Home Blog Page 7

ಭಾರತದಲ್ಲಿ ವಿಧ್ವಂಸಕ ಕೃತ್ಯ ಸಂಚು? ಗುಪ್ತಚರ ಮಾಹಿತಿ ಮೇರೆಗೆ ಇಬ್ಬರ ಬಂಧನ

ದಾವಣಗೆರೆ: ದೇಶದ ಭದ್ರತೆಗೆ ಸಂಬಂಧಿಸಿದ ಮಹತ್ವದ ಕಾರ್ಯಾಚರಣೆಯಲ್ಲಿ ತುಮಕೂರು ಪೊಲೀಸರು ಇಬ್ಬರು ಶಂಕಿತ ಯುವಕರನ್ನು ಬಂಧಿಸಿದ್ದು, ಪಾಕಿಸ್ತಾನ ಮೂಲದ ಉಗ್ರ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಆರೋಪ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ದಾವಣಗೆರೆಯ ಜಮೀರ್ ಖಾನ್ ಹಾಗೂ ತುಮಕೂರಿನ ಅಲ್ಲಾಭಕ್ಷಿ ಬಂಧಿತ ಆರೋಪಿಗಳು. ಗುಪ್ತಚರ ಇಲಾಖೆಯಿಂದ ಲಭಿಸಿದ ನಿರ್ದಿಷ್ಟ ಮಾಹಿತಿಯಂತೆ ಇವರು ಪಾಕಿಸ್ತಾನದಲ್ಲಿರುವ ಶಂಕಿತ ಉಗ್ರರಾದ ಶಾಬಾಸ್ ಭುಟ್ಟಿ ಮತ್ತು ರಾಣಾ ಉನೇನ್ ಜೊತೆ ಡಿಜಿಟಲ್ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

ತನಿಖಾಧಿಕಾರಿಗಳ ಪ್ರಕಾರ, ಆರೋಪಿಗಳು ವಾಟ್ಸಾಪ್, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ವಿದೇಶಿ ಸಂಪರ್ಕಗಳನ್ನು ನಿರ್ವಹಿಸುತ್ತಿದ್ದರು. ಈ ಸಂಪರ್ಕಗಳ ಮೂಲಕ ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದ ಚಟುವಟಿಕೆಗಳಿಗೆ ಬೆಂಬಲ ಜಾಲ ನಿರ್ಮಿಸಲು ಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಪ್ರಕರಣದ ತನಿಖೆಯಲ್ಲಿ ಕೆಲ ಸ್ಥಳೀಯ ಯುವಕರನ್ನು ಪ್ರಭಾವಿತಗೊಳಿಸಿ ಸಂಘಟಿತ ಜಾಲ ರೂಪಿಸುವ ಪ್ರಯತ್ನಗಳ ಸುಳಿವು ಸಿಕ್ಕಿದೆ. ಅಲ್ಲದೆ, ದೇಶದ ಪ್ರಮುಖ ನಗರಗಳಲ್ಲಿ ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುವ ಬಗ್ಗೆ ಚರ್ಚೆಗಳು ನಡೆದಿದ್ದವೆಯೇ ಎಂಬುದನ್ನೂ ತನಿಖಾ ತಂಡ ಪರಿಶೀಲಿಸುತ್ತಿದೆ.

ಬಂಧಿತರಿಂದ ವಶಪಡಿಸಿಕೊಳ್ಳಲಾದ ಮೊಬೈಲ್ ಫೋನ್‌ಗಳು, ಡಿಜಿಟಲ್ ಡೇಟಾ ಹಾಗೂ ಸಂಪರ್ಕ ವಿವರಗಳ ಆಧಾರದ ಮೇಲೆ ತನಿಖೆ ವಿಸ್ತರಿಸಲಾಗಿದೆ. ಇವರ ಸಂಪರ್ಕ ಜಾಲದಲ್ಲಿ ಇನ್ನೂ ಯಾರು ಭಾಗಿಯಾಗಿದ್ದಾರೆ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಸದ್ಯ ಇಬ್ಬರನ್ನು ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಿಸಲಾಗಿದ್ದು, ಉಗ್ರ ಸಂಪರ್ಕ, ಡಿಜಿಟಲ್ ಸಂವಹನ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅಂಶಗಳ ಮೇಲೆ ಬಹು ಆಯಾಮದ ತನಿಖೆ ಮುಂದುವರಿದಿದೆ.

ರಾಮಲಿಂಗಾ ರೆಡ್ಡಿ ರಾಜೀನಾಮೆ ಕಾಂಗ್ರೆಸ್ ಸರ್ಕಾರದ ಅಸ್ಥಿರತೆಗೆ ಸಾಕ್ಷಿ: ಟಿ.ಎ. ಶರವಣ ವಾಗ್ದಾಳಿ

ಬೆಂಗಳೂರು: ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡು ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿರುವ ಬೆಳವಣಿಗೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಅಸ್ಥಿರತೆಯನ್ನು ಬಯಲಿಗೆಳೆದಿದೆ ಎಂದು ಜೆಡಿಎಸ್ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ಟೀಕಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಸಚಿವ ಸಂಪುಟದ ಹಿರಿಯ ಸದಸ್ಯರೊಬ್ಬರು ರಾಜೀನಾಮೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸರ್ಕಾರದ ಒಳಗಿನ ಅಸಮಾಧಾನ ಮತ್ತು ಗೊಂದಲಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.

ಸಂಪುಟ ರಚನೆ ಹಾಗೂ ಖಾತೆ ಹಂಚಿಕೆಯ ಪ್ರಕ್ರಿಯೆಯನ್ನು ಗಮನಿಸಿದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಅಥವಾ ನಿಯಂತ್ರಣ ಇಲ್ಲದಿರುವುದು ಸ್ಪಷ್ಟವಾಗುತ್ತಿದೆ. ಸರ್ಕಾರದ ಕಾರ್ಯವೈಖರಿಯಲ್ಲಿ ಮುಖ್ಯಮಂತ್ರಿ ಮತ್ತು ಇತರ ಹಿರಿಯ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಗೋಚರಿಸುತ್ತಿವೆ ಎಂದು ಅವರು ಆರೋಪಿಸಿದರು.

ಇದಲ್ಲದೆ, ಮುಖ್ಯಮಂತ್ರಿ ಪರವಾಗಿ ಗುರುತಿಸಿಕೊಂಡಿರುವ ಹಲವು ನಾಯಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ದೊರೆಯದಿರುವುದನ್ನು ಉಲ್ಲೇಖಿಸಿದ ಶರವಣ, ಸರ್ಕಾರವು ಹೈಕಮಾಂಡ್ ಹಾಗೂ ಇತರ ನಾಯಕರ ಪ್ರಭಾವದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬ ಸಂದೇಶ ಸಾರ್ವಜನಿಕ ವಲಯದಲ್ಲಿ ಮೂಡಿದೆ ಎಂದು ಹೇಳಿದರು.

ರಾಜ್ಯದ ಆಡಳಿತದ ಕುರಿತು ಜನರಲ್ಲಿ ಮೂಡಿದ್ದ ನಿರೀಕ್ಷೆಗಳು ಕ್ರಮೇಣ ಕುಸಿಯುತ್ತಿದ್ದು, ರಾಮಲಿಂಗಾ ರೆಡ್ಡಿ ಮಾತ್ರವಲ್ಲದೆ ಮತ್ತೊಬ್ಬ ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ ಕೂಡ ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಪಕ್ಷದೊಳಗಿನ ಬೆಳವಣಿಗೆಗಳು ಆಂತರಿಕ ಅರಾಜಕತೆ ಮತ್ತು ಸಮನ್ವಯದ ಕೊರತೆಯನ್ನು ಪ್ರತಿಬಿಂಬಿಸುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಸರ್ಕಾರ ಆಂತರಿಕ ಭಿನ್ನಾಭಿಪ್ರಾಯಗಳ ಒತ್ತಡಕ್ಕೆ ಸಿಲುಕಿ ಸಂಕಷ್ಟ ಎದುರಿಸಬೇಕಾಗಬಹುದು ಎಂದು ಟಿ.ಎ. ಶರವಣ ಅಭಿಪ್ರಾಯಪಟ್ಟಿದ್ದಾರೆ.

ಪೊಲೀಸ್ ಕ್ವಾರ್ಟರ್ಸ್ ಜಾಗ ಮಾರಾಟ ಪ್ರಕರಣ: ಇದಕ್ಕೆ ಅವಕಾಶ ಕೊಟ್ಟರೆ ಹೈಕೋರ್ಟ್ ಕಟ್ಟಡವೂ ಸುರಕ್ಷಿತವಲ್ಲ ಎಂದ ಹೈಕೋರ್ಟ್

ಬೆಂಗಳೂರು: ನಗರದ ಮಲ್ಲೇಶ್ವರಂನಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ಜಾಗವನ್ನು ಅಕ್ರಮವಾಗಿ ಮಾರಾಟ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಗಣಿಸಲು ರಾಜ್ಯ ಹೈಕೋರ್ಟ್ ನಿರಾಕರಿಸಿದೆ.

ಈ ವೇಳೆ ಪ್ರಕರಣದ ಗಂಭೀರತೆಯನ್ನು ಉಲ್ಲೇಖಿಸಿದ ನ್ಯಾಯಾಲಯ, ಇಂತಹ ಕೃತ್ಯಗಳಿಗೆ ಅವಕಾಶ ನೀಡಿದರೆ ಮುಂದೊಂದು ದಿನ ಹೈಕೋರ್ಟ್ ಕಟ್ಟಡವೂ ಸುರಕ್ಷಿತವಾಗಿರುವುದಿಲ್ಲ ಎಂದು ಕಟುವಾಗಿ ಅಭಿಪ್ರಾಯಪಟ್ಟಿದೆ.

ಶಿವಮೊಗ್ಗದ ಶ್ರೀನಾಥ್ ನಗರಗದ್ದೆ ಎಂಬುವರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠ, “ನಿಮ್ಮ ಧೈರ್ಯವನ್ನು ಮೆಚ್ಚಬೇಕು. ಕಳೆದ 15 ವರ್ಷಗಳಿಂದ ಪೊಲೀಸ್ ಕ್ವಾರ್ಟರ್ಸ್ ಇರುವ ಜಾಗವನ್ನೇ ಮಾರಾಟ ಮಾಡಿದ್ದೀರಿ” ಎಂದು ಅರ್ಜಿದಾರರ ಪರ ವಕೀಲರಿಗೆ ತಿಳಿಸಿತು. ಜೊತೆಗೆ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 9ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಪ್ರಕರಣದ ಮೊದಲ ಆರೋಪಿ ಎಂ.ಆರ್. ಮಹಾಲಕ್ಷ್ಮಿ ಅವರಿಗೆ ವಿವಾದಿತ ಜಾಗ ಸೇರಿದ್ದು, ತಮ್ಮ ಸ್ವತ್ತೆಂದು ನಂಬಿ ಅವರು ಅದನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿಸಿದರು. ಈ ಸಂಬಂಧ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲಾಗಿದ್ದು, ಎನ್‌ಕಂಬರೆನ್ಸ್ ಪ್ರಮಾಣಪತ್ರದಲ್ಲಿಯೂ ಅವರ ಹೆಸರೇ ದಾಖಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಇದಲ್ಲದೆ, ವಿವಾದಿತ ಜಾಗ ಪೊಲೀಸ್ ಇಲಾಖೆಗೆ ಸೇರಿದೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ದಾಖಲೆಗಳನ್ನು ಪ್ರಾಸಿಕ್ಯೂಷನ್ ಸಲ್ಲಿಸಿಲ್ಲ ಎಂದು ವಕೀಲರು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಇಂತಹ ವಾದಗಳನ್ನು ಒಪ್ಪಿಕೊಂಡರೆ ಸಾರ್ವಜನಿಕ ಆಸ್ತಿಗಳ ಭದ್ರತೆ ಪ್ರಶ್ನಾರ್ಥಕವಾಗುತ್ತದೆ. ಈ ಕಾರಣಕ್ಕಾಗಿಯೇ ಹೈಕೋರ್ಟ್ ಕಟ್ಟಡವೂ ಸುರಕ್ಷಿತವಾಗಿರುವುದಿಲ್ಲ ಎಂದು ಹೇಳಿದ್ದೇನೆ” ಎಂದು ತಿಳಿಸಿತು. ಜೊತೆಗೆ, “ಹಾಗಾದರೆ ಪೊಲೀಸರೇ ಒತ್ತುವರಿದಾರರೇ?” ಎಂದು ಪ್ರಶ್ನಿಸಿತು.

ಇದೇ ವೇಳೆ ಅರ್ಜಿದಾರರ ಪರ ವಕೀಲರು, ವಿವಾದಿತ ಜಾಗಕ್ಕೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯದಲ್ಲಿ ಎರಡು ಪ್ರತ್ಯೇಕ ದಾವೆಗಳು ದಾಖಲಾಗಿದ್ದು, ಅವುಗಳಲ್ಲಿ ಒಂದರಲ್ಲಿ ಪೊಲೀಸರು ಪಕ್ಷಕಾರರಾಗಿದ್ದಾರೆ ಎಂದು ವಿವರಿಸಿದರು. ಸರ್ಕಾರವು ಜಾಗ ತನ್ನದೇ ಎಂಬುದಕ್ಕೆ ಒಂದೇ ಒಂದು ದಾಖಲೆ ಸಲ್ಲಿಸಿದರೂ ಅರ್ಜಿಯನ್ನು ಹಿಂಪಡೆಯಲು ಸಿದ್ಧ ಎಂದು ಹೇಳಿದರು.

ಇದಕ್ಕೆ ಸರ್ಕಾರದ ಪರ ವಕೀಲರು ಪ್ರತಿಕ್ರಿಯಿಸಿ, ವಿವಾದಿತ ಜಾಗವು 1930ರಿಂದಲೇ ಪೊಲೀಸ್ ಇಲಾಖೆಯ ಸ್ವಾಧೀನದಲ್ಲಿದ್ದು, ಇಲಾಖೆಗೆ ಸೇರಿದ ಆಸ್ತಿಯಾಗಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

‘ಸಿಕ್ಸರ್ ಅಂತ ಹೇಳಿದ್ದರು, ಈಗ ಹಿಟ್ ವಿಕೆಟ್ ಆಗಿದೆ’: ಡಿಕೆ ಸರ್ಕಾರಕ್ಕೆ ಸಿ.ಟಿ. ರವಿ ಟಾಂಗ್

ಚಿಕ್ಕಮಗಳೂರು: ಡಿ.ಕೆ. ಶಿವಕುಮಾರ್ ಸರ್ಕಾರದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿರುವ ಬೆಳವಣಿಗೆಯನ್ನು ಬಿಜೆಪಿ ನಾಯಕ ಸಿ.ಟಿ. ರವಿ ಗಂಭೀರ ರಾಜಕೀಯ ಬೆಳವಣಿಗೆಯೆಂದು ಬಣ್ಣಿಸಿದ್ದು, ಇದು ಕಾಂಗ್ರೆಸ್ ಸರ್ಕಾರದೊಳಗಿನ ಅಸಮಾಧಾನದ ಮೊದಲ ಲಕ್ಷಣ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೊದಲ ಸಂಪುಟ ಸಭೆಯ ಬಳಿಕ ಸರ್ಕಾರ ಭರ್ಜರಿ ಆರಂಭ ಮಾಡಿದೆ ಎಂದು ಹೇಳಲಾಗಿತ್ತು. ಆದರೆ ಈಗ ಸಂಪುಟದ ಮೊದಲ ವಿಕೆಟ್ ಬಿದ್ದಿದೆ. ಇದು ಸರ್ಕಾರದೊಳಗಿನ ಬೇಗುದಿಗೆ ಸ್ಪಷ್ಟ ಸಾಕ್ಷಿ” ಎಂದು ಟೀಕಿಸಿದರು.

ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ಕೇವಲ ಖಾತೆ ಹಂಚಿಕೆ ವಿಚಾರಕ್ಕೆ ಸೀಮಿತವಲ್ಲ. ಇದು ಸರ್ಕಾರದೊಳಗಿನ ಆಂತರಿಕ ಅಸಮಾಧಾನ ಮತ್ತು ನಾಯಕತ್ವದ ನಿರ್ಧಾರಗಳ ವಿರುದ್ಧದ ಅಸಹನೆಯನ್ನು ತೋರಿಸುತ್ತದೆ ಎಂದು ಹೇಳಿದರು.

“ಯಾರು ಯಾರಿಗೆ ಯಾವ ಭರವಸೆ ನೀಡಿದ್ದರು ಎಂಬುದು ನಮಗೆ ತಿಳಿದಿಲ್ಲ. ಆದರೆ ಹಿರಿಯ ಸಚಿವರೊಬ್ಬರು ಆತ್ಮಸಾಕ್ಷಿಯ ಹೆಸರಿನಲ್ಲಿ ರಾಜೀನಾಮೆ ನೀಡಿರುವುದು ಸಣ್ಣ ವಿಷಯವಲ್ಲ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ ಬೆಳವಣಿಗೆಗಳಿಗೆ ದಾರಿ ಮಾಡಿಕೊಡಬಹುದು” ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಸಚಿವ ಸತೀಶ್ ಜಾರಕಿಹೊಳಿ ರಾಜ್ಯದ ಆರ್ಥಿಕ ಸ್ಥಿತಿಯ ಕುರಿತು ವ್ಯಕ್ತಪಡಿಸಿರುವ ಕಳವಳವನ್ನೂ ಉಲ್ಲೇಖಿಸಿದ ಸಿ.ಟಿ. ರವಿ, ಸರ್ಕಾರದೊಳಗೆ ಎಲ್ಲವೂ ಸರಿಯಾಗಿಲ್ಲ ಎಂಬ ಸಂದೇಶ ಹೊರಬರುತ್ತಿದೆ ಎಂದು ಹೇಳಿದರು.

“ಪೂರ್ಣ ಸಚಿವ ಸಂಪುಟ ರಚನೆಯಾಗುವ ಮೊದಲೇ ಈ ರೀತಿಯ ಅಸಮಾಧಾನಗಳು ಕಾಣಿಸುತ್ತಿವೆ. ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಪೂರ್ಣಗೊಂಡ ಬಳಿಕ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗುವ ಸಾಧ್ಯತೆ ಇದೆ” ಎಂದು ಅವರು ಎಚ್ಚರಿಸಿದರು.

ರಾಜಕೀಯ ಬಣಗಳು ಯಾವುದೇ ಪಕ್ಷದಲ್ಲಿ ಇರಬಹುದು. ಆದರೆ ಅವು ಆಡಳಿತ ಮತ್ತು ರಾಜ್ಯದ ಹಿತಾಸಕ್ತಿಯನ್ನು ಮೀರಿದಾಗ ಅದರ ಪರಿಣಾಮ ಸರ್ಕಾರದ ಕಾರ್ಯಕ್ಷಮತೆಯ ಮೇಲೆ ಬೀಳುತ್ತದೆ ಎಂದು ಸಿ.ಟಿ. ರವಿ ಹೇಳಿದರು.

ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಉಚಿತ ಬಸ್ ಪಾಸ್ ಯೋಜನೆ ಜಾರಿಗೆ ಸರ್ಕಾರದಿಂದ ಅಧಿಕೃತ ಆದೇಶ

ಬೆಂಗಳೂರು: ರಾಜ್ಯದ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಹತ್ವದ ಸೌಲಭ್ಯ ಒದಗಿಸುವ ಉದ್ದೇಶದಿಂದ ಸರ್ಕಾರ ಉಚಿತ ಬಸ್ ಪಾಸ್ ಯೋಜನೆ ಜಾರಿಗೆ ಅಧಿಕೃತ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಘೋಷಿಸಲಾದ ಈ ಯೋಜನೆಗೆ ಇದೀಗ ತಾತ್ವಿಕ ಅನುಮೋದನೆ ನೀಡಲಾಗಿದೆ.

ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಈ ಯೋಜನೆಯ ಪ್ರಯೋಜನ ದೊರೆಯಲಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯೂಕೆಆರ್‌ಟಿಸಿ) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಬಸ್‌ಗಳಲ್ಲಿ ಸಂಚರಿಸುವ ರಾಜ್ಯದ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ವಿಸ್ತರಿಸಲು ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ.

ಈ ಯೋಜನೆ ಜಾರಿಗೆ ಸಂಬಂಧಿಸಿದಂತೆ ಅರ್ಹತೆ, ನೋಂದಣಿ ವಿಧಾನ, ಪಾಸ್ ವಿತರಣೆ ಹಾಗೂ ಇತರೆ ನಿಯಮಾವಳಿಗಳ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು ಎಂದು ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್. ಅವರು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದೇಶಿ ಮಹಿಳೆಗೆ ಕಿರುಕುಳ? ಹಿಮಾಚಲದಲ್ಲಿ ವೈರಲ್ ವಿಡಿಯೋ; ಆರೋಪಿಗಾಗಿ ಹುಡುಕಾಟ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ವಿದೇಶಿ ಮಹಿಳಾ ಪ್ರವಾಸಿಯೊಬ್ಬರಿಗೆ ಸಾರ್ವಜನಿಕ ಸ್ಥಳದಲ್ಲಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಸಂಬಂಧಿಸಿದ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಸಾರ್ವಜನಿಕರು ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಸಾಮಾಜಿಕ ಜಾಲತಾಣದ ‘ದಿ ಮಾಡರ್ನ್ ಹಿಮಾಚಲ’ ಎಂಬ ಪುಟದಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ವಿದೇಶಿ ಮಹಿಳೆ ತನ್ನ ಸ್ನೇಹಿತನೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ಇದೇ ವೇಳೆ ಸಮೀಪದಲ್ಲಿದ್ದ ಯುವಕನೊಬ್ಬ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ.

ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ಪ್ರವಾಸಿಗರ ಸುರಕ್ಷತೆ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮಹಿಳಾ ಪ್ರವಾಸಿಗರ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಪೊಲೀಸರನ್ನು ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಲಾಗಿದ್ದು, ವಿಡಿಯೋ ಆಧರಿಸಿ ಪರಿಶೀಲನೆ ನಡೆಸುವಂತೆ ಒತ್ತಾಯಿಸಲಾಗಿದೆ. ಸದ್ಯ ಘಟನೆಯ ನಿಖರ ಸ್ಥಳ ಮತ್ತು ವಿಡಿಯೋದಲ್ಲಿರುವ ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.

ಭಾರತಕ್ಕೆ ಆಗಮಿಸುವ ದೇಶ-ವಿದೇಶಗಳ ಪ್ರವಾಸಿಗರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಅತ್ಯಗತ್ಯವಾಗಿದ್ದು, ಇಂತಹ ಘಟನೆಗಳು ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಿಸಿಟಿವಿ ದೃಶ್ಯಾವಳಿ ಹಾಗೂ ವೈರಲ್ ವಿಡಿಯೋ ಆಧರಿಸಿ ತನಿಖೆ ಆರಂಭಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಬಿಜೆಪಿಗೆ ಅಣ್ಣಾಮಲೈ ಗುಡ್ ಬೈ: 6 ವರ್ಷಗಳ ರಾಜಕೀಯ ಪಯಣಕ್ಕೆ ಅಂತ್ಯ, ಹೊಸ ಸಂಘಟನೆ ಘೋಷಣೆಯ ಸುಳಿವು

ನವದೆಹಲಿ: ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ. ಅವರ ರಾಜೀನಾಮೆ ಪತ್ರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅಂಗೀಕರಿಸಿದ್ದು, ಈ ಮೂಲಕ ಬಿಜೆಪಿಯೊಂದಿಗಿನ ಸುಮಾರು ಆರು ವರ್ಷಗಳ ರಾಜಕೀಯ ನಂಟಿಗೆ ತೆರೆ ಬಿದ್ದಿದೆ ಎನ್ನಲಾಗಿದೆ.

ಜೂನ್ 2ರಂದು ಅಣ್ಣಾಮಲೈ ಅವರು ನಿತಿನ್ ನಬಿನ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಬಳಿಕ ಅವರು ಬಿಜೆಪಿಯಲ್ಲೇ ಮುಂದುವರಿಯಲಿದ್ದಾರೆ ಅಥವಾ ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಹರಿದಾಡಿದ್ದವು.

ಆದರೆ ರಾಜೀನಾಮೆ ಅಂಗೀಕಾರಗೊಂಡಿರುವ ಹಿನ್ನೆಲೆಯಲ್ಲಿ ಆ ಚರ್ಚೆಗಳಿಗೆ ತೆರೆ ಬಿದ್ದಂತಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಅಣ್ಣಾಮಲೈ ಅವರು ಇಂದು ಸುದ್ದಿಗೋಷ್ಠಿ ನಡೆಸಿ ತಮ್ಮ ಮುಂದಿನ ರಾಜಕೀಯ ನಡೆಯ ಕುರಿತು ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.

ಎಐಎಡಿಎಂಕೆಯನ್ನು ಮತ್ತೆ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿಸಿಕೊಂಡ ಬಳಿಕ ಪಕ್ಷದ ಉನ್ನತ ನಾಯಕತ್ವ ಅಣ್ಣಾಮಲೈ ಅವರನ್ನು ಕಡೆಗಣಿಸುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಜೊತೆಗೆ ಪಕ್ಷದ ಕೆಲವು ನಿರ್ಧಾರಗಳ ಬಗ್ಗೆ ಅವರು ಅಸಮಾಧಾನ ಹೊಂದಿದ್ದರು ಎನ್ನಲಾಗುತ್ತಿದೆ. ಈ ಹಿಂದೆ ತಮಿಳುನಾಡು ವಿಧಾನಸಭೆ ಚುನಾವಣೆಯ ಉಸ್ತುವಾರಿ ಸ್ಥಾನ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಗಳಿಗೆ ಸಹ ಅವರು ರಾಜೀನಾಮೆ ನೀಡಿದ್ದರು.

ಇದರ ನಡುವೆ ಅಣ್ಣಾಮಲೈ ಅವರು ಬಿಜೆಪಿಯಿಂದ ಹೊರಬಂದು ತಮಿಳುನಾಡಿನಲ್ಲಿ ‘ಮಕ್ಕಳ್ ಶಕ್ತಿ ಇಯಕ್ಕಂ’ (ಜನಶಕ್ತಿ ಆಂದೋಲನ) ಹೆಸರಿನ ಹೊಸ ಜನಪರ ಸಂಘಟನೆ ಅಥವಾ ಚಳವಳಿಯನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಈ ಕುರಿತು ಅವರು ಇನ್ನೂ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ.

ಇತ್ತೀಚೆಗೆ ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಗೆ ಅಣ್ಣಾಮಲೈ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು. 9ನೇ ತರಗತಿ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳ ಅಧ್ಯಯನ ಕಡ್ಡಾಯಗೊಳಿಸುವ ಪ್ರಸ್ತಾವನೆಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬೆಳವಣಿಗೆಯ ನಂತರ ಬಿಜೆಪಿ ನಾಯಕತ್ವದೊಂದಿಗೆ ಅವರ ಭಿನ್ನಾಭಿಪ್ರಾಯಗಳ ಕುರಿತು ಚರ್ಚೆಗಳು ಜೋರಾಗಿದ್ದವು.

ಇದೀಗ ಕೊಯಮತ್ತೂರಿನಲ್ಲಿ ಅಣ್ಣಾಮಲೈ ಅವರ ಭಾವಚಿತ್ರವಿರುವ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, “ಭಯವಿಲ್ಲದ ಮನಸ್ಸಿಗೆ ಮಿತಿಗಳಿಲ್ಲ” ಎಂಬ ಸಂದೇಶ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಈ ಪೋಸ್ಟರ್‌ಗಳು ಅವರ ಮುಂದಿನ ರಾಜಕೀಯ ಹೆಜ್ಜೆಯ ಸುಳಿವು ನೀಡುತ್ತಿವೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

2021ರಿಂದ 2025ರವರೆಗೆ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ, ರಾಜ್ಯದಲ್ಲಿ ಬಿಜೆಪಿಯ ಸಂಘಟನೆ ಬಲವರ್ಧನೆಗೆ ಪ್ರಮುಖ ಪಾತ್ರವಹಿಸಿದ್ದರು. ಆದರೆ ವಿಧಾನಸಭೆ ಚುನಾವಣೆಗೆ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮಾಡಿಕೊಂಡ ವಿಚಾರವೂ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗುತ್ತಿದೆ. ಚುನಾವಣಾ ಪ್ರಚಾರದಲ್ಲಿ ಅವರಿಗೆ ನಿರೀಕ್ಷಿತ ಸ್ಥಾನಮಾನ ಸಿಗಲಿಲ್ಲ ಎಂಬ ಚರ್ಚೆಗಳೂ ನಡೆದಿದ್ದವು. ಜೊತೆಗೆ ಸತತವಾಗಿ ಎರಡು ಬಿಜೆಪಿ ರಾಜ್ಯ ಕಾರ್ಯಕಾರಿ ಸಭೆಗಳಿಗೆ ಗೈರಾಗಿದ್ದುದೂ ಅವರ ರಾಜಕೀಯ ಭವಿಷ್ಯದ ಕುರಿತು ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿತ್ತು.

ರಾಜೀನಾಮೆ ಪತ್ರದಲ್ಲಿ ರಾಮಲಿಂಗಾ ರೆಡ್ಡಿ ಉಲ್ಲೇಖಿಸಿದ ಕಾರಣ ಏನು ಗೊತ್ತಾ?

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ರಚನೆಯಾದ ಕೆಲವೇ ಗಂಟೆಗಳಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದ್ದು, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಚಿವ ರಾಮಲಿಂಗಾ ರೆಡ್ಡಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ರಾಮಲಿಂಗಾ ರೆಡ್ಡಿಗೆ ಜಲಸಂಪನ್ಮೂಲ ಇಲಾಖೆ ಹಂಚಿಕೆಯಾಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಶುಕ್ರವಾರ ಬೆಳಗ್ಗೆ ಅವರು ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ.

ರಾಜೀನಾಮೆ ಪತ್ರದಲ್ಲಿ, “ನನಗೆ ಸಚಿವ ಸ್ಥಾನ ನೀಡಿದ ಮುಖ್ಯಮಂತ್ರಿಗಳಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದಗಳು. ಆದರೆ ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ದಯವಿಟ್ಟು ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕು. ನಾನು ಕಾಂಗ್ರೆಸ್ ಪಕ್ಷದ ಶಾಸಕ ಹಾಗೂ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ” ಎಂದು ಉಲ್ಲೇಖಿಸಿದ್ದಾರೆ.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ, ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಾವು ಕೇಳಿರಲಿಲ್ಲ. ಆದರೆ 2023ರಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ತಮ್ಮ ನಿವಾಸಕ್ಕೆ ಭೇಟಿ ನೀಡಿ, ಭವಿಷ್ಯದಲ್ಲಿ ಆ ಖಾತೆ ನೀಡುವ ಭರವಸೆ ನೀಡಿದ್ದರು ಎಂದು ಹೇಳಿದ್ದಾರೆ.

“ನನಗೆ ನೀಡಿದ್ದ ಮಾತು ಈಡೇರಿಲ್ಲ. ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿಯೇ ಸಚಿವ ಸ್ಥಾನ ತ್ಯಜಿಸಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆದಾಗ್ಯೂ, ಕಾಂಗ್ರೆಸ್ ಪಕ್ಷದ ವಿರುದ್ಧ ಯಾವುದೇ ಅಸಮಾಧಾನ ಇಲ್ಲ. ಪಕ್ಷದ ಶಾಸಕನಾಗಿ ಹಾಗೂ ಕಾರ್ಯಕರ್ತನಾಗಿ ಮುಂದುವರಿಯುವುದಾಗಿ ಅವರು ಪುನರುಚ್ಚರಿಸಿದ್ದಾರೆ.

ಶೌಚಾಲಯ ಕ್ಲೀನರ್‌ಗಳೇ ಚಿನ್ನದ ಕಳ್ಳರು! ಕಿಟಕಿ ಮೂಲಕ ನುಗ್ಗಿ 12 ಲಕ್ಷದ ಚಿನ್ನ ಎಗರಿಸಿದ ಗ್ಯಾಂಗ್ ಅರೆಸ್ಟ್

ಬೆಂಗಳೂರು: ನಗರದ ನಗರತ್‌ಪೇಟೆಯ ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಕಳ್ಳತನ ಪ್ರಕರಣವನ್ನು ಹಲಸೂರು ಗೇಟ್ ಪೊಲೀಸರು ಭೇದಿಸಿದ್ದು, ರೌಡಿ ಶೀಟರ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 12 ಲಕ್ಷ ರೂ. ಮೌಲ್ಯದ 84 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ.

ಶ್ರೀರಾಮಪುರದ ನಾಗರಾಜು ಅಲಿಯಾಸ್ ‘ಆರ್‌ಎಕ್ಸ್ ನಾಗ’, ಅರ್ಜುನ್ ಅಲಿಯಾಸ್ ‘ರೋಲೆಕ್ಸ್’ ಹಾಗೂ ರಾಕ್ ಬಂಧಿತ ಆರೋಪಿಗಳಾಗಿದ್ದಾರೆ. ಇವರಲ್ಲಿ ನಾಗರಾಜು ಶ್ರೀರಾಮಪುರ ಪೊಲೀಸ್ ಠಾಣೆಯ ರೌಡಿ ಶೀಟರ್ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಮೇ 6ರಂದು ನಗರತ್‌ಪೇಟೆಯ ‘ಆರುಮ್ ಜ್ಯುವೆಲ್ಲರ್ಸ್’ ಕಟ್ಟಡದ ಐದನೇ ಮಹಡಿಯಲ್ಲಿ ಕಳ್ಳತನ ನಡೆದಿತ್ತು. ಕಟ್ಟಡದ ಶೌಚಾಲಯದ ಕಿಟಕಿ ಮೂಲಕ ಒಳನುಗ್ಗಿದ್ದ ಆರೋಪಿಗಳು, ಅಲ್ಲಿದ್ದ ಚಿನ್ನದ ಗಟ್ಟಿಗಳನ್ನು ಕದ್ದೊಯ್ದು ಪರಾರಿಯಾಗಿದ್ದರು. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳ ಚಲನವಲನ ಪತ್ತೆಯಾಗಿದೆ. ಬಳಿಕ ನಗರತ್‌ಪೇಟೆ ಪ್ರದೇಶದ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಸಿಬ್ಬಂದಿಯ ಮೇಲೆ ಅನುಮಾನ ಮೂಡಿದ್ದು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಸಂಪೂರ್ಣ ಸಂಚು ಬೆಳಕಿಗೆ ಬಂದಿದೆ.

ಆರೋಪಿಗಳು ನಗರತ್‌ಪೇಟೆಯ ಚಿನ್ನದ ಅಂಗಡಿಗಳ ಶೌಚಾಲಯ ಮತ್ತು ಚರಂಡಿಗಳಿಂದ ಹರಿದುಬರುವ ಕೊಳಚೆ ನೀರಿನಲ್ಲಿ ಚಿನ್ನದ ಸಣ್ಣ ಕಣಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರು. ಇದೇ ವೇಳೆ ಜ್ಯುವೆಲ್ಲರಿ ಅಂಗಡಿಯ ಒಳಗಿನ ವ್ಯವಸ್ಥೆ, ಭದ್ರತಾ ಕೊರತೆ ಮತ್ತು ಪ್ರವೇಶ ಮಾರ್ಗಗಳ ಬಗ್ಗೆ ಮಾಹಿತಿ ಪಡೆದಿದ್ದರು.

ಪ್ರತಿದಿನ ಚಿನ್ನದ ಕಣಗಳನ್ನು ಸಂಗ್ರಹಿಸುವ ಬದಲು ಒಂದೇ ಬಾರಿಗೆ ದೊಡ್ಡ ಮೊತ್ತದ ಹಣ ಸಂಪಾದಿಸುವ ಉದ್ದೇಶದಿಂದ ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಅದರಂತೆ ಶೌಚಾಲಯದ ಕಿಟಕಿ ಮೂಲಕ ಕಟ್ಟಡದೊಳಗೆ ಪ್ರವೇಶಿಸಿ ಚಿನ್ನದ ಗಟ್ಟಿಯನ್ನು ಕದ್ದೊಯ್ದಿದ್ದರು.

ಪ್ರಸ್ತುತ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕಳ್ಳತನದಲ್ಲಿ ಬಳಸಿದ ಮಾರ್ಗ ಹಾಗೂ ಇತರೆ ಪ್ರಕರಣಗಳ ಸಂಪರ್ಕದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ವರದಕ್ಷಿಣೆ ಕಿರುಕುಳ? ಕಾಣೆಯಾಗಿದ್ದ ಮಹಿಳೆ ಕೆರೆಯಲ್ಲಿ ಶವವಾಗಿ ಪತ್ತೆ!

ಬೆಂಗಳೂರು: ಮನೆಯಿಂದ ಕಾಣೆಯಾಗಿದ್ದ ಮಹಿಳೆಯೊಬ್ಬರು ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಕೊಮ್ಮಘಟ್ಟದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಜ್ಯೋತಿ (29) ಎಂದು ಗುರುತಿಸಲಾಗಿದೆ. ಮೂಲತಃ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಸರಗೂರು ಮೂಲದ ಜ್ಯೋತಿ, ಪತಿ ಶರತ್ ಕುಮಾರ್ ಹಾಗೂ ನಾಲ್ಕು ವರ್ಷದ ಮಗುವಿನೊಂದಿಗೆ ಕೊಮ್ಮಘಟ್ಟದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಶರತ್ ಕುಮಾರ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾನೆ ಎಂದು ಜ್ಯೋತಿ ಕುಟುಂಬಸ್ಥರು ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಮನನೊಂದ ಜ್ಯೋತಿ ನಾಲ್ಕು ದಿನಗಳ ಹಿಂದೆ ಮನೆಯಿಂದ ಹೊರಗೆ ಹೋಗಿದ್ದು, ಬಳಿಕ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ.

ನಿನ್ನೆ ಬೆಳಗಿನ ಜಾವ ಕೊಮ್ಮಘಟ್ಟ ಕೆರೆಯಲ್ಲಿ ಮಹಿಳೆಯ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಪ್ರಕರಣ ಸಂಬಂಧ ಜ್ಯೋತಿ ಕುಟುಂಬಸ್ಥರು ಪತಿ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದು, ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವಿನ ನಿಖರ ಕಾರಣ ಹಾಗೂ ಆರೋಪಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!