Home Blog Page 69

ಡ್ರೋನ್ ಸರ್ವೆಯಿಂದ ಆಸ್ತಿ ತೆರಿಗೆ: 46 ಸಾವಿರ ಮನೆ ಮಾಲೀಕರಿಗೆ ಜಿಬಿಎ ನೋಟಿಸ್

ಬೆಂಗಳೂರು: ತೆರಿಗೆ ವಸೂಲಿ ವಿಚಾರದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕೈಗೊಂಡಿರುವ ಕ್ರಮ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಡ್ರೋನ್ ಸರ್ವೆ ಮೂಲಕ ಹೆಚ್ಚುವರಿ ಆಸ್ತಿ ತೆರಿಗೆ ವಸೂಲಿಗೆ ಜಿಬಿಎ ಮುಂದಾಗಿದ್ದು, ಕಟ್ಟಡದ ಬಾಲ್ಕನಿ, ಕಿಟಕಿ ಮೇಲಿನ ಸಜ್ಜೆ, ವಾಟರ್ ಟ್ಯಾಂಕ್ ಸ್ಟ್ಯಾಂಡ್, ಕಾರ್ ಪಾರ್ಕಿಂಗ್, ಪೋರ್ಟಿಕೋ, ಮನೆ ಮುಂದಿನ ತಾತ್ಕಾಲಿಕ ಗಜಿಬೋ ಸೇರಿದಂತೆ ಮನೆಗೆ ಸಂಬಂಧಿಸಿದ ಪೂರಕ ಕಟ್ಟಡಗಳಿಗೂ ತೆರಿಗೆ ವಿಧಿಸಲಾಗಿದೆ.

ಈವರೆಗೆ ಅಂದಾಜು 46 ಸಾವಿರ ಮನೆ ಮಾಲೀಕರಿಂದ ಹೆಚ್ಚುವರಿ ತೆರಿಗೆ ವಸೂಲಿಗೆ ಜಿಬಿಎ ಮುಂದಾಗಿದ್ದು, 5 ಲಕ್ಷದಿಂದ 18 ಲಕ್ಷ ರೂಪಾಯಿವರೆಗೆ ಹೆಚ್ಚುವರಿ ತೆರಿಗೆ ಪಾವತಿಸುವಂತೆ ಮೆಸೇಜ್ ಮೂಲಕ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

ಮೆಸೇಜ್ ತೆರೆಯುವುದನ್ನು ನೋಟಿಸ್ ಸ್ವೀಕರಿಸಿದಂತೆ ಪರಿಗಣಿಸಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಹೆಚ್ಚುವರಿ ತೆರಿಗೆ ಪ್ರಶ್ನಿಸಿದ ಮನೆಗಳನ್ನು ಹರಾಜು ಮಾಡಲು ಕೂಡಾ ಪ್ರಾಧಿಕಾರ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ 17 ಮನೆಗಳ ಹರಾಜು ಪ್ರಕ್ರಿಯೆಗೆ ಅಂತಿಮ ನೋಟಿಸ್ ನೀಡಲಾಗಿದೆ.

ಐದು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 46 ಸಾವಿರ ಜನರಿಗೆ ನೋಟಿಸ್ ನೀಡಿರುವ ಜಿಬಿಎ ಕ್ರಮವನ್ನು ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಪ್ರಶ್ನಿಸಿದ್ದಾರೆ. ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಡ್ರೋನ್ ಸರ್ವೆ ನಡೆಸಿ ಬೆಂಗಳೂರಿನಲ್ಲಿ ಮನೆಗಳಿಗೆ ಹೆಚ್ಚುವರಿ ತೆರಿಗೆ ಹಾಗೂ ದಂಡ ವಿಧಿಸಲಾಗುತ್ತಿದೆ. ಕೆಲವು ಮನೆಗಳಿಗೆ 7-8 ಲಕ್ಷದಿಂದ 30 ಲಕ್ಷ ರೂಪಾಯಿವರೆಗೆ ತೆರಿಗೆ ಹಾಗೂ ದಂಡ ವಿಧಿಸಲಾಗಿದೆ ಎಂದು ಆರೋಪಿಸಿದರು.

ಈ ಹೇಳಿಕೆಗೆ ಧ್ವನಿಗೂಡಿಸಿದ ಶಾಸಕ ಸುರೇಶ್ ಕುಮಾರ್, ಇದು ಆಸ್ತಿ ತೆರಿಗೆ ಭಯೋತ್ಪಾದನೆ ಎಂದು ಆಕ್ರೋಶ ವ್ಯಕ್ತಪಡಿಸಿ, ಕ್ರಮವನ್ನು ಹಿಂಪಡೆಯುವಂತೆ ಆಗ್ರಹಿಸಿದರು.

ಬಿಜೆಪಿ ಶಾಸಕರ ಆರೋಪಗಳಿಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ನಾವು ಡ್ರೋನ್ ಸರ್ವೇ ಆಧರಿಸಿ ಯಾವುದೇ ನೋಟಿಸ್ ನೀಡುತ್ತಿಲ್ಲ. ಆದರೆ ಡ್ರೋನ್ ಮೂಲಕ ಮನೆಗಳ ಸರ್ವೆ ಕಾರ್ಯ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.

ಮೊದಲು ಸೆಲ್ಫ್ ಅಸೆಸ್ಮೆಂಟ್ ಸ್ಕೀಂ ತಂದವನು ನಾನು. ಒನ್ ಟೈಮ್ ಸೆಟ್ಲ್‌ಮೆಂಟ್ ಸ್ಕೀಂ ಕೂಡ ನೀಡುತ್ತಿದ್ದೇವೆ. ಯಾರಿಗಾದರೂ ಸಮಸ್ಯೆ ಇದ್ದರೆ ಅರ್ಜಿ ಸಲ್ಲಿಸಲಿ, ಪರಿಶೀಲಿಸಿ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾಗೆ ₹131 ಕೋಟಿ ಬಹುಮಾನ ಘೋಷಿಸಿದ BCCI

0

ಮುಂಬೈ: 2026ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಭಾರತೀಯ ಕ್ರಿಕೆಟ್ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ₹131 ಕೋಟಿ ನಗದು ಬಹುಮಾನ ಘೋಷಿಸಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ 2024ರಲ್ಲಿ ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದಾಗ ಬಿಸಿಸಿಐ ₹125 ಕೋಟಿ ನಗದು ಬಹುಮಾನ ಘೋಷಿಸಿತ್ತು. ಇದೀಗ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಅಹಮದಾಬಾದ್‌ನಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ ಹಿನ್ನೆಲೆಯಲ್ಲಿ ಮಂಡಳಿ ಇನ್ನೂ ಹೆಚ್ಚಿನ ಮೊತ್ತದ ಬಹುಮಾನವನ್ನು ಪ್ರಕಟಿಸಿದೆ.

2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಈ ಮೂಲಕ ಭಾರತ ತಂಡ ಸತತ ಎರಡನೇ ಬಾರಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಉಳಿಸಿಕೊಂಡ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಇದಕ್ಕಿಂತಲೂ ಹೆಚ್ಚಾಗಿ, ಐಸಿಸಿ ಪುರುಷರ ಟಿ20 ವಿಶ್ವಕಪ್ ಅನ್ನು ಮೂರು ಬಾರಿ ಗೆದ್ದ ಮೊದಲ ತಂಡ ಎಂಬ ದಾಖಲೆಯನ್ನೂ ಭಾರತ ತನ್ನದಾಗಿಸಿಕೊಂಡಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಇರಾನ್ ಹಡಗುಗಳನ್ನು ವಶಪಡಿಸಿಕೊಳ್ಳುವುದಕ್ಕಿಂತ ಮುಳುಗಿಸುವುದೇ ಮಜಾ: ಟ್ರಂಪ್

0

ವಾಷಿಂಗ್ಟನ್: ಇರಾನ್ ಹಡಗುಗಳನ್ನು ವಶಪಡಿಸಿಕೊಂಡು ಬಳಸುವುದಕ್ಕಿಂತ ಅವುಗಳನ್ನು ಮುಳುಗಿಸುವುದೇ ಹೆಚ್ಚು ಮಜಾ ನೀಡುತ್ತದೆ ಎಂದು ಅಮೆರಿಕ ಸೇನೆಯ ಅಧಿಕಾರಿಗಳು ಹೇಳಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಡೋರಲ್‌ನಲ್ಲಿ ನಡೆದ ನ್ಯಾಷನಲ್ ರಿಪಬ್ಲಿಕನ್ ಸಭೆಯಲ್ಲಿ ಮಾತನಾಡಿದ ಟ್ರಂಪ್, ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ‘ಆಪರೇಷನ್ ಎಪಿಕ್ ಫ್ಯೂರಿ’ ಕಾರ್ಯಾಚರಣೆಯಲ್ಲಿ ಇರಾನ್ ನೌಕಾಪಡೆಗೆ ಭಾರಿ ಹೊಡೆತ ಬಿದ್ದಿದೆ ಎಂದು ಹೇಳಿದರು.

ಅಮೆರಿಕ ನೌಕಾಪಡೆಯು ಕೇವಲ ಮೂರುವರೆ ದಿನಗಳಲ್ಲಿ ಇರಾನ್ ನೌಕಾಪಡೆಯ 46 ಹಡಗುಗಳನ್ನು ಮುಳುಗಿಸಿದೆ ಎಂದು ಅವರು ಮಾಹಿತಿ ಹಂಚಿಕೊಂಡರು.

ಈ ವೇಳೆ ಸೇನೆಯ ಅಧಿಕಾರಿಗಳೊಂದಿಗೆ ನಡೆದ ಸಂಭಾಷಣೆಯನ್ನೂ ಟ್ರಂಪ್ ವಿವರಿಸಿದರು. ಇರಾನ್ ಹಡಗುಗಳು ಉತ್ತಮ ಗುಣಮಟ್ಟದವು. ಅವುಗಳನ್ನು ವಶಪಡಿಸಿಕೊಂಡು ಬಳಸಬಹುದಿತ್ತು. ಏಕೆ ಮುಳುಗಿಸಿದ್ದೀರಿ ಎಂದು ನಾನು ಕೇಳಿದೆ ಎಂದು ಟ್ರಂಪ್ ಹೇಳಿದರು.

ಅದಕ್ಕೆ ಸೈನಿಕರು, ಅವುಗಳನ್ನು ಮುಳುಗಿಸುವುದೇ ಹೆಚ್ಚು ಮಜಾ ಕೊಡುತ್ತದೆ ಎಂದು ಉತ್ತರಿಸಿದ್ದಾರೆ ಎಂದು ಟ್ರಂಪ್ ತಿಳಿಸಿದ್ದಾರೆ. ಈ ಹೇಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ.

ಬೇರೆ ವಿಚಾರಗಳ ಬಗ್ಗೆ ವಿಚಿತ್ರವಾಗಿ ದನಿ ಎತ್ತುವ ಬಿಜೆಪಿ ಸಂಸದರು ಅನಿಲ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಮಾತನಾಡಲಿ: ಡಿ.ಕೆ. ಶಿವಕುಮಾರ್

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನದಂದೆ ಗ್ಯಾಸ್ ಸಿಲಿಂಡರ್ ಬೆಲೆಯನ್ನ ಕೇಂದ್ರ ಸರ್ಕಾರ 60 ರೂಪಾಯಿ ಏರಿಕೆ ಮಾಡಿದೆ. ಬಿಜೆಪಿ ಸಂಸದರುಗಳು ಈ ಬೆಲೆ ಏರಿಕೆ ಬಗ್ಗೆ ಮಾತನಾಡಲಿ. ಎಲ್ಲಾದಕ್ಕೂ ಬಹಳ ವಿಚಿತ್ರವಾಗಿ ದನಿ ಎತ್ತುತ್ತಾರೆ. ಇದರ ಬಗ್ಗೆಯೂ ಮಾತನಾಡಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.

ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಕೇಳಿದಾಗ, “ಚರ್ಚೆ ನಡೆಸಲು ಕೇಂದ್ರ ಸರ್ಕಾರಕ್ಕೆ ಏಕೆ ಭಯ. ಇದರಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ. ಸಂಸತ್ ಅಧಿವೇಶನದಲ್ಲಿ ಈ ವಿಚಾರವನ್ನ ಕೇಂದ್ರ ಸರ್ಕಾರ ಚರ್ಚೆ ಮಾಡಬೇಕು. ಈ ವಿಚಾರ ಚರ್ಚೆ ನಡೆಸಲು ಇವತ್ತಿನ ತನಕ ಅವಕಾಶ ನೀಡುತ್ತಿಲ್ಲ. ಆದ ಕಾರಣಕ್ಕೆ ಇಂಡಿಯಾ ಒಕ್ಕೂಟದ ಪ್ರತಿನಿಧಿಗಳು ಪ್ರತಿಭಟನೆ ಮಾಡುತ್ತಿದ್ದಾರೆ” ಎಂದರು.

“ಹೋಟೆಲ್ ಹಾಗೂ ಇತರೇ ಉದ್ದಿಮೆಗಳು ಇದರಿಂದ ತೊಂದರೆಗೆ ಒಳಗಾಗಿವೆ. ಇದರ ಬಗ್ಗೆ ನಾವು ದನಿ ಎತ್ತಬೇಕಿರುವುದು ನಮ್ಮ ಕರ್ತವ್ಯ. ಕೋಟ್ಯಂತರ ಮಹಿಳೆಯರ ಮೇಲೆ ಇದು ಪರಿಣಾಮ ಬೀರಿದೆ. ಯುದ್ದದ ಪರಿಣಾಮವಾಗಿ ಸೌದಿ ಸೇರಿದಂತೆ ಕೊಲ್ಲಿ ರಾಷ್ಟ್ರಗಳ ಭಾರತೀಯ ಉದ್ಯಮಿಗಳು, ಕೆಲಸಗಾರರ ಮೇಲೆ ಪರಿಣಾಮ ಬೀರಿದೆ” ಎಂದರು.

“ದೇವೇಗೌಡರು ಮೇಕೆದಾಟು, ಎತ್ತಿನಹೊಳೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಮಾತನಾಡುವಂತೆ ಹೇಳಲಿ. ಈ ವಯಸ್ಸಿನಲ್ಲಿ ಅವರ ಮೇಲೆ ವಾಗ್ದಾಳಿ ಮಾಡುವುದು ಸರಿಯಲ್ಲ. ನನಗೆ ಇಷ್ಟವೂ ಇಲ್ಲ. ಈ ವಯಸ್ಸಿನಲ್ಲಿ ಮನಸ್ಸು ನೋಯಿಸುವುದು ಬೇಡ ಎಂದುಕೊಂಡಿರುವೆ. ಅವರೇ ಇವುಗಳಿಗೆ ಪರಿಹಾರ ಸೂಚಿಸಲಿ. ಅದೇ ರೀತಿ ಅವರ ಪಕ್ಷದ ಸದಸ್ಯರುಗಳಿಗೆ ವಿಧಾನಸಭೆಯಲ್ಲಿ ಮಾತನಾಡಲು ಹೇಳಲಿ. ಆಗ ನಾನು ನಮ್ಮ ಕಾಲದಲ್ಲಿ ಏನೇನು ಆಗಿದೆ ಎಂದು ಹೇಳುತ್ತೇನೆ” ಎಂದರು.

ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರೈಸಿರುವ ಬಗ್ಗೆ ಕೇಳಿದಾಗ, “ಶಾಸಕರಿಗೆ ಹಾಗೂ ಬೆಂಗಳೂರಿನಲ್ಲಿರುವ ಎಐಸಿಸಿ ಕಾರ್ಯದರ್ಶಿಗಳಿಗೆ, ಸಂಸದರಿಗೆ ಔತಣಕೂಟ ಏರ್ಪಡಿಸಲಾಗಿದೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರವಹಿಸಿಕೊಂಡ ದಿನದಿಂದ ಇಲ್ಲಿಯವರೆಗಿನ ಪ್ರಯಾಣವನ್ನ ಪ್ರತ್ಯೇಕ ಮಾಧ್ಯಮಗೋಷ್ಟಿ ನಡೆಸಿ ವಿವರಿಸುತ್ತೇನೆ” ಎಂದರು.

ಬೀದರ್ ಗೃಹಲಕ್ಷ್ಮಿ ಯೋಜನೆ ವಿವಾದ: ಸತ್ತ ಮಹಿಳೆಯರ ಖಾತೆಗೆ ಕೋಟಿ ಕೋಟಿ ಹಣ ಜಮೆ

0

ಬೀದರ್: ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಬೀದರ್‌ನಲ್ಲಿ ತಾಂತ್ರಿಕ ಹಾಗೂ ನಿರ್ವಹಣಾ ತಪ್ಪುಗಳಿಂದ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಬಡಪಾಯಿ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂ. ನೀಡುವ ಯೋಜನೆಯಲ್ಲಿ, ಮೃತ 5327 ಮಹಿಳೆಯರ ಖಾತೆಗೆ ಸುಮಾರು 12 ಕೋಟಿ ರೂ. ಹಣ ಹಂಚಲಾಗಿದೆ.

ಯೋಜನೆಯ ನಿಷ್ಪಕ್ಷಪಾತ ವಿತರಣೆಗೆ ತಾಂತ್ರಿಕ ಸಮಸ್ಯೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ. ಈ ಹಣವು ಸರಿಯಾಗಿ ಫಲಾನುಭವಿಗಳಿಗೆ ಹಂಚಲಾಗದೇ, ಸತ್ತವರ ಖಾತೆಗೆ ಹೋಗಿದ್ದುದು ಬಹಿರಂಗವಾಗಿದೆ. ಸರಕಾರ ಈಗ ಈ ಹಣವನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳುತ್ತಿದೆ.

ಅಂಗನವಾಡಿ ಕಾರ್ಯಕರ್ತೆಯರಿಂದ ಸತ್ತ ಮಹಿಳೆಯರ ವಿವರಗಳನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ನಮೂದಿಸಲು ಸೂಚಿಸಲಾಗಿದೆ. ಜೊತೆಗೆ, ಈಗಾಗಲೇ ಜಮೆಯಾದ ಹಣವನ್ನು ಬ್ಯಾಂಕ್‌ಗಳಿಗೆ ಪಾವತಿಸುವಂತೆ ನಿರ್ದೇಶನ ನೀಡಲಾಗಿದೆ. ಗೃಹಲಕ್ಷ್ಮಿ ಯೋಜನೆ ನಿಗಮವು, ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

ಬೆಂಗಳೂರು ಹೋಟೆಲ್ ಉದ್ಯಮದಲ್ಲಿ ಎಲ್‌ಪಿಜಿ ಕೊರತೆ ಆತಂಕ: ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಮಧ್ಯ ಪ್ರವೇಶ!

ಬೆಂಗಳೂರು: ನಗರದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹೋಟೆಲ್ ಮತ್ತು ಆಹಾರ ಸೇವಾ ಕ್ಷೇತ್ರದಲ್ಲಿ ಆತಂಕ ವ್ಯಕ್ತವಾಗಿದೆ. ಈ ಸಮಸ್ಯೆಯ ಹಿನ್ನೆಲೆಯಲ್ಲಿ ನಗರದ ಹಲವು ಹೋಟೆಲ್‌ಗಳು ಮುಚ್ಚುವ ಅಪಾಯವಿದೆ ಎಂದು ಉದ್ಯಮಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ಮನವಿ ಸಲ್ಲಿಸಿದ್ದು, ಭಾಜಪಾ ಸಂಸದ ತೇಜಸ್ವಿ ಸೂರ್ಯ ಮತ್ತು ಕೇಂದ್ರ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಪ್ರತ್ಯೇಕವಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಪತ್ರದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮವು ದಿನನಿತ್ಯದ ಅಡುಗೆ ಕಾರ್ಯಗಳಿಗೆ ಬಹುಪಾಲು ವಾಣಿಜ್ಯ ಎಲ್‌ಪಿಜಿ ಮೇಲೆಯೇ ಅವಲಂಬಿತವಾಗಿದೆ ಎಂದು ಗಮನಸೋಪಿಸಿದ್ದಾರೆ. ಪಿಎನ್‌ಜಿ ಅಥವಾ ವಿದ್ಯುತ್ ಆಧಾರಿತ ಅಡುಗೆ ವ್ಯವಸ್ಥೆಗಳು ಇನ್ನೂ ವ್ಯಾಪಕವಾಗಿ ಲಭ್ಯವಿಲ್ಲದ ಕಾರಣ, ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಉದ್ಯಮ, ಉದ್ಯೋಗ ಮತ್ತು ಗ್ರಾಹಕರ ಸೇವೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಸಚಿವೆ ಶೋಭಾ ಕರಂದ್ಲಾಜೆ ಕೂಡ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಗಮನಕ್ಕೆ ಈ ಸಮಸ್ಯೆಯನ್ನು ತಂದಿದ್ದಾರೆ. ಅವರು ಬೆಂಗಳೂರಿನ ಹೋಟೆಲ್ ಅಸೋಸಿಯೇಷನ್ ನೀಡಿದ ಮನವಿ ಪತ್ರವನ್ನು ಸಹ ಪೂರೈಸಿದ್ದು, ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇಲ್ಲದಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.

ಲಾಡ್ಜ್‌ಗೆ ಕರೆಸಿ ಹಣ-ಚಿನ್ನ ದೋಚುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್: ಬೆಳಗಾವಿಯಲ್ಲಿ ಮಹಿಳೆ ಬಂಧನ

0

ಬೆಳಗಾವಿ: ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮೂಲಕ ಮೋಸ ಮಾಡುತ್ತಿದ್ದ ಮಹಿಳೆಯನ್ನು ಬೆಳಗಾವಿಯ ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ. ಮೋಸಕ್ಕೊಳಗಾದ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಮಹಿಳೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ನಿವಾಸಿ ದೀಪಾ ಅವಟಗಿ (33). ಫ್ಯಾಶನ್ ಡಿಸೈನರ್ ಆಗಿರುವ ಆಕೆ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಮೂಲಕ ಶ್ರೀಮಂತ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಿ, ಬಳಿಕ ಅವರನ್ನು ಲಾಡ್ಜ್‌ಗೆ ಕರೆಸಿ ಹಣ ಮತ್ತು ಅಮೂಲ್ಯ ವಸ್ತುಗಳನ್ನು ದೋಚುತ್ತಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸರ ಮಾಹಿತಿ ಪ್ರಕಾರ, ದೀಪಾ ಮೊದಲು ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಮಾಡಿಕೊಂಡು ನಂತರ ಮೊಬೈಲ್ ಮೂಲಕ ಸಂಪರ್ಕ ಬೆಳೆಸುತ್ತಿದ್ದಳು. ಆಕೆಯನ್ನು ನಂಬಿ ಲಾಡ್ಜ್‌ಗೆ ಬಂದ ವ್ಯಕ್ತಿಗಳೊಂದಿಗೆ ಸಲುಗೆಯಿಂದ ವರ್ತಿಸಿ, ಅವರನ್ನು ಸ್ನಾನಕ್ಕೆ ಕಳುಹಿಸುವುದು ಆಕೆಯ ತಂತ್ರವಾಗಿತ್ತು. ಇದೇ ವೇಳೆ ಅವರ ಬಳಿಯಿದ್ದ ಹಣ, ಚಿನ್ನ, ಬ್ಯಾಗ್ ಹಾಗೂ ಕೆಲ ಸಂದರ್ಭಗಳಲ್ಲಿ ಕಾರುಗಳನ್ನೂ ಕೊಂಡೊಯ್ದು ಪರಾರಿಯಾಗುತ್ತಿದ್ದಳು.

ಈ ಪ್ರಕರಣದಲ್ಲಿ ಆಕೆಗೆ ಸಹಾಯ ಮಾಡುತ್ತಿದ್ದ ಶಿವಾನಂದ ಮಠಪತಿ ಎಂಬಾತ ಪರಾರಿಯಾಗಿದ್ದು, ಅವನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶ್ರೀಮಂತ ವ್ಯಕ್ತಿಗಳ ಮಾಹಿತಿ ಒದಗಿಸುವಲ್ಲಿ ಅವನು ಪ್ರಮುಖ ಪಾತ್ರವಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿವಾನಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಿವಾಸಿ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿಯಿಂದ ಸುಮಾರು 32 ಲಕ್ಷ 86 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಒಂದು ಫಾರ್ಚೂನರ್ ಕಾರು, ಒಂದು ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು, 11 ಮೊಬೈಲ್ ಫೋನ್‌ಗಳು, ಒಂದು ಟ್ಯಾಬ್, ಒಂದು ಡೊಂಗಲ್, 3 ಕಾರಿನ ಕೀಗಳು ಹಾಗೂ 14 ಸಾವಿರ ರೂ. ನಗದು ಸೇರಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಗಿಳಿಶಾಸ್ತ್ರ ನಂಬಿ 35 ಲಕ್ಷ ಮೌಲ್ಯದ ಚಿನ್ನ ಕಳೆದುಕೊಂಡ ಐಟಿ ಅಧಿಕಾರಿ!

0

ಬೆಂಗಳೂರು: ಟ್ರಾನ್ಸ್‌ಫರ್ ಆಗಲು ಗಿಳಿಶಾಸ್ತ್ರದ ಸಹಾಯ ಪಡೆಯಲು ಮುಂದಾದ ಐಟಿ ಅಧಿಕಾರಿಯೊಬ್ಬರಿಗೆ ಪಂಗನಾಮ ಹಾಕಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಹಲವು ವರ್ಷಗಳಿಂದ ಬೆಂಗಳೂರಿನ ಐಟಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ರಸ್ತೆಬದಿಯಲ್ಲಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಭಾರತಿನಗರದ ಶ್ರೀ ಸರ್ಕಲ್ ಬಳಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್, “ನಿಮಗೆ ಶಾಸ್ತ್ರ ಹೇಳ್ತೀನಿ, ನಿಮಗೆ ಒಳ್ಳೆಯದು ಆಗುತ್ತದೆ” ಎಂದು ವಿಶ್ವಾಸ ಮೂಡಿಸಿದ್ದ ಎಂದು ತಿಳಿದುಬಂದಿದೆ.

ಮುಖ ನೋಡಿ ಜಾತಕ ಹಾಗೂ ಭವಿಷ್ಯ ಹೇಳುತ್ತೇನೆ ಎಂದು ಹೇಳಿದ ಶೇಖರ್, ಜೀವನ ಸುಧಾರಣೆಗಾಗಿ ವಿಶೇಷ ಪೂಜೆ ಮಾಡಿಸಬೇಕು ಎಂದು ಸಲಹೆ ನೀಡಿದ್ದಾನೆ. ಅದರಂತೆ ಪೂಜೆ ಮಾಡಲು ಐಟಿ ಅಧಿಕಾರಿಯಿಂದ ಸುಮಾರು 50 ಸಾವಿರ ರೂಪಾಯಿ ಹಣ ಪಡೆದು ಪೂಜೆ ಕೂಡ ಮಾಡಿಸಿದ್ದಾನೆ ಎನ್ನಲಾಗಿದೆ.

ನಂತರ ಪದೇ ಪದೇ ಕರೆ ಮಾಡಿ, ವರ್ಗಾವಣೆಯ ವಿಚಾರವಾಗಿ ಮತ್ತಷ್ಟು ದೊಡ್ಡ ಪೂಜೆ ಮಾಡಬೇಕು ಎಂದು ಹೇಳಿ, ಮನೆಯಲ್ಲಿರುವ ಚಿನ್ನಾಭರಣ ತರಬೇಕು ಎಂದು ಮನವೊಲಿಸಿದ್ದಾನೆ.

ಗಿಳಿಶಾಸ್ತ್ರದವನ ಮಾತನ್ನು ನಂಬಿದ ಐಟಿ ಅಧಿಕಾರಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 194 ಗ್ರಾಂ ಚಿನ್ನಾಭರಣ ಹಾಗೂ 1 ಕೆಜಿ 300 ಗ್ರಾಂ ಬೆಳ್ಳಿಯನ್ನು ಶೇಖರ್‌ಗೆ ನೀಡಿದ್ದಾರೆ.

ಒಂದು ದಿನದಲ್ಲಿ ಪೂಜೆ ಮುಗಿಸಿ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದ ಶೇಖರ್, ಬಳಿಕ “ಪೂಜೆ ಇನ್ನೂ ಮುಗಿದಿಲ್ಲ, ನಾಳೆ ಅಥವಾ ನಾಡಿದ್ದು ಕೊಡುತ್ತೇನೆ” ಎಂದು ಕಾಲಹರಣ ಮಾಡುತ್ತಿದ್ದನು.

ಆದರೆ ನಂತರ ಭಾರತಿನಗರದ ಶ್ರೀ ಸರ್ಕಲ್ ಬಳಿ ಹೋಗಿ ನೋಡಿದಾಗ ಗಿಳಿಯೂ ಇಲ್ಲ, ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಕೂಡ ಕಾಣಿಸದಿರುವುದು ಗಮನಕ್ಕೆ ಬಂದಿದೆ. ಆಗ ತಾನು ಮೋಸಹೋಗಿರುವುದು ತಿಳಿದುಬಂದ ಐಟಿ ಅಧಿಕಾರಿ ಭಾರತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಭಾರತಿನಗರ ಪೊಲೀಸರು ಆರೋಪಿಯಾದ ಶೇಖರ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಆಲ್ಕೋಹಾಲ್ ಜೊತೆ ಈ ಆಹಾರ ತಿಂದರೆ ಅಪಾಯ ಗ್ಯಾರಂಟಿ! ಯಾಕೆ ಗೊತ್ತಾ..?

0

ಇಂದಿನ ವೇಗದ ಜೀವನಶೈಲಿಯಲ್ಲಿ ಹಲವರಿಗಾಗಿ ಮದ್ಯಪಾನ ಒಂದು ಸಾಮಾನ್ಯ ಅಭ್ಯಾಸವಾಗುತ್ತಿದೆ. ಕೆಲವರು ಒತ್ತಡ ಕಡಿಮೆ ಮಾಡಲು, ಮತ್ತಿಬ್ಬರು ಸ್ನೇಹಿತರ ಜೊತೆ ಖುಷಿಯನ್ನು ಹಂಚಿಕೊಳ್ಳಲು ಆಲ್ಕೋಹಾಲ್‌  ಸೇವಿಸುತ್ತಾರೆ. ಮದ್ಯಪಾನ ಮಾಡುವ ಸಮಯದಲ್ಲಿ ಹಲವರು ಸೈಡ್ ಡಿಷ್ ಆಗಿ ಉಪ್ಪಿನಕಾಯಿ, ಕಬಾಬ್, ಕುರುಕುಲು ತಿಂಡಿ ಅಥವಾ ಖಾರ ತಿನಿಸುಗಳನ್ನು ತಿನ್ನುವ ಅಭ್ಯಾಸ ಹೊಂದಿದ್ದಾರೆ.

ಆದರೆ ಮದ್ಯ ಸೇವಿಸುವಾಗ ಕೆಲವು ಆಹಾರಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ಮದ್ಯದ ಜೊತೆ ಈ ಕೆಳಗಿನ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸುವುದು ಉತ್ತಮ.

ಬ್ರೆಡ್‌ ಆಧಾರಿತ ಆಹಾರ

ಬಿಯರ್ ಕುಡಿಯುವ ಸಮಯದಲ್ಲಿ ಸ್ಯಾಂಡ್‌ವಿಚ್‌, ಬರ್ಗರ್‌ ಮುಂತಾದ ಬ್ರೆಡ್‌ ಆಧಾರಿತ ಆಹಾರಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಬಿಯರ್ ಮತ್ತು ಬ್ರೆಡ್ ಎರಡರಲ್ಲೂ ‘ಯೀಸ್ಟ್’ ಇರುವುದರಿಂದ, ಇವು ಒಟ್ಟಿಗೆ ಹೊಟ್ಟೆಗೆ ಹೋದಾಗ ಉಬ್ಬರ ಹಾಗೂ ಗ್ಯಾಸ್ ಸಮಸ್ಯೆ ಉಂಟಾಗಬಹುದು. ಇದು ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚುವರಿ ಒತ್ತಡ ಉಂಟುಮಾಡುತ್ತದೆ. ಆದ್ದರಿಂದ ಈ ಸಂದರ್ಭಗಳಲ್ಲಿ ಬೇಯಿಸಿದ ತರಕಾರಿಗಳು ಅಥವಾ ತರಕಾರಿ ಸಲಾಡ್ ಸೇವಿಸುವುದು ಉತ್ತಮ.

ಚಾಕೊಲೇಟ್

ಚಾಕೊಲೇಟ್ ನಲ್ಲಿ ಕೆಫೀನ್ ಮತ್ತು ಕೋಕೋ ಇರುವುದರಿಂದ ಆಮ್ಲೀಯತೆ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನು ಮದ್ಯದೊಂದಿಗೆ ಸೇವಿಸಿದರೆ ಗ್ಯಾಸ್, ಆಮ್ಲೀಯತೆ ಹಾಗೂ ಆಸಿಡ್ ರಿಫ್ಲಕ್ಸ್ ಸಮಸ್ಯೆಗಳು ಹೆಚ್ಚಾಗಬಹುದು. ಕೆಲವೊಮ್ಮೆ ಎದೆಯುರಿಯೂ ಉಂಟಾಗಬಹುದು.

ಕಾಳುಗಳು

ಕಡಲೆ, ಬಟಾಣಿ ಮುಂತಾದ ಕಾಳುಗಳು ಫೈಬರ್‌ ಹೆಚ್ಚು ಹೊಂದಿರುತ್ತವೆ. ಇವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಈ ಆಹಾರಗಳೊಂದಿಗೆ ಮದ್ಯ ಸೇವಿಸಿದರೆ ಜೀರ್ಣಕ್ರಿಯೆ ನಿಧಾನವಾಗಿ ನಡೆಯುತ್ತದೆ. ಇದರಿಂದ ಹೊಟ್ಟೆ ನೋವು ಮತ್ತು ಅಜೀರ್ಣ ಸಮಸ್ಯೆಗಳು ಉಂಟಾಗಬಹುದು.

ಕರಿದ ತಿಂಡಿಗಳು

ಚಿಪ್ಸ್‌,ಕರಿದ ತಿಂಡಿಗಳು ಡೀಪ್‌ ಫ್ರೈಡ್‌ ಆಹಾರಗಳನ್ನು ಮದ್ಯದ ಜೊತೆ ತಿನ್ನುವುದು ಸಾಮಾನ್ಯ. ಆದರೆ ಈ ಆಹಾರಗಳಲ್ಲಿ ಹೆಚ್ಚಿನ ಉಪ್ಪು ಇರುವುದರಿಂದ ದೇಹದಿಂದ ನೀರು ಕಡಿಮೆಯಾಗುತ್ತದೆ. ಮದ್ಯವೂ ದೇಹವನ್ನು ನಿರ್ಜಲೀಕರಣಗೊಳಿಸುವುದರಿಂದ ಎರಡೂ ಸೇರಿ ದೇಹದಲ್ಲಿ ನೀರಿನ ಕೊರತೆ ಉಂಟುಮಾಡಬಹುದು. ಇದರಿಂದ ಮರುದಿನ ತಲೆನೋವು ಮತ್ತು ಆಯಾಸ ಹೆಚ್ಚಾಗಬಹುದು.

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣು ಹಣ್ಣುಗಳಲ್ಲಿ ಆಮ್ಲೀಯತೆ ಹೆಚ್ಚಾಗಿರುತ್ತದೆ. ಮದ್ಯದೊಂದಿಗೆ ಇವುಗಳನ್ನು ಸೇವಿಸಿದರೆ ಹೊಟ್ಟೆಯಲ್ಲಿ ಉರಿ ಹಾಗೂ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಮದ್ಯಪಾನದ ಸಮಯದಲ್ಲಿ ಸಿಟ್ರಸ್ ಹಣ್ಣುಗಳನ್ನು ಸೇವಿಸುವುದನ್ನು ತಪ್ಪಿಸುವುದು ಉತ್ತಮ.

ಒಟ್ಟಿನಲ್ಲಿ, ಮದ್ಯಪಾನ ಮಾಡುವ ಸಂದರ್ಭದಲ್ಲೂ ಸರಿಯಾದ ಆಹಾರ ಆಯ್ಕೆ ಮಾಡುವುದು ಆರೋಗ್ಯ ಕಾಪಾಡಿಕೊಳ್ಳಲು ಅತ್ಯಂತ ಮುಖ್ಯವಾಗಿದೆ.

ಕಸ್ಟಮರ್ ಮನೆಯಲ್ಲಿ ಕಳ್ಳತನ ಮಾಡಿದ ಕ್ಯಾಬ್ ಚಾಲಕ ಅರೆಸ್ಟ್: 25 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ.!

0

ಬೆಂಗಳೂರು: ಕಸ್ಟಮರ್ ಮನೆಯಲ್ಲಿ ಕಳವು ಮಾಡಿದ ಆರೋಪದ ಮೇಲೆ ಕ್ಯಾಬ್ ಚಾಲಕನನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಬಂಧಿತನಿಂದ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಫೆಬ್ರವರಿ 11ರಂದು ಸೈಯದ್ ಸಲ್ಮಾನ್ ಮತ್ತು ಅವರ ಪತ್ನಿ ಶಾಪಿಂಗ್ ಸಲುವಾಗಿ ಮುಂಬೈಗೆ ತೆರಳಲು ಹೆಬ್ಬಾಳದಿಂದ ಯಶವಂತಪುರಕ್ಕೆ ಕ್ಯಾಬ್ ಬುಕ್ ಮಾಡಿಕೊಂಡಿದ್ದರು. ಈ ವೇಳೆ ಕ್ಯಾಬ್ ಚಾಲಕ ಅಬ್ದುಲ್ ರೆಹಮಾನ್, ದಂಪತಿಗಳ ಮಾತುಕತೆಯನ್ನು ಆಲಿಸಿದ್ದಾನೆ.

ಸೈಯದ್ ಸಲ್ಮಾನ್ ಅವರ ಪತ್ನಿ, “ಮನೆಯಲ್ಲಿ ಚಿನ್ನಾಭರಣ ಇದೆ, ವಾರ್ಡ್‌ರೋಬ್ ಲಾಕ್ ಮಾಡಿದ್ದೀಯಾ?” ಎಂದು ಕೇಳಿದ ಮಾತು ಕ್ಯಾಬ್ ಚಾಲಕನ ಕಿವಿಗೆ ಬಿದ್ದಿದೆ. ಅಲ್ಲದೆ ಅವರು ಮೂರು ದಿನಗಳ ಕಾಲ ಮನೆಗೆ ವಾಪಸ್ ಬರುವುದಿಲ್ಲ ಎಂಬುದನ್ನು ಕೂಡ ಚಾಲಕ ತಿಳಿದುಕೊಂಡಿದ್ದಾನೆ.

ಯಶವಂತಪುರದಲ್ಲಿ ದಂಪತಿಯನ್ನು ಇಳಿಸಿದ ನಂತರ ಅಬ್ದುಲ್ ರೆಹಮಾನ್ ಮತ್ತೆ ಹೆಬ್ಬಾಳಕ್ಕೆ ಬಂದು, ಸೈಯದ್ ಅವರ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ್ದಾನೆ. ಈ ಕುರಿತು ದೂರು ದಾಖಲಾದ ಬಳಿಕ ಪೊಲೀಸರು ಸಿಸಿ ಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಕ್ಯಾಬ್ ಚಾಲಕ ಮನೆ ಬಳಿ ಬಂದಿರುವುದು ಪತ್ತೆಯಾಗಿದೆ.

ನಂತರ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಇದೇ ರೀತಿಯ ಪ್ರಕರಣದಲ್ಲಿ ಈ ಹಿಂದೆ ಕೂಡ ಬಂಧಿತನು ಜಾಮೀನಿನ ಮೇಲೆ ಹೊರಬಂದು ಮತ್ತೆ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!