳೆದರೂ ಹಣ ಕುಟುಂಬದ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ.

ಗಣರಾಜ್ಯೋತ್ಸವದಂದು ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಐದು ಲಕ್ಷ ರೂ. ಮಂಜೂರು ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ಈ ಘೋಷಣೆ ಕೇವಲ ಪತ್ರದಲ್ಲೇ ಉಳಿದಿದ್ದು, ವಾಸ್ತವದಲ್ಲಿ ಹಣ ಇದುವರೆಗೂ ಕುಟುಂಬದ ಕೈ ಸೇರಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಖಾತೆಗೆ ಹಣ ಜಮಾ ಆಗಿದೆಯೇ ಎಂಬುದನ್ನು ತಿಳಿಯಲು ಕುಟುಂಬಸ್ಥರು ಪ್ರತಿದಿನ ಬ್ಯಾಂಕ್‌ಗೆ ಅಲೆದಾಡುತ್ತಿದ್ದು, ಅಲೆದಾಡಿ ಅಲೆದಾಡಿ ಸುಸ್ತಾಗಿದ್ದಾರೆ. ಮನೆ ಕಟ್ಟಿಕೊಳ್ಳಲು ಹಣಕ್ಕಾಗಿ ಬಕಪಕ್ಷಿಯಂತೆ ಕಾಯುವ ಪರಿಸ್ಥಿತಿಗೆ ಕುಟುಂಬ ಬಂದು ತಲುಪಿದೆ. ಇನ್ನೊಂದೆಡೆ, ಕುಟುಂಬಕ್ಕೆ ನೀಡುವುದಾಗಿ ಹೇಳಿರುವ ಸೈಟ್ ಕುರಿತೂ ಗೊಂದಲ ಮುಂದುವರೆದಿದೆ. ಪಂಚಾಯತಿಯಿಂದ ಸೈಟ್ ನೀಡಲಾಗಿದೆ ಎನ್ನಲಾಗಿದ್ದರೂ, ಪ್ಲಾಟ್ ನಂಬರ್ ಯಾವುದು ಎಂಬುದನ್ನು ಇದುವರೆಗೂ ತಿಳಿಸಿಲ್ಲ. ಯಾವ ಸೈಟ್ ಕೊಡಲಾಗುತ್ತದೆ ಎಂಬುದೇ ಕುಟುಂಬಕ್ಕೆ ಸ್ಪಷ್ಟವಾಗಿಲ್ಲ.

ನಿಧಿ ಸಿಕ್ಕ ಮೂರೇ ತಾಸಿನಲ್ಲಿ ಇಡೀ ಜಿಲ್ಲಾಡಳಿತ ಲಕ್ಕುಂಡಿಗೆ ದೌಡಾಯಿಸಿದ್ದರೂ, ತಿಂಗಳು ಕಳೆದರೂ ಮಾತು ಕೊಟ್ಟಂತೆ ನಡೆದುಕೊಳ್ಳದಿರುವುದು ಸರ್ಕಾರದ ನೈತಿಕತೆಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ಪ್ರಾಮಾಣಿಕತೆಗೆ ಗೌರವ ಎನ್ನುವುದು ಕೇವಲ ಘೋಷಣೆಯಲ್ಲೇ ಉಳಿದಿತೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

ಪುನೀತ್ ಕೆರೆಹಳ್ಳಿಗೆ ರಿಲೀಫ್: ಒಂದು ಪ್ರಕರಣಕ್ಕೆ ಹೈಕೋರ್ಟ್ ತಡೆ, ಮತ್ತೊಂದರಲ್ಲಿ ಬಲವಂತದ ಕ್ರಮಕ್ಕೆ ನಿರ್ಬಂಧ

0

ಬೆಂಗಳೂರು: ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿಚಾರವಾಗಿ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿದ್ದ ಎರಡು ಪ್ರಕರಣಗಳಲ್ಲಿ ಒಂದಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ತಡೆ ನೀಡಿದ್ದು, ಮತ್ತೊಂದು ಪ್ರಕರಣದಲ್ಲಿ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿದೆ. ಈ ಮೂಲಕ ಪುನೀತ್ ಕೆರೆಹಳ್ಳಿಗೆ ಭಾಗಶಃ ರಿಲೀಫ್ ಲಭಿಸಿದೆ.

ಇಂದು ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಎಲ್ಲೆಡೆ ಅಕ್ರಮ ವಲಸಿಗರು ಇದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಕ್ರಮ ವಲಸಿಗರನ್ನು ಗುರುತಿಸಿ ತೋರಿಸಿದವರ ಮೇಲೆಯೇ ಪ್ರಕರಣ ದಾಖಲಿಸುವುದು ಸರಿಯೇ ಎಂದು ಪ್ರಶ್ನಿಸಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು. ವಲಸಿಗರ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬುದನ್ನು ತಿಳಿಸುವಂತೆ ಪೀಠ ಸರ್ಕಾರವನ್ನು ಪ್ರಶ್ನಿಸಿತು. ಈ ಸಂಬಂಧ ಸರ್ಕಾರದ ಪ್ರತಿಕ್ರಿಯೆ ಪಡೆಯಲು ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್. ಬಿಂಗೀಪುರ ಗ್ರಾಮದಲ್ಲಿ ಶಂಕಿತ ಬಾಂಗ್ಲಾದೇಶಿ ವಲಸಿಗರು ಇರುವ ಮಾಹಿತಿ ಮೇರೆಗೆ ಪುನೀತ್ ಕೆರೆಹಳ್ಳಿ ಹಾಗೂ ಅವರ ತಂಡ ಸ್ಥಳಕ್ಕೆ ತೆರಳಿತ್ತು. ಅಲ್ಲಿ ವಲಸೆ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಿ ಪೊಲೀಸರಿಗೆ ಒಪ್ಪಿಸಲಾಗಿತ್ತು. ಈ ನಂತರ ಜಾಗದ ಮಾಲೀಕ ಸಿದ್ದೇಶ್, ಪುನೀತ್ ಕೆರೆಹಳ್ಳಿ, ಡಾ. ನಾಗೇಂದ್ರಪ್ಪ ಸೇರಿದಂತೆ ಇತರರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ದೂರಿನ ಆಧಾರದ ಮೇಲೆ ಬನ್ನೇರುಘಟ್ಟ ಪೊಲೀಸರು ತಡರಾತ್ರಿ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದರು. ಇದಕ್ಕೆ ವಿರೋಧವಾಗಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಪುನೀತ್ ಕೆರೆಹಳ್ಳಿ ಷರತ್ತುಬದ್ಧ ಜಾಮೀನು ಪಡೆದಿದ್ದರು. ಇದೀಗ ಇದೇ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.

ಇನ್ನು ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಪತ್ತೆ ಕಾರ್ಯಾಚರಣೆ ವೇಳೆ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಏಕಸದಸ್ಯ ಪೀಠ ಸೂಚನೆ ನೀಡಿ ಆದೇಶ ಹೊರಡಿಸಿದೆ.

ಮಾನವ–ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರಕ್ಕೆ ಆಗ್ರಹ: ಕೇಂದ್ರ ಅರಣ್ಯ ಸಚಿವರನ್ನು ಭೇಟಿಯಾದ HDK

0

ನವದೆಹಲಿ: ಕರ್ನಾಟಕದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತವಾಗಿ ತಡೆಯೊಡ್ಡಿ ಜನರ ಜೇವ ರಕ್ಷಣೆ ಮಾಡುವ ಬಗ್ಗೆ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವರಾದ ಭೂಪೇಂದ್ರ ಯಾದವ್‌ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು.

ಸಂಸತ್‌ ಭವನದಲ್ಲಿರುವ ಅರಣ್ಯ ಸಚಿವರ ಕಚೇರಿಯಲ್ಲಿ ನಡೆದ ಈ ಭೇಟಿಯ ವೇಳೆ ಕುಮಾರಸ್ವಾಮಿ ಅವರು; ಮುಖ್ಯವಾಗಿ ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಆನೆಗಳ ದಾಳಿ ಬಗ್ಗೆ ಚರ್ಚೆ ನಡೆಸಿದರು.

ವನ್ಯಜೀವಿ ಉಪಟಳ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಅನೇಕರು, ಅದರಲ್ಲಿಯೂ ಅರಣ್ಯದ ಅಂಚಿನಲ್ಲಿ ಬೇಸಾಯ ಮಾಡುವ, ದನಕರುಗಳನ್ನು ಮೇಯಿಸುವ ರೈತರು ಬಲಿಯಾಗಿದ್ದಾರೆ. ಇನ್ನೂ ಅನೇಕರು ಗಾಯಗೊಂಡು ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ. ಕರ್ನಾಟಕದಲ್ಲಿ ಈ ಸಮಸ್ಯೆ ಬಿಗಡಾಯಿಸಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಭೂಪೇಂದ್ರ ಯಾದವ್‌ ಅವರನ್ನು ವಿನಂತಿಸಿದರು.

ಕುಮಾರಸ್ವಾಮಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಈ ಬಗ್ಗೆ ತುರ್ತು ಗಮನ ಹರಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಅದಕ್ಕೆ ಪೂರಕವಾದ ಎಲ್ಲಾ ಮಾಹಿತಿಯನ್ನು ಸಚಿವ ಕುಮಾರಸ್ವಾಮಿ ಅವರಿಂದ ಪಡೆದುಕೊಂಡರು. ಅಲ್ಲದೆ, ಈ ನಿಟಿನಲ್ಲಿ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಅಧಿಕಾರಿಗಳು ಹೇಗೆ ಕಾರ್ಯ ನಿರ್ವಹಿಸಬೇಕು ಎನ್ನುವ ಕುರಿತು ನಿರ್ದೇಶನ ನೀಡಿದರು.

ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಬಜೆಟ್‌ ಅಧಿವೇಶನ ಮುಗಿಯುವದರೊಳಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಸಚಿವ ಭೂಪೇಂದ್ರ ಯಾದವ್‌ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಅತ್ಯಂತ ತ್ವರಿತವಾಗಿ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ವಿಬಿ ಗ್ರಾಮ್ ಜಿ ಕಾಯ್ದೆ ಸಮರ್ಥಸಿಕೊಳ್ಳಲು ಬಿಜೆಪಿ ನಾಯಕರಿಗೆ ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್

0

ಬೆಂಗಳೂರು: ಬಿಜೆಪಿ ಕಾಲದಲ್ಲಿ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿತ್ತು. ಆಗ ಅವರ ಸರ್ಕಾರದಲ್ಲಿ ಯಾರು ರಾಜೀನಾಮೆ ಕೊಟ್ಟಿದ್ದರು? ದಲಿತ ಸಚಿವನಿಗೆ ತೊಂದರೆ ನೀಡಲು ಬಿಜೆಪಿ ನಾಯಕರು ಈ ರೀತಿ ಮಾಡುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಿಡಿಕಾರಿದರು. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.

ಬಿಜೆಪಿ ನಾಯಕರು ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ ಎಂದು ಕೇಳಿದಾಗ, “ಬಿಜೆಪಿ ಸರ್ಕಾರದ ಅವಧಿಯಲ್ಲಿ ಏನೆಲ್ಲಾ ಭ್ರಷ್ಟಾಚಾರ ಆಗಿದೆ ಎಂದು ಸಚಿವರಾದ ತಿಮ್ಮಾಪುರ ಅವರು ತಿಳಿಸಿದ್ದಾರೆ. ಬಿಜೆಪಿ ಅವರು ಮಾಡುತ್ತಿರುವ ಆರೋಪಕ್ಕೆ ಸಾಕ್ಷಿ ಇಲ್ಲ. ಎಲ್ಲವೂ ಸುಳ್ಳು ಆರೋಪಗಳು. ವಿರೋಧ ಪಕ್ಷಗಳು ತಾವು ಬದುಕಿದ್ದೇವೆ ಎಂದು ತೋರಿಸಲು ಮುಂದಾಗಿದ್ದಾರೆ.

ಮನರೇಗಾ ಯೋಜನೆ ಬಗ್ಗೆ ಚರ್ಚೆ ಮಾಡುವುದು ಬೇಕಾಗಿಲ್ಲ. ಹೀಗಾಗಿ ಅವರು ಡ್ರಾಮಾ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ತಮ್ಮ ಸರ್ಕಾರ ಜಾರಿಗೆ ತಂದಿರುವ ನೂತನ ಕಾಯ್ದೆ ಬಗ್ಗೆ ಚರ್ಚೆ ಮಾಡಲಿ. ಅವರಿಗೆ ಅದರ ಬಗ್ಗೆ ಚರ್ಚೆ ಮಾಡಲು ಯಾವುದೇ ಅಂಶವಿಲ್ಲ ಎಂದು ಈ ರೀತಿ ಮಾಡುತ್ತಿದ್ದಾರೆ. ಇದು ವಿಷಯಾಂತರ ಮಾಡುವ ಪ್ರಯತ್ನ” ಎಂದು ತಿರುಗೇಟು ನೀಡಿದರು.

ಬಿಜೆಪಿ ನಾಯಕರು ಚರ್ಚೆ ಮಾಡಲಿ:

“ಮನರೇಗಾ ಯೋಜನೆಯಿಂದ ಆಗಿರುವ ಅನುಕೂಲದ ಬಗ್ಗೆ ನಾವು ಚರ್ಚೆ ಮಾಡುತ್ತೇವೆ ಎಂಬುದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ಮನರೇಗಾ ಕಾಯ್ದೆಯಲ್ಲಿ ಪ್ರತಿ ಪಂಚಾಯ್ತಿಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳುವ ಕೆಲಸ ನಿರ್ಧಾರ ಮಾಡಬಹುದಾಗಿತ್ತು. ಬಿಜೆಪಿ ವಿಬಿ ಗ್ರಾಮ್ ಜಿ ಕಾಯ್ದೆಯಲ್ಲಿ ಕೇಂದ್ರ ಸರ್ಕಾರ ನಿರ್ಧರಿಸಲಿದೆ.

ಈ ಯೋಜನೆಯಿಂದ ಪ್ರತಿ ಹಳ್ಳಿಯಲ್ಲಿ ಎಷ್ಟು ದನದ ಕೊಟ್ಟಿಗೆ ಕಟ್ಟಿಸಬಹುದು, ಎಷ್ಟು ರೈತರ ಜಮೀನು ಮಟ್ಟ ಮಾಡಿಸಬಹುದು ಎಂದು ಬಿಜೆಪಿ ನಾಯಕರು ಹೇಳಲಿ” ಎಂದು ಸವಾಲೆಸೆದರು. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಈ ಕಾಯ್ದೆ ಜಾರಿ ಅಸಾಧ್ಯ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾವು ಇಟ್ಟುಕೊಂಡು ಕೂತಿದ್ದೇವೆ. ಈ ಬಗ್ಗೆ ಅವರು ಚರ್ಚೆ ಮಾಡಲಿ, ನಾವು ಚರ್ಚೆ ಮಾಡುತ್ತೇವೆ” ಎಂದು ತಿಳಿಸಿದರು.

ವಂಟಮೂರಿ ಕ್ರೌರ್ಯಕ್ಕೆ ಕಾನೂನು ಉತ್ತರ: ಮಹಿಳೆ ವಿವಸ್ತ್ರ ಪ್ರಕರಣದಲ್ಲಿ 12 ಮಂದಿಗೆ 5 ವರ್ಷ ಜೈಲು

0

ಬೆಳಗಾವಿ: ವಂಟಮೂರಿ ಗ್ರಾಮದಲ್ಲಿ ನಡೆದ ಮಹಿಳೆಯ ಮೇಲಿನ ಅಮಾನುಷ ದೌರ್ಜನ್ಯ ಪ್ರಕರಣದಲ್ಲಿ ಬೆಳಗಾವಿ ಹೆಚ್ಚುವರಿ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ್ದು, 12 ಮಂದಿ ಆರೋಪಿಗಳಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಧೀಶ ಎಚ್.ಎಸ್. ಮಂಜುನಾಥ ಅವರು ಈ ತೀರ್ಪು ಪ್ರಕಟಿಸಿದ್ದಾರೆ.

ನ್ಯಾಯಾಲಯದ ದಾಖಲೆಗಳ ಪ್ರಕಾರ, ಪ್ರಕರಣದಲ್ಲಿ 12 ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳು ಸಾಬೀತಾಗಿದ್ದು, ಪ್ರತಿಯೊಂದು ಸೆಕ್ಷನ್‌ಗೆ ₹1,000 ದಂಡ ವಿಧಿಸಲಾಗಿದೆ. ಬಸಪ್ಪ ನಾಯಿಕ, ರಾಜು ನಾಯಿಕ, ಕೆಂಪಣ್ಣ ನಾಯಿಕ, ಪಾರ್ವತಿ ನಾಯಕ, ಯಲ್ಲವ್ವ ನಾಯಿಕ, ಲಕ್ಕಪ್ಪ ನಾಯಿಕ, ಗಂಗವ್ವ ನಾಯಿಕ, ಸಂಗೀತಾ ಹೆಗ್ಗನಾಯಿಕ, ಸಂತೋಷ ನಾಯಿಕ, ಶೋಭಾ ನಾಯಿಕ, ಲಕ್ಕವ್ವ ನಾಯಿಕ ಹಾಗೂ ಶಿವಪ್ಪ ವನ್ನೂರು ಅವರು ತಪ್ಪಿತಸ್ಥರು ಎಂದು ನ್ಯಾಯಾಲಯ ಘೋಷಿಸಿದೆ. ತೀರ್ಪಿನ ವೇಳೆ ನ್ಯಾಯಾಲಯದ ಆವರಣದಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿತ್ತು.

2023ರ ಡಿಸೆಂಬರ್ 10ರಂದು ನಡೆದ ಈ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು. ಯುವಕನೊಬ್ಬ ತನ್ನ ಪ್ರೇಯಸಿಯೊಂದಿಗೆ ಮನೆ ಬಿಟ್ಟು ಓಡಿಹೋಗಿದ್ದಕ್ಕೆ ಆಕೆಯ ಕುಟುಂಬಸ್ಥರು ಆಕ್ರೋಶಗೊಂಡು ಯುವಕನ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಆತನ ತಾಯಿಯನ್ನು ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಕ್ರೌರ್ಯ ಮೆರೆಯಲಾಗಿತ್ತು.

ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣದ ನಂತರ ಪೊಲೀಸರು ಓಡಿಹೋಗಿದ್ದ ಪ್ರೇಮಿಗಳನ್ನು ಪತ್ತೆಹಚ್ಚಿ ಬೆಳಗಾವಿ ನಗರದ ದಕ್ಷಿಣ ಉಪನೋಂದಣಿ ಕಚೇರಿಯಲ್ಲಿ ಕಾನೂನುಬದ್ಧವಾಗಿ ಮದುವೆ ಮಾಡಿಸಿದ್ದರು. ದಂಪತಿ ಪ್ರಸ್ತುತ ಶಾಂತಿಯುತ ಜೀವನ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಾಪರಾಧಿ ಸೇರಿ ಒಟ್ಟು 13 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಇಂದು ಬೆಳಿಗ್ಗೆ ಹಿಂಡಲಗಾ ಜೈಲಿನಿಂದ ಆರೋಪಿಗಳನ್ನು ಪೊಲೀಸ್ ವಾಹನಗಳಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಸುದೀರ್ಘ ಎರಡು ವರ್ಷಗಳ ವಿಚಾರಣೆಯ ಬಳಿಕ ಬಾಲಾಪರಾಧಿಯನ್ನು ಹೊರತುಪಡಿಸಿ ಉಳಿದ 12 ಮಂದಿ ತಪ್ಪಿತಸ್ಥರು ಎಂದು ನ್ಯಾಯಾಲಯ ಅಂತಿಮ ತೀರ್ಪು ನೀಡಿದೆ.

ರೈಲು ಹಳಿಗೆ ಬಿದ್ದು ಯುವತಿ ಆತ್ಮಹತ್ಯೆ..! ಕಾರಣವೇನು ಗೊತ್ತಾ..?

0

ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಮಾನ್ವಿ ತಾಲೂಕಿನ ಸೀಕಲ್ ತಾಂಡಾ ನಿವಾಸಿ ಸುಮಂಗಲಾ (21) ಎಂಬ ಯುವತಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ.

ಮೃತ ಯುವತಿ ಸಿಂಧನೂರಿನ ಸರ್ಕಾರಿ ಪದವಿ ಕಾಲೇಜಿನ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿ ಆಗಿದ್ದಾಳೆ. ಆತ್ಮಹತ್ಯೆಗೆ ಮುನ್ನ ಯುವತಿ ಮಾತನಾಡಿರುವ ಆಡಿಯೋ PTIಗೆ ಲಭ್ಯವಾಗಿದೆ ಎಂದು ತಿಳಿದುಬಂದಿದೆ.

ಆಡಿಯೋದಲ್ಲಿ ಯುವತಿ, ತಾನು ಪ್ರೀತಿಸಿದ ಯುವಕನೊಂದಿಗೆ ಮದುವೆಗೆ ಒಪ್ಪಿದ್ದರೂ, ಆತನ ಕುಟುಂಬದವರು ಒಪ್ಪದ ಕಾರಣ ಮಾನಸಿಕವಾಗಿ ನೊಂದಿದ್ದುದಾಗಿ ಹೇಳಿದ್ದಾಳೆ. ಪ್ರೀತಿಸಿದ ಯುವಕನಿಗೆ ಯಾರೂ ತೊಂದರೆ ನೀಡಬಾರದು ಎಂದು ಆಕೆ ಮನವಿ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಯುವಕನ ಕುಟುಂಬವು ಬೇರೆಡೆ ಮದುವೆ ಮಾತುಕತೆ ನಡೆಸಿರುವುದರಿಂದ ತಾನು ಈ ನಿರ್ಧಾರ ಕೈಗೊಂಡಿದ್ದಾಗಿ ಆಕೆ ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಈ ಸಂಬಂಧ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

ಭಾರತ–ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಕೃಷಿ, ಡೈರಿ ಹಿತಾಸಕ್ತಿ ಕಾಪಾಡಲಾಗಿದೆ: ಪಿಯುಷ್ ಗೋಯಲ್

0

ನವದೆಹಲಿ: ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದಲ್ಲಿ ಮೋದಿ ಸರ್ಕಾರ ಕೃಷಿ ಮತ್ತು ಡೈರಿಯಂತಹ ಸೂಕ್ಷ್ಮ ವಲಯಗಳ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಕಾಪಾಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಕೃಷಿ ಉತ್ಪನ್ನಗಳು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಹೇಳಿಕೆಯ ಬೆನ್ನಲ್ಲೇ ಇಂದು ಲೋಕಸಭೆಯಲ್ಲಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವು. ಈ ಸಂದರ್ಭದಲ್ಲಿ ಸದನದಲ್ಲಿ ಮಾತನಾಡಿದ ಪಿಯುಷ್ ಗೋಯಲ್, ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ವಿವರ ನೀಡಿದರು.

ಭಾರತದ ಮೇಲೆ ಅಮೆರಿಕ ವಿಧಿಸಿದ್ದ 50 ಶೇಕಡಾ ಸುಂಕವನ್ನು 18 ಶೇಕಡಕ್ಕೆ ಇಳಿಸಲಾಗಿದೆ. ಇದು ‘ವಿಕ್ಷಿತ್ ಭಾರತ್’ ಮತ್ತು ‘ಆತ್ಮನಿರ್ಭರ್ ಭಾರತ್’ ಉಪಕ್ರಮಗಳನ್ನು ಉತ್ತೇಜಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಈ ಸುಂಕವು ಅಮೆರಿಕವು ಹಲವಾರು ಪ್ರತಿಸ್ಪರ್ಧಿ ರಾಷ್ಟ್ರಗಳ ಮೇಲೆ ಹೇರಿರುವ ಸುಂಕಕ್ಕಿಂತ ಕಡಿಮೆಯಾಗಿದೆ ಎಂದು ತಿಳಿಸಿದ ಅವರು, ಒಪ್ಪಂದದ ನಂತರ ಭಾರತದ ಕಾರ್ಮಿಕ-ತೀವ್ರ ವಲಯಗಳಿಗೆ ಅಮೆರಿಕ ಮಾರುಕಟ್ಟೆಯಲ್ಲಿ ರಫ್ತು ಹೆಚ್ಚುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೂಕ್ಷ್ಮ ಕ್ಷೇತ್ರಗಳಾದ ಕೃಷಿ ಮತ್ತು ಡೈರಿಯಲ್ಲಿ ಭಾರತದ ಹಿತಾಸಕ್ತಿಯನ್ನು ಯಾವುದೇ ರೀತಿಯಲ್ಲಿ ಹಾನಿಗೊಳಿಸಿಲ್ಲ ಎಂದು ಪುನರುಚ್ಚರಿಸಿದ ಪಿಯುಷ್ ಗೋಯಲ್, ಕಳೆದ ಒಂದು ವರ್ಷದಿಂದ ಎರಡೂ ದೇಶಗಳ ನಡುವೆ ವಿವರವಾದ ಚರ್ಚೆಗಳು ನಡೆದಿವೆ ಎಂದರು. ಎರಡೂ ರಾಷ್ಟ್ರಗಳು ತಮ್ಮ ಪ್ರಮುಖ ಹಾಗೂ ಸೂಕ್ಷ್ಮ ವಲಯಗಳನ್ನು ರಕ್ಷಿಸಿಕೊಂಡು ಉತ್ತಮ ಫಲಿತಾಂಶ ಪಡೆಯಲು ಬಯಸುವುದು ಸಹಜ. ಈ ದೀರ್ಘ ಚರ್ಚೆಗಳ ಫಲವಾಗಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ವಿವಿಧ ವಲಯಗಳಿಗೆ ಅಂತಿಮ ರೂಪ ನೀಡಲಾಗಿದೆ ಎಂದು  ಹೇಳಿದರು.

ಅಬಕಾರಿ ಸಚಿವರ ರಾಜೀನಾಮೆ ಪಡೆದು ಆಮೇಲೆ ಭ್ರಷ್ಟಾಚಾರದ ತನಿಖೆ ನಡೆಸಿ: ವಿಜಯೇಂದ್ರ ಒತ್ತಾಯ

0

ಬೆಂಗಳೂರು: ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳು ಅಬಕಾರಿ ವಿಚಾರದಲ್ಲಿ ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂಬುದು ಬಿಜೆಪಿ ಮತ್ತು ಜೆಡಿಎಸ್ ನಿಲುವು. ಅಬಕಾರಿ ಸಚಿವರ ರಾಜೀನಾಮೆ ಪಡೆದು ಆಮೇಲೆ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರಕಾರದ ಬ್ರಹ್ಮಾಂಡ ಭ್ರಷ್ಟಾಚಾರವು ಇವತ್ತು ಅಬಕಾರಿ ಇಲಾಖೆಗೂ ಬಂದು ತಲುಪಿದೆ. ರಾಜ್ಯ ಸರಕಾರವು ಒಂದು ಕಡೆ ತನ್ನ ಗ್ಯಾರಂಟಿಗಳಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗದೇ ಅಬಕಾರಿ ಇಲಾಖೆಯಲ್ಲಿ ಟಾರ್ಗೆಟ್ ಹೆಚ್ಚಿಸಿ ಕರ್ನಾಟಕವನ್ನು ಕುಡುಕರ ರಾಜ್ಯವಾಗಿ ಮಾಡುತ್ತಿದೆ. ಮನಸೋಇಚ್ಛೆ ಲಿಕ್ಕರ್ ಲೈಸನ್ಸ್‍ಗಳನ್ನು ನೀಡಲಾಗುತ್ತಿದೆ ಎಂದು ಆಕ್ಷೇಪಿಸಿದರು.

ರಾಜ್ಯ ಸರಕಾರದ ನೀತಿಯ ಪರಿಣಾಮವಾಗಿ 500 ಮೀಟರ್‍ಗೆ ಒಂದರಂತೆ ಲಿಕ್ಕರ್ ಅಂಗಡಿ ಸಿಗುವಂತಾಗಿದೆ. ಯಾವುದೇ ಇಲಾಖೆಯನ್ನು ತೆಗೆದುಕೊಂಡರೂ ಇಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದೆ. ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ಹಗರಣ ಎಂದು ಅದರ ಅಧ್ಯಕ್ಷರೂ ಬಹಿರಂಗವಾಗಿ ಹೇಳಿದ್ದಾರೆ ಎಂದು ಗಮನ ಸೆಳೆದರು.

ಆಡಿಯೋ ಟೇಪ್ ಬಹಿರಂಗವಾಗಿದ್ದು ಅದರಲ್ಲಿ ಅಬಕಾರಿ ಸಚಿವ ತಿಮ್ಮಾಪುರ, ಅವರ ಮಗ, ಮುಖ್ಯಮಂತ್ರಿಗಳ ಬಗ್ಗೆ ಉಲ್ಲೇಖವಾಗಿದೆ ಎಂದು ಆರೋಪಿಸಿದರು. ಅಬಕಾರಿ ಸಚಿವರು ಹಿಂದೆ ಯಾರ್ಯಾರು ರಾಜೀನಾಮೆ ನೀಡಿದ್ದಾರೆಂದು ಉದ್ದುದ್ದ ಭಾಷಣ ಮಾಡಿದ್ದಾರೆ. ಮಡಿಕೇರಿಯ ಗಣಪತಿಯವರ ಆತ್ಮಹತ್ಯೆ ಪ್ರಕರಣದಲ್ಲೂ ಜಾರ್ಜ್ ಅವರು ರಾಜೀನಾಮೆ ಕೊಡಬೇಕಿತ್ತು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಈ ಸರಕಾರ ಆಡಳಿತಕ್ಕೆ ಬಂದ ಬಳಿಕ ಇತ್ತೀಚೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ನಡೆದಿತ್ತು. ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅನಿವಾರ್ಯವಾಗಿ ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಗಮನ ಸೆಳೆದರು. ನಿನ್ನೆ ಮುಖ್ಯಮಂತ್ರಿಯಾದಿಯಾಗಿ ಸಚಿವರ ಭಂಡತನವನ್ನು ಸದನದಲ್ಲಿ ನೋಡಿದ್ದು, ಎಲ್ಲೋ ಒಂದು ಕಡೆ ಈ ಭ್ರಷ್ಟಾಚಾರವು ಸಚಿವರಿಗೇ ಸೀಮಿತವಾಗಿಲ್ಲ ಎಂಬುದು ಸ್ಪಷ್ಟ ಎಂದರು.

ಕರ್ನಾಟಕವು ಕಾಂಗ್ರೆಸ್ ಹೈಕಮಾಂಡಿಗೆ ಎಟಿಎಂ ಆಗಿ ಪರಿವರ್ತನೆಯಾಗಿದೆ. ರಾಜೀನಾಮೆ ಕೊಡದಂತೆ ಅಬಕಾರಿ ಸಚಿವರ ಮೇಲೂ ಒತ್ತಡ ಇದೆ. ಅವರು ರಾಜೀನಾಮೆ ಕೊಟ್ಟರೆ ಅದು ಯಾರ್ಯಾರ ಬುಡಕ್ಕೆ ಬರುತ್ತದೋ ಗೊತ್ತಿಲ್ಲ. ಹಾಗಾಗಿ ಅವರನ್ನು ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಬಿಜೆಪಿ- ಜೆಡಿಎಸ್ ನಿನ್ನೆ ಅಹೋರಾತ್ರಿ ಧರಣಿ ಮಾಡಿದ್ದೇವೆ. ಇವತ್ತು ಕೂಡ ಹೋರಾಟ ಮುಂದುವರೆಯಲಿದೆ ಎಂದು ಪ್ರಕಟಿಸಿದರು.

ಧರ್ಮಸ್ಥಳ ಪ್ರಕರಣ: 2 ವಾರಗಳಲ್ಲಿ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

0

ಬೆಂಗಳೂರು: ಧರ್ಮಸ್ಥಳದಲ್ಲಿ 1990 ರಿಂದ 2021ರ ಅವಧಿಯಲ್ಲಿ ಸಂಭವಿಸಿವೆ ಎನ್ನಲಾದ 74 ಅಸಹಜ ಸಾವು ಪ್ರಕರಣಗಳ ಪ್ರಸ್ತುತ ವಸ್ತುಸ್ಥಿತಿ, ಈವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎರಡು ವಾರಗಳೊಳಗೆ ವಿವರಣೆ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

2012ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದ ವಿದ್ಯಾರ್ಥಿನಿ ಸೌಜನ್ಯ ಅವರ ತಾಯಿ ಕುಸುಮಾವತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿಎಂ ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲಾಯಿತು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, “74 ಅಸಹಜ ಸಾವು ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಬಹುತೇಕ ಮಿಸ್ಸಿಂಗ್ ಪ್ರಕರಣಗಳು ಮುಕ್ತಾಯಗೊಂಡಿವೆ. ಆದರೂ ಪ್ರತಿಯೊಂದು ಪ್ರಕರಣ ಯಾವ ಹಂತದಲ್ಲಿದೆ ಮತ್ತು ಇದುವರೆಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಸಂಪೂರ್ಣ ವಿವರಗಳನ್ನು ಪಡೆದು ಒಂದು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು” ಎಂದು ತಿಳಿಸಿದರು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಎಸ್. ಬಾಲನ್, “ಈ ಎಲ್ಲಾ 74 ಪ್ರಕರಣಗಳೂ ತನಿಖೆ ಮತ್ತು ವಿಚಾರಣೆಗೆ ಒಳಪಡಿಸಬೇಕಾದವುಗಳಾಗಿವೆ” ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಮೊದಲು ಸರ್ಕಾರದಿಂದ ಮಾಹಿತಿ ಬರಲಿ, ನಂತರ ಮುಂದಿನ ವಿಚಾರವನ್ನು ಪರಿಶೀಲಿಸೋಣ” ಎಂದು ಹೇಳಿತು.

ಅಲ್ಲದೆ, ಅರ್ಜಿಯಲ್ಲಿ ಉಲ್ಲೇಖಿಸಿರುವ ಎಲ್ಲಾ ಪ್ರಕರಣಗಳ ಈಗಿನ ವಸ್ತುಸ್ಥಿತಿ, ಈವರೆಗೆ ತೆಗೆದುಕೊಂಡಿರುವ ಕ್ರಮಗಳು ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ಎರಡು ವಾರಗಳೊಳಗೆ ವಿವರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಿತು.

ಈ ನಡುವೆ, ಅರ್ಜಿಯಲ್ಲಿ ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ ಎಂಬ ಅಂಶವನ್ನು ಸರ್ಕಾರಿ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ರಾಜ್ಯ ಸರ್ಕಾರವನ್ನು ಪ್ರತಿವಾದಿಯಾಗಿ ಸೇರಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ, ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು.

error: Content is protected !!