Home Blog Page 83

ಸಚಿವ ಸಂಪುಟ ವಿಸ್ತರಣೆ ಕಾಂಗ್ರೆಸ್‌ಗೆ ವರವಲ್ಲ, ಸಂಕಟ: ವಿಜಯಕುಮಾರ ಗಡ್ಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ನೂತನ ಸಚಿವ ಸಂಪುಟ ರಚನೆ ವೇಳೆ ಸಾಕಷ್ಟು ಗೊಂದಲಕ್ಕೆ ಕಾರಣವಾದ ಕಾಂಗ್ರೆಸ್ ಸರ್ಕಾರ ಈಗ ಅದೇ ಸಂಪುಟ ವಿಸ್ತರಣೆಯಿಂದ ಅಸಮಾಧಾನದ ಸಂಕಟ ಎದುರಿಸುತ್ತಿದೆ ಎಂದು ಬಿಜೆಪಿ ಮುಖಂಡ ಹಾಗೂ ಉದ್ಯಮಿ ವಿಜಯಕುಮಾರ ಗಡ್ಡಿ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಅವರು, ನೂತನ ಸಚಿವರ ಪ್ರಮಾಣವಚನ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗಿರುವುದು ಕಾಂಗ್ರೆಸ್‌ನ ಆಂತರಿಕ ಭಿನ್ನಾಭಿಪ್ರಾಯಕ್ಕೆ ಸಾಕ್ಷಿಯಾಗಿದೆ. ಸಚಿವ ಸಂಪುಟ ವಿಸ್ತರಣೆಯ ಬಳಿಕ ಹಲವು ಕಾಂಗ್ರೆಸ್ ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಸರ್ಕಾರದೊಳಗಿನ ಭಿನ್ನಮತವನ್ನು ಬಯಲಿಗೆಳೆದಿದೆ ಎಂದು ಹೇಳಿದರು.

ಸಚಿವ ಸ್ಥಾನ ಹಂಚಿಕೆಯಲ್ಲಿ ಕಾಂಗ್ರೆಸ್ ನಾಯಕತ್ವ ಸಂಪೂರ್ಣ ವಿಫಲವಾಗಿದೆ. ಜನರ ಸಮಸ್ಯೆಗಳತ್ತ ಗಮನ ಹರಿಸುವ ಬದಲು ಅಧಿಕಾರಕ್ಕಾಗಿ ಕಾಂಗ್ರೆಸ್ ನಾಯಕರು ಒಳಜಗಳದಲ್ಲೇ ತೊಡಗಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಪಕ್ಷದಲ್ಲಿ ಒಗ್ಗಟ್ಟಿಲ್ಲ ಎಂದು ಟೀಕಿಸುತ್ತಿದ್ದ ಕಾಂಗ್ರೆಸ್ ನಾಯಕರು, ಈಗ ಸಚಿವ ಸ್ಥಾನ ಸಿಗಲಿಲ್ಲವೆಂದು ತಮ್ಮದೇ ಶಾಸಕರು ರಾಜೀನಾಮೆ ನೀಡುತ್ತಿರುವ ಬಗ್ಗೆ ಏನು ಉತ್ತರ ನೀಡುತ್ತಾರೆ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸಚಿವ ಸಂಪುಟ ವಿಸ್ತರಣೆ ಅನೇಕ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಅದರ ರಾಜಕೀಯ ಪರಿಣಾಮ ಎದುರಾಗಲಿದೆ. ಕಾಂಗ್ರೆಸ್ ಆಡಳಿತದಲ್ಲಿ ಜನಪರ ಆಡಳಿತ ಎಂಬುದು ಕೇವಲ ಮರೀಚಿಕೆಯಾಗಿದ್ದು, ಸಚಿವ ಸಂಪುಟ ವಿಸ್ತರಣೆಯು ಸರ್ಕಾರಕ್ಕೆ ಬಲ ನೀಡುವ ಬದಲು ಭಿನ್ನಾಭಿಪ್ರಾಯವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ವಿಜಯಕುಮಾರ ಗಡ್ಡಿ ತಿಳಿಸಿದ್ದಾರೆ.

ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷ ರವಿ ಗುಡಿಮನಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ವತಿಯಿಂದ ಗದಗ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರವಿ ಗುಡಿಮನಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಸಂಗಪ್ಪ ಗುಡಿಮನಿ, ಗೌರವ ಕಾರ್ಯದರ್ಶಿ ಚನ್ನವೀರಪ್ಪ ಹುಣಸಿಕಟ್ಟಿ, ಮಾಜಿ ಅಧ್ಯಕ್ಷ ಬಾಲಚಂದ್ರ ಬರಮಗೌಡ, ಉಪಾಧ್ಯಕ್ಷರಾದ ಜಯದೇವ ಮೆಣಸಗಿ, ಪ್ರಕಾಶ ಉಗಲಾಟದ, ಕೋಶಾಧ್ಯಕ್ಷ ಅರವಿಂದ ಕಾಮತ ಹಾಗೂ ಸದಸ್ಯರು ಉಪಸ್ಥಿತರಿದ್ದು, ರವಿ ಗುಡಿಮನಿ ಅವರಿಗೆ ಶುಭ ಹಾರೈಸಿದರು.

ವಿದ್ಯುತ್ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಅವಧಿಯಲ್ಲಿ ಸಮರ್ಥ ನಾಯಕತ್ವ ಹಾಗೂ ಜನಪರ ಸೇವೆ ಸಲ್ಲಿಸುವ ಮೂಲಕ ಸಂಘದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಆಶಿಸಿದರು.

ಗುರುವಂದನೆಗೆ ಸಾಕ್ಷಿಯಾದ ಶತಮಾನದ ಶಾಲೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗುರುವಂದನೆ ಎಂದರೆ ನಮಗೆ ಜ್ಞಾನ, ವಿದ್ಯೆ ಹಾಗೂ ಸಂಸ್ಕಾರವನ್ನು ನೀಡಿದ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ಸಂಪ್ರದಾಯವಾಗಿದ್ದು, ಭಾರತೀಯ ಗುರು-ಶಿಷ್ಯ ಪರಂಪರೆಯ ಶ್ರೇಷ್ಠ ಸಂಕೇತವಾಗಿದೆ ಎಂದು ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಚನ್ನಬಸವ ಸ್ವಾಮೀಜಿ ಹೇಳಿದರು.

ಸಮೀಪದ ನಿಡಗುಂದಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಪ್ರಥಮ ಬಾರಿಗೆ ಆಯೋಜಿಸಿದ್ದ ಗುರುವಂದನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಗುರುಗಳು ಬದುಕಿನ ಕತ್ತಲನ್ನು ಹೋಗಲಾಡಿಸಿ ಜ್ಞಾನದ ಬೆಳಕು ನೀಡುವವರು. ನೈತಿಕತೆ, ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಬೋಧಿಸುವ ಗುರುಗಳು ತಂದೆ-ತಾಯಿಯ ನಂತರ ದೈವಸ್ವರೂಪಿಗಳಾಗಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಎಂ.ಎನ್. ಸರ್ವಿ ಮಾತನಾಡಿ, ಶಾಲೆಯು ಶತಮಾನದ ಹೊಸ್ತಿಲಲ್ಲಿದ್ದು, ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯನ್ನು ನೆನೆದು ಗುರುವಂದನಾ ಸಮಾರಂಭ ಆಯೋಜಿಸಿರುವುದು ಶ್ಲಾಘನೀಯ ಎಂದರು. ಶಾಲೆಯ ಇತಿಹಾಸವನ್ನು ವಿವರಿಸಿದ ಅವರು, 1934ರಲ್ಲಿ ಗುರುಮಠದಲ್ಲಿ ಶಾಲೆ ಆರಂಭವಾಗಿ, ಬಳಿಕ ಶಾಶ್ವತ ಕಟ್ಟಡ ನಿರ್ಮಾಣಗೊಂಡ ಹಿನ್ನೆಲೆಯನ್ನು ವಿವರಿಸಿದರು.

ಹಳೆಯ ವಿದ್ಯಾರ್ಥಿ ಶರಣಯ್ಯ ಹಿರೇಮಠ ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಕೊರತೆ ಎದುರಾಗಿದ್ದು, ಕೇವಲ ಒಬ್ಬ ಖಾಯಂ ಶಿಕ್ಷಕರಿಂದಲೇ ಕಾರ್ಯನಿರ್ವಹಿಸಲಾಗುತ್ತಿದೆ. ಉಳಿದ ತರಗತಿಗಳಿಗೆ ಅತಿಥಿ ಶಿಕ್ಷಕರು ಪಾಠ ಮಾಡುತ್ತಿರುವುದರಿಂದ ಶೈಕ್ಷಣಿಕ ಗುಣಮಟ್ಟಕ್ಕೆ ಧಕ್ಕೆಯಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಹೆಚ್ಚುವರಿ ಶಿಕ್ಷಕರನ್ನು ನೇಮಿಸಿ ಶತಮಾನದ ಹೊಸ್ತಿಲಲ್ಲಿರುವ ಶಾಲೆಯನ್ನು ಉಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾದೇವಪ್ಪ ಸರ್ವಿ, ಪಿ.ವಿ. ಸರ್ವಿ, ಬಿ.ಎ. ಬನ್ನಿಗೋಳ, ಮುಖ್ಯ ಶಿಕ್ಷಕ ಎಲ್.ಎಸ್. ದೊಡ್ಡಮನಿ, ಎಸ್‌ಡಿಎಂಸಿ ಅಧ್ಯಕ್ಷ ಎಂ.ಎಸ್. ಜೀರಗಿ, ಜೆ.ಎಚ್. ಮುಲ್ಲಾ, ವಿ. ಮನೋಹರ, ಸುರೇಖಾ ಕಬಲಶೆಟ್ಟಿ, ಡಿ.ಎಸ್. ಗಂಗನಗೌಡ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಸಂಪುಟದಲ್ಲಿ ರಾಯಚೂರು–ಯಾದಗಿರಿಗೆ ಪ್ರಾತಿನಿಧ್ಯ ಇಲ್ಲ; ಸಿಎಂಗೆ ರಾಜೀನಾಮೆ ಸಲ್ಲಿಸಿದ ಶಾಸಕ ಬಸನಗೌಡ ದದ್ದಲ್

ರಾಯಚೂರು: ರಾಜ್ಯ ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಪ್ರಾತಿನಿಧ್ಯ ಸಿಗದ ಹಿನ್ನೆಲೆಯಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ರಾಜೀನಾಮೆ ನೀಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಬಸನಗೌಡ ದದ್ದಲ್, ಹಿಂದುಳಿದ ಜಿಲ್ಲೆಗಳಾದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡದಿರುವುದು ತೀವ್ರ ಬೇಸರಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ನೀತಿ ಆಯೋಗ ಗುರುತಿಸಿರುವ ಮಹತ್ವಾಕಾಂಕ್ಷಿ ಜಿಲ್ಲೆಗಳ ಪಟ್ಟಿಯಲ್ಲಿ ರಾಯಚೂರು ಜಿಲ್ಲೆ ಸ್ಥಾನ ಪಡೆದಿದ್ದರೂ, ಸಚಿವ ಸಂಪುಟದಲ್ಲಿ ಜಿಲ್ಲೆಯ ಪ್ರತಿನಿಧಿಗೆ ಅವಕಾಶ ಕಲ್ಪಿಸದಿರುವ ಹಿನ್ನೆಲೆಯಲ್ಲಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ವಿವಿಧ ಜಿಲ್ಲೆಗಳ ಶಾಸಕರು ಮತ್ತು ಮುಖಂಡರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಬಸನಗೌಡ ದದ್ದಲ್ ಅವರ ರಾಜೀನಾಮೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಜಾರ್ಖಂಡ್ʼನಲ್ಲಿ ನೇಮಕಾತಿ ಪರೀಕ್ಷೆ ಅಕ್ರಮ ಆರೋಪ; ವಿದ್ಯಾರ್ಥಿಗಳ ಪ್ರತಿಭಟನೆಗೆ ಸೋನಂ ವಾಂಗ್ಚುಕ್ ಬೆಂಬಲ

ರಾಂಚಿ: ಜಾರ್ಖಂಡ್‌ನಲ್ಲಿ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿದೆ. ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಹಾಗೂ ಸಿಜೆಪಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಬೆಂಬಲ ಸೂಚಿಸಿದ್ದಾರೆ.

ವಿದ್ಯಾರ್ಥಿ ನಾಯಕ ದೇವೇಂದ್ರ ನಾಥ್ ಮಹತೋ ಕಳೆದ 12 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಈ ವೇಳೆ ಸೋನಂ ವಾಂಗ್ಚುಕ್ ಅವರೊಂದಿಗೆ ವಿಡಿಯೊ ಕರೆ ಮೂಲಕ ಮಾತುಕತೆ ನಡೆಸಿದ ಬಳಿಕ, ಅವರ ಮನವಿಗೆ ಸ್ಪಂದಿಸಿ ನೀರು ಕುಡಿದು ಉಪವಾಸವನ್ನು ಅಂತ್ಯಗೊಳಿಸಿದ್ದಾರೆ. ಆದರೆ, ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ.

ಪ್ರತಿಭಟನಾಕಾರರು ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಹಾಗೂ ಜಾರ್ಖಂಡ್ ಸಿಬ್ಬಂದಿ ನೇಮಕಾತಿ ಆಯೋಗ (JSSC) ನಡೆಸಿದ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ. 14ನೇ JPSC ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ರದ್ದುಪಡಿಸಿ, ಪರೀಕ್ಷೆ ನಡೆಸಿದ ಸಂಸ್ಥೆಗಳ ವಿರುದ್ಧ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ನಾಯಕ ದೇವೇಂದ್ರ ನಾಥ್ ಮಹತೋ, ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇರವಾಗಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಬೇಕು. “ಭರವಸೆ ಬೇಡ, ನ್ಯಾಯ ಬೇಕು” ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಹೇಳಿದ್ದಾರೆ. ಉಪವಾಸದಿಂದ ಅವರ ಆರೋಗ್ಯದ ಬಗ್ಗೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಮಾತನಾಡಿ, ನೇಮಕಾತಿ ಅಕ್ರಮದ ವಿರುದ್ಧ ಹೋರಾಟ ನಡೆಸುತ್ತಿರುವ ಉದ್ಯೋಗ ಆಕಾಂಕ್ಷಿಗಳಿಗೆ ತಮ್ಮ ಸಂಘಟನೆಯ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ. ಪ್ರತಿಭಟನಾಕಾರರನ್ನು ಬೆಂಬಲಿಸಲು ಸಿಜೆಪಿ ಸದಸ್ಯರು ಜಾರ್ಖಂಡ್‌ಗೆ ಮೆರವಣಿಗೆ ನಡೆಸಲಿದ್ದಾರೆ ಎಂದೂ ಘೋಷಿಸಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಸಿಐಡಿ ಈಗಾಗಲೇ 14 ಮಂದಿಯನ್ನು ಬಂಧಿಸಿದೆ. ತನಿಖೆ ಮುಂದುವರಿದಿದ್ದು, ಮಾಜಿ JPSC ಅಧ್ಯಕ್ಷರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಮತ್ತೊಂದೆಡೆ ಬಿಜೆಪಿ ಹಾಗೂ ಬಿಜೆಪಿ ಯುವ ಮೋರ್ಚಾ (BJYM) ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ರಾಜೀನಾಮೆ ಹಾಗೂ ಪ್ರಕರಣವನ್ನು ಕೇಂದ್ರ ಸಂಸ್ಥೆಯಿಂದ ತನಿಖೆ ನಡೆಸುವಂತೆ ಒತ್ತಾಯಿಸಿವೆ.

ರಾಯರ ಮಠದಲ್ಲಿ ಭಕ್ತರ ಭಕ್ತಿ ಮಹಾಪೂರ: 21 ದಿನಗಳಲ್ಲಿ ಮಂತ್ರಾಲಯ ಹುಂಡಿಗೆ 3.75 ಕೋಟಿ ರೂ. ಕಾಣಿಕೆ!

ರಾಯಚೂರು: ಕಲಿಯುಗ ಕಾಮಧೇನು ಎಂದೇ ಖ್ಯಾತಿ ಪಡೆದಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಕಳೆದ 21 ದಿನಗಳಲ್ಲಿ ಭಕ್ತರು ಒಟ್ಟು ₹3,75,91,531 ಕಾಣಿಕೆ ಸಲ್ಲಿಸಿದ್ದಾರೆ.

ಜುಲೈ ಹಾಗೂ ಆಗಸ್ಟ್ ತಿಂಗಳ ಅವಧಿಯಲ್ಲಿ ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಆಗಮಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಉದಾರವಾಗಿ ಕಾಣಿಕೆ ಸಲ್ಲಿಸಿದ್ದಾರೆ. ಇದರ ಪರಿಣಾಮವಾಗಿ ಕೇವಲ 21 ದಿನಗಳಲ್ಲೇ ಕೋಟ್ಯಂತರ ರೂಪಾಯಿ ಸಂಗ್ರಹವಾಗಿದೆ.

ಮಠದ ಆಡಳಿತ ಮಂಡಳಿ ನೀಡಿರುವ ಮಾಹಿತಿ ಪ್ರಕಾರ, ಒಟ್ಟು ಸಂಗ್ರಹವಾದ ಕಾಣಿಕೆಯಲ್ಲಿ ₹3,65,16,531 ಕರೆನ್ಸಿ ನೋಟುಗಳ ರೂಪದಲ್ಲಿದ್ದು, ₹10,75,000 ನಾಣ್ಯಗಳ ರೂಪದಲ್ಲಿ ಸಂಗ್ರಹವಾಗಿದೆ. ಇದರ ಜೊತೆಗೆ ಭಕ್ತರು 49 ಗ್ರಾಂ ಚಿನ್ನ ಹಾಗೂ 865 ಗ್ರಾಂ ಬೆಳ್ಳಿಯನ್ನು ಕೂಡ ಕಾಣಿಕೆಯಾಗಿ ಅರ್ಪಿಸಿದ್ದಾರೆ.

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿಯ ಸದಸ್ಯರು ಹಾಗೂ ಕರಸೇವಕರು ಭಾಗವಹಿಸಿದ್ದರು. ಮುಜರಾಯಿ ಇಲಾಖೆ ಅಧಿಕಾರಿಗಳು ಮತ್ತು ಶ್ರೀಮಠದ ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ಸಂಪೂರ್ಣ ಪ್ರಕ್ರಿಯೆ ನಡೆಸಲಾಯಿತು.

ಮಂತ್ರಾಲಯಕ್ಕೆ ಪ್ರತೀ ತಿಂಗಳೂ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲಿನ ಅಪಾರ ಭಕ್ತಿಯಿಂದ ಹುಂಡಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾಣಿಕೆ ಹರಿದು ಬರುತ್ತಿದೆ.

ನನಗೆ ಸಚಿವ ಸ್ಥಾನ ಸಿಗುವುದೇ ಇಲ್ಲ ಅಂದುಕೊಂಡಿದ್ದೆ: HDK ಬಗ್ಗೆ ಗುಬ್ಬಿ ಶಾಸಕ SR ಶ್ರೀನಿವಾಸ್ ಹೇಳಿದ್ದೇನು?

ತುಮಕೂರು: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ್, ತಮಗೆ ಸಚಿವ ಸ್ಥಾನ ಸಿಗುವುದೇ ಇಲ್ಲ ಎಂದು ಭಾವಿಸಿ ಮನೆಯಲ್ಲೇ ಕುಳಿತಿದ್ದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ವತಃ ಕರೆ ಮಾಡಿ ಸಚಿವರನ್ನಾಗಿ ಮಾಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವೇಗೌಡರು ಕುಂಚಿಟಿಗ ಸಮುದಾಯದ ಕೋಟಾದಲ್ಲಿ ಮತ್ತೊಬ್ಬರಿಗೆ ಸಚಿವ ಸ್ಥಾನ ನೀಡಲು ಯೋಚಿಸಿದ್ದರು. ಆದರೆ, ಎಚ್.ಡಿ. ಕುಮಾರಸ್ವಾಮಿ ತಮ್ಮನ್ನು ಕರೆದು ಸಚಿವ ಸ್ಥಾನ ನೀಡಿದ್ದರು ಎಂದು ಹೇಳುವ ಮೂಲಕ ಹೆಚ್‌ಡಿಕೆ ನಾಯಕತ್ವವನ್ನು ಪ್ರಶಂಸಿಸಿದರು.

ತಮ್ಮ ಮತ್ತು ಎಚ್.ಡಿ. ಕುಮಾರಸ್ವಾಮಿ ನಡುವೆ ಕೇವಲ ಒಂದು ವಿಚಾರದಲ್ಲಿ ಮಾತ್ರ ಭಿನ್ನಾಭಿಪ್ರಾಯ ಉಂಟಾಗಿತ್ತು. ಅದನ್ನು ಹೊರತುಪಡಿಸಿ ಅವರೊಂದಿಗೆ ಯಾವುದೇ ವೈಮನಸ್ಸು ಇರಲಿಲ್ಲ ಎಂದು ಶ್ರೀನಿವಾಸ್ ಸ್ಪಷ್ಟಪಡಿಸಿದರು.

ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದೆ. ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವತಃ ಕರೆ ಮಾಡಿ ರಾಜೀನಾಮೆ ನೀಡಬೇಡಿ ಎಂದು ಮನವಿ ಮಾಡಿದರು ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿಯವರು ನಾಲ್ಕೈದು ಬಾರಿ ಕರೆ ಮಾಡಿದ ಬಳಿಕ ಮಾತನಾಡಿ, ಎಲ್ಲ ನಿಗಮ-ಮಂಡಳಿಗಳ ಅಧ್ಯಕ್ಷರ ರಾಜೀನಾಮೆಯನ್ನು ಸಾಮೂಹಿಕವಾಗಿ ಪಡೆಯುವ ನಿರ್ಧಾರವಿದೆ ಎಂದು ತಿಳಿಸಿದರು. ಈ ಕಾರಣದಿಂದ ತಾವು ರಾಜೀನಾಮೆ ಸಲ್ಲಿಸಿಲ್ಲ ಎಂದು ಶ್ರೀನಿವಾಸ್ ಹೇಳಿದರು.

ಇದೇ ವೇಳೆ ಸಚಿವರಾದ ಚೆಲುವರಾಯಸ್ವಾಮಿ ಹಾಗೂ ಮಾಗಡಿ ಬಾಲಕೃಷ್ಣ ಕೂಡ ಕರೆ ಮಾಡಿ ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದರು ಎಂದು ಅವರು ಹೇಳಿದರು.

ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ನೀಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಶ್ರೀನಿವಾಸ್, 33 ಶೇಕಡಾ ಮಹಿಳಾ ಮೀಸಲಾತಿಯ ಬಗ್ಗೆ ಮಾತನಾಡುವ ಸರ್ಕಾರ ಮಹಿಳೆಯರಿಗೆ ಸಚಿವ ಸ್ಥಾನ ನೀಡದೇ ಇರುವುದು ಸರಿಯಲ್ಲ. ಇನ್ನೂ ಕಾಲ ಮಿಂಚಿಲ್ಲ. ಮುಖ್ಯಮಂತ್ರಿ ಅವರ ಬಳಿ ಇರುವ ಒಂದು ಇಲಾಖೆಯನ್ನು ಮಹಿಳಾ ಶಾಸಕರಿಗೆ ನೀಡಬೇಕು ಎಂದು ಆಗ್ರಹಿಸಿದರು.

ಬಸ್‌ನಲ್ಲೇ ಮಹಿಳೆಗೆ ಹೃದಯಾಘಾತ: ರೂಟ್ ಬದಲಿಸಿದ ಆಸ್ಪತ್ರೆಗೆ ಕರೆತಂದ KSRTC ಚಾಲಕ

0

ತುಮಕೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಹಠಾತ್ ಹೃದಯಾಘಾತ ಸಂಭವಿಸಿದ ವೇಳೆ, ಸಮಯಪ್ರಜ್ಞೆ ಮೆರೆದ ಚಾಲಕ ನಿಗದಿತ ಮಾರ್ಗವನ್ನು ಬಿಟ್ಟು ಬಸ್ ಅನ್ನು ನೇರವಾಗಿ ಆಸ್ಪತ್ರೆಗೆ ಕೊಂಡೊಯ್ದು ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಿನಿಂದ ಮಧುಗಿರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಮಹಿಳೆ ಏಕಾಏಕಿ ಅಸ್ವಸ್ಥಗೊಂಡು ಹೃದಯಾಘಾತಕ್ಕೊಳಗಾದರು. ಪರಿಸ್ಥಿತಿ ಗಂಭೀರವಾಗಿದೆ ಎಂದು ಅರಿತ ಚಾಲಕ ಕ್ಷಣಮಾತ್ರವೂ ತಡಮಾಡದೆ ತುಮಕೂರು–ಮಧುಗಿರಿ ರಸ್ತೆಯಲ್ಲಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಬಸ್ ಅನ್ನು ತಿರುಗಿಸಿದರು.

ಆಸ್ಪತ್ರೆಯ ಪ್ರವೇಶ ದ್ವಾರದವರೆಗೂ ಬಸ್ ಕೊಂಡೊಯ್ದ ಬಳಿಕ ನಿರ್ವಾಹಕ ಮತ್ತು ಸಹಪ್ರಯಾಣಿಕರ ನೆರವಿನಿಂದ ಮಹಿಳೆಯನ್ನು ತಕ್ಷಣ ವೈದ್ಯರ ವಶಕ್ಕೆ ಒಪ್ಪಿಸಲಾಯಿತು. ವೈದ್ಯಕೀಯ ಸಿಬ್ಬಂದಿ ಕೂಡಲೇ ಚಿಕಿತ್ಸೆ ಆರಂಭಿಸಿದ ಪರಿಣಾಮ ಮಹಿಳೆಗೆ ಸಮಯಕ್ಕೆ ಸರಿಯಾಗಿ ತುರ್ತು ಚಿಕಿತ್ಸೆ ದೊರೆಯಿತು.

ಸಾಮಾನ್ಯವಾಗಿ ನಿಗದಿತ ಮಾರ್ಗದಲ್ಲಿ ಸಂಚರಿಸುವ ಬಸ್ ಅನ್ನು ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ತಿರುಗಿಸಿದ ಚಾಲಕನ ನಿರ್ಧಾರಕ್ಕೆ ಪ್ರಯಾಣಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಲಕ ಹಾಗೂ ನಿರ್ವಾಹಕರ ಮಾನವೀಯ ಸೇವೆಗೆ ಸಾರ್ವಜನಿಕರಿಂದ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ. ಘಟನೆ ಕುರಿತು ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.

ಹುಡುಗಿ ಕಾಟದಿಂದ ಬೇಸತ್ತು ರಾಯರ ಮೊರೆ ಹೋದ ಯುವಕ: ಮಠದ ಹುಂಡಿಯಲ್ಲಿ ಸಿಕ್ಕ ಪತ್ರ ವೈರಲ್

0

ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಹುಂಡಿ ಎಣಿಕೆ ವೇಳೆ ಪತ್ತೆಯಾದ ಹರಕೆ ಪತ್ರವೊಂದು ಈಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ದೇವರಲ್ಲಿ ಆಶೀರ್ವಾದ, ಆರೋಗ್ಯ ಅಥವಾ ಆರ್ಥಿಕ ಸಂಕಷ್ಟ ನಿವಾರಣೆಗೆ ಬೇಡುವ ಬದಲು, “ಒಬ್ಬ ಹುಡುಗಿಯಿಂದ ಕಾಪಾಡಿ” ಎಂದು ಭಕ್ತನೊಬ್ಬ ರಾಯರಿಗೆ ಮೊರೆ ಹೋಗಿರುವುದು ಗಮನ ಸೆಳೆದಿದೆ.

ಅನಾಮಧೇಯ ಭಕ್ತ ಬರೆದಿರುವ ಪತ್ರದಲ್ಲಿ “ಓಂ ಶ್ರೀ ರಾಘವೇಂದ್ರಾಯ ನಮಃ” ಎಂದು ಆರಂಭಿಸಿ, “ರಾಯರೇ ನಮ್ಮನ್ನು ಆ ಹುಡುಗಿಯಿಂದ ಕಾಪಾಡು. ಈ ಕಷ್ಟದಿಂದ ಪಾರು ಮಾಡು. ನಿಮ್ಮ ಮೇಲಿನ ನಂಬಿಕೆಯಿಂದ ನನ್ನ ನೋವನ್ನು ಹೇಳಿಕೊಳ್ಳುತ್ತಿದ್ದೇನೆ. ಆದಿಶಕ್ತಿ ದೇವಿ, ತಂದೆ-ತಾಯಿ ಕಾಪಾಡಲಿ” ಎಂದು ಮನವಿ ಮಾಡಲಾಗಿದೆ.

ಪತ್ರದಲ್ಲಿ “ಆ ವಿಷದಿಂದ ಕಾಪಾಡು” ಎಂಬ ಉಲ್ಲೇಖವೂ ಇದ್ದು, ಭಕ್ತ ಯಾವ ಸಂಕಷ್ಟವನ್ನು ಎದುರಿಸುತ್ತಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಪತ್ರದ ಕೊನೆಯಲ್ಲಿ “ಧನ್ಯವಾದಗಳು” ಎಂದು ಬರೆದು ತನ್ನ ಪ್ರಾರ್ಥನೆಯನ್ನು ಮುಗಿಸಿದ್ದಾನೆ.

ಪತ್ರದಲ್ಲಿ ಹೆಸರು ಅಥವಾ ವಿಳಾಸವಿಲ್ಲದ ಕಾರಣ ಭಕ್ತ ಯಾರು ಎಂಬುದು ಗೊತ್ತಾಗಿಲ್ಲ. ಆದರೂ ಈ ಅಪರೂಪದ ಹರಕೆ ಪತ್ರ ಮಠದ ಸಿಬ್ಬಂದಿ ಮತ್ತು ಭಕ್ತರಲ್ಲಿ ಆಶ್ಚರ್ಯ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಉತ್ತರ ಕನ್ನಡಕ್ಕೆ ಸಚಿವ ಸ್ಥಾನ ಇಲ್ಲ: ಕಾಂಗ್ರೆಸ್ ವಿರುದ್ಧ ಯುವ ನಾಯಕರ ಬಂಡಾಯ

ಕಾರವಾರ: ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿ ಕಾರವಾರ–ಅಂಕೋಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಘೋಷಿಸಿದ್ದಾರೆ. ಆದರೆ ಈ ರಾಜೀನಾಮೆ ನಾಟಕಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಯೇ ಹೊಸ ತಿರುವು ನೀಡಿದೆ.

ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿದ್ದರೂ, ಶಾಸಕ ಸತೀಶ್ ಸೈಲ್, ಮಂಕಾಳು ವೈದ್ಯ, ಆರ್.ವಿ. ದೇಶಪಾಂಡೆ ಹಾಗೂ ಭೀಮಣ್ಣ ನಾಯ್ಕ ಅವರಲ್ಲಿ ಯಾರಿಗೂ ಸಚಿವ ಸ್ಥಾನ ನೀಡದಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಸತೀಶ್ ಸೈಲ್ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಹೊಂದಿದ್ದ ಕಾರ್ಯಕರ್ತರು ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಯುವ ಕಾಂಗ್ರೆಸ್ ಪ್ರಕಟಣೆಯಲ್ಲಿ, ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ನಿಷ್ಠೆಗೆ ಗೌರವ ಸಿಕ್ಕಿಲ್ಲ. ಜಿಲ್ಲೆಗೆ ಸಚಿವ ಸ್ಥಾನ ನೀಡದ ನಿರ್ಧಾರದಿಂದ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಹೀಗಾಗಿ ಕಾರವಾರ–ಅಂಕೋಲಾ ವಿಧಾನಸಭಾ ಕ್ಷೇತ್ರದ ಎಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳು ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದು ಘೋಷಿಸಿದ್ದಾರೆ.

ರಾಜೀನಾಮೆ ಪಟ್ಟಿಯಲ್ಲಿ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ನೂತನ ಜೈನ, ಉಪಾಧ್ಯಕ್ಷ ದರ್ಶನ್ ನಾಯ್ಕ್, ಕಾರವಾರ ಬ್ಲಾಕ್ ಅಧ್ಯಕ್ಷ ಅಭಿಷೇಕ್ ರಾಣೆ ಸೇರಿದಂತೆ ಹಲವು ಪದಾಧಿಕಾರಿಗಳ ಹೆಸರುಗಳಿವೆ.

ಆದರೆ ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಮೋದ್ (ಸುಬ್ರಹ್ಮಣ್ಯ) ಶಿರಸಿಕರ್, ರಾಜೀನಾಮೆ ನೀಡಿದವರು ಕಳೆದ ಒಂದೂವರೆ ವರ್ಷಗಳಿಂದ ಯಾವುದೇ ಸಂಘಟನಾ ಚಟುವಟಿಕೆಯಲ್ಲಿ ಸಕ್ರಿಯರಾಗಿರಲಿಲ್ಲ. ಮೂರು ಸಭೆಗಳಿಗೆ ಗೈರಾಗಿದ್ದ ಕಾರಣ ಅವರನ್ನು ಕಾರ್ಯಕಾರಿಣಿ ಸಭೆಯಲ್ಲಿ ಅಮಾನತುಗೊಳಿಸಲು ಈಗಾಗಲೇ ನಿರ್ಧರಿಸಲಾಗಿತ್ತು. ಈ ವಿಚಾರವನ್ನು ನಿನ್ನೆ ತಿಳಿಸಿದ ಬಳಿಕ ಇಂದು ವಾಟ್ಸಾಪ್ ಮೂಲಕ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಹೀಗಾಗಿ ಇದನ್ನು ಅಧಿಕೃತ ರಾಜೀನಾಮೆಯಾಗಿ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಉತ್ತರ ಕನ್ನಡ ಕಾಂಗ್ರೆಸ್‌ನಲ್ಲಿ ರಾಜಕೀಯ ಭಿನ್ನಮತ ಮತ್ತಷ್ಟು ಬಹಿರಂಗವಾಗಿದೆ.