Home Blog Page 86

ರಾಜ್ಯಪಾಲರ ಭಾಷಣದ ಮೂಲಕ ಸುಳ್ಳುಗಳನ್ನು ಹೇಳಿಸಿದ ಸರ್ಕಾರ: ಆರ್.ಅಶೋಕ್ ಕಿಡಿ

0

ಬೆಂಗಳೂರು: ರಾಜ್ಯಪಾಲರ ಭಾಷಣದ ಮೂಲಕ ಕಾಂಗ್ರೆಸ್‌ ಸರ್ಕಾರ ಕೇವಲ ಸುಳ್ಳುಗಳನ್ನೇ ಹೇಳಿಸಿದೆ. ಸಿಎಂ ಸಿದ್ದರಾಮಯ್ಯನವರು ಹುಲಿಯಾ ಬದಲು ಇಲಿಯಾ ಆಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಮಾತನಾಡಿದ ಅವರು, ವಿಬಿ ಜಿ ರಾಮ್‌ ಜಿ ಕಾಯ್ದೆಗೆ ರಾಷ್ಟ್ರಪತಿ ಸಹಿ ಹಾಕಿ ಜಾರಿಯಾಗಿದೆ. ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆದುಹಾಕಿದ್ದೇಕೆ ಎಂದು ಕಾಂಗ್ರೆಸ್‌ ನಾಯಕರು ಪ್ರಶ್ನಿಸುತ್ತಿದ್ದಾರೆ. ರಾಮನ ಹೆಸರನ್ನು ಕಂಡರೆ ಕಾಂಗ್ರೆಸ್‌ಗೆ ಆಗಲ್ಲ. ಇದೇ ಕಾರಣಕ್ಕೆ ರಾಮನಗರ ಜಿಲ್ಲೆಯ ಹೆಸರನ್ನು ಬದಲಿಸಲಾಗಿದೆ.

ರಾಮಲಿಂಗಾರೆಡ್ಡಿ ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಈಗ ಅಲ್ಲಿ ಜಿಲ್ಲೆಯೇ ಇಲ್ಲ. ಮಹಾತ್ಮ ಗಾಂಧೀಜಿಯವರು ರಘುಪತಿ ರಾಘವ ರಾಜಾರಾಮ್‌ ಎಂದು ಹೇಳಿದ್ದರು. ಕಾಂಗ್ರೆಸ್‌ ಸರ್ಕಾರ ಕೇಂದ್ರದ ವಿರುದ್ಧ 18 ನಿರ್ಣಯಗಳನ್ನು ತೆಗೆದುಕೊಂಡಿದೆ. ಹೀಗೆ ಎಲ್ಲಕ್ಕೂ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುತ್ತಿದ್ದಾರೆ ಎಂದರು.

ಮಾಜಿ ಪ್ರಧಾನಿಗಳಾದ ಜವಹರಲಾಲ್‌ ನೆಹರು 17 ಬಾರಿ, ಇಂದಿರಾಗಾಂಧಿ 29 ಬಾರಿ, ರಾಜೀವ್‌ಗಾಂಧಿ 10 ಬಾರಿ ಸೇರಿದಂತೆ ಕಾಂಗ್ರೆಸ್‌ ಪಕ್ಷ 72 ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದೆ. ಮಾಜಿ ಅಟಲ್‌ ಬಿಹಾರಿ ವಾಜಪೇಯಿ 14 ಬಾರಿ ಹಾಗೂ ಪ್ರಧಾನಿ ನರೇಂದ್ರ ಮೋದಿ 8 ಬಾರಿ ತಿದ್ದುಪಡಿ ಮಾಡಿದ್ದಾರೆ.

ಅತಿ ಹೆಚ್ಚು ಬಾರಿ ತಿದ್ದುಪಡಿ ಮಾಡಿದ ಕಾಂಗ್ರೆಸ್‌ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ. “ಸಂವಿಧಾನವು ನಿರಂತರವಾಗಿರಬೇಕೆಂದರೆ ನಾವು ಅದನ್ನು ಬದಲಾಯಿಸುತ್ತಿರಬೇಕೆಂದು” ಜವಹರಲಾಲ್‌ ನೆಹರು ಹೇಳಿದ್ದರು. ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಂವಿಧಾನದ ಬಗ್ಗೆ ಬೇಜಾರಾಗಿ ಅದನ್ನು ಸುಟ್ಟುಹಾಕುತ್ತೇನೆಂದು ಹೇಳಿದ್ದರು ಎಂದರು.

GST , ಆದಾಯ ತೆರಿಗೆ ಕಟ್ಟುತ್ತಿರುವ ಮಹಿಳೆಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್!

0

ಬೆಂಗಳೂರು: ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಕಟ್ಟುತ್ತಿದ್ದಾರೆ ಎಂದು ಸುಮಾರು 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುತ್ತಿಲ್ಲ. ಈ ಪೈಕಿ ಸುಮಾರು 20 ಸಾವಿರ ಫಲಾನುಭವಿಗಳ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗಿದ್ದು, ಇನ್ನು ಉಳಿದವರ ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ವಿಶೇಷ ಅಧಿವೇಶನದ ವಿಧಾನ ಪರಿಷತ್‌ ಕಲಾಪದಲ್ಲಿ ಸದಸ್ಯರಾದ ಪಿ.ಎಚ್‌.ಪೂಜಾರ‌ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಇಲಾಖೆಗಳ ದಾಖಲೆಯಲ್ಲೂ ಇದೇ ರೀತಿ ತೋರಿಸುತ್ತಿದ್ದು, ಇದರಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದು, ಸರ್ಕಾರದ ಹಾಗೂ ನಮ್ಮ ಇಲಾಖೆಯದ್ದು ಯಾವುದೇ ತಪ್ಪಿಲ್ಲ ಎಂದರು.

ರಾಜ್ಯದಲ್ಲಿ ಸುಮಾರು 1.26 ಕೋಟಿ ಫಲಾನುಭವಿಗಳಿದ್ದು, ಕೆಲ ಫಲಾನುಭವಿಗಳು ಕೆಲವೊಂದು ವ್ಯವಹಾರ ನಡೆಸುವಾಗ ಜಿಎಸ್‌ಟಿ, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಗೃಹಲಕ್ಷ್ಮೀಗಾಗಿಯೇ ನಿರ್ಮಿಸಲಾಗಿರುವ ಸಾಫ್ಟ್‌ ವೇರ್‌ನಲ್ಲಿ ಜಿಎಸ್‌ಟಿ, ಆದಾಯ ತೆರಿಗೆ ಅಂತ ತೋರಿಸಿದರೆ ಬದಲಾವಣೆ ಮಾಡಲು ಸಾಧ್ಯವಿಲ್ಲ. ಗೃಹಲಕ್ಷ್ಮೀ ಯೋಜನೆ ನಿರಂತರ ಪ್ರಕ್ರಿಯೆ, ಈಗಾಗಲೇ ಆದಾಯ ತೆರಿಗೆ ಜಿಎಸ್‌ಟಿ ಕೌನ್ಸಿಲ್‌ ಗಮನಕ್ಕೂ ತರಲಾಗಿದೆ ಎಂದರು.

ಅಪ್ಪ, ಅಜ್ಜನ ಕರ್ಮಭೂಮಿ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ: ನಿಖಿಲ್ ಕುಮಾರಸ್ವಾಮಿ

0

ಚಿಕ್ಕಮಗಳೂರು: ರಾಮನಗರ ನಮ್ಮ ತಂದೆಯ ಕರ್ಮಭೂಮಿ ಮತ್ತು ನಮ್ಮ ತಾತನಿಗೆ ರಾಜಕೀಯ ಮರುಜನ್ಮ ನೀಡಿದ ಪುಣ್ಯಭೂಮಿ, ಹಾಗಾಗಿ ಆ ಮಣ್ಣನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಮನಗರ ಜಿಲ್ಲೆ ನನ್ನ ತಂದೆಯವರ ಕರ್ಮಭೂಮಿ. 1994ರಲ್ಲಿ ಹಾಸನದಿಂದ ಬಂದಂತಹ ನಮ್ಮ ತಾತ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ರಾಜಕೀಯವಾಗಿ ಮರುಜನ್ಮ ನೀಡಿದ ಪುಣ್ಯ ಭೂಮಿ ಅದು. ಅಂತಹ ಮಣ್ಣನ್ನು ಬಿಟ್ಟು ನಾನು ಎಲ್ಲಿಗೂ ಹೋಗುವುದಿಲ್ಲ’ ಎಂದು ಭಾವುಕರಾಗಿ ನುಡಿದರು.

ರಾಮನಗರದಲ್ಲಿ ನನ್ನನ್ನೇ ನಂಬಿರುವ ಸಾವಿರಾರು ಕಾರ್ಯಕರ್ತರಿದ್ದಾರೆ

ರಾಮನಗರದಲ್ಲಿನ ತಮ್ಮ ರಾಜಕೀಯ ಅಸ್ತಿತ್ವದ ಬಗ್ಗೆ ಮಾತನಾಡಿದ ನಿಖಿಲ್, ‘ಪಕ್ಷದ ಹಿರಿಯ ಮುಖಂಡರಿದ್ದಾರೆ ಮತ್ತು ನಮ್ಮ ಕುಟುಂಬವನ್ನು ಪ್ರೀತಿಸುವ ಒಂದು ದೊಡ್ಡ ವರ್ಗವೇ ಅಲ್ಲಿದೆ. ಅವರನ್ನು ನಡುನೀರಿನಲ್ಲಿ ಕೈಬಿಟ್ಟು ಬೇರೆ ಕ್ಷೇತ್ರಕ್ಕೆ ವಲಸೆ ಹೋಗುವ ಜಾಯಮಾನ ನಮ್ಮದಲ್ಲ. ಬೇರೆ ಯಾವುದೇ ಕ್ಷೇತ್ರದಲ್ಲಿ ನಾನು ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆ

ದೇವೇಗೌಡರ ಕುಟುಂಬ ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅಪಾರ ಶ್ರಮ ಹಾಕಿದೆ. ಅಲ್ಲಿನ ನೀರಾವರಿ, ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯಗಳ ವೃದ್ಧಿಗೆ ನಾವು ಪ್ರಾಮಾಣಿಕವಾಗಿ ದುಡಿದಿದ್ದೇವೆ. ಈ ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆಯಾಗಲಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಜನರ ವಿಶ್ವಾಸಗಳಿಸುತ್ತೇವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಸೋಲು-ಗೆಲುವು ಸಹಜ

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷಕ್ಕೆ ಸಣ್ಣಪುಟ್ಟ ಹಿನ್ನೆಡೆಗಳಾಗಿರಬಹುದು, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ರಾಜಕೀಯದಲ್ಲಿ ಏರುಪೇರುಗಳು ಸರ್ವೇ ಸಾಮಾನ್ಯ. ಕಳೆದ ನಾಲ್ಕು ಚುನಾವಣೆಗಳಲ್ಲಿ ರಾಮನಗರದ ಜನತೆ ನಮ್ಮ ಕೈಬಿಟ್ಟಿರಲಿಲ್ಲ. ಆದರೆ ಕೆಲವೊಮ್ಮೆ ಕಾಲಘಟ್ಟದಲ್ಲಿ ಬದಲಾವಣೆಗಳಾಗುತ್ತವೆ. ಅದೆಲ್ಲವನ್ನೂ ನಾವು ಸಮತೋಲನದಿಂದ ಸ್ವೀಕರಿಸಬೇಕು ಎಂದು ತಿಳಿಸಿದರು.

ಜಾತಿಗಣತಿಯು ಕೇವಲ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ನಡೆಯಬೇಕೇ ಹೊರತು, ಇದು ರಾಜಕೀಯ ಉದ್ದೇಶದ ತಂತ್ರವಾಗಬಾರದು. ಸರ್ಕಾರದ ಲೋಪದೋಷಗಳು ಹಾಗೂ ಸಮಸ್ಯೆಗಳು ಎದುರಾದಾಗ ಜನರನ್ನು ದಿಕ್ಕು ತಪ್ಪಿಸಲು ಇಂತಹ ವಿಚಾರಗಳನ್ನು ಮುನ್ನೆಲೆಗೆ ತರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು,

ಜಾತಿಗಣತಿಯನ್ನು ನಾವು ಸ್ವಾಗತಿಸುತ್ತೇವೆ, ಆದರೆ ಈ ವರದಿಯು ಅತ್ಯಂತ ಪಾರದರ್ಶಕವಾಗಿರಬೇಕು, ಜನಪರವಾಗಿರಬೇಕೇ ಹೊರತು ರಾಜಕೀಯ ಪ್ರೇರಿತವಾಗಿರಬಾರದು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

BREAKING: ಅನುಮಾನಾಸ್ಪದವಾಗಿ 4ನೇ ಮಹಡಿಯಿಂದ ಬಿದ್ದು ಯುವಕ ಸಾವು!

0

ಬೆಂಗಳೂರು: ಬೆಂಗಳೂರಿನ ಭಾರತಿನಗರದ ಫ್ರೂಟ್ಸ್ ಮಾರ್ಕೆಟ್ ಬಳಿ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತನನ್ನು ಇರ್ಫಾನ್ ಮುಲ್ಲಾನಿ (26) ಎಂದು ಗುರುತಿಸಲಾಗಿದೆ.

ಜನವರಿ 30ರಂದು ಈ ಘಟನೆ ನಡೆದಿದ್ದು, ಇರ್ಫಾನ್ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಅಚಾನಕ್ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಯಾರಾದರೂ ಮೇಲಿಂದ ತಳ್ಳಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.

ಘಟನೆ ಸಂಬಂಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣವಾಗಿ ದೂರು ದಾಖಲಿಸಿಕೊಳ್ಳಲಾಗಿದೆ. ಸಾವಿಗೆ ನಿಖರ ಕಾರಣ ತಿಳಿಯಲು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

 

ಇನ್ಸ್‌ಪೆಕ್ಟರ್ ಗೋವಿಂದರಾಜು ಟ್ರಾಪ್ ಪ್ರಕರಣ: ಲೋಕಾಯುಕ್ತ ಪೊಲೀಸರ ವಿರುದ್ಧ ದೂರು

0

ಬೆಂಗಳೂರು: ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಗೋವಿಂದರಾಜು ಟ್ರಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ವಿರುದ್ಧ ದೂರು ದಾಖಲಾಗಿದೆ. ಟ್ರಾಪ್ ಕಾರ್ಯಾಚರಣೆ ವೇಳೆ ಲೋಕಾಯುಕ್ತ ಸಿಬ್ಬಂದಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಟ್ರಾಪ್ ವೇಳೆ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಹಿರಿಯ ವಕೀಲ ಪ್ರಶಾಂತ್ ಮೆತಲ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಲಂಚಮುಕ್ತ ಸಮಾಜ ನಿರ್ಮಾಣಕ್ಕೆ ಲೋಕಾಯುಕ್ತ ಮಾಡುತ್ತಿರುವ ಕೆಲಸ ಶ್ಲಾಘನೀಯವಾದರೂ, ಈ ಪ್ರಕರಣದಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಾನೂನು ಪಾಲನೆ ಮಾಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನಲ್ಲಿ, ಟ್ರಾಪ್ ಕಾರ್ಯಾಚರಣೆ ವೇಳೆ ಹೋಮ್ ಗಾರ್ಡ್ ಒಬ್ಬರು ಸೆಲ್ಫಿ ವಿಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ರೀತಿ ವಿಡಿಯೋ ಚಿತ್ರೀಕರಣ ಹಾಗೂ ವೈರಲ್ ಮಾಡಲು ಅವರಿಗೆ ಯಾರು ಅನುಮತಿ ನೀಡಿದರು ಎಂಬ ಪ್ರಶ್ನೆಯನ್ನೂ ದೂರಿನಲ್ಲಿ ಎತ್ತಲಾಗಿದೆ.

ವೈರಲ್ ಆದ ವಿಡಿಯೋದಿಂದ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರ ಕುಟುಂಬಕ್ಕೆ ತೀವ್ರ ಮಾನಸಿಕ ನೋವುಂಟಾಗಿದೆ. ಈ ಕಾರಣದಿಂದಾಗಿ ಅವರ ಮಕ್ಕಳು ಶಾಲೆಗೆ ಹೋಗಲು ಸಹ ಸಾಧ್ಯವಾಗುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದಾಗಿ ಗೋವಿಂದರಾಜು ಅವರು ಮಾನನಷ್ಟ (ಡಿಫಮೇಶನ್) ಮೊಕದ್ದಮೆ ಹೂಡಲು ಚಿಂತಿಸುತ್ತಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಲೋಕಾಯುಕ್ತ ಪೊಲೀಸರು ಸ್ವತಂತ್ರ ಹಾಗೂ ಸಮಗ್ರ ತನಿಖೆ ನಡೆಸಬೇಕೆಂದು ದೂರುದಲ್ಲಿ ಆಗ್ರಹಿಸಲಾಗಿದೆ.

ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ: SIT ವರದಿಗಾಗಿ ಕಾದು ನೋಡೋಣ – ಸಚಿವ ಪರಮೇಶ್ವರ್

0

ಬೆಂಗಳೂರು: ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡುವ ವರದಿ ಏನು ಹೇಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ರಾಯ್ ಅವರಿಗೆ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಗಳಿಂದ ಕಿರುಕುಳವಿತ್ತು ಎಂಬ ಅವರ ಆಪ್ತರ ಆರೋಪಗಳ ಕುರಿತು ವಿಧಾನಸೌಧದ ಬಳಿ ಇಂದು ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, “ಪ್ರಕರಣದ ಬಗ್ಗೆ ಅನಗತ್ಯ ಊಹಾಪೋಹಗಳು ನಡೆಯಬಾರದು ಎಂಬ ಕಾರಣದಿಂದಲೇ ತಕ್ಷಣ ಎಸ್‌ಐಟಿ ರಚನೆ ಮಾಡಿದ್ದೇವೆ. ಎಸ್‌ಐಟಿ ತನಿಖಾ ವರದಿ ಏನು ಹೇಳುತ್ತದೆ, ಯಾರ ಪಾತ್ರ ಏನಿದೆ ಎಂಬುದನ್ನು ನೋಡಬೇಕಾಗುತ್ತದೆ” ಎಂದು ಹೇಳಿದರು.

ಇದೀಗ ರಾಯ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಎಸ್‌ಐಟಿ ಅಧಿಕಾರಿಗಳು ಕುಟುಂಬಸ್ಥರ ಹೇಳಿಕೆ ದಾಖಲಿಸಲು ಮುಂದಾಗಿದ್ದಾರೆ. ಇದೇ ವೇಳೆ, ರಾಯ್ ಅವರು ತಮ್ಮ ದಿನನಿತ್ಯದ ಆಗುಹೋಗುಗಳು ಹಾಗೂ ವ್ಯವಹಾರಿಕ ನಿರ್ಧಾರಗಳನ್ನು ದಾಖಲಿಸುತ್ತಿದ್ದ ಡೈರಿಯನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಡೈರಿಯಲ್ಲಿ ರಾಯ್ ಅವರ ನಿತ್ಯದ ಭೇಟಿಗಳು ಮತ್ತು ವ್ಯವಹಾರ ಸಂಬಂಧಿತ ವಿಚಾರಗಳು ಉಲ್ಲೇಖವಾಗಿದ್ದರೂ, ಅದನ್ನು ಡೆತ್ ನೋಟ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಎಸ್‌ಐಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ತಮ್ಮ ಸಾವಿಗೆ ನಿರ್ದಿಷ್ಟ ಕಾರಣ ಅಥವಾ ಅಂತಿಮ ಸಂದೇಶವನ್ನು ರಾಯ್ ಅವರು ಡೈರಿಯಲ್ಲಿ ಉಲ್ಲೇಖಿಸಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಅದು ಸಾಮಾನ್ಯ ದಿನಚರಿಯಾಗಿದ್ದು, ಡೆತ್ ನೋಟ್ ಅಲ್ಲ ಎಂಬ ನಿಲುವನ್ನು ತನಿಖಾಧಿಕಾರಿಗಳು ತೆಗೆದುಕೊಂಡಿದ್ದಾರೆ.

ಇದಲ್ಲದೆ, ರಾಯ್ ಅವರು ಆತ್ಮಹತ್ಯೆಗೆ ಬಳಸಿದ ಪಿಸ್ತೂಲ್‌ನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅದು ಬೆಲ್ಜಿಯಮ್‌ನಲ್ಲಿ ತಯಾರಿಸಲಾದ ಸ್ಮಾರ್ಟ್ ಮಿನಿ ಸೌಂಡ್‌ಲೆಸ್ ಪಿಸ್ತೂಲ್ ಆಗಿದ್ದು, ಮೇಲ್ನೋಟಕ್ಕೆ ಪರವಾನಗಿ ಪಡೆದ ಆಯುಧ ಎಂದು ತಿಳಿದು ಬಂದಿದೆ. ಆದರೆ, ಪಿಸ್ತೂಲ್ ಹಾಗೂ ಬುಲೆಟ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಡಹಗಲೇ ಸಿನಿಮೀಯ ದರೋಡೆ: ಬೈಕ್ ಅಡ್ಡಗಟ್ಟಿ ₹31.38 ಲಕ್ಷ ದೋಚಿದ ಖದೀಮರ ಗ್ಯಾಂಗ್

0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖದೀಮರ ಅಟ್ಟಹಾಸ ಮಿತಿಮೀರಿದ್ದು, ಬನ್ನೇರುಘಟ್ಟ ಸಮೀಪ ಹಾಡಹಗಲೇ ಸಿನಿಮೀಯ ರೀತಿಯಲ್ಲಿ ನಡೆದ ದರೋಡೆ ಪ್ರಕರಣ ನಗರವನ್ನೇ ಬೆಚ್ಚಿಬೀಳಿಸಿದೆ. ಬೈಕ್‌ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗ್ಯಾಂಗ್, ಬರೋಬ್ಬರಿ 31 ಲಕ್ಷ 38 ಸಾವಿರ 625 ರೂಪಾಯಿ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಭಾನುವಾರ ನಡೆದಿದೆ.

ಕೈಲಾಸ್ ಎಂಬ ಯುವಕ ರಾಕೇಶ್ ಎಂಬುವವರ ಬಳಿ ಕ್ಯಾಶ್ ಕಲೆಕ್ಟಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಉಡಾನ್ (Udaan) ಕಂಪನಿಯ ವಿವಿಧ ಬ್ರಾಂಚ್‌ಗಳಿಗೆ ಭೇಟಿ ನೀಡಿ ಹಣ ಸಂಗ್ರಹಿಸುವುದು ಈತನ ಕೆಲಸವಾಗಿತ್ತು. ಎಂದಿನಂತೆ ಭಾನುವಾರ ಸಂಜೆ ಕೈಲಾಸ್ ವಿವಿಧ ಬ್ರಾಂಚ್‌ಗಳಿಂದ ಒಟ್ಟು ₹31,38,625 ಹಣವನ್ನು ಕಲೆಕ್ಟ್ ಮಾಡಿದ್ದ.

ಸಂಗ್ರಹಿಸಿದ ಈ ಬೃಹತ್ ಮೊತ್ತದ ಹಣವನ್ನು ಕೈಲಾಸ್ ತನ್ನ ಜುಪಿಟರ್ ಸ್ಕೂಟರ್‌ನ ಡಿಕ್ಕಿಯಲ್ಲಿಟ್ಟು, ಬನ್ನೇರುಘಟ್ಟ ಸಮೀಪದ ಸಕಲವಾರ ರಸ್ತೆಯಲ್ಲಿ ಸಂಚರಿಸುತ್ತಿದ್ದ. ಸಂಜೆ ಸುಮಾರು 4:20ರ ವೇಳೆಗೆ ಸಕಲವಾರ ರಸ್ತೆಯಿಂದ ಬನ್ನೇರುಘಟ್ಟದ ಕಡೆಗೆ ಬರುತ್ತಿದ್ದಾಗ ದರೋಡೆ ನಡೆದಿದೆ.

ಎರಡು ಬೈಕ್‌ಗಳಲ್ಲಿ ಬೆನ್ನಟ್ಟಿಕೊಂಡು ಬಂದ ನಾಲ್ವರು ಅಪರಿಚಿತ ವ್ಯಕ್ತಿಗಳು ಏಕಾಏಕಿ ಕೈಲಾಸ್‌ನನ್ನು ಅಡ್ಡಗಟ್ಟಿದ್ದಾರೆ. ಕೈಯಲ್ಲಿದ್ದ ಲಾಂಗ್ (Long) ತೋರಿಸಿ ಬೆದರಿಸಿದ ದರೋಡೆಕೋರರು, ಯುವಕನ ಮೇಲೆ ಹಲ್ಲೆಗೆ ಮುಂದಾಗಿ, ಬೈಕ್ ಸಮೇತ ಅಲ್ಲಿಂದ ಪರಾರಿಯಾಗಿದ್ದಾರೆ.

ದರೋಡೆ ಮಾಡಿದ ಗ್ಯಾಂಗ್ ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ಕೈಲಾಸ್‌ನ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಹೋಗಿದ್ದು, ನಂತರ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ, ಡಿಕ್ಕಿಯಲ್ಲಿದ್ದ ₹31 ಲಕ್ಷಕ್ಕೂ ಅಧಿಕ ಹಣವನ್ನು ತೆಗೆದುಕೊಂಡು ಖಾಲಿ ಬೈಕನ್ನು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬನ್ನೇರುಘಟ್ಟ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಸಂಬಂಧ ದರೋಡೆ ಪ್ರಕರಣ ದಾಖಲಿಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಮನೆಗೆಲಸದವನೇ ಪೈಶಾಚಿಕ: 65 ವರ್ಷದ ವೃದ್ಧೆ ಮೇಲೆ ಅತ್ಯಾಚಾರ–ಕೊಲೆ, ಬಳಿಕ ಆತ್ಮಹತ್ಯೆ

0

ಬೆಂಗಳೂರು: ನಗರದಲ್ಲಿ ಮಾನವೀಯತೆ ಮರೆತ ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದೆ. 65 ವರ್ಷದ ವೃದ್ಧ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಬಳಿಕ ಕುತ್ತಿಗೆ ಹಿಸುಕಿ ಕೊಲೆ ಮಾಡಿ, ಆರೋಪಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಮಹಿಳೆಯ ಮನೆಯಲ್ಲಿ ಕಳೆದ ಎಂಟು ವರ್ಷಗಳಿಂದ ಗೃಹಸಹಾಯಕನಾಗಿ ಕೆಲಸ ಮಾಡುತ್ತಿದ್ದ ದೇವರಾಜು (50) ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ತಮಿಳುನಾಡಿನ ಹೊಸೂರು ಮೂಲದ ದೇವರಾಜು, ಇದೇ ಕಾಲೋನಿಯ ಇತರ ಮನೆಗಳಲ್ಲಿಯೂ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದಾನೆ. ಮೃತ ಮಹಿಳೆಯ ಕುತ್ತಿಗೆಯಲ್ಲಿ ಗಾಯದ ಗುರುತುಗಳು ಪತ್ತೆಯಾಗಿದ್ದು, ಹತ್ಯೆಗೆ ಮುನ್ನ ಅತ್ಯಾಚಾರ ನಡೆದಿದೆಯೇ ಎಂಬುದರ ಬಗ್ಗೆ ಪೊಲೀಸರು ವೈದ್ಯಕೀಯ ಹಾಗೂ ಫಾರೆನ್ಸಿಕ್ ವರದಿ ನಿರೀಕ್ಷಿಸುತ್ತಿದ್ದಾರೆ.

ಅಪರಾಧ ನಡೆದ ಬಳಿಕ ಭಯಗೊಂಡು ಆರೋಪಿ ಮನೆಯೊಳಗೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಮಹಿಳೆಯ ಪತಿ ಖ್ಯಾತ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೆಲಸದ ನಿಮಿತ್ತ ವಿದೇಶದಲ್ಲಿದ್ದರು. ಭಾನುವಾರ ಬೆಳಗ್ಗೆ ಸುಮಾರು 5 ಗಂಟೆಗೆ ಮನೆಗೆ ಮರಳಿದ ವೇಳೆ ಈ ದಾರುಣ ಘಟನೆ ಬೆಳಕಿಗೆ ಬಂದಿದೆ.

ಮನೆಯ ಬಾಗಿಲು ತೆರೆಯುತ್ತಿದ್ದಂತೆ ಮಲಗುವ ಕೋಣೆಯಲ್ಲಿ ದೇವರಾಜು ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಹಾಗೂ ಪತ್ನಿ ನೆಲದಲ್ಲಿ ಬಿದ್ದಿರುವುದನ್ನು ಕಂಡು ಪತಿ ಕಿರುಚಿಕೊಂಡಿದ್ದಾರೆ. ಅವರ ಶಬ್ದ ಕೇಳಿ ಮೊದಲ ಮಹಡಿಯಲ್ಲಿ ವಾಸವಿದ್ದ 27 ವರ್ಷದ ಪುತ್ರಿ ಕೆಳಗೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಕೊಲೆ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಯಶ್‌ ತಾಯಿ ಪುಷ್ಪ ಸೈಟ್‌ ಜಟಾಪಟಿ: ಒಂದೇ ಜಾಗಕ್ಕೆ ಎರಡೆರಡು ದಾಖಲೆ ನೀಡಿ ಅಧಿಕಾರಿಗಳ ಯಡವಟ್ಟು?

ಹಾಸನದಲ್ಲಿ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಎದುರಿಸುತ್ತಿರುವ ನಿವೇಶನ ವಿವಾದ ಇದೀಗ ಕೇವಲ ಖಾಸಗಿ ಜಗಳವಲ್ಲ, ವ್ಯವಸ್ಥೆಯ ವೈಫಲ್ಯವನ್ನು ಬಹಿರಂಗಪಡಿಸುವ ಪ್ರಕರಣವಾಗಿ ಹೊರಹೊಮ್ಮಿದೆ.

1982ರಿಂದ 2020ರವರೆಗೆ ಸುಮಾರು 44 ವರ್ಷಗಳ ಕಾಲ ಯಾವುದೇ ತಕರಾರು ಇಲ್ಲದೇ ಹಲವು ಮಾಲೀಕರ ಮೂಲಕ ಸಾಗಿದ ನಿವೇಶನದ ಮೇಲೆ, ಇದೀಗ ಏಕಾಏಕಿ ಜಿಪಿಎ ಹೋಲ್ಡರ್ ದೇವರಾಜು ಹಕ್ಕು ಮಂಡಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಲಕ್ಷ್ಮಮ್ಮ ಎಂಬವರು ಈ ಜಾಗದ ಮಾಲೀಕರು ಎಂದು ಹೇಳಿಕೊಂಡು ದೇವರಾಜು ಜಿಪಿಎ ಪಡೆದು ಕೋರ್ಟ್ ಮೆಟ್ಟಿಲೇರಿದ್ದಾರೆ.

ಪುಷ್ಪಾ ಅವರ ವಾದದ ಪ್ರಕಾರ, 2020ರಲ್ಲಿ ಕಾನೂನುಬದ್ಧವಾಗಿ ನಿವೇಶನ ಖರೀದಿ ಮಾಡಿ ಮೂರು ವರ್ಷಗಳಿಂದ ಸ್ವಾಧೀನದಲ್ಲಿದ್ದು, ಎಲ್ಲಾ ದಾಖಲೆಗಳು ತಮ್ಮ ಬಳಿ ಇವೆ. ಈ ನಡುವೆ ಯಶ್ ಅವರ ಹೆಸರು ಹಾಳು ಮಾಡಲು ಷಡ್ಯಂತ್ರ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ.

ದಾಖಲೆಗಳನ್ನು ಪರಿಶೀಲಿಸಿದಾಗ, ಇ-ಸ್ವತ್ತು ಮಾಡಿಸುವ ವೇಳೆ ಪಿಡಿಓ ಅಥವಾ ಕಾರ್ಯದರ್ಶಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಬೇಕಿದ್ದರೂ, ಕಚೇರಿಯಲ್ಲೇ ಕುಳಿತು ಎರಡೆರಡು ಖಾತೆ, ಸರ್ವೆ ನಂಬರ್ ಹಾಗೂ ಇ-ಸ್ವತ್ತು ಮಾಡಿಕೊಟ್ಟಿರುವುದು ಅಧಿಕಾರಿಗಳ ಗಂಭೀರ ಲೋಪವಾಗಿದೆ ಎಂಬುದು ಸ್ಪಷ್ಟವಾಗಿದೆ.

ಸಬ್‌ರಿಜಿಸ್ಟರ್ ಕಚೇರಿಯಲ್ಲೇ ಮೋಸ ನಡೆದಿದೆಯೇ? ಗ್ರಾಮ ಪಂಚಾಯಿತಿಯಲ್ಲಿ ಎರಡೆರಡು ದಾಖಲೆ ಸೃಷ್ಟಿಯಾಗಿದೆಯೇ? ಎಂಬ ಪ್ರಶ್ನೆಗಳು ಈಗ ಉದ್ಭವಿಸಿದ್ದು, ಈ ಪ್ರಕರಣ ಇಡೀ ಆಡಳಿತ ವ್ಯವಸ್ಥೆಯ ಮೇಲೆಯೇ ಅನುಮಾನ ಮೂಡಿಸಿದೆ.

ಒಟ್ಟಿನಲ್ಲಿ, ಒಂದೇ ನಿವೇಶನಕ್ಕೆ ಎರಡು ಮಾಲೀಕರು ಹಕ್ಕು ಮಂಡಿಸುತ್ತಿರುವ ಈ ಪ್ರಕರಣದ ಅಂತಿಮ ಉತ್ತರ ನ್ಯಾಯಾಲಯದ ತೀರ್ಪಿನ ಮೇಲೆಯೇ ನಿಂತಿದ್ದು, ಸರ್ಕಾರದ ಅಧಿಕಾರಿಗಳ ಯಡವಟ್ಟು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ 18 ಕೋಟಿ ಚಿನ್ನಾಭರಣ ಕಳ್ಳತನ ಕೇಸ್: ನೇಪಾಳಿ ದಂಪತಿಗೆ ಬಲೆ ಬೀಸಿದ ಪೊಲೀಸರು!

0

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ 18 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣದಲ್ಲಿ ಮಾರತ್ ಹಳ್ಳಿ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಸ್ಪೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ. ಈ ಕೃತ್ಯದ ಹಿಂದೆ ದೇಶದ ವಿವಿಧ ಭಾಗಗಳಲ್ಲಿ ಕಳ್ಳತನ ಮಾಡಿರುವ ನೇಪಾಳಿ ದಂಪತಿ ಕೈವಾಡವಿರುವುದು ಪತ್ತೆಯಾಗಿದೆ.

ಆರೋಪಿಗಳು ದಿನೇಶ್ ಹಾಗೂ ಕಮಲ ಎಂಬ ಹೆಸರಿನಲ್ಲಿ ಮನೆಕೆಲಸಕ್ಕೆ ಸೇರಿಕೊಂಡು ಕಳ್ಳತನ ನಡೆಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಇದೇ ಮಾದರಿಯಲ್ಲಿ ಅವರು ಬೆಂಗಳೂರಿನಲ್ಲಿ ಬರೋಬ್ಬರಿ 18 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.

ಇದಲ್ಲದೆ, 2025ರ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದಲ್ಲೂ ಈ ಜೋಡಿ ಕಳ್ಳತನ ನಡೆಸಿದ್ದ ಮಾಹಿತಿ ಲಭ್ಯವಾಗಿದೆ. ಮಹಾರಾಷ್ಟ್ರದ ನಿವೃತ್ತ ಸರ್ಕಾರಿ ಅಧಿಕಾರಿಯ ಮನೆಯಲ್ಲಿ 16 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿನ ಕಳ್ಳತನದ ಕೇವಲ ಎರಡು ತಿಂಗಳೊಳಗೆ ಮತ್ತೆ ಬೆಂಗಳೂರಿನಲ್ಲಿ ಕಳ್ಳತನ ನಡೆಸಿರುವುದು ತನಿಖೆಯಿಂದ ಬಹಿರಂಗವಾಗಿದೆ.

ಪುಣೆಯ ಭಾವ್ಧಾನ್ ನಗರದ ವಿಂಡ್ಮಿಲ್ ಸೊಸೈಟಿಯಲ್ಲಿರುವ ರತ್ನಾದೀಪ್ ರಂಗನಾಥ್ ರಾವ್ ಅವರ ಮನೆಯಲ್ಲಿ ದಿನೇಶ್ ಹಾಗೂ ಸಲೀನಾ ಎಂಬ ಹೆಸರಿನಲ್ಲಿ ಮನೆಕೆಲಸಕ್ಕೆ ಸೇರಿದ್ದ ಆರೋಪಿಗಳು, ಸುಮಾರು ಆರು ತಿಂಗಳ ಬಳಿಕ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಮನೆಯವರು ಹೊರಗಿದ್ದ ಸಂದರ್ಭವನ್ನು ಬಳಸಿಕೊಂಡು ರೂಮಿನ ಲಾಕರ್ ಒಡೆದು ಚಿನ್ನಾಭರಣ ಕದ್ದಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಆರೋಪಿಗಳ ಪತ್ತೆಗೆ ಮಾರತ್ ಹಳ್ಳಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಸುಮಾರು ಏಳು ವಿಶೇಷ ತಂಡಗಳನ್ನು ರಚಿಸಲಾಗಿದೆ. ಮುಂಬೈ, ಕಲ್ಕತ್ತಾ, ನೇಪಾಳ ಸೇರಿದಂತೆ ಹಲವು ಕಡೆಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

ಆರೋಪಿಗಳು ನೇಪಾಳಕ್ಕೆ ಪರಾರಿಯಾಗಿದ್ದರೆ ಅವರನ್ನು ಬಂಧಿಸುವುದು ಕಷ್ಟವಾಗಲಿದೆ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ನಾಲ್ಕೈದು ಜನರ ಗ್ಯಾಂಗ್ ಈ ಕಳ್ಳತನದ ಹಿಂದೆ ಇರುವ ಸಾಧ್ಯತೆ ಇದ್ದು, ಸ್ಥಳೀಯವಾಗಿ ಆರೋಪಿಗಳಿಗೆ ಯಾರಾದರೂ ಸಹಕಾರ ನೀಡಿದ್ದಾರೆಯೇ ಎಂಬುದರ ಕುರಿತು ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!