Home Blog Page 80

443 ದಿನಗಳ ನಿರಂತರ ಸೇವೆ: ಆಸ್ಪತ್ರೆ ರೋಗಿಗಳಿಗೆ ಉಚಿತ ಉಪಹಾರ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಉಚಿತ ಉಪಹಾರ ವಿತರಿಸುವ ಸೇವಾ ಕಾರ್ಯ 443ನೇ ದಿನಕ್ಕೂ ಯಶಸ್ವಿಯಾಗಿ ಮುಂದುವರಿದಿದ್ದು, ಗುರುವಾರ ಒಂದೇ ದಿನದಲ್ಲಿ ಅತಿ ಹೆಚ್ಚು 110 ಒಳರೋಗಿಗಳಿಗೆ ಉಚಿತ ಉಪಹಾರ ನೀಡಲಾಯಿತು.

ರಾಮನಗರದ ದರ್ಶನ್ ಹೋಟೆಲ್ ಮಾಲೀಕ ಎಸ್.ಎಂ. ಗಂಗಾಧರಯ್ಯ, ಅವರ ಕುಟುಂಬ ಸದಸ್ಯರು ಹಾಗೂ ಆಪ್ತ ಸ್ನೇಹಿತರ ಬಳಗದ ಸಹಯೋಗದಲ್ಲಿ ಈ ಸೇವಾ ಕಾರ್ಯ ನಡೆಯುತ್ತಿದೆ. 2025ರ ಮಾರ್ಚ್ 31ರಂದು ಆರಂಭವಾದ ಈ ಯೋಜನೆ ನಿರಂತರವಾಗಿ ಸಾಗುತ್ತಿದ್ದು, ನೂರಾರು ರೋಗಿಗಳಿಗೆ ನೆರವಾಗುತ್ತಿದೆ.

ಸಾಮಾಜಿಕ ಕಳಕಳಿಯಿಂದ ಆರಂಭವಾದ ಈ ಸೇವಾ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ವಿವಿಧ ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರೋಗಿಗಳ ಆರೈಕೆಗೆ ನೆರವಾಗುವ ಉದ್ದೇಶದಿಂದ ನಡೆಯುತ್ತಿರುವ ಈ ಕಾರ್ಯ ಹಲವರಿಗೆ ಮಾದರಿಯಾಗಿದೆ.

ಈ ಸಂದರ್ಭದಲ್ಲಿ ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಪಾನ್ ಶಾಪ್ ಪುಟ್ಟಣ್ಣ, ಆಟೋ ವೀರೇಶ್, ಮಡಿವಾಳರ ಅಶೋಕ್, ಸೇಡಿಗಾರ್ ಪರಶುರಾಮ್ ಹಾಗೂ ದರ್ಶನ್ ಹೋಟೆಲ್ ಸಿಬ್ಬಂದಿ ಉಪಸ್ಥಿತರಿದ್ದರು.

“ಸಮಾಜ ನಮಗೆ ಕೊಟ್ಟಿರುವುದನ್ನು ಸಮಾಜಕ್ಕೇ ಮರಳಿ ನೀಡಬೇಕು ಎಂಬ ಉದ್ದೇಶದಿಂದ ಈ ಸೇವೆ ನಿರಂತರವಾಗಿ ಸಾಗುತ್ತಿದೆ.”

– ಎಸ್.ಎಂ. ಗಂಗಾಧರಯ್ಯ, ದರ್ಶನ್ ಹೋಟೆಲ್ ಮಾಲೀಕರು

ಹೆಚ್.ಕೆ. ಪಾಟೀಲರಿಲ್ಲದ ಸಂಪುಟ ಎಂದರೆ ಅಲ್ಲಮಪ್ರಭು ಇಲ್ಲದ ಅನುಭವ ಮಂಟಪ!

0

ಕರ್ನಾಟಕ ಕಂಡ ಮುತ್ಸದ್ಧಿ, ಸುಸಂಸ್ಕೃತ, ಅಧ್ಯಯನಶೀಲ, ಸಂವೇದನಾಶೀಲ ಹಾಗೂ ಪ್ರಜೆಗಳ ಅಂತರಂಗದ ತಂತುಗಳನ್ನು ಬಲ್ಲ ಅಪರೂಪದ ರಾಜಕಾರಣಿಗಳಲ್ಲಿ ಡಾ. ಎಚ್.ಕೆ. ಪಾಟೀಲರು ಒಬ್ಬರು. ಅವರಿಲ್ಲದ ಸಚಿವ ಸಂಪುಟವು ಅಲ್ಲಮಪ್ರಭು ಇಲ್ಲದ ಅನುಭವ ಮಂಟಪದಂತಾಗುತ್ತದೆ ಎಂಬುದು ಅವರ ಅಭಿಮಾನಿ ಬಳಗದ ಒಕ್ಕೂರಲಿನ ಅಭಿಪ್ರಾಯವಾಗಿದೆ. ಜೂನ್ 16ರಂದು ಗದಗದಲ್ಲಿ ನಡೆದ ವಿಭಿನ್ನ ಹೋರಾಟವು ಕೇವಲ ಬೇಡಿಕೆಯಲ್ಲ, ಪಕ್ಷದ ಹೈಕಮಾಂಡ್ ವಿರುದ್ಧದ ಸಾತ್ವಿಕ ಸಿಟ್ಟಿನ ಅಭಿವ್ಯಕ್ತಿಯೂ ಆಗಿತ್ತು.

ನಾಡಿನ ಏಳ್ಗೆಗಾಗಿ ಮಾನವೀಯ ಮೌಲ್ಯಗಳೊಂದಿಗೆ ಕೆಲಸ ಮಾಡಿರುವ ಎಚ್.ಕೆ. ಪಾಟೀಲರು ಸದನದ ಒಳಗೆ ಮತ್ತು ಹೊರಗೆ ಆಡಳಿತದ ಗುಣಮಟ್ಟ ಹೆಚ್ಚಿಸುವ ಅನೇಕ ವಿಚಾರಗಳನ್ನು ಮಂಡಿಸಿದ್ದಾರೆ. ಅವರ ಚಿಂತನೆ ಮತ್ತು ಕಾರ್ಯವೈಖರಿಗೆ ವಿರೋಧ ಪಕ್ಷದವರೂ ಮೆಚ್ಚುಗೆ ವ್ಯಕ್ತಪಡಿಸಿರುವುದು ಗಮನಾರ್ಹ.

ಬೃಹತ್ ನೀರಾವರಿ ಸಚಿವರಾಗಿ ಕೃಷ್ಣಾ ಕಣಿವೆ ಯೋಜನೆಯ ಅನುಷ್ಠಾನಕ್ಕೆ ವೇಗ ನೀಡಿದ ಅವರು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕರ್ನಾಟಕದ ವಿವಿಧ ಕಾನೂನುಗಳನ್ನು ಒಟ್ಟುಗೂಡಿಸುವ ಮಹತ್ವದ ಕಾರ್ಯ ಕೈಗೊಂಡರು. ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಶೇಷ ಅಧಿವೇಶನ ನಡೆಸಲು ಕಾರಣಕರ್ತರಾಗಿದ್ದರು.

ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಲು ಆಹ್ವಾನಿಸುವ ಕಾರ್ಯಕ್ರಮದ ಸಂಘಟನೆಯಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಅದೇ ಸಂದರ್ಭದಲ್ಲಿ ಕಲಾಂ ಅವರ 11 ಅಂಶಗಳ ಅಭಿವೃದ್ಧಿ ಯೋಜನೆ ಜಾರಿಗೆ ಮುಂದಾಗಿದ್ದ ಕ್ರಮ ಇಂದಿಗೂ ಸ್ಮರಣೀಯವಾಗಿದೆ.

ಕರ್ನಾಟಕ ಕಾನೂನು ವಿಶ್ವವಿದ್ಯಾಲಯ, ಕರ್ನಾಟಕ ಕಾನೂನು ಆಯೋಗ, ಮಾನವ ಹಕ್ಕುಗಳ ಆಯೋಗ ಹಾಗೂ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಗಳಂತಹ ಮಹತ್ವದ ಸಂಸ್ಥೆಗಳ ಸ್ಥಾಪನೆಯ ಶ್ರೇಯಸ್ಸು ಕೂಡ ಅವರಿಗೇ ಸಲ್ಲುತ್ತದೆ. ನ್ಯಾಯಾಂಗ ಇಲಾಖೆ ನೌಕರರ ರಾಜ್ಯ ಮಟ್ಟದ 8ನೇ ಸಮಾವೇಶದಲ್ಲಿ ಸಂಘ ಸಲ್ಲಿಸಿದ್ದ ಹಲವು ಮನವಿಗಳು ಕಾರ್ಯರೂಪಕ್ಕೆ ಬರಲು ಅವರು ನೆರವಾಗಿದ್ದರು.

ಶುದ್ಧ ಕುಡಿಯುವ ನೀರಿನ ಯೋಜನೆ ಹಾಗೂ “ಪ್ರಜೆಗಳಡೆ ಪ್ರಜಾಪ್ರಭುತ್ವ” ಎಂಬ ವಿನೂತನ ಪರಿಕಲ್ಪನೆಯ ಮೂಲಕ ಜನರ ದೂರುಗಳಿಗೆ 24 ಗಂಟೆಯೊಳಗೆ ಸರ್ಕಾರದ ಪ್ರತಿಕ್ರಿಯೆ ದೊರೆಯುವ ವ್ಯವಸ್ಥೆಯನ್ನು ರೂಪಿಸಿದ್ದು ದೇಶದಲ್ಲಿಯೇ ವಿಶಿಷ್ಟ ಪ್ರಯೋಗವೆಂದು ಪರಿಗಣಿಸಲಾಗಿದೆ. ಈ ಯೋಜನೆಗಳು ಎಚ್.ಕೆ. ಪಾಟೀಲರ ಕನಸಿನ ಕೂಸುಗಳಾಗಿವೆ.

ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371(ಜೆ) ವಿಧಿಯಡಿ ವಿಶೇಷ ಸ್ಥಾನಮಾನ ಕಲ್ಪಿಸುವ ಪ್ರಕ್ರಿಯೆಯಲ್ಲಿ ಅವರು ಮಹತ್ವದ ಪಾತ್ರವಹಿಸಿದ್ದರು. ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷರಾಗಿ ವರದಿ ಸಲ್ಲಿಸಿದ್ದಲ್ಲದೆ, ಗ್ರಾಮ ಸ್ವರಾಜ್ ಕಾಯ್ದೆ-2015 ಜಾರಿಗೆ ತಂದು 434 ಹೊಸ ಗ್ರಾಮ ಪಂಚಾಯಿತಿಗಳ ಪುನರ್ವಿಂಗಡಣೆಗೆ ಕಾರಣರಾಗಿದ್ದರು. ದೇಶದಲ್ಲೇ ಪ್ರಥಮ ಮಹಾತ್ಮ ಗಾಂಧಿ ಗ್ರಾಮೀಣ ಪಂಚಾಯತ್ ರಾಜ್ ವಿಶ್ವವಿದ್ಯಾಲಯವನ್ನು ಗದಗದಲ್ಲಿ ಸ್ಥಾಪಿಸಲು ಅವರು ಶ್ರಮಿಸಿದ್ದರು.

ಉತ್ತರ ಕರ್ನಾಟಕದ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಲುಪಿಸಲು ಸದನದ ಕಲಾಪಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ನಾಯಕರಲ್ಲಿ ಎಚ್.ಕೆ. ಪಾಟೀಲರು ಪ್ರಮುಖರು. ಈ ಎಲ್ಲ ಸಾಧನೆಗಳನ್ನು ಪರಿಗಣಿಸಿ ಪಕ್ಷದ ಹೈಕಮಾಂಡ್ ಅವರಿಗೆ ಉಪ ಮುಖ್ಯಮಂತ್ರಿ ಅಥವಾ ಸಚಿವ ಸ್ಥಾನ ನೀಡಬೇಕೆಂಬುದು ಅವರ ಅಭಿಮಾನಿಗಳ ಒತ್ತಾಯವಾಗಿದೆ.

ಒಂದು ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸಂಕಷ್ಟಕ್ಕೆ ಸಿಲುಕಿದ್ದಾಗ ರಾಜ್ಯಾದ್ಯಂತ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕರಲ್ಲಿ ಎಚ್.ಕೆ. ಪಾಟೀಲರು ಒಬ್ಬರು. ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಧರ್ಮಸಿಂಗ್ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪಕ್ಷವನ್ನು ಬಲಪಡಿಸುವಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ.

ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳ ಯಾವುದೇ ಸಮಸ್ಯೆಯ ಆಳವನ್ನು ಅರಿತು ಪರಿಹಾರ ಸೂಚಿಸುವ ಅಪರೂಪದ ಧುರೀಣರಾಗಿರುವ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಜಿಲ್ಲೆಯಾದ್ಯಂತ ನಡೆಯುತ್ತಿರುವ ಹೋರಾಟಕ್ಕೂ ಇದೇ ಕಾರಣವಾಗಿದೆ. ಇಂತಹ ಶುದ್ಧ ಚಾರಿತ್ರ್ಯವುಳ್ಳ ನಾಯಕರಿಂದ ಸದನದ ಘನತೆ ಹೆಚ್ಚುತ್ತದೆ. ಗದಗ ಜಿಲ್ಲೆ ಹಾಗೂ ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ದೊರೆಯಬೇಕು ಎಂಬುದು ಅವರ ಅಭಿಮಾನಿಗಳ ಆಶಯವಾಗಿದೆ.

– ಎ.ಎಸ್. ಮಕಾನದಾರ
ಕವಿ ಹಾಗೂ ಪ್ರಕಾಶಕ, ಗದಗ

ಗುರುಗಳ ಋಣಕ್ಕೆ ಕೃತಜ್ಞತೆಯ ಕಾಣಿಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ಸಿದ್ದಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದು ಇಂದು ವೈದ್ಯೆಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವ 2005-06ನೇ ಸಾಲಿನ ಹಳೆ ವಿದ್ಯಾರ್ಥಿನಿ ಡಾ. ಮಂಜುಳಾ ಸುರೇಬಾಣವರ, ತಮ್ಮ ತವರು ಶಾಲೆಗೆ ಪ್ರೊಫೆಷನಲ್ ಪೋರ್ಟೆಬಲ್ ಹೈಟೆಕ್ ಸ್ಪೀಕರ್ ದೇಣಿಗೆ ನೀಡಿ ಶಾಲೆಯೊಂದಿಗಿನ ಬಾಂಧವ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ಶಾಲೆಯು ನನಗೆ ಉತ್ತಮ ಶಿಕ್ಷಣ, ಸಂಸ್ಕಾರ ಹಾಗೂ ಬದುಕಿನ ಮೌಲ್ಯಗಳನ್ನು ಕಲಿಸಿಕೊಟ್ಟಿದೆ. ನನ್ನ ಯಶಸ್ಸಿನ ಹಿಂದೆ ಈ ಶಾಲೆ ಮತ್ತು ಶಿಕ್ಷಕರ ಪಾತ್ರ ಅಪಾರವಾಗಿದೆ. ಶಾಲೆಯ ಋಣವನ್ನು ಸಂಪೂರ್ಣವಾಗಿ ತೀರಿಸಲು ಸಾಧ್ಯವಿಲ್ಲ. ಆದರೆ ಕೃತಜ್ಞತೆಯ ಸಂಕೇತವಾಗಿ ಈ ಸಣ್ಣ ದೇಣಿಗೆಯನ್ನು ನೀಡಿದ್ದೇನೆ” ಎಂದು ಹೇಳಿದರು.

ಶಾಲೆಯ ಹಳೆಯ ನೆನಪುಗಳನ್ನು ಹಂಚಿಕೊಂಡ ಅವರು, ಕಳೆದ ಎರಡು ದಶಕಗಳಲ್ಲಿ ಶಾಲೆಯು ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಬದುಕಿಗೆ ದಾರಿ ತೋರಿದ ಎಲ್ಲ ಶಿಕ್ಷಕರಿಗೆ ಹಾಗೂ ಪ್ರಸ್ತುತ ಶಿಕ್ಷಕ ವೃಂದಕ್ಕೆ ಕುಟುಂಬದ ಪರವಾಗಿ ಅಭಿನಂದನೆ ಸಲ್ಲಿಸಿದರು.

ಕಿರಿಯ ಶಿಕ್ಷಕಿ ಶಂಕ್ರಮ್ಮ ಹಣಮಗೌಡ್ರ ಮಾತನಾಡಿ, ಹಳೆ ವಿದ್ಯಾರ್ಥಿಗಳು ಶಾಲೆಗೆ ಬಂದು ತಮ್ಮ ಪ್ರೀತಿ, ಅಭಿಮಾನ ವ್ಯಕ್ತಪಡಿಸಿದಾಗ ಶಿಕ್ಷಕರಿಗೆ ಆಗುವ ಸಂತೋಷವನ್ನು ವರ್ಣಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರಿಗೆ ದೊರೆಯುವ ಅತಿ ದೊಡ್ಡ ಗೌರವ ಎಂದರು.

ಹಿರಿಯ ಶಿಕ್ಷಕಿ ಜಯಲಕ್ಷ್ಮಿ ಅಣ್ಣಿಗೇರಿ ಮಾತನಾಡಿ, ಸರ್ಕಾರಿ ಶಾಲೆಗಳ ನಿಜವಾದ ಆಸ್ತಿ ವಿದ್ಯಾರ್ಥಿಗಳೇ. 20 ವರ್ಷಗಳ ಬಳಿಕ ಶಾಲೆಗೆ ಆಗಮಿಸಿ ಬೆಲೆಬಾಳುವ ಹೈಟೆಕ್ ಸ್ಪೀಕರ್ ದೇಣಿಗೆ ನೀಡಿರುವ ಡಾ. ಮಂಜುಳಾ ಅವರ ಕಾರ್ಯ ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ವತಿಯಿಂದ ಡಾ. ಮಂಜುಳಾ ಸುರೇಬಾಣವರ ಹಾಗೂ ಅವರ ಕುಟುಂಬವನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕ ವೃಂದ ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ಶಾಲೆಯ ನೆನಪುಗಳನ್ನು ಮರೆಯದ ವಿದ್ಯಾರ್ಥಿಗಳೇ ಶಿಕ್ಷಣ ಸಂಸ್ಥೆಗಳ ನಿಜವಾದ ಹೆಮ್ಮೆ. ಡಾ. ಮಂಜುಳಾ ಅವರಂತಹ ಹಳೆ ವಿದ್ಯಾರ್ಥಿಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು.”

– ಜಯಲಕ್ಷ್ಮಿ ಅಣ್ಣಿಗೇರಿ, ಹಿರಿಯ ಶಿಕ್ಷಕಿ

ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ವಿಶೇಷ ಪೂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಗದಗ ಶಾಸಕ ಡಾ. ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ದೊರೆಯಲಿ ಎಂಬ ಆಶಯದೊಂದಿಗೆ ಗುರುವಾರ ಗದಗ ನಗರದ ಚಾವಡಿ ಕೂಟದಲ್ಲಿರುವ ಶ್ರೀ ಕರಿದೇವರು ದೇವಸ್ಥಾನದಲ್ಲಿ ಶ್ರೀ ಸೋಮನಾಥೇಶ್ವರನಿಗೆ ಮಹಾರುದ್ರಾಭಿಷೇಕ ಪೂಜೆ ನೆರವೇರಿಸಲಾಯಿತು.

14ನೇ ವಾರ್ಡ್‌ನ ಯುವ ಕಾಂಗ್ರೆಸ್ ಮುಖಂಡ ನವೀನ್ ಜಾಲಿಹಾಳ ಅವರ ನೇತೃತ್ವದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಡಾ. ಎಚ್.ಕೆ. ಪಾಟೀಲರು ರಾಜ್ಯ ರಾಜಕಾರಣದಲ್ಲಿ ಅನುಭವಿಗಳಾಗಿದ್ದು, ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆತು ಜಿಲ್ಲೆಯ ಜನರ ಆಶಯ ಈಡೇರಲಿ ಎಂದು ನವೀನ್ ಜಾಲಿಹಾಳ ಪ್ರಾರ್ಥಿಸಿದರು.

ಗದಗದಲ್ಲಿ ಗಾಂಜಾ ಜಾಲ ಭೇದಿಸಿದ ಪೊಲೀಸರು; 2.365 ಕೆಜಿ ಮಾದಕ ವಸ್ತು ಜಪ್ತಿ, ಐವರು ಅರೆಸ್ಟ್

0

ಗದಗ: ಮಾದಕ ವಸ್ತುಗಳ ವಿರುದ್ಧ ಸಮರ ಸಾರಿರುವ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಲಕ್ಷಾಂತರ ರೂ. ಮೌಲ್ಯದ 2.365 ಕೆಜಿ ಗಾಂಜಾವನ್ನು ಜಪ್ತಿ ಮಾಡಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೇವಸ್ಥಾನವೊಂದರ ಬಳಿ ಗಾಂಜಾ ಸೇವಿಸುತ್ತಿದ್ದ ಇಬ್ಬರನ್ನು ಬಂಧಿಸಿದ ಪ್ರಕರಣದ ತನಿಖೆ ಮುಂದುವರಿದಂತೆ ಗದಗ-ಬೆಟಗೇರಿ ಮೂಲದ ಮತ್ತೊಂದು ಗಾಂಜಾ ಪೂರೈಕೆ ಜಾಲ ಬೆಳಕಿಗೆ ಬಂದಿದ್ದು, ಪೊಲೀಸರು ಜಾಲವನ್ನು ಭೇದಿಸಿದ್ದಾರೆ.

ಜೂನ್ 15ರಂದು ಲಕ್ಷ್ಮೇಶ್ವರ ನಗರದ ಮುಕ್ತಿನಗರದ ಅಗಸ್ತ್ಯತೀರ್ಥ ದೇವಸ್ಥಾನದ ಸಮೀಪ ಗಾಂಜಾ ಸೇವನೆ ನಡೆಸುತ್ತಿದ್ದ ಆರೋಪಿಗಳಾದ ಸಂತೋಷ ಬಸವರಾಜ ಉಪ್ಪಾರ ಹಾಗೂ ಸಾದಿಕ್ ರಿಯಾಜ್ ಅಹ್ಮದ್ ರಿತ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 27(ಬಿ) ಅಡಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಬಂಧಿತರಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಜೂನ್ 18ರಂದು ಗದಗದಿಂದ ಲಕ್ಷ್ಮೇಶ್ವರಕ್ಕೆ ಗಾಂಜಾ ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳ ಮೇಲೆ ದಾಳಿ ನಡೆಸಿದರು. ಈ ವೇಳೆ ನಾಗರಾಜ ದೊಡ್ಡಪ್ಪ ಮುತಗಾರ, ಪ್ರಶಾಂತ ಕರಿಯಪ್ಪ ಕಟಗೇರಿ ಹಾಗೂ ಗಂಗಪ್ಪ ಬಾಬು ನಾರಾಯಣ ಚವ್ಹಾಣ ಎಂಬ ಆರೋಪಿಗಳನ್ನು ಬಂಧಿಸಿ, ಅವರ ವಶದಲ್ಲಿದ್ದ 2.365 ಕೆಜಿ ಗಾಂಜಾ ವಶಪಡಿಸಿಕೊಂಡರು.

ಪೊಲೀಸರು ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಕಲಂ 20(ಬಿ) ಅಡಿ ಹೆಚ್ಚುವರಿ ಆರೋಪಗಳನ್ನು ಸೇರಿಸಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ಪಿಎಸ್‌ಐ ಟಿ.ಕೆ. ರಾಠೋಡ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ನಡೆಸಿದ್ದು, ತನಿಖಾಧಿಕಾರಿಯಾಗಿ ಪಿಎಸ್‌ಐ ನಾಗರಾಜ ಗಡದ ಕಾರ್ಯನಿರ್ವಹಿಸಿದ್ದಾರೆ. ಪ್ರಕರಣ ಭೇದಿಸಲು ಮಾರ್ಗದರ್ಶನ ನೀಡಿದ ಗದಗ ಉಪವಿಭಾಗದ ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಶಿರಹಟ್ಟಿ ಸಿಪಿಐ ಬಿ.ವಿ‌. ನ್ಯಾಮಗೌಡ ಅವರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಶ್ಲಾಘಿಸಿದ್ದಾರೆ.

ಶ್ರೀನಿವಾಸ ಮಾನೆಗೆ ಸಚಿವ ಸ್ಥಾನ ನೀಡಲು ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಹಾನಗಲ್ ಕ್ಷೇತ್ರದ ಶಾಸಕ ಶ್ರೀನಿವಾಸ ವಿಷ್ಣುರಾವ್ ಮಾನೆಯವರಿಗೆ ಸಚಿವ ಸ್ಥಾನ ನೀಡುವ ಮೂಲಕ ಮರಾಠಾ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಮರಾಠಾ ವಿದ್ಯಾವರ್ಧಕ ಸಂಘ (ರಿ) ಗದಗ-ಬೆಟಗೇರಿ ಒತ್ತಾಯಿಸಿದೆ.

ಸಂಘದ ಅಧ್ಯಕ್ಷ ಅರುಣಕುಮಾರ ಬಿ. ಚವ್ಹಾಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜನಪರ ಸೇವೆ ಸಲ್ಲಿಸಿದ ಹಾಗೂ ಅಭಿವೃದ್ಧಿ ದೃಷ್ಟಿಕೋನ ಹೊಂದಿರುವ ಯುವ ನಾಯಕರಾದ ಶ್ರೀನಿವಾಸ ಮಾನೆಯವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಲಾಗಿದೆ.

ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

‘ಸಮಯವು ನಿನ್ನ ಬದುಕಿನ ಮಾಲಿಕ’ ಹಾಡಿಗೆ ಜನಮೆಚ್ಚುಗೆ

0

ವಿಜಯಸಾಕ್ಷಿ ಸುದ್ದಿ, ಗದಗ: ದಿಕ್ಷೀತಾ ಎಂಟರ್‌ಪ್ರೈಸಸ್ ಬೆಂಗಳೂರು ನಿರ್ಮಾಣದ ಬಹುನಿರೀಕ್ಷಿತ ಕನ್ನಡ ಚಿತ್ರ ‘ಕಾಲಘಟ್ಟ’ದ ಎರಡನೇ ಲಿರಿಕಲ್ ವೀಡಿಯೊ ಸಾಂಗ್ “ಸಮಯವು ನಿನ್ನ ಬದುಕಿನ ಮಾಲಿಕ, ಕಾಲಕ್ಕೆ ಗೌರವ ಕೊಡಬೇಕು ಜನಕ” ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ.

ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥಾಹಂದರ ಹೊಂದಿರುವ ಈ ಚಿತ್ರದ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸುಮಾರು 1.80 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ಸಿನಿಪ್ರಿಯರ ಗಮನ ಸೆಳೆದಿದೆ. ಸಮಯದ ಮಹತ್ವವನ್ನು ಅರ್ಥಪೂರ್ಣ ಸಾಹಿತ್ಯದ ಮೂಲಕ ಮನಮುಟ್ಟುವಂತೆ ಹೇಳುವ ಈ ಹಾಡು ಯುವಜನತೆ ಸೇರಿದಂತೆ ಎಲ್ಲ ವಯೋಮಾನದವರ ಮೆಚ್ಚುಗೆಗೆ ಪಾತ್ರವಾಗಿದೆ.

ಹಾಡಿಗೆ ಋಷಿ ಸಾಹಿತ್ಯ ರಚಿಸಿದ್ದು, ಗಾಯಕ ಮಹೇಶ್ ತಮ್ಮ ಸುಮಧುರ ಕಂಠದ ಮೂಲಕ ಜೀವ ತುಂಬಿದ್ದಾರೆ. ಸಂಗೀತ ನಿರ್ದೇಶಕ ಎ.ಎಂ. ನೀಲ್ ಅವರ ಸಂಗೀತ ಸಂಯೋಜನೆ ಹಾಡಿನ ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರದಲ್ಲಿ ಅಭಿದಾಸ್ ಹಾಗೂ ನಿತಿಲ್ ನಾಯಕ ಪಾತ್ರಗಳಲ್ಲಿ ಅಭಿನಯಿಸಿದ್ದು, ಖುಷಿ ಮತ್ತು ಮೇಘಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ಕಲಾವಿದರಾದ ಶೋಭರಾಜ್, ಭವ್ಯ, ರಮೇಶ್ ಭಟ್, ಪ್ರಶಾಂತ್ ರವಿ ಹಾಗೂ ಮಂಡ್ಯ ಸೀತಾರಾಮ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಹಲವಾರು ರಂಗಭೂಮಿ ಹಾಗೂ ಹಾಸ್ಯ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರದ ಛಾಯಾಗ್ರಹಣವನ್ನು ಸದಾಶಿವ ಹಿರೇಮಠ ಹಾಗೂ ರಾಜ್ ಕಡೂರ್, ಸಂಕಲನವನ್ನು ವೆಂಕಿ ಯುಡಿವಿ, ಸಾಹಸ ನಿರ್ದೇಶನವನ್ನು ಮಾಸ್ ಮಾದ ನಿರ್ವಹಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಹೊಣೆಯನ್ನು ಕೆ. ಪ್ರಕಾಶ್ ಅಂಬಳೆ ವಹಿಸಿಕೊಂಡಿದ್ದಾರೆ. ಲಯನ್ ಚಿಕ್ಕೇಗೌಡ ಹಾಗೂ ಟಿ.ಸಿ. ತಳಗವಾಡಿ ಚಿತ್ರ ನಿರ್ಮಾಪಕರಾಗಿದ್ದಾರೆ.

ಜೂನ್ 19ರಂದು ರಾಜ್ಯಾದ್ಯಂತ ‘ಕಾಲಘಟ್ಟ’ ಚಿತ್ರ ಬಿಡುಗಡೆಯಾಗಲಿದ್ದು, ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ನಿರ್ಮಾಪಕರು ಮನವಿ ಮಾಡಿದ್ದಾರೆ.

“ಕಾಲದ ಮಹತ್ವವನ್ನು ಪ್ರತಿಯೊಬ್ಬರಿಗೂ ನೆನಪಿಸುವ ಉದ್ದೇಶದಿಂದ ಈ ಹಾಡನ್ನು ರೂಪಿಸಿದ್ದೇವೆ. ಯುವಜನತೆಗೆ ಹಾಗೂ ಕುಟುಂಬದ ಎಲ್ಲರಿಗೂ ಇದು ಉತ್ತಮ ಸಂದೇಶ ನೀಡಲಿದೆ.”

– ಕೆ. ಪ್ರಕಾಶ್ ಅಂಬಳೆ, ನಿರ್ದೇಶಕರು

ಮಹಿಳೆಯರಿಗೆ ಕಾನೂನು ಅರಿವು ಅವಶ್ಯಕ: ದಾವಲಸಾಬ ತಾಳಿಕೋಟಿ

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಕಾನೂನಿನ ಜ್ಞಾನದಿಂದ ಅನ್ಯಾಯಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿ ದೌರ್ಜನ್ಯ ಮತ್ತು ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ನ್ಯಾಯವಾದಿ ದಾವಲಸಾಬ ತಾಳಿಕೋಟಿ ಹೇಳಿದರು.

ಪಟ್ಟಣದ ಶಿವಾಜಿಪೇಟೆಯಲ್ಲಿ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಆಯೋಜಿಸಿದ್ದ ಮಹಿಳಾ ಕಾನೂನುಗಳ ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರ ಗೌರವ, ಸುರಕ್ಷತೆ ಹಾಗೂ ಸಮಾನತೆಯನ್ನು ಕಾಪಾಡುವಲ್ಲಿ ಕಾನೂನು ಪ್ರಮುಖ ಪಾತ್ರ ವಹಿಸುತ್ತಿದ್ದು, ಶಿಕ್ಷಣ, ಉದ್ಯೋಗ, ಆಸ್ತಿ, ಮದುವೆ ಹಾಗೂ ವಿಚ್ಛೇದನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಹಕ್ಕುಗಳನ್ನು ಕಾನೂನು ಸ್ಪಷ್ಟವಾಗಿ ಗುರುತಿಸಿದೆ ಎಂದು ಹೇಳಿದರು.

ಗೃಹಹಿಂಸೆ ತಡೆ ಕಾಯ್ದೆ-2005, ಲೈಂಗಿಕ ಕಿರುಕುಳ ತಡೆ ಕಾಯ್ದೆ-2013, ಸಮಾನ ವೇತನ ಕಾಯ್ದೆ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆ ಸೇರಿದಂತೆ ವಿವಿಧ ಕಾನೂನುಗಳ ಕುರಿತು ಸವಿಸ್ತಾರ ಮಾಹಿತಿ ನೀಡಿದರು. ಅನ್ಯಾಯ ಸಂಭವಿಸಿದಾಗ ಪೊಲೀಸ್ ಠಾಣೆ, ನ್ಯಾಯಾಲಯ, ಮಹಿಳಾ ಆಯೋಗ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಮೂಲಕ ನ್ಯಾಯ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆ ರೇಣುಕಾ ಗೌಡರ, ಸೇವಾ ಪ್ರತಿನಿಧಿ ಕವಿತಾ ಕೋಟಗಿ, ಸಮನ್ವಯಾಧಿಕಾರಿ ಲಕ್ಷ್ಮೀ, ಸದಸ್ಯರಾದ ರೇಖಾ ಎಲಿಗಾರ, ಅನ್ನಪೂರ್ಣ ಕಂಬಳಿ, ಗಂಗಮ್ಮ, ಲಾಲಬಿ ತಾಳಿಕೋಟಿ, ವಿಜಯಲಕ್ಷ್ಮಿ, ಜಯಶ್ರೀ, ಪಾರಮ್ಮ ಬೊಯಿಟೆ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಣ್ಣು ಉಳಿದರೆ ಕೃಷಿ ಉಳಿಯುತ್ತದೆ: ಚೇತನಾ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ರೋಣ: ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದ್ದು, ರೈತರು ಮಣ್ಣಿನ ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಹೆಚ್ಚಿನ ಒಲವು ತೋರಬೇಕು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಹೇಳಿದರು.

ಸಮೀಪದ ಮಾರನಬಸರಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಕೃಷಿ ಇಲಾಖೆ ಗದಗ, ರೋಣ ಹಾಗೂ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಖೇತ್ ಬಚಾವೋ ಅಭಿಯಾನ’ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗುತ್ತಿದ್ದು, ಇದು ಮಣ್ಣಿನ ಫಲವತ್ತತೆ ಮಾತ್ರವಲ್ಲದೆ ಮಾನವ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಉತ್ತಮ ಇಳುವರಿ ಪಡೆಯಲು ಮಣ್ಣಿನ ಗುಣಮಟ್ಟ ಕಾಪಾಡುವುದು ಅತ್ಯಗತ್ಯ ಎಂದು ಹೇಳಿದರು.

ರೈತರು ಬಿತ್ತನೆಗೂ ಮುನ್ನ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಜಮೀನಿಗೆ ಸೂಕ್ತವಾದ ಬೆಳೆಗಳ ಆಯ್ಕೆ ಸಾಧ್ಯವಾಗುವುದರ ಜೊತೆಗೆ ಅನಗತ್ಯ ನಷ್ಟವನ್ನು ತಪ್ಪಿಸಬಹುದು ಎಂದು ತಿಳಿಸಿದರು.

ಮುಂಗಾರು ಹಂಗಾಮಿನ ಬೆಳೆಗಳ ಬಿತ್ತನೆ ಈಗಾಗಲೇ ನಡೆದಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ರೈತರು ಎಚ್ಚರಿಕೆಯಿಂದ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ವಿಶೇಷವಾಗಿ ಹೆಸರು ಬೆಳೆಗಳಲ್ಲಿ ಸದ್ಯಕ್ಕೆ ಎಡೆ ಹೊಡೆಯುವುದರಿಂದ ಮಣ್ಣಿನ ತೇವಾಂಶ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಅದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದರು.

ಬಿತ್ತನೆಗೂ ಮುನ್ನ ಬೀಜೋಪಚಾರ ಕಡ್ಡಾಯವಾಗಿ ಮಾಡಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಉತ್ತಮ ಮೊಳಕೆ ಮತ್ತು ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಯಪ್ರಕಾಶ ಪಾಟೀಲ, ರೈತರು ಆರಂಭದಲ್ಲಿ ಕನಿಷ್ಠ ಒಂದು ಎಕರೆ ಜಮೀನಿನಲ್ಲಿ ಸಾವಯವ ಗೊಬ್ಬರ ಬಳಸಿ ಅದರ ಪರಿಣಾಮವನ್ನು ಗಮನಿಸಬೇಕು. ಕೃಷಿ ಹೊಂಡಗಳ ನಿರ್ಮಾಣದ ಮೂಲಕ ಮಳೆನೀರನ್ನು ಸಂಗ್ರಹಿಸಿ, ನೀರಿನ ಸಮರ್ಪಕ ಬಳಕೆ ಹಾಗೂ ಬೆಳೆ ಆಯ್ಕೆಯಲ್ಲಿ ಕೃಷಿ ಇಲಾಖೆಯ ಸಲಹೆ ಪಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಂದಾನಗೌಡ ಪಾಟೀಲ ವಹಿಸಿದ್ದರು. ವಿವಿಧ ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈತರು ಉಪಸ್ಥಿತರಿದ್ದರು.

“ಮಣ್ಣಿನ ಫಲವತ್ತತೆ ಉಳಿಸಿಕೊಳ್ಳುವುದು ರೈತರ ಮೊದಲ ಕರ್ತವ್ಯ. ಬಿತ್ತನೆಗೂ ಮುನ್ನ ಬೀಜೋಪಚಾರ ಮಾಡಿ, ಸದ್ಯಕ್ಕೆ ಎಡೆ ಹೊಡೆಯುವುದನ್ನು ತಪ್ಪಿಸಿ. ಸಾವಯವ ಗೊಬ್ಬರ ಬಳಕೆಯಿಂದಲೇ ಭೂಮಿಯ ಆರೋಗ್ಯ ಕಾಪಾಡಲು ಸಾಧ್ಯ.”

– ಚೇತನಾ ಪಾಟೀಲ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ

ಜಿ.ಎಸ್. ಪಾಟೀಲ ಸಚಿವರಾಗ್ತಾರಾ?

0

ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಕ್ಷೇತ್ರದ ಶಾಸಕ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ದೊರೆಯಬಹುದೇ? ಎಂಬ ಪ್ರಶ್ನೆ ಇದೀಗ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರೋಣ ಕ್ಷೇತ್ರಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕು ಎಂಬ ಆಗ್ರಹದ ಹಿನ್ನೆಲೆಯಲ್ಲಿ ನಡೆದ ಹೋರಾಟಗಳು ಹಾಗೂ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಈ ಚರ್ಚೆಗೆ ಮತ್ತಷ್ಟು ಬಲ ತುಂಬಿವೆ.

ಬಲ್ಲ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ, ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಸಲ್ಲಿಸಿರುವ ಮನವಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ವಿಷಯವನ್ನು ಪಕ್ಷದ ಉನ್ನತ ಮಟ್ಟದ ನಾಯಕರ ಗಮನಕ್ಕೆ ತರುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ರೋಣ ಕ್ಷೇತ್ರಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಕಾರ್ಯಕರ್ತರು ತುಮಕೂರಿನ ಸಿದ್ದಗಂಗಾ ಮಠದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿ ತಮ್ಮ ಬೇಡಿಕೆಯನ್ನು ಪಕ್ಷದ ನಾಯಕರ ಮುಂದಿಟ್ಟಿದ್ದರು. ಇದಕ್ಕೂ ಮುನ್ನ ಕ್ಷೇತ್ರದಲ್ಲಿ ಉರುಳು ಸೇವೆ, ದೀಡ ನಮಸ್ಕಾರ, ಪ್ರತಿಭಟನೆ, ದೇವಸ್ಥಾನ ಹಾಗೂ ಮಸೀದಿಗಳಲ್ಲಿ ವಿಶೇಷ ಪೂಜೆ ಸೇರಿದಂತೆ ವಿವಿಧ ರೀತಿಯ ಹೋರಾಟಗಳು ನಡೆದಿದ್ದವು.

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಿ.ಎಸ್. ಪಾಟೀಲರು ಕಾಂಗ್ರೆಸ್ ಪಕ್ಷದ ಸಂಘಟನೆಗೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂಬುದು ಕಾರ್ಯಕರ್ತರ ಪ್ರಮುಖ ಆಗ್ರಹವಾಗಿದೆ. ಕಳೆದ ವಿಧಾನಸಭೆ ಚುನಾವಣೆಯ ನಂತರದಿಂದಲೇ ಈ ಬೇಡಿಕೆ ನಿರಂತರವಾಗಿ ಕೇಳಿಬರುತ್ತಿದೆ.

ಬಲ್ಲ ಮೂಲಗಳ ಪ್ರಕಾರ, ಕೆಪಿಸಿಸಿ ಕಚೇರಿಯಲ್ಲಿ ನಡೆದ ಭೇಟಿಯ ವೇಳೆ ಕಾರ್ಯಕರ್ತರ ಮನವಿಯನ್ನು ಆಲಿಸಿದ ನಾಯಕರು, ಜಿ.ಎಸ್. ಪಾಟೀಲರ ಸಂಘಟನಾ ಅನುಭವ ಹಾಗೂ ಪಕ್ಷದ ಮೇಲಿನ ನಿಷ್ಠೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಸಚಿವ ಸಂಪುಟ ವಿಸ್ತರಣೆ ಹಾಗೂ ಸಚಿವ ಸ್ಥಾನ ಹಂಚಿಕೆ ಕುರಿತ ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ಕೈಗೊಳ್ಳಬೇಕಿರುವುದರಿಂದ ಅಧಿಕೃತ ಘೋಷಣೆ ಹೊರಬೀಳುವವರೆಗೂ ಕಾದು ನೋಡಬೇಕಾಗಿದೆ.

ಈ ಬೆಳವಣಿಗೆಯಿಂದ ಜಿ.ಎಸ್. ಪಾಟೀಲ ಬೆಂಬಲಿಗರಲ್ಲಿ ಹೊಸ ಆಶಾಭಾವನೆ ಮೂಡಿದ್ದು, ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ರೋಣ ಕ್ಷೇತ್ರಕ್ಕೆ ಪ್ರಾತಿನಿಧ್ಯ ದೊರೆಯುವ ನಿರೀಕ್ಷೆ ಹೆಚ್ಚಾಗಿದೆ. ರಾಜಕೀಯ ವಲಯದಲ್ಲೂ ಈ ಕುರಿತು ಚರ್ಚೆಗಳು ಜೋರಾಗಿವೆ.

ಹೈಕಮಾಂಡ್ ಅಂಗಳದಲ್ಲಿ ಚರ್ಚೆ?

“ರೋಣ ಕ್ಷೇತ್ರಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಬೇಕು ಎಂಬುದು ಕಾರ್ಯಕರ್ತರ ಒಕ್ಕೊರಲಿನ ಆಗ್ರಹ. ಈ ಬೇಡಿಕೆಗೆ ಕಾಂಗ್ರೆಸ್ ವರಿಷ್ಠರಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.”