Home Blog Page 7

ಭಾರಿ ಗಾತ್ರದ ವಿಂಡ್‌ಮಿಲ್ ವಾಹನಗಳಿಗೆ ಕರವೇ ತಡೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ–ಮುಳಗುಂದ–ಲಕ್ಷ್ಮೇಶ್ವರ ರಸ್ತೆಯಲ್ಲಿ ಸಂಚರಿಸುತ್ತಿರುವ ಭಾರಿ ಗಾತ್ರದ ವಿಂಡ್‌ಮಿಲ್ (ವಿಂಡ್ ಪವರ್) ಉಪಕರಣ ಸಾಗಣೆ ವಾಹನಗಳಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಗದಗ ಜಿಲ್ಲಾ ಘಟಕದ ಕಾರ್ಯಕರ್ತರು ಮಂಗಳವಾರ ನಗರದ ಅಂಜುಮನ್ ಕಾಲೇಜು ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ಭಾರಿ ಗಾತ್ರದ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಈ ಕುರಿತು ಹಲವು ಬಾರಿ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಹನಮಂತಪ್ಪ ಎಚ್. ಅಬ್ಬಿಗೇರಿ, ಸೆರೆಂಟಿಕಾ ಕಂಪನಿಯ ವಿಂಡ್‌ಮಿಲ್ ಉಪಕರಣ ಸಾಗಣೆ ವಾಹನಗಳು ಹಗಲು-ರಾತ್ರಿ ನಿರಂತರವಾಗಿ ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಇದರಿಂದ ರಸ್ತೆಗಳು ಹಾಳಾಗುವುದರ ಜೊತೆಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ನಿತ್ಯ ಸಂಚಾರ ದಟ್ಟಣೆಯಲ್ಲಿ ಸಿಲುಕುವಂತಾಗಿದೆ ಎಂದು ದೂರಿದರು.

ಜಿಲ್ಲಾಸ್ಪತ್ರೆ, ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಅಂಜುಮನ್ ಕಾಲೇಜು ಸೇರಿದಂತೆ ಪ್ರಮುಖ ಸಂಸ್ಥೆಗಳು ಇದೇ ರಸ್ತೆಯಲ್ಲಿದ್ದು, ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯೂ ಇದಾಗಿದೆ. ಪ್ರತಿಭಟನೆ ನಡೆದ ದಿನವೇ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಆಂಬುಲೆನ್ಸ್‌ನಲ್ಲಿದ್ದ ರೋಗಿ ತೀವ್ರ ತೊಂದರೆ ಅನುಭವಿಸಿದ ಘಟನೆ ಕಣ್ಣಾರೆ ಕಂಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಭಾರಿ ಗಾತ್ರದ ವಾಹನಗಳಿಗೆ ಪ್ರತ್ಯೇಕ ರಸ್ತೆ ವ್ಯವಸ್ಥೆ ಕಲ್ಪಿಸಿ, ಸಾರ್ವಜನಿಕ ರಸ್ತೆಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಬೇಕು. ಅಲ್ಲದೆ ಎಚ್.ಪಿ. ಪೆಟ್ರೋಲ್ ಬಂಕ್ ಎದುರಿನ ರಸ್ತೆ ಡಿವೈಡರ್ ತೆರವುಗೊಳಿಸಿ ಹಾನಿಗೊಳಿಸಿರುವ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ ಗದಗ–ಮುಳಗುಂದ–ಲಕ್ಷ್ಮೇಶ್ವರ ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ಹನಮಂತಪ್ಪ ಎಚ್. ಅಬ್ಬಿಗೇರಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮಾರುತಿ ಈಳಗೇರ, ಕುಮಾರ ರೇವಣ್ಣವರ, ಸಮೀರ್ ಬಾಳಿಕಾಯಿ, ವಿನಾಯಕ ಬಡಿ, ದಾವಲಸಾಬ ತಹಶೀಲ್ದಾರ, ಸಿರಾಜ್ ಹೊಸಮನಿ, ಯೂನಸ್ ಗದಗ, ಸುಲೇಮಾನ ಮಂಜಲಾಪುರ, ತೌಶೀಫ್ ಢಾಲಾಯತ್, ಕೃಷ್ಣಾ ಲಮಾಣಿ ಸೇರಿದಂತೆ ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕಾರ್ಮಿಕರ ಪಿಎಫ್‌ಗೂ ಮೋದಿ ಸರ್ಕಾರ ಕತ್ತರಿ: ಕೃಷ್ಣಗೌಡ ಎಚ್. ಪಾಟೀಲ ಆರೋಪ

0

ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರದ ಮೋದಿ ಸರ್ಕಾರ ಜಾರಿಗೆ ತರಲು ಮುಂದಾಗಿರುವ ‘ಹೊಸ ಭವಿಷ್ಯ ನಿಧಿ (ಪಿಎಫ್) ಯೋಜನೆ–2026’ ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಾರ್ಮಿಕರ ನಿವೃತ್ತಿ ಭದ್ರತೆಗೆ ಕತ್ತರಿ ಹಾಕಲಾಗುತ್ತಿದೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾರ್ಮಿಕರ ಕಡ್ಡಾಯ ಪಿಎಫ್ ಕೊಡುಗೆಯನ್ನು ₹1,800ಕ್ಕೆ ಸೀಮಿತಗೊಳಿಸುವ ಮೂಲಕ ಸುಮಾರು 8 ಕೋಟಿ ಕಾರ್ಮಿಕರ ನಿವೃತ್ತಿ ನಿಧಿಗೆ ಶೇ.50ಕ್ಕೂ ಹೆಚ್ಚು ಹೊಡೆತ ಬೀಳಲಿದೆ ಎಂದು ಆರೋಪಿಸಿದ್ದಾರೆ.

2014ರಿಂದ ಕನಿಷ್ಠ ವೇತನ ಮಿತಿಯನ್ನು ₹15 ಸಾವಿರದಲ್ಲೇ ಉಳಿಸಿಕೊಂಡಿರುವ ಕೇಂದ್ರ ಸರ್ಕಾರ, ಹಣದುಬ್ಬರ ಹೆಚ್ಚಾಗಿದ್ದರೂ ಅದನ್ನು ₹21 ಸಾವಿರಕ್ಕೆ ಏರಿಸಿಲ್ಲ. ಹೆಚ್ಚುವರಿ ಪಿಎಫ್ ಉಳಿತಾಯದ ಮೇಲಿನ ತೆರಿಗೆ ವಿನಾಯಿತಿಯನ್ನೂ ಕಡಿತಗೊಳಿಸಿ ಕಾರ್ಮಿಕರ ಮೇಲೆ ಹೆಚ್ಚುವರಿ ಹೊರೆ ಹಾಕಲಾಗಿದೆ ಎಂದು ಟೀಕಿಸಿದ್ದಾರೆ.

ಕೇಂದ್ರ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳ ತೆರಿಗೆಯನ್ನು ಕಡಿಮೆ ಮಾಡಿ, ಲಕ್ಷಾಂತರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ. ಆದರೆ ದೇಶದ ಬೆನ್ನೆಲುಬಾಗಿರುವ ಕಾರ್ಮಿಕರ ಭವಿಷ್ಯ ನಿಧಿಯನ್ನೇ ಕಡಿತಗೊಳಿಸುತ್ತಿದೆ. ಕೈಗೆ ಹೆಚ್ಚು ಸಂಬಳ ಸಿಗುತ್ತದೆ ಎಂಬುದು ಕೇವಲ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಎಂದು ಆರೋಪಿಸಿದ್ದಾರೆ.

ದೀರ್ಘಾವಧಿಯಲ್ಲಿ ಪಿಎಫ್ ಕೊಡುಗೆ ಕಡಿಮೆಯಾಗುವುದರಿಂದ ನಿವೃತ್ತಿ ನಂತರ ಕಾರ್ಮಿಕರಿಗೆ ದೊಡ್ಡ ಪ್ರಮಾಣದ ಆರ್ಥಿಕ ನಷ್ಟವಾಗಲಿದೆ. ಶೇ.8.25ರಷ್ಟು ಸುರಕ್ಷಿತ ಬಡ್ಡಿಯ ಲಾಭವೂ ಕಡಿಮೆಯಾಗಲಿದ್ದು, ಒಬ್ಬ ಉದ್ಯೋಗಿಗೆ ₹15ರಿಂದ ₹20 ಲಕ್ಷದವರೆಗೆ ನಷ್ಟವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇನ್ನೂ 30.91 ಲಕ್ಷ ಕಾರ್ಮಿಕರ ₹9,330 ಕೋಟಿ ಪಿಎಫ್ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿರುವ ಅವರು, ಬಡ ಕಾರ್ಮಿಕರ ದುಡಿಮೆಯ ಹಣವನ್ನು ತಡೆಹಿಡಿಯುವ ಮೂಲಕ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ದೂರಿದ್ದಾರೆ.

ಮುಂಬೈ ಇಪಿಎಫ್‌ಒದಲ್ಲಿ ₹18.97 ಕೋಟಿ, ಬೆಂಗಳೂರಿನ ಇಪಿಎಫ್‌ಒ ಸಿಬ್ಬಂದಿ ಸಹಕಾರ ಸಂಘದಲ್ಲಿ ₹70 ಕೋಟಿ ಹಾಗೂ ಉತ್ತರ ಪ್ರದೇಶದ ಯುಪಿಪಿಸಿಎಲ್ ಹಗರಣ ಸೇರಿದಂತೆ ಹಲವು ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ಕಾರ್ಮಿಕರ ಉಳಿತಾಯದ ಹಣದ ಭದ್ರತೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಡಿಜಿಟಲ್ ವ್ಯವಸ್ಥೆಯ ಹೆಸರಿನಲ್ಲಿ ಕಾರ್ಮಿಕರ ಹಣದ ಮೇಲೆ ನಿಯಂತ್ರಣ ಸಾಧಿಸಲು ಸರ್ಕಾರ ಮುಂದಾಗಿದ್ದು, ಭ್ರಷ್ಟಾಚಾರ ತಡೆಯುವ ಕನಿಷ್ಠ ಸುರಕ್ಷತಾ ಕ್ರಮಗಳನ್ನೂ ಕೈಗೊಂಡಿಲ್ಲ. ಇಂತಹ ಧೋರಣೆಯಿಂದ ಕಾರ್ಮಿಕರ ಭವಿಷ್ಯಕ್ಕೆ ದೊಡ್ಡ ಅಪಾಯ ಎದುರಾಗಿದೆ ಎಂದು ಕೃಷ್ಣಗೌಡ ಎಚ್. ಪಾಟೀಲ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

“ಕೈಗೆ ಹೆಚ್ಚು ಸಂಬಳ ಸಿಗುತ್ತದೆ ಎಂಬುದು ಬಿಜೆಪಿ ಸರ್ಕಾರದ ಕಣ್ಣೊರೆಸುವ ತಂತ್ರ. ವಾಸ್ತವದಲ್ಲಿ ಕಾರ್ಮಿಕರ ಭವಿಷ್ಯ ನಿಧಿಯನ್ನೇ ಕಡಿತಗೊಳಿಸಿ ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭ ಮಾಡಿಕೊಡಲಾಗುತ್ತಿದೆ.”

– ಕೃಷ್ಣಗೌಡ ಎಚ್. ಪಾಟೀಲ, ಅಧ್ಯಕ್ಷರು, ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ

ಯಾದಗಿರಿಯಲ್ಲಿ ಅಕ್ರಮ ಅಕ್ಕಿ ದಂಧೆ ಬಯಲು! ಮಾಜಿ ಜಿ.ಪಂ ಸದಸ್ಯನ ಮಗನ ವಿರುಧ್ದ FIR ದಾಖಲು

ಯಾದಗಿರಿ: ಬಡವರಿಗಾಗಿ ಸರ್ಕಾರ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ದಂಧೆ ನಡೆಸುತ್ತಿದ್ದ ಪ್ರಕರಣ ಯಾದಗಿರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಶಹಾಪುರ ತಾಲೂಕಿನ ಉಕ್ಕಿನಾಳ್ ತಾಂಡಾ ಬಳಿ ಇರುವ ಅಕ್ರಮ ಗೋಡೌನ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 82 ಕ್ವಿಂಟಾಲ್ ಸರ್ಕಾರಿ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.

ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ್ ಬಿರಾದಾರ್ ನೇತೃತ್ವದ ತಂಡ, ಪೊಲೀಸರ ಸಹಕಾರದೊಂದಿಗೆ ಸೋಮವಾರ ರಾತ್ರಿ ದಾಳಿ ನಡೆಸಿದೆ. ಈ ವೇಳೆ ಗೋಡೌನ್‌ನಲ್ಲಿ 202 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಟ್ಟಿದ್ದ 82 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದೆ.

ಜಪ್ತಿ ಮಾಡಿದ ಅಕ್ಕಿಯನ್ನು ಲಾರಿಗೆ ತುಂಬಿಸಿ ಸಾಗಿಸಲು ಮುಂದಾದಾಗ ಸ್ಥಳಕ್ಕೆ ಬಂದ ಕೆಲವರು ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. “ಲಾರಿ ಸಮೇತ ಅಕ್ಕಿಯನ್ನು ಸುಟ್ಟು ಹಾಕುತ್ತೇವೆ” ಎಂದು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಲಾರಿಯನ್ನು ಗೋಗಿ ಪೊಲೀಸ್ ಠಾಣೆ ಆವರಣದಲ್ಲಿ ರಾತ್ರಿ ನಿಲ್ಲಿಸಿದ್ದಾರೆ.

ಬಳಿಕ ಮಂಗಳವಾರ ಬೆಳಗ್ಗೆ ಲಾರಿಯನ್ನು ಆಹಾರ ಇಲಾಖೆಯ ಮುಖ್ಯ ಗೋಡೌನ್‌ಗೆ ಕೊಂಡೊಯ್ದು ಅಕ್ಕಿಯನ್ನು ಅನ್‌ಲೋಡ್ ಮಾಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕಿಶನ್ ರಾಠೋಡ್ ಅವರ ಪುತ್ರ ಲೋಹಿತ್ ರಾಠೋಡ್ ವಿರುದ್ಧ ಗೋಗಿ ಪೊಲೀಸ್ ಠಾಣೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

ಪಡಿತರ ಚೀಟಿದಾರರಿಂದ ಕಡಿಮೆ ಬೆಲೆಗೆ ಅಕ್ಕಿ ಖರೀದಿಸಿ, ಅದನ್ನು ಅಕ್ರಮವಾಗಿ ಸಂಗ್ರಹಿಸಿ ನೆರೆ ರಾಜ್ಯಗಳಿಗೆ ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಅಕ್ಕಿಯನ್ನು ರೈಸ್ ಮಿಲ್‌ಗಳಲ್ಲಿ ಪಾಲಿಶ್ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬಡವರಿಗಾಗಿ ಮೀಸಲಾದ ಪಡಿತರ ಅಕ್ಕಿ ಅಕ್ರಮ ದಂಧೆಗೆ ಬಳಕೆಯಾಗುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಅಕ್ರಮ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಖಜಾನೆ ಇಲಾಖೆಯ ಉಪನಿರ್ದೇಶಕರಾಗಿ ಟಿ.ಎಂ. ದೇವರಮನಿ ಅಧಿಕಾರ ಸ್ವೀಕಾರ

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರದ ಆದೇಶದಂತೆ ಗದಗ ಜಿಲ್ಲಾ ಖಜಾನೆ ಇಲಾಖೆಯ ಉಪನಿರ್ದೇಶಕರಾಗಿ ಟಿ.ಎಂ. ದೇವರಮನಿ ಅಧಿಕಾರ ಸ್ವೀಕರಿಸಿದರು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಖಜಾನೆ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೂಗುಚ್ಛ ನೀಡಿ, ಶಾಲು ಹೊದಿಸಿ ನೂತನ ಉಪನಿರ್ದೇಶಕರನ್ನು ಆತ್ಮೀಯವಾಗಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಟಿ.ಎಂ. ದೇವರಮನಿ, ಸರ್ಕಾರದ ನಿಯಮಾನುಸಾರ ಪಾರದರ್ಶಕ, ಜವಾಬ್ದಾರಿಯುತ ಹಾಗೂ ಜನಸ್ನೇಹಿ ಆಡಳಿತಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಹಕಾರದೊಂದಿಗೆ ಖಜಾನೆ ಇಲಾಖೆಯ ಕಾರ್ಯನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ಸುಗಮವಾಗಿ ನಡೆಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೊಗೇರಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ವಿಭೂತಿ, ಶಿವಕುಮಾರ ಕುರಿ, ಎಂ.ಎಚ್. ಕಂಬಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ನೂತನ ಉಪನಿರ್ದೇಶಕರಿಗೆ ಶುಭ ಹಾರೈಸಿದರು.

ಆತ್ಮೀಯ ವಾತಾವರಣದಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ದೇವರಮನಿ ಅವರ ಆಡಳಿತಾವಧಿ ಯಶಸ್ವಿಯಾಗಲೆಂದು ಹಾರೈಸಿದರು.

ಬರ ಘೋಷಣೆ, ಬೆಳೆ ವಿಮೆ ಬಿಡುಗಡೆಗೆ ರೈತರ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: “ಗದಗ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. 2024-25ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆ ವಿಮೆ ಹಣವನ್ನು ರೈತರ ಖಾತೆಗೆ ಕೂಡಲೇ ಜಮೆ ಮಾಡಬೇಕು. ನಾವು ಪುಕ್ಕಟೆಯಾಗಿ ಏನನ್ನೂ ಕೇಳುತ್ತಿಲ್ಲ, ನಾವು ಕಟ್ಟಿದ ವಿಮೆಯ ಹಣವನ್ನೇ ಕೇಳುತ್ತಿದ್ದೇವೆ. ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ” ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಿ.ಆರ್. ನಾರಾಯಣರೆಡ್ಡಿ ಬಣ) ಆಗ್ರಹಿಸಿತು.

46ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಮಂಗಳವಾರ ಗದಗ ಜಿಲ್ಲೆಯ ತಿಮ್ಮಾಪೂರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ, 1980ರ ನವೆಂಬರ್ 21ರಂದು ನವಲಗುಂದ-ನರಗುಂದ ರೈತ ಹೋರಾಟ ಹಾಗೂ ಹಾವೇರಿ ಭಾಗದಲ್ಲಿ ಸರ್ಕಾರದ ಗೋಲಿಬಾರ್‌ಗೆ ಬಲಿಯಾದ ರೈತರನ್ನು ಸ್ಮರಿಸಿದರು. ಹುತಾತ್ಮ ರೈತರ ತ್ಯಾಗವನ್ನು ನೆನೆಯುವ ದಿನವಾಗಿರುವುದರ ಜೊತೆಗೆ ಇದನ್ನು “ಕರಾಳ ದಿನ”ವಾಗಿಯೂ ಆಚರಿಸಲಾಗುತ್ತಿದೆ ಎಂದರು.

ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಗದಗ ಜಿಲ್ಲೆಯಾದ್ಯಂತ ಬೆಳೆಗಳು ಹಾನಿಗೊಳಗಾಗಿವೆ. ಆದರೂ ಸರ್ಕಾರ ಇನ್ನೂ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿಲ್ಲ ಎಂದು ಅವರು ಆರೋಪಿಸಿದರು.

ರೈತರು ಕಟ್ಟಿರುವ 2024-25ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆ ವಿಮೆ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ರೈತ ವಿರೋಧಿ ನೀತಿಗಳನ್ನು ಕೈಬಿಟ್ಟು ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಶರಣಪ್ಪ ಜೋಗಿನ, ಬಾಳಪ್ಪ ಗಂಗರಾತ್ರಿ, ಶಿವಪುತ್ರಪ್ಪ ತಿಮ್ಮಾಪೂರ, ಫಕೀರಪ್ಪ ಜೋಗಿನ, ರಾಮಣ್ಣ ಖಂಡ್ರೆ, ಉದಯ ಗಂಗರಾತ್ರಿ, ಹನುಮಪ್ಪ ಹಚ್ಚಪ್ಪನವರ, ಮಲ್ಲಪ್ಪ ಮಡಿವಾಳರ, ಭೀಮನಗೌಡ ಪಾಟೀಲ, ರಾಮಣ್ಣ ಕಂಕರಿ, ಶರಣಪ್ಪ ಹಡಪದ, ಪ್ರಕಾಶ ಬಸಾಪೂರ, ಹೊನ್ನಕೆರಪ್ಪ ಬಿಚಗಲ್ಲ ಸೇರಿದಂತೆ ಗ್ರಾಮಸ್ಥರು ಹಾಗೂ ರೈತರು ಉಪಸ್ಥಿತರಿದ್ದು, ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

“ನಾವು ಪುಕ್ಕಟೆಯಾಗಿ ಏನನ್ನೂ ಕೇಳುತ್ತಿಲ್ಲ. ನಾವು ಕಟ್ಟಿದ ಬೆಳೆ ವಿಮೆಯ ಹಣವನ್ನೇ ಕೇಳುತ್ತಿದ್ದೇವೆ. ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ.”

– ರೈತ ಮುಖಂಡರು

ಇಪಿಎಫ್ ಹಣ ಸುರಕ್ಷಿತ, ಕಾಂಗ್ರೆಸ್ ಆರೋಪ ಸುಳ್ಳು: ಸಂತೋಷ ಅಕ್ಕಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಸರ್ಕಾರ ನೌಕರರ ಭವಿಷ್ಯ ನಿಧಿ (ಇಪಿಎಫ್) ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂಬ ಕಾಂಗ್ರೆಸ್ ಆರೋಪಗಳು ಸಂಪೂರ್ಣವಾಗಿ ಸುಳ್ಳು ಹಾಗೂ ಹತಾಶ ರಾಜಕಾರಣದ ಭಾಗ ಎಂದು ಬಿಜೆಪಿ ಯುವ ಮೋರ್ಚಾ ಗದಗ ಜಿಲ್ಲಾ ಅಧ್ಯಕ್ಷ ಸಂತೋಷ ಅಕ್ಕಿ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಉತ್ತರ ಪ್ರದೇಶ ವಿದ್ಯುತ್ ನಿಗಮದ ಭವಿಷ್ಯ ನಿಧಿ ಹೂಡಿಕೆ ಪ್ರಕರಣವನ್ನು ಕೇಂದ್ರ ಸರ್ಕಾರದ ನಿರ್ಧಾರವೆಂದು ಬಿಂಬಿಸುವುದು ತಪ್ಪು. ಸ್ಥಳೀಯ ಮಟ್ಟದಲ್ಲಿ ನಡೆದ ನಿಯಮ ಉಲ್ಲಂಘನೆಯಿಂದ ಆ ಪ್ರಕರಣ ಸಂಭವಿಸಿದ್ದು, ಪ್ರಕರಣ ಬೆಳಕಿಗೆ ಬಂದ ತಕ್ಷಣ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

ದಿವಾಳಿತನ ಪ್ರಕ್ರಿಯೆಯ ಮೂಲಕ ಆಸ್ತಿಗಳನ್ನು ಮರುಪಡೆಯುವ ಕಾರ್ಯ ನಡೆದಿದ್ದು, ನೌಕರರ ವೈಯಕ್ತಿಕ ಭವಿಷ್ಯ ನಿಧಿ ಖಾತೆಗಳಿಗೆ ಯಾವುದೇ ಹಾನಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇಪಿಎಫ್ ಮೇಲಿನ ಬಡ್ಡಿದರವನ್ನು ಶೇ. 8.25ಕ್ಕೆ ಕಾಯ್ದುಕೊಂಡಿರುವುದು ಮೋದಿ ಸರ್ಕಾರದ ಕಾರ್ಮಿಕ ಪರ ನಿಲುವಿಗೆ ಸಾಕ್ಷಿಯಾಗಿದೆ. 34 ಕೋಟಿಗೂ ಅಧಿಕ ಸದಸ್ಯರ ಖಾತೆಗಳಿಗೆ ಕೇಂದ್ರೀಕೃತ ತಂತ್ರಜ್ಞಾನ ವ್ಯವಸ್ಥೆಯ ಮೂಲಕ ಬಡ್ಡಿ ಜಮೆ ಮಾಡುವ ವ್ಯವಸ್ಥೆ ಜಾರಿಗೊಂಡಿದ್ದು, ಹಣ ವಾಪಸ್ ಪಡೆಯುವ ಪ್ರಕ್ರಿಯೆಯನ್ನೂ ಸರಳಗೊಳಿಸಲಾಗಿದೆ ಎಂದು ಹೇಳಿದರು.

ಭವಿಷ್ಯ ನಿಧಿ ಹಣವನ್ನು ಸುರಕ್ಷಿತ ಸರ್ಕಾರಿ ಬಾಂಡ್‌ಗಳು ಹಾಗೂ ಉನ್ನತ ದರ್ಜೆಯ ಸಂಸ್ಥೆಗಳಲ್ಲಷ್ಟೇ ಹೂಡಿಕೆ ಮಾಡುವ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ವೈದ್ಯಕೀಯ, ಶಿಕ್ಷಣ ಹಾಗೂ ಮದುವೆ ಸೇರಿದಂತೆ ತುರ್ತು ಅಗತ್ಯಗಳಿಗೆ ಸ್ವಯಂಚಾಲಿತ ಹಣ ಬಿಡುಗಡೆ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಮುಚ್ಚಿಹಾಕುವ ಉದ್ದೇಶದಿಂದ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ಆರೋಪಿಸಿದ ಅವರು, ಗದಗ ಜಿಲ್ಲೆಯ ಕಾರ್ಮಿಕರು ಹಾಗೂ ಯುವಜನರು ಇಂತಹ ಪ್ರಚಾರವನ್ನು ನಂಬುವುದಿಲ್ಲ ಎಂದು ಹೇಳಿದರು.

“ಇಪಿಎಫ್ ಹಣ ಸುರಕ್ಷಿತವಾಗಿದೆ. ಕಾರ್ಮಿಕರ ಹಣಕ್ಕೆ ಮೋದಿ ಸರ್ಕಾರವೇ ಭದ್ರತಾ ಕವಚವಾಗಿದೆ. ಕಾಂಗ್ರೆಸ್ ಸತ್ಯ ಮರೆಮಾಚಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ.”

– ಸಂತೋಷ ಅಕ್ಕಿ, ಬಿಜೆಪಿ ಯುವ ಮೋರ್ಚಾ ಗದಗ ಜಿಲ್ಲಾಧ್ಯಕ್ಷ

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ: ಪೂಜಾರ್ ಲೋಕಪ್ಪ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಕ್ಷಣ ನಿಲ್ಲಿಸಿ, ಮದ್ಯದ ದಾಸ್ಯದಿಂದ ಕುಟುಂಬಗಳನ್ನು ರಕ್ಷಿಸುವಂತೆ ಕರ್ನಾಟಕ ಮಾದಿಗ ಮಹಾಸಭೆ ತಾಲೂಕು ಘಟಕದ ಅಧ್ಯಕ್ಷ ಪೂಜಾರ್ ಲೋಕಪ್ಪ ಆಗ್ರಹಿಸಿದರು.

ಪಟ್ಟಣದ ಸಮೀಪದ ಚಿಂತ್ರಪಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಯುವಕರು, ಮಹಿಳೆಯರು ಹಾಗೂ ವೃದ್ಧರು ಮದ್ಯದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಆರ್ಥಿಕ ಹಾಗೂ ಸಾಮಾಜಿಕ ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದು ಹೇಳಿದರು.

ಪರಿಶಿಷ್ಟ ಜಾತಿಯ, ವಿಶೇಷವಾಗಿ ಮಾದಿಗ ಸಮುದಾಯದ ಜನರನ್ನು ಅಕ್ರಮ ಮದ್ಯ ಮಾರಾಟದ ಜಾಲದಲ್ಲಿ ಸಿಲುಕಿಸಿ ಪೊಲೀಸ್ ಹಾಗೂ ನ್ಯಾಯಾಲಯದ ಪ್ರಕರಣಗಳಿಗೆ ಗುರಿಪಡಿಸಲಾಗುತ್ತಿದೆ ಎಂದು ಆರೋಪಿಸಿದರು.

ತಾಲೂಕು ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ದೊಡ್ಡಬಸಪ್ಪ ಮಾತನಾಡಿ, ಪರಿಶಿಷ್ಟ ಜಾತಿ ಪ್ರವರ್ಗ–1ರ ಮಾದಿಗ ಸಮುದಾಯದ ಜಾತಿ ಪ್ರಮಾಣಪತ್ರ ವಿತರಣೆಯಲ್ಲಿ ಎಫಿಡವಿಟ್ ಕಡ್ಡಾಯಗೊಳಿಸಿರುವುದು ಹಾಗೂ ನಕಲಿ ಜಾತಿ ಪ್ರಮಾಣಪತ್ರಗಳ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಅನರ್ಹರು ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬೇಕು ಎಂದು ಕರೆ ನೀಡಿದರು.

ಕರ್ನಾಟಕ ಮಾದಿಗ ಮಹಾಸಭೆಯ ಜಿಲ್ಲಾ ಸಂಚಾಲಕ ಮಾದೂರು ಮಹೇಶ್ವರ ಮಾತನಾಡಿ, ಮಾದಿಗ ಸಮುದಾಯದ ಕಾಲೊನಿಗಳಿಗೆ ಮೂಲಸೌಕರ್ಯ ಒದಗಿಸುವುದು ಹಾಗೂ ಎಸ್ಸಿಪಿ-ಟಿಎಸ್ಪಿ ಅನುದಾನವನ್ನು ಪರಿಶಿಷ್ಟ ಜಾತಿ ಕಾಲೊನಿಗಳ ಅಭಿವೃದ್ಧಿಗೇ ಬಳಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಹಿರಿಯ ಸದಸ್ಯ ಹಾಗೂ ನಿವೃತ್ತ ಶಿಕ್ಷಕ ಕಡಲೆಬಾಳ್ ಮಾಯಪ್ಪ ಮಾತನಾಡಿ, ತಾಲೂಕು ಕೇಂದ್ರದಲ್ಲಿ ಡಾ. ಬಾಬು ಜಗಜೀವನರಾಂ ಅವರ ವೃತ್ತ ನಿರ್ಮಾಣದ ಬೇಡಿಕೆಯನ್ನು ಶಾಸಕರ ಗಮನಕ್ಕೆ ತರಲಾಗುವುದು ಎಂದರು.

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದುರುಗಪ್ಪ ಹಾಗೂ ಹೆಚ್. ಪ್ರಕಾಶ್ ಬೆಣ್ಣಿಕಲ್ಲು ಮಾತನಾಡಿ, ಶೀಘ್ರದಲ್ಲೇ ಕರ್ನಾಟಕ ಮಾದಿಗ ಮಹಾಸಭೆ ತಾಲೂಕು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಯೋಜಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಸಂಘದ ಖಜಾಂಚಿ ಎ. ಮಹೇಶ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಹರಿಜನ, ಕಾರ್ಯಕಾರಿ ಸಮಿತಿ ಸದಸ್ಯರಾದ ಅರ್ಜುನ್, ಹೆಚ್. ದೊಡ್ಡಬಸಪ್ಪ ದಶಮಾಪುರ, ಮಂಜುನಾಥ ಬ್ಯಾಲಾಳು, ಬಡಗಟ್ಟಿ ಬುಳ್ಳಪ್ಪ, ಹುಲಗತ್ತಿ ಚಿಲುಗೋಡು ಬಸವರಾಜ್, ಪೂಜಾರ್ ಅಂಜಿನಪ್ಪ, ಮೋರಿಗೇರಿ ಗುಳ್ಳಪ್ಪ, ಪೂಜಾರ್ ಮಲ್ಲಪ್ಪ, ಪೂಜಾರ್ ಹನುಮಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ತಾಲೂಕಿನ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಕ್ಷಣ ನಿಲ್ಲಿಸಿ, ಮದ್ಯದ ದಾಸ್ಯದಿಂದ ಕುಟುಂಬಗಳನ್ನು ರಕ್ಷಿಸಬೇಕು.”

– ಪೂಜಾರ್ ಲೋಕಪ್ಪ, ಅಧ್ಯಕ್ಷ, ಕರ್ನಾಟಕ ಮಾದಿಗ ಮಹಾಸಭೆ ತಾಲೂಕು ಘಟಕ

ಜಮ್ಮು-ಕಾಶ್ಮೀರದಲ್ಲಿ ಮಳೆ ಅಬ್ಬರ: ಪ್ರವಾಹ, ಭೂಕುಸಿತಕ್ಕೆ 23 ಮಂದಿ ಬಲಿ!

0

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಈವರೆಗೆ 23 ಮಂದಿ ಮೃತಪಟ್ಟಿದ್ದಾರೆ.

ಭಾರೀ ಮಳೆ ಹಾಗೂ ಭೂಕುಸಿತದಿಂದ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಪೂಂಚ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿ ನಾಲ್ವರು ಮಹಿಳೆಯರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಜಮ್ಮು-ಕಿಶ್ತ್ವಾರ್ ರಾಷ್ಟ್ರೀಯ ಹೆದ್ದಾರಿಯ ರಗ್ಗಿ ನಲ್ಲಾ ಬಳಿ ಗುಡ್ಡ ಕುಸಿದ ಪರಿಣಾಮ ಹಲವು ವಾಹನಗಳು ಸಿಲುಕಿಕೊಂಡಿವೆ. ಮತ್ತೊಂದು ಘಟನೆಯಲ್ಲಿ ಬಸ್ ಮೇಲೆ ಬೃಹತ್ ಬಂಡೆ ಬಿದ್ದಿದ್ದು, ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಇದೇ ವೇಳೆ ದಕ್ಷಿಣ ಸಿಕ್ಕಿಂನ ಸಮರ್ದುಂಗ್ ಬಳಿ ಇರುವ ಜಲವಿದ್ಯುತ್ ಯೋಜನೆಯ ಸುರಂಗ ಮಾರ್ಗದಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ಸುರಂಗದೊಳಗೆ ವಿಷಕಾರಿ ಅನಿಲ ಸೋರಿಕೆಯಾದ ಪರಿಣಾಮ ಕನಿಷ್ಠ 10 ಕಾರ್ಮಿಕರು ಮೃತಪಟ್ಟಿದ್ದಾರೆ. ಇನ್ನೂ 17 ಮಂದಿ ಸುರಂಗದೊಳಗೆ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ನಾಮ್ಚಿ ಜಿಲ್ಲೆಯ ತೀಸ್ತಾ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.

ಸಿಕ್ಕಿಂ ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರೊಂದಿಗೆ ಮಾತನಾಡಿ ಮಾಹಿತಿ ಪಡೆದಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಲಾಗಿದೆ.

ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಏರಿಕೆ: ಯಡೂರು–ಕಲ್ಲೋಳ ಸಂಪರ್ಕ ಸೇತುವೆ ಜಲಾವೃತ!

ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು–ಕಲ್ಲೋಳ ಗ್ರಾಮಗಳನ್ನು ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಪ್ರಸ್ತುತ ನದಿಯಲ್ಲಿ ಸುಮಾರು 60 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.

ನೀರಿನ ಮಟ್ಟ ಹೆಚ್ಚಾದ ಪರಿಣಾಮ ಯಡೂರು–ಕಲ್ಲೋಳ ಸಂಪರ್ಕ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಎರಡು ಗ್ರಾಮಗಳ ನಡುವಿನ ಸಂಚಾರ ಸ್ಥಗಿತಗೊಂಡಿದೆ. ಸ್ಥಳೀಯರು ಹಾಗೂ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಅವಲಂಬಿಸುವಂತಾಗಿದೆ.

ಪರಿಸ್ಥಿತಿಯನ್ನು ಅಧಿಕಾರಿಗಳು ನಿರಂತರವಾಗಿ ಗಮನಿಸುತ್ತಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ಥಳೀಯರು ನದಿ ಹಾಗೂ ಜಲಾವೃತ ಪ್ರದೇಶಗಳ ಬಳಿ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

ಶಿವಾಜಿನಗರದಲ್ಲಿ GBA ಅಧಿಕಾರಿಗಳ ವಿರುದ್ದ ಹಲ್ಲೆ ಪ್ರಕರಣ: 10 ಆರೋಪಿಗಳ ಬಂಧನ

ಬೆಂಗಳೂರು: ಶಿವಾಜಿನಗರದಲ್ಲಿ ಪಾದಚಾರಿ ಮಾರ್ಗಗಳ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕಿರಣ್ (34), ಬಸವರಾಜ್ (28), ರಂಜಿತ್ (19), ರಂಗಸ್ವಾಮಿ (49), ಮುಜಾಹಿದಾ ಅಹಮದ್ (39), ಕೊಟ್ರೇಶ್ (26), ಪರಶುರಾಮ್ (27), ರಘು (28), ಪಾರ್ಥೀಬನ್ (23) ಹಾಗೂ ಭರತ್ (24) ಎಂದು ಗುರುತಿಸಲಾಗಿದೆ.

ಮಂಗಳವಾರ ಬೆಳಗ್ಗೆ ಶಿವಾಜಿನಗರದಲ್ಲಿ ಜಿಬಿಎ ಅಧಿಕಾರಿಗಳು ಪಾದಚಾರಿ ಮಾರ್ಗಗಳ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸ್ಥಳೀಯ ಸಂಘಟನೆಗಳ ಕೆಲ ಸದಸ್ಯರು ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು.

ಕಾರ್ಯಾಚರಣೆಗೆ ಅಡ್ಡಿಪಡಿಸಿದ ಆರೋಪಿಗಳು, ಪಾಲಿಕೆಯ ಇಂಜಿನಿಯರ್‌ಗಳು ಹಾಗೂ ಜೆಸಿಬಿ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿರುವ ಆರೋಪವೂ ಕೇಳಿಬಂದಿದೆ. ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಕೆಲಕಾಲ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಮಾತ್ರವಲ್ಲದೆ, ಜೆಸಿಬಿ ಚಾಲಕನ ಮೇಲೆ ಪೆಪ್ಪರ್ ಸ್ಪ್ರೇ ಬಳಸಿರುವುದಾಗಿ ಆರೋಪಿಸಿ ಜಿಬಿಎ ಅಧಿಕಾರಿಗಳು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ 10 ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದಲ್ಲಿ ನ್ಯಾಯಾಲಯದ ಆದೇಶದಂತೆ ಜಿಬಿಎ ಅಧಿಕಾರಿಗಳ ನೇತೃತ್ವದಲ್ಲಿ ಪಾದಚಾರಿ ಮಾರ್ಗಗಳ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ಈ ವೇಳೆ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಆರೋಪದಡಿ ಬಂಧನ ಕ್ರಮ ಕೈಗೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದ ಹಲ್ಲೆಯ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೂ ತನಿಖೆ ಮುಂದುವರಿದಿದೆ. ಆರೋಪಿಗಳ ಹಿನ್ನೆಲೆ ಮತ್ತು ಘಟನೆಯಲ್ಲಿ ಇತರರ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.