Home Blog Page 8

ಕಾಂಗ್ರೆಸ್ ಶಾಸಕಿ ಮನೆ ರಸ್ತೆಗೆ ಇಲ್ಲ ಕಾಂಕ್ರೀಟ್ ಭಾಗ್ಯ: ಇದೆಂಥಾ ಅವ್ಯವಸ್ಥೆ!

ರಾಯಚೂರು:- ಗ್ಯಾರಂಟಿ ಹೆಸರೇಳಿಕೊಂಡು ಕಾಂಗ್ರೆಸ್ ಸರ್ಕಾರವು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಕರ್ನಾಟಕದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಒಂದೆಡೆ ಅನುದಾನ ಸಿಗುತ್ತಿಲ್ಲ ಎಂದು ಸ್ವಪಕ್ಷದವರೇ ಸರ್ಕಾರದ ಕಿಡಿಕಾರುತ್ತಿದ್ದಾರೆ.

ಈ ಹೊತ್ತಲ್ಲೇ ರಾಯಚೂರಿನಲ್ಲಿ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮಂಜುಳಾ ಮನೆ ಮುಂದಿನ ಸಾರ್ವಜನಿಕ ಮಾರ್ಗಕ್ಕೆ ಕಾಂಕ್ರೀಟ್ ಹಾಕದೇ ಬಿಜೆಪಿ ಕೌನ್ಸಿಲರ್ ನಾಗರಾಜ್ ಠಕ್ಕರ್ ಕೊಟ್ಟಿದ್ದಾರೆ. ವಾರ್ಡ್​​ನ ಎಲ್ಲಾ ದಿಕ್ಕಿನಲ್ಲೂ ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗಿದೆ.

ಕೆಪಿಸಿಸಿ ಸೆಕ್ರೆಟರಿ ಮನೆ ರಸ್ತೆಗೆ ಮಾತ್ರ ಕಾಂಕ್ರೀಟ್ ಹಾಕದೆ ಬಿಜೆಪಿ ಕೌನ್ಸಿಲರ್ ತಿರುಗೇಟು ಕೊಟ್ಟಿದ್ದಾರೆ. ಸದ್ಯ ಅನುದಾನ ಖಾಲಿ ಆಗಿದೆ, ನಿಮ್ಮ ಸಿಎಂ ಸಿದ್ದರಾಮಯ್ಯಗೆ ಹೇಳಿ ಅನುದಾನ ಕೊಡಿಸಿ. ಆ ಮೇಲೆ ನಿಮ್ಮ ಮನೆ ಮುಂದಿನ ಮಾರ್ಗಕ್ಕೆ ಕಾಂಕ್ರೀಟ್ ರಸ್ತೆ ಮಾಡಿಸುತ್ತೇನೆ ಎಂದು ಕೌನ್ಸಿಲರ್ ನಾಗರಾಜ್ ಹೇಳಿದ್ದಾರೆ.

ಪತ್ನಿ ವಿಜಯಲಕ್ಷ್ಮೀ ಜೊತೆ ಚಾಮುಂಡಿ ತಾಯಿಯ ದರ್ಶನ ಪಡೆದ ನಟ ದರ್ಶನ್‌

ಆಷಾಢ ಮಾಸದ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ಮೈಸೂರಿನ ಚಾಮುಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ಆಷಾಢ ಮಾಸದಲ್ಲಿ ಪ್ರತಿವರ್ಷವೂ ದರ್ಶನ್‌ ಚಾಮುಂಡಿಯ ಆಶೀರ್ವಾದ ಪಡೆಯುತ್ತಾರೆ. ಆದರೆ ಕಳೆದ ಬಾರಿ ಜೈಲಿನಲ್ಲಿದ್ದ ಕಾರಣ ದೇವಿಯ ದರ್ಶನ ಸಾಧ್ಯವಾಗಿರಲಿಲ್ಲ. ಈ ಬಾರಿ ದಂಪತಿ ಸಮೇತ ಆಗಮಿಸಿ ಚಾಮುಂಡಿ ತಾಯಿ ದರ್ಶನ ಪಡೆದಿದ್ದಾರೆ.

ಇಂದು ಎರಡನೇ ಆಷಾಡ ಶುಕ್ರವಾರವಾದ ಹಿನ್ನೆಲೆಯಲ್ಲಿ ಅದಿದೇವತೆಯ ದರ್ಶನಕ್ಕೆ ಭಕ್ತ ಸಾಗರವೇ ಹರಿದುಬಂದಿದೆ. ದೇಗುಲದಲ್ಲಿ ಬೆಳಗಿನ ಜಾವದಿಂದಲೇ ವಿಶೇಷ ಪೂಜಾ ಕೈಂಕಾರ್ಯ ಶುರುವಾಗಿವೆ. ಮುಂಜಾನೆ 3:30ಕ್ಕೆ ವಿವಿಧ ಅಭಿಷೇಕಗಳು ನಡೆದಿವೆ. ಬೆಳಗ್ಗೆ 6ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದಿದ್ದಾರೆ.

ಇನ್ನೂ ದರ್ಶನ್‌ ಕಾರು ಚಾಮುಂಡಿ ಬೆಟ್ಟಕ್ಕೆ ಬರ್ತಿದ್ದಂತೆ ಅಭಿಮಾನಿಗಳು ಕಾರಿನ ಸುತ್ತ ಸುತ್ತವರಿದ್ರು. ದರ್ಶನ್‌ ಕಾರಿನಿಂದ ಇಳಿಯುತ್ತಿದ್ದಂತೆ ಡಿಬಾಸ್, ಡಿಬಾಸ್​ ಎಂದು ಕೂಗಿದ್ದಾರೆ. ಮೊಬೈಲ್ ಹಿಡಿದು ವಿಡಿಯೋ ಮಾಡಲು ಮುಂದಾದರು. ಈ ವೇಳೆ ದರ್ಶನ್‌ ಅಭಿಮಾನಿಗಳಿಗೆ ಕೈ ಮುಗಿದು ದೇವಸ್ಥಾನದ ಒಳಗೆ ತೆರಳಿ ದೇವಿಯ ಆಶೀರ್ವಾದ ಪಡೆದಿದ್ದಾರೆ.

ನಾವು ಸೋಲ್ತಿವೋ, ಗೆಲ್ತಿವೋ ಏನಾದರೂ ಕೂಡ ನಾವು ಜನಗಳ ಜೊತೆಗೆ ನಿಲ್ಲಬೇಕು: ನಿಖಿಲ್ ಕುಮಾರಸ್ವಾಮಿ

ಬೀದರ್: ನಾವು ಸೋಲ್ತಿವೋ, ಗೆಲ್ತಿವೋ ಏನಾದರೂ ಕೂಡ ನಾವು ಜನಗಳ ಜೊತೆಗೆ ನಿಲ್ಲಬೇಕು. ನಿರಂತರವಾಗಿ ಜನರೊಂದಿಗೆ ಬೆರತು ಕೆಲಸ ಮಾಡಬೇಕು ಎಂದು ಜೆಡಿಎಸ್ ಪಕ್ಷದ ಯುವ ಜನತಾದಳದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿರವರು ಹೇಳಿದರು.ಬೀದರ್ ನಗರದ ಲಾವಣ್ಯ ಕನ್ವೆನ್ಷನ್ ಹಾಲ್ ನಲ್ಲಿ ಗುರುವಾರ ನಡೆದ, ‘ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ’ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಕ್ಷದ ಮುಖಂಡರು, ಕಾರ್ಯಕರ್ತರು ಜನರೊಂದಿಗೆ ಬೆರೆತು, ಜನರೊಂದಿಗೆ ಇದ್ದು ಕೆಲಸ ಮಾಡಬೇಕು ಎಂದರು.

ಮುಂದಿನ ಗ್ರಾ.ಪಂ, ತಾ.ಪಂ, ಜಿ.ಪಂ ಚುನಾವಣೆಗಳಲ್ಲಿ ಕೂಡ ಪಕ್ಷದ ಮುಖಂಡರು, ಕಾರ್ಯಕರ್ತರ ಶ್ರಮ ಅಗತ್ಯವಾಗಿರುತ್ತದೆ. ಜನರೊಂದಿಗೆ ಜನತಾದಳ ಎಂಬ ಗುರಿಯೊಂದಿಗೆ ಸಾಗುತ್ತಿರುವ ನಾವು ನಿರಂತರವಾಗಿ ಜನರೊಂದಿಗೆ ಇರುವುದು ಅಗತ್ಯವಾಗಿರುತ್ತದೆ.

ಸದಸ್ಯತ್ವ ನೋಂದಣಿ ಅಭಿಯಾನವನ್ನು ನಾವು ತುಮಕೂರು ಜಿಲ್ಲೆಯಿಂದ ಆರಂಭಿಸಿದ್ದೇವೆ. ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಸದಸ್ಯತ್ವ ನೋಂದಣಿ ಅಭಿಯಾನವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಈಗ ಐದನೇ ಜಿಲ್ಲೆಯಾಗಿ ಬೀದರ್ ನಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಮಾಡ್ತಿದ್ದೇವೆ. ಇನ್ನೂ ಎರಡು ದಿನಗಳ ಕಾಲ ಕಲ್ಯಾಣ ಕರ್ನಾಟಕ ಭಾಗದಲ್ಲೇ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿರುತ್ತೇವೆ.

ನಾವು ಜನತಾದಳ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಬೇಕಾಗಿದೆ. ನಿಮ್ಮ ಚುನಾವಣೆಗಳಲ್ಲಿ ನೀವು ಗೆಲುವು ಸಾಧಿಸುವುದು ಅಗತ್ಯವಾಗಿರುತ್ತದೆ. ಆಗಾಗಿ ತಾ.ಪಂ, ಜಿ.ಪಂ ಚುನಾವಣೆಗಳ ನಿಟ್ಟಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾವು ಹೆಚ್ಚೆಚ್ಚು ಸ್ಥಾನ ಪಡೆದುಕೊಳ್ಳಬೇಕು ಎಂದರೇ ನಾವೆಲ್ಲರೂ ಶ್ರಮವಹಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿರವರು ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು, ಪಕ್ಷ ಸಂಘಟನೆಯ ಕೆಲಸವನ್ನು ನಿಖಿಲ್ ಕುಮಾರಸ್ವಾಮಿರವರು ಮಾಡ್ತಿದ್ದಾರೆ. ನಮ್ಮ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು ಅವರು ಮಾಡ್ತಿದ್ದಾರೆ. ನಾವು ಅವರೊಂದಿಗೆ ಕೈಜೋಡಿಸೋಣ ಎಂದರು.

ನಾವು ರಾಜಕೀಯದಲ್ಲಿ ಜನರ ಹತ್ತಿರ ಇದ್ದು ಸೇವೆ ಮಾಡಿದಾಗ ಜನರೇ ನಮಗೆ ಅಧಿಕಾರ ಕೊಡ್ತಾರೆ. ನಾವು ಜನರೊಂದಿಗೆ ಇರೋಣ. ಗ್ಯಾರಂಟಿ ಮುಖ ತೋರಿಸಿ ಕಾಂಗ್ರೆಸ್ ಸರ್ಕಾರ ಏನ್ ಮಾಡ್ತಿದೆ ಎಂಬುದನ್ನು ಜನ ನೋಡ್ತಿದ್ದಾರೆ. ಅವರ ಗ್ಯಾರಂಟಿಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ಸಾಗ್ತಿವೆ ಎಂಬುದನ್ನು ಕೂಡ ರಾಜ್ಯದ ಜನರು ನೋಡ್ತಿದ್ದಾರೆ.

ಗ್ಯಾರಂಟಿ ಹೆಸರಲ್ಲಿ ರಾಜ್ಯ ಸರ್ಕಾರ ದೋಖಾ ಮಾಡ್ತಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಿದ್ದಾರೆ. ಸರ್ಕಾರ ಬಂದು ಎರಡು ವರ್ಷವಾದ್ರು ಜಿ.ಪಂ, ತಾ.ಪಂ ಚುನಾವಣೆ ಮಾಡುವ ಧೈರ್ಯ ಅವರಿಗೆ ಇಲ್ಲದಾಗಿದೆ ಎಂದು ಬಂಡೆಪ್ಪ ಖಾಶೆಂಪುರ್ ರವರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು‌‌. ಮಾಜಿ ಶಾಸಕರಾದ ಸುರೇಶ್ ಗೌಡ, ಮಲ್ಲಿಕಾರ್ಜುನ ಖೂಬಾರವರು ಸೇರಿದಂತೆ ಅನೇಕರು ಮಾತನಾಡಿ, ಜೆಡಿಎಸ್ ಸದಸ್ಯತ್ವ ನೋಂದಣಿ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್, ಮಾಜಿ ಶಾಸಕರಾದ ಸುರೇಶ್ ಗೌಡ, ಮಲ್ಲಿಕಾರ್ಜುನ ಖೂಬಾ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲ್ಪೂರ್, ಪ್ರಮುಖರಾದ ಸೂರ್ಯಕಾಂತ್ ನಾಗಮಾರಪಳ್ಳಿ, ಉಮಕಾಂತ್ ನಾಗಮಾರಪಳ್ಳಿ, ಬಸವರಾಜ ಪಾಟೀಲ್ ಹಾರೂರಗೇರಿ, ಶಾಂತಲಿಂಗ ಸಾವಳಗಿ, ರಾಜಶೇಖರ ಜವಳೆ, ಅಶೋಕ್ ಕೊಡ್ಗೆ, ರಾಜು ಕಡ್ಯಾಳ, ಸುದರ್ಶನ್ ಸುಂದರರಾಜ್, ಸಿದ್ರಾಮಪ್ಪ ವಂಕ್ಕೆ, ಐಲಿಂಜಾನ್ ಮಠಪತಿ, ಬಸವರಾಜ ಪಾಟೀಲ್ ಹಾರೂರಗೇರಿ, ಮಲ್ಲಿಕಾರ್ಜುನ ನೆಳ್ಗೆ, ರಾಜು ಕಡ್ಯಾಳ್, ಅಭಿ ಕಾಳೆ, ಜಾಫೇಡ್ ಕಡ್ಯಾಳ, ಪ್ರಶಾಂತ್ ವಿಶ್ವಕರ್ಮರವರು ಸೇರಿದಂತೆ ಅನೇಕರಿದ್ದರು.

21 ವರ್ಷದ ಯುವಕ ಹೃದಯಾಘಾತಕ್ಕೆ ಬಲಿ: ಹಾಸನದಲ್ಲಿ ಹೆಚ್ಚಿದ ಸಾವಿನ ಸಂಖ್ಯೆ!

ಹಾಸನ:- 21 ವರ್ಷದ ಯುವಕನೋರ್ವ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಹಾಸನದ ಚಿಕ್ಕಕೊಂಡಗುಳ ಗ್ರಾಮದಲ್ಲಿ ಜರುಗಿದೆ.

ಮದನ್ ಮೃತ ದುರ್ದೈವಿ. ಮದನ್ ಅವರು ಕಳೆದ ಎರಡು ದಿನಗಳಿಂದ ಚಿಕ್ಕಕೊಂಡಗುಳದ ಬಾವನ ಮನೆಗೆ ಬಂದಿದ್ದರು. ನಿನ್ನೆ ರಾತ್ರಿ ಮನೆಯಲ್ಲಿದ್ದ ವೇಳೆ ಮದನ್‌ಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ.

ಎದೆನೋವಿನಿಂದ ಮದನ್ ಕುಸಿದು ಬಿದ್ದಿದ್ದಾನೆ. ಕೂಡಲೇ ಸಂಬಂಧಿಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲೇ ಮದನ್ ಮೃಪಟ್ಟಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 34ಕ್ಕೆ ಏರಿಕೆ ಆಗಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪ: ಮಾಜಿ ಸಚಿವ ಈಶ್ವರಪ್ಪ, ಪುತ್ರ, ಸೊಸೆ ವಿರುದ್ಧ FIR ದಾಖಲು!

ಶಿವಮೊಗ್ಗ:- ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಪುತ್ರ ಹಾಗೂ ಸೊಸೆ ವಿರುದ್ಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ, ಪುತ್ರ ಕಾಂತೇಶ್ ಹಾಗೂ ಸೊಸೆ ಶಾಲಿನಿ ವಿರುದ್ಧ ಭ್ರಷ್ಟಚಾರ ಕಾಯ್ದೆಯಡಿ ಕೇಸ್ ಆಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಈಶ್ವರಪ್ಪ ಹಾಗೂ ಕುಟುಂಬದ ವಿರುದ್ಧ ನ್ಯಾಯಾಲಯದಲ್ಲಿ ವಿನೋದ್ ಎಂಬವರು ಖಾಸಗಿ ದೂರು ದಾಖಲಿಸಿದ್ದಾರೆ.

ಖಾಸಗಿ ದೂರಿನ ಅನ್ವಯ ಲೋಕಾಯುಕ್ತಕ್ಕೆ ಕೋರ್ಟ್ ಸೂಚನೆ ನೀಡಿತ್ತು. ಕೋರ್ಟ್ ಸೂಚನೆ ಬಳಿಕ ಲೋಕಾಯುಕ್ತ ಠಾಣೆಯಲ್ಲಿ ಕೇಸ್ ಆಗಿದೆ. ಪ್ರಕರಣದ ಬೆನ್ನಲ್ಲೇ ದಾಖಲೆಗಳನ್ನ ಸಲ್ಲಿಸುವಂತೆ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.

ಏನಿದು ಘಟನೆ:

ಈ ಹಿಂದೆ ಕೆ ಎಸ್ ಈಶ್ವರಪ್ಪ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ್ದ ಆರೋಪದಡಿ ಪ್ರಕರಣ ದಾಖಲಾಗಿತ್ತು. ವಿನೋದ್ ಅವರು 2016ರಲ್ಲಿ ಸಲ್ಲಿಸಿದ್ದ ಖಾಸಗಿ ದೂರನ್ನು ಲೋಕಾಯುಕ್ತ ಕೋರ್ಟ್ ವಜಾಗೊಳಿಸಿತ್ತು. ವಜಾ ಆದೇಶವನ್ನು ಪ್ರಶ್ನಿಸಿ ವಿನೋದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ದೂರಿನ ಮರು ಪರಿಶೀಲನೆಗೆ ಆದೇಶ ಹೊರಡಿಸಿತ್ತು.

ಲೈಂಗಿಕ ಕಿರುಕುಳ: ಚಿಪ್ಸ್ ತರಲು ಅಂಗಡಿಗೆ ತೆರಳಿದ್ದ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ!

ಬೆಂಗಳೂರು:- ನಗರದ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿಪ್ಸ್ ಖರೀದಿಸಲು ಅಂಗಡಿಗೆ ತೆರಳಿದ್ದ 7 ವರ್ಷದ ಬಾಲಕಿಯ ಮೇಲೆ ಕಾಮುಕ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಜರುಗಿದೆ.

ಕೇರಳ ಮೂಲದ 20 ವರ್ಷದ ಆರೋಪಿ ಕೃತ್ಯ ಎಸಗಿದವ. ಈತ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಅಂಗಡಿಗೆ ಬಾಲಕಿ ಚಿಪ್ಸ್ ಖರೀದಿಸಲು ತೆರಳಿದ್ದಳು. ಈ ವೇಳೆ ಗೋಡೌನ್‌ನಲ್ಲಿ ಚಿಪ್ಸ್ ಕೊಡುವುದಾಗಿ ತಿಳಿಸಿ ಆಕೆಯನ್ನು ಕರೆದುಕೊಂಡು ಹೋಗಿದ್ದ. ಬಳಿಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ.

ಸದ್ಯ ಈ ಸಂಬAಧ ಬಾಲಕಿ ಪೋಷಕರು ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

ತಾಂತ್ರಿಕ ಸಮಸ್ಯೆ: ಶರಾವತಿ ಹಿನ್ನೀರಿನ ನಡುವೆ ಕೆಟ್ಟು ನಿಂತ ಲಾಂಚ್!

ಶಿವಮೊಗ್ಗ:- ತಾಂತ್ರಿಕ ಸಮಸ್ಯೆಯಿಂದ ಶರಾವತಿ ಹಿನ್ನೀರಿನ ನಡುವೆ ಲಾಂಚ್ ಕೆಟ್ಟು ನಿಂತಿರುವ ಘಟನೆ ಶರಾವತಿ ಹಿನ್ನೀರಿನ ಪ್ರದೇಶದ ಹೊಳೆಬಾಗಿಲಿನಲ್ಲಿ ಗುರುವಾರ ಜರುಗಿದೆ.

ನೂರಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ವಾಹನಗಳನ್ನು ಲಾಂಚಿನಲ್ಲಿ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಬಳಿಕ ಸೇತುವೆ ಕಾಮಗಾರಿಗೆ ಬಂದಿದ್ದ ಲಾಂಚ್ ಮೂಲಕ ಹಗ್ಗ ಕಟ್ಟಿ ಕೆಟ್ಟು ನಿಂತಿದ್ದ ಲಾಂಚ್‍ನ್ನು ದಡಕ್ಕೆ ತರಲಾಯಿತು.

ಮತ್ತೊಂದು ಲಾಂಚ್ ಹೋಗಲು ಸ್ವಲ್ಪ ತಡವಾಗುತ್ತಿದ್ದರು ಸಹ ಕೆಟ್ಟ ನಿಂತಿದ್ದ ಲಾಂಚ್ ಪಕ್ಕದಲ್ಲೇ ನಿರ್ಮಾಣಗೊಳ್ಳುತ್ತಿರುವ ಸಿಗಂದೂರು ಸೇತುವೆಯ ಪಿಲ್ಲರ್‌ಗೆ ಲಾಂಚ್ ಡಿಕ್ಕಿಯಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.

ಕೊಟ್ಟ ಸಾಲ ವಾಪಸ್‌ ಕೇಳೋದು ತಪ್ಪಾ? ಮನೆಗೆ ಬೆಂಕಿ ಹಚ್ಚಿದ ಆಸಾಮಿ!

ಬೆಂಗಳೂರು:- ಬೆಂಗಳೂರಿನ ವಿವೇಕ್ ನಗರದಲ್ಲಿ ಕೊಟ್ಟ ಸಾಲ ವಾಪಸ್‌ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಮನೆಗೆ ಬೆಂಕಿ ಹಚ್ಚಿದ ಘಟನೆ ಜರುಗಿದೆ.

ಸುಬ್ರಮಣಿ ಬೆಂಕಿ ಹಚ್ಚಿದ ಆರೋಪಿ. ಜು.1 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವೆಂಕಟರಮಣಿ ಎಂಬವರ ಬಳಿ ಆರೋಪಿಯ ಸಹೋದರಿ ತನ್ನ ಮಗಳ ಮದುವೆಗಾಗಿ, 5 ಲಕ್ಷ ರೂ. ಹಣ ಪಡೆದಿದ್ದಳು. ಹಣ ಪಡೆದು ಹಲವು ವರ್ಷಗಳಾದರೂ ಹಣ ವಾಪಸ್‌ ನೀಡಿರಲಿಲ್ಲ. ಇದರಿಂದ ವೆಂಕಟರಮಣಿ ಹಣ ವಾಪಸ್‌ ಕೊಡುವಂತೆ ಕೇಳಿದ್ದರು.

ಹಣ ವಾಪಸ್‌ ಕೇಳಿದ್ದಕ್ಕೆ ಪಾರ್ವತಿ ಹಾಗೂ ಆಕೆಯ ಮಗಳು ವೆಂಕಟರಮಣಿಯವರ ಬಳಿ ಗಲಾಟೆ ಮಾಡಿದ್ದಾರೆ. ಇನ್ನೂ ಇದೇ ವಿಚಾರಕ್ಕೆ ಸಿಟ್ಟಾದ ಆರೋಪಿ, ವೆಂಕಟರಮಣಿ ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ. ಅದೃಷ್ಟವಶಾತ್‌ ಮನೆಯಲ್ಲಿದ್ದವರು ಪಾರಾಗಿದ್ದಾರೆ. ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಸಂಬಂಧ ವೆಂಕಟರಮಣಿ ಪುತ್ರ ವಿವೇಕ್‌ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.

ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ: ರೆಡ್ ಅಲರ್ಟ್ ಘೋಷಣೆ!

ಬೆಂಗಳೂರು:- ಕರ್ನಾಟಕದ ಹಲವೆಡೆ ಇಂದು ಭಾರೀ ಮಳೆ ಆಗಲಿದ್ದು, ಆರು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ.

ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಿಸಲಾಗಿದ್ದು, ಜುಲೈ 10ರವರೆಗೂ ಭಾರಿ ಮಳೆಯಾಗಲಿದೆ. ಬೆಳಗಾವಿ,ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದ್ದು, ಧಾರವಾಡಕ್ಕೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

ಬೆಂಗಳೂರಿನಲ್ಲಿ ಗುರುವಾರ ಅಲ್ಲಲ್ಲಿ ಮಳೆಯಾಗಿದೆ. ಎಚ್​ಎಎಲ್​​ನಲ್ಲಿ 28.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ,ನಗರದಲ್ಲಿ 28.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 28.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 28.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಗುತ್ತಿಗೆದಾರ ಶಿವಾನಂದ್ ಕುನ್ನೂರು ಕೊಲೆಗೆ ಟ್ವಿಸ್ಟ್: ಹತ್ಯೆಗೆ ಪ್ರತೀಕಾರ ತೀರಿಸಲು ಹೋಗಿ ಜೈಲು ಪಾಲಾದ ಪೊಲೀಸ್!

ಹಾವೇರಿ:- ಇಲ್ಲಿನ ಗಂಗೀಭಾವಿ ಕ್ರಾಸ್ ಬಳಿ ಜೂ. 24ರಂದು ನಡೆದಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ಶಿವಾನಂದ ಕುನ್ನೂರು (40) ಅವರ ಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.

ಹತ್ಯೆಗೆ ಪ್ರತೀಕಾರ ತೀರಿಸಲು ಹೋಗಿ ಪೊಲೀಸ್ ಪೇದೆ ಜೈಲು ಪಾಲಾಗಿದ್ದಾರೆ. ಪ್ರಕರಣದ A1 ಆರೋಪಿ ನಾಗರಾಜ್ ಮನೆಗೆ ಬೆಂಕಿಯಿಟ್ಟ ಆರೋಪ ಮೇಲೆ ಪೊಲೀಸ್‌ ಪೇದೆಯನ್ನು ಬಂಧಿಸಲಾಗಿದೆ.

ಕೊಲೆಯಾದ ಶಿವಾನಂದ ಅಣ್ಣ ಹಾಗೂ ಪೊಲೀಸ್ ಸಿಬ್ಬಂದಿ ಲಿಂಗರಾಜ ಕುನ್ನೂರನ್ನ ಶಿಗ್ಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಕೊಲೆ ಪ್ರಕರಣ ಸಂಬಂಧ ಪೊಲೀಸ್ ಸಿಬ್ಬಂದಿ ಲಿಂಗರಾಜ ಸೇರಿದಂತೆ ಒಟ್ಟು ಒಂಬತ್ತು ಜನರನ್ನು ಬಂಧಿಸಿದಂತಾಗಿದೆ. ಲಿಂಗರಾಜ್ ಅವರು, ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹತ್ಯೆ ಬಳಿಕ ಆರೋಪಿ ಮನೆಗೆ ಬೆಂಕಿಯಿಡಲು ಲಿಂಗರಾಜ್ ಪ್ರಚೋದಿಸಿದ್ದರು. ಈ ಹಿನ್ನೆಲೆ ತಡರಾತ್ರಿ ಒಟ್ಟು 9 ಜನರನ್ನ ಶಿಗ್ಗಾವಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಲಿಂಗರಾಜ್ ಕುನ್ನೂರು, ನವೀನ್ ಹೊಸಮನಿ, ಧರ್ಮಪ್ಪ, ಪ್ರಕಾಶ್, ಬಂಧಿತರು. ಒಟ್ಟು 6 ಜನರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇನ್ನುಳಿದ 3 ಜನರಿಗೆ ಪೊಲೀಸ್ ಕಸ್ಟಡಿ ಪಡೆಯಲಾಗಿದೆ.

ಪ್ರಕರಣದ ಹಿನ್ನೆಲೆ: ಶಿಗ್ಗಾಂವಿ ಪಟ್ಟಣದ ಹೊರವಲಯದ ಗಂಗಿಭಾವಿ ಕ್ರಾಸ್ ಬಳಿ ಜೂನ್ 24ರ ಮಂಗಳವಾರ ಗುತ್ತಿಗೆದಾರ ಶಿವಾನಂದ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆಯ ವಿಡಿಯೋ ವೈರಲ್​ ಆಗಿತ್ತು. ಅದನ್ನು ಆಧರಿಸಿ ಶಿವಾನಂದ ಅವರ ಪತ್ನಿ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ‌ ಐವರ ವಿರುದ್ಧ ದೂರು ದಾಖಲಿಸಿದ್ದರು.

error: Content is protected !!