ಬೆಂಗಳೂರು: ನಗರದ ನಗರತ್‌ಪೇಟೆಯ ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಕಳ್ಳತನ ಪ್ರಕರಣವನ್ನು ಹಲಸೂರು ಗೇಟ್ ಪೊಲೀಸರು ಭೇದಿಸಿದ್ದು, ರೌಡಿ ಶೀಟರ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 12 ಲಕ್ಷ ರೂ. ಮೌಲ್ಯದ 84 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ.
ಶ್ರೀರಾಮಪುರದ ನಾಗರಾಜು ಅಲಿಯಾಸ್ ‘ಆರ್‌ಎಕ್ಸ್ ನಾಗ’, ಅರ್ಜುನ್ ಅಲಿಯಾಸ್ ‘ರೋಲೆಕ್ಸ್’ ಹಾಗೂ ರಾಕ್ ಬಂಧಿತ ಆರೋಪಿಗಳಾಗಿದ್ದಾರೆ. ಇವರಲ್ಲಿ ನಾಗರಾಜು ಶ್ರೀರಾಮಪುರ ಪೊಲೀಸ್ ಠಾಣೆಯ ರೌಡಿ ಶೀಟರ್ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮೇ 6ರಂದು ನಗರತ್‌ಪೇಟೆಯ ‘ಆರುಮ್ ಜ್ಯುವೆಲ್ಲರ್ಸ್’ ಕಟ್ಟಡದ ಐದನೇ ಮಹಡಿಯಲ್ಲಿ ಕಳ್ಳತನ ನಡೆದಿತ್ತು. ಕಟ್ಟಡದ ಶೌಚಾಲಯದ ಕಿಟಕಿ ಮೂಲಕ ಒಳನುಗ್ಗಿದ್ದ ಆರೋಪಿಗಳು, ಅಲ್ಲಿದ್ದ ಚಿನ್ನದ ಗಟ್ಟಿಗಳನ್ನು ಕದ್ದೊಯ್ದು ಪರಾರಿಯಾಗಿದ್ದರು. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳ ಚಲನವಲನ ಪತ್ತೆಯಾಗಿದೆ. ಬಳಿಕ ನಗರತ್‌ಪೇಟೆ ಪ್ರದೇಶದ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಸಿಬ್ಬಂದಿಯ ಮೇಲೆ ಅನುಮಾನ ಮೂಡಿದ್ದು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಸಂಪೂರ್ಣ ಸಂಚು ಬೆಳಕಿಗೆ ಬಂದಿದೆ.
ಆರೋಪಿಗಳು ನಗರತ್‌ಪೇಟೆಯ ಚಿನ್ನದ ಅಂಗಡಿಗಳ ಶೌಚಾಲಯ ಮತ್ತು ಚರಂಡಿಗಳಿಂದ ಹರಿದುಬರುವ ಕೊಳಚೆ ನೀರಿನಲ್ಲಿ ಚಿನ್ನದ ಸಣ್ಣ ಕಣಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರು. ಇದೇ ವೇಳೆ ಜ್ಯುವೆಲ್ಲರಿ ಅಂಗಡಿಯ ಒಳಗಿನ ವ್ಯವಸ್ಥೆ, ಭದ್ರತಾ ಕೊರತೆ ಮತ್ತು ಪ್ರವೇಶ ಮಾರ್ಗಗಳ ಬಗ್ಗೆ ಮಾಹಿತಿ ಪಡೆದಿದ್ದರು.
ಪ್ರತಿದಿನ ಚಿನ್ನದ ಕಣಗಳನ್ನು ಸಂಗ್ರಹಿಸುವ ಬದಲು ಒಂದೇ ಬಾರಿಗೆ ದೊಡ್ಡ ಮೊತ್ತದ ಹಣ ಸಂಪಾದಿಸುವ ಉದ್ದೇಶದಿಂದ ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಅದರಂತೆ ಶೌಚಾಲಯದ ಕಿಟಕಿ ಮೂಲಕ ಕಟ್ಟಡದೊಳಗೆ ಪ್ರವೇಶಿಸಿ ಚಿನ್ನದ ಗಟ್ಟಿಯನ್ನು ಕದ್ದೊಯ್ದಿದ್ದರು.
ಪ್ರಸ್ತುತ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕಳ್ಳತನದಲ್ಲಿ ಬಳಸಿದ ಮಾರ್ಗ ಹಾಗೂ ಇತರೆ ಪ್ರಕರಣಗಳ ಸಂಪರ್ಕದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



