Home Blog Page 83

ಖಮೇನಿ ಹತ್ಯೆ ಕುರಿತ ಪೋಸ್ಟ್: ಶ್ರೀನಗರ ಸಂಸದ ವಿರುದ್ಧ ಎಫ್‌ಐಆರ್

ಶ್ರೀನಗರ: ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಮತ್ತು ಸಂಬಂಧಿತ ಪ್ರತಿಭಟನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಅಗಾ ಸೈಯದ್ ರುಹುಲ್ಲಾ ಮೆಹದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಸಂಸದರು ಡಿಜಿಟಲ್ ವೇದಿಕೆಗಳಲ್ಲಿ ದಾರಿತಪ್ಪಿಸುವ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಪ್ರಚೋದನೆ ನೀಡುವ ವಿಷಯಗಳನ್ನು ಹಂಚಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿ ಮತ್ತು ಖಮೇನಿ ಹತ್ಯೆ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ಟೀಕಿಸುವ ಪೋಸ್ಟ್‌ಗಳನ್ನು ಅವರು ಹಂಚಿಕೊಂಡಿದ್ದರು. ಕಾಶ್ಮೀರದಲ್ಲಿ ನಡೆದ ಪ್ರತಿಭಟನೆಗಳು ಹಾಗೂ ಭದ್ರತಾ ಸಿಬ್ಬಂದಿಯೊಂದಿಗಿನ ಘರ್ಷಣೆಯ ವೀಡಿಯೊಗಳನ್ನು ಸಹ ಅಪ್‌ಲೋಡ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ನಗರದ ಮಾಜಿ ಮೇಯರ್ ಜುನೈದ್ ಅಜೀಮ್ ಮಾಟೂ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ. ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಉದ್ದೇಶಪೂರ್ವಕ ತಪ್ಪು ಮಾಹಿತಿಯನ್ನು ಹರಡಲಾಗಿದೆ ಎಂಬ ಆರೋಪದಡಿ ಕ್ರಮ ಕೈಗೊಳ್ಳಲಾಗಿದೆ.

ಕುಟುಂಬ ಕಲಹ: ಕಾವೇರಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ!

0

ಚಾಮರಾಜನಗರ: ಕಾವೇರಿ ನದಿಗೆ ಹಾರಿ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಸಮೀಪ ನಡೆದಿದೆ.

ಮೃತರನ್ನು ರಶ್ಮಿ (39) ಎಂದು ಗುರುತಿಸಲಾಗಿದೆ. ಇವರು ಪತಿ ಲೋಕೇಶ್ ಹಾಗೂ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಕುಟುಂಬ ಕಲಹ ಹಿನ್ನೆಲೆ ಬೇಸರಗೊಂಡು ವೆಸ್ಲಿ ಸೇತುವೆಯಿಂದ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ನದಿಯಿಂದ ಮೇಲೆತ್ತಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಹಾಡು ಹಗಲಲ್ಲೇ 59 ಲಕ್ಷ ರೂ. ಮೌಲ್ಯದ ಬೆಳ್ಳಿ ಕಳ್ಳತನ: ಸಿಬ್ಬಂದಿಯಿಂದಲೇ ಕೃತ್ಯದ ಶಂಕೆ!

0

ಹುಬ್ಬಳ್ಳಿ: ನಗರದ ಹೃದಯಭಾಗವಾದ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಹಗಲಿನಲ್ಲಿ ನಡೆದ ಕಳವು ಪ್ರಕರಣ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಸುಮಾರು 59 ಲಕ್ಷ ರೂಪಾಯಿ ಮೌಲ್ಯದ 24 ಕೆಜಿ ಬೆಳ್ಳಿ ಆಭರಣಗಳು ಕಳುವಾಗಿರುವುದಾಗಿ ವರದಿಯಾಗಿದೆ.

ಬೆಂಗಳೂರು ಮೂಲದ ವ್ಯಾಪಾರಿ ಆಶಿಷ್ ಕುಮಾರ್ ತಮ್ಮದೇ ಕಾರಿನಲ್ಲಿ ಒಟ್ಟು 29 ಕೆಜಿ ಬೆಳ್ಳಿ ಆಭರಣಗಳನ್ನು ಮಾರಾಟ ಉದ್ದೇಶದಿಂದ ಒಪ್ಪಿಸಿದ್ದರು. ಆರೋಪಿಗಳಾದ ಅಮೀತ್ ಪುರೋಹಿತ್ ಹಾಗೂ ಯೋಗೀಶ್ ಸಿಂಗ್ ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಭಾಗಶಃ ಮಾರಾಟ ನಡೆಸಿದ ಬಳಿಕ ಉಳಿದ ಆಭರಣಗಳನ್ನು ಹುಬ್ಬಳ್ಳಿಯಲ್ಲಿ ಮಾರಾಟ ಮಾಡಲು ಬಂದಿದ್ದರು.

ಘಟನೆಯ ದಿನ ಕಾರನ್ನು ಲ್ಯಾಮಿಂಗ್ಟನ್ ರಸ್ತೆಯಲ್ಲಿ ನಿಲ್ಲಿಸಿ ಅಂಗಡಿಗೆ ತೆರಳಿದ ವೇಳೆ, ಕಾರಿನಲ್ಲಿ ಇರಿಸಿದ್ದ ಎರಡು ಬ್ಯಾಗ್‌ಗಳ ಮೇಲೆ ಯೋಗೀಶ್ ಸಿಂಗ್ ಕಣ್ಣುಹಾಯಿಸಿದ್ದಾನೆ. ಕಾರಿನ ಕೀಲಿಯನ್ನು ತನ್ನ ವಶಕ್ಕೆ ಪಡೆದು, ವಾಹನವನ್ನು ಲಾಕ್ ಮಾಡಿ, ಬ್ಯಾಗ್‌ಗಳೊಂದಿಗೆ ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಕರ್ನಾಟಕ ಪೊಲೀಸ್ ಇಲಾಖೆ ತನಿಖೆ ಕೈಗೊಂಡಿದ್ದು, ಆರೋಪಿಯ ಚಲನವಲನಗಳ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ವಾಣಿಜ್ಯ, ಕೈಗಾರಿಕಾ ವಲಯಕ್ಕೆ ವಿದ್ಯುತ್​​ ದರ ಏರಿಕೆ ಶಾಕ್ ಕೊಟ್ಟ KERC!

ಬೆಂಗಳೂರು: ವಾಣಿಜ್ಯ ಹಾಗೂ ಕೈಗಾರಿಕಾ ವಲಯಕ್ಕೆ ಕೆಇಆರ್‌ಸಿ ಶಾಕ್ ನೀಡಿದ್ದು, 2025-26ನೇ ಆರ್ಥಿಕ ವರ್ಷಕ್ಕೆ ಅನ್ವಯಿಸುವಂತೆ ವಿದ್ಯುತ್ ದರ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಈ ನಿರ್ಧಾರವನ್ನು ಖಂಡಿಸಿ ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯೋದ್ಯಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ದರ ಏರಿಕೆ ಕುರಿತು ಫೆಬ್ರವರಿ 20ರಂದು ಸಾರ್ವಜನಿಕರೊಂದಿಗೆ ಚರ್ಚೆ ನಡೆದಿತ್ತು. ಆ ವೇಳೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದರ ಹೆಚ್ಚಳ ಮಾಡಲ್ಲವೆಂದು ಕೆಇಆರ್‌ಸಿ ಭರವಸೆ ನೀಡಿತ್ತು ಎನ್ನಲಾಗಿದೆ. ಆದರೆ ಇದೀಗ ಆಯೋಗ ಯು-ಟರ್ನ್ ತೆಗೆದುಕೊಂಡಿರುವುದು ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.

ಯೂನಿಟ್‌ಗೆ ಪರಿಷ್ಕೃತ ದರಗಳು ಹೀಗಿವೆ:

  • LT-3(A) ವಾಣಿಜ್ಯ ಬಳಕೆ: ₹7ರಿಂದ ₹7.10ಕ್ಕೆ ಏರಿಕೆ

  • LT-5 ಕೈಗಾರಿಕಾ ಬಳಕೆ: ₹4.50ರಿಂದ ₹5.20ಕ್ಕೆ ಏರಿಕೆ

  • HT-2(A) ಮೆಟ್ರೋ, ರೈಲ್ವೆ ಮತ್ತು ಇತರೆ: ₹6.60ರಿಂದ ₹6.70ಕ್ಕೆ ಏರಿಕೆ

  • HT-2(B) ಕಾಂಪ್ಲೆಕ್ಸ್, ಥಿಯೇಟರ್, ಹೋಟೆಲ್ ಬಳಕೆ: ₹5.95ರಿಂದ ₹6.90ಕ್ಕೆ ಏರಿಕೆ

ದರ ಏರಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಳವಾಗಲಿದೆ ಎಂದು ಕೈಗಾರಿಕಾ ವಲಯ ಎಚ್ಚರಿಸಿದೆ. ಸರ್ಕಾರ ಮತ್ತು ಆಯೋಗವು ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಉದ್ಯಮಿಗಳು ಆಗ್ರಹಿಸಿದ್ದಾರೆ.

ಹಾಸನದಲ್ಲಿ ಘೋರ ದುರಂತ: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ – ವಿದ್ಯಾರ್ಥಿಗಳ ಎದುರೇ ಶಿಕ್ಷಕ ಸಾವು!

ಹಾಸನ: ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಮೃತಪಟ್ಟ ದುರ್ಘಟನೆ ಅರಕಲಗೂಡು ತಾಲೂಕಿನ ಕೆಬ್ಬೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಕೇರಳಾಪುರ ಗ್ರಾಮದ ಸತೀಶ್ (53) ಎಂದು ಗುರುತಿಸಲಾಗಿದೆ. ಅವರು ಕೆಬ್ಬೆಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪಾಠ ಹೇಳುತ್ತಿದ್ದ ವೇಳೆ ಸತೀಶ್ ಏಕಾಏಕಿ ಅಸ್ವಸ್ಥಗೊಂಡು ತರಗತಿ ಕೊಠಡಿಯಲ್ಲೇ ಕುಸಿದು ಬಿದ್ದಿದ್ದಾರೆ.

ಘಟನೆ ಗಮನಿಸಿದ ವಿದ್ಯಾರ್ಥಿಗಳು ಹಾಗೂ ಸಹ ಶಿಕ್ಷಕರು ತಕ್ಷಣವೇ ನೆರವಿಗೆ ಧಾವಿಸಿ ಅಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ತೀವ್ರ ಹೃದಯಾಘಾತದಿಂದಾಗಿ ಅವರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಶಿಕ್ಷಕರ ಅಕಾಲಿಕ ನಿಧನದಿಂದ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ, ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ.

ಬೇಡಿದ ವರ ಕೊಡುವ  “ಮುಳ್ಳ ಅಗಸಿ”ಯ ಕಾಮ-ರತಿ ಮೂರ್ತಿ ಪ್ರತಿಷ್ಠಾಪನೆ: 173ನೇ ವರ್ಷದ ಧಾರ್ಮಿಕ ಸಂಭ್ರಮ

0

ಗದಗ: ನಗರದ ಬಸವೇಶ್ವರ ದೇವಸ್ಥಾನದಲ್ಲಿ “ ಬೇಡಿದ ವರ ಕೊಡುವ ಕಾಮಣ್ಣ” ಎಂದೇ ಪ್ರಸಿದ್ಧಿಯಾಗಿರುವ ಮುಳ್ಳ ಅಗಸಿಯ 173ನೇ ವರ್ಷದ ಕಾಮ–ರತಿ ಮೂರ್ತಿ ಪ್ರತಿಷ್ಠಾಪನೆ ಮಂಗಳವಾರ ಭಕ್ತಿ ಭಾವದಿಂದ ಹಾಗೂ ವಿಜೃಂಭಣೆಯಿಂದ ನೆರವೇರಿತು.

ಪ್ರತಿಷ್ಠಾಪನೆ ಅಂಗವಾಗಿ ಬೆಳಗ್ಗೆಯಿಂದಲೇ ದೇವಸ್ಥಾನ ಆವರಣದಲ್ಲಿ ಭಕ್ತರ ಸಂಭ್ರಮ ಮನೆಮಾಡಿತ್ತು. ಹರ್ಷೋದ್ಗಾರಗಳ ನಡುವೆ ಕಾಮ–ರತಿ ಮೂರ್ತಿಗಳನ್ನು ಭವ್ಯ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ವಿವಿಧ ವಾದ್ಯಗೋಷ್ಠಿಗಳ ನಾದ, ಭಕ್ತರ ಜಯಘೋಷಗಳ ಮಧ್ಯೆ ಮೂರ್ತಿಗಳು ದೇವಸ್ಥಾನಕ್ಕೆ ಆಗಮಿಸಿದವು.

“ಬೇಡಿದ ವರ ಕೊಡುವ ಕಾಮಣ್ಣ” ಎಂಬ ಖ್ಯಾತಿಗೆ ಪಾತ್ರವಾಗಿರುವ ಮುಳ್ಳ ಅಗಸಿಯ ಕಾಮಣ್ಣನಿಗೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಸ್ಥಳೀಯರ ಜೊತೆಗೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತರು ಆಗಮಿಸಿ ಹರಕೆ ಸಲ್ಲಿಸಿದರು.

ಮೂರ್ತಿಗಳಿಗೆ ವಿಭಿನ್ನ ಬಗೆಯ ಹೂಗಳಿಂದ ತೋರಣ ಅಲಂಕಾರ, ದೀಪಾಲಂಕಾರ ಹಾಗೂ ಆಕರ್ಷಕ ವಸ್ತ್ರಾಭರಣಗಳಿಂದ ವಿಶೇಷ ಸಿಂಗಾರ ಮಾಡಲಾಗಿತ್ತು. ವೇದ ಮಂತ್ರೋಚ್ಚಾರಣೆಯ ಮಧ್ಯೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಮತ್ತು ವಿವಿಧ ನಿವೇದನಗಳನ್ನು ಅರ್ಪಿಸಿ ಪ್ರತಿಷ್ಠಾಪನೆ ವಿಧಿವಿಧಾನಗಳು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ನಿಂಗಪ್ಪ ಪಡಗದ, ವೀರನಗೌಡ ಮರಿಗೌಡರ, ತೋಟಯ್ಯ ವಿಭೂತಿಮಠ, ಸಿದ್ದರಾಮಪ್ಪ ಹುಂಬಿ, ಮಂಜುನಾಥ ಲಕ್ಕುಂಡಿ, ಎಫ್.ವಿ. ಮರಿಗೌಡ್ರ, ಪ್ರಶಾಂತ ಶಾಬಾದಿಮಠ, ಸೋಮಪ್ಪ ಪುರದ, ಶಂಕರ ಕರಬಿಷ್ಠಿ, ರಮೇಶ ಸಂಕಣ್ಣವರ, ಸಿದ್ಧಲಿಂಗೇಶ ಸಂಗನಾಳ, ಪ್ರಶಾಂತ ಮುದೇಗೊಣ್ಣವರ,

ಗಂಗಾಧರ ಕೊಪ್ಪದ, ಸಿದ್ಧಲಿಂಗೇಶ ಗಾಣಿಗೇರ, ಸದಾಶಿವಯ್ಯ ಹಿರೇಮಠ, ಸಿದ್ದಲಿಂಗಗೌಡ ಉಮಚಗಿ, ಪ್ರಭು ಕಲಬಂಡಿ, ಬಸವರಾಜ ಕಬನೂರ, ಶಿವಾನಂದ ಹೂಗಾರ, ಮಂಜುನಾಥ ಲಕ್ಷಟ್ಟಿ, ಪ್ರಶಾಂತ ನೆರೇಗಲ್ಲ, ಮಂಜು ಪುರದ, ವೀರೇಶ ಸಾಲಿಮಠ, ಕಳಕಪ್ಪ ನವಲಗುಂದ, ರಾಚಪ್ಪ ಲಕ್ಕುಂಡಿ, ಈರಣ್ಣ ಗಡಗಿ, ರಾಚಪ್ಪ ಹುಂಬಿ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.

ಪರೀಕ್ಷೆಗೆ ಹೆದರಿ ಮನೆ ಬಿಟ್ಟ ಪಿಯು ವಿದ್ಯಾರ್ಥಿನಿಯರು!? ಆತಂಕದಲ್ಲಿ ಕುಟುಂಬಸ್ಥರು

ಬೆಂಗಳೂರು: ರಾಜ್ಯದಲ್ಲಿ ಪಿಯುಸಿ ಪರೀಕ್ಷೆಗಳು ನಡೆಯುತ್ತಿರುವ ಬೆನ್ನಲ್ಲೇ ಇಬ್ಬರು ಪಿಯು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿ 31ರಂದು 2ನೇ ಪಿಯು ವಿದ್ಯಾರ್ಥಿನಿ ತನಿಷ್ಕಾ ಹಾಗೂ 1ನೇ ಪಿಯು ವಿದ್ಯಾರ್ಥಿನಿ ತೇಜಸ್ವಿನಿ ಕಾಣೆಯಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪರೀಕ್ಷೆ ಸಮೀಪಿಸುತ್ತಿದ್ದ ಹಿನ್ನೆಲೆ ಪರೀಕ್ಷಾ ಭಯದಿಂದ ಹಿರಿಯ ವಿದ್ಯಾರ್ಥಿನಿ ತನ್ನ ಕಿರಿಯ ಸ್ನೇಹಿತೆಯನ್ನು ಕರೆದುಕೊಂಡು ಮನೆ ಬಿಟ್ಟು ತೆರಳಿರುವ ಶಂಕೆ ವ್ಯಕ್ತವಾಗಿದೆ. ಕಳೆದ ವರ್ಷ ಪರೀಕ್ಷೆ ತಪ್ಪಿಸಿಕೊಳ್ಳಲು ತನಿಷ್ಕಾ ತನ್ನ ಕೈಗೆ ಗಾಯ ಮಾಡಿಕೊಂಡಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಪರೀಕ್ಷೆ ಬರೆಯಲು ಇಚ್ಛಿಸದೆ ಮನೆ ತೊರೆದಿರಬಹುದೆಂದು ಕುಟುಂಬಸ್ಥರು ಹಾಗೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಾಣೆಯಾಗಿರುವ ಇಬ್ಬರೂ ತಮ್ಮ ಮೊಬೈಲ್ ಫೋನ್‌ಗಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದು, ಎಟಿಎಂ ಕಾರ್ಡ್ ಸೇರಿದಂತೆ ಯಾವುದೇ ಹಣಕಾಸು ಸಾಮಗ್ರಿಗಳನ್ನು ಕೊಂಡೊಯ್ದಿಲ್ಲ ಎಂದು ತಿಳಿದುಬಂದಿದೆ. ಆಧಾರ್ ಕಾರ್ಡ್ ಹಾಗೂ ಕಾಲೇಜು ಬ್ಯಾಗ್ ಮಾತ್ರ ತೆಗೆದುಕೊಂಡು ನಾಪತ್ತೆಯಾಗಿರುವ ಇವರು, ಉಚಿತ ಬಸ್ ಪ್ರಯಾಣ ಸೌಲಭ್ಯ ಬಳಸಿಕೊಂಡಿರುವ ಶಂಕೆಯೂ ವ್ಯಕ್ತವಾಗಿದೆ.

ಕೆಲವು ದಿನಗಳ ಹಿಂದೆ ಸ್ನೇಹಿತರಿಗೆ ಕರೆ ಮಾಡಿ ಮಲೆ ಮಹದೇಶ್ವರ ಬೆಟ್ಟದಲ್ಲಿದ್ದೇವೆ ಎಂದು ತಿಳಿಸಿದ್ದರೆಂದು ಹೇಳಲಾಗಿದೆ. ಒಂದು ವಾರದಲ್ಲಿ ಮತ್ತೆ ಸಂಪರ್ಕಿಸುವುದಾಗಿ ತಿಳಿಸಿದ್ದರೂ, ನಂತರ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಈ ಸಂಬಂಧ ಪೊಲೀಸರು 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಒಂದು ವಾರದ ಗಡುವು ನೀಡಿದೆ ಎಂದು ತಿಳಿದುಬಂದಿದೆ. ಒಂದು ತಿಂಗಳಿನಿಂದ ಮಕ್ಕಳಿಗಾಗಿ ಕಣ್ಣೀರಿಡುತ್ತಿರುವ ಕುಟುಂಬಸ್ಥರು, ಸುರಕ್ಷಿತವಾಗಿ ಮನೆಗೆ ಮರಳುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

Ind Vs Eng: ಭಾರತ–ಇಂಗ್ಲೆಂಡ್ ಸೆಮಿಫೈನಲ್‌ ಗೂ ಮುನ್ನ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ!?

0

ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳ ಗಮನ ಇದೀಗ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಮಹಾಕದನದ ಮೇಲೆ ನೆಟ್ಟಿದೆ. ಮಾರ್ಚ್ 5ರಂದು ನಡೆಯಲಿರುವ ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಪಾಳಯದಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ.

ಇಂದು ಕೋಲ್ಕತ್ತಾದ ಈಡನ್‌ ಗಾರ್ಡನ್‌ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಮೊದಲ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ನಡುವೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಕುರಿತಂತೆ ಚರ್ಚೆಗಳು ಜೋರಾಗಿದೆ.

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕಾಗಿ ಭಾರತ ತನ್ನ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲು ಸಜ್ಜಾಗಿದೆ. ಇಷ್ಟು ದಿನ ಮಿಸ್ಟರಿ ಸ್ಪಿನ್ನರ್ ಆಗಿ ಕಾಣಿಸಿಕೊಂಡಿದ್ದ ವರುಣ್ ಚಕ್ರವರ್ತಿ ಬದಲಿಗೆ ಅನುಭವಿ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಂಗ್ಲೆಂಡ್ ಬ್ಯಾಟರ್‌ಗಳು ವೇಗದ ಬೌಲಿಂಗ್‌ಗಿಂತ ಸ್ಪಿನ್ ಎದುರಿಸಲು ಹೆಚ್ಚು ಕಷ್ಟಪಡುತ್ತಾರೆ ಎಂಬುದು ಹಿಂದಿನ ದಾಖಲೆಯಿಂದ ಸ್ಪಷ್ಟವಾಗಿದೆ. ವಿಶೇಷವಾಗಿ ಕುಲದೀಪ್ ಅವರ ಗೂಗ್ಲಿ ಹಾಗೂ ಲೂಪ್ ಎಸೆತಗಳು ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಮತ್ತು ಜೋಸ್ ಬಟ್ಲರ್‌ರಿಗೆ ಸವಾಲಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಟಿ20 ವಿಶ್ವಕಪ್‌ನ ಕಳೆದ ಆವೃತ್ತಿಗಳಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಗಳು ಸಾಕಷ್ಟು ರೋಚಕತೆ ಮೂಡಿಸಿವೆ. 2022ರ ಟೂರ್ನಿಯಲ್ಲಿ ಇಂಗ್ಲೆಂಡ್ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು. 2024ರಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ್ನು ಮಣಿಸಿ, ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಟ್ರೋಫಿ ಜಯಿಸಿತ್ತು.

ಇದೀಗ ಮತ್ತೊಮ್ಮೆ ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದು, ಪಂದ್ಯಕ್ಕೂ ಮುನ್ನ ಕುತೂಹಲ ಹೆಚ್ಚಾಗಿದೆ. ಭಾರತ ಸ್ಪಿನ್ ಅಸ್ತ್ರದ ಮೂಲಕ ಆಂಗ್ಲರ ಪಡೆಯನ್ನು ಕಟ್ಟಿಹಾಕಲು ಯತ್ನಿಸುತ್ತಿದ್ದರೆ, ಇಂಗ್ಲೆಂಡ್ ತಿರುಗೇಟು ನೀಡಲು ಸಜ್ಜಾಗಿದೆ. ಕ್ರಿಕೆಟ್ ಅಭಿಮಾನಿಗಳು ಈ ಮಹತ್ವದ ಕದನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

 

ಅಮೆರಿಕಾ–ಇರಾನ್ ಸಂಘರ್ಷದ ನಡುವೆಯೂ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ!

ಬೆಂಗಳೂರು: ಅಮೆರಿಕಾ–ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ತೀವ್ರ ಏರಿಳಿಕೆ ಕಂಡುಬರುತ್ತಿದೆ. ಮಂಗಳವಾರ 10 ಗ್ರಾಂ ಚಿನ್ನದ ಬೆಲೆ 1.70 ಲಕ್ಷ ರೂ. ತಲುಪಿದ್ದರೆ, ಬುಧವಾರ ಅದು 1.64 ಲಕ್ಷ ರೂ. ಮಟ್ಟಕ್ಕೆ ಇಳಿಕೆಯಾಗಿದೆ.

ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 3,110 ರೂ. ಇಳಿಕೆಯಾಗಿದ್ದು, 1,64,510 ರೂ. ಆಗಿದೆ. 1 ಗ್ರಾಂ ಚಿನ್ನದ ದರ 311 ರೂ. ಕುಸಿದು 16,451 ರೂ. ದಾಖಲಾಗಿದೆ.

ಇದೇ ವೇಳೆ 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 285 ರೂ. ಇಳಿಕೆಯಾಗಿದ್ದು 15,080 ರೂ. ಆಗಿದೆ. 10 ಗ್ರಾಂ ದರ 1,50,800 ರೂ.ಗೆ ತಲುಪಿದೆ.

ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ ಕಂಡುಬಂದಿದೆ. ಬೆಳ್ಳಿ ದರದಲ್ಲಿ 10,000 ರೂ. ಕುಸಿತವಾಗಿದ್ದು, ಪ್ರಸ್ತುತ 2,85,000 ರೂ. ದಾಖಲಾಗಿದೆ. ಒಟ್ಟಾರೆ ಬೆಳ್ಳಿ ಬೆಲೆಯಲ್ಲಿ ಶೇಕಡಾ 11ರಷ್ಟು ಇಳಿಕೆ ಕಂಡುಬಂದಿದೆ.

ಅಮೆರಿಕನ್ ಡಾಲರ್ ಮೌಲ್ಯ ಬಲಗೊಂಡಿರುವುದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕುಸಿದಿವೆ. ಡಾಲರ್ ಮೌಲ್ಯ ಏರಿಕೆಯಿಂದ ಇತರ ಕರೆನ್ಸಿ ಹೊಂದಿರುವ ದೇಶಗಳಿಗೆ ಡಾಲರ್ ಮುಖಬೆಲೆಯ ಸರಕುಗಳು ದುಬಾರಿಯಾಗುತ್ತವೆ. ಪರಿಣಾಮವಾಗಿ ಅಮೂಲ್ಯ ಲೋಹಗಳ ಹೊಸ ಖರೀದಿ ಪ್ರಮಾಣ ಕಡಿಮೆಯಾಗುತ್ತದೆ.

ಸಂಘರ್ಷದ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಚಿನ್ನವನ್ನು ‘ಸುರಕ್ಷಿತ ಹೂಡಿಕೆ’ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಬಾರಿ ಪ್ರಬಲ ಡಾಲರ್ ಮೌಲ್ಯವು ಸುರಕ್ಷಿತ ಹೂಡಿಕೆಗಳ ಮೇಲಿನ ಬೇಡಿಕೆಯನ್ನು ಹಿಂದಿಕ್ಕಿದ ಪರಿಣಾಮ ಚಿನ್ನ–ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.

Kolar: ಕಂಟೇನರ್ʼಗೆ ಕಾರು ಡಿಕ್ಕಿ: ಐವರು ಸ್ಥಳದಲ್ಲೇ ದುರ್ಮರಣ!

0

ಕೋಲಾರ: ಕಂಟೇನರ್ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು–ಗಂಗವರಂ ಸಮೀಪ ನಡೆದಿದೆ.

ಬೆಂಗಳೂರಿನಿಂದ ತಿರುಪತಿಗೆ ತೆರಳುತ್ತಿದ್ದ ಕಾರು, ಮುಂದಿನ ಕಂಟೇನರ್‌ಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ, ಒಳಗಿದ್ದ ಐವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪಲಮನೇರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಗುರುತು ಪತ್ತೆ ಹಾಗೂ ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರೆದಿದೆ.

error: Content is protected !!