ಹಾಸನ: ಯುಗಾದಿ ಹಬ್ಬ ಬಂತು ಅಂದ್ರೆ ಸಾಕು ಜೂಜಾಡುವವರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಪೊಲೀಸರಿಗೆ ಗೊತ್ತಾಗಬಾರದು ಅಂತ ಕದ್ದುಮುಚ್ಚಿ ಆಟ ಆಡೋದು ಕಾಮನ್.
ಆದ್ರೆ ಇಲ್ಲಿ ಪೊಲೀಸರ ಕಣ್ತಪ್ಪಿಸಿ ಜೂಜಾಡುತ್ತಿದ್ದಾಗ ಖಾಕಿಯ ದಿಢೀರ್ ಎಂಟ್ರಿ ದುರಂತಕ್ಕೆ ದಾರಿಮಾಡಿಕೊಟ್ಟಿದೆ. ಎಸ್, ಅರಸೀಕೆರೆ ತಾಲ್ಲೂಕಿನ ಅರೆಕೆರೆ ಗ್ರಾಮದಲ್ಲಿ ಜೂಜಾಡುವ ವೇಳೆ ಪೊಲೀಸರು ದಾಳಿ ನಡೆಸಿದ್ದು, ಪೊಲೀಸರಿಂದ ತಪ್ಪಿಸಿಕೊಂಡು ಓಡುವ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. 34 ವರ್ಷದ ಪ್ರವೀಣ್ ಮೃತಪಟ್ಟ ವ್ಯಕ್ತಿ.
ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಪಕ್ಕದ ತಾವರೆಹಳ್ಳಿ ನಿರ್ಜನ ಪ್ರದೇಶದಲ್ಲಿ ಯುವಕರ ಗುಂಪು ಜೂಜಾಡುತ್ತಿದ್ದರು. ಜೂಜಾಟದ ವಿಷಯ ತಿಳಿದು ಜಾವಗಲ್ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಸ್ಥಳದಿಂದ ತಪ್ಪಿಸಿಕೊಳ್ಳಲು ಜೂಜಾಡುತ್ತಿದ್ದ ಯುವಕರು ಓಡಿದ್ದಾರೆ. ಮೂರ್ಛೆ ರೋಗದಿಂದ ಬಳಲುತ್ತಿದ್ದ ಪ್ರವೀಣ್ ಓಡುವ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಶಂಕಿಸಿಲಾಗಿದೆ.
ಘಟನೆ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಹಾಸನದ ಹಿಮ್ಸ್ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.
ಇನ್ನೂ ಅಚ್ಚರಿ ಎಂಬಂತೆ ಶವದ ಮೇಲೆ ರಕ್ತದ ಕಲೆಗಳಿರುವ ಹಿನ್ನೆಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಚುರುಕು ತನಿಖೆ ಕೈಗೊಂಡಿದ್ದಾರೆ.

