Home Blog Page 87

ಕಾನ್ಪಿಡೆಂಟ್‌ ಗ್ರೂಪ್ ಚೇರ್ ಮೆನ್ ಸಿ.ಜೆ.ರಾಯ್ ಆತ್ಮಹತ್ಯೆ ಕೇಸ್:‌ ಕಮೀಷನರ್ ಸೀಮಂತ್ ಕುಮಾರ್ ಹೇಳಿದ್ದೇನು..?

0

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಚೇರ್‌ಮನ್ ಸಿ.ಜೆ. ರಾಯ್ ಅವರು ಇಂದು ಬೆಂಗಳೂರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ, ರಿಚ್ಮಂಡ್ ಸರ್ಕಲ್ ಬಳಿಯ ಕಾನ್ಫಿಡೆಂಟ್ ಗ್ರೂಪ್ ಕಚೇರಿಗೆ ಸಂಜೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನಾ ಸ್ಥಳ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, “ಸಿ.ಜೆ. ರಾಯ್ ಅವರು ಸ್ವತಃ ಗುಂಡು ಹಾರಿಸಿಕೊಂಡಿರುವುದು ಪ್ರಾಥಮಿಕವಾಗಿ ಕಂಡುಬರುತ್ತಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದರು.

ಇಂದು ಮಧ್ಯಾಹ್ನ ಸುಮಾರು 3.15ರ ವೇಳೆಗೆ ಈ ಘಟನೆ ನಡೆದಿದೆ ಎಂದು ಅವರು ಹೇಳಿದರು. ಕಳೆದ ಮೂರು ದಿನಗಳಿಂದ ಕಾನ್ಫಿಡೆಂಟ್ ಗ್ರೂಪ್ ಹಾಗೂ ಸಿ.ಜೆ. ರಾಯ್ ಸಂಬಂಧಿತವಾಗಿ ಆದಾಯ ತೆರಿಗೆ ಇಲಾಖೆಯ ದಾಳಿ ನಡೆಯುತ್ತಿತ್ತು. ಕೇರಳದಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಂದಿದ್ದರು. ಸದ್ಯ ಘಟನಾ ಸ್ಥಳದಲ್ಲಿ ಯಾವುದೇ ಐಟಿ ಅಧಿಕಾರಿಗಳು ಇಲ್ಲ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದರು.

“ನಮ್ಮ ಪೊಲೀಸರು ಆದಾಯ ತೆರಿಗೆ ಇಲಾಖೆಯಿಂದಲೂ ಅಗತ್ಯ ಮಾಹಿತಿಯನ್ನು ಪಡೆಯಲಿದ್ದಾರೆ. ಸಿ.ಜೆ. ರಾಯ್ ಅವರ ಕುಟುಂಬದವರು ವಿದೇಶದಲ್ಲಿದ್ದು, ಅವರು ಈಗ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗುವುದು” ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದರು.

ಮೇಲ್ನೋಟಕ್ಕೆ ಇದು ಸೆಲ್ಫ್ ಶೂಟ್ ಪ್ರಕರಣವಾಗಿರುವಂತೆ ಕಾಣಿಸುತ್ತಿದೆ. ಆದರೆ ಈ ಪ್ರಕರಣದಲ್ಲಿ ಅಸಹಜ ಸಾವು (UDR) ಪ್ರಕರಣ ದಾಖಲಿಸಬೇಕೋ ಅಥವಾ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಬೇಕೋ ಎಂಬ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂಬಂಧ ಕಾನ್ಫಿಡೆಂಟ್ ಗ್ರೂಪ್‌ನ ಒಬ್ಬ ನಿರ್ದೇಶಕರು ದೂರು ನೀಡಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಘಟನೆಯ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಆಹಾರ ಸುರಕ್ಷತಾ ಅಧಿಕಾರಿಗಳಿಂದ ಪರಿಶೀಲನೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿನ ಕಿರಾಣಿ, ಹೋಟೆಲ್, ಬೇಕರಿ ಇತರೆ ಆಹಾರ ಪದಾರ್ಥ ಮಾರಾಟದ ಅಂಗಡಿಗಳಿಗೆ ಶುಕ್ರವಾರ ತಾಲೂಕಾ ಆಹಾರ ಸುರಕ್ಷತಾ ಮತ್ತು ತಾಲೂಕಾ ವೈದ್ಯಾಧಿಕಾರಿ ಡಾ. ಸುಭಾಸ್ ದಾಯಗೊಂಡ ಭೇಟಿ ನೀಡಿ ಪರಿಶೀಲಿಸಿದರು.

ಲಕ್ಷ್ಮೇಶ್ವರ ಪಟ್ಟಣದ ಕಿರಾಣಿ ಅಂಗಡಿಗಳಲ್ಲಿ ಕಳಪೆ ಉಪ್ಪು ಮಾರಾಟವಾಗುತ್ತಿದೆ ಮತ್ತು ಹೋಟೆಲ್, ಬೇಕರಿಗಳಲ್ಲಿನ ಪದಾರ್ಥಗಳ ಗುಣಮಟ್ಟ ಮತ್ತು ಸ್ವಚ್ಛತೆಯ ಬಗ್ಗೆ ಸಾರ್ವಜನಿಕರು ಮತ್ತು ಸಾಮಾಜಿಕ ಮಾಧ್ಯಮಗಳಿಂದ ಬಂದ ದೂರುಗಳನ್ನು ಆಧರಿಸಿ ಡಾ. ಸುಭಾಸ್ ದಾಯಗೊಂಡ ಸಿಬ್ಬಂದಿಗಳೊಡಗೂಡಿ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಗುಣಮಟ್ಟ, ಸುರಕ್ಷತೆ, ಸ್ವಚ್ಛತೆ ಪರಿಶೀಲಿಸಿ ನಿಯಮ ಪಾಲಿಸದ ವ್ಯಾಪಾರಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರಲ್ಲದೆ, ಕೆಲವರಿಗೆ ನೋಟೀಸ್ ಕೊಟ್ಟರು.

ಈ ವೇಳೆ ಮಾತನಾಡಿದ ಅವರು, ಪಟ್ಟಣದಲ್ಲಿ ಎಗ್‌ರೈಸ್ ಅಂಗಡಿಗಳ ಸಂಖ್ಯೆ ಹೆಚ್ಚಿವೆ. ಇಲ್ಲಿ ಯಥೇಚ್ಚವಾಗಿ ಅಜಿನೋಮೋಟೋ, ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್ ಬಳಸಲಾಗುತ್ತಿದೆ. ಕಿರಾಣಿ ಅಂಗಡಿಗಳಲ್ಲಿ ಕಲಬೆರಕೆ ಮತ್ತು ಗುಣಮಟ್ಟವಿಲ್ಲದ ಉಪ್ಪಿನ ಪ್ಯಾಕೆಟ್ ಮತ್ತು ಧಾನ್ಯಗಳು ಸಹಿತ ಆಹಾರ ಪದಾರ್ಥಗಳ ಮಾರಾಟವಾಗುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಲಾಗುತ್ತಿದೆ. ಉಪ್ಪು ಸೇರಿ ಸಂಶಯಾಸ್ಪದ ಆಹಾರ ಪದಾರ್ಥಗಳ ಸ್ಯಾಂಪಲ್ ಪಡೆದುಕೊಂಡಿದ್ದು, ಪರೀಕ್ಷೆಗೊಳಪಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಭೇಟಿಯ ವೇಳೆ ಅನೇಕರು ಲೈಸನ್ಸ್, ಲೇಬಲ್ ಇಲ್ಲದೇ ವ್ಯಾಪಾರ ಮಾಡುತ್ತಿರುವುದು, ಸ್ವಚ್ಛತೆ ಕಾಪಾಡದಿರುವುದು ಕಂಡುಬಂದಿದೆ. ಎಲ್ಲ ಬಗೆಯ ವ್ಯಾಪಾರಸ್ಥರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಧಿಡೀರ್ ದಾಳಿ ಮಾಡಿ ದಂಡ ವಿಧಿಸಲಾಗುವುದು ಮತ್ತು ಲೈಸನ್ಸ್ ರದ್ದುಪಡಿಸಲಾಗುವುದು ಎಂದು ಹೇಳಿದರು.

ಈ ವೇಳೆ ವೈದ್ಯರಾದ ಪ್ರವೀಣ ಫಾಯದೆ, ದತ್ತುಕುಮಾರ, ಗಣೇಶ, ರವಿ ಕೊಪ್ಪದ ಇದ್ದರು.

ಮೂವರು ಮಟ್ಕಾ ಆರೋಪಿತರಿಗೆ ಗಡಿಪಾರು ಶಿಕ್ಷೆ – ಅನಧಿಕೃತ ಲಾಟರಿ, ಮಟ್ಕಾ ವಿರುದ್ಧ ಕಠಿಣ ಕ್ರಮ; ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಎಚ್ಚರಿಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಅನಧಿಕೃತ ಲಾಟರಿ ಹಾಗೂ ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆದ 2025–26ನೇ ಸಾಲಿನ ತೃತೀಯ ತ್ರೈಮಾಸಿಕ ಪ್ರಿವೆಂಟಿವ್ ಸ್ಕ್ವಾಡ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೂರಕ್ಕಿಂತ ಹೆಚ್ಚು ಬಾರಿ ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿತರಿಗೆ ಯಾವುದೇ ರಿಯಾಯಿತಿ ಇಲ್ಲ. ಮಟ್ಕಾ ಪ್ರಕರಣಗಳಲ್ಲಿ ಪದೇ ಪದೇ ಭಾಗಿಯಾಗಿದ್ದ ಅಬ್ದುಲ್ ರಶೀದ್ ತಂದೆ ಹೈದರಸಾಬ್ ಮುಜಾವರ (53)–ಮುಳಗುಂದ, ಫಕ್ಕಿರೇಶ ಯಲ್ಲಪ್ಪ ಹೊಸಕೇರಿ (42)–ಶಿರಹಟ್ಟಿ ಹಾಗೂ ಬಸವರಾಜ ತಂದೆ ಮೈಲಪ್ಪ ದೊಡ್ಡಮನಿ (21)–ಡಂಬಳ ಇವರನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಬಾಕಿ ಉಳಿದಿರುವ ಮಟ್ಕಾ ಪ್ರಕರಣಗಳು ವಿಚಾರಣೆಯ ಹಂತದಲ್ಲಿದ್ದು, ಅವುಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪೊಲೀಸ್ ಉಪಾಧೀಕ್ಷಕ ಮುರ್ತುಜಾ ಖಾದ್ರಿ ಮಾತನಾಡಿ, ಅಕ್ಟೋಬರ್ 2025ರಿಂದ ಡಿಸೆಂಬರ್ 2025ರವರೆಗೆ ದಾಖಲಾದ ಒಟ್ಟು 44 ಮಟ್ಕಾ ಪ್ರಕರಣಗಳಲ್ಲಿ ದೋಷಾರೋಪಣ ಪತ್ರಗಳನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, 25 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. ಉಳಿದ 19 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ–ಋಣ ನಿರ್ವಹಣೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರ ಚಿನಗುಂಡಿ, ವಾಣಿಜ್ಯ ತೆರಿಗೆ ಅಧಿಕಾರಿ (ಜಾರಿ–2) ರಾಜಶೇಖರಯ್ಯ ಕಾಲವಾಡಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಪೀಳಿಗೆಯ ಉಳಿವಿಗಾಗಿ ಹೋರಾಟ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನಗರಸಭೆಯ ಎದುರು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ಕಳೆದ 91 ದಿನಗಳಿಂದ ನಡೆಯುತ್ತಿರುವ `ಕಾರ್ಖಾನೆ ತೊಲಗಿಸಿ, ಜೀವ ಉಳಿಸಿ- ಧರಣಿಗೆ ಎನ್.ಕೆ.ಪಿ.ಎಂ ಶಾಲೆಯ ವಿದ್ಯಾರ್ಥಿಗಳು ಬೆಂಬಲಿಸಿದರು.

ಈ ವೇಳೆ ಶಿಕ್ಷಕಿ ರಂಗಮ್ಮ ಕೆ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಸ್ಥಾಪಿಸಿದ ಕೈಗಾರಿಕೆಗಳು ನಮ್ಮ ಜೀವಕ್ಕೆ ಬಾಧೆಯನ್ನುಂಟು ಮಾಡುತ್ತಿವೆ. ನಮಗೆ ಮೊದಲು ಜೀವ ಮತ್ತು ಆರೋಗ್ಯ ಉಳಿಯಬೇಕು. ಆನಂತರವಷ್ಟೇ ಅಭಿವೃದ್ಧಿ, ಉದ್ಯೋಗ ಕುರಿತು ಮಾತನಾಡೋಣ. ಈಗ ಕೊಪ್ಪಳಕ್ಕೆ ಸಂಕಷ್ಟ ತಂದಿರುವುದು ಪರಿಸರ ಮಾಲಿನ್ಯ. 20 ಹಳ್ಳಿಗಳು ಗಂಭೀರ ರೋಗರುಜಿನಗಳಿಂದ ಬಾಧಿತವಾಗಿವೆ. ಇದು ಗೊತ್ತಿದ್ದೂ ನಗರದ ಪಕ್ಕದಲ್ಲಿ ಬಹುದೊಡ್ಡ ಹೂಡಿಕೆ ಮಾಡಿ ಮಾಲಿನ್ಯಕಾರಕ ಬಲ್ಡೋಟ್ ಕಾರ್ಖಾನೆ ಸ್ಥಾಪಿಸುವುದು ಎಷ್ಟು ಸರಿ? ಮುಂದಿನ ಮಕ್ಕಳ ಭವಿಷ್ಯವಂತೂ ಇದರಿಂದ ಕತ್ತಲಾಗುತ್ತದೆ. ಆದ್ದರಿಂದ ನಾವೆಲ್ಲ ಹೋರಾಡಿ ಎಷ್ಟೇ ಕಷ್ಟವಾದರೂ ಇದನ್ನು ನಿಲ್ಲಿಸೋಣ. ಇಲ್ಲದಿದ್ದರೆ ಊರು ಬಿಟ್ಟು ಹೋಗಬೇಕಾಗುತ್ತದೆ ಎಂದರು.

ವಿದ್ಯಾರ್ಥಿಗಳಾದ ಕೃಷ್ಣ, ಮಧು, ಜೋಯಾ ಮಾತನಾಡಿ, ನಾವೆಲ್ಲರೂ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಡುವ ಅನಿವಾರ್ಯತೆ ಬಂದಿದೆ. ಇಲ್ಲಿನ ಹಿರಿಯರು ನಮ್ಮ ಭವಿಷ್ಯದ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಇವರಿಗೆ ನಾವು ವಿಧೇಯರಾಗಿರೋಣ ಎಂದರು.

ಪರಿಸರ ಜಾಗೃತಿ ಗೀತೆಯನ್ನು ವಿದ್ಯಾರ್ಥಿಗಳಾದ ಮಿಶ್ಬಾ, ಅರ್ಪಿತಾ, ಮಧು, ಕೃಷ್ಣ ಮತ್ತು ಶ್ವೇತಾ ಹಾಡಿದರು. ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ ಎ.ಎಂ. ಮದರಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ.ಗೋನಾಳ, ಮಂಜುನಾಥ ಜಿ.ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರು, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಕಾರ್ಮಿಕ ನಿರೀಕ್ಷಕ ಶಾಂತಯ್ಯ ಅಂಗಡಿ, ಮಹದೇವಪ್ಪ ಮಾವಿನಮಡು, ವಿಜಯ ಮಹಾಂತೇಶ್ ಹಟ್ಟಿ, ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ಡಿ.ಎಂ. ಬಡಿಗೇರ, ಚಾರಣ ಬಳಗದ ಸಿ.ಬಿ. ಪಾಟೀಲ್, ಮಂಜುನಾಥ ಕವಲೂರು, ಗವಿಸಿದ್ದಪ್ಪ ತುಮ್ಮರಗುದ್ಧಿ, ಪಂಪಣ್ಣ ಚಿಂತಪಲ್ಲಿ, ರತ್ನಮ್ಮ ಪುರಾಣಿಕಮಠ, ಪದ್ಮಾವತಿ ದಸ್ತೇನವರ್, ರಮೇಶ ಪಿ.ಬಿ, ಶಿವಪ್ಪ ಜಲ್ಲಿ, ಮಖ್ಬುಲ್ ರಾಯಚೂರು, ಯಮನೂರಪ್ಪ ಹಳ್ಳಿಕೇರಿ, ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಶಿಕ್ಷಕ ಬಿ.ಎಂ. ನಿತಿನ್ ಮಾತನಾಡಿ, ಕೊಪ್ಪಳ ಅತ್ಯಂತ ಶುಷ್ಕ ಹವಾಮಾನ ಇರುವ ನಗರ. ಈಗ ಧೂಳುಮಯವಾಗಿದೆ. ಮಕ್ಕಳಾದಿಯಾಗಿ ಪರಿಸರದ ಹಕ್ಕು ಕೇಳುವುದು ಇಲ್ಲಿನ ಅನಿವಾರ್ಯತೆಯಾಗಿದೆ ಎಂದು ಹೇಳಿದರು.

ಮಕ್ಕಳ ಸಾಮಾಜಿಕ ಜಾಲತಾಣ ಬಳಕೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಚಿಂತನೆ: ಸಚಿವ ಪ್ರಿಯಾಂಕ ಖರ್ಗೆ

0

ಬೆಂಗಳೂರು: ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವ ಕುರಿತು ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಐಟಿ–ಬಿಟಿ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ, ಬಿಜೆಪಿ ಶಾಸಕ ಸುರೇಶ್ ಕುಮಾರ್ ಪ್ರಸ್ತಾಪಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಇದು ಅತ್ಯಂತ ಗಂಭೀರ ಸಮಸ್ಯೆ. ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಯಂತ್ರಿಸುವ ಬಗ್ಗೆ ಸರ್ಕಾರ ಈಗಾಗಲೇ ಚರ್ಚೆ ಆರಂಭಿಸಿದೆ. ಜವಾಬ್ದಾರಿಯುತ ಬಳಕೆದಾರರು, ಎಐ ಮತ್ತು ಸಾಮಾಜಿಕ ಜಾಲತಾಣಗಳ ಕುರಿತು ಏನು ಮಾಡಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಯುತ್ತಿದೆ” ಎಂದು ಹೇಳಿದರು.

ಇದರ ಜೊತೆಗೆ ಮಾಹಿತಿ ತಂತ್ರಜ್ಞಾನ ಇಲಾಖೆ ಮೆಟಾ ಕಂಪನಿಯೊಂದಿಗೆ ಸೇರಿ ‘ಡಿಜಿಟಲ್ ಡಿಟಾಕ್ಸ್’ ಕಾರ್ಯಕ್ರಮ ನಡೆಸುತ್ತಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 3 ಲಕ್ಷ ಮಕ್ಕಳು ಹಾಗೂ 1 ಲಕ್ಷ ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ಪ್ರಿಯಾಂಕ ಖರ್ಗೆ ಮಾಹಿತಿ ನೀಡಿದರು. ಸರ್ಕಾರ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ತಿಳಿಸಿದರು.

ವಿದೇಶಗಳಲ್ಲಿ ಈಗಾಗಲೇ ಹಲವು ದೇಶಗಳು ಈ ಕುರಿತು ಕ್ರಮ ಕೈಗೊಂಡಿವೆ ಎಂದು ಅವರು ಉದಾಹರಣೆ ನೀಡಿದರು. ಫಿನ್‌ಲ್ಯಾಂಡ್‌ನಲ್ಲಿ ಕ್ರಮ ಜಾರಿಯಲ್ಲಿದ್ದು, ಇಂಗ್ಲೆಂಡ್ ಕೂಡ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಯಂತ್ರಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಆಸ್ಟ್ರೇಲಿಯಾ ಎರಡು ತಿಂಗಳ ಹಿಂದೆ 16 ವರ್ಷ ವಯಸ್ಸಿನೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸುವುದಕ್ಕೆ ನಿರ್ಬಂಧ ಹೇರಿದೆ. ನಾವೂ ರಾಜ್ಯದಲ್ಲಿ ಎಐ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಗೆ ಸಂಬಂಧಿಸಿದಂತೆ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಸುರೇಶ್ ಕುಮಾರ್, ಆಸ್ಟ್ರೇಲಿಯಾದಲ್ಲಿ 16 ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರಿರುವುದನ್ನು ಉಲ್ಲೇಖಿಸಿದರು. ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಅಪಾಯಕಾರಿ ಪರಿಸ್ಥಿತಿಗೆ ಕಾರಣವಾಗುತ್ತಿದೆ ಎಂದು ಅವರು ಎಚ್ಚರಿಸಿದರು. ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲೂ ಮಕ್ಕಳ ಮೇಲೆ ಸಾಮಾಜಿಕ ಜಾಲತಾಣಗಳ ಎಕ್ಸ್‌ಪೋಜರ್ ಮತ್ತು ಅದರ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ ಎಂದು ಹೇಳಿದರು.

ಪುರಾತತ್ವ ಕ್ಷೇತ್ರದ ಹಿರಿಯ ತಜ್ಞ, ಲಕ್ಕುಂಡಿ ಉತ್ಖನನದ ನಿರ್ದೇಶಕ ಟಿ.ಎಂ. ಕೇಶವ್ ವಿಧಿವಶ

0

ಗದಗ : ಕೇಂದ್ರ ಪುರಾತತ್ವ ಇಲಾಖೆ (ASI)ಯ ನಿವೃತ್ತ ಸೂಪರಿಂಟೆಂಡಿಂಗ್ ಆರ್ಕಿಯಾಲಜಿಸ್ಟ್ ಹಾಗೂ ಲಕ್ಕುಂಡಿ ಉತ್ಖನನದ ನಿರ್ದೇಶಕರಾಗಿದ್ದ ಖ್ಯಾತ ಪುರಾತತ್ವ ತಜ್ಞ ಶ್ರೀ ಟಿ. ಎಂ. ಕೇಶವ್ ಅವರು ವಿಧಿವಶರಾಗಿದ್ದಾರೆ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರು ಕೊನೆಯುಸಿರೆಳೆದಿದ್ದಾರೆ.

1979ರಲ್ಲಿ ಪುರಾತತ್ವ ಇಲಾಖೆಗೆ ತಾಂತ್ರಿಕ ಸಹಾಯಕರಾಗಿ ಸೇವೆ ಪ್ರವೇಶಿಸಿದ ಟಿ.ಎಂ. ಕೇಶವ್ ಅವರು, ಅಜಂತಾ–ಎಲ್ಲೋರಾ ಗುಹೆಗಳು, ಹಂಪಿ, ಬಾದಾಮಿ, ಬನವಾಸಿ, ಹಾಲೇಬೀಡು, ಬೆಳೂರು, ಶ್ರವಣಬೆಳಗೊಳ ಸೇರಿದಂತೆ ದೇಶದ ಅನೇಕ ಪ್ರಮುಖ ಐತಿಹಾಸಿಕ ತಾಣಗಳ ಸಂಶೋಧನೆ, ಉತ್ಖನನ ಮತ್ತು ಸಂರಕ್ಷಣಾ ಕಾರ್ಯಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಹಾಲೇಬೀಡಿನ ನಾಗರೇಶ್ವರ ದೇವಾಲಯ ಸಂಕೀರ್ಣ, ಬನವಾಸಿಯ ಬೌದ್ಧ ಸ್ತೂಪ, ಗುಡ್ನಾಪುರದ ಅರಮನೆ ಅವಶೇಷಗಳು, ಹಂಪಿಯ ವಿಜಯನಗರ ಕಾಲದ ಅರಮನೆಗಳ ಪತ್ತೆ ಸೇರಿದಂತೆ ಅನೇಕ ಅಪರೂಪದ ಐತಿಹಾಸಿಕ ಸಂಶೋಧನೆಗಳು ಅವರ ಸೇವಾ ಅವಧಿಯ ಪ್ರಮುಖ ಸಾಧನೆಗಳಾಗಿವೆ. ಕನಗನಹಳ್ಳಿ (ಸನ್ನತಿ)ಯಲ್ಲಿ ಮೌರ್ಯ–ಶಾತವಾಹನ ಕಾಲದ ಅತ್ಯಂತ ಪ್ರಾಚೀನ ಸ್ತೂಪದ ಉತ್ಖನನವೂ ಅವರ ನೇತೃತ್ವದಲ್ಲೇ ನಡೆದಿದೆ.

ಹೋಯ್ಸಳ, ಚಾಲುಕ್ಯ ಮತ್ತು ವಿಜಯನಗರ ಶೈಲಿಯ ವಾಸ್ತುಶಿಲ್ಪದಲ್ಲಿ ಅಪಾರ ಪರಿಣತಿ ಹೊಂದಿದ್ದ ಟಿ.ಎಂ. ಕೇಶವ್ ಅವರು, 50ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಮತ್ತು ಗ್ರಂಥಗಳನ್ನು ರಚಿಸಿದ್ದರು. ಹಂಪಿ ವಿಶ್ವಪಾರಂಪರ್ಯ ತಾಣಕ್ಕೆ ಸಂಬಂಧಿಸಿದಂತೆ ಯುನೆಸ್ಕೊ ತಂಡಗಳೊಂದಿಗೆ ಕಾರ್ಯನಿರ್ವಹಿಸಿದ ಅನುಭವವೂ ಅವರದ್ದು.

ಇತ್ತೀಚೆಗೆ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಎದುರು ನಡೆಯುತ್ತಿದ್ದ ಉತ್ಖನನ ಕಾರ್ಯವು ಅವರ ಮಾರ್ಗದರ್ಶನದಲ್ಲೇ ನಡೆಯುತ್ತಿತ್ತು. ಅವರ ನಿಧನದಿಂದ ಪುರಾತತ್ವ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಟಿ.ಎಂ. ಕೇಶವ್ ಅವರ ಅಗಲಿಕೆಗೆ ಲಕ್ಕುಂಡಿ ಪ್ರಾಧಿಕಾರದ ಆಯುಕ್ತರು, ಸಿಬ್ಬಂದಿ, ಪುರಾತತ್ವ ವಿದ್ವಾಂಸರು ಹಾಗೂ ಇತಿಹಾಸಾಸಕ್ತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಯಲಬುರ್ಗಾ: ಹಲ್ಲಿ ಬಿದ್ದ ಬಿಸಿಯೂಟ ಸೇವನೆ: 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

0

ಯಲಬುರ್ಗಾ: ತಾಲ್ಲೂಕಿನ ಚಿಕ್ಕಬನ್ನಿಗೋಳ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿದ ಪರಿಣಾಮ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ಶಾಲೆ ಮುಗಿಸಿ ಮನೆಗೆ ಬಂದ ವಿದ್ಯಾರ್ಥಿಗಳು ಸುಸ್ತಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾಲಕರು ವಿಚಾರಿಸಿದಾಗ, ಮಧ್ಯಾಹ್ನ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಬಳಿಕ ಅಸ್ವಸ್ಥತೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಈ ವಿಷಯವನ್ನು ಮನೆಯಲ್ಲಿ ಹೇಳದಂತೆ ಶಿಕ್ಷಕರು ಗದರಿಸಿದ್ದಾರೆ ಎಂಬ ಆರೋಪವನ್ನೂ ವಿದ್ಯಾರ್ಥಿಗಳು ಪಾಲಕರ ಮುಂದೆ ಮಾಡಿಕೊಂಡಿದ್ದಾರೆ. ಘಟನೆ ತಿಳಿದ ಬಳಿಕ ವಜ್ರಬಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ತಂಡ ಗ್ರಾಮಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ಪರಿಶೀಲನೆ ನಡೆಸಿದೆ. ತೀವ್ರ ಹೊಟ್ಟೆ ನೋವು, ವಾಂತಿ ಹಾಗೂ ಭೇದಿ ಕಾಣಿಸಿಕೊಂಡ 25 ವಿದ್ಯಾರ್ಥಿಗಳನ್ನು ಆಂಬುಲೆನ್ಸ್ ಮೂಲಕ ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಸ್ಥಳಕ್ಕೆ ಅಕ್ಷರ ದಾಸೋಹ ಅಧಿಕಾರಿ ಹಾಗೂ ಬಿಆರ್‌ಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳ ಅಸ್ವಸ್ಥತೆಗೆ ಕಾರಣವಾಗಿರುವುದಾಗಿ ಶಂಕಿಸಿರುವ ಬಿಸಿಯೂಟ ಹಾಗೂ ಅಡುಗೆ ವ್ಯವಸ್ಥೆಯ ವಿರುದ್ಧ ಗ್ರಾಮಸ್ಥರು ಮತ್ತು ಪಾಲಕರು ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾತ್ರಿ 10 ಗಂಟೆಯಾದರೂ ಶಾಲೆಯ ಮುಖ್ಯಶಿಕ್ಷಕರು ಗ್ರಾಮಕ್ಕೆ ಆಗಮಿಸದೇ, ದೂರವಾಣಿ ಕರೆಗಳನ್ನು ಸ್ವೀಕರಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಯಲಬುರ್ಗಾ ಬಿಇಒ ಅಶೋಕ ಗೌಡರ್, “ಚಿಕ್ಕಬನ್ನಿಗೋಳ ಶಾಲೆಯ ಕೆಲವು ಮಕ್ಕಳು ಅಸ್ವಸ್ಥಗೊಂಡಿರುವ ಮಾಹಿತಿ ಲಭ್ಯವಾಗಿದೆ. ತಕ್ಷಣವೇ ವೈದ್ಯರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಅಪಾಯ ಇಲ್ಲ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ತಂಡ ರಚಿಸಿ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ವಾಲ್ಮೀಕಿ ನಿಗಮದ ಹಗರಣದಲ್ಲಿ ಸುದ್ದಿಯಾಗಿದ್ದ ಕಲ್ಲೇಶ್ ಮನೆ ಮೇಲೆ ಲೋಕಾಯುಕ್ತರ ದಾಳಿ

0

ಕೊಪ್ಪಳ: ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆಡಳಿತಾಧಿಕಾರಿ ಬಿ. ಕಲ್ಲೇಶ್ ಗೆ ಸಂಬಂಧಿಸಿದ ಮನೆ ಸೇರಿದಂತೆ ಆರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಂದು ಬೆಳಗ್ಗೆ 30ಕ್ಕೂ ಹೆಚ್ಚು ಅಧಿಕಾರಿಗಳನ್ನೊಳಗೊಂಡ ಲೋಕಾಯುಕ್ತ ತಂಡ ಏಕಕಾಲದಲ್ಲಿ ದಾಳಿ ನಡೆಸಿದ್ದು, ಭಾಗ್ಯನಗರದ ಯತ್ನಟ್ಟಿ ರಸ್ತೆಯಲ್ಲಿರುವ ನವಚೇತನ ಪಿಯು ವಿಜ್ಞಾನ ಕಾಲೇಜು ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.

ಹಾವೇರಿ, ರಾಯಚೂರು ಹಾಗೂ ಗದಗ ಜಿಲ್ಲೆಗಳಿಂದ ಏಳು ವಾಹನಗಳಲ್ಲಿ ಲೋಕಾಯುಕ್ತ ತಂಡ ಆಗಮಿಸಿ ದಾಳಿ ನಡೆಸಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ. ದಾಳಿಯ ವೇಳೆ ಹಣಕಾಸು ದಾಖಲೆಗಳು ಮತ್ತು ಆಸ್ತಿ ಸಂಬಂಧಿತ ಮಾಹಿತಿಯನ್ನು ಪರಿಶೀಲಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ವಾಲ್ಮೀಕಿ ನಿಗಮ ಹಗರಣದಲ್ಲಿ ಸಿಲುಕಿ ಅಮಾನತುಗೊಂಡಿದ್ದ ಬಿ. ಕಲ್ಲೇಶ್, ತನಿಖೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಸರು ಹೇಳುವಂತೆ ಇಡಿ ಅಧಿಕಾರಿಗಳು ತಮ್ಮ ಮೇಲೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ಸಂಪಾದನೆ ಸೇರಿ ಹಲವು ಆರೋಪಗಳ ಹಿನ್ನೆಲೆ ಈ ಲೋಕಾಯುಕ್ತ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿ ಮತ್ತು ಪರಿಶೀಲನೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಡಾ. ಸಿ.ಜೆ. ರಾಯ್ ಆತ್ಮಹತ್ಯೆ: ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಸಾವಿಗೆ ಶರಣು!

0

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೇರಳ ಮೂಲದ ಡಾ. ಸಿ.ಜೆ. ರಾಯ್ ಅವರು ಕಾನ್ಫಿಡೆಂಟ್ ಗ್ರೂಪ್ ಎಂಬ ಪ್ರಮುಖ ರಿಯಲ್ ಎಸ್ಟೇಟ್ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಂಪನಿಯ ಸಂಸ್ಥಾಪಕರಾಗಿದ್ದರು. ಇಂದು ಸಂಜೆ ಬೆಂಗಳೂರಿನ ಆನೇಪಾಳ್ಯ ದಲ್ಲಿರುವ ತಮ್ಮ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿದ ಕೂಡಲೇ ಅಶೋಕನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಘಟನೆಯ ಹಿಂದಿನ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಡಾ. ರಾಯ್ ಅವರ ಕುಟುಂಬದ ಮೇಲೆ ಪದೇಪದೇ ಆದಾಯ ತೆರಿಗೆ ಇಲಾಖೆ ದಾಳಿಗಳು ನಡೆದಿದ್ದು, ಈ ಹಿನ್ನೆಲೆಯಲ್ಲಿ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಎಲ್ಲ ಅಂಶಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

2005ರಲ್ಲಿ ಆರಂಭವಾದ ಕಾನ್ಫಿಡೆಂಟ್ ಗ್ರೂಪ್ ಇದುವರೆಗೆ 65ಕ್ಕೂ ಹೆಚ್ಚು ಐಷಾರಾಮಿ ಯೋಜನೆಗಳನ್ನು ಪೂರ್ಣಗೊಳಿಸಿದೆ. ವಸತಿ ಅಪಾರ್ಟ್ಮೆಂಟ್‌ಗಳು, ವಿಲ್ಲಾಗಳು, ವಾಣಿಜ್ಯ ಸಂಕೀರ್ಣಗಳು, ಶಿಕ್ಷಣ, ಆತಿಥ್ಯ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ತನಿಖೆಯ ನಂತರ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ಲಾ ಶಾಲೆಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್‌ ಹಾಗೂ ಬೇರೆ ಬೇರೆ ಶೌಚಾಲಯಗಳು ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶ

0

ನವದೆಹಲಿ, ಜನವರಿ 30: ಸುಪ್ರೀಂ ಕೋರ್ಟ್ ಇಂದು ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಮಹತ್ವಪೂರ್ಣ ನಿರ್ದೇಶನ ನೀಡಿದೆ. ವಿದ್ಯಾರ್ಥಿನಿಯರಿಗೆ ಮುಟ್ಟಿನ ಸಮಯದಲ್ಲಿ ಬಾಯೋಡಿಗ್ರೇಡಬಲ್ (ವಿಹೀನಪಡಿಸಬಹುದಾದ) ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ಒದಗಿಸಬೇಕು ಎಂದು ಕೋರ್ಟ್ ಹೇಳಿದೆ.

ನ್ಯಾಯಪೀಠದ ನ್ಯಾಯಮೂರ್ತಿಗಳು ಜೆ.ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರು ಎಲ್ಲಾ ಶಾಲೆಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದಾರೆ. ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ, ಎಲ್ಲ ಶಾಲೆಗಳಲ್ಲಿ ಅಂಗವಿಕಲ ಸ್ನೇಹಿ ಶೌಚಾಲಯಗಳೂ ಇರಬೇಕು ಎಂದು ಕೋರ್ಟ್ ನಿರ್ಧರಿಸಿದೆ.

ಸುಪ್ರೀಂ ಕೋರ್ಟ್ ಪ್ರಕಟಣೆ: “ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ, ಮುಟ್ಟಿನ ಆರೋಗ್ಯವು ಬದುಕು ಹಕ್ಕಿನ ಭಾಗವಾಗಿದೆ. ಖಾಸಗಿ ಶಾಲೆಗಳು ಈ ಹಕ್ಕನ್ನು ಉಲ್ಲಂಘಿಸಿದರೆ ಅವರ ಮಾನ್ಯತೆಯನ್ನು ರದ್ದುಗೊಳಿಸಲಾಗುತ್ತದೆ. ಸಾರ್ವಜನಿಕ ಶಾಲೆಗಳು ವಿಫಲವಾದರೆ ಸರ್ಕಾರವನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು.”

ಈ ಆದೇಶಕ್ಕೆ aanleidingವಾಗಿ, 6ರಿಂದ 12ನೇ ತರಗತಿಯ ಬಾಲಕಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳು ಒದಗಿಸಲು ‘ಶಾಲಾ ಬಾಲಕಿಯರಿಗೆ ಮುಟ್ಟಿನ ನೈರ್ಮಲ್ಯ ನೀತಿ’ ಭಾರತದಾದ್ಯಂತ ಜಾರಿಗೆ ತರಬೇಕಾಗಿದೆ.

error: Content is protected !!