Home Blog Page 60

ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ: ನಾಲ್ಕು ತಿಂಗಳ ಗರ್ಭಿಣಿ ಸಾವು!

0

ಬೆಂಗಳೂರು:- ಬೈಕ್ ಗೆ ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ತಿಂಗಳ ಗರ್ಭಿಣಿ ಮಹಿಳೆ ಸ್ಥಳದಲ್ಲೇ ಸಾವನ್ನಪಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ಬಾಗಲೂರು ಗ್ರಾಮದ ಗುಂಡಪ್ಪ ಕ್ರಾಸ್​ನಲ್ಲಿ ನಡೆದಿದೆ.

ಮಾನಸಾ (29) ಮೃತ ಗರ್ಭಿಣಿ ಮಹಿಳೆ. ಭಾನುವಾರ ಬೆಳಗ್ಗೆ ಸಿಇಟಿ ಪರೀಕ್ಷೆ ಬರೆಯುವುದಕ್ಕೆ ಅಂತ ಮಾನಸಾ ಮನೆಯಿಂದ ಸ್ಕೂಟಿಯಲ್ಲಿ ಯಲಹಂಕದ ಕಡೆ ಬಾಗಲೂರು ಮೂಲಕ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಸಿಮೆಂಟ್ ಮಿಕ್ಸರ್ ಲಾರಿ, ಬೈಕ್​ಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಹಾಗೆ ಮುಂದಕ್ಕೆ ಸಾಗಿದ್ದು ಚಕ್ರದ ಅಡಿಗೆ ಸಿಲುಕಿ ಮಾನಸಾ ಸಾವನ್ನಪಿದ್ದಾರೆ.

ಈ ಕುರಿತು ಚಿಕ್ಕಜಾಲ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಲಾರಿ ಸಮೇತ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ಇತ್ತೀಚೆಗೆ ಲಾರಿ ಚಾಲಕರ ಅತಿವೇಗ, ಅಜಾಗರೂಕತೆಯಿಂದ ಈ ರೀತಿ ಅಪಘಾತಗಳು ಸಂಭವಿಸುತ್ತಿದ್ದು ಯಮಸ್ವರೂಪಿ ಲಾರಿಗಳಿಗೆ ಬ್ರೇಕ್ ಹಾಕುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.

ಬೊಲೆರೊ ಪಲ್ಟಿ ಹೊಡೆದು ಮೂವರು ದಾರುಣ ಸಾವು; 10ಕ್ಕೂ ಹೆಚ್ಚು ಮಂದಿಗೆ ಗಾಯ

0

ಕೋಲಾರ:- ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಾಲೋನಿ ಗೇಟ್​​ ಬಳಿ ಬೊಲೆರೊ ಪಲ್ಟಿಯಾಗಿ ಮೂವರು ಕಾರ್ಮಿಕರು ಸಾವನ್ನಪ್ಪಿರುವಂತಹ ಘಟನೆ ಜರುಗಿದೆ.

ಮುನಿಯಮ್ಮ, ವೆಂಕಟಪ್ಪ ಸೇರಿ ಮತ್ತೊಬ್ಬರು ಮೃತರು ಎಂದು ಗುರುತಿಸಲಾಗಿದೆ. ಹುಣಸೆಹಣ್ಣು ಬಿಡಿಸುವ ಕೆಲಸ ಮುಗಿಸಿಕೊಂಡು ಹೋಗುವಾಗ ದುರಂತ ಸಂಭವಿಸಿದ್ದು, ದುರಂತದಲ್ಲಿ 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ಗಾಯಾಳುಗಳನ್ನು ಶ್ರೀನಿವಾಸಪುರ ಮತ್ತು ಆಂಧ್ರದ ಮದನಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಭೀಕರ ಅಗ್ನಿ ಅವಘಡ; ಮೈಸೂರಿನಲ್ಲಿ ಸಾಲು ಸಾಲು ಗೋದಾಮುಗಳು ಬೆಂಕಿಗಾಹುತಿ!

0

ಮೈಸೂರು: ಹಳೆ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಗುಜರಿಗೆ ಬೆಂಕಿ ಬಿದ್ದ ಪರಿಣಾಮ 12ಕ್ಕೂ ಹೆಚ್ಚು ಗೋದಾಮುಗಳು ಸುಟ್ಟು ಕರಕಲಾದ ಘಟನೆ ಮೈಸೂರು ಹೊರವಲಯದ ಹಳೆ ಕೆಸರೆ ಗ್ರಾಮದಲ್ಲಿ ನಡೆದಿದೆ.

ಮೈಸೂರು–ಬೆಂಗಳೂರು ಹೆದ್ದಾರಿ ಸಮೀಪ ಇರುವ ಗುಜರಿಗೆ ಇಂದು ಬೆಳಿಗ್ಗೆ ಸುಮಾರು 3.30ರ ವೇಳೆಗೆ ಅಗ್ನಿ ಅವಘಡ ಸಂಭವಿಸಿದೆ. ಗುಜರಿನಲ್ಲಿದ್ದ ಹಳೆ ವಸ್ತುಗಳು ಹಾಗೂ ಸ್ಕ್ರಾಪ್ ಸಾಮಗ್ರಿಗಳಿಂದ ಬೆಂಕಿ ವೇಗವಾಗಿ ಹರಡಿದ್ದು, ಸಾಲುಸಾಲು ಗೋದಾಮುಗಳು ಹೊತ್ತಿ ಉರಿದಿವೆ. ಬೆಳಿಗ್ಗೆ 4.30ರ ವೇಳೆಗೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ತಕ್ಷಣವೇ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಬೆಂಕಿಯ ತೀವ್ರತೆ ಹೆಚ್ಚಿರುವುದರಿಂದ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಹಲವು ಗೋದಾಮುಗಳು ಸಂಪೂರ್ಣವಾಗಿ ಭಸ್ಮವಾಗಿದ್ದು, ಅಪಾರ ಪ್ರಮಾಣದ ಆಸ್ತಿ ನಷ್ಟ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರವಾಗಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಘಟನೆ ಎನ್.ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬೆಂಕಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ವಿಜಯಪುರ| ಖಾಸಗಿ ಜೆಟ್ ವಿಮಾನ ಪತನ; ತಪ್ಪಿದ ದುರಂತ!

0

ವಿಜಯಪುರ:- ಖಾಸಗಿ ಜೆಟ್ ವಿಮಾನವೊಂದು ಇಂದು ಮಧ್ಯಾಹ್ನ ಪತನಗೊಂಡಿರುವ ಘಟನೆ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಜರುಗಿದೆ.

ಇಂದು ಮಧ್ಯಾಹ್ನ 3 ಗಂಟೆಯ ವೇಳೆಗೆ ದುರಂತ ಸಂಭವಿಸಿದೆ. ಇಂಧನ ಖಾಲಿಯಾದ ಕಾರಣ ಕಲಬುರಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ವಿಮಾನ ಪತನಗೊಂಡಿದೆ ಎಂಬ ಪ್ರಾಥಮಿಕ ಮಾಹಿಲತಿ ಲಭ್ಯವಾಗಿದೆ. ಸ್ಥಳಕ್ಕೆ ದೌಡಾಯಿಸಿರುವ ಬಬಲೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ರೆಡ್ ಬರ್ಡ್‌ ಖಾಸಗಿ ಕಂಪನಿಯ ವಿಮಾನ ಪತನಗೊಂಡು ರೈತರ ಜಮೀನಿನ ಮೇಲೆ ಬಿದ್ದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಜೆಟ್‌ನಲ್ಲಿದ್ದ ಇಬ್ಬರು ತೀವ್ರ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಮೆಟ್ರೋ ಪ್ರಯಾಣಿಕರಿಗೆ ಬಿಗ್​​ ಶಾಕ್​​; ವಿವಾದದ ನಡುವೆಯೂ ನಾಳೆಯಿಂದ ದರ ಏರಿಕೆ ಫಿಕ್ಸ್, ಯಾವ ಮಾರ್ಗದಲ್ಲಿ ಎಷ್ಟಿದೆ?

0

ಬೆಂಗಳೂರು:- ಕಳೆದ ವರ್ಷವಷ್ಟೇ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ ಬೆನ್ನಲ್ಲೇ, ಇದೀಗ ಮತ್ತೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕ್ ನೀಡಿದೆ.

ಟಿಕೆಟ್ ದರ ಹೆಚ್ಚಳ ಕುರಿತಂತೆ ಕಳೆದ ಒಂದು ವಾರದಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ನಾಳೆಯಿಂದ ದರ ಏರಿಕೆ ಜಾರಿಯಾಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಎಂಬ ಟೀಕೆಗೆ ಒಳಗಾಗಿರುವ ಬೆಂಗಳೂರು ಮೆಟ್ರೋ, ಮತ್ತೊಮ್ಮೆ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ದರ ಏರಿಕೆ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ #BoycottMetro ಅಭಿಯಾನ ನಡೆದರೂ, BMRCL ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ BMRCL ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್, ಕೇಂದ್ರ ಸರ್ಕಾರದಿಂದ ದರ ಏರಿಕೆ ತಡೆಗೆ ಸಂಬಂಧಿಸಿದ ಯಾವುದೇ ಅಧಿಸೂಚನೆ ಬಂದಿಲ್ಲ. ಹೀಗಾಗಿ ನಾಳೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಒಂದು ವೇಳೆ ಕೇಂದ್ರ ಸರ್ಕಾರದಿಂದ ಕೊನೆಯ ಕ್ಷಣದಲ್ಲಿ ಆದೇಶ ಬಂದರೆ ಮಾತ್ರ ದರ ಏರಿಕೆ ತಾತ್ಕಾಲಿಕವಾಗಿ ನಿಲ್ಲಬಹುದು ಎಂದು ತಿಳಿಸಿದ್ದಾರೆ. ಆದರೆ ದರ ಏರಿಕೆ ತಡೆದರೂ ಅದು ಶಾಶ್ವತವಾಗಿರುವುದಿಲ್ಲ. ಇದೇ ವರ್ಷದ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಮತ್ತೆ ದರ ಹೆಚ್ಚಳವಾಗುವುದು ಖಚಿತ ಎನ್ನಲಾಗಿದೆ.

ಇನ್ನು, ಕಳೆದ ವರ್ಷ ಫೆಬ್ರವರಿ 9ರಂದು ಮೆಟ್ರೋ ಟಿಕೆಟ್ ದರವನ್ನು ಶೇ.101.5ರಷ್ಟು ಹೆಚ್ಚಿಸಲಾಗಿತ್ತು. ಪ್ರಯಾಣಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ನಂತರ ದರವನ್ನು ಶೇ.71.5ಕ್ಕೆ ಇಳಿಸಲಾಗಿತ್ತು. ಇದೀಗ ಮತ್ತೆ ಶೇ.5ರಷ್ಟು ಟಿಕೆಟ್ ದರ ಹೆಚ್ಚಳ ಮಾಡಲಾಗುತ್ತಿದೆ ಎಂದು BMRCL ಅಧಿಕೃತವಾಗಿ ಮಾಹಿತಿ ನೀಡಿದೆ.

ಪರಿಷ್ಕೃತ ದರಗಳಂತೆ, 0 ರಿಂದ 2 ಕಿಲೋಮೀಟರ್ ಪ್ರಯಾಣಕ್ಕೆ ಟಿಕೆಟ್ ದರ ₹10ರಿಂದ ₹11ಕ್ಕೆ ಏರಿಕೆಯಾಗಿದ್ದು, 25 ಕಿಲೋಮೀಟರ್‌ಗಿಂತ ಹೆಚ್ಚು ದೂರ ಪ್ರಯಾಣಕ್ಕೆ ಟಿಕೆಟ್ ದರ ₹90ರಿಂದ ₹95ಕ್ಕೆ ಹೆಚ್ಚಳವಾಗಿದೆ. ಮೆಜೆಸ್ಟಿಕ್–ವೈಟ್‌ಫೀಲ್ಡ್, ಮೆಜೆಸ್ಟಿಕ್–ಬೊಮ್ಮಸಂದ್ರ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ₹4ರಿಂದ ₹5ರ ವರೆಗೆ ದರ ಏರಿಕೆ ಕಂಡುಬಂದಿದೆ.

ಮೆಟ್ರೋ ದರ ಪರಿಷ್ಕರಣೆ ಕೇಂದ್ರ ಸರ್ಕಾರದ ಅಧಿಕಾರ: ದಿನೇಶ್ ಗುಂಡೂರಾವ್

0

ಕಲಬುರಗಿ: ಮೆಟ್ರೋ ಟಿಕೆಟ್ ದರಪರಿಷ್ಕರಣೆ ವಿಚಾರದಲ್ಲಿ ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ಸರ್ಕಾರದ ಮೇಲೆ ಅನಗತ್ಯವಾಗಿ ಆರೋಪ ಹೊರಿಸುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮೆಟ್ರೋ ದರ ಹೆಚ್ಚಳ ವಿಚಾರದಲ್ಲಿ ಬಿಜೆಪಿಯವರು ಏನಾದರೂ ಆಗುತ್ತದೆ ಎಂದು ಕಾಯುತ್ತಾ, ರಾಜ್ಯ ಸರ್ಕಾರದ ಮೇಲೆ ಹೊಣೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈಗ ವಾಸ್ತವಾಂಶ ಹೊರಬಂದಿದ್ದು, ಮೆಟ್ರೋ ಟಿಕೆಟ್ ದರ ಪರಿಷ್ಕರಣೆ ಮಾಡುವ ಅಧಿಕಾರ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಕೈಯಲ್ಲಿದೆ ಎಂದರು.

ಈ ವಿಷಯದಲ್ಲಿ ರಾಜ್ಯ ಸರ್ಕಾರ ಯಾರ ಮೇಲೂ ಹೊಣೆ ಹಾಕುತ್ತಿಲ್ಲ. ಹೀಗಾಗಿ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಬಳಿ ಈ ವಿಚಾರವನ್ನು ಮುಂದಿಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಅಧಿಕೃತವಾಗಿ ಕೇಂದ್ರಕ್ಕೆ ಪತ್ರ ಬರೆದಿದ್ದು, ಮೆಟ್ರೋ ದರ ಪರಿಷ್ಕರಣೆಗೆ ಸಮಿತಿ ರಚಿಸುವಂತೆ ಮನವಿ ಮಾಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಜೀವಿತ ಪ್ರಮಾಣಪತ್ರ ಕಡ್ಡಾಯ; ತ್ವರಿತ ಕ್ರಮಕ್ಕೆ ಸಿದ್ದರಾಮಯ್ಯ ಸೂಚನೆ!

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿ ಯೋಜನೆಯ ಪ್ರಮುಖ ಭಾಗವಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ತಮ್ಮ ಜೀವಿತ ಪ್ರಮಾಣಪತ್ರ ಬ್ಯಾಂಕ್‌ಗೆ ಸಲ್ಲಿಸುವುದು ಕಡ್ಡಾಯವಾಗಬೇಕು ಎಂದು ಸೂಚನೆ ನೀಡಿದ್ದಾರೆ.

ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಲ್ಲಿ ಮರಣ ಹೊಂದಿರುವವರ ಮಾಹಿತಿಗಳು ಕಾಲಕಾಲಕ್ಕೆ ಪರಿಶೀಲನೆ ನಡೆಸಿ , ಮರಣ ಹೊಂದಿರುವ ಫಲಾನುಭವಿಗಳಗೆ ಧನಸಹಾಯ ಪಾವತಿಯಾಗುವುದನ್ನು ತಪ್ಪಿಸಬೇಕು. ಕುಟುಂಬದ ಜೀವನ ನಿರ್ವಹಣೆಗೆ ಹೆಚ್ಚು ಉಪಯೋಗವಾಗುತ್ತಿರುವ ಗೃಹಲಕ್ಷ್ಮಿ ಯೋಜನೆಯಡಿ ಪಾವತಿಯಾಗುವ ಮೊತ್ತವು ಮರಣ ಹೊಂದಿರುವ ಫಲಾನುಭವಿಗಳಿಗೆ ಕೆಲವು ಕಡೆ ಪಾವತಿಯಾಗುವುದನ್ನು ತಡೆಗಟ್ಟುವುದು ಅವಶ್ಯವಾಗಿರುತ್ತದೆ. ಇದರಿಂದ ಸರ್ಕಾರವು ಪಾವತಿಸುವ ಮೊತ್ತವು ಸದ್ವಿನಿಯೋಗವಾಗಲು ಹಾಗೂ ಸರ್ಕಾರದ ಹಣ ಇತರೆ ಅರ್ಹ ಫಲಾನುಭವಿಗಳಿಗೆ ವಿತರಿಸಲು ಅನುಕೂಲವಾಗವ ನಿಟ್ಟಿನಲ್ಲಿ ಸರ್ಕಾರವು ಕ್ರಮ ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು.

ಮನವಿಗೆ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಈ ಬಗ್ಗೆ ಪರಿಶೀಲನೆ ಮಾಡಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ಕೊಪ್ಪಳ| ಸ್ಪೀರಿಟ್ ಕುಡಿದು ಯುವಕರಿಬ್ಬರು ಸಾವು!

0

ಕೊಪ್ಪಳ:- ಸ್ಪೀರಿಟ್ ಕುಡಿದು ಯುವಕರಿಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಯಲ್ಲಿ ಜರುಗಿದೆ.

ಕೂಕನಪಳ್ಳಿ ನಿವಾಸಿಗಳಾದ ರಮೇಶ ಹೊಸಳ್ಳಿ, ಅಮರಯ್ಯ ಹಿರೇಮಠ ಮೃತ ಯುವಕರು. ಮೃತರು, ಫೆ 4 ರಂದು ಜಮೀನಿನಲ್ಲಿ ಪಾರ್ಟಿ ಮಾಡಲು ಹೋಗಿದ್ದರು. ಯುವಕರಿಗೆ ಸರಾಯಿ ಎಂದು ಮಾರುತಿ ಹಾಗು ಶರಣಪ್ಪ ಗುರಿಕಾರ ಎಂಬುವವರು ಸ್ಪೀರಿಟ್ ನೀಡಿದರು. ಸ್ಪೀರಿಟ್ ಕುಡಿದ ಬಳಿಕ ರಮೇಶ, ಶರಣಪ್ಪ ಹಂಚಿನಾಳ, ಆಮರಯ್ಯ ಹಿರೇಮಠ ಅಸ್ವಸ್ಥರಾಗಿ ಬಿದ್ದಿದ್ದಾರೆ. ಕೂಡಲೇ ಅವರುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೇ ರಮೇಶ ನಿನ್ನೆ ಮೃತಪಟ್ರೆ, ಇಂದು ಹುಬ್ಬಳ್ಳಿಯಲ್ಲಿ ಅಮರಯ್ಯ ಹಿರೇಮಠ ಸಾವನ್ನಪ್ಪಿದ್ದಾರೆ.

ಘಟನೆ ಸಂಬಂಧ ಮೃತ ರಮೇಶ ತಂದೆಯಿಂದ ಮುನಿರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

ಸೈಕಲ್ ಓಡಿಸುತ್ತಿದ್ದ ಬಾಲಕನ ಮೇಲೆ ಹರಿದ ಕಾರು; ಮುಂದೇನಾಯ್ತು?

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಗಿರಿನಗರದ ಮೊದಲನೇ ಮುಖ್ಯ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಮನೆಯ ಮುಂದೆ ಸೈಕಲ್ ಹೊಡೆಯುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿ ಹೊಡೆದಿದೆ. ರಸ್ತೆ ಬದಿ ನಿಂತಿದ್ದ ಮಹೀಂದ್ರಾ XUV300 ಕಾರನ್ನು ಚಾಲಕ ರಸ್ತೆಗಿಳಿಸುವ ವೇಳೆ ಸೈಕಲ್ ನಲ್ಲಿದ್ದ ಬಾಲಕ ವಿಕಾಸ್ ಅಡ್ಡ ಬಂದಿದ್ದಾನೆ. ಈ ವೇಳೆ ಕಾರು ಬಾಲಕನಿಗೆ ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ಗಾಯಗೊಂಡ ವಿಕಾಸ್‌ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಸಂಪೂರ್ಣ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬನಶಂಕರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೊದಲ ಪತ್ನಿಗೆ ಡಿವೋರ್ಸ್​​ ನೀಡದೆ 2ನೇ ಮದುವೆ: ಮಂಟಪಕ್ಕೆ ನುಗ್ಗಿ ಗಂಡನಿಗೆ ಶಾಕ್ ಕೊಟ್ಟ ಹೆಂಡ್ತಿ!

0

ತುಮಕೂರು:- ಜಿಲ್ಲೆಯ ಕುಣಿಗಲ್ ತಾಲೂಕಿನ ಯಡೆಯೂರಿನಲ್ಲಿ ಸಿನಿಮೀಯ ದೃಶ್ಯದಂತೆ ಹೋಲುವ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ.

ತನಗೆ ವಿಚ್ಛೇದನ ನೀಡದೆ ಮತ್ತೊಂದು ಮದುವೆ ಮಾಡಿಕೊಳ್ಳಲು ಹೊರಟಿದ್ದ ಪತಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಕಲ್ಯಾಣ ಮಂಟಪಕ್ಕೆ ಪೊಲೀಸರ ಜೊತೆ ನುಗ್ಗಿ ಪತ್ನಿ ಶಾಕ್ ಕೊಟ್ಟಿದ್ದಾಳೆ. ಥೇಟ್​​ ಸಿನಿಮಾ ಶೈಲಿಯ ದೃಶ್ಯ ನೆರೆದಿದ್ದವರನ್ನು ಅಚ್ಚರಿಗೊಳಿಸಿದ್ದು, ಪತ್ನಿಗೆ ಗೊತ್ತಾಗದಂತೆ ಮತ್ತೊಂದು ಮದುವೆ ಮಾಡಲಾಗ್ತಿತ್ತು ಎಂಬ ಆರೋಪ ಕೇಳಿಬಂದಿದೆ.

ಲೇಪಾಕ್ಷಿ ಎಂಬಾಕೆಯನ್ನ ಹರಿಪ್ರಸಾದ್ ಎಂಬುವವರು 2014ರಲ್ಲಿ ಮದುವೆ ಆಗಿದ್ದರು. ಮದುವೆ ಬಳಿಕ 10 ವರ್ಷ ಸಂಸಾರವನ್ನೂ ನಡೆಸಿದ್ದರು. ಆ ಬಳಿಕ ಕೌಟುಂಬಿಕ ಕಲಹದ ಕಾರಣಕ್ಕೆ ದಂಪತಿ ಬೇರೆಯಾಗಿದ್ದರು. ಈ ನಡುವೆ ಲೇಪಾಕ್ಷಿಗೆ ಗೊತ್ತಾಗದಂತೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಯುವತಿಯ ಜೊತೆಗೆ ಮದುವೆಗೆ ಹರಿಪ್ರಸಾದ್​ ಮುಂದಾಗಿದ್ದಾರೆ. ಅದರಂತೆ ಯಡೆಯೂರಿನ SLN ಕಲ್ಯಾಣ ಮಂಟಪದಲ್ಲಿ ಇಂದು ಬೆಳಗ್ಗೆ ಪೊಲೀಸರ ಜೊತೆ ಲೇಪಾಕ್ಷಿ ಎಂಟ್ರಿ ಕೊಟ್ಟಿದ್ದಾರೆ.

ಇನ್ನು ಪತ್ನಿ ಕಂಡು ಹರಿಪ್ರಸಾದ್​​ ಕಕ್ಕಾಬಿಕ್ಕಿಯಾಗಿದ್ದರೆ, ನನಗೆ ಡಿವೋರ್ಸ್ ಕೊಡದೆ ಮೋಸ ಮಾಡಿದ್ದೀಯಾ ಅಂತ ಗಲಾಟೆ ತೆಗೆದ ಲೇಪಾಕ್ಷಿ ಕೊನೆಗೂ ಮದುವೆ ನಿಲ್ಲಿಸಿದ್ದಾರೆ. ಮತ್ತೊಂದು ಮದುವೆಯ ಆಸೆಯಲ್ಲಿ ಹಸೆಮಣೆ ಏರಿದ್ದ ಹರಿಪ್ರಸಾದ್​​, ತಾಳಿ ಕಟ್ಟದೆ ಪೊಲೀಸ್​​ ಠಾಣೆಗೆ ತೆರಳಿದ ಪ್ರಸಂಗ ನಡೆದಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ಲೇಪಾಕ್ಷಿ ಕುಟುಂಬಸ್ಥರು ಹರೀಶ್​​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

error: Content is protected !!