Home Blog Page 71

ಯುದ್ಧದ ಎಫೆಕ್ಟ್: ರಾತ್ರೋರಾತ್ರಿ ಮನೆಬಳಕೆ ಸಿಲಿಂಡರ್ ಬೆಲೆ ಭಾರೀ ಹೆಚ್ಚಳ!

ನವದೆಹಲಿ: ಕೊಲ್ಲಿ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ದರ ಮತ್ತೆ ಏರಿಕೆಯಾಗಿದೆ. ಗೃಹ ಬಳಕೆಯ 14.2 ಕೆಜಿ ಎಲ್ಪಿಜಿ ಸಿಲಿಂಡರ್ ದರವನ್ನು 60 ರೂ. ಹಾಗೂ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ದರವನ್ನು 115 ರೂ. ಹೆಚ್ಚಿಸಲಾಗಿದೆ.

ಪರಿಷ್ಕೃತ ದರಗಳು ಶನಿವಾರದಿಂದಲೇ ಜಾರಿಗೆ ಬಂದಿದ್ದು, ಈ ಬೆಲೆ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್ ಹಾಗೂ ಸಣ್ಣ ವಾಣಿಜ್ಯ ಸಂಸ್ಥೆಗಳ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ದರ ಏರಿಕೆಗೆ ಮೊದಲು ಬೆಂಗಳೂರಿನಲ್ಲಿ ಗೃಹ ಬಳಕೆಯ ಸಿಲಿಂಡರ್ ದರ 855.50 ರೂ. ಇದ್ದು, ಇದೀಗ ಅದು 915.50 ರೂ.ಗೆ ಏರಿಕೆಯಾಗಿದೆ. ದೆಹಲಿಯಲ್ಲಿ 913 ರೂ., ಮುಂಬೈನಲ್ಲಿ 912.50 ರೂ. ಹಾಗೂ ಚೆನ್ನೈನಲ್ಲಿ 928.50 ರೂ.ಗೆ ಗೃಹ ಬಳಕೆಯ ಸಿಲಿಂಡರ್ ದರ ಏರಿಕೆಯಾಗಿದೆ.

ಏಪ್ರಿಲ್ 2025ರಿಂದ ದೇಶೀಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಪರಿಷ್ಕರಣೆ ನಡೆದಿರಲಿಲ್ಲ. ಈ ನಡುವೆ ಜನವರಿಯಿಂದ ಅಮೆರಿಕದಿಂದ ಭಾರತಕ್ಕೆ ಎಲ್ಪಿಜಿ ಆಮದು ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

2025ರ ನವೆಂಬರ್‌ನಲ್ಲಿ ಭಾರತೀಯ ಪಿಎಸ್‌ಯು ತೈಲ ಕಂಪನಿಗಳು 2026ರ ಒಪ್ಪಂದ ವರ್ಷಕ್ಕಾಗಿ ಅಮೆರಿಕದ ಗಲ್ಫ್ ಕರಾವಳಿಯಿಂದ ಸುಮಾರು 2.2 MTPA ಎಲ್ಪಿಜಿ ಆಮದು ಮಾಡಲು ಒಂದು ವರ್ಷದ ಒಪ್ಪಂದಕ್ಕೂ ಸಹಿ ಹಾಕಿವೆ ಎಂದು ತಿಳಿದುಬಂದಿದೆ.

ಯೂಟ್ಯೂಬ್ ಸಂದರ್ಶನ ವಿವಾದ: ರಜತ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲು

ಬೆಂಗಳೂರು: ಯೂಟ್ಯೂಬ್ ಸಂದರ್ಶನದ ವಿಚಾರವಾಗಿ ಉಂಟಾದ ವಿವಾದದ ಹಿನ್ನೆಲೆ ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ರಜತ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಡಾಗ್ ಸತೀಶ್ ಅಲಿಯಾಸ್ ಸತೀಶ್ ನೀಡಿದ ದೂರಿನ ಮೇರೆಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 351 ಮತ್ತು 352ರಡಿ ರಜತ್ ಹಾಗೂ ಧನರಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರು ಪ್ರಕಾರ, ಕಳೆದ ವರ್ಷದ ಡಿಸೆಂಬರ್ 12ರಂದು ರಜತ್ ಕರೆ ಮಾಡಿ ತಾನು ಮತ್ತು ತನ್ನ ಸ್ನೇಹಿತ ಧನರಾಜ್ ಸೇರಿ ಹೊಸ ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿದ್ದೇವೆ ಎಂದು ಹೇಳಿ ಸಂದರ್ಶನಕ್ಕೆ ಆಹ್ವಾನಿಸಿದ್ದರು. ಚಾನೆಲ್ ಆರಂಭದ ಭಾಗವಾಗಿ ನಿಮ್ಮ ಸಂದರ್ಶನವನ್ನು ಪ್ರಸಾರ ಮಾಡುತ್ತೇವೆ ಎಂದು ಹೇಳಿ ಮಾತನಾಡಿಸಿದ್ದರು ಎಂದು ಸತೀಶ್ ದೂರಿನಲ್ಲಿ ತಿಳಿಸಿದ್ದಾರೆ.

ನಂತರ ವಿಡಿಯೋವನ್ನು ಅಪ್ಲೋಡ್ ಮಾಡುವಾಗ ತಮ್ಮ ಮಾತುಗಳನ್ನು ತಿರುಚಿ ತೋರಿಸಿ ಮಾನಹಾನಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಸಂದರ್ಶನವನ್ನು ಎರಡು ಕ್ಯಾಮೆರಾ ಹಾಗೂ ಎರಡು ಮೊಬೈಲ್‌ಗಳಲ್ಲಿ ನಾಲ್ವರು ಸೇರಿ ಚಿತ್ರೀಕರಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇನ್ನೂ ಫೆಬ್ರವರಿ 27ರಂದು ರಾತ್ರಿ 10:30ರ ಸುಮಾರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಹಾಕಿದ್ದಕ್ಕೆ ರಜತ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸತೀಶ್ ಆರೋಪಿಸಿದ್ದಾರೆ. ಅಲ್ಲದೆ ಮಧ್ಯರಾತ್ರಿಯಲ್ಲಿಯೂ ರಜತ್ ಫೋನ್‌ನಿಂದ ಬೆದರಿಕೆ ಕರೆಗಳು ಬಂದಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ರಜತ್ ಹಾಗೂ ಧನರಾಜ್ ಉದ್ದೇಶಪೂರ್ವಕವಾಗಿ ಅವಮಾನ ಮಾಡಿ ಮಾನಹಾನಿ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿರುವ ಸತೀಶ್, ಇಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಹೂವಿನಹಡಗಲಿ: ಪ್ಲಾಸ್ಟಿಕ್‌ ಚೀಲದಲ್ಲಿ ಪೀಸ್‌ ಪೀಸ್ ಆಗಿ ಸಿಕ್ಕ ಶವ ಪ್ರಕರಣಕ್ಕೆ ಟ್ವಿಸ್ಟ್: ಮಗನನ್ನೇ ಕೊಂದ ತಂದೆ ಬಂಧನ

0

ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಬೀರಬ್ಬಿ ಗ್ರಾಮದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಡು ತುಂಡಾಗಿ ಪತ್ತೆಯಾದ ಯುವಕನ ಶವ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದಲ್ಲಿ ಮೃತನ ತಂದೆಯೇ ಆರೋಪಿಯಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮೃತ ಯುವಕನನ್ನು ಬೀರೇಶ (25) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಆತನ ತಂದೆ ಲಕ್ಷ್ಮಪ್ಪ (55) ಹತ್ಯೆಗೈದ ಆರೋಪಿಯಾಗಿದ್ದಾನೆ.

ಪೊಲೀಸರ ಮಾಹಿತಿ ಪ್ರಕಾರ, ಹೆಂಡತಿಯ ಅನೈತಿಕ ಸಂಬಂಧಕ್ಕೆ ಮಗ ಸಹಕಾರ ನೀಡುತ್ತಿದ್ದಾನೆ ಎಂಬ ಅನುಮಾನದಿಂದ ಲಕ್ಷ್ಮಪ್ಪ ಮಗನನ್ನೇ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸುಮಾರು 15 ದಿನಗಳ ಹಿಂದೆ ಕೊಡಲಿಯಿಂದ ಹಲ್ಲೆ ನಡೆಸಿ ಕೊಲೆಗೈದ ನಂತರ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ಎಸೆದಿದ್ದಾನೆ ಎನ್ನಲಾಗಿದೆ.

ಇತ್ತೀಚೆಗೆ ಆ ಪ್ರದೇಶದಲ್ಲಿ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪರಿಶೀಲನೆ ನಡೆಸಿದಾಗ ಪ್ಲಾಸ್ಟಿಕ್ ಚೀಲದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮೂಳೆಗಳು ಪತ್ತೆಯಾಗಿದ್ದವು. ನಂತರ ಅದು ಬೀರೇಶನ ಮೃತದೇಹ ಎಂಬುದು ಗೊತ್ತಾಗಿದೆ.

ಪ್ರಕರಣ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಲಕ್ಷ್ಮಪ್ಪ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹೀರೆಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಮಾನಹಾನಿ ಸುದ್ದಿ ತೆರವುಗೊಳಿಸಲು ಹೈಕೋರ್ಟ್ ಮೊರೆ ಹೋದ ಶ್ರೀಲಂಕಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿ

ಬೆಂಗಳೂರು: ತಮ್ಮ ವಿರುದ್ಧ ಪ್ರಕಟವಾಗಿರುವ ಮಾನಹಾನಿಕರ ಸುದ್ದಿ ಹಾಗೂ ಸಂಬಂಧಿತ ಯುಆರ್‌ಎಲ್‌ಗಳನ್ನು ಆನ್‌ಲೈನ್‌ನಿಂದ ತೆರವುಗೊಳಿಸುವಂತೆ ಕೋರಿ ಶ್ರೀಲಂಕಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಹೆಚ್.ಎಂ. ದಿಲೀಪ್ ನವಾಜ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ನ್ಯಾಯಪೀಠ, ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ, ಗೂಗಲ್ ಇಂಡಿಯಾ, ಗೂಗಲ್ ಇಂಕ್, ಕೊಲಂಬೊ ಟೆಲಿಗ್ರಾಫ್ ಮತ್ತು ಲಂಕಾ ಈನ್ಯೂಸ್ ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಅಲ್ಲದೆ, ಅರ್ಜಿದಾರರ ಪರ ವಕೀಲರು ಕೊಲಂಬೊ ಟೆಲಿಗ್ರಾಫ್ ಹಾಗೂ ಲಂಕಾ ಈನ್ಯೂಸ್‌ಗೆ ಈ-ಮೇಲ್ ಮೂಲಕ ನೋಟಿಸ್ ಕಳುಹಿಸಬೇಕೆಂದು ಸೂಚಿಸಿ, ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಲಾಗಿದೆ.

ಅರ್ಜಿದಾರರು ತಮ್ಮ ಅರ್ಜಿಯಲ್ಲಿ, ಶ್ರೀಲಂಕಾದಿಂದ ಗಡಿಪಾರುಗೊಂಡ ಇಬ್ಬರು ಪತ್ರಕರ್ತರು ನಡೆಸುತ್ತಿರುವ ಕೊಲಂಬೊ ಟೆಲಿಗ್ರಾಫ್ ಮತ್ತು ಲಂಕಾ ಈನ್ಯೂಸ್ ಸುದ್ದಿ ತಾಣಗಳು 2015 ಮತ್ತು 2020ರಲ್ಲಿ ತಮ್ಮ ವಿರುದ್ಧ ಮಾನಹಾನಿಕರ ಲೇಖನಗಳನ್ನು ಪ್ರಕಟಿಸಿವೆ ಎಂದು ಆರೋಪಿಸಿದ್ದಾರೆ. ಈ ಲೇಖನಗಳೊಂದಿಗೆ ಸಂಬಂಧಿಸಿದ ಒಟ್ಟು ನಾಲ್ಕು ಸುದ್ದಿಗಳನ್ನು ಆನ್‌ಲೈನ್‌ನಿಂದ ತೆಗೆದುಹಾಕುವಂತೆ ಹಾಗೂ ಸಂಬಂಧಿತ ಯುಆರ್‌ಎಲ್‌ಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ನಿರ್ದೇಶಿಸಬೇಕೆಂದು ಮನವಿ ಮಾಡಿದ್ದಾರೆ.

ಈ ಸಂಬಂಧ 2023ರಲ್ಲಿ ಗೂಗಲ್ ಸಂಸ್ಥೆಗೆ ಲೀಗಲ್ ನೋಟಿಸ್ ಕಳುಹಿಸಿದ್ದರೂ ಯಾವುದೇ ಪ್ರತಿಕ್ರಿಯೆ ದೊರಕಲಿಲ್ಲ ಎಂದು ಅವರು ಹೇಳಿದ್ದಾರೆ. ಗೂಗಲ್ ಸಂಸ್ಥೆಯ ಭಾರತದ ಪ್ರಧಾನ ಕಚೇರಿ ಬೆಂಗಳೂರಿನಲ್ಲಿ ಇರುವ ಕಾರಣದಿಂದ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವುದಾಗಿ ವಿವರಿಸಿದ್ದಾರೆ.

ಶ್ರೀಲಂಕಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿರುವುದರಿಂದ ತಮ್ಮ ದೇಶದಲ್ಲೇ ಮಾನಹಾನಿ ಪ್ರಕರಣ ದಾಖಲಿಸುವುದು ನೈತಿಕವಾಗಿ ಸರಿಯಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅಂತಹ ಕ್ರಮ ನ್ಯಾಯಾಂಗ ನೈತಿಕತೆಗೆ ವಿರುದ್ಧವಾಗುವ ಸಾಧ್ಯತೆ ಇರುವುದರಿಂದ ಭಾರತದ ನ್ಯಾಯಾಲಯವನ್ನು ಆಶ್ರಯಿಸಿದ್ದಾಗಿ ಅವರು ತಿಳಿಸಿದ್ದಾರೆ.

ಇನ್ನೂ, ತಮ್ಮ ವಿರುದ್ಧ ನಡೆದಿರುವ ಅಪಪ್ರಚಾರದಿಂದ ತಮ್ಮ ವೈಯಕ್ತಿಕ ಘನತೆ ಮಾತ್ರವಲ್ಲದೆ ನ್ಯಾಯಾಂಗದ ಪಾವಿತ್ರ್ಯಕ್ಕೂ ಧಕ್ಕೆ ಉಂಟಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಸಂವಿಧಾನದ ವಿಧಿ 21ರಡಿ ನೀಡಿರುವ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕು ವಿದೇಶಿಯರಿಗೂ ಅನ್ವಯವಾಗುವುದರಿಂದ ತಮ್ಮ ಅರ್ಜಿಯನ್ನು ಭಾರತೀಯ ನ್ಯಾಯಾಲಯ ವಿಚಾರಣೆ ನಡೆಸಬಹುದು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಕೇಂದ್ರದ ಅನ್ಯಾಯದಿಂದ ರಾಜ್ಯಕ್ಕೆ ಸಾಲದ ಹೊರೆ: ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

0

ಬೀದರ್: ಕೇಂದ್ರ ಸರ್ಕಾರದ ಅನ್ಯಾಯದ ಕಾರಣದಿಂದಲೇ ರಾಜ್ಯಕ್ಕೆ ಹೆಚ್ಚಿನ ಸಾಲದ ಹೊರೆ ಬಂದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಜೆಟ್‌ 2026 ಕುರಿತು ಬಿಜೆಪಿಯವರು ಮಾಡುತ್ತಿರುವ ಟೀಕೆಗೆ ಪ್ರತಿಕ್ರಿಯೆ ನೀಡಿದರು. ರಾಜ್ಯ ಸರ್ಕಾರವನ್ನು “ಸಾಲಾರಾಮಯ್ಯ” ಎಂದು ವ್ಯಂಗ್ಯ ಮಾಡಿದ ಬಿಜೆಪಿ ನಾಯಕರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಸುಮಾರು ₹80 ಸಾವಿರ ಕೋಟಿ ರೂಪಾಯಿ ಪಾಲನ್ನು ಇನ್ನೂ ನೀಡಿಲ್ಲ. ಅದರಿಂದಲೇ ರಾಜ್ಯಕ್ಕೆ ಸಾಲದ ಒತ್ತಡ ಹೆಚ್ಚಾಗಿದೆ ಎಂದು ಅವರು ಆರೋಪಿಸಿದರು. ಜೊತೆಗೆ ಎಎಒ ಯೋಜನೆಯಲ್ಲಿ ಕೇಂದ್ರದ ಪಾಲಾದ ₹15 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯವೇ ನೀಡಿದೆ ಎಂದು ತಿಳಿಸಿದರು.

ಅದೇ ರೀತಿ ಪಂಚಾಯಿತಿಗಳಿಗೆ ನೀಡಬೇಕಾದ 15ನೇ ಹಣಕಾಸು ಆಯೋಗದ ಅನುದಾನ ಕೂಡ ಕೇಂದ್ರದಿಂದ ಬಂದಿಲ್ಲ ಎಂದು ಅವರು ಹೇಳಿದರು. ಕೇಂದ್ರದ ಹಲವಾರು ಯೋಜನೆಗಳಿಗೆ ರಾಜ್ಯವೇ ಹಣ ನೀಡುತ್ತಿದೆ. ಆದರೆ ರಾಜ್ಯ ಸಾಲ ಮಾಡಿದೆ ಎಂಬುದನ್ನು ಮಾತ್ರ ಬಿಜೆಪಿ ಟೀಕಿಸುತ್ತಿದೆ ಎಂದು ಅವರು ಆರೋಪಿಸಿದರು.

ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಲದ ವಿಚಾರವನ್ನೂ ಪ್ರಸ್ತಾಪಿಸಿ, ದೇಶ ನಡೆಸಲು ಕೇಂದ್ರ ಸರ್ಕಾರವೂ ಸಾಲ ಮಾಡುತ್ತಿದೆ ಎಂದು ಹೇಳಿದರು. “ಮೋದಿಯವರು ಸುಮಾರು ₹200 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ದೇಶ ನಡೆಸಲು ಸಾಲ ಮಾಡುವುದು ತಪ್ಪಲ್ಲ” ಎಂದು ಅವರು ಅಭಿಪ್ರಾಯಪಟ್ಟರು.

ಇದರ ಜೊತೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಆರೋಪ ಮಾಡಿದ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, “ಅವರು ದಿನವೂ ಗೃಹ ಸಚಿವ ಅಮಿತ್ ಶಾ ಅವರ ಪಕ್ಕದಲ್ಲೇ ಕೂತಿರುತ್ತಾರೆ. ತನಿಖೆ ನಡೆಸಲು ಒತ್ತಾಯ ಮಾಡಲಿ, ಸಾಕ್ಷಿ ನೀಡಲಿ. ಹಿಟ್ ಅಂಡ್ ರನ್ ರಾಜಕಾರಣ ಅವರಿಗೆ ಗೌರವ ತರುವುದಿಲ್ಲ” ಎಂದು ಹೇಳಿದರು.

ಬಿಜೆಪಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಕಡಿತವಾಗಿದೆ ಎಂದು ಆರೋಪಿಸಿರುವ ವಿಚಾರಕ್ಕೂ ಅವರು ತಿರುಗೇಟು ನೀಡಿದರು. ಬಿಹಾರದಲ್ಲಿ ದೊಡ್ಡ ಮೊತ್ತದ ಘೋಷಣೆ ಮಾಡಿದರೆ ಅದನ್ನು ಮಾಸ್ಟರ್ ಸ್ಟ್ರೋಕ್ ಎಂದು ಹೊಗಳುತ್ತಾರೆ. ಆದರೆ ಕರ್ನಾಟಕದಲ್ಲಿ ಜನರಿಗೆ ಸಹಾಯ ಮಾಡುವ ಯೋಜನೆಗಳನ್ನು ಟೀಕಿಸುತ್ತಾರೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ₹5 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಗ್ಯಾರಂಟಿಗಳಿಂದ ಯಾವ ಯೋಜನೆ ನಿಂತಿದೆ ಎಂದು ಪ್ರಶ್ನಿಸಿದರು. ಇದೇ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಸಿದ್ದರಾಮಯ್ಯ ಅವರ ಕೊನೆಯ ಬಜೆಟ್ ಎಂದು ಹೇಳಿರುವ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಖರ್ಗೆ, “ಮುಂದಿನ ಬಜೆಟ್ ಯಾರು ಮಂಡಿಸುತ್ತಾರೆ ಎಂಬುದನ್ನು ಸಿದ್ದರಾಮಯ್ಯ ಅಥವಾ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಸದ್ಯ ಅಂತಹ ಯಾವುದೇ ಚರ್ಚೆ ನಡೆದಿಲ್ಲ” ಎಂದು ಸ್ಪಷ್ಟಪಡಿಸಿದರು.

ಟ್ರಂಪ್–ಬೈಡನ್ ಹತ್ಯೆ ಸಂಚು: ಪಾಕಿಸ್ತಾನ ಮೂಲದ ವ್ಯಕ್ತಿಗೆ ಅಮೆರಿಕ ನ್ಯಾಯಾಲಯದಲ್ಲಿ ಶಿಕ್ಷೆ

0

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾಜಿ ಅಧ್ಯಕ್ಷ ಜೋ ಬೈಡನ್ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಲ್ಲಿ ಪಾಕಿಸ್ತಾನ ಮೂಲದ ವ್ಯಕ್ತಿಗೆ ಅಮೆರಿಕ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಆಸಿಫ್ ಮರ್ಚೆಂಟ್ (47) ಎಂದು ಗುರುತಿಸಲಾಗಿದೆ. ಪ್ರಾಸಿಕ್ಯೂಟರ್‌ಗಳ ಪ್ರಕಾರ, ಆತ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಜೊತೆ ಸಂಪರ್ಕ ಹೊಂದಿದ್ದು, ಅಮೆರಿಕದ ಪ್ರಮುಖ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಆರೋಪಿಸಲಾಗಿದೆ.

ಸುಪಾರಿ ಹಂತಕರನ್ನು ಹುಡುಕುವ ಪ್ರಯತ್ನದ ವೇಳೆ ಆಸಿಫ್ ಮರ್ಚೆಂಟ್ ಅರಿವಿಲ್ಲದೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಏಜೆಂಟ್‌ಗಳನ್ನು ಸಂಪರ್ಕಿಸಿದ್ದ. ಇದರಿಂದಾಗಿ ಆತನ ಯೋಜನೆ ಆರಂಭದಲ್ಲೇ ವಿಫಲವಾಯಿತು.

ಒಂದು ವಾರದ ವಿಚಾರಣೆಯ ಬಳಿಕ **ಬ್ರೂಕ್ಲಿನ್**ನ ನ್ಯಾಯಾಲಯ ಆಸಿಫ್ ಮರ್ಚೆಂಟ್‌ನ್ನು ಭಯೋತ್ಪಾದನೆ ಮತ್ತು ಸುಪಾರಿ ಕೊಲೆ ಸಂಚು ಪ್ರಕರಣಗಳಲ್ಲಿ ತಪ್ಪಿತಸ್ಥ ಎಂದು ಘೋಷಿಸಿದೆ. ಈ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಸಾಕ್ಷ್ಯಗಳ ಪ್ರಕಾರ, ಆರೋಪಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಗಿನ ಅಧ್ಯಕ್ಷ ಜೋ ಬೈಡನ್ ಹಾಗೂ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ವಿಶ್ವಸಂಸ್ಥೆಯ ರಾಯಭಾರಿ ನಿಕ್ಕಿ ಹ್ಯಾಲಿ ಅವರನ್ನು ಗುರಿಯಾಗಿಸಿಕೊಂಡಿದ್ದ ಎನ್ನಲಾಗಿದೆ.

ಆರೋಪಿ ಹಿಂದೆ ಪಾಕಿಸ್ತಾನಿ ಬ್ಯಾಂಕ್‌ಗಳಲ್ಲಿ ಕೆಲಸ ಮಾಡಿದ್ದನು. ಪಾಕಿಸ್ತಾನ ಮತ್ತು ಇರಾನ್ ಎರಡೂ ದೇಶಗಳಲ್ಲಿ ಕುಟುಂಬ ಹೊಂದಿದ್ದ ಆತ ವ್ಯವಹಾರಕ್ಕಾಗಿ ಆಗಾಗ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದನು. ಸುಮಾರು ಮೂರು ವರ್ಷಗಳ ಹಿಂದೆ ಇರಾನ್‌ನ ಗುಪ್ತಚರರು ಅವನನ್ನು ಸಂಪರ್ಕಿಸಿ ಕಣ್ಗಾವಲು ತರಬೇತಿ ನೀಡಿದ್ದು, ಹತ್ಯೆ ಸಂಚು ರೂಪಿಸಲು ಪ್ರೇರೇಪಿಸಿದ್ದರೆಂಬ ಆರೋಪ ಕೇಳಿಬಂದಿದೆ.

ಆದರೆ ಈ ಪ್ರಕರಣದಲ್ಲಿ ಇರಾನ್ ಸರ್ಕಾರ ನೇರವಾಗಿ ಭಾಗಿಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR: ಆರೋಪ ಏನು?

ಬೆಂಗಳೂರು: ಬೆದರಿಕೆ ಮತ್ತು ನಿಂದನೆ ಆರೋಪದಡಿ ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ವಿರುದ್ಧ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಎಂಬುವವರು ನೀಡಿದ ದೂರು ಆಧಾರದ ಮೇಲೆ BNS 351(2), 352 ಸೆಕ್ಷನ್ ಅಡಿ ರಜತ್ ಮತ್ತು ಕಿರಣ್ ವಿರುದ್ಧ ಪ್ರಕರಣ ದಾಖಲಾಗಿದ್ದು, ರಜತ್ ಎ1, ಎ2 ಆರೋಪಿ ಕಿರಣ್ ಎಂಬುವರನ್ನ ಮಾಡಲಾಗಿದೆ.

ಫೋನ್ ಕರೆ ಮುಖಾಂತರ ಬೆದರಿಕೆ ಹಾಕಿರೋ ಆರೋಪ ಮಾಡಿ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಡಾಗ್ ಸತೀಶ್ ಸ್ನೇಹವನ್ನು ಬಿಡಬೇಕೆಂದು ಬೆದರಿಕೆ ಹಾಕಿದ್ದಾರೆ. ದೂರುದಾರರ ಕಾರಿನ ಪೋಟೋ ಕಳಿಸಿ ಮೆಸೇಜ್ ಮೂಲಕ ಇದು ರಜತ್‌ ಬುಜ್ಜಿ… ಕಾಲ್‌ ಮಾಡ್ತಾ ಇದೀನಿ.. ವಾಪಸ್‌ ಕಾಲ್‌ ಮಾಡ್ತೀರಾ? ಇಲ್ವಾ ನಾವೇ ಒಳಗೆ ಹಾಕಿಸಬೇಕಾ ಎಂದು ಬೆದರಿಕೆ ಹಾಕಲಾಗಿದೆ.

ಅಷ್ಟೇ ಅಲ್ಲದೆ ಕಾನ್ಫರೆನ್ಸ್ ಕಾಲ್‌ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಸದ್ಯ ಕರೆಯಲ್ಲಿ ಮಾತನಾಡಿರೋದು ರಜತ್ ಅಥವಾ ಬೇರೆ ವ್ಯಕ್ತಿ ಎಂಬುವುದರ ಪರಿಶೀಲನೆ ನಡೆಸಲಾಗುತ್ತಿದೆ.

ಸದ್ಯ, ಕರೆ ಮಾಡಿದವರು ರಜತ್ ಎಂದು ಖಚಿತಪಡಿಸಲು ತನಿಖೆ ನಡೆಯುತ್ತಿದೆ. ಕೆ.ಆರ್. ಪುರಂ ಪೊಲೀಸರು ರಜತ್ ಮತ್ತು ಕಿರಣ್ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯುವ ಮೂಲಕ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗಂಟಲು ನೋವು, ತೂಕ ನಷ್ಟ, ಕಿವಿ ನೋವು ಬರುತ್ತಾ? ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಯಾಕೆ ಗೊತ್ತಾ?

0

ಸ್ವ-ಔಷಧಿ ಬಳಕೆ ಹೆಚ್ಚುತ್ತಿದ್ದು, ಗಂಟಲು ನೋವು ಅಥವಾ ತೀವ್ರ ಗಂಟಲು ಸಮಸ್ಯೆಗಳಿಗೆ ಮನೆಮದ್ದುಗಳು ಅಥವಾ ತಾವೇ ಔಷಧಿ ಬಳಸುತ್ತಿರುವುದರಿಂದ ಗಂಭೀರ ಸಮಸ್ಯೆ ನಿರ್ಲಕ್ಷಿಸಲಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಕೆಲವೊಂದು ಗಂಟಲು ಸಮಸ್ಯೆಗಳು ಗಂಟಲು ಕ್ಯಾನ್ಸರ್ ಆರಂಭದ ಲಕ್ಷಣಗಳಾಗಿರಬಹುದು.

ತಜ್ಞರ ಪ್ರಕಾರ, ಎಂಜಲು ನುಂಗಲು ತೊಂದರೆ, ಕುತ್ತಿಗೆಯಲ್ಲಿ ಗಡ್ಡೆ ಅಥವಾ ಊತ, ಗಂಟಲು ನೋವು, 2–3 ವಾರಕ್ಕಿಂತ ಹೆಚ್ಚು ಇರುವ ಗಂಟಲು ಒರಟಾಗುವಿಕೆ, ವಿವರಿಸಲಾಗದ ತೂಕ ನಷ್ಟ ಅಥವಾ ಕಿವಿ ನೋವು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಜಾಗರೂಕರಾಗಬೇಕಾದವರು: ತಂಬಾಕು ಬಳಕೆದಾರರು, ಮದ್ಯಪಾನ ಸೇವಕರು, HPV ಸೋಂಕಿಗೆ ಒಳಗಾದವರು, ಕೆಟ್ಟ ಮೌಖಿಕ ನೈರ್ಮಲ್ಯ ಹೊಂದಿರುವವರು ಮತ್ತು ರಾಸಾಯನಿಕ ವಾತಾವರಣದಲ್ಲಿ ಕೆಲಸ ಮಾಡುವವರು.

ತುಂಬಾ ಸೇವನೆಯಾದ ತಂಬಾಕು ಮತ್ತು ಮದ್ಯಪಾನ ತ್ಯಜಿಸುವುದು, ಉತ್ತಮ ಮೌಖಿಕ ನೈರ್ಮಲ್ಯ ಕಾಪಾಡಿಕೊಳ್ಳುವುದು, HPV ಲಸಿಕೆ ಪಡೆಯುವುದು, ಹಾಗೂ ಗಂಭೀರ ಲಕ್ಷಣಗಳಿಗೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯ. ಆರಂಭಿಕ ಪತ್ತೆ ಮತ್ತು ತ್ವರಿತ ಚಿಕಿತ್ಸೆ ಹಲವಾರು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

T20 ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ವಿಶ್ವ ದಾಖಲೆ ಬರೆದ ಭಾರತ-ಇಂಗ್ಲೆಂಡ್ ಪಂದ್ಯ!

0

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 2026 ರ ಟಿ20 ವಿಶ್ವಕಪ್ ಎರಡನೇ ಸೆಮಿಫೈನಲ್ ಪಂದ್ಯವು ಕ್ರಿಕೆಟ್ ಇತಿಹಾಸದಲ್ಲಿ ಹಲವಾರು ದಾಖಲೆಗಳಿಗೆ ಸಾಕ್ಷಿಯಾಗಿದೆ.

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಒಟ್ಟಾರೆಯಾಗಿ 499 ರನ್‌ಗಳ ಅತಿ ಹೆಚ್ಚು ಮೊತ್ತ ಕಲೆಹಾಕಿ, ಟಿ20 ವಿಶ್ವಕಪ್‌ನ ನಾಕೌಟ್ ಸುತ್ತಿನಲ್ಲಿ ಭಾರತೀಯ ತಂಡದ ಅತಿದೊಡ್ಡ ಸ್ಕೋರ್ ದಾಖಲೆ ನಿರ್ಮಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 253 ರನ್ ಗಳಿಸಿತು. ಈ ಮೂಲಕ ಟೀಂ ಇಂಡಿಯಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ನಾಕೌಟ್ ಸುತ್ತಿನಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ದಾಖಲೆಯನ್ನು ಬರೆಯಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೂಡ ಗೆಲುವಿಗಾಗಿ ಹೋರಾಟ ನಡೆಸಿತ್ತಾದರೂ 246 ರನ್‌ಗಳಿಸಲಷ್ಟೇ ಶಕ್ತವಾಗಿ 7 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ಈ ಪಂದ್ಯ ರನ್​ಗಳ ವಿಚಾರದಲ್ಲಿ ದಾಖಲೆ ಬರೆಯುವುದರ ಜೊತೆಗೆ ವೀಕ್ಷಣೆಯ ವಿಚಾರದಲ್ಲೂ ವಿಶ್ವದಾಖಲೆ ನಿರ್ಮಿಸಿದೆ.. ಐಸಿಸಿ ಅಧ್ಯಕ್ಷ ಜಯ್ ಶಾ ಪ್ರಕಟಿಸಿರುವಂತೆ, ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ಪಂದ್ಯವನ್ನು 65.2 ಮಿಲಿಯನ್ ವೀಕ್ಷಕರು ವೀಕ್ಷಿಸಿದ್ದಾರೆ. ಇದು 2024 ರ ಯುನೈಟೆಡ್ ಸ್ಟೇಟ್ಸ್ ಪಂದ್ಯದಲ್ಲಿ ನಿರ್ಮಿಸಿದ ದಾಖಲೆಯನ್ನು ಮುರಿದಿದೆ’ ಎಂದು ಬರೆದುಕೊಂಡಿದ್ದಾರೆ..

ಟೀಂ ಇಂಡಿಯಾ 19 ಸಿಕ್ಸರ್‌ಗಳನ್ನು, ಇಂಗ್ಲೆಂಡ್ 15 ಸಿಕ್ಸರ್‌ಗಳನ್ನು ಬಾರಿಸಿ, ಒಟ್ಟಾರೆ 34 ಸಿಕ್ಸರ್‌ಗಳೊಂದಿಗೆ ಅತಿ ಹೆಚ್ಚು ಸಿಕ್ಸರ್ ದಾಖಲೆ ನಿರ್ಮಿಸಿತು. ಜೊತೆಗೆ, ಒಟ್ಟು 73 ಬೌಂಡರಿಗಳೊಂದಿಗೆ ಈ ಪಂದ್ಯವು ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಬೌಂಡರಿಗಳ ದಾಖಲೆ ಕೂಡ ನಿರ್ಮಿಸಿತು. ಹೀಗಾಗಿ, 2026 ರ ಸೆಮಿಫೈನಲ್ ಟಿ20 ಕ್ರಿಕೆಟ್ ಐತಿಹಾಸಿಕ ಕ್ಷಣಗಳಲ್ಲಿ ಒಂದಾಗಿ ಉಳಿಯಲಿದೆ.

 

ರಾಯಚೂರು: 700 ಕುರಿಗಳ ಶೆಡ್ ಬೆಂಕಿಗಾಹುತಿ – 2 ಕೋಟಿ ರೂ. ನಷ್ಟ!

ರಾಯಚೂರು: ಸಿಂಧನೂರು ತಾಲ್ಲೂಕಿನ ಮುಕ್ಕುಂದ ಗ್ರಾಮದ ಹೊರ ಭಾಗದಲ್ಲಿ 700 ಕುರಿಗಳ ಶೆಡ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ನಿನ್ನೆ ರಾತ್ರಿ 2:30 ಗಂಟೆಗೆ ಬೆಂಕಿ ತಗುಲಿದ್ದು, ಇಡೀ ಶೆಡ್ ಸುಟ್ಟು ಕರಕಲಾಗಿವೆ‌‌. ಇನ್ನೇನು ಕೆಲವೇ ದಿನಗಳಲ್ಲಿ ಮರಿ ಹಾಕಬೇಕಿದ್ದ ಕುರಿಗಳು ಗರ್ಭದಲ್ಲಿರುವ ಮರಿ ಸಮೇತ ಸುಟ್ಟುಹೋಗಿವೆ.

ಹೇಮಲತಾ ಮಧುಸೂದನ್ ಎನ್ನುವವರು ಸುಮಾರು 1 ಕೋಟಿ ರೂ ವೆಚ್ಚದಲ್ಲಿ ಶೆಡ್ ನಿರ್ಮಿಸಿದ್ದರು. ಇದರ 47 ಲಕ್ಷ ರೂ ಕೇಂದ್ರ ಸರ್ಕಾರದ ಸಬ್ಸಿಡಿ ಸಹಿತ, ಉಳಿದ ಹಣವನ್ನು ಸಾಲದಿಂದ ಭರಿಸಿದ್ದಾರೆ. ಶೆಡ್‌ನಲ್ಲಿ ಸುಮಾರು 700 ಕುರಿಗಳನ್ನು ಸಾಕಾಣಿಕೆ ಮಾಡಲಾಗುತ್ತಿತ್ತು, 6 ಕಾರ್ಮಿಕರು ಅವುಗಳ ಆರೈಕೆಗೆ ನಿಯೋಜಿತರಾಗಿದ್ದರು.

ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಮತ್ತು ಸ್ಥಳೀಯರ ಸಹಾಯದಿಂದ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ. ಶೆಡ್​ನಲ್ಲಿ 700ಕ್ಕೂ ಹೆಚ್ಚು ಕುರಿಗಳ ಪೈಕಿ 525 ಕುರಿಗಳಿಗೆ ವಿಮೆ ಇದೆ.  ಅವಘಡದಿಂದ ಸುಮಾರು 2 ಕೋಟಿ ರೂ. ನಷ್ಟ ಸಂಭವಿಸಿದ್ದು, ಶೆಡ್ ಮಾಲೀಕರ ಸಂಬಂಧಿ ಪದ್ಮಾನಾಯ್ಡು ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಮುಂದುವರಿಯುತ್ತಿದೆ.

 

error: Content is protected !!