Home Blog Page 86

ವಿಮಾನ ದುರಂತ ಪ್ರಕರಣ: ಅಜಿತ್ ಪವಾರ್ ಸಾವು, CID ಎಂಟ್ರಿ

0

ಮುಂಬೈ: ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರು ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಆರಂಭಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಮಾನ ಅವಘಡದ ಬಳಿಕ ಪುಣೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ಎಸ್ ಸೆಕ್ಷನ್ 194ರ ಅಡಿಯಲ್ಲಿ ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಲಾಗಿತ್ತು. ಇದೀಗ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದ್ದು, ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಜ.28ರ ಬೆಳಿಗ್ಗೆ ಬಾರಾಮತಿಯಲ್ಲಿ ಟೇಬಲ್‌ಟಾಪ್ ಏರ್‌ಸ್ಟ್ರಿಪ್‌ನ ಅಂಚಿನಿಂದ ಸುಮಾರು 200 ಮೀಟರ್ ದೂರದಲ್ಲಿ ಲಿಯರ್ಜೆಟ್–45 ವಿಮಾನ ಪತನಗೊಂಡಿತ್ತು. ಈ ದುರ್ಘಟನೆಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ (66) ಅವರ ವೈಯಕ್ತಿಕ ಭದ್ರತಾ ಅಧಿಕಾರಿ ವಿದೀಪ್ ಜಾಧವ್, ಫ್ಲೈಟ್ ಅಟೆಂಡೆಂಟ್ ಪಿಂಕಿ ಮಾಲಿ, ಕ್ಯಾಪ್ಟನ್ ಸುಮಿತ್ ಕಪೂರ್ ಹಾಗೂ ಸಹ–ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್ ಮೃತಪಟ್ಟಿದ್ದಾರೆ.

ದುರಂತದಲ್ಲಿ ಸಾವನ್ನಪ್ಪಿದ ಕ್ಯಾಪ್ಟನ್ ಸುಮಿತ್ ಕಪೂರ್ ಅವರಿಗೆ ಸುಮಾರು 15,000 ಗಂಟೆಗಳ ವಿಮಾನ ಹಾರಾಟದ ಅನುಭವವಿದ್ದು, ಸಹ–ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್ ಅವರಿಗೆ 1,500 ಗಂಟೆಗಳ ಹಾರಾಟದ ಅನುಭವವಿತ್ತು ಎಂದು ತಿಳಿದುಬಂದಿದೆ.

ಸಿಐಡಿ ಅಧಿಕಾರಿಗಳ ತಂಡ ಪುಣೆ ಗ್ರಾಮೀಣ ಪೊಲೀಸರಿಂದ ಅಪಘಾತಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಲಿದ್ದು, ನಂತರ ಬಾರಾಮತಿ ಏರ್‌ಸ್ಟ್ರಿಪ್ ಬಳಿಯ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ಇದೇ ವೇಳೆ ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಕೂಡ ಈ ವಿಮಾನ ಅಪಘಾತದ ಕುರಿತು ಔಪಚಾರಿಕ ತನಿಖೆಯನ್ನು ಆರಂಭಿಸಿದೆ ಎಂದು ತಿಳಿದುಬಂದಿದೆ.

ಶಾಲೆಯಲ್ಲಿ ನೀರು ಕುಡಿಯಲು ಹೋದ ವೇಳೆ ಕರೆಂಟ್ ಶಾಕ್: 5ನೇ ತರಗತಿ ವಿದ್ಯಾರ್ಥಿನಿ ಸಾವು

ರಾಯಚೂರು: ಶಾಲೆಯಲ್ಲಿ ಮಧ್ಯಾಹ್ನದ ಊಟದ ಸಮಯ ನೀರು ಕುಡಿಯಲು ಹೋದ ವೇಳೆ ಕರೆಂಟ್ ಶಾಕ್ ತಗುಲಿ 11 ವರ್ಷದ ವಿದ್ಯಾರ್ಥಿನಿ ಮೃತಪಟ್ಟಿರುವ ದುರ್ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕುರುಕುಂದಾ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಹರಿಜನ ವಾಡದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟ ಬಾಲಕಿಯನ್ನು ತನುಶ್ರೀ (11) ಎಂದು ಗುರುತಿಸಲಾಗಿದೆ. ತನುಶ್ರೀ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.

ಮಧ್ಯಾಹ್ನ ಊಟದ ವೇಳೆ ನೀರು ಕುಡಿಯಲು ತೆರಳಿದಾಗ, ಶಾಲೆಯ ಶುದ್ಧೀಕರಣ ಘಟಕಕ್ಕೆ ಸಂಪರ್ಕ ಕಲ್ಪಿಸಲು ಹಾಕಲಾಗಿದ್ದ ವಿದ್ಯುತ್ ವೈಯರ್ ತಗುಲಿ ಕರೆಂಟ್ ಶಾಕ್ ಹೊಡೆದಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಘಟನೆಯ ಬಳಿಕ ಶಾಲೆ ಆಡಳಿತ ಮಂಡಳಿ, ಮುಖ್ಯಶಿಕ್ಷಕ (ಎಚ್‌ಎಂ) ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ವಿರುದ್ಧ ಪಾಲಕರು ಹಾಗೂ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿನ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.

ಈ ಘಟನೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಫೆ. 1ರಂದು ಗದಗದಲ್ಲಿ ಕಾರ್ಯಕಾರಿ ಸಮಿತಿ ಸಭೆ

0

ವಿಜಯಸಾಕ್ಷಿ ಸುದ್ದಿ, ಗದಗ: ಫೆ. 1ರಂದು ಬೆಳಿಗ್ಗೆ 11 ಗಂಟೆಗೆ ನಗರದ ಭೀಮಸೇನ್ ಜೋಶಿ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ ತಿಳಿಸಿದರು.

ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ಜಿಲ್ಲೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ರಾಜ್ಯಮಟ್ಟದ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದ್ದು, ಪ್ರಮುಖವಾಗಿ ಎನ್‌ಪಿಎಸ್ ಬದಲಾಗಿ ಓಪಿಎಸ್ ಜಾರಿ ಮಾಡುವ ಕುರಿತು ಹೋರಾಟದ ರೂಪುರೇಷೆಗಳನ್ನು ಚರ್ಚಿಸಲಾಗುವುದು ಎಂದರು.

ರಾಜ್ಯ ಘಟಕದ ಕಾರ್ಯಕಾರಿ ಸಭೆಯನ್ನು ಗದಗಲ್ಲಿ ನಡೆಸಬೇಕು ಎನ್ನುವುದು ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ಇಚ್ಛೆಯಾಗಿತ್ತು. ಹೀಗಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಭೆಯಲ್ಲಿ ಹಿಂದಿನ ಮಹಾಸಭೆಯ ನಡವಳಿಗಳನ್ನು ದಾಖಲಿಸಲಾಗುವುದು. 2025-26ನೇ ಸಾಲಿನ ರಾಜ್ಯ ಮಟ್ಟದ ಕ್ರೀಡಾಕೂಟಗಳ ಆಯೋಜನೆಯ ಬಗ್ಗೆ ಚರ್ಚಿಸಲಾಗುವುದು. ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಮರುಸ್ಥಾಪಿಸುವ ಸಂಬಂಧ ಸರ್ಕಾರದ ಗಮನ ಸೆಳೆಯಲು ರಾಜ್ಯ ಮಟ್ಟದ ಸಮಾವೇಶ ನಡೆಸುವ ಬಗ್ಗೆ ಚರ್ಚೆ ನಡೆಯುವುದು.

ಸುದ್ದಿಗೋಷ್ಠಿಯಲ್ಲಿ ಡಿ.ಎಸ್. ತಳವಾರ, ಸಿದ್ದಪ್ಪ ಲಿಂಗದಾಳ, ಎಂ.ಎನ್. ನಿಟ್ಟಾಲಿ, ರಾಜು ಕಂಟಿಗೊಣ್ಣವರ, ಮುತ್ತು ಮಲ್ಲಶೆಟ್ಟಿ, ಎ.ಐ. ಗಾಡಗೋಳಿ, ಡಿ.ಎಸ್. ದುರ್ಗಣ್ಣವರ, ಕೆ.ಎಫ್. ಹಳ್ಯಾಳ, ಕರೀಂ ಸಾಬಸುಣಗಾರ, ಆರ್.ಎಂ. ನಿಂಬನಾಯ್ಕರ, ಎಂ.ಬಿ. ಗಾಣಗಿ, ಬಿ.ಎಸ್. ಕಮತರ ಇದ್ದರು.

ಸರ್ಕಾರಿ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಲ್ಲಿ ಆಗುತ್ತಿರುವ ತಾಂತ್ರಿಕ ಸಮಸ್ಯೆಗಳು, ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿ, ಸಿಸಿಆರ್ ನಿಯಮ ಬಗ್ಗೆ ಚರ್ಚಿಸಲಾಗುವುದು. ಅಂದು ಸಂಜೆ 4ಕ್ಕೆ ಸರ್ಕಾರಿ ನೌಕರ ಸಂಘ ಹುಟ್ಟುಹಾಕಿದ ಮೆರಿ ದೇವಾಸಿಯಾ ಹೆಸರಿನಲ್ಲಿ ಗೃಹ ನಿರ್ಮಾಣ ಸಂಘದ ಉದ್ಘಾಟನೆ ಜರುಗಲಿದೆ ಎಂದು ಬಸವರಾಜ ಬಳ್ಳಾರಿ ವಿವರಿಸಿದರು.

ಮಕ್ಕಳ ಬಾಲ್ಯ ನೆಮ್ಮದಿಯಿಂದ ಕೂಡಿರಲಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ 

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜ. 26ರಿಂದ ಮಾರ್ಚ್ 31ರವರೆಗೆ ನಡೆಯುತ್ತಿರುವ ಪ್ಯಾನ್ ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನ ಅಂಗವಾಗಿ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜನಜಾಗೃತಿ ಕಾರ್ಯಕ್ರಮದ ಉದ್ಘಾಟನೆ ಜರುಗಿತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳು ಬಾಲಕಾರ್ಮಿಕರಾಗುತ್ತಾರೆ. ಅಲ್ಲದೆ, ಬೇರೆ ಬೇರೆ ಅನೈತಿಕ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆ ಇರುತ್ತದೆ. ಬಾಲ ಕಾರ್ಮಿಕರು ಕಂಡುಬರುವ ಕಡೆಗೆ ದಾಳಿ ಮಾಡಿ ಬಾಲಕಾರ್ಮಿಕತೆ ನಿರ್ಮೂಲನೆ ಮಾಡಬೇಕು. ಅಂದಾಗ ಈ ಅಭಿಯಾನವು ಯಶಸ್ವಿಯಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ದೇವರ ಸಮಾನ. ಮಕ್ಕಳ ಬಾಲ್ಯ ನೆಮ್ಮದಿಯಿಂದ ಕೂಡಿರಬೇಕು. ಬಾಲಕಾರ್ಮಿಕತೆಯನ್ನು ತಡೆಗಟ್ಟಿ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಅವರಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು. ಈ ಪರಿಕಲ್ಪನೆ ನಮ್ಮಲ್ಲಿ ದೃಢವಾಗಿ ನಿಲ್ಲಬೇಕು ಎನ್ನುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ವಕೀಲರಾದ ಗುರುರಾಜ್ ಗೌರಿ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ್ ಸೋಮನಕಟ್ಟಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು, ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರಾದ ಸಂದೇಶ ಪಾಟೀಲ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಸನಾಯಕ, ಕಾರ್ಮಿಕ ನಿರೀಕ್ಷಕರು, ಮಕ್ಕಳ ಸಹಾಯವಾಣಿ ಕೋಆರ್ಡಿನೇಟರ್, ಸ್ಪಂದನ ಸ್ವಯಂ ಸೇವಾ ಸಂಸ್ಥೆಯವರು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ: ಆರ್.ವಿ. ದೊಡ್ಡಮನಿ 

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸರಕಾರ ವಿವಿಧ ಇಲಾಖೆಗಳಿಗೆ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ನೀಡಿರುವ ಅನುದಾನವು ಲ್ಯಾಪ್ಸ್ ಆಗದಂತೆ, ಮರುಬಳಕೆ ಆಗದಂತೆ ಸಮರ್ಪಕವಾಗಿ ಬಳಕೆ ಮಾಡಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ವಿ. ದೊಡ್ಡಮನಿ ಹೇಳಿದರು.

ಅವರು ಶುಕ್ರವಾರ ಶಿರಹಟ್ಟಿಯ ತಾ.ಪಂ ಕಚೇರಿಯಲ್ಲಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಸ್‌ಸಿಪಿ/ಟಿಎಸ್‌ಪಿ ಅನುದಾನವನ್ನು 50 ಪ್ರತಿಶತಕ್ಕಿಂತ ಹೆಚ್ಚು ಫಲಾನುಭವಿಗಳಿರುವ ಪ್ರದೇಶಗಳಲ್ಲಿ ಬಳಸಬೇಕು. ಒಂದು ವೇಳೆ ನಿಗದಿಪಡಿಸಿದ ಪ್ರದೇಶದಲ್ಲಿ 40 ಪ್ರತಿಶತಕ್ಕಿಂತ ಕಡಿಮೆ ಅರ್ಹ ಫಲಾನುಭವಿಗಳು ಇದ್ದರೆ ಅಂತಹ ಪ್ರದೇಶಗಳಲ್ಲಿ ಜನಸಂಖ್ಯೆ ಅನುಸಾರ ಅನುದಾನ ನಿಗದಿಪಡಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಪ್ರಗತಿ ಪರಿಶೀಲನಾ ಸಭೆಗೆ 28 ಇಲಾಖೆಗಳಲ್ಲಿ 14 ಇಲಾಖೆ ಅಧಿಕಾರಿಗಳು ಮಾತ್ರ ಹಾಜರಿರುವುದು ಹಾಗೂ ಕೆಲವರು ತಮ್ಮ ಸಿಬ್ಬಂದಿಗಳನ್ನು ಕಳುಹಿಸಿರುವುದನ್ನು ಗಮನಿಸಿದ ತಾ.ಪಂ ಇಓ ಸಭೆಗೆ ಗೈರು ಉಳಿದ ಇಲಾಖಾಧಿಕಾರಿಗಳಿಗೆ ನೋಟೀಸ್ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಾಲ ಲಮಾಣಿ ಅವರಿಗೆ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗೋಪಾಲ ಲಮಾಣಿ, ಸಿಡಿಪಿಓ ಮೃತ್ಯುಂಜಯ ಗುಡ್ಡದಾನ್ವೇರಿ, ಬಿಇಓ ಎಚ್.ಎನ್. ನಾಯ್ಕ, ಪಿಆರ್‌ಇಡಿ ಮಲ್ಲಿಕಾರ್ಜುನ ಪಾಟೀಲ, ಡಾ. ಪವನ ಫಾಯದೆ ಮುಂತಾದವರು ಉಪಸ್ಥಿತರಿದ್ದರು.

ಕಾನ್ಪಿಡೆಂಟ್‌ ಗ್ರೂಪ್ ಚೇರ್ ಮೆನ್ ಸಿ.ಜೆ.ರಾಯ್ ಆತ್ಮಹತ್ಯೆ ಕೇಸ್:‌ ಕಮೀಷನರ್ ಸೀಮಂತ್ ಕುಮಾರ್ ಹೇಳಿದ್ದೇನು..?

0

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಚೇರ್‌ಮನ್ ಸಿ.ಜೆ. ರಾಯ್ ಅವರು ಇಂದು ಬೆಂಗಳೂರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ, ರಿಚ್ಮಂಡ್ ಸರ್ಕಲ್ ಬಳಿಯ ಕಾನ್ಫಿಡೆಂಟ್ ಗ್ರೂಪ್ ಕಚೇರಿಗೆ ಸಂಜೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನಾ ಸ್ಥಳ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, “ಸಿ.ಜೆ. ರಾಯ್ ಅವರು ಸ್ವತಃ ಗುಂಡು ಹಾರಿಸಿಕೊಂಡಿರುವುದು ಪ್ರಾಥಮಿಕವಾಗಿ ಕಂಡುಬರುತ್ತಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದರು.

ಇಂದು ಮಧ್ಯಾಹ್ನ ಸುಮಾರು 3.15ರ ವೇಳೆಗೆ ಈ ಘಟನೆ ನಡೆದಿದೆ ಎಂದು ಅವರು ಹೇಳಿದರು. ಕಳೆದ ಮೂರು ದಿನಗಳಿಂದ ಕಾನ್ಫಿಡೆಂಟ್ ಗ್ರೂಪ್ ಹಾಗೂ ಸಿ.ಜೆ. ರಾಯ್ ಸಂಬಂಧಿತವಾಗಿ ಆದಾಯ ತೆರಿಗೆ ಇಲಾಖೆಯ ದಾಳಿ ನಡೆಯುತ್ತಿತ್ತು. ಕೇರಳದಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಂದಿದ್ದರು. ಸದ್ಯ ಘಟನಾ ಸ್ಥಳದಲ್ಲಿ ಯಾವುದೇ ಐಟಿ ಅಧಿಕಾರಿಗಳು ಇಲ್ಲ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದರು.

“ನಮ್ಮ ಪೊಲೀಸರು ಆದಾಯ ತೆರಿಗೆ ಇಲಾಖೆಯಿಂದಲೂ ಅಗತ್ಯ ಮಾಹಿತಿಯನ್ನು ಪಡೆಯಲಿದ್ದಾರೆ. ಸಿ.ಜೆ. ರಾಯ್ ಅವರ ಕುಟುಂಬದವರು ವಿದೇಶದಲ್ಲಿದ್ದು, ಅವರು ಈಗ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗುವುದು” ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದರು.

ಮೇಲ್ನೋಟಕ್ಕೆ ಇದು ಸೆಲ್ಫ್ ಶೂಟ್ ಪ್ರಕರಣವಾಗಿರುವಂತೆ ಕಾಣಿಸುತ್ತಿದೆ. ಆದರೆ ಈ ಪ್ರಕರಣದಲ್ಲಿ ಅಸಹಜ ಸಾವು (UDR) ಪ್ರಕರಣ ದಾಖಲಿಸಬೇಕೋ ಅಥವಾ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಬೇಕೋ ಎಂಬ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂಬಂಧ ಕಾನ್ಫಿಡೆಂಟ್ ಗ್ರೂಪ್‌ನ ಒಬ್ಬ ನಿರ್ದೇಶಕರು ದೂರು ನೀಡಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಘಟನೆಯ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಆಹಾರ ಸುರಕ್ಷತಾ ಅಧಿಕಾರಿಗಳಿಂದ ಪರಿಶೀಲನೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿನ ಕಿರಾಣಿ, ಹೋಟೆಲ್, ಬೇಕರಿ ಇತರೆ ಆಹಾರ ಪದಾರ್ಥ ಮಾರಾಟದ ಅಂಗಡಿಗಳಿಗೆ ಶುಕ್ರವಾರ ತಾಲೂಕಾ ಆಹಾರ ಸುರಕ್ಷತಾ ಮತ್ತು ತಾಲೂಕಾ ವೈದ್ಯಾಧಿಕಾರಿ ಡಾ. ಸುಭಾಸ್ ದಾಯಗೊಂಡ ಭೇಟಿ ನೀಡಿ ಪರಿಶೀಲಿಸಿದರು.

ಲಕ್ಷ್ಮೇಶ್ವರ ಪಟ್ಟಣದ ಕಿರಾಣಿ ಅಂಗಡಿಗಳಲ್ಲಿ ಕಳಪೆ ಉಪ್ಪು ಮಾರಾಟವಾಗುತ್ತಿದೆ ಮತ್ತು ಹೋಟೆಲ್, ಬೇಕರಿಗಳಲ್ಲಿನ ಪದಾರ್ಥಗಳ ಗುಣಮಟ್ಟ ಮತ್ತು ಸ್ವಚ್ಛತೆಯ ಬಗ್ಗೆ ಸಾರ್ವಜನಿಕರು ಮತ್ತು ಸಾಮಾಜಿಕ ಮಾಧ್ಯಮಗಳಿಂದ ಬಂದ ದೂರುಗಳನ್ನು ಆಧರಿಸಿ ಡಾ. ಸುಭಾಸ್ ದಾಯಗೊಂಡ ಸಿಬ್ಬಂದಿಗಳೊಡಗೂಡಿ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಗುಣಮಟ್ಟ, ಸುರಕ್ಷತೆ, ಸ್ವಚ್ಛತೆ ಪರಿಶೀಲಿಸಿ ನಿಯಮ ಪಾಲಿಸದ ವ್ಯಾಪಾರಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರಲ್ಲದೆ, ಕೆಲವರಿಗೆ ನೋಟೀಸ್ ಕೊಟ್ಟರು.

ಈ ವೇಳೆ ಮಾತನಾಡಿದ ಅವರು, ಪಟ್ಟಣದಲ್ಲಿ ಎಗ್‌ರೈಸ್ ಅಂಗಡಿಗಳ ಸಂಖ್ಯೆ ಹೆಚ್ಚಿವೆ. ಇಲ್ಲಿ ಯಥೇಚ್ಚವಾಗಿ ಅಜಿನೋಮೋಟೋ, ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್ ಬಳಸಲಾಗುತ್ತಿದೆ. ಕಿರಾಣಿ ಅಂಗಡಿಗಳಲ್ಲಿ ಕಲಬೆರಕೆ ಮತ್ತು ಗುಣಮಟ್ಟವಿಲ್ಲದ ಉಪ್ಪಿನ ಪ್ಯಾಕೆಟ್ ಮತ್ತು ಧಾನ್ಯಗಳು ಸಹಿತ ಆಹಾರ ಪದಾರ್ಥಗಳ ಮಾರಾಟವಾಗುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಲಾಗುತ್ತಿದೆ. ಉಪ್ಪು ಸೇರಿ ಸಂಶಯಾಸ್ಪದ ಆಹಾರ ಪದಾರ್ಥಗಳ ಸ್ಯಾಂಪಲ್ ಪಡೆದುಕೊಂಡಿದ್ದು, ಪರೀಕ್ಷೆಗೊಳಪಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಭೇಟಿಯ ವೇಳೆ ಅನೇಕರು ಲೈಸನ್ಸ್, ಲೇಬಲ್ ಇಲ್ಲದೇ ವ್ಯಾಪಾರ ಮಾಡುತ್ತಿರುವುದು, ಸ್ವಚ್ಛತೆ ಕಾಪಾಡದಿರುವುದು ಕಂಡುಬಂದಿದೆ. ಎಲ್ಲ ಬಗೆಯ ವ್ಯಾಪಾರಸ್ಥರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಧಿಡೀರ್ ದಾಳಿ ಮಾಡಿ ದಂಡ ವಿಧಿಸಲಾಗುವುದು ಮತ್ತು ಲೈಸನ್ಸ್ ರದ್ದುಪಡಿಸಲಾಗುವುದು ಎಂದು ಹೇಳಿದರು.

ಈ ವೇಳೆ ವೈದ್ಯರಾದ ಪ್ರವೀಣ ಫಾಯದೆ, ದತ್ತುಕುಮಾರ, ಗಣೇಶ, ರವಿ ಕೊಪ್ಪದ ಇದ್ದರು.

ಮೂವರು ಮಟ್ಕಾ ಆರೋಪಿತರಿಗೆ ಗಡಿಪಾರು ಶಿಕ್ಷೆ – ಅನಧಿಕೃತ ಲಾಟರಿ, ಮಟ್ಕಾ ವಿರುದ್ಧ ಕಠಿಣ ಕ್ರಮ; ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಎಚ್ಚರಿಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಅನಧಿಕೃತ ಲಾಟರಿ ಹಾಗೂ ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆದ 2025–26ನೇ ಸಾಲಿನ ತೃತೀಯ ತ್ರೈಮಾಸಿಕ ಪ್ರಿವೆಂಟಿವ್ ಸ್ಕ್ವಾಡ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೂರಕ್ಕಿಂತ ಹೆಚ್ಚು ಬಾರಿ ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿತರಿಗೆ ಯಾವುದೇ ರಿಯಾಯಿತಿ ಇಲ್ಲ. ಮಟ್ಕಾ ಪ್ರಕರಣಗಳಲ್ಲಿ ಪದೇ ಪದೇ ಭಾಗಿಯಾಗಿದ್ದ ಅಬ್ದುಲ್ ರಶೀದ್ ತಂದೆ ಹೈದರಸಾಬ್ ಮುಜಾವರ (53)–ಮುಳಗುಂದ, ಫಕ್ಕಿರೇಶ ಯಲ್ಲಪ್ಪ ಹೊಸಕೇರಿ (42)–ಶಿರಹಟ್ಟಿ ಹಾಗೂ ಬಸವರಾಜ ತಂದೆ ಮೈಲಪ್ಪ ದೊಡ್ಡಮನಿ (21)–ಡಂಬಳ ಇವರನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಬಾಕಿ ಉಳಿದಿರುವ ಮಟ್ಕಾ ಪ್ರಕರಣಗಳು ವಿಚಾರಣೆಯ ಹಂತದಲ್ಲಿದ್ದು, ಅವುಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪೊಲೀಸ್ ಉಪಾಧೀಕ್ಷಕ ಮುರ್ತುಜಾ ಖಾದ್ರಿ ಮಾತನಾಡಿ, ಅಕ್ಟೋಬರ್ 2025ರಿಂದ ಡಿಸೆಂಬರ್ 2025ರವರೆಗೆ ದಾಖಲಾದ ಒಟ್ಟು 44 ಮಟ್ಕಾ ಪ್ರಕರಣಗಳಲ್ಲಿ ದೋಷಾರೋಪಣ ಪತ್ರಗಳನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, 25 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. ಉಳಿದ 19 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ–ಋಣ ನಿರ್ವಹಣೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರ ಚಿನಗುಂಡಿ, ವಾಣಿಜ್ಯ ತೆರಿಗೆ ಅಧಿಕಾರಿ (ಜಾರಿ–2) ರಾಜಶೇಖರಯ್ಯ ಕಾಲವಾಡಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಪೀಳಿಗೆಯ ಉಳಿವಿಗಾಗಿ ಹೋರಾಟ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನಗರಸಭೆಯ ಎದುರು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ಕಳೆದ 91 ದಿನಗಳಿಂದ ನಡೆಯುತ್ತಿರುವ `ಕಾರ್ಖಾನೆ ತೊಲಗಿಸಿ, ಜೀವ ಉಳಿಸಿ- ಧರಣಿಗೆ ಎನ್.ಕೆ.ಪಿ.ಎಂ ಶಾಲೆಯ ವಿದ್ಯಾರ್ಥಿಗಳು ಬೆಂಬಲಿಸಿದರು.

ಈ ವೇಳೆ ಶಿಕ್ಷಕಿ ರಂಗಮ್ಮ ಕೆ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಸ್ಥಾಪಿಸಿದ ಕೈಗಾರಿಕೆಗಳು ನಮ್ಮ ಜೀವಕ್ಕೆ ಬಾಧೆಯನ್ನುಂಟು ಮಾಡುತ್ತಿವೆ. ನಮಗೆ ಮೊದಲು ಜೀವ ಮತ್ತು ಆರೋಗ್ಯ ಉಳಿಯಬೇಕು. ಆನಂತರವಷ್ಟೇ ಅಭಿವೃದ್ಧಿ, ಉದ್ಯೋಗ ಕುರಿತು ಮಾತನಾಡೋಣ. ಈಗ ಕೊಪ್ಪಳಕ್ಕೆ ಸಂಕಷ್ಟ ತಂದಿರುವುದು ಪರಿಸರ ಮಾಲಿನ್ಯ. 20 ಹಳ್ಳಿಗಳು ಗಂಭೀರ ರೋಗರುಜಿನಗಳಿಂದ ಬಾಧಿತವಾಗಿವೆ. ಇದು ಗೊತ್ತಿದ್ದೂ ನಗರದ ಪಕ್ಕದಲ್ಲಿ ಬಹುದೊಡ್ಡ ಹೂಡಿಕೆ ಮಾಡಿ ಮಾಲಿನ್ಯಕಾರಕ ಬಲ್ಡೋಟ್ ಕಾರ್ಖಾನೆ ಸ್ಥಾಪಿಸುವುದು ಎಷ್ಟು ಸರಿ? ಮುಂದಿನ ಮಕ್ಕಳ ಭವಿಷ್ಯವಂತೂ ಇದರಿಂದ ಕತ್ತಲಾಗುತ್ತದೆ. ಆದ್ದರಿಂದ ನಾವೆಲ್ಲ ಹೋರಾಡಿ ಎಷ್ಟೇ ಕಷ್ಟವಾದರೂ ಇದನ್ನು ನಿಲ್ಲಿಸೋಣ. ಇಲ್ಲದಿದ್ದರೆ ಊರು ಬಿಟ್ಟು ಹೋಗಬೇಕಾಗುತ್ತದೆ ಎಂದರು.

ವಿದ್ಯಾರ್ಥಿಗಳಾದ ಕೃಷ್ಣ, ಮಧು, ಜೋಯಾ ಮಾತನಾಡಿ, ನಾವೆಲ್ಲರೂ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಡುವ ಅನಿವಾರ್ಯತೆ ಬಂದಿದೆ. ಇಲ್ಲಿನ ಹಿರಿಯರು ನಮ್ಮ ಭವಿಷ್ಯದ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಇವರಿಗೆ ನಾವು ವಿಧೇಯರಾಗಿರೋಣ ಎಂದರು.

ಪರಿಸರ ಜಾಗೃತಿ ಗೀತೆಯನ್ನು ವಿದ್ಯಾರ್ಥಿಗಳಾದ ಮಿಶ್ಬಾ, ಅರ್ಪಿತಾ, ಮಧು, ಕೃಷ್ಣ ಮತ್ತು ಶ್ವೇತಾ ಹಾಡಿದರು. ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ ಎ.ಎಂ. ಮದರಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ.ಗೋನಾಳ, ಮಂಜುನಾಥ ಜಿ.ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರು, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಕಾರ್ಮಿಕ ನಿರೀಕ್ಷಕ ಶಾಂತಯ್ಯ ಅಂಗಡಿ, ಮಹದೇವಪ್ಪ ಮಾವಿನಮಡು, ವಿಜಯ ಮಹಾಂತೇಶ್ ಹಟ್ಟಿ, ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ಡಿ.ಎಂ. ಬಡಿಗೇರ, ಚಾರಣ ಬಳಗದ ಸಿ.ಬಿ. ಪಾಟೀಲ್, ಮಂಜುನಾಥ ಕವಲೂರು, ಗವಿಸಿದ್ದಪ್ಪ ತುಮ್ಮರಗುದ್ಧಿ, ಪಂಪಣ್ಣ ಚಿಂತಪಲ್ಲಿ, ರತ್ನಮ್ಮ ಪುರಾಣಿಕಮಠ, ಪದ್ಮಾವತಿ ದಸ್ತೇನವರ್, ರಮೇಶ ಪಿ.ಬಿ, ಶಿವಪ್ಪ ಜಲ್ಲಿ, ಮಖ್ಬುಲ್ ರಾಯಚೂರು, ಯಮನೂರಪ್ಪ ಹಳ್ಳಿಕೇರಿ, ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಶಿಕ್ಷಕ ಬಿ.ಎಂ. ನಿತಿನ್ ಮಾತನಾಡಿ, ಕೊಪ್ಪಳ ಅತ್ಯಂತ ಶುಷ್ಕ ಹವಾಮಾನ ಇರುವ ನಗರ. ಈಗ ಧೂಳುಮಯವಾಗಿದೆ. ಮಕ್ಕಳಾದಿಯಾಗಿ ಪರಿಸರದ ಹಕ್ಕು ಕೇಳುವುದು ಇಲ್ಲಿನ ಅನಿವಾರ್ಯತೆಯಾಗಿದೆ ಎಂದು ಹೇಳಿದರು.

ಮಕ್ಕಳ ಸಾಮಾಜಿಕ ಜಾಲತಾಣ ಬಳಕೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಚಿಂತನೆ: ಸಚಿವ ಪ್ರಿಯಾಂಕ ಖರ್ಗೆ

0

ಬೆಂಗಳೂರು: ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವ ಕುರಿತು ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಐಟಿ–ಬಿಟಿ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ, ಬಿಜೆಪಿ ಶಾಸಕ ಸುರೇಶ್ ಕುಮಾರ್ ಪ್ರಸ್ತಾಪಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಇದು ಅತ್ಯಂತ ಗಂಭೀರ ಸಮಸ್ಯೆ. ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಯಂತ್ರಿಸುವ ಬಗ್ಗೆ ಸರ್ಕಾರ ಈಗಾಗಲೇ ಚರ್ಚೆ ಆರಂಭಿಸಿದೆ. ಜವಾಬ್ದಾರಿಯುತ ಬಳಕೆದಾರರು, ಎಐ ಮತ್ತು ಸಾಮಾಜಿಕ ಜಾಲತಾಣಗಳ ಕುರಿತು ಏನು ಮಾಡಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಯುತ್ತಿದೆ” ಎಂದು ಹೇಳಿದರು.

ಇದರ ಜೊತೆಗೆ ಮಾಹಿತಿ ತಂತ್ರಜ್ಞಾನ ಇಲಾಖೆ ಮೆಟಾ ಕಂಪನಿಯೊಂದಿಗೆ ಸೇರಿ ‘ಡಿಜಿಟಲ್ ಡಿಟಾಕ್ಸ್’ ಕಾರ್ಯಕ್ರಮ ನಡೆಸುತ್ತಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 3 ಲಕ್ಷ ಮಕ್ಕಳು ಹಾಗೂ 1 ಲಕ್ಷ ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ಪ್ರಿಯಾಂಕ ಖರ್ಗೆ ಮಾಹಿತಿ ನೀಡಿದರು. ಸರ್ಕಾರ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ತಿಳಿಸಿದರು.

ವಿದೇಶಗಳಲ್ಲಿ ಈಗಾಗಲೇ ಹಲವು ದೇಶಗಳು ಈ ಕುರಿತು ಕ್ರಮ ಕೈಗೊಂಡಿವೆ ಎಂದು ಅವರು ಉದಾಹರಣೆ ನೀಡಿದರು. ಫಿನ್‌ಲ್ಯಾಂಡ್‌ನಲ್ಲಿ ಕ್ರಮ ಜಾರಿಯಲ್ಲಿದ್ದು, ಇಂಗ್ಲೆಂಡ್ ಕೂಡ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಯಂತ್ರಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಆಸ್ಟ್ರೇಲಿಯಾ ಎರಡು ತಿಂಗಳ ಹಿಂದೆ 16 ವರ್ಷ ವಯಸ್ಸಿನೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸುವುದಕ್ಕೆ ನಿರ್ಬಂಧ ಹೇರಿದೆ. ನಾವೂ ರಾಜ್ಯದಲ್ಲಿ ಎಐ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಗೆ ಸಂಬಂಧಿಸಿದಂತೆ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಸುರೇಶ್ ಕುಮಾರ್, ಆಸ್ಟ್ರೇಲಿಯಾದಲ್ಲಿ 16 ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರಿರುವುದನ್ನು ಉಲ್ಲೇಖಿಸಿದರು. ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಅಪಾಯಕಾರಿ ಪರಿಸ್ಥಿತಿಗೆ ಕಾರಣವಾಗುತ್ತಿದೆ ಎಂದು ಅವರು ಎಚ್ಚರಿಸಿದರು. ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲೂ ಮಕ್ಕಳ ಮೇಲೆ ಸಾಮಾಜಿಕ ಜಾಲತಾಣಗಳ ಎಕ್ಸ್‌ಪೋಜರ್ ಮತ್ತು ಅದರ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ ಎಂದು ಹೇಳಿದರು.

error: Content is protected !!