Home Blog Page 57

ಯೋಗ ಸರ್ಟಿಫಿಕೇಟ್ ಕೋರ್ಸ್‌ನಲ್ಲಿ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇವರು ಆಗಸ್ಟ್-2025ರಲ್ಲಿ ನಡೆಸಿದ ಸರ್ಟಿಫಿಕೇಟ್ ಕೋರ್ಸ್ ಇನ್ ಯೋಗ ಸ್ಟಡೀಸ್ (2024-25) ಕೋರ್ಸ್‌ನ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ಎಸ್.ವಾಯ್.ಬಿ.ಎಂ.ಎಸ್ ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.

ಬಸವ ಯೋಗ ಮಹಾವಿದ್ಯಾಲಯದ ಒಟ್ಟು 30 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 29 ವಿದ್ಯಾರ್ಥಿಗಳು ವಿಶೇಷ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅವರಲ್ಲಿ ಐಶ್ವರ್ಯ ಎನ್. ಮುದ್ದಿಕೋಲ – ಶೇ. 88, ರೋಹನ್ ಪಿ. ಮಳ್ಳೊಳ್ಳಿ – ಶೇ. 87.8, ಯಲ್ಲಪ್ಪ ಎಸ್. ಕನಾಜ – ಶೇ. 87.2 ಅಂಕಗಳನ್ನು ಪಡೆದು ಬಸವ ಯೋಗ ಮಹಾವಿದ್ಯಾಲಯದ ಘನತೆಯನ್ನು ಹೆಚ್ಚಿಸಿದ್ದಾರೆ.

ಯೋಗ ಸರ್ಟಿಫಿಕೇಟ್ ಕೋರ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮತ್ತು ಹೆಚ್ಚಿನ ಅಂಕ ಗಳಿಸಿ ಮಹಾವಿದ್ಯಾಲಯದ ಘನತೆ ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ಮತ್ತು ಪ್ರೋತ್ಸಾಹಿಸಿದ ಸಿಬ್ಬಂದಿ ವರ್ಗಕ್ಕೆ ಬಸವ ಯೋಗ ಮಹಾವಿದ್ಯಾಲಯದ ಅಧ್ಯಕ್ಷರಾದ ಪೂಜ್ಯಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಚೇರ್ಮನ್ ಪ್ರೊ. ಎಸ್.ವಿ. ಸಂಕನೂರ, ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟಿ, ಪ್ರಾಚಾರ್ಯ ಕೆ.ಎಸ್. ಪಲ್ಲೇದ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಐ.ಬಿ. ಕೊಟ್ಟೂರಶೆಟ್ಟಿ, ಪ್ರಾಚಾರ್ಯರು, ಆರ್.ಜಿ.ಎಸ್.ಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ರೋಣ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಡಾ. ಎಂ. ವಿ. ಐಹೊಳ್ಳಿ ಮುಂತಾದವರು ಅಭಿನಂದಿಸಿದ್ದಾರೆ.

ಜ್ಯೋತಿಷ್ಯ ಕೇಳಲು ಬಂದ ಯುವತಿ ಮೇಲೆ ಅತ್ಯಾಚಾರ ಆರೋಪ: ಅರ್ಚಕನ ವಿರುದ್ಧ ದೂರು!

0

ಚಿಕ್ಕಮಗಳೂರು:- ಮದುವೆಯ ಬಗ್ಗೆ ತನ್ನ ಬಳಿ ಜ್ಯೋತಿಷ್ಯ ಕೇಳಲು ಬಂದ ಯುವತಿ ಮೇಲೆ ಅರ್ಚಕನೊಬ್ಬ ಅತ್ಯಾಚಾರ ಎಸಗಿರುವ ಆರೋಪ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಬಣಕಲ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ದಾವಣಗೆರೆ ಮೂಲದ ಕಾಮುಕ ಅರ್ಚಕ ಕೃಷ್ಣ ರಾವ್, 7 ವರ್ಷಗಳ ಹಿಂದಯೇ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೊರಟ್ಟಿ ಗ್ರಾಮಕ್ಕೆ ಬಂದು ನೆಲೆಸಿದ್ದು, ಗ್ರಾಮದ ಪಾರ್ವತಿ ಈಶ್ವರ ದೇಗುಲದ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದ. ಜೊತೆ ಜೊತೆಗೆ ಜ್ಯೋತಿಷ್ಯವನ್ನ ಸಹ ಹೇಳುತ್ತಿದ್ದ. ಹೀಗಾಗಿ ದಲಿತ ಸಮುದಾಯದ 23 ವರ್ಷದ ಯುವತಿಯೊಬ್ಳು ಬಂದಿದ್ದು, ಮದ್ವೆ ವಿಷಯದಲ್ಲಿ ತೊಂದರೆ ಆಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾಳೆ. ಆಕೆಯ ಮುಗ್ದತೆಯನ್ನೇ ಬಂಡವಾಳ ಮಾಡಿಕೊಂಡ ಕೃಷ್ಣ ರಾವ್, ಯುವತಿ ಮೇಲೆ ಹಲವು ಸಲ ಅತ್ಯಾಚಾರ ಮಾಡಿದ್ದಾನೆ.

ಜಾತಕದಲ್ಲಿ ದೋಷ ಇದೆ ಎಂದು ಹೇಳಿದ್ದು, ಅದನ್ನು ಸಮಸ್ಯೆ ನಿವಾರಣೆ ಹೆಸರಲ್ಲಿ ಯುವತಿ ಮೇಲೆ ಕಳೆದೊಂದು ವರ್ಷದಲ್ಲಿ ಹಲವು ಸಲ ಅತ್ಯಾಚಾರ ಮಾಡಿದ್ದಾನೆ. ಇದೀಗ ಈಗ ಯುವತಿ ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರನ್ನಾಧರಿಸಿ ಪೊಲೀಸರು, ಆರೋಪಿ ವಿರುದ್ಧ BNS ಕಲಂ 64(2)(m) ಹಾಗೂ ಅತ್ಯಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಕ್ಕಳಿಗೆ ಮೊಬೈಲ್ ಗೀಳು ಬೆಳೆಸಬೇಡಿ: ಡಾ. ನವೀನ ಬಿ. ಸಂಗೂರಮಠ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮಂಗಳಾ ಎಜ್ಯುಕೇಶನ್ ಟ್ರಸ್ಟ್‌ನ ಮಂಗಳಾ ಬಚಪನ್ ಪ್ಲೇಸ್ಕೂಲ್ ಮಕ್ಕಳಿಗೆ ಶಿಕ್ಷಣದೊಂದಿಗೆ ಮೌಲಿಕ ಸಂಸ್ಕಾರ ನೀಡುತ್ತಿದ್ದು, ಮಾದರಿಯಾಗಿ ಮಕ್ಕಳ ಮನೋವಿಕಾಸ ಕಾರ್ಯವನ್ನು ಇಲ್ಲಿನ ಶಿಕ್ಷಕಿಯರು ಮಾಡುತ್ತಿದ್ದಾರೆ ಎಂದು ಹಾವೇರಿ ಜಿಲ್ಲಾಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ, ಚಿಕ್ಕ ಮಕ್ಕಳ ತಜ್ಞರಾದ ಡಾ. ನವೀನ ಬಿ. ಸಂಗೂರಮಠ ಹೇಳಿದರು.

ಅವರು ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಬನಪ್ಪ ಸಂಕಪ್ಪ ಸಂಕಣ್ಣವರ ಸಭಾಭವನದಲ್ಲಿ ಮಂಗಳಾ ಎಜ್ಯುಕೇಶನ್ ಟ್ರಸ್ಟ್‌ನ ಅಡಿಯಲ್ಲಿ ಕಾರ್ಯನಿರ್ವಹಿಸುವ ಬಚಪನ್ ಪ್ಲೇಸ್ಕೂಲ್‌ನ ಪ್ರಥಮ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಪೋಷಕರು ಮಕ್ಕಳಿಗೆ ಮೊಬೈಲ್ ಕೊಟ್ಟು ಅದರ ಗೀಳು ಬೆಳೆಸಬೇಡಿ. ಮಕ್ಕಳಿಗೆ ಕಥೆ, ಆಕಾಶ, ಪರಿಸರ, ಪ್ರಾಣಿ-ಪಕ್ಷಿಗಳನ್ನು ತೋರಿಸುತ್ತ ಧನಾತ್ಮಕ ಮನೋಭಾವ ಬೆಳೆಸಿ ಎಂದರು.

ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಅಮರೇಶ ಕೆ. ನಾಶಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟ್ರಸ್ಟ್‌ನ ಕಾರ್ಯದರ್ಶಿ ಡಾ. ಸರ್ವಮಂಗಳಾ ಎ. ನಾಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಂಗಳೂರಿನ ದಂತ ವೈದ್ಯರಾದ ಡಾ. ಶ್ವೇತಾ ಎ. ನಾಶಿ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಸಂಯೋಜಕರಾದ ನೇತ್ರಾವತಿ ವಿನೇಕರ್ ಸ್ವಾಗತಿಸಿ ವಂದಿಸಿದರು.

ಆರ್‌ಎಎಫ್ ಬೆಟಾಲಿಯನ್ ಪಥಸಂಚಲನ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಭದ್ರಾವತಿಯ ಆರ್‌ಎಎಫ್ ಬೆಟಾಲಿಯನ್-97 ತಂಡವು ಬುಧವಾರ ಶಿರಹಟ್ಟಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾನೂನು-ಸುವ್ಯವಸ್ಥೆ ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವುದಕ್ಕಾಗಿ ಪಥ ಸಂಚಲನ ನಡೆಸಿತು.

ಈ ಸಂದರ್ಭದಲ್ಲಿ ತಹಸೀಲ್ದಾರ ಕೆ. ರಾಘವೇಂದ್ರ ರಾವು, ಸಿಪಿಐ ಬಿ.ವಿ. ನ್ಯಾಮಗೌಡ, ಆರ್‌ಎಎಫ್ ಅಸಿಸ್ಟಂಟ್ ಕಮಾಂಡೆಂಟ್ ಅನಿಲಕುಮಾರ ಜಾಧವ, ರವೀಂದ್ರ ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಕ್ಯಾನ್ಸರ್ ಕುರಿತು ಅರಿವು ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಕರ್ನಾಟಕ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಮಹಿಳಾ ವಿವಿಧೋದ್ದೇಶಗಳ ಸಂಘದ ಮಾಸಿಕ ಸಭೆಯಲ್ಲಿ ಕ್ಯಾನ್ಸರ್ ಕುರಿತು ತಿಳುವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ವೀಣಾ ತಿರ್ಲಾಪೂರ್ ಮಾತನಾಡಿ, ಕ್ಯಾನ್ಸರ್ ಎಂಬ ಪದ ಕೇಳಿದಾಗಲೇ ಜನರಲ್ಲಿ ಭಯ ಉಂಟಾಗುತ್ತದೆ. ಆದರೆ ತಿಳುವಳಿಕೆ, ಜಾಗೃತಿ ಮತ್ತು ಸಮಯೋಚಿತ ಚಿಕಿತ್ಸೆ ಇದ್ದರೆ ಕ್ಯಾನ್ಸರ್‌ನ್ನು ಗೆಲ್ಲುವುದು ಸಾಧ್ಯ. ಕ್ಯಾನ್ಸರ್ ಎಂದರೆ ದೇಹದ ಕೋಶಗಳು ನಿಯಂತ್ರಣವಿಲ್ಲದೆ ಬೆಳೆಯುವುದರಿಂದ ಉಂಟಾಗುವ ರೋಗ. ಧೂಮಪಾನ, ಮದ್ಯಪಾನ, ಅಸ್ವಸ್ಥ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಪರಿಸರ ಮಾಲಿನ್ಯವು ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಾಗಿವೆ.

ಇಂದಿನ ದಿನಗಳಲ್ಲಿ ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್ ಮತ್ತು ಶ್ವಾಸಕೋಶ ಕ್ಯಾನ್ಸರ್ ಹೆಚ್ಚು ಕಂಡುಬರುತ್ತಿವೆ. ಆದರೆ ಸಂತಸದ ವಿಷಯವೆಂದರೆ, ಕ್ಯಾನ್ಸರ್ ಅನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಚಿಕಿತ್ಸೆ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೇಮಾ ಮೇಟಿ ಮಾತನಾಡಿ, ನಿಯಮಿತ ಆರೋಗ್ಯ ತಪಾಸಣೆ, ಸ್ವಯಂ ಪರೀಕ್ಷೆ, ವೈದ್ಯರ ಸಲಹೆ ಮತ್ತು ಆರೋಗ್ಯಕರ ಜೀವನಶೈಲಿಯು ಅತ್ಯಂತ ಅಗತ್ಯ. ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುವುದು, ಸಮತೋಲಿತ ಆಹಾರ ಸೇವಿಸುವುದು, ದಿನನಿತ್ಯ ವ್ಯಾಯಾಮ ಮಾಡುವುದು ಮತ್ತು ಧನಾತ್ಮಕ ಮನೋಭಾವ ಇವುಗಳು ಕ್ಯಾನ್ಸರ್ ತಡೆಯಲು ಸಹಾಯಕವಾಗುತ್ತವೆ ಎಂದು ನುಡಿದರು.

ಉಪಾಧ್ಯಕ್ಷರಾದ ಕಸ್ತೂರಿ ಹಿರೇಗೌಡರ ಮಾತನಾಡಿ, ಕ್ಯಾನ್ಸರ್ ರೋಗಿಗಳ ಬಗ್ಗೆ ಸಹಾನುಭೂತಿ ಮತ್ತು ಬೆಂಬಲ ತೋರಿಸುವುದು ನಮ್ಮ ಸಾಮಾಜಿಕ ಹೊಣೆಗಾರಿಕೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಸರೋಜಾ ಪೈಲ್ ನಿರ್ವಹಿಸಿದರು. ಭಾಗ್ಯ ಶಿರೋಳ ವಂದಿಸಿದರು. ಕಾರ್ಯಕ್ರಮದಲ್ಲಿ ನೀಲಾ ಮುದರಡ್ಡಿ, ಸುಮಂಗಲ ರಡ್ಡರ್, ಗಿರಿಜಾ ಸುರೇಬಾನ್, ದೊಡ್ಡಮನಿ, ರಾಜೇಶ್ವರಿ ಶಿರೋಳ, ಸುಮಂಗಲ ಪಾಟೀಲ್ ಮುಂತಾದವರಿದ್ದರು.

ಹಿಂದೂಗಳ ಶಕ್ತಿ ಪ್ರದರ್ಶನವಾಗಬೇಕಿದೆ: ಶಾಸಕ ಕೆ. ನೇಮಿರಾಜ್ ನಾಯ್ಕ್

0
  • ಹಿಂದೂ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಶಾಸಕ ಕೆ. ನೇಮಿರಾಜ್ ನಾಯ್ಕ್

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಹಿಂದೂ ಧರ್ಮವು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಧರ್ಮವಾಗಿದ್ದು, ಮಾತೃ ಸ್ಥಾನದಲ್ಲಿದೆ. ಫೆಬ್ರವರಿ 7ರಂದು ಪಟ್ಟಣದಲ್ಲಿ ನಡೆಯಲಿರುವ ಸಮಾವೇಶಕ್ಕೆ ಸಹಸ್ರಾರು ಜನ ಸೇರಬೇಕು. ಹಿಂದೂಗಳ ಶಕ್ತಿ ಎಷ್ಟಿದೆ ಎಂಬುದನ್ನು ಪ್ರದರ್ಶಿಸಬೇಕಿದೆ ಎಂದು ಶಾಸಕ ಕೆ. ನೇಮಿರಾಜ್ ನಾಯ್ಕ್ ಹೇಳಿದರು.

ಅವರು ಪಟ್ಟಣದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಹಿಂದೂ ಸಮಾವೇಶದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಜೆಪಿ ಮುಖಂಡ ಬಲ್ಲಾಹುಣ್ಸಿ ರಾಮಣ್ಣ ಮಾತನಾಡಿ, ಹಿಂದೂಗಳ ದೌರ್ಬಲ್ಯಗಳನ್ನು ಬಳಸಿಕೊಂಡು ಈ ದೇಶವನ್ನು ಮೊಘಲರು ಸುಮಾರು 800 ವರ್ಷಗಳ ಕಾಲ ಹಾಗೂ ಬ್ರಿಟಿಷರು 250 ವರ್ಷಗಳ ಕಾಲ ಆಳಿದ್ದಾರೆ. ಈಗಲೂ ಹಿಂದೂಗಳಾದ ನಾವೆಲ್ಲರೂ ಎಚ್ಚೆತ್ತುಕೊಳ್ಳದೇ ಹೋದರೆ ಹಿಂದೂ ಧರ್ಮದ ನಾಶ ನಿಶ್ಚಿತ. ಅಲ್ಲದೇ ನಮ್ಮ ರಾಷ್ಟ್ರದಲ್ಲಿ ಹಿಂದೂ ಧರ್ಮವನ್ನು ಉಚ್ಚಸ್ಥಿತಿಗೆ ಕೊಂಡೊಯ್ದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲಬೇಕು ಎಂದು ಅಭಿಪ್ರಾಯಪಟ್ಟರು.

ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷರು ಹಾಗೂ ಪುರಸಭೆ ಸದಸ್ಯರಾದ ಪವಾಡಿ ಹನುಮಂತಪ್ಪ ಮಾತನಾಡಿ, ನಾವೆಲ್ಲರೂ ಸರ್ವ ಸಮಾಜಗಳನ್ನು ಪ್ರೀತಿಸಬೇಕು. ಇಲ್ಲಿ ರಾಜಕೀಯ ಸಲ್ಲದು, ನಾವೆಲ್ಲರೂ ಪಕ್ಷಾತೀತ ಹಾಗೂ ಜಾತ್ಯತೀತರಾಗಿರಬೇಕು ಎಂದರು.

ಬಸವರಾಜ್ ರೆಡ್ಡಿ, ಬಣಜಿಗ ಸಮಾಜದ ಮುಖಂಡ ರಾಚೋಟೆಪ್ಪ ಹಾಗೂ ಕಾಂಗ್ರೆಸ್ ಮುಖಂಡ ಹೆಗ್ಡಾಳ್ ರಾಮಣ್ಣ ಮಾತನಾಡಿದರು. ಮಾಧವಿ ಚಿದ್ರಿ ಪ್ರಾರ್ಥಿಸಿದರು. ಕನ್ನಿಹಳ್ಳಿ ಚಂದ್ರಶೇಖರ್ ಸ್ವಾಗತಿಸಿದರು. ಪುರಸಭೆ ಸದಸ್ಯ ಜೋಗಿ ಹನುಮಂತಪ್ಪ ನಿರೂಪಿಸಿದರು. ಕಾರ್ಯಕ್ರಮದ ಆಶೀರ್ವಚನವನ್ನು ನಂದಿಪುರ ಕ್ಷೇತ್ರದ ಡಾ. ಮಹೇಶ್ವರ ಸ್ವಾಮಿಗಳು ನೀಡಿದರು. ಹಾಲಸ್ವಾಮಿ ಮಠದ ಹಾಲಶಂಕರ ಸ್ವಾಮಿಗಳು ಇದ್ದರು.

ಕಾರ್ಯಕ್ರಮದಲ್ಲಿ ಕಾರ್ಯಕರ್ತರಾದ ಅವಿನಾಶ್ ಜಾಧವ, ಸಂಚಿ ಶಿವಕುಮಾರ, ಗುರುಬಸವರಾಜ, ಸುಭಾಷ್ ಚಂದ್ರ, ಸಂದೀಪ್ ಶಿವಮೊಗ್ಗ, ಮಹಿಳಾ ಕಾರ್ಯಕರ್ತರು, ವಿವಿಧ ಸಮಾಜಗಳ ಮುಖಂಡರು, ಅಧ್ಯಕ್ಷರು ಉಪಸ್ಥಿತರಿದ್ದರು. ಹಿಂದೂ ಸಮಾವೇಶದ ರೂಪುರೇಷೆಗಳು ಹೇಗಿರಬೇಕೆಂದು, ಪುರಸಭೆ ಸದಸ್ಯರೂ ಆದ ಕಮಲಮ್ಮ ಶಿವಮೊಗ್ಗ, ಚಿಂತರಪಳ್ಳಿ ಬಿಜೆಪಿ ಮುಖಂಡ ಜಿ.ಎಸ್. ಬಣಕಾರ ಹಾಗೂ ಹೆಗ್ಡಾಳ ಶ್ರೀನಿವಾಸ್ ಸಲಹೆ-ಸೂಚನೆಗಳನ್ನು ನೀಡಿದರು.

ಪ್ರಾಸ್ತಾವಿಕವಾಗಿ ಡಾ. ಬಂಡ್ರಿ ವಿಶ್ವನಾಥ ಮಾತನಾಡಿ, ಸಂಸ್ಕಾರ, ಸತ್ಸಂಪ್ರದಾಯ ಹಾಗೂ ಸಂಸ್ಕೃತಿಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದೇ ಹಿಂದೂ ಸಮಾವೇಶದ ಉದ್ದೇಶವಾಗಿದೆ. ನಮ್ಮಲ್ಲಿ ಅಸಂಖ್ಯಾತ ಜಾತಿ, ಭಾಷೆಗಳಿದ್ದು, ಅವೆಲ್ಲವುಗಳನ್ನು ಒಂದುಗೂಡಿಸಿ, ಹಿಂದೂ ಧರ್ಮವನ್ನು ಬೆಳೆಸಬೇಕಿದೆ. ಇದೊಂದು ಪಕ್ಷಾತೀತ, ಜಾತ್ಯತೀತ ಕಾರ್ಯಕ್ರಮವಾಗಿದ್ದು, ಹಿಂದೂ ಪರಂಪರೆಯನ್ನು ಉಳಿಸಬೇಕಾಗಿದೆ ಎಂದರು.

ಗ್ರಾಮೀಣ ಜಾತ್ರೆಗಳಲ್ಲಿ ಪಿನ್ ಬಾಲ್ ಜೂಜು!

0

ವಿಜಯಸಾಕ್ಷಿ ಸುದ್ದಿ, ಡಂಬಳ: ಗ್ರಾಮದಲ್ಲಿ ಜರುಗಿರುವ ಜಾತ್ರಾ ಮಹೋತ್ಸವ ಸೇರಿದಂತೆ ಪ್ರತಿ ವರ್ಷ ನಡೆಯುವ ಗ್ರಾಮೀಣ ಜಾತ್ರೆಗಳು ಜನರ ಮನರಂಜನೆಗೆ ಪ್ರಮುಖ ಸ್ಥಳಗಳಾಗಿವೆ. ಇಂತಹ ಜಾತ್ರೆಗಳಲ್ಲಿ ವಿವಿಧ ಆಟಗಳು, ವ್ಯಾಪಾರ ಮಳಿಗೆಗಳು ಹಾಗೂ ಆಹಾರ ಮಳಿಗೆಗಳು ಕಾಣಸಿಗುತ್ತವೆ. ಇವುಗಳ ಜೊತೆಗೆ ಪಿನ್ ಬಾಲ್ ಆಟದಂತಹ ಕೆಲವು ಆಟಗಳು ಜೂಜಿನ ರೂಪವನ್ನು ಪಡೆದುಕೊಳ್ಳುತ್ತಿರುವುದು ಯುವಕರನ್ನು ದಾರಿ ತಪ್ಪಿಸುವ ಕೇಂದ್ರಗಳಾಗಿವೆ.

ಪಿನ್ ಬಾಲ್ ಆಟದಲ್ಲಿ ಆಟಗಾರನು ನಿರ್ದಿಷ್ಟ ಮೊತ್ತದ ಹಣವನ್ನು ಪಾವತಿಸಿ ಚೆಂಡನ್ನು ಯಂತ್ರದಲ್ಲಿ ಬಿಡುತ್ತಾನೆ. ಚೆಂಡು ಬಿದ್ದ ಸ್ಥಳದ ಆಧಾರದ ಮೇಲೆ ಹಣ ನಿಗದಿಯಾಗುತ್ತದೆ. ಆಟವು ಕೇವಲ ಮನರಂಜನೆಯ ಮಟ್ಟವನ್ನು ಮೀರಿ ಜೂಜಿನ ಸ್ವರೂಪ ಪಡೆಯುತ್ತದೆ.

ಜಾತ್ರೆಯಲ್ಲಿ ನಡೆಯುವ ಪಿನ್ ಬಾಲ್ ಗ್ಯಾಂಬ್ಲಿಂಗ್ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಕ್ಕಳು ಮತ್ತು ಯುವಕರು ಸುಲಭವಾಗಿ ಆಕರ್ಷಿತರಾಗುತ್ತಾರೆ. ಹಣದ ನಷ್ಟ ಮತ್ತು ವ್ಯಸನಕ್ಕೆ ದಾರಿ ಮಾಡಿಕೊಡುತ್ತದೆ. ಅಕ್ರಮ ಜೂಜಿನ ಚಟ ಬೆಳೆಸುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೆ ಕಾನೂನು ಮತ್ತು ಸಾಮಾಜಿಕ ಮೌಲ್ಯಗಳಿಗೆ ಧಕ್ಕೆ ಉಂಟುಮಾಡುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಜೂಜು ನಡೆಸುವುದು ಅಪರಾಧವಾಗಿದ್ದು, ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ ಇಂತಹ ಚಟುವಟಿಕೆಗಳ ಮೇಲೆ ನಿಗಾ ವಹಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎನ್ನುತ್ತಾರೆ ಗ್ರಾಮಸ್ಥರು.

ಜಾತ್ರೆಗಳು ಆರೋಗ್ಯಕರ ಮನರಂಜನೆಯ ಕೇಂದ್ರಗಳಾಗಿರಬೇಕು. ಪಿನ್ ಬಾಲ್ ಆಟವನ್ನು ಗ್ಯಾಂಬ್ಲಿಂಗ್ ರೂಪದಲ್ಲಿ ನಡೆಸುವುದು ಸಮಾಜಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ ಸಂಬಂಧಿತ ಅಧಿಕಾರಿಗಳು ಇಂತಹ ಆಟಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಮಂಜಯ್ಯಸ್ವಾಮಿ ಅರವಟಗಿಮಠ ಆಗ್ರಹಿಸಿದ್ದಾರೆ.

ಫೆಬ್ರವರಿ 7-8ರಂದು ಮಲೇಷ್ಯಾಕ್ಕೆ ಭೇಟಿ ಕೊಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ!

0

ನವದೆಹಲಿ:- ಪ್ರಧಾನಿ ನರೇಂದ್ರ ಮೋದಿ ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರ ಆಹ್ವಾನದ ಮೇರೆಗೆ ಈ ವಾರದ ಕೊನೆಯಲ್ಲಿ ಮಲೇಷ್ಯಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆ ತಿಳಿಸಿದೆ.

ಈ ಭೇಟಿ ಫೆಬ್ರವರಿ 7 ಮತ್ತು 8ರಂದು ನಡೆಯಲಿದೆ ಮತ್ತು ಇದು ಮೋದಿ ಅವರ ಮಲೇಷ್ಯಾಕ್ಕೆ ಮೂರನೇ ಭೇಟಿ. ಅಗಸ್ಟ್ 2024ರಲ್ಲಿ ಭಾರತ-ಮಲೇಷ್ಯಾ ಸಂಬಂಧವನ್ನು ‘ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ’ ಮಟ್ಟಕ್ಕೆ ಏರಿಸಿದ ನಂತರ, ಈ ಭೇಟಿ ಪ್ರಧಾನಿಯಾಗಿ ದ್ವಿಪಕ್ಷೀಯ ಚರ್ಚೆಗಳಿಗೆ ಮತ್ತು ವ್ಯಾಪಾರ, ಹೂಡಿಕೆ, ಭದ್ರತೆ, ಕಡಲ ಸಹಕಾರ, ಡಿಜಿಟಲ್ ತಂತ್ರಜ್ಞಾನ, ಹಣಕಾಸು, ಇಂಧನ, ಆರೋಗ್ಯ, ಶಿಕ್ಷಣ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಅವಕಾಶ ಕಲ್ಪಿಸುತ್ತದೆ.

ಮಲೇಷ್ಯಾದಲ್ಲಿ 2.9 ಮಿಲಿಯನ್ ಭಾರತೀಯ ವಲಸೆಗಾರರ ಹಾಜರಾತಿಯು ಈ ಸಂಬಂಧವನ್ನು ಇನ್ನಷ್ಟು ಬಲಪಡಿಸಿದೆ. ಪ್ರಧಾನಿಗಳು ದ್ವಿಪಕ್ಷೀಯ ಚರ್ಚೆಗಳಿಗೆ ಜೊತೆಗೆ ಭಾರತೀಯ ಸಮುದಾಯ ಮತ್ತು ಕೈಗಾರಿಕಾ, ವ್ಯಾಪಾರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಅನಧಿಕೃತ ಅಂಗಡಿ, ಮುಂಗಟ್ಟುಗಳ ತೆರವು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಅಬ್ಬಿಗೇರಿ ಗ್ರಾಮದ ಪಾಲಾ-ಬದಾಮಿ ರಸ್ತೆ, ನರೇಗಲ್ಲ ರಸ್ತೆಯಲ್ಲಿನ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ಬುಧವಾರ ಜರುಗಿತು.

ಅಬ್ಬಿಗೇರಿ ಗ್ರಾಮದ ಪಾಲಾ-ಬದಾಮಿ ರಸ್ತೆಯಲ್ಲಿನ ಸರ್ಕಾರಿ ಗಂಡುಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗಳ ಕೌಂಪೌಂಡ್ ಸುತ್ತಲೂ ನಿರ್ಮಿಸಲಾಗಿದ್ದ 30ಕ್ಕೂ ಅಧಿಕ ಅನಧಿಕೃತ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು, ಪಾಲಕರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ರೋಣ ತಾ.ಪಂ ಇಒ ಅವರಿಗೆ ಅನಧಿಕೃತ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಬುಧವಾರ ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆಯ ಸಿಬ್ಬಂದಿ ತೆರವು ಕಾರ್ಯಾಚರಣೆ ಕೈಗೊಂಡರು.

ರೋಣ ತಹಸೀಲ್ದಾರ ನಾಗರಾಜ ಕೆ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರು, ರೋಣ ಪಿಎಸ್‌ಐ ಪ್ರಕಾಶ ಬಣಕಾರ, ನರೇಗಲ್ಲ ಪಿಎಸ್‌ಐ ಐಶ್ವರ್ಯ ನಾಗರಾಳ, ಜೆಇ ಸಂತೋಷ ನೀಲಣ್ಣವರ, ಸಂಗಯ್ಯ ಗದ್ದನಕೇರಿ, ಪಿಡಿಒ ಲೋಹಿತ್ ಎಂ, ಸಿಆರ್‌ಪಿ ಎಸ್.ಆರ್. ಮೂಲಿಮನಿ ಇದ್ದರು.

U19 World Cup: ದಾಖಲೆಯ ಚೇಸ್‌ನೊಂದಿಗೆ ಸತತ 6ನೇ ಬಾರಿಗೆ ವಿಶ್ವಕಪ್ ಫೈನಲ್​ಗೇರಿದ ಭಾರತ

0

2026 ರ ಅಂಡರ್-19 ಏಕದಿನ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಯುವ ತಂಡ ಅಫ್ಘಾನಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿ ಸತತ 6ನೇ ಬಾರಿ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಆಯುಷ್ ಮ್ಹಾತ್ರೆ ನಾಯಕತ್ವದ ತಂಡ 310 ರನ್ ಗುರಿಯನ್ನು 41.1 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ ತಲುಪಿತು. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಫೈಸಲ್ ಶಿನೋಜಾಡಾ (110) ಮತ್ತು ಉಜೈರುಲ್ಲಾ ನಯಾಜೈ (101*) ಅವರ ಶತಕಗಳ ನೆರವಿನಿಂದ 310 ರನ್ ಗಳಿಸಿತು. ಭಾರತ ತಂಡ ಆರಂಭದಿಂದಲೇ ಭರ್ಜರಿ ಆಟ ಪ್ರದರ್ಶಿಸಿತು. ವೈಭವ್ ಸೂರ್ಯವಂಶಿ 68 ರನ್ ಗಳಿಸಿದರೆ, ನಾಯಕ ಆಯುಷ್ ಮ್ಹಾತ್ರೆ 62 ರನ್ ಗಳಿಸಿದರು. ಮುಖ್ಯ ಆಟಗಾರ ಆರನ್ ಜಾರ್ಜ್ 115 ರನ್ (104 ಎಸೆತಗಳಲ್ಲಿ, 15 ಬೌಂಡರಿ, 2 ಸಿಕ್ಸರ್) ಬಾರಿಸಿ ತಂಡವನ್ನು ಗೆಲುವಿಗೆ ಕೊಂಡೊಯ್ದರು. ಕೊನೆಯಲ್ಲಿ ವಿಹಾನ್ ಮಲ್ಹೋತ್ರಾ ಉತ್ತಮ ಆಟದ ಮೂಲಕ ಜಯವನ್ನು ಖಚಿತಪಡಿಸಿದರು.

ಈ ಜಯದೊಂದಿಗೆ ಭಾರತ 10ನೇ ಬಾರಿಗೆ ಅಂಡರ್-19 ವಿಶ್ವಕಪ್ ಫೈನಲ್‌ಗೆ ತಲುಪಿದ್ದು, 8ನೇ ಬಾರಿ ಪ್ರಶಸ್ತಿ ಗೆಲ್ಲಲು ಭರ್ಜರಿ ಅವಕಾಶ ಹೊಂದಿದೆ. ಫೆಬ್ರವರಿ 6 ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಆಡಲಿದೆ. ಭಾರತ ಸತತ 6ನೇ ಬಾರಿ ಫೈನಲ್ ಪ್ರವೇಶಿಸಿದ್ದರೆ, ಇಂಗ್ಲೆಂಡ್ 28 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಎದುರಾಗಲಿದೆ.

error: Content is protected !!