Home Blog Page 62

ಸ್ವಚ್ಛತಾ ಕಾರ್ಮಿಕೆಯನ್ನು ಮನೆಗೆ ಕರೆಸಿ ಸನ್ಮಾನಿಸಿದ ರಜನೀಕಾಂತ್: ಕಾರಣವೇನು?

ಸಿನಿಮಾ ಪ್ರಚಾರದ ಸಮಯದಲ್ಲಿ ಮಾತ್ರ ಸ್ವಚ್ಛತಾ ಕಾರ್ಮಿಕರನ್ನು ಹುಡುಕಿ ಫೋಟೋ ತೆಗೆಸಿಕೊಳ್ಳುವ ಸೆಲೆಬ್ರಿಟಿಗಳ ನಡುವೆ, ಸೂಪರ್‌ಸ್ಟಾರ್ ರಜನಿಕಾಂತ್ ನಡೆ ಸಂಪೂರ್ಣ ವಿಭಿನ್ನವಾಗಿದೆ. ಇದು ಯಾವುದೇ ಡೈಲಾಗ್ ಅಲ್ಲ, ನಿಜವಾದ ಜೀವನದ ಹೀರೋಗೆ ಸಲ್ಲಿಸಿದ ಗೌರವ.

ಚೆನ್ನೈನಲ್ಲಿ ಸ್ವಚ್ಛತಾ ಕಾರ್ಮಿಕೆಯಾಗಿ ಕೆಲಸ ಮಾಡುತ್ತಿರುವ ಪದ್ಮ ಅವರು ಇತ್ತೀಚೆಗೆ ಕಸದಲ್ಲಿ ಸಿಕ್ಕಿದ್ದ 40 ಗ್ರಾಂ ಚಿನ್ನವನ್ನು ಪ್ರಾಮಾಣಿಕವಾಗಿ ಅದರ ಮಾಲೀಕರಿಗೆ ಹಿಂತಿರುಗಿಸಿದ್ದರು. ಈ ಒಂದು ಕಾರ್ಯವೇ ಪದ್ಮ ಅವರನ್ನು ರಾಜ್ಯದ ಗಮನ ಸೆಳೆಯುವ ವ್ಯಕ್ತಿಯನ್ನಾಗಿ ಮಾಡಿತು. ಪ್ರಾಮಾಣಿಕತೆಗೆ ಸಾಕ್ಷಿಯಾದ ಈ ಘಟನೆಯನ್ನು ಗಮನಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ ಪದ್ಮ ಅವರನ್ನು ಸನ್ಮಾನಿಸಿ ಒಂದು ಲಕ್ಷ ರೂಪಾಯಿ ಬಹುಮಾನ ನೀಡಿದ್ದರು.

ಈಗ ಅದಕ್ಕಿಂತಲೂ ದೊಡ್ಡ ಗೌರವ ಪದ್ಮ ಅವರಿಗೆ ದೊರೆತಿದೆ. ನಟ ರಜನಿಕಾಂತ್ ಅವರು ಪದ್ಮ ಮತ್ತು ಅವರ ಕುಟುಂಬವನ್ನು ಪೋಯಸ್ ಗಾರ್ಡನ್‌ನಲ್ಲಿರುವ ತಮ್ಮ ನಿವಾಸಕ್ಕೆ ಆಹ್ವಾನಿಸಿ, ಹಾರ-ಶಾಲು ಹಾಕಿ ಗೌರವಿಸಿದ್ದಾರೆ. ಜೊತೆಗೆ ಪದ್ಮ ಅವರ ಕೊರಳಿಗೆ ಚಿನ್ನದ ಸರವನ್ನೂ ಉಡುಗೊರೆಯಾಗಿ ನೀಡಿ ಆಶೀರ್ವದಿಸಿದ್ದಾರೆ.

ರಜನಿಕಾಂತ್ ಅವರಿಗೆ ಯಾರಾದರೂ ಮಾಡಿದ ಒಳ್ಳೆಯ ಕೆಲಸ ಮನಸ್ಸಿಗೆ ತಟ್ಟಿದರೆ, ಅವರು ಅದನ್ನು ಮರೆತವರಲ್ಲ. ‘ಕಾಂತಾರ’ ಸಿನಿಮಾ ಮೆಚ್ಚಿದಾಗ ರಿಷಬ್ ಶೆಟ್ಟಿಗೆ ಚಿನ್ನದ ಸರ ಹಾಕಿದ್ದೂ ಇದೆ. ವರ್ಷಗಳಿಂದ ಐದು ರೂಪಾಯಿಗೆ ಪರೋಟ ಮಾರುವ ಅಭಿಮಾನಿಯನ್ನು ಮನೆಗೆ ಕರೆಸಿ ಗೌರವಿಸಿದ್ದೂ ಇದೆ. ಈಗ ಅದೇ ಸಾಲಿಗೆ ಸ್ವಚ್ಛತಾ ಕಾರ್ಮಿಕೆಯಾದ ಪದ್ಮ ಸೇರಿದ್ದಾರೆ.

ಇದು ಪ್ರಚಾರದ ಕಥೆಯಲ್ಲ. ಇದು ಮೌಲ್ಯಗಳ ಕಥೆ. ವೇದಿಕೆ, ಮೈಕ್, ಫ್ಲೆಕ್ಸ್ ಇಲ್ಲದೆ ಒಳ್ಳೆಯತನವನ್ನು ಗುರುತಿಸುವ ಸಂಸ್ಕೃತಿಗೆ ರಜನಿಕಾಂತ್ ಮತ್ತೆ ಜೀವ ನೀಡಿದ್ದಾರೆ. ನಿಜವಾದ ಸ್ಟಾರ್‌ಡಮ್ ಎಂದರೆ ಇದೇ.

ಯಾದಗಿರಿ| ಕೇಸರಿ ಧ್ವಜದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಕ್ಕಾಗಿ ತಾಯಿ–ಮಗನ ಮೇಲೆ ಹಲ್ಲೆ!

0

ಗುರುಮಠಕಲ್: ಗುರುಮಠಕಲ್ ತಾಲ್ಲೂಕಿನ ಪುಟಪಾಕ್ ಗ್ರಾಮದಲ್ಲಿ ಕೇಸರಿ ಧ್ವಜದ ಫೋಟೋವನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದಕ್ಕೆ ತಾಯಿ–ಮಗನ ಮೇಲೆ ಯುವಕರ ಗುಂಪಿನಿಂದ ಹಲ್ಲೆ ನಡೆದಿದೆ.

ಗ್ರಾಮದಲ್ಲಿ ಶಿವಮಾಲಾಧಾರಿಗಳಿಂದ ಧಾರ್ಮಿಕ ಕಾರ್ಯಕ್ರಮ ನಡೆಸುವುದರ ಹಿನ್ನೆಲೆಯಲ್ಲಿ ಕೇಸರಿ ಬಾವುಟಗಳನ್ನು ಅಳವಡಿಸಲಾಗಿತ್ತು. ಯುವಕ ರಮೇಶ್ ಅವರಿಂದ ಈ ಧ್ವಜದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ ನಂತರ, ಫೋಟೋಗಳು ಮಸೀದಿ ಹತ್ತಿರ ಇಟ್ಟಂತೆ ತೋರಿದುದರಿಂದ, ತಪ್ಪಾಗಿ ಅರ್ಥಮಾಡಿಕೊಂಡ 7 ಮಂದಿ ಯುವಕರು, ರಮೇಶ್ ಮನೆಗೆ ನುಗ್ಗಿ ಹಲ್ಲೆ ನಡೆಸಿದರು.

ಹಲ್ಲೆ ವೇಳೆ, ಮಗನಿಗೆ ಯಾಕೆ ಹೊಡೆದಿದ್ದೀರಿ ಎಂದು ತಾಯಿ ನಾಗಮ್ಮ ಪ್ರಶ್ನಿಸಿದಾಗ, ಯುವಕರ ಗುಂಪು ಮಹಿಳೆ ಮೇಲೂ ಹಲ್ಲೆ ನಡೆಸಿದ್ದಾರೆ. ಮಧ್ಯರಾತ್ರಿ ಸ್ಥಳೀಯ ಶಿವ ಮಾಲಾಧಾರಿಗಳು ಮತ್ತು ಗ್ರಾಮಸ್ಥರು ಗ್ರಾಮದ ನಡು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಶಿವ, ಪಾರ್ವತಿ ಮತ್ತು ಅಂಬೇಡ್ಕರ್ ಭಾವಚಿತ್ರ ಹಿಡಿದುಕೊಂಡು ಹಲ್ಲೆ ನಡೆದ ವಿಷಯಕ್ಕೆ ಖಂಡನೆ ವ್ಯಕ್ತಪಡಿಸಿದರು. ಹಲ್ಲೆ ನಡೆಸಿದವರಿಗೆ ಕ್ಷಮೆ ಕೋರಿ, ಅವರನ್ನು ಬಂಧಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ಘಟನೆಯ ಕುರಿತು ತಾಯಿ–ಮಗನು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಮುಲಾಂಗ, ರಿಯಾಜ್, ಖಾಜಾ, ಖಲೀಲ್, ಆಸೀಫ್, ಖಲೀಂ, ಸಮೀರ್ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದ್ದು ತನಿಖೆ ಪ್ರಾರಂಭವಾಗಿದೆ.

ಬಾಗಲಕೋಟೆಯಲ್ಲಿ ಅಮಾನವೀಯ ಕೃತ್ಯ; ಪತ್ನಿಯ ನಡತೆ ಶಂಕಿಸಿ ತಲೆ ಬೋಳಿಸಿದ ಗಂಡ- ಕೊಲೆಯತ್ನ ಆರೋಪ!

0

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ ಪತಿಯೊಬ್ಬನು ತನ್ನ ಪತ್ನಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ಪತ್ನಿಯ ನಡತೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಪತಿ, ಎಲೆಕ್ಟ್ರಿಕ್ ಟ್ರಿಮ್ಮರ್ ಬಳಸಿ ಆಕೆಯ ತಲೆಯನ್ನು ಕ್ಷೌರಿಸಿ, ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ್ದಾನೆ. ಗಾಯಗೊಂಡ ಮಹಿಳೆಯನ್ನು ಅಶ್ವಿನಿ ಉಮೇಶ್ ಕೊಟ್ಟಲಗಿ (26) ಎಂದು ಗುರುತಿಸಲಾಗಿದ್ದು, ಆರೋಪಿತ ಪತಿ ಉಮೇಶ್ ಕೊಟ್ಟಲಗಿ (31) ಆಗಿದ್ದಾನೆ.

ಪತ್ನಿಯ ನಡತೆ ಬಗ್ಗೆ ಸಂಶಯ ವ್ಯಕ್ತಪಡಿಸುವ ಮೂಲಕ ಹೀನ ಕಿರುಕುಳವು ಹಲವಾರು ದಿನಗಳಿಂದ ನಡೆಯುತ್ತಿದ್ದಾಗಿ ಸಂತ್ರಸ್ತೆ ಕುಟುಂಬದವರು ಆರೋಪಿಸಿದ್ದಾರೆ. ಜನವರಿ 31ರಂದು ರಾತ್ರಿ 11 ಗಂಟೆಗೆ, ಪತ್ನಿ ಬುತ್ತಿ ತಡವಾಗಿ ತಲುಪಿದ್ದಕ್ಕೆ ಪತಿ ಗಲಾಟೆ ಆರಂಭಿಸಿ, ಬಾಗಿಲು ಹಾಕಿಕೊಂಡು ಬುತ್ತಿ ಯಾಕೆ ತಡ ಆಯ್ತು ಎಂದು ಪ್ರಶ್ನಿಸಿ ಜಗಳವಾಡಿದ ನಂತರ, ಎಲೆಕ್ಟ್ರಿಕ್ ಟ್ರಿಮ್ಮರ್ ಬಳಸಿ ಬಲವಂತವಾಗಿ ಆಕೆಯ ತಲೆ ಬೋಳಿಸಿ ಹಲ್ಲೆ ನಡೆಸಿದ್ದಾನೆ.

ಈ ಪ್ರಕರಣ ಸಂಬಂಧ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಉಮೇಶ್ ಕೊಟ್ಟಲಗಿಯನ್ನು ಬಂಧಿಸಿದ್ದಾರೆ. ಅಲ್ಲದೇ ಘಟನೆ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.

ರತ್ನಾ ಎಫ್.ಶಿಂಗಾಡಿಯವರಿಗೆ `ಆದರ್ಶ ಉಪಾಧ್ಯಾಯ’ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸ್ಥಳೀಯ ಬಸವೇಶ್ವರ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ. 4ರಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ರತ್ನಾ ಕುಮಾರಿ ಎಫ್.ಶಿಂಗಾಡಿಯವರಿಗೆ ರಾಜ್ಯ ಮಟ್ಟದ ಆದರ್ಶ ಉಪಾಧ್ಯಾಯರು ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಲಬುರ್ಗಿ ರಂಗಮಂದಿರದಲ್ಲಿ ಆಧುನಿಕ ಭಾರತದ ಅಕ್ಷರದ ಅವ್ವ ಸಾವಿತ್ರಿ ಬಾಯಿ ಫುಲೆ, ಮುಸ್ಲಿಮ್ ಧರ್ಮದ ಮೊದಲ ಶಿಕ್ಷಕಿ ಫಾತಿಮಾ ಶೇಖ್ ಅವರ ಜನ್ಮದಿನಾಚರಣೆಯ ನಿಮಿತ್ತ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಯಿತು.

ಫಾದರ್ ಜೋಸೆಫ್ ಸಾನ್ನಿಧ್ಯದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ದಾಕ್ಷಾಯಿಣಿ ಎಸ್.ಅಪ್ಪ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಡಾ. ಅಜಯ್ ಸಿಂಗ್, ಬಸವರಾಜ್ ಜೆ. ಮತ್ತಿಮೂಡ, ಮಹಾಪೌರರಾದ ವರ್ಷಾ ಆರ್.ಜಾನೆ, ರಾಜ್ಯಾಧ್ಯಕ್ಷ ಗುರುಪಾದ ಕೂಗನೂರ್, ಕೋಶಾಧ್ಯಕ್ಷ ಝಕೀರ್ ಹುಸೇನ್ ಕೂಪನೂರ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿಕ್ಷಕಿ ರತ್ನಾ ಅವರ ಸೇವೆ ಸ್ಮರಿಸಿ ಶುಭ ಕೋರಿದರು.

ರಾಯಚೂರು| ಸಿಂಧನೂರು ರೈಲ್ವೇ ನಿಲ್ದಾಣದ ಬಳಿ ಅಪರಿಚಿತ ಯುವತಿ ಶವ ಪತ್ತೆ!

0

ರಾಯಚೂರು:- ಜಿಲ್ಲೆಯ ಸಿಂಧನೂರು ಪಟ್ಟಣದ ರೈಲ್ವೇ ನಿಲ್ದಾಣದ ಸಮೀಪ ಅಪರಿಚಿತ ಯುವತಿಯ ಶವ ಪತ್ತೆಯಾಗಿರುವ ಘಟನೆ ಆತಂಕ ಮೂಡಿಸಿದೆ.

ಸುಮಾರು 21 ವರ್ಷದ ಮಹಿಳೆ ಎಂದು ಅಂದಾಜಿಸಲಾಗಿದ್ದು, ರೈಲಿನಿಂದ ಬಿದ್ದು ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಶವ ಪತ್ತೆಯಾದ ಮಾಹಿತಿ ತಿಳಿದ ತಕ್ಷಣ ಸಿಂಧನೂರು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ನಿಖರ ಕಾರಣ ತಿಳಿಯಲು ಬೆರಳಚ್ಚು ತಜ್ಞರನ್ನು ಕೂಡ ಕರೆಸಿ ತನಿಖೆ ಮುಂದುವರಿಸಲಾಗಿದೆ.

ಘಟನೆ ಸಿಂಧನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತಳ ಗುರುತು ಪತ್ತೆ ಹಾಗೂ ಸಾವಿನ ಹಿನ್ನಲೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಬಳ್ಳಾರಿ ಬ್ಯಾನರ್ ಗಲಾಟೆ ಎಫೆಕ್ಟ್: ಕೋಲಾರದಲ್ಲಿ ಫ್ಲೆಕ್ಸ್–ಬ್ಯಾನರ್‌ ಅಳವಡಿಕೆಗೆ ಟಫ್ ರೂಲ್ಸ್ ಜಾರಿ

0

ಕೋಲಾರ: ಬಳ್ಳಾರಿ ಬ್ಯಾನರ್ ಗಲಾಟೆ ಬಳಿಕ ಎಚ್ಚೆತ್ತ ಕೋಲಾರ ಜಿಲ್ಲಾಡಳಿತ, ಜಿಲ್ಲೆಯಾದ್ಯಂತ ಫ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಕೆಗೆ ಹೊಸ ನೀತಿಯನ್ನು ಜಾರಿ ಮಾಡಿದೆ.

ಇನ್ಮುಂದೆ ಕೋಲಾರ ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಫ್ಲೆಕ್ಸ್ ಅಳವಡಿಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಜಿಲ್ಲಾಡಳಿತ ಸ್ಪಷ್ಟ ಸೂಚನೆ ನೀಡಿದೆ. ಹೊಸ ನೀತಿಯಂತೆ, ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಕೇವಲ ಮೂರು ದಿನಗಳ ಕಾಲ ಮಾತ್ರ ಅಳವಡಿಸಲು ಅವಕಾಶ ನೀಡಲಾಗಿದೆ. ಅಂದರೆ, ಕಾರ್ಯಕ್ರಮದ ಮುನ್ನದ ದಿನ, ಕಾರ್ಯಕ್ರಮ ನಡೆಯುವ ದಿನ ಹಾಗೂ ನಂತರದ ಒಂದು ದಿನ ಮಾತ್ರ ಫ್ಲೆಕ್ಸ್ ಇರಲು ಅನುಮತಿ ಇರುತ್ತದೆ. ನಗರ ಸೌಂದರ್ಯ ಹಾಳು ಮಾಡುವ ಅಥವಾ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್ ಅಳವಡಿಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.

ನಿಯಮ ಉಲ್ಲಂಘನೆ ಮಾಡಿದಲ್ಲಿ ದಂಡ ವಿಧಿಸುವುದರ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಸಹ ಜಿಲ್ಲಾಡಳಿತ ನೀಡಿದೆ. ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿ ಅವರು ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಅನ್ವಯವಾಗುವಂತೆ ಈ ಆದೇಶ ಹೊರಡಿಸಿದ್ದು, ನಗರಗಳ ಸೌಂದರ್ಯ ಕಾಪಾಡುವ ಜೊತೆಗೆ ಅಹಿತಕರ ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ವೈಚಾರಿಕತೆಯ ತೇರೆಳೆಯುವ ಡಂಬಳ ಜಾತ್ರೆ

ಜಾತ್ರೆ ನೆಪದಲ್ಲಿ ಸಾಮಾಜಿಕ ಪರಿವರ್ತನೆ ಮಾಡಿ ಸಾಮರಸ್ಯದ ತೇರು ಎಳೆಯುತ್ತಿದ್ದಾರೆ ಡಂಬಳದ ತೋಂಟದಾರ್ಯ ಮಠದ ತೋಂಟದ ಡಾ. ಸಿದ್ಧರಾಮ ಮಹಾಸ್ವಾಮಿಗಳು. ಮಠದ ಮದರ್ಧನಾರೀಶ್ವರರ 286ನೇ ಜಾತ್ರಾ ಮಹೋತ್ಸವದ ರಥೋತ್ಸವವು ಫೆ. 3ರಂದು ರಥೋತ್ಸವ ಸಂಭ್ರಮದಿಂದ ನಡೆದಿದ್ದು, ಫೆ. 4ರಂದು ಲಘು ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

ಸಮ ಸಮಾಜಕ್ಕಾಗಿ ಮೌಢ್ಯ, ಅಂಧಕಾರದಲ್ಲಿ ಮುಳಗಿ ಅಜ್ಞಾನದ ಮಡುವಿನಲ್ಲಿರುವ ಸಮಾಜದ ಕೊಳೆ ತೊಳೆಯುವ ನಿಟ್ಟಿನಲ್ಲಿ ತೋಂಟದ ಡಾ. ಸಿದ್ದಲಿಂಗ ಸ್ವಾಮೀಜಿಗಳ ನಂತರ ತೋಂಟದ ಡಾ. ಸಿದ್ಧರಾಮ ಶ್ರೀಗಳು ಅವರು ಜಾತ್ರೆಗೆ ಹೊಸ ಮೆರಗು ನೀಡುವ ನಿಟ್ಟಿನಲ್ಲಿ ವೈಚಾರಿಕತೆಯ ತೇರು ಎಳೆಯಲು ಭಕ್ತರಿಗೆ ಅನುಕೂಲ ಕಲ್ಪಿಸಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ಕೋಮು ಸೌಹಾರ್ದತೆ ಮೆರೆದಿರುವ ಎಡೆಯೂರ-ಡಂಬಳ-ಗದಗ ತೋಂಟದಾರ್ಯ ಮಠವನ್ನು ಲಿಂ. ಡಾ. ಸಿದ್ದಲಿಂಗ ಸ್ವಾಮೀಜಿಯವರ ಮಠ ಎಂಬ ಪರಿಕಲ್ಪನೆಗೆ ಹೊಸ ಭಾಷ್ಯ ಬರೆದಿದ್ದರು. ನಂತರ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮಿಗಳು ಇಂಗ್ಲಿಷೇತರ ಭಾಷೆಗಳಿಂದ `ತೌಲನಿಕ ಧರ್ಮದರ್ಶನ’ವನ್ನು ಅನುವಾದ ಮಾಡುವುದರ ಮೂಲಕ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಠಗಳು ಸಾಮಾನ್ಯರ ನೋವು, ನಲಿವುಗಳಿಗೆ ಸ್ಪಂದಿಸಬೇಕು, ದೇಶಕ್ಕೆ ಬಡತನ, ನಿರುದ್ಯೋಗ, ಮತೀಯ ಗಲಭೆಗಳು, ಭಾಷೆ-ಗಡಿ ಸಮಸ್ಯೆಗಳು ಏಕತೆಗೆ ಧಕ್ಕೆ ತರುತ್ತವೆ ಎಂದು ಅರಿತು ಜಾತ್ರೆಗಳಲ್ಲಿ ಸಾಹಿತ್ಯ ಸಮ್ಮೇಳನ, ವಿಚಾರಗೋಷ್ಠಿ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಗಳ ಮೂಲಕ ಜನತೆಯಲ್ಲಿ ಸಮಗ್ರತೆ ಕಾಪಾಡುವ ಕೈಂಕರ್ಯದಲ್ಲಿ ತೋಂಟದಾರ್ಯ ಮಠ ತೊಡಗಿಸಿಕೊಂಡಿದೆ.

ಲಿಂ. ಡಾ. ಸಿದ್ಧಲಿಂಗ ಶ್ರೀಗಳಂತೆ ತೋಂಟದ ಡಾ. ಸಿದ್ಧರಾಮ ಶ್ರೀ ಪೀಠಾರೋಹಣ ಮಾಡಿದ ನಂತರ ಬಸವಣ್ಣನವರ ಸಮಾನತೆಯ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಅಡ್ಡಪಲ್ಲಕ್ಕಿಯಲ್ಲಿ ಸ್ವಾಮಿಗಳು ಮೆರೆಯಬಾರದು, ಮನುಷ್ಯರನ್ನು ಮನುಷ್ಯರು ಹೊರುವುದು ಹೀನ ಕೆಲಸ ಎಂದು ಪಲ್ಲಕ್ಕಿ ತ್ಯಾಗ ಮಾಡಿ, ಪಲ್ಲಕ್ಕಿ ಮುಂದೆ ಪಾದಚಾರಿಗಳಾಗಿ ಸಾಮಾನ್ಯ ಭಕ್ತರ ಮಧ್ಯೆ ಹೋಗುತ್ತಿದ್ದಾರೆ.

ಮೌಢ್ಯ, ಕಂದಾಚಾರ, ಸಮಾಜದ ಅವನತಿಗೆ ಕಾರಣ ಎಂದು ಮನಗಂಡು ಶಿಕ್ಷಣ, ಆರೋಗ್ಯ, ಪರಿಸರ, ನಾಡು ನುಡಿ ಪುಸ್ತಕ ಪ್ರಕಟಣೆ, ಅನ್ನದಾಸೋಹ ಸೇರಿದಂತೆ ಜನಪರ ಕಾರ್ಯ ಕೈಗೊಂಡು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸು ಎಂಬ ಬಸವಣ್ಣವರ ವಾಣಿಯನ್ನು ಸಹಕಾರಗೊಳಿಸಲು ಡಾ. ಸಿದ್ಧರಾಮ ಸ್ವಾಮೀಜಿಯವರು ಕೂಡ ಶಿವಾನುಭವ ಕಾರ್ಯಕ್ರಮಗಳ ಮೂಲಕ ಸಾಹಿತಿಗಳಿಗೆ, ಕಲಾವಿದರಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಿ ಬಸವಣ್ಣವರ ಅನುಭವ ಮಂಟಪದ ಸವಿ ಸಂಭ್ರಮಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ.

ಫೆ. 4ರಂದು ಸಂಜೆ 6.30ಕ್ಕೆ ಲಘು ರಥೋತ್ಸವದಲ್ಲಿ ತೋಂಟದ ಡಾ. ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಪಾಲ್ಗೊಳ್ಳಲಿದ್ದಾರೆ. ಉತ್ತರ ಕರ್ನಾಟಕದ ಗಟ್ಟಿ ಆಹಾರ ರೊಟ್ಟಿ ಜಾತ್ರೆ ರಾತ್ರಿ 8ಕ್ಕೆ ನಡೆಯಲಿದ್ದು, ಹಲವಾರು ಜಿಲ್ಲೆಯ ಜನರು ಕಡಕ್ ರೊಟ್ಟಿ ಸವಿಯಲಿದ್ದಾರೆ.

“ಪರಿಸರದಲ್ಲಿ ಗಾಳಿ, ಮಳೆ, ಸೂರ್ಯನ ಕಿರಣಗಳಿಗೆ ಯಾವುದೇ ಜಾತಿ, ಮತ, ಪಂಥದ ಭೇದವಿಲ್ಲದಂತೆ, ಈ ಮಠದ ಭಕ್ತರು ಕೂಡ ಯಾವುದೇ ಭೇದಭಾವವಿಲ್ಲದೆ ರೊಟ್ಟಿ ತಯಾರಿಸಿ ಎಲ್ಲರೂ ಸೇರಿ ಸವಿಯುತ್ತಾರೆ. ಇದೇ ಭಾವೈಕ್ಯತೆಯ ಸಂದೇಶವನ್ನು ಸಾರುವ ಜಾತ್ಯಾತೀತ ರೊಟ್ಟಿ ಜಾತ್ರೆಯಾಗಿದೆ. ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಇಂತಹ ಆಚರಣೆಗಳು ಮಹತ್ವದ ಪಾತ್ರ ವಹಿಸುತ್ತವೆ”

  • ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು
    ಸಂಸ್ಥಾನಮಠ, ಡಂಬಳ-ಗದಗ

“286ನೇ ಜಾತ್ರೆಯನ್ನು ವೈಚಾರಿಕ ವೈಶಿಷ್ಟ್ಯದ ಮೂಲಕ ಜಾತಿ, ಮತ, ಪಂಥ ಭೇದಭಾವ ತೊರೆಯುವ ನಿಟ್ಟಿನಲ್ಲಿ ರೊಟ್ಟಿ ಜಾತ್ರೆಯ ಮೂಲಕ ಸಮ ಸಮಾಜ ಕಟ್ಟಲು ಮತ್ತು ಮಠದಲ್ಲಿ ಮಹಾತ್ಮರ, ದಾರ್ಶನಿಕರ, ಸಂತರ, ಆದರ್ಶ ಮೌಲ್ಯಗಳನ್ನು ಶಿವಾನುಭವಗಳಲ್ಲಿ ನೆನೆದು ಭಕ್ತರ ನೆತ್ತಿಗೆ ಜ್ಞಾನದ ಬುತ್ತಿ ತುಂಬುತ್ತಿರುವ ಪರಮಪೂಜ್ಯ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಾರ್ಯ ಅನನ್ಯವಾದುದು”

  • ಮಿಥುನ (ಸಂಗನಗೌಡ) ಜಿ. ಪಾಟೀಲ
    ರೋಣ ಮತಕ್ಷೇತ್ರದ ಗ್ಯಾರಂಟಿ ಸಮಿತಿ ಅಧ್ಯಕ್ಷ

“ಇಂದಿಗೂ ಜಾತಿ ಆಚರಣೆ ಮತ್ತು ಮೌಢ್ಯದ ಹೆಸರಿನಲ್ಲಿ ಜನರನ್ನು ವಿಭಜಿಸುವ ಶಕ್ತಿಗಳ ನಡುವೆ ರೊಟ್ಟಿ ಜಾತ್ರೆಯನ್ನು ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಯೊಂದಿಗೆ ಮುಂದುವರೆಸುತ್ತಿರುವ ಡಾ. ತೋಂಟದ ಸಿದ್ಧರಾಮ ಶ್ರೀಗಳ ಕಾರ್ಯ ಇಂದಿನ ಕಾಲಘಟ್ಟಕ್ಕೆ ಅಗತ್ಯವಾದ ದಿಟ್ಟ ಸಂದೇಶವಾಗಿದೆ”

  • ಬಸುರಡ್ಡಿ ದೇವಪ್ಪ ಬಂಡಿಹಾಳ
    ಯುವ ಮುಖಂಡ, ಡಂಬಳ

  • ಕೆ.ಆರ್. ದೊಡ್ಡಮನಿ, ಡಂಬಳ

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ: ಶಿಕ್ಷಕ ರಂಗಣ್ಣ ಅರೆಸ್ಟ್!

0

ಚಿತ್ರದುರ್ಗ:- ಒಂದು ವರ್ಷದಿಂದ ನಿರಂತರವಾಗಿ ನಾಲ್ಕು–ಐದು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಶಿಕ್ಷಕನನ್ನು ಭರಮಸಾಗರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯರನ್ನು ಖಾಸಗಿ ಕೊಠಡಿಗೆ ಕರೆಸಿ ಅವರ ಖಾಸಗಿ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ. 2025ರ ಜುಲೈ 25ರಂದು ಧರ್ಮಸ್ಥಳಕ್ಕೆ ನಡೆದ ಪ್ರವಾಸದ ಸಂದರ್ಭದಲ್ಲೂ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದ್ದು, ಈ ವಿಚಾರವನ್ನು ಒಬ್ಬ ಬಾಲಕಿ ಮನೆಗೆ ಬಂದು ಪೋಷಕರಿಗೆ ತಿಳಿಸಿದ್ದಾಳೆ.

ಬಳಿಕ ಪೋಷಕರು ವಿಷಯವನ್ನು ಮುಖ್ಯ ಶಿಕ್ಷಕರಿಗೆ ತಿಳಿಸಿದ್ದು, ಅವರು ಶಾಲಾ ಆಡಳಿತಾಧಿಕಾರಿಗೆ ದೂರು ನೀಡಿದ್ದಾರೆ. ಆಡಳಿತಾಧಿಕಾರಿ ಆರೋಪಿತ ಶಿಕ್ಷಕ ರಂಗಣ್ಣನನ್ನು ಬೇರೆಡೆಗೆ ವರ್ಗಾವಣೆ ಮಾಡಿ ತನಿಖಾ ಸಮಿತಿ ರಚಿಸಿದ್ದು, ತನಿಖೆಯಲ್ಲಿ ಆರೋಪ ಸತ್ಯವೆಂದು ದೃಢಪಟ್ಟಿದೆ. ಇದರ ಆಧಾರದಲ್ಲಿ ಕಳೆದ ಎರಡು ದಿನಗಳ ಹಿಂದೆ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಇಓ ಸಮೇತ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ನಂತರ ವರ್ಗಾವಣೆಯಾಗಿ ಹಿರಿಯೂರು ತಾಲೂಕಿನಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ರಂಗಣ್ಣನನ್ನು ಬಂಧಿಸಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜಾನಪದ ಕಲೆ ಅವನತಿಯ ಅಂಚಿನಲ್ಲಿದೆ: ಶಾಸಕ ಡಾ. ಚಂದ್ರು ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಮ್ಮ ನಾಡಿನ ಹಬ್ಬಗಳು, ಜಾತ್ರೆ, ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೂ ಹೇಳಿಕೊಡುವ ಕಾರ್ಯವನ್ನು ಮಾಡುವುದು ಅಗತ್ಯವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ಸಮೀಪದ ಗೊಜನೂರ ಗ್ರಾಮದ ಬಾಲಲೀಲಾ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ತಂತ್ರಜ್ಞಾನದ ಪ್ರಭಾವದಿಂದ ಜನಪದ ಕಲೆ, ಸಂಸ್ಕೃತಿಗಳು ಅವನತಿಯ ಅಂಚಿನಲ್ಲಿವೆ. ಡೊಳ್ಳಿನ ಪದಗಳು, ಹಂತಿಯ ಪದಗಳು, ತೊಗಲು ಗೊಂಬೆಯಾಟ, ದೊಡ್ಡಾಟಗಳು, ಪೌರಾಣಿಕ ಕತೆಗಳ ನಾಟಕಗಳು ಸೇರಿದಂತೆ ವಿವಿಧ ಕಲೆ-ಸಂಸ್ಕೃತಿಗಳು ಇಂದು ಆಧುನಿಕತೆಯ ಹೊಡೆತಕ್ಕೆ ಸಿಲುಕಿ ನಶಿಸಿ ಹೋಗುತ್ತಿವೆ. ಇಂತಹ ಜಾತ್ರಾ ಮಹೋತ್ಸವಗಳಲ್ಲಿ ಕಲೆಗಳ ಪ್ರದರ್ಶನ ಏರ್ಪಡಿಸುವ ಮೂಲಕ ಪುರಾತನ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಗ್ರಾ.ಪಂ ಅಧ್ಯಕ್ಷ ಮಂಜುನಾಥ ಚಲವಾದಿ ಹಾಗೂ ಜಾನಪದ ಕಲಾವಿದ ಸಂಕ್ರಣ್ಣ ಸಂಕಣ್ಣವರ ಮಾತನಾಡಿದರು. ಸಭೆಯಲ್ಲಿ ಉಪಾಧ್ಯಕ್ಷ ಮಹಾಂತಗೌಡ ಪಾಟೀಲ, ರಮೇಶ ದನದಮನಿ, ಬಸವರಾಜ ಸಂಶಿ, ಶಂಬುಲಿಂಗಪ್ಪ ಸೊರಟೂರ, ಗಂಗಾಧರ ಮೆಣಸಿನಕಾಯಿ, ಕರಿನಿಂಗಣ್ಣವರ, ಬಸವರಾಜ ದನದಮನಿ ಇದ್ದರು.

ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದೆ ಸಾವಿತ್ರಿ ಲಮಾಣಿ ಸುಗಮ ಸಂಗೀತದಲ್ಲಿ ಬಸವಣ್ಣನವರ ವಚನ ಹಾಗೂ ಸಂತ ಶಿಶುನಾಳ ಶರೀಫರ ತತ್ವಪದ ಹಾಡಿ ಮನರಂಜಿಸಿದರು. ರಾಚಯ್ಯ ಮುಧೋಳ ಅವರ ಜೋಗತಿ ನೃತ್ಯವು ಸಭೆಯಲ್ಲಿ ನೆರೆದಿದ್ದವರಲ್ಲಿ ರೋಮಾಂಚನ ಉಂಟು ಮಾಡಿತು. ವಿರೂಪಾಕ್ಷಪ್ಪ ಕ್ಷತ್ರಿಯ ಅವರು ನಡೆಸಿಕೊಟ್ಟ ತೊಗಲು ಗೊಂಬೆಯಾಟ, ಅಶೋಕ ಸುತಾರ ಅವರ ದೊಡ್ಡಾಟವು ಹಳೆಯ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಿತು. ಸಮೂಹ ನೃತ್ಯ, ಗೀಗಿ ಪದ, ಲಾವಣಿ ಪದ, ಡೊಳ್ಳಿನ ಪದಗಳನ್ನು ಹಾಡುವ ಮೂಲಕ ಸಂಸ್ಕೃತಿಯ ಪರಿಚಯಿಸುವುದು ಕಾರ್ಯ ಮಾಡಿದರು.

ಸಮಾರಂಭದಲ್ಲಿ 14 ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜಕುಮಾರ ಸಪಡ್ಲ, ನವೀನ ಪತ್ತಾರ ಇದ್ದರು. ಬಸವರಾಜ ಈರನವರ ಕಾರ್ಯಕ್ರಮ ನಿರ್ವಹಿಸಿದರು.

ಜಿ.ಪಂ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡರ ಮಾತನಾಡಿ, ಜಾನಪದ ಕಲೆಗಳು ನಮ್ಮ ಪ್ರಾಚೀನ ಪರಂಪರೆಯ ಕೊಂಡಿಗಳಾಗಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಮ್ಮ ಜನಪದ ಕಲೆಗಳಿಗೆ ಜೀವ ತುಂಬುವ ಕಾರ್ಯ ಮಾಡುತ್ತಿದೆ. ಇಂತಹ ಜನಪದ ಕಲೆಗಳನ್ನು ಮಕ್ಕಳಿಗೆ ಕಲಿಸುವ ಮೂಲಕ ಪುರಾತನ ಸಂಸ್ಕೃತಿ ಕಾಪಾಡುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಅವಿಭಕ್ತ ಕುಟುಂಬಗಳು ಒಟ್ಟಾಗಿ ಬಾಳಬೇಕಿದೆ: ಜ. ಬೂದೀಶ್ವರ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ನಾನು, ನನ್ನ ಹೆಂಡತಿ, ನಮ್ಮ ಮಕ್ಕಳು ಈ ಚೌಕಟ್ಟನ್ನೇ ಅವಿಭಕ್ತ ಕುಟುಂಬ ಎನ್ನುವ ಭ್ರಮೆಯಲ್ಲಿರುವರೇ ಹೆಚ್ಚಿರುವ ಇಂದಿನ ದಿನಮಾನಗಳಲ್ಲಿ, ಗೋಡೆ ಕಟ್ಟಿಕೊಂಡು ಬೇರೆಯಾಗಿ ಬದುಕುವವರೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ನಿಜವಾದ ಅವಿಭಕ್ತ ಕುಟುಂಬಗಳು ಒಟ್ಟಾಗಿ ಬಾಳಬೇಕಾದ ಅವಶ್ಯಕತೆ ಇದೆ ಎಂದು ಹೊಸಳ್ಳಿಯ ಜ. ಬೂದೀಶ್ವರ ಸಂಸ್ಥಾನಮಠದ ಪೂಜ್ಯ ಅಭಿನವ ಜ. ಬೂದೀಶ್ವರ ಮಹಾಸ್ವಾಮಿಗಳು ಹೇಳಿದರು.

ಅವರು ಗದುಗಿನ ವಿವೇಕಾನಂದ ನಗರದ ಕಾಶೀ ವಿಶ್ವನಾಥ ದೇವಸ್ಥಾನದ ಆವರಣದ ವಿವೇಕಾನಂದ ಸಾಂಸ್ಕೃತಿಕ ಸಭಾ ಭವನದಲ್ಲಿ ರಾಮಪ್ಪ ರಂಗಪ್ಪ ಕಾಶಪ್ಪನವರ ಅಭಿಮಾನಿ ಬಳಗ ಗದಗ ಇವರ ಸಹಕಾರದೊಂದಿಗೆ ಗದುಗಿನ ಶ್ರೀ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಗದಗ ಇವರ ಸಹಯೋಗದಲ್ಲಿ ರಾಮಪ್ಪ ರಂಗಪ್ಪ ಕಾಶಪ್ಪನವರ ಸೇವಾ ನಿವೃತ್ತಿ ನಿಮಿತ್ತ `ಅವಿಭಕ್ತ ಕುಟುಂಬದ ಸಾರಥಿ’ ಗ್ರಂಥ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅವಿಭಕ್ತ ಕುಟುಂಬದಲ್ಲಿರುವ ಪ್ರೀತಿ, ಅಂತಃಕರಣ, ವಿಶಾಲ ಮನೋಭಾವ, ಒಗ್ಗಟ್ಟು ಇವುಗಳನ್ನು ಇಂದಿನ ಪೀಳಿಗೆಗೆ ತಿಳಿಸಬೇಕಾದ ಜವಾಬ್ದಾರಿ ಪಾಲಕರ ಮೇಲಿದೆ. ಅವಿಭಕ್ತ ಕುಟುಂಬವನ್ನು ಈಗಲೂ ಮುನ್ನಡೆಸುತ್ತಿರುವ ಪ್ರೀತಿ-ಬಾಂಧವ್ಯಗಳನ್ನು ಗಟ್ಟಿಯಾಗಿ ಜೋಪಾನವಾಗಿರಿಸಿಕೊಂಡಿರುವ ರಾಮಪ್ಪ ಕಾಶಪ್ಪನವರ ಕುಟುಂಬ ವರ್ಗವನ್ನು ಅಭಿನಂದಿಸಿ ಇದೊಂದು ಮಾದರಿ ಎಂದರು.

ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ ಗ್ರಂಥ ಬಿಡುಗಡೆ ಮಾಡಿದರು.

ಅಭಿನಂದನಾ ನುಡಿಗಳನ್ನಾಡಿದ ಗದಗ ಸಾಯಿ ಮಂದಿರದ ಸಂಸ್ಥಾಪಕ ಅಧ್ಯಕ್ಷ ಡಾ. ಎಸ್.ಬಿ. ಶೆಟ್ಟರ, ಕಾಶಪ್ಪನವರ ಸಾಮಾಜಿಕ ಕಾರ್ಯಗಳನ್ನು ಹಾಗೂ ಅವಿಭಕ್ತ ಕುಟುಂಬವನ್ನು ಮುನ್ನಡೆಸಿಕೊಂಡು ಬಂದಿರುವುದನ್ನು ಶ್ಲಾಘಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗದುಗಿನ ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ರಾಮಣ್ಣ ಕಾಶಪ್ಪನವರ 40 ವರ್ಷದ ವೃತ್ತಿ ಬದುಕನ್ನು ಮೆಲುಕು ಹಾಕಿದರು. ವೇದಿಕೆಯ ಮೇಲೆ ಆರ್.ಆರ್. ಕಾಶಪ್ಪನವರ ದಂಪತಿ, ಶಕುಂತಲಾ ದಂಡಿನ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಗಣ್ಯರಾದ ವ್ಹಿ.ವೈ. ಮಕ್ಕಣ್ಣವರ, ಶಾಂತಣ್ಣ ಕಡಿವಾಲ, ಬಿ.ಎನ್. ಯರನಾಳ, ಶಂಕರ ಹಾನಗಲ್ಲ, ಎಂ.ಎನ್. ಕಾಮನಹಳ್ಳಿ, ಎ.ಕೆ. ತಮ್ಮಣ್ಣವರ, ಮಹೇಶ ತಲೇಗೌಡ್ರ, ಡಾ. ಎಸ್.ಎಫ್. ಜಕಬಾಳ, ಸಿದ್ಧಣ್ಣ ಪಟ್ಟಣಶೆಟ್ಟಿ, ಎ.ಟಿ. ನರೇಗಲ್ಲ, ಎಸ್.ಎಸ್. ಪಾಟೀಲ, ವ್ಹಿ.ಕೆ. ಗುರುಮಠ, ಎಸ್.ಕೆ. ವಂಡಕರ ಆಗಮಿಸಿದ್ದರು.

ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಬಾಹುಬಲಿ ಜೈನರ್ ನಿರೂಪಿಸಿದರು.

ಗ್ರಂಥಕಾರ, ಪತ್ರಕರ್ತ ಅಂದಾನೆಪ್ಪ ವಿಭೂತಿ ಅವರು ರಾಮಪ್ಪ ಕಾಶಪ್ಪನವರು ನಡೆದುಬಂದ ಬದುಕಿನ ದಾರಿ ಹಾಗೂ ಗ್ರಂಥದ ಬಗೆಗೆ ವಿವರಿಸಿದರು. ಆಶಯ ನುಡಿಗಳನ್ನಾಡಿದ ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ, 18ನೇ ವಯಸ್ಸಿನಲ್ಲೇ ದುಡಿಯಲು ಪ್ರಾರಂಭಿಸಿದ ರಾಮಪ್ಪನವರ ಪರಿಶ್ರಮದ ಬದುಕನ್ನು ಬಣ್ಣಿಸಿದರು.

error: Content is protected !!