Home Blog Page 58

ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ: ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿಕ್ಷಣ ಸೇವೆಯೊಂದಿಗೆ ಮಕ್ಕಳಲ್ಲಿ ಧರ್ಮ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಮಗುವನ್ನು ಮನುಷ್ಯನ್ನಾಗಿಸಿದಾಗ ಮಾತ್ರ ಶಿಕ್ಷಣದ ಉದ್ದೇಶ ಸಾಫಲ್ಯವಾಗುತ್ತದೆ ಎಂದು ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ಹೇಳಿದರು.

ಅವರು ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡದ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮಕ್ಕಳಲ್ಲಿನ ಬುದ್ಧಿಶಕ್ತಿ ವಿಕಸನಗೊಳಿಸಿ ಸಮಾಜದ ಜವಾಬ್ದಾರಿಯುತ ವ್ಯಕ್ತಿಯನ್ನಾಗಿಸುವುದು ಶಿಕ್ಷಣದ ಮೂಲ ಆಶಯವಾಗಿದೆ. ಶಿಕ್ಷಣ ಸೇವೆಯನ್ನೇ ಧ್ಯೇಯವಾಗಿಸಿಕೊಂಡ ತಾಯಂದಿರು ತಮ್ಮ ಶ್ರೇಷ್ಠ ಚಿಂತನೆಗಳಿಂದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಪ್ರಾರಂಭಿಸಿ 75 ವರ್ಷಗಳಿಂದ ಲಕ್ಷಾಂತರ ಮಕ್ಕಳ ಬಾಳಿಗೆ ಬೆಳಕಾಗಿ ಅವರನ್ನು ಸುಸಂಸ್ಕೃತ ನಾಗರಿಕರನ್ನಾಗಿಸುತ್ತಿರುವ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ. ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎಂಬುದನ್ನು ಈ ಸಂಸ್ಥೆ ಸಾಬೀತುಪಡಿಸಿದ್ದು, ಸೇವಾ ಕಾರ್ಯದಿಂದ ಸಂಸ್ಥೆ ಉತ್ತರೋತ್ತರವಾಗಿ ಪ್ರಗತಿ ಹೊಂದಲೆಂದು ಆಶೀರ್ವದಿಸಿದರು.

ಮುಕ್ತಿಮಂದಿರ ಧರ್ಮ ಕ್ಷೇತ್ರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಶುಭಾಶೀರ್ವಾದ ನೀಡಿ, ನಡೆದಾಡಿದ ದೇವರು ಲಿಂ. ವೀರಗಂಗಾಧರ ಜಗದ್ಗುರುಗಳ ಅಭಯಾಶೀರ್ವಾದದಿಂದ ಗುರು-ಹಿರಿಯರ ಆಶೀರ್ವಾದ, ಸಹಕಾರದಿಂದ 1946ರಲ್ಲಿ ಮಹಿಳೆಯರೇ ಕಟ್ಟಿ ಬೆಳೆಸಿದ ತಾಯಿ ಪಾರ್ವತಿ ಮಕ್ಕಳ ಬಳಗ ಇಂದು ಹೆಮ್ಮರವಾಗಿ ಬೆಳೆದಿದೆ. ಈ ಸೇವಾ ಕಾರ್ಯ ವಿಸ್ತಾರಗೊಳ್ಳಲಿ ಎಂದರು.

ಈ ವೇಳೆ ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ, ಸಂಸ್ಥೆಯ ಅಧ್ಯಕ್ಷರಾದ ಜಯಲಕ್ಷ್ಮೀ ಮಹಾಂತಶೆಟ್ಟರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜಯಲಕ್ಷ್ಮೀ ಗಡ್ಡದೇವರಮಠ, ಮುಖ್ಯೋಪಾಧ್ಯಾಯರಾದ ಜೆ.ಡಿ. ಲಮಾಣಿ, ಪಿಯು ಕಾಲೇಜಿನ ಪ್ರಾಚಾರ್ಯೆ ಸರಸ್ವತಿ ಹುಲ್ಲಣ್ಣವರ, ಪ್ರಭುಗೌಡ ಯಕ್ಕಿಕೊಪ್ಪ, ಸ್ವಾತಿ ಪೈ, ಜ್ಯೋತಿ ಅರಳಿಕಟ್ಟಿ ಹಾಗೂ ರೂಪಾ ನವಲೆ ಸೇರಿದಂತೆ ಹಿರಿಯರು, ಶಿಕ್ಷಕರು, ಸಿಬ್ಬಂದಿ, ಮಕ್ಕಳು ಇದ್ದರು.

ಫೆ.6ರಂದು ಅದ್ದೂರಿಯಾಗಿ ಜರುಗಲಿದೆ ಡಂಬಳದ ಹಜರತ್ ಜಮಾಲಶಾವಲಿ ಶರಣರ ಉರೂಸ್

0

ವಿಜಯಸಾಕ್ಷಿ ಸುದ್ದಿ, ಡಂಬಳ: ನೂರಾರು ವರ್ಷಗಳ ಕಾಲ ಗ್ರಾಮದ ತೋಂಟದಾರ್ಯ ಜಾತ್ರಾ ಮಹೋತ್ಸವ ಮುಗಿದ ನಂತರ ಜರುಗುವ ಸೂಫಿ ಸಂತರಾದ ಹಜರತ್ ಜಮಾಲಶಾವಲಿ ಶರಣರ ಗಂಧ ಈ ಬಾರಿ ಫೆ. 5ಕ್ಕೆ ಹಾಗೂ ಉರೂಸ್ ಫೆ. 6ಕ್ಕೆ ಜರುಗಲಿದೆ.

ಫೆ. 5ರಂದು ಗಂಧದ ಮೆರವಣಿಗೆ ರಾತ್ರಿ ಪ್ರಾರಂಭವಾಗಲಿದ್ದು, ರಾಮಣ್ಣ ಗದಗ ಅವರ ಮನೆತನದವರ ಚಕ್ಕಡಿಯಲ್ಲಿ ನಗಾರಿ ಹೊತ್ತ ಎತ್ತುಗಳ ಮೆರವಣಿಗೆ ವಿವಿಧ ಬಡಾವಣೆಗಳಲ್ಲಿ ಸಾಗಿ ದರ್ಗಾಕ್ಕೆ ತಲುಪಲಿದೆ. ಫೆ. 6ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ರೈತರು ತಮ್ಮ ಎತ್ತುಗಳನ್ನು ಮೆರವಣಿಗೆ ಮೂಲಕ ದರ್ಗಾದ ಸುತ್ತ ಐದು ಸುತ್ತು ಹಾಕಿ ಸಕ್ಕರಿ ಓದಿಸುತ್ತಾರೆ. ರಾತ್ರಿ ಅನ್ನಸಂತರ್ಪಣೆ, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಹಜರತ್ ಜಮಾಲಶಾವಲಿ ಶರಣರು ಜಾತ್ಯಾತೀತ ಧಾರ್ಮಿಕ ಸಂತರು. ಅಖಂಡ ಮಾನವ ಸಮುದಾಯದ ಹಿತಾಸಕ್ತಿ ಬಗ್ಗೆ, ಕ್ರಿಯಾಶೀಲ ಬದುಕಿನ ಬಗ್ಗೆ, ಧರ್ಮದ ಗಡಿಯನ್ನು ದಾಟಿ ಚಿಂತಿಸಿ, ಲೋಕ ಸಂಚಾರ ಮಾಡಿ ತಾವು ಕಂಡ ಜ್ಞಾನವನ್ನು ಸರಳವಾಗಿ ಪ್ರಸಾರ ಮಾಡಿದ ವಿಶ್ವಧರ್ಮಿಗಳಾಗಿದ್ದರು. ಅವರ ಪವಾಡಗಳು ಇಂದಿಗೂ ಮನೆಮಾತಾಗಿದೆ.

ಗ್ರಾಮದಲ್ಲಿ ಎಲ್ಲ ರೈತಾಪಿ ವರ್ಗ ಉರೂಸ್‌ನಂದು ತಮ್ಮ ಎತ್ತುಗಳನ್ನು ಸಿಂಗರಿಸಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದರ್ಗಾದ ಸುತ್ತ ಐದು ಬಾರಿ ಸುತ್ತನ್ನು ಹಾಕಿಸಿ ಸಕ್ಕರೆ ಪೂಜೆಯನ್ನು ಮಾಡಿಸುವ ಮೂಲಕ ಭಕ್ತಿ ಮೆರೆಯುವುದು ಇಲ್ಲಿನ ವಿಶೇಷ.

ಈಗಲೂ ಎತ್ತುಗಳ ಆರೋಗ್ಯದಲ್ಲಿ ಏರುಪೇರಾದರೆ ರೈತರು ಜಮಾಲಶಾವಲಿ ಶರಣರ ದರ್ಗಾಕ್ಕೆ ಬಂದು ಭಕ್ತಿ ಸಮರ್ಪಿಸುತ್ತಾರೆ. ಎತ್ತುಗಳ ಆರೋಗ್ಯದಲ್ಲಿ ಚೇತರಿಕೆಯಾಗುತ್ತದೆ ಎನ್ನುವ ಅಪಾರ ನಂಬಿಕೆ ರೈತರಲ್ಲಿದೆ. ಇದಲ್ಲದೇ ಭಕ್ತರ ಆಶಯಗಳು, ಇಷ್ಟಾರ್ಥಗಳು ಈಡೇರುತ್ತವೆ ಎಂದು ಅನಾದಿಕಾಲದಿಂದಲೂ ನಂಬಿಕೆಯಿದೆ.

ತೋಂಟದಾರ್ಯ ಜಾತ್ರೆ ಮುಗಿದ ಬಳಿಕ ಮಠದ ಈ ಹಿಂದಿನ ಶ್ರೀಗಳಿಂದ ಗಂಧ ಮತ್ತು ಉರೂಸ್ ಆಚರಿಸಲಾಗುತ್ತಿತ್ತು. ಅಲ್ಲದೆ ಉರೂಸ್‌ನ ದಿನ ಜರುಗುವ ಅನ್ನ ಸಂತರ್ಪಣೆಯಂದು ಮೊದಲು ಮಠದಲ್ಲಿರುವ ವೇದಮೂರ್ತಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ನೂರಾರು ವರ್ಷಗಳಿಂದ ಜಾತ್ರೆ ಮುಗಿದ ಬಳಿಕ ಉರೂಸ್ ಜರುಗುತ್ತಿದ್ದು, ಜನಮಾನಸದ ಭಕ್ತರ ಜಾತ್ರೆಯಾಗಿ ರೂಪುಗೊಂಡಿದೆ.

ಜಮಾಲಶಾವಲಿ ದರ್ಗಾ ಸಮಿತಿಯ ಗೌರವಾಧ್ಯಕ್ಷ ಹನಮಂತಪ್ಪ ಗದಗಿನ, ಅಧ್ಯಕ್ಷ ಅಲ್ಲಿಸಾಬ ಮೂಲಿಮನಿ, ಉಪಾಧ್ಯಕ್ಷ ಶಫೀ ಮೂಲಿಮನಿ, ಇಂತಿಯಾಜ ದಪೇದಾರ, ರಜಾಕಸಾಬ ಉಮ್ಮರಸಾಬ, ಮೋದಿನ ಚಾಂದಖಾನವರ, ಖಾಜಾಹುಸೇನ ಹೊಸಪೇಟಿ, ಬಂದುಸಾಬ ಜಲಾಲನವರ, ಕರೀಂಸಾಬ ಸರಖಾವಾಸ, ಮುರ್ತುಜಾ ಮನಿಯಾರ, ಬುಡ್ನೆಸಾಬ ಅತ್ತಾರ, ಹುಸೇನ ದೊಡ್ಡಮನಿ, ಇಬ್ರಾಹಿಂ ಹೊಸಪೇಟಿ, ಕಾಸಿಂಸಾಬ ದೊಡ್ಡಮನಿ, ಡಿ.ಡಿ. ಸೊರಟೂರ, ಗೌಸುಸಾಬ ಆಲೂರ, ರಾಜು ಹಳ್ಳಿಕೇರಿ, ಅಲ್ಲಾವುದ್ದಿನ ಹೊಂಬಳ, ಬಾಬುಸಾಬ ಸರಕಾವಾಸ, ಇಮಾಮಸಾಬ ಹೊಂಬಳ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಳ್ಳಲಿದ್ದಾರೆ.

“ಹಜರತ್ ಜಮಾಲಶಾವಲಿ ಶರಣರು ಜಾತ್ಯಾತೀತ ಧಾರ್ಮಿಕ ಸಂತರು. ಗ್ರಾಮದಲ್ಲಿ ನೆಲೆಸಿ ಧರ್ಮ ಸಮನ್ವಯ ದೃಷ್ಟಿಯಿಂದ ಸಾಮರಸ್ಯ ಮೂಡಿಸಿ, ವಿವಿಧತೆಯಲ್ಲಿ ಏಕತೆಯನ್ನು ಸಾರಿ, ಭಕ್ತರ ಪಾಲಿನ ಆಶಾಕಿರಣವಾಗಿ ಜೀವನೋತ್ಸಾಹ ತುಂಬುತ್ತಿರುವ ಜಮಾಲಶಾವಲಿ ಶರಣರು ಹಾಕಿಕೊಟ್ಟ ಸದ್ವಿಚಾರಗಳು ಸದಾ ಕಾಲ ಇರುತ್ತವೆ”

  • ಮಹಮ್ಮದರಫೀಕಸಾಬ ಅಲ್ಲಾವುದ್ದಿನಸಾಬ ಹೊಸಪೇಟಿ.
    ಸಮಾಜ ಸೇವಕರು, ಡಂಬಳ.

ಬೆಂಗಳೂರಿನ ಪ್ರತಿಷ್ಠಿತ ಹೆದ್ದಾರಿಯಲ್ಲಿ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್!

0

ಆನೇಕಲ್:- ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ದಿಢೀರ್ ಕುಸಿದುಬಿದ್ದಿದ್ದು, ಪರಿಣಾಮ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.

ಹೆದ್ದಾರಿ ಕಾಮಗಾರಿ ನಡೆಯುತ್ತಿರುವಾಗಲೇ ಹಳೇ ಚಂದಾಪುರದ ಬಳಿ ರಸ್ತೆ ಸುಮಾರು 20 ಅಡಿ ಆಳಕ್ಕೆ ಕುಸಿದಿದ್ದು, ಚಂದಾಪುರದಿಂದ ಕರ್ನಾಟಕದ ಗಡಿ ಅತ್ತಿಬೆಲೆವರೆಗೆ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಇನ್ನು ರೋಗಿಗಳು, ಶಾಲಾ ಮಕ್ಕಳು ಸಕಾಲಕ್ಕೆ ತಲುಪಲು ಪರದಾಡಿದರು.

ಸ್ಥಳದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಂಡರ್ ಪಾಸ್ ಕಾಮಗಾರಿ ವೇಳೆ ಸಮೀಪದ ಲೇಔಟ್‌ಗಳಿಂದ ಹರಿದ ಸ್ಯಾನಿಟರಿ ನೀರು ರಸ್ತೆಯ ಅಡಿಭಾಗಕ್ಕೆ ನುಗ್ಗಿದ್ದು, ಮಣ್ಣು ಸಡಿಲಗೊಂಡು ಭಾರಿ ಕುಸಿತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕಾರಣದಿಂದ ವಾಹನ ಸವಾರರು ಹೈರಾಣಾಗಿದ್ದು, ರೋಗಿಗಳು, ಶಾಲಾ ಮಕ್ಕಳು ಮತ್ತು ದಿನನಿತ್ಯ ಪ್ರಯಾಣಿಕರು ತಾವು ಹೋಗಬೇಕಾದ ಸ್ಥಳಕ್ಕೆ ತಲುಪಲು ತೊಂದರೆ ಅನುಭವಿಸಿದ್ದಾರೆ.

ಸ್ಥಳೀಯ ಅಧಿಕಾರಿಗಳು ತುರ್ತು ಪರಿಶೀಲನೆ ನಡೆಸಿದ್ದು, ಸಂಚಾರಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಲು ಹರಸಾಹಸ ಪಟ್ಟ ದೃಶ್ಯವೂ ಕಂಡುಬಂದಿದೆ.

ಲಿಂಗಾಯತ ಸಮುದಾಯದ ಹಿತಕ್ಕಾಗಿ ಕಾಂಗ್ರೆಸ್ ಶಾಸಕರ ವಿಶೇಷ ಸಭೆ: ಎಂ.ಬಿ.ಪಾಟೀಲ್ ಸ್ಪಷ್ಟನೆ!

0

ಬೆಂಗಳೂರು: ಸಮಾಜದ ಹಿತಾಸಕ್ತಿ ಮತ್ತು ನ್ಯಾಯಬದ್ಧ ಪ್ರಾತಿನಿಧ್ಯವನ್ನು ಖಾತ್ರಿಪಡಿಸಲು ಸೋಮವಾರ ರಾತ್ರಿ ಕಾಂಗ್ರೆಸ್ ಪಕ್ಷದ ಲಿಂಗಾಯತ ಶಾಸಕರ ಸಭೆ ನಡೆಯಿತು.

ಈ ಸಭೆಯಲ್ಲಿ ಯಾವುದೇ ನಾಯಕತ್ವದ ವಿವಾದ ಅಥವಾ ವೈಯಕ್ತಿಕ ಅಜೆಂಡಾಗಳಿರಲಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಲಿಂಗಾಯತ ಸಮುದಾಯವು ರಾಜ್ಯದ ಅತ್ಯಂತ ದೊಡ್ಡ ಸಮುದಾಯವಾಗಿದೆ. ಹೋದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 57 ಟಿಕೆಟ್ ನೀಡಿದ್ದು, 34 ಶಾಸಕರು ಗೆದ್ದಿದ್ದಾರೆ. ಮೊನ್ನೆಯ ಸಭೆಗೆ 28 ಮಂದಿ ಹಾಜರಿದ್ದರು. ಸಚಿವರ ಪೈಕಿ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಶರಣಬಸಪ್ಪ ದರ್ಶನಾಪುರ ಮಾತ್ರ ಅನಿವಾರ್ಯ ಕಾರಣಗಳಿಂದ ಪಾಲ್ಗೊಳ್ಳಲಿಲ್ಲ, ಉಳಿದ ಎಲ್ಲ ಲಿಂಗಾಯತ ಸಚಿವರು ಹಾಜರಿದ್ದರು” ಎಂದರು.

ಸಭೆಯಲ್ಲಿ, ಸಮುದಾಯಕ್ಕೆ ಸರ್ಕಾರದ ವಿವಿಧ ಹಂತಗಳಲ್ಲಿ ದೊರೆಯಬೇಕಾದ ನ್ಯಾಯಬದ್ಧ ಪ್ರಾತಿನಿಧ್ಯ ಮತ್ತು ಹಿತಾಸಕ್ತಿ ವಿಚಾರಗಳು ಚರ್ಚೆಯಾಗಿದೆ. “ಜನಪ್ರತಿನಿಧಿಗಳಾಗಿ ಆಯ್ಕೆಯಾಗುವುದಾದ ಮೇಲೆ ಸಮುದಾಯದ ಹಿತವನ್ನು ನೋಡುವುದು ನಮ್ಮ ಕರ್ತವ್ಯ” ಎಂದು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 70 ಲಿಂಗಾಯತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, 17 ಮಂದಿ ಜಯ ಸಾಧಿಸಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

ಜಮ್ಮು ಕಾಶ್ಮೀರ| ಗುಂಡಿನ ದಾಳಿಯಲ್ಲಿ ಇಬ್ಬರು ಜೈಶ್ ಉಗ್ರರು ಬಲಿ!

0

ಉಧಂಪುರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಮಜಾಲ್ತಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ.

ಈ ಘಟನೆಗೆ ಸಂಬಂಧಪಟ್ಟಂತೆ ಜೈಷ್-ಎ-ಮೊಹಮ್ಮದ್ ಸಂಘಟನೆಯ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪಡೆಗಳಿಗೆ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿಖರ ಮಾಹಿತಿ ದೊರೆತ ಮೇಲೆ, ಸೇನೆ, ಪೊಲೀಸ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯಿಂದ ರಚಿಸಲಾದ ಜಂಟಿ ತಂಡ ಮಜಾಲ್ತಾ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿತು. ಭಯೋತ್ಪಾದಕರು ಗುಹೆಯೊಳಗೆ ಅಡಗಿಕೊಂಡಿದ್ದು, ಡ್ರೋನ್ ಮೂಲಕ ಸ್ಥಳ ಪತ್ತೆ ಮಾಡಿದ ನಂತರ ಭದ್ರತಾ ಪಡೆಗಳು ತೀವ್ರ ಗುಂಡಿನ ದಾಳಿ ನಡೆಸಿದರು.

ರಾಕೆಟ್ ಲಾಂಚರ್ ಬಳಸಿ ಭಯೋತ್ಪಾದಕರನ್ನು ನಿಷ್ಕ್ರಿಯಗೊಳಿಸಲಾಯಿತು. ಹತರಾದ ವ್ಯಕ್ತಿಗಳನ್ನು ಜಬ್ಬಾರ್ ಮತ್ತು ಮಾವಿ ಎಂದು ಗುರುತಿಸಲಾಗಿದೆ. ಘಟನೆ ಸಂದರ್ಭದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಹಾನಿಗೆ ಒಳಗಾಗಿಲ್ಲ. ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಪ್ರದೇಶದಲ್ಲಿ ಕಟ್ಟುನಿಟ್ಟಾದ ವಲಯ ನಿರ್ಮಿಸಿ, ಸಂಪೂರ್ಣ ಶೋಧ ಕಾರ್ಯ ಜಾರಿಯಲ್ಲಿದೆ. ಭದ್ರತಾ ಅಧಿಕಾರಿಗಳು, ಹೆಚ್ಚಿನ ಭಯೋತ್ಪಾದಕರು ಇರಬಹುದೆಂದು ತಿಳಿದು, ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ನಾನು ಜೀವನದ ಕೊನೆಕಾಲದಲ್ಲಿ ಇದ್ದೇನೆ..ಈ ವೃದ್ಧನ ಮನವಿಗೆ ಸ್ಪಂದಿಸಿ; ರಾಜ್ಯಸಭೆಯಲ್ಲಿ ಗದ್ಗದಿತರಾದ ಹೆಚ್.ಡಿ. ದೇವೇಗೌಡರು!

0

ದೆಹಲಿ: ಮಾಜಿ ಪ್ರಧಾನಿ HD ದೇವೇಗೌಡರು ಕರ್ನಾಟಕದಲ್ಲಿ ಉಂಟಾಗಿರುವ ಗಂಭೀರ ಕುಡಿಯುವ ನೀರಿನ ಬಿಕ್ಕಟ್ಟಿನ ಬಗ್ಗೆ ರಾಜ್ಯಸಭೆಯಲ್ಲಿ ಗದ್ಗದಿತರಾಗಿ ಮಾತನಾಡಿದ್ದಾರೆ.

ಅವರು ತಮ್ಮ ಭಾಷಣದಲ್ಲಿ, ರಾಜ್ಯದ ಅನೇಕ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ರೈತರು ಮತ್ತು ಗ್ರಾಮೀಣ ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ವಿವರಿಸಿದರು. “ನಾನು ಜೀವನದ ಕೊನೆಕಾಲದಲ್ಲಿ ಇದ್ದೇನೆ, ಈ ವೃದ್ಧನ ಮನವಿಗೆ ಮಾನವೀಯತೆಯಿಂದ ಸ್ಪಂದಿಸಿ” ಎಂದು ದೇವೇಗೌಡರು ಕೈ ಮುಗಿದು ಬೇಡಿಕೊಂಡರು.

ಅವರು ರಾಜ್ಯದ ನೆರೆ ರಾಜ್ಯಗಳೊಂದಿಗೆ ನೀರಿನ ಹಕ್ಕಿಗಾಗಿ ಹೋರಾಟ ಮಾಡುತ್ತಿರುವುದನ್ನು ಹಾಗೂ 65 ವರ್ಷಗಳಿಂದ ನೀರಿಗಾಗಿ ಹೋರಾಟ ನಡೆಸುತ್ತ ಬಂದಿರುವ ತಮ್ಮ ಅನುಭವವನ್ನು ಪ್ರಸ್ತಾಪಿಸಿದರು. ದೇವೇಗೌಡರು, ನ್ಯಾಯಮಂಡಳಿಗಳ ತೀರ್ಪುಗಳನ್ನು ಚರ್ಚಿಸಲು ಬಯಸುವುದಿಲ್ಲ, ಆದರೆ ಕರ್ನಾಟಕಕ್ಕೆ ನೀರಿನ ಸಮಸ್ಯೆ ಅತ್ಯಂತ ತೀವ್ರವಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಿ ಮತ್ತು ರಾಜ್ಯದ ರೈತರಿಗೆ ಮತ್ತು ನಾಗರಿಕರಿಗೆ ನೀರಿನ ನ್ಯಾಯ ಒದಗಿಸಬೇಕು ಎಂಬುದು. ಇದೇ ವೇಳೆ ಅವರು ಮೋದಿ ಸರ್ಕಾರದ ಯಶಸ್ವಿ ಆರ್ಥಿಕ ಮತ್ತು ವ್ಯಾಪಾರ ಕಾರ್ಯತತ್ಕಗಳನ್ನು ಶ್ಲಾಘಿಸಿ, 2047ರೊಳಗೆ ಭಾರತವು ವಿಕಸಿತ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಪ್ರಸ್ತಾಪಿಸಿದರು.

ವಿಜಯಪುರ| ದತ್ತ ಸಕ್ಕರೆ ಕಾರ್ಖಾನೆಯಲ್ಲಿ ಇಂದು ಭಾರೀ ಅಗ್ನಿ ಅವಘಡ; ತಪ್ಪಿದ ದುರಂತ!

0

ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಹಾವಿನಾಳ ಗ್ರಾಮದ ಸಮೀಪದಲ್ಲಿರುವ ದತ್ತ ಸಕ್ಕರೆ ಕಾರ್ಖಾನೆಯಲ್ಲಿ ಇಂದು ಭಾರೀ ಅಗ್ನಿ ಅವಘಡ ಸಂಭವಿಸಿದೆ.

ಕಾರ್ಖಾನೆಯಲ್ಲಿ ಸಂಗ್ರಹಿಸಿದ್ದ ಬಗ್ಯಾಸ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು, ಕ್ಷಣಾರ್ಧದಲ್ಲಿ ಕಾರ್ಖಾನೆಯ ಯಂತ್ರೋಪಕರಣಗಳಿಗೂ ವ್ಯಾಪಿಸಿದೆ. ಅಗ್ನಿ ಅವಘಡದ ಪರಿಣಾಮ ಕಾರ್ಖಾನೆ ಆವರಣದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಬೆಂಕಿಯ ತೀವ್ರತೆಯಿಂದ ಕೆಲವು ಯಂತ್ರೋಪಕರಣಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹಲವು ಗಂಟೆಗಳ ಪರಿಶ್ರಮದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮುಂದುವರಿದಿದೆ. ಅದೃಷ್ಟವಶಾತ್ ಈ ಅಗ್ನಿ ಅವಘಡದಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಘಟನೆ ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನಷ್ಟೇ ಪತ್ತೆಯಾಗಬೇಕಿದ್ದು, ಹಾನಿಯ ಪ್ರಮಾಣದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಕಲಬುರಗಿ| ಲಂಚ ಸ್ವೀಕರಿಸುತ್ತಿದ್ದ ಅಂಗನವಾಡಿ ಸಿಬ್ಬಂದಿ ಸೇರಿ ಇಬ್ಬರನ್ನು ಲಾಕ್ ಮಾಡಿದ ‘ಲೋಕಾ’!

0

ಕಲಬುರಗಿ: ನಗರದ ಸ್ಟೇಷನ್ ಪ್ರದೇಶದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಅಂಗನವಾಡಿ ಸಿಬ್ಬಂದಿಯನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಅಂಗನವಾಡಿ ಶಿಕ್ಷಕಿ ಹೀನಾ ಹಾಗೂ ಯುಎಫ್‌ಡಬ್ಲ್ಯೂಸಿ ಸಿಬ್ಬಂದಿ ಪಿಂಕುಬಾಯಿ ಅವರು ಫಲಾನುಭವಿಗೆ ನೀಡಬೇಕಾದ ಮೂರು ತಿಂಗಳ ಮೊಟ್ಟೆ ಹಣದಲ್ಲಿ ಒಂದು ತಿಂಗಳ ಹಣವನ್ನು ಲಂಚವಾಗಿ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಮೊತ್ತ 1,200 ರೂ. ಜೊತೆಗೆ ಒಂದು ತಿಂಗಳ ಹಣ 4,830 ರೂ. ಸೇರಿಸಿ ಒಟ್ಟು 6,030 ರೂ. ಲಂಚವಾಗಿ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ದೂರುದಾರರಾದ ಸೌಭಾಗ್ಯ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪೂರ್ವ ಯೋಜನೆಯಂತೆ ಹಣ ನೀಡುವ ವೇಳೆ ದಾಳಿ ನಡೆಸಿದ ಲೋಕಾಯುಕ್ತ ತಂಡ ಆರೋಪಿಗಳನ್ನು ಸ್ಥಳದಲ್ಲೇ ಬಲೆಗೆ ಬೀಳಿಸಿದೆ. ಘಟನೆಯ ಬಳಿಕ ಇಬ್ಬರನ್ನೂ ವಶಕ್ಕೆ ಪಡೆದ ಲೋಕಾಯುಕ್ತ ಅಧಿಕಾರಿಗಳು ಮುಂದಿನ ವಿಚಾರಣೆಯನ್ನು ಕೈಗೊಂಡಿದ್ದಾರೆ. ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SIR ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಿಎಂ ಮಮತಾ; ಖುದ್ದಾಗಿ ವಾದ ಮಂಡಿಸಿ ಇತಿಹಾಸ

0

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಬುಧವಾರ ನಡೆದ ವಿಚಾರಣೆಗೆ ಸ್ವತಃ ಹಾಜರಾದ ಅವರು, ಸುಪ್ರೀಂ ಕೋರ್ಟ್‌ನಲ್ಲಿ ಖುದ್ದಾಗಿ ವಾದ ಮಂಡಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳದ ಜನರನ್ನು ಗುರಿಯಾಗಿಸಿಕೊಂಡಿದೆ. ಈ ವಿಚಾರದಲ್ಲಿ ಎಲ್ಲೂ ನ್ಯಾಯ ಸಿಗದ ಕಾರಣ ಸುಪ್ರೀಂ ಕೋರ್ಟ್‌ಗೆ ಬಂದಿದ್ದೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದರು. ಈ ಮೂಲಕ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಮುಂದೆ ಸ್ವತಃ ವಾದ ಮಂಡಿಸಿದ ಮೊದಲ ಮುಖ್ಯಮಂತ್ರಿ ಎಂಬ ದಾಖಲೆ ನಿರ್ಮಿಸಿದರು.

ಬಂಗಾಳದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ಮತ್ತು ಅದರ ಪರಿಣಾಮವಾಗಿ ಜನರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ತಡೆಹಿಡಿಯಬೇಕು ಎಂದು ಕೋರಿ ಸಿಎಂ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ಅವರು ತಮ್ಮ ವಕೀಲರ ತಂಡದೊಂದಿಗೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರ ಪೀಠದ ಮುಂದೆ ಹಾಜರಾದರು.

ರವೀಂದ್ರನಾಥ್ ಟ್ಯಾಗೋರ್ ಅವರ “ಎಲ್ಲವೂ ಮುಗಿದಾಗ ನಮಗೆ ನ್ಯಾಯ ಸಿಗುವುದಿಲ್ಲ, ನ್ಯಾಯವು ಮುಚ್ಚಿದ ಬಾಗಿಲಿನ ಹಿಂದೆ ಅಳುತ್ತಿದೆ” ಎಂಬ ಮಾತನ್ನು ಉಲ್ಲೇಖಿಸಿ ವಾದ ಆರಂಭಿಸಿದ ಮಮತಾ ಬ್ಯಾನರ್ಜಿ, ಚುನಾವಣಾ ಹೊತ್ತಲ್ಲೇ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿರುವ ಚುನಾವಣಾ ಆಯೋಗ ಬಂಗಾಳವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು. ಅಸ್ಸಾಂ, ಮೇಘಾಲಯ, ಸಿಕ್ಕಿಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಎಸ್ಐಆರ್ ಯಾಕೆ ನಡೆಯುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ಬಂಗಾಳದಲ್ಲಿ ಬಿಜೆಪಿ ರಾಜ್ಯಗಳ ವೀಕ್ಷಕರನ್ನು ನೇಮಿಸಿ ಜನರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ ಮಮತಾ, ಇದು ಕಟಾವು ಮತ್ತು ಸುಗ್ಗಿಯ ಕಾಲವಾಗಿದ್ದು, ಜನರು ದುಡಿಮೆಯಲ್ಲಿ ತೊಡಗಿರುವಾಗಲೇ ಮತಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ದಾಖಲೆ ನೀಡುವಂತೆ ಒತ್ತಡ ಹೇರಲಾಗುತ್ತಿದೆ ಎಂದರು. ಸಣ್ಣ ಪುಟ್ಟ ಲೋಪ ಕಂಡುಬಂದರೂ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗುತ್ತಿದ್ದು, ಇದರಿಂದ ಪ್ರಜಾಪ್ರಭುತ್ವವನ್ನು ಹತ್ತಿಕ್ಕಲಾಗುತ್ತಿದೆ ಎಂದು ಕಿಡಿಕಾರಿದರು.

ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ಇಸಿಐ ‘ವಾಟ್ಸಾಪ್ ಆಯೋಗ’ ಆಗಿದೆ ಎಂದು ವ್ಯಂಗ್ಯವಾಡಿದರು. ಕಳೆದ 24 ವರ್ಷಗಳಿಂದ ಸಮಗ್ರ ಮತಪಟ್ಟಿ ಪರಿಷ್ಕರಣೆ ನಡೆಸಿಲ್ಲ. ಈಗ ಚುನಾವಣೆ ಸಮೀಪಿಸುತ್ತಿರುವಾಗಲೇ ಈ ಪ್ರಕ್ರಿಯೆ ನಡೆಸುವ ಆತುರ ಯಾಕೆ ಎಂದು ಪ್ರಶ್ನಿಸಿದರು. ಸಾಮಾನ್ಯವಾಗಿ ಎರಡು ವರ್ಷ ಬೇಕಾಗುವ ಈ ಪ್ರಕ್ರಿಯೆಯನ್ನು ಕೇವಲ ಮೂರು ತಿಂಗಳಲ್ಲಿ ಮುಗಿಸಲು ಹೊರಟಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು.

ಈ ಒತ್ತಡದಿಂದಾಗಿ ರಾಜ್ಯದಲ್ಲಿ 100ಕ್ಕೂ ಹೆಚ್ಚು ಬಿಎಲ್ಒಗಳು ಸಾವಿಗೀಡಾಗಿದ್ದಾರೆ. ಇದಕ್ಕೆ ನೇರ ಹೊಣೆ ಚುನಾವಣಾ ಆಯೋಗದ್ದೇ ಎಂದು ಮಮತಾ ಆರೋಪಿಸಿದರು. ಮೊದಲ ಹಂತದಲ್ಲಿ 58 ಲಕ್ಷ ಮತದಾರರ ಹೆಸರುಗಳನ್ನು ಅಳಿಸಲಾಗಿದ್ದು, ಎರಡನೇ ಹಂತದಲ್ಲಿ 1.30 ಕೋಟಿ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಮತದಾರರಿಗೆ ಫಾರ್ಮ್-6 ಮೂಲಕ ಹೆಸರು ಸೇರಿಸಿಕೊಳ್ಳಲು ಅವಕಾಶ ನೀಡಿಲ್ಲ. ಇಂತಹ ಕ್ರಮ ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ನಡೆದಿಲ್ಲ ಎಂಬುದನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು.

ಬೆಂಗಳೂರಿಗರೇ ಗಮನಿಸಿ: ಇಂದಿನಿಂದ 9 ರವರೆಗೆ ಈ ಪ್ರದೇಶಗಳಲ್ಲಿ ಪ್ರತಿದಿನ 4 ಗಂಟೆಗಳ ಕಾಲ ಪವರ್‌ ಕಟ್.!

0

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮಹತ್ವದ ಪ್ರಕಟಣೆ ಹೊರಡಿಸಿದ್ದು, ಫೆಬ್ರವರಿ 4ರಿಂದ ಫೆಬ್ರವರಿ 9ರವರೆಗೆ ನಗರದ ಹಲವು ಪ್ರದೇಶಗಳಲ್ಲಿ ನಿಗದಿತ ವಿದ್ಯುತ್ ಕಡಿತ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಪ್ರತಿದಿನ ಸುಮಾರು ನಾಲ್ಕು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ನಗರದ ವಿದ್ಯುತ್ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ವಿಶೇಷವಾಗಿ ಹೆಬ್ಬಾಳ ಹಾಗೂ ಉತ್ತರ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ಸಮಸ್ಯೆಗಳು ಉಂಟಾಗದಂತೆ ತಡೆಯುವ ನಿಟ್ಟಿನಲ್ಲಿ ಈ ನಿರ್ವಹಣಾ ಕಾರ್ಯ ಅಗತ್ಯವಾಗಿದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ವಿದ್ಯುತ್ ಕಡಿತಕ್ಕೆ ಕಾರಣ

66/11 ಕೆವಿ ಎಚ್‌ಬಿಆರ್ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಿಗದಿತ ವಿದ್ಯುತ್ ಕಡಿತ ಅನಿವಾರ್ಯವಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಈ ಕಾಮಗಾರಿಯಿಂದ ದೀರ್ಘಕಾಲದಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆ ಸುಧಾರಣೆಯಾಗಲಿದೆ ಎನ್ನಲಾಗಿದೆ. ಆದರೆ ಈ ಅವಧಿಯಲ್ಲಿ ನಿವಾಸಿಗಳು, ಸಾರ್ವಜನಿಕ ಹಾಗೂ ಖಾಸಗಿ ಕಚೇರಿಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ತಾತ್ಕಾಲಿಕ ಅಸೌಕರ್ಯ ಉಂಟಾಗುವ ಸಾಧ್ಯತೆ ಇದೆ.

ವಿದ್ಯುತ್ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು

ಕಾವಲ್‌ಬೈರಸಂದ್ರ, ಎಲ್.ಆರ್. ಬಂಡೆ ಮುಖ್ಯ ರಸ್ತೆ, ಗಾಂಧಿನಗರ, ಚಿನ್ನಣ್ಣ ಬಡಾವಣೆ, ಅಂಬೇಡ್ಕರ್ ಲೇಔಟ್, ಅನ್ವರ್ ಲೇಔಟ್, ಕಾವೇರಿ ನಗರ, ಅಂಬೇಡ್ಕರ್ ವೈದ್ಯಕೀಯ ಕಾಲೇಜು ಪ್ರದೇಶ, ಸುಲ್ತಾನ್ ಪಾಲ್ಯ, ರಂಕಾ ನಗರ, ಕನಕ ನಗರ, ಕೆಎಚ್‌ಬಿ ಮುಖ್ಯ ರಸ್ತೆ, ಭುವನೇಶ್ವರಿ ನಗರ, ಡಿಜಿಎ ಹಳ್ಳಿ, ಕೆಜೆ ಹಳ್ಳಿ, ಕೆಜೆ ಕಾಲೋನಿ, ಆದರ್ಶ ನಗರ, ವಿ. ನಾಗೇನಹಳ್ಳಿ, ಪೆರಿಯಾರ್ ನಗರ, ಪೆರಿಯಾರ್ ವೃತ್ತ, ಶಾಂಪು, ಕುಶಾಲ್ ನಗರ, ಮೋದಿ ರಸ್ತೆ, ಮೋದಿ ಗಾರ್ಡನ್, ದೊಡ್ಡಣ್ಣ ನಗರ, ಮುನಿವೀರಪ್ಪ ಬಡಾವಣೆ, ಸಕ್ಕರೆ ಮಂಡಿ, ಉಪ್ಪು ಮಂಡಿ ಹಾಗೂ ಮುನೇಶ್ವರ ನಗರ.

ಇದಲ್ಲದೆ, ಐದು ದಿನಗಳ ನಿರ್ವಹಣಾ ಅವಧಿಯಲ್ಲಿ ದಿವ್ಯ ಶಾಂತಿ ಲೇಔಟ್, ಗೋವಿಂದಪುರ, ಕಾರ್ಲೆ, ಬೃಂದಾವನ ನಗರ, ಟೈಟಾನ್ ಗ್ಯಾರೇಜ್, ಭೈರವಿ ಅಪಾರ್ಟ್‌ಮೆಂಟ್‌ಗಳು, ಹೆಗ್ಗಡೆ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ಬೆಸ್ಕಾಂ ತಿಳಿಸಿದೆ.

error: Content is protected !!