Home Blog Page 84

ಮೋದಿ ವಿಡಿಯೋ ವಿವಾದಕ್ಕೆ ಜುಕರ್‌ಬರ್ಗ್ ಕ್ಷಮೆ: ‘ಸೇಫ್ ಹಾರ್ಬರ್’ ರದ್ದಿನ ಎಚ್ಚರಿಕೆ ಬಳಿಕ ಮೆಟಾ ಯೂ-ಟರ್ನ್

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್ ವಿಡಿಯೋ ತಾತ್ಕಾಲಿಕವಾಗಿ ತೆಗೆದುಹಾಕಿದ ವಿವಾದದ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಿದ್ದಾರೆ. ಮಕ್ಕಳ ಲೈಂಗಿಕ ಶೋಷಣೆ (CSAM) ಸಂಬಂಧಿತ ವಿಷಯ, ಡೀಪ್‌ಫೇಕ್ ಕಂಟೆಂಟ್ ಹಾಗೂ ಪ್ಲಾಟ್‌ಫಾರ್ಮ್ ನಿರ್ವಹಣೆಯ ಲೋಪದೋಷಗಳ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅವರು, ನಿರ್ದಿಷ್ಟ ವಿಷಯಗಳಿಗೆ ಹೆಚ್ಚಿನ ಪ್ರಚಾರ (Boost) ನೀಡಲು ಹಣ ಪಾವತಿಸಲಾಗಿರುವುದನ್ನೂ ಒಪ್ಪಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ವಿಡಿಯೋವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದ ಪ್ರಕರಣದ ಹಿನ್ನೆಲೆಯಲ್ಲಿ, ಮೂರು ದಿನಗಳೊಳಗೆ ಜುಕರ್‌ಬರ್ಗ್ ವೈಯಕ್ತಿಕವಾಗಿ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲವಾದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರ ಅಡಿಯಲ್ಲಿ ಮೆಟಾ ಪಡೆಯುತ್ತಿರುವ ‘ಸೇಫ್ ಹಾರ್ಬರ್’ ರಕ್ಷಣೆಯನ್ನು ಹಿಂಪಡೆಯಲು ಶಿಫಾರಸು ಮಾಡಲಾಗುವುದು ಎಂದು ಸಂಸದೀಯ ತಂತ್ರಜ್ಞಾನ ಸಮಿತಿ ಎಚ್ಚರಿಕೆ ನೀಡಿತ್ತು.

ಈ ಬೆಳವಣಿಗೆಯ ಬೆನ್ನಲ್ಲೇ ಜುಕರ್‌ಬರ್ಗ್ ಕ್ಷಮೆ ಕೇಳಿದ್ದು, ಪ್ಲಾಟ್‌ಫಾರ್ಮ್‌ನಲ್ಲಿ ಕಂಡುಬಂದ ದೋಷಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಸಂಸದೀಯ ತಂತ್ರಜ್ಞಾನ ಸಮಿತಿಯ ಅಧ್ಯಕ್ಷ ನಿಶಿಕಾಂತ್ ದುಬೆ, “ಕ್ಷಮೆಯಾಚನೆ ಮಾತ್ರ ಸಾಕಾಗುವುದಿಲ್ಲ. ತಪ್ಪಿಗೆ ಕಾರಣರಾದವರ ಜವಾಬ್ದಾರಿ ನಿಗದಿಯಾಗಬೇಕು” ಎಂದು ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಪ್ರಧಾನಿ ಮೋದಿ ನೀಡಿದ್ದ ಭಾಷಣದ ವಿಡಿಯೋ ಸುಮಾರು ಐದು ಗಂಟೆಗಳ ಕಾಲ ಫೇಸ್‌ಬುಕ್‌ನಲ್ಲಿ ಕಾಣಿಸದಿದ್ದರಿಂದ ಈ ವಿವಾದ ಆರಂಭವಾಗಿತ್ತು. ಬಳಿಕ ತಾಂತ್ರಿಕ ದೋಷದಿಂದ ವಿಡಿಯೋ ತೆಗೆದುಹಾಕಲಾಗಿತ್ತು ಹಾಗೂ ನಂತರ ಮರುಸ್ಥಾಪಿಸಲಾಗಿದೆ ಎಂದು ಮೆಟಾ ಸ್ಪಷ್ಟನೆ ನೀಡಿದ್ದರೂ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಸಂಸದೀಯ ಸಮಿತಿ ಆ ಸಮಜಾಯಿಷಿಯನ್ನು ತಿರಸ್ಕರಿಸಿತ್ತು.

ಸಂಸದೀಯ ಸಮಿತಿಯ ವಿಚಾರಣೆ ವೇಳೆ ಮೆಟಾ ಪ್ರತಿನಿಧಿಗಳಿಗೆ ತೀವ್ರ ಪ್ರಶ್ನೆಗಳ ಸುರಿಮಳೆಯಾಗಿತ್ತು. ಪ್ರಧಾನಿಯವರ ಅಧಿಕೃತ ವಿಡಿಯೋ ತೆಗೆದುಹಾಕಲು ಅನುಮತಿ ನೀಡಿದವರು ಯಾರು? ಆಕ್ಷೇಪಾರ್ಹ ವಿಷಯಗಳು ಉಳಿದಿರುವಾಗ ಅಧಿಕೃತ ವಿಡಿಯೋವನ್ನೇ ಏಕೆ ಅಳಿಸಲಾಯಿತು? ಆಲ್ಗರಿದಮ್ ತಾರತಮ್ಯದಿಂದ ಕೂಡಿದೆಯೇ? ಎಂಬ ಪ್ರಶ್ನೆಗಳನ್ನು ಸಮಿತಿ ಮುಂದಿಟ್ಟಿತ್ತು.

ಒಂದು ವೇಳೆ ಮೆಟಾದ ‘ಸೇಫ್ ಹಾರ್ಬರ್’ ರಕ್ಷಣೆ ರದ್ದಾದರೆ, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟವಾಗುವ ಅಕ್ರಮ ಅಥವಾ ಆಕ್ಷೇಪಾರ್ಹ ಪೋಸ್ಟ್‌ಗಳಿಗೆ ಮೆಟಾ ಅಧಿಕಾರಿಗಳೇ ನೇರ ಕಾನೂನು ಹೊಣೆಗಾರಿಕೆಯನ್ನು ಎದುರಿಸಬೇಕಾಗುತ್ತದೆ.

ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ರಾಜೀನಾಮೆ ನೀಡಿದ್ದ ಯಶವಂತರಾಯ ಗೌಡ ಪಾಟೀಲ್ ಯೂ-ಟರ್ನ್!

ವಿಜಯಪುರ: ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯ ಗೌಡ ಪಾಟೀಲ್ ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಕಾಂಗ್ರೆಸ್‌ನ ಹಿರಿಯ ಸಚಿವರು ಹಾಗೂ ಶಾಸಕರ ಮನವೊಲಿಕೆಯ ಬಳಿಕ ಅವರು ರಾಜೀನಾಮೆಯನ್ನು ಹಿಂಪಡೆಯಲು ಮುಂದಾಗಿದ್ದಾರೆ.

ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ಪಟ್ಟಿ ಪ್ರಕಟವಾದ ತಕ್ಷಣ ಅಸಮಾಧಾನಗೊಂಡಿದ್ದ ಯಶವಂತರಾಯ ಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ರಾಜೀನಾಮೆ ಪತ್ರವನ್ನು ಹಿಂಪಡೆಯಲು ವಿಧಾನಸಭೆ ಕಾರ್ಯದರ್ಶಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ.

ರಾಜೀನಾಮೆ ಸಲ್ಲಿಸಿದ ವೇಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ಕಾಂಗ್ರೆಸ್‌ನಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಬೆಲೆ ಇಲ್ಲ. 2023ರ ಚುನಾವಣೆಗೆ ಮುನ್ನ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದೀಗ ಆ ಭರವಸೆ ಉಳಿಸಿಕೊಳ್ಳಲಾಗಿಲ್ಲ ಎಂದು ಆರೋಪಿಸಿದ್ದರು.

ಅಲ್ಲದೆ, ಕಳೆದ ಬಾರಿ ನಿಗಮ-ಮಂಡಳಿ ಸ್ಥಾನ ನೀಡುವುದಾಗಿ ಹೇಳಿದರೂ ತಾವು ನಿರಾಕರಿಸಿದ್ದೆ. ಸ್ವಾತಂತ್ರ್ಯ ಬಂದ ನಂತರದಿಂದ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆತಿಲ್ಲ. ಹೀಗಾಗಿ ತಮ್ಮ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಹಾಗೂ ಶಾಸಕನಾಗಿ ಮುಂದುವರಿಯುವುದಿಲ್ಲ ಎಂದು ಹೇಳಿದ್ದರು. ಜಿಲ್ಲೆಯ ರಾಜಕಾರಣ ಬೀದಿಗೆ ಬಂದಿದೆ ಎಂದು ಕೂಡ ಕಿಡಿಕಾರಿದ್ದರು.

ಆದರೆ ಪಕ್ಷದ ಹಿರಿಯ ನಾಯಕರು ಹಾಗೂ ಶಾಸಕರು ನಡೆಸಿದ ನಿರಂತರ ಮಾತುಕತೆ ಮತ್ತು ಮನವೊಲಿಕೆಯ ನಂತರ ಯಶವಂತರಾಯ ಗೌಡ ಪಾಟೀಲ್ ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದು, ರಾಜೀನಾಮೆ ಹಿಂಪಡೆಯಲು ಮುಂದಾಗಿದ್ದಾರೆ.

ಇದೇ ವೇಳೆ, ಸಚಿವ ಸಂಪುಟ ವಿಸ್ತರಣೆಯ ಅಂಗವಾಗಿ ಈಗಾಗಲೇ 19 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಎಸ್ಟೀಮ್ ಮಾಲ್ʼನಿಂದ ಪಶುವೈದ್ಯಕೀಯ ಕಾಲೇಜುವರೆಗೆ ಸುರಂಗ ಮಾರ್ಗ; 893 ಮರಗಳ ಸ್ಥಳಾಂತರಕ್ಕೆ BDA ಯೋಜನೆ, ಪರಿಸರ ತಜ್ಞರಿಂದ ಎಚ್ಚರಿಕೆ

ಬೆಂಗಳೂರು: ಎಸ್ಟೀಮ್ ಮಾಲ್‌ನಿಂದ ಪಶುವೈದ್ಯಕೀಯ ಕಾಲೇಜುವರೆಗೆ ನಿರ್ಮಾಣವಾಗಲಿರುವ 2.2 ಕಿಲೋಮೀಟರ್ ಉದ್ದದ ಸುರಂಗ ಮಾರ್ಗ (ಟನಲ್) ಯೋಜನೆಯಿಂದ ಒಟ್ಟು 893 ಮರಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತಿಳಿಸಿದೆ. ಈ ಬೆಳವಣಿಗೆ ಉತ್ತರ ಬೆಂಗಳೂರಿನ ಪ್ರಮುಖ ಹಸಿರು ವಲಯದ ಭವಿಷ್ಯದ ಕುರಿತು ಪರಿಸರವಾದಿಗಳಲ್ಲಿ ಆತಂಕ ಮೂಡಿಸಿದೆ.

ಬಿಡಿಎ ಅಧಿಕಾರಿಗಳ ಮಾಹಿತಿ ಪ್ರಕಾರ, ಯೋಜನೆಯ ವ್ಯಾಪ್ತಿಗೆ ಬರುವ 893 ಮರಗಳಲ್ಲಿ ಸುಮಾರು 85 ಶೇಕಡಾ ಮರಗಳನ್ನು ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಈ ಮರಗಳನ್ನು ಬೆಂಗಳೂರು ಪಶುವೈದ್ಯಕೀಯ ವಿಶ್ವವಿದ್ಯಾಲಯದ ಆವರಣ ಹಾಗೂ ಬಿಡಿಎಗೆ ಸೇರಿದ ಇತರೆ ಜಾಗಗಳಿಗೆ ಸ್ಥಳಾಂತರಿಸುವ ಯೋಜನೆ ರೂಪಿಸಲಾಗಿದೆ.

ಆದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಸುದರ್ಶನ್ ಅವರು, ಈ ಸಂಬಂಧ ಬಿಡಿಎ ಇನ್ನೂ ಫಾರ್ಮ್–1 ಅಡಿಯಲ್ಲಿ ಸಂಪೂರ್ಣ ಅರ್ಜಿಯನ್ನು ಸಲ್ಲಿಸಿಲ್ಲ ಎಂದು ತಿಳಿಸಿದ್ದಾರೆ. ಅರ್ಜಿ ಸಲ್ಲಿಕೆಯಾದ ಬಳಿಕ ಅರಣ್ಯ ಇಲಾಖೆ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ವರದಿ ಆಧರಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತಾವಿತ ಸುರಂಗ ಮಾರ್ಗವು ಪಶುವೈದ್ಯಕೀಯ ಕಾಲೇಜು ಆವರಣ, ಹೆಬ್ಬಾಳ ಟ್ರೀ ಪಾರ್ಕ್, ಹೆಬ್ಬಾಳ ಕೆರೆಯ ಬಫರ್ ವಲಯ ಹಾಗೂ ಸುತ್ತಮುತ್ತಲಿನ ಶಿಕ್ಷಣ ಸಂಸ್ಥೆಗಳ ಆವರಣದ ಮೂಲಕ ಹಾದು ಹೋಗಲಿದೆ. ಈ ಪ್ರದೇಶಗಳು ನಗರದ ಜೀವ ವೈವಿಧ್ಯ ಸಂರಕ್ಷಣೆಗೆ ಅತ್ಯಂತ ಮಹತ್ವದ ಹಸಿರು ವಲಯಗಳಾಗಿದ್ದು, ಪಕ್ಷಿಗಳು, ಚಿಟ್ಟೆಗಳು ಹಾಗೂ ಇತರ ವನ್ಯಜೀವಿಗಳಿಗೆ ಆಶ್ರಯ ತಾಣಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಸ್ವತಂತ್ರ ಸಂಶೋಧಕ ಹಾಗೂ ಪರಿಸರ ಶಿಕ್ಷಣ ತಜ್ಞ ಹರೀಶ್ ಎ.ಎಸ್. ಅವರ ಪ್ರಕಾರ, ಈ ಹಸಿರು ಪ್ರದೇಶಗಳು ಸುಮಾರು 10 ಕಿಲೋಮೀಟರ್ ಉದ್ದದ ನೈಸರ್ಗಿಕ ಹಸಿರು ಸಂಪರ್ಕ ಮಾರ್ಗವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದವು. ಆದರೆ ನಿರಂತರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಂದ ಈ ಪರಿಸರ ಸಂಪರ್ಕ ಈಗಾಗಲೇ ದುರ್ಬಲಗೊಂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪರಿಸರ ಮತ್ತು ಪರಿಸರಶಾಸ್ತ್ರ ಸಂಶೋಧನಾ ಸಂಸ್ಥೆ ATREEಗೆ ಸಂಬಂಧಿಸಿದ ವಿಜ್ಞಾನಿ ಹಾಗೂ ಸಸ್ಯಶಾಸ್ತ್ರಜ್ಞ ಗಣೇಶನ್ ಅವರ ಪ್ರಕಾರ, ಪ್ರೌಢ ಮರಗಳ ಸ್ಥಳಾಂತರ ಅತ್ಯಂತ ಸಂಕೀರ್ಣ ಪ್ರಕ್ರಿಯೆಯಾಗಿದ್ದು, ವೈಜ್ಞಾನಿಕ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಯಶಸ್ಸು ಸಾಧ್ಯ.

ಜಾತಿ ಆಧಾರಿತ ಮೌಲ್ಯಮಾಪನ, ಬೇರುಗಳ ಪೂರ್ವಸಿದ್ಧತೆ ಹಾಗೂ ಹಲವು ತಿಂಗಳ ನಿರ್ವಹಣೆ ಸೇರಿದಂತೆ ಅಗತ್ಯ ಕ್ರಮಗಳನ್ನು ಅನುಸರಿಸದಿದ್ದರೆ ಸ್ಥಳಾಂತರಗೊಂಡ ಮರಗಳು ಬದುಕುಳಿಯುವ ಸಾಧ್ಯತೆ ಕಡಿಮೆ. ಭಾರೀ ಯಂತ್ರಗಳ ಮೂಲಕ ಮರಗಳನ್ನು ಕಿತ್ತು ಸಾಗಿಸುವ ಸಂದರ್ಭದಲ್ಲಿ ಬೇರುಗಳು ಮತ್ತು ಕೊಂಬೆಗಳು ಹಾನಿಗೊಳಗಾಗುವುದರಿಂದ ಅವುಗಳ ಜೀವಂತಿಕೆ ಕುಂಠಿತವಾಗುವ ಅಪಾಯ ಹೆಚ್ಚಿರುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಅಭಿವೃದ್ಧಿಗಲ್ಲ, ಹಣಬಲ-ಗುಂಪುಗಾರಿಕೆಗೆ ಸಚಿವ ಸಂಪುಟ ವಿಸ್ತರಣೆ: ಕಾಂಗ್ರೆಸ್ ವಿರುದ್ಧ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯು ಜನಹಿತ, ಅಭಿವೃದ್ಧಿ ಅಥವಾ ಉತ್ತಮ ಆಡಳಿತದ ಉದ್ದೇಶದಿಂದ ನಡೆದಿಲ್ಲ. ಅಧಿಕಾರದ ಹಂಚಿಕೆ, ಹಣಬಲ, ಗುಂಪುಗಾರಿಕೆ ಹಾಗೂ ಹೈಕಮಾಂಡ್ ರಾಜಕಾರಣದ ಫಲವಾಗಿ ಸಚಿವ ಸಂಪುಟ ವಿಸ್ತರಣೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ಆರಂಭದಿಂದಲೂ “ರೇಟ್ ಫಿಕ್ಸ್ ಆಗದೇ ಡೇಟ್ ಫಿಕ್ಸ್ ಆಗಲಿಲ್ಲ” ಎಂದು ಹೇಳಿದ್ದೆ. ಇದೀಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮಾಜಿ ಸಚಿವರು ಹಾಗೂ ಶಾಸಕರು ನೀಡಿರುವ ಬಹಿರಂಗ ಹೇಳಿಕೆಗಳೇ ತಮ್ಮ ಆರೋಪಕ್ಕೆ ಪುಷ್ಟಿ ನೀಡಿವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನವೇ ಸಚಿವ ಸಂಪುಟ ರಚನೆಯ ಹಿಂದಿನ ವಾಸ್ತವವನ್ನು ಬಯಲಿಗೆಳೆಯುತ್ತಿದೆ ಎಂದು ಟೀಕಿಸಿದ ವಿಜಯೇಂದ್ರ, ಹಿರಿಯ ಶಾಸಕ ತನ್ವೀರ್ ಸೇಠ್ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೂ ಸಚಿವ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿರುವುದನ್ನು ಉಲ್ಲೇಖಿಸಿದರು.

ಅದೇ ರೀತಿ, ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು “ನಾನು ಕಾಂಗ್ರೆಸಿಗ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ಹಣ ನೀಡಲು ಸಾಧ್ಯವಾಗದ ಕಾರಣ ಸಚಿವ ಸ್ಥಾನ ಸಿಗಲಿಲ್ಲ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಮಾಜಿ ಸಚಿವ ಎಂ.ಸಿ. ಸುಧಾಕರ್ ಹಾಗೂ ಎಸ್.ಎನ್. ನಾರಾಯಣಸ್ವಾಮಿ ಸೇರಿದಂತೆ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿರುವುದು ಕಾಂಗ್ರೆಸ್‌ನ ಆಂತರಿಕ ಪರಿಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದು ಅವರು ಹೇಳಿದರು.

ಇದೇ ವೇಳೆ, ಮಾಜಿ ಸಚಿವ ಶಿವಾನಂದ ಪಾಟೀಲ ತಿಮ್ಮಾಪುರ್ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಹಣ ನೀಡಿದವರು ಹಾಗೂ ಪ್ರಭಾವ ಹೊಂದಿದವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪಗಳ ಕುರಿತು ಕಾಂಗ್ರೆಸ್ ನಾಯಕರು ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.

‘ತ್ರೇತಾಯುಗದ ಉಡುಪುಗಳಿಗೆ ಪುರಾವೆಗಳೇ ಇಲ್ಲ’: ‘ರಾಮಾಯಣ’ ಟ್ರೋಲ್‌ಗೆ ಕಾಸ್ಟ್ಯೂಮ್ ಡಿಸೈನರ್ ತಿರುಗೇಟು

ಮುಂಬೈ: ‘ರಾಮಾಯಣ’ ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಿನಿಮಾದ ವಸ್ತ್ರವಿನ್ಯಾಸವೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ಸಾಯಿ ಪಲ್ಲವಿ ಅವರ ಬ್ಲೌಸ್ ವಿನ್ಯಾಸ ಮತ್ತು ಲಾರಾ ದತ್ತಾ ಅವರ ಸೀರೆಯ ಲುಕ್ ಟಿವಿ ಧಾರಾವಾಹಿಯಂತಿದೆ ಎಂದು ಹಲವರು ಟೀಕಿಸಿದ್ದರು.

ಈ ವಿವಾದಕ್ಕೆ ಇದೀಗ ಚಿತ್ರದ ಕಾಸ್ಟ್ಯೂಮ್ ಡಿಸೈನರ್‌ಗಳು ಉತ್ತರ ನೀಡಿದ್ದಾರೆ. “ತ್ರೇತಾಯುಗದಲ್ಲಿ ಜನರು ಯಾವ ರೀತಿಯ ಉಡುಪು ಧರಿಸುತ್ತಿದ್ದರು ಎಂಬುದಕ್ಕೆ ಯಾವುದೇ ನೇರ ಐತಿಹಾಸಿಕ ಸಾಕ್ಷ್ಯಗಳಿಲ್ಲ. ಆದ್ದರಿಂದ ಭಾರತೀಯ ಕಲಾ ಪರಂಪರೆ, ದೇವಸ್ಥಾನಗಳ ಕೆತ್ತನೆಗಳು ಮತ್ತು ರಾಜಾ ರವಿವರ್ಮ ಅವರ ಚಿತ್ರಗಳನ್ನು ಆಧರಿಸಿ ಪಾತ್ರಗಳನ್ನು ರೂಪಿಸಿದ್ದೇವೆ” ಎಂದು ಹೇಳಿದ್ದಾರೆ.

ಇದಲ್ಲದೆ, ಪಾತ್ರಗಳ ಭಾವನೆ ಮತ್ತು ಕಥೆಯ ಹಂತಕ್ಕೆ ಅನುಗುಣವಾಗಿ ಬಣ್ಣಗಳನ್ನು ಆಯ್ಕೆ ಮಾಡಲಾಗಿದೆ ಎಂದು ವಿವರಿಸಿರುವ ಅವರು, ಕೈಕೇಯಿಯ ಉಡುಪಿನ ಮರೂನ್ ಬಣ್ಣ ಆಕೆಯ ಜೀವನದ ಮಹತ್ವದ ತಿರುವನ್ನು ಸಂಕೇತಿಸುತ್ತದೆ ಎಂದು ತಿಳಿಸಿದ್ದಾರೆ.

ಟ್ರೇಲರ್ ಮಾತ್ರ ನೋಡಿ ಪಾತ್ರಗಳ ಬಗ್ಗೆ ತೀರ್ಮಾನಿಸುವ ಬದಲು, ಸಂಪೂರ್ಣ ಸಿನಿಮಾ ವೀಕ್ಷಿಸಿದ ಬಳಿಕ ಅಭಿಪ್ರಾಯ ರೂಪಿಸಬೇಕು ಎಂದು ಚಿತ್ರತಂಡ ಪ್ರೇಕ್ಷಕರಿಗೆ ಮನವಿ ಮಾಡಿದೆ.

‘ಕಿಂಗ್’ ರಿಲೀಸ್ ಡೇಟ್ ಫಿಕ್ಸ್: ಅವೆಂಜರ್ಸ್‌, ಡ್ಯೂನ್‌, ಜುಮಾಂಜಿ ನಡುವೆಯೇ ಶಾರುಖ್ ಅಬ್ಬರ

ಮುಂಬೈ: ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ‘ಕಿಂಗ್’ ಚಿತ್ರದ ಬಿಡುಗಡೆ ಬಗ್ಗೆ ಹರಿದಾಡುತ್ತಿದ್ದ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ. ಸಿನಿಮಾ 2027ಕ್ಕೆ ಮುಂದೂಡಲಾಗಿದೆ ಎಂಬ ಸುದ್ದಿಗಳು ಸುಳ್ಳಾಗಿದ್ದು, ಚಿತ್ರ 2026ರ ಡಿಸೆಂಬರ್ 24ರಂದು ನಿಗದಿಯಂತೆ ಬಿಡುಗಡೆಯಾಗಲಿದೆ.

ಆದರೆ ‘ಕಿಂಗ್’ ಬಿಡುಗಡೆಯಾಗುವ ವಾರವೇ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಹಣಾಹಣಿ ನಡೆಯಲಿದೆ. ‘ಅವೆಂಜರ್ಸ್: ಡೂಮ್ಸ್‌ಡೇ’, ‘ಡ್ಯೂನ್: ಪಾರ್ಟ್ 3’ ಮತ್ತು ‘ಜುಮಾಂಜಿ: ಓಪನ್ ವರ್ಲ್ಡ್’ ಸೇರಿದಂತೆ ಹಾಲಿವುಡ್‌ನ ಮೂರು ದೊಡ್ಡ ಸಿನಿಮಾಗಳು ಡಿಸೆಂಬರ್ 18ರಂದು ತೆರೆಕಾಣಲಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ‘ಕಿಂಗ್’ಗೆ ಕಠಿಣ ಪೈಪೋಟಿ ನೀಡಲಿವೆ.

ಭಾರತೀಯ ಪ್ರೇಕ್ಷಕರಲ್ಲಿ ಶಾರುಖ್ ಅವರ ಕ್ರೇಜ್ ಇರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಯಾವುದೇ ಆತಂಕ ಇಲ್ಲ ಎನ್ನಲಾಗುತ್ತಿದೆ. ಆದರೆ ವಿದೇಶಗಳಲ್ಲಿ ಸ್ಕ್ರೀನ್‌ಗಳ ಹಂಚಿಕೆ ಮತ್ತು ಐಮ್ಯಾಕ್ಸ್ ಪ್ರದರ್ಶನದ ವಿಷಯದಲ್ಲಿ ಸ್ಪರ್ಧೆ ಎದುರಾಗಬಹುದು.

ಇದರ ನಡುವೆಯೂ ಯಶ್ ರಾಜ್ ಫಿಲ್ಮ್ಸ್ ಜಾಗತಿಕ ವಿತರಣೆಯ ಹೊಣೆ ಹೊತ್ತಿರುವುದರಿಂದ, ಶಾರುಖ್ ಅವರ ‘ಕಿಂಗ್’ ವಿಶ್ವದಾದ್ಯಂತ ಭರ್ಜರಿ ಓಪನಿಂಗ್ ಪಡೆಯುವ ನಿರೀಕ್ಷೆ ಸಿನಿ ವಲಯದಲ್ಲಿದೆ.

‘ಅಶ್ಲೀಲ ಜೋಕ್‌ಗಳಿಗೆ ನಾಗರಿಕ ಸಮಾಜದಲ್ಲಿ ಜಾಗವಿಲ್ಲ’: ಉದಯನಿಧಿ ಪ್ರಕರಣದ ಬಗ್ಗೆ ಕಂಗನಾ ಪ್ರತಿಕ್ರಿಯೆ

ಚೆನ್ನೈ: ನಟಿ ತ್ರಿಷಾ ಕೃಷ್ಣನ್ ಕುರಿತು ನೀಡಿದರೆಂದು ಆರೋಪಿಸಲಾದ ದ್ವಂದ್ವಾರ್ಥದ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಈ ವಿವಾದಕ್ಕೆ ಇದೀಗ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಎಂಟ್ರಿ ನೀಡಿದ್ದಾರೆ.

ಉದಯನಿಧಿ ಸ್ಟಾಲಿನ್ ವಿರುದ್ಧದ ಕ್ರಮವನ್ನು ಬೆಂಬಲಿಸಿರುವ ಕಂಗನಾ, “ಸಾರ್ವಜನಿಕ ಜೀವನದಲ್ಲಿರುವವರು ಮಹಿಳೆಯರ ಬಗ್ಗೆ ಅಸಭ್ಯ ಭಾಷೆ ಬಳಸುವುದು ಅಥವಾ ದ್ವಂದ್ವಾರ್ಥದ ಮಾತುಗಳನ್ನು ಆಡುವುದು ಒಪ್ಪಲಾಗದು. ಇಂತಹ ಪ್ರಕರಣಗಳಲ್ಲಿ ಕಾನೂನು ಕ್ರಮವೇ ಸರಿಯಾದ ಸಂದೇಶ ನೀಡುತ್ತದೆ” ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕಾವೇರಿ ನೀರಿನ ವಿಚಾರವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆಗೆ ಉತ್ತರಿಸುವ ವೇಳೆ ಉದಯನಿಧಿ ನೀಡಿದ ಹೇಳಿಕೆ ನಟಿ ತ್ರಿಷಾ ಅವರನ್ನು ಉದ್ದೇಶಿಸಿ ಮಾಡಿರುವ ಅಸಭ್ಯ ಕಾಮೆಂಟ್ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಕ್ರಮಕ್ಕೆ ಆಗ್ರಹಿಸಿದ್ದವು.

ಆದರೆ ಉದಯನಿಧಿ ಆರೋಪಗಳನ್ನು ಸಂಪೂರ್ಣ ತಳ್ಳಿಹಾಕಿದ್ದು, “ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ನನ್ನ ಹೇಳಿಕೆಯನ್ನು ರಾಜಕೀಯವಾಗಿ ತಿರುಚಲಾಗಿದೆ” ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ತನಿಖೆಗೆ ಸಹಕರಿಸುವಂತೆ ಸೂಚಿಸಿ, ವಿಚಾರಣೆ ಬಳಿಕ ಬಿಡುಗಡೆ ಮಾಡಲು ಆದೇಶಿಸಿದೆ.

‘ಧರ್ಮದ ಹೆಸರಲ್ಲೇ ಬಿಜೆಪಿ ರಾಜಕಾರಣ’, ‘ನ್ಯಾಯಸಮ್ಮತ ಚುನಾವಣೆ ನಡೆದರೆ ಸೋಲು ಖಚಿತ’: ಸಂತೋಷ್ ಲಾಡ್

0

ಹುಬ್ಬಳ್ಳಿ: ದೇಶದ ರಾಜಕೀಯದಲ್ಲಿ ಹೊಸ ಬದಲಾವಣೆಯ ಅಲೆ ಆರಂಭವಾಗಿದ್ದು, ಜೆನ್-ಝೀ ಯುವಕರಿಂದ ರಾಜಕೀಯದ ದಿಕ್ಕು ಬದಲಾಗುತ್ತಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಇದೇ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, “ನ್ಯಾಯಯುತ ಚುನಾವಣೆ ನಡೆದರೆ ಬಿಜೆಪಿ ಗೆಲ್ಲುವುದಿಲ್ಲ. ಅದಕ್ಕಾಗಿಯೇ ಅವರು ಪ್ರಾಮಾಣಿಕ ಚುನಾವಣೆಗೆ ಅವಕಾಶ ನೀಡುವುದಿಲ್ಲ” ಎಂದು ಆರೋಪಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದಕ್ಕಿಂತ ಧರ್ಮ ಮತ್ತು ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದೇ ಬಿಜೆಪಿಯ ಅಜೆಂಡಾ” ಎಂದು ಟೀಕಿಸಿದರು.

ಬರ ಅಧ್ಯಯನಕ್ಕಾಗಿ ಬಿಜೆಪಿ ತಂಡ ರಾಜ್ಯ ಪ್ರವಾಸ ಕೈಗೊಂಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, “ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ನೈಜ ವರದಿ ಸಲ್ಲಿಸಲಿ. ಅದರಿಂದಾದರೂ ಕರ್ನಾಟಕಕ್ಕೆ ಬೆಳೆ ಪರಿಹಾರ ಸಿಗಲಿ” ಎಂದು ಹೇಳಿದರು.

ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಂತೋಷ್ ಲಾಡ್, “ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ರಾಜ್ಯಕ್ಕೆ ಸಮರ್ಪಕ ಬೆಳೆ ಪರಿಹಾರ ಮತ್ತು ಅನುದಾನ ಸಿಕ್ಕಿಲ್ಲ. ಬೆಳೆ ವಿಮೆ ನಿಯಮಗಳಲ್ಲೂ ಬದಲಾವಣೆ ಅಗತ್ಯ” ಎಂದು ಒತ್ತಾಯಿಸಿದರು.

ರೈತರ ಮಧ್ಯಂತರ ಪರಿಹಾರದ ಬೇಡಿಕೆ ನ್ಯಾಯಸಮ್ಮತವಾಗಿದೆ. ಮುಖ್ಯಮಂತ್ರಿ ಸೂಚನೆಯಂತೆ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಿ ವರದಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ನಿರ್ದೋಷಿ ಎಂದಾದ ಬಳಿಕ ಡಿಜಿಟಲ್ ದಾಖಲೆಗಳಲ್ಲೂ ಕಳಂಕ ಉಳಿಯಬಾರದು: ಮಹತ್ವದ ತೀರ್ಪು ನೀಡಿದ ಹೈಕೋರ್ಟ್

ಬೆಂಗಳೂರು: ಕಾನೂನು ಹೋರಾಟದಲ್ಲಿ ವ್ಯಕ್ತಿಯೊಬ್ಬರು ನಿರ್ದೋಷಿ ಎಂದು ನ್ಯಾಯಾಲಯದಿಂದ ಬಿಡುಗಡೆಯಾದ ಬಳಿಕವೂ, ಅವರ ಹೆಸರನ್ನು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಆನ್‌ಲೈನ್ ದಾಖಲೆಗಳಲ್ಲಿ ಶಾಶ್ವತವಾಗಿ ಉಳಿಯಲು ಬಿಡುವುದು ನ್ಯಾಯದ ಮೂಲ ಉದ್ದೇಶವನ್ನೇ ಸೋಲಿಸಿದಂತಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಇರಾನ್ ಮೂಲದ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ಸಂವಿಧಾನದ ಪರಿಚ್ಛೇದ 21ರಡಿ ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕು ಇದೆ ಎಂದು ಸ್ಪಷ್ಟಪಡಿಸಿದೆ. ನ್ಯಾಯಾಲಯವು ವ್ಯಕ್ತಿಯನ್ನು ನಿರ್ದೋಷಿ ಎಂದು ಘೋಷಿಸಿದ ನಂತರವೂ, ಡಿಜಿಟಲ್ ವೇದಿಕೆಗಳಲ್ಲಿ ಹಳೆಯ ಆರೋಪಗಳ ದಾಖಲೆಗಳು ಮುಂದುವರಿಯುವುದರಿಂದ ಅವರ ಜೀವನ, ಉದ್ಯೋಗ ಮತ್ತು ಸಾಮಾಜಿಕ ಗೌರವಕ್ಕೆ ಧಕ್ಕೆಯಾಗಬಾರದು ಎಂದು ಪೀಠ ತಿಳಿಸಿದೆ.

ಈ ಹಿನ್ನೆಲೆಯಲ್ಲಿ, ಕ್ರಿಮಿನಲ್ ಪ್ರಕರಣದಿಂದ ಮುಕ್ತಳಾಗಿ ಏಳು ವರ್ಷಗಳಾದ ಬಳಿಕವೂ ಆನ್‌ಲೈನ್‌ನಲ್ಲಿ ಆಕೆಯ ಹೆಸರು ಪ್ರಕರಣದೊಂದಿಗೆ ಕಾಣಿಸಿಕೊಳ್ಳುತ್ತಿರುವುದನ್ನು ಗಮನಿಸಿದ ಹೈಕೋರ್ಟ್, ಹೈಕೋರ್ಟ್ ಹಾಗೂ ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್‌ಗಳು, ಹೆಬ್ಬಾಳ ಪೊಲೀಸ್ ಠಾಣೆ, ಗೂಗಲ್ ಇಂಡಿಯಾ ಹಾಗೂ ಇಂಡಿಯನ್ ಕಾನೂನ್ ಪೋರ್ಟಲ್‌ಗೆ ಸಂಬಂಧಿತ ದಾಖಲೆಗಳಿಂದ ಆಕೆಯ ಹೆಸರನ್ನು ತೆಗೆದುಹಾಕುವಂತೆ ನಿರ್ದೇಶನ ನೀಡಿದೆ.

ಸಂವಿಧಾನದ ಪರಿಚ್ಛೇದ 21 ಕೇವಲ ದೈಹಿಕ ಸ್ವಾತಂತ್ರ್ಯವನ್ನಷ್ಟೇ ನೀಡುವುದಿಲ್ಲ. ಅನಗತ್ಯ ಕಳಂಕ, ನಿರಂತರ ಅನುಮಾನ ಹಾಗೂ ಅವಮಾನದಿಂದ ಮುಕ್ತವಾಗಿ ಘನತೆಯಿಂದ ಬದುಕುವ ಹಕ್ಕನ್ನೂ ಅದು ಖಾತರಿಪಡಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಮರ್ಥ ನ್ಯಾಯಾಲಯವೊಂದು ವ್ಯಕ್ತಿಯನ್ನು ನಿರ್ದೋಷಿ ಎಂದು ಘೋಷಿಸಿದ ಬಳಿಕ, ಡಿಜಿಟಲ್ ಜಗತ್ತಿನಲ್ಲೂ ಆ ಕಾನೂನುಬದ್ಧ ವಿಮೋಚನೆ ಪ್ರತಿಫಲಿಸಬೇಕು ಎಂಬುದು ನ್ಯಾಯಾಂಗ ಮಾಹಿತಿಯನ್ನು ಪ್ರಕಟಿಸುವ ಪ್ರತಿಯೊಂದು ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ:

2014ರಲ್ಲಿ ದಾಖಲಾಗಿದ್ದ ಅಕ್ರಮ ಮಾನವ ಸಾಗಣೆ ತಡೆ ಕಾಯ್ದೆ, ವಿದೇಶಿಯರ ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ ಕಾಯ್ದೆ) ಹಾಗೂ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳಡಿ ಇರಾನ್ ಮೂಲದ ಮಹಿಳೆಯನ್ನು ಮೂರನೇ ಆರೋಪಿಯಾಗಿ ಸೇರಿಸಲಾಗಿತ್ತು. 2015ರಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, 2019ರ ಮಾರ್ಚ್ 28ರಂದು ವಿಚಾರಣಾ ನ್ಯಾಯಾಲಯ ಆಕೆಯನ್ನು ಎಲ್ಲಾ ಆರೋಪಗಳಿಂದ ನಿರ್ದೋಷಿ ಎಂದು ಬಿಡುಗಡೆ ಮಾಡಿತ್ತು.

ಬಳಿಕ ಮಹಿಳೆ ವಿಶ್ವಸಂಸ್ಥೆಯ ಮೂಲಕ ನಿರಾಶ್ರಿತರ ಸ್ಥಾನಮಾನ ಪಡೆದು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಹೊಸ ಜೀವನ ಆರಂಭಿಸಿದ್ದರು. ಆದರೆ ಇಂಟರ್‌ನೆಟ್‌ನಲ್ಲಿ ಹೆಸರು ಹುಡುಕಿದಾಗ ಹಳೆಯ ಕ್ರಿಮಿನಲ್ ಪ್ರಕರಣದ ವಿವರಗಳು ಇನ್ನೂ ಕಾಣಿಸಿಕೊಳ್ಳುತ್ತಿದ್ದ ಕಾರಣ, ಉದ್ಯೋಗದಾತರು ಹಾಗೂ ಇತರರಿಂದ ನಡೆಯುವ ಹಿನ್ನೆಲೆ ಪರಿಶೀಲನೆಯಲ್ಲಿ ಸಮಸ್ಯೆ ಎದುರಾಗುತ್ತಿತ್ತು. ಇದರಿಂದ ವೃತ್ತಿಜೀವನಕ್ಕೆ ತೊಡಕಾಗುತ್ತಿದ್ದ ಹಿನ್ನೆಲೆಯಲ್ಲಿ ಮಹಿಳೆ ಹೈಕೋರ್ಟ್ ಮೊರೆ ಹೋಗಿದ್ದರು.

‘ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ತಪ್ಪಲು ಮಾಜಿ ಸಿಎಂ ಕಾರಣ’: ಹೆಚ್. ವಿಶ್ವನಾಥ್ ಗಂಭೀರ ಆರೋಪ

0

ಮೈಸೂರು: ಹಿರಿಯ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಕೈತಪ್ಪಲು ಮೈಸೂರಿನ ಮಾಜಿ ಮುಖ್ಯಮಂತ್ರಿ ಕೈವಾಡವಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಪುತ್ರನ ರಾಜಕೀಯ ಪ್ರಭಾವ ಕಡಿಮೆಯಾಗುವ ಆತಂಕದಿಂದಲೇ ತನ್ವೀರ್ ಸೇಠ್ ಅವರನ್ನು ಸಚಿವ ಸಂಪುಟದಿಂದ ದೂರ ಇಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳಿಗೆ ಅನುಗುಣವಾಗಿ ಸಚಿವ ಸಂಪುಟ ರಚನೆಯಾಗಿದ್ದರೂ, ಹಿರಿಯ ನಾಯಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕಾಗಿತ್ತು. ಆದರೆ ಉದ್ದೇಶಪೂರ್ವಕವಾಗಿ ಅವರಿಗೆ ಅವಕಾಶ ನಿರಾಕರಿಸಲಾಗಿದೆ ಎಂದು ಆರೋಪಿಸಿದರು.

“ತನ್ವೀರ್ ಸೇಠ್ ಸಚಿವರಾದರೆ ತಮ್ಮ ಪುತ್ರನ ಪ್ರಭಾವ ಕುಗ್ಗುತ್ತದೆ ಎಂಬ ಕಾರಣಕ್ಕೆ ಅವರ ಸಚಿವ ಸ್ಥಾನ ತಪ್ಪಿಸಲಾಗಿದೆ. ವೈಯಕ್ತಿಕ ಸ್ವಾರ್ಥಕ್ಕಾಗಿ ಕರ್ನಾಟಕದ ರಾಜಕೀಯವನ್ನು ಹಾಳು ಮಾಡಲಾಗಿದೆ” ಎಂದು ಹೆಚ್. ವಿಶ್ವನಾಥ್ ಕಿಡಿಕಾರಿದರು.

ಇದೇ ವೇಳೆ ಸಚಿವರ ಪ್ರಮಾಣವಚನ ಸಮಾರಂಭಕ್ಕೂ ಮಾಜಿ ಮುಖ್ಯಮಂತ್ರಿ ಗೈರಾಗಿರುವುದನ್ನು ಟೀಕಿಸಿದ ಅವರು, “ಸಿದ್ದರಾಮಯ್ಯ ಅವರು ಸಮಾರಂಭಕ್ಕೆ ಹೋಗಬೇಕಿತ್ತು. ಆದರೆ ದುರಹಂಕಾರದ ನಿಲುವಿನಿಂದ ಭಾಗವಹಿಸಲಿಲ್ಲ” ಎಂದು ಹರಿಹಾಯ್ದರು.