Home Blog Page 85

ಒತ್ತಡ ನಿವಾರಣೆಗೆ ನೌಕರರು ಕ್ರೀಡೆಗಳಲ್ಲಿ ಪಾಲ್ಗೊಳ್ಳಿ: ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿರುವ ಸರ್ಕಾರಿ ನೌಕರರಿಗೆ ನಿರಂತರ ಕಾರ್ಯದಿಂದಾಗಿ ಮಾನಸಿಕ ಮತ್ತು ದೈಹಿಕ ಒತ್ತಡಗಳು ಉಂಟಾಗುವುದು ಸಾಮಾನ್ಯ. ಇವುಗಳ ನಿಯಂತ್ರಣ ಮತ್ತು ಆರೋಗ್ಯಕರ ಜೀವನ ಮತ್ತು ಗುಣಮಟ್ಟದ ಸೇವೆಗಾಗಿ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಮತ್ತು ನೌಕರರು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಮತ್ತು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಹೇಳಿದರು.

ಅವರು ಶುಕ್ರವಾರ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಘಟದಿಂದ ಆಯೋಜಿಸಿದ್ದ 2026-27ನೇ ಸಾಲಿನ ಜಿಲ್ಲಾ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ನೌಕರರು ಕಚೇರಿ ಕೆಲಸಕ್ಕೆ ಸೀಮಿತರಾಗದೇ, ಕ್ರೀಡೆ, ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸಬೇಕು. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಬೇಕು ಮತ್ತು ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ರಾಜ್ಯ ಸರಕಾರವು ಸರ್ಕಾರಿ ನೌಕರರ ಆರೋಗ್ಯ ಸಂರಕ್ಷಣೆ ಹಾಗೂ ಸಕಾಲದಲ್ಲಿ ಸಹಾಯಕ್ಕಾಗಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಎಲ್ಲ ಸರ್ಕಾರಿ ನೌಕರರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ನೌಕರರ ಕ್ರೀಡೆ, ಸಾಂಸ್ಕೃತಿಕ ಕಾರ್ಯಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆಯಿಂದ ಅನುದಾನ, ಅಗತ್ಯ ಸೌಕರ್ಯಗಳನ್ನು ಪೂರೈಸಿ, ಪ್ರೋತ್ಸಾಹ ನೀಡಲಾಗುತ್ತಿದೆ. ನೌಕರರ ನಿರಂತರ ಶ್ರಮ ಹಾಗೂ ಕಾರ್ಯ ವೈಖರಿಯಿಂದ ಸರ್ಕಾರಿ ಸೇವೆಗಳು ಸಾರ್ವಜನಿಕರಿಗೆ ತಲುಪುತ್ತಿವೆ. ನೌಕರರು ಶಿಸ್ತು, ಸಂಯಮದಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಪೂರ್ಣಿಮಾ ನಾಯ್ಡು ಹಾಗೂ ವಿರೇಶ ಬ್ಯಾಹಟ್ಟಿ ಮಾತನಾಡಿದರು. ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ರಮೇಶ ಲಿಂಗದಾಳ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ಸುರೇಶ ಜಟ್ಟೆನ್ನವರ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕ್ರೀಡಾ ಕಾರ್ಯದರ್ಶಿ ಪಿ.ಎಫ್. ಗುಡೇನಕಟ್ಟಿ ವಂದಿಸಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಭಾಗವಹಿಸಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಧಾರವಾಡ ತಹಸೀಲ್ದಾರ ಡಾ. ಡಿ.ಎಚ್. ಹೂಗಾರ, ಧಾರವಾಡ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಂಗಾಧರ ಕಂದಕೂರ, ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ಮೋಹನ ಶಿವಣ್ಣನವರ, ಧಾರವಾಡ ಗ್ರಾಮೀಣ ಮತ್ತು ನಗರ ಕ್ಷೇತ್ರಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ, ಸಂಘದ ಗೌರವಾಧ್ಯಕ್ಷ ಪ್ರಕಾಶ ಹಳಪೇಟ, ರಾಜ್ಯ ಪರಿಷತ್ ಸದಸ್ಯ ದೇವಿದಾಸ ಶಾಂತಿಕರ, ಖಜಾಂಚಿ ಮಂಜುನಾಥ ಯಡಹಳ್ಳಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ಹೊಲ್ತಿಕೋಟಿ, ನೌಕರ ಸಂಘದ ತಾಲೂಕುಗಳ ಅಧ್ಯಕ್ಷರಾದ ವಿ.ಎಫ್. ಚುಳಕಿ, ಡಾ. ಪ್ರಲ್ಹಾದ ಗೆಜ್ಜಿ, ಜಗದೀಶ ವಿರಕ್ತಮಠ, ವಿಠ್ಠಲ ರಂಗಣ್ಣವರ, ಎಂ.ಎ. ತಹಸೀಲ್ದಾರ, ಮುತ್ತಪ್ಪ ಅಣ್ಣಿಗೇರಿ, ಹಿರಿಯ ಉಪಾಧ್ಯಕ್ಷರಾದ ರಾಜಶೇಖರ ಕೋನರಡ್ಡಿ, ರಾಜಶೇಖರ ಹೊನ್ನಪ್ಪನವರ, ಗಿರೀಶ ಚೌಡಕಿ, ಡಾ. ಸುರೇಶ ಹಿರೇಮಠ, ಮಿಲಿಂದಕುಮಾರ್ ಎಂ.ನಾಯ್ಕ, ಕ್ರೀಡಾ ಕಾರ್ಯದರ್ಶಿಗಳಾದ ಸುರೇಶ ಜಟ್ಟೆನ್ನವರ, ಪಿ.ಎಫ್. ಗುಡೇನಕಟ್ಟಿ, ಅಯ್ಯಪ್ಪ ಮೊಖಾಶಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಪಿ.ಬಿ. ಕುರಬೆಟ್, ಚಂದ್ರಶೇಖರ ತಿಗಡಿ ಇದ್ದರು.

ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಕ್ರೀಡಾಕೂಟದ ಧ್ವಜಾರೋಹಣ ನೇರವೇರಿಸಿದರು. ಮಹಾಪೌರರಾದ ಜ್ಯೋತಿ ಪಾಟೀಲ ಪಾರಿವಾಳ ಹಾರಿ ಬಿಟ್ಟರು. ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಸ್.ಆರ್. ಪಾಟೀಲ ಕ್ರೀಡಾಪಟು ಯಲ್ಲೂನಾಯಕ ಹಮಾಣಿ ಅವರ ತಂಡದಿಂದ ಕ್ರೀಡಾಜ್ಯೋತಿ ಸ್ವೀಕರಿಸಿದರು.

ಮಹಾಪೌರರಾದ ಜ್ಯೋತಿ ಪಾಟೀಲ ಮಾತನಾಡಿ, ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಮುಖ್ಯವಾಗಿದೆ. ಇಂದಿನ ಜನಕಲ್ಯಾಣ ಸರಕಾರಗಳು ಜನಸಾಮಾನ್ಯರ ಸಮಗ್ರ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ. ಅವುಗಳನ್ನು ಅರ್ಹರಿಗೆ ತಲುಪಿಸುವ ಮೂಲಕ ನಿಗದಿತ ಗುರಿ ಸಾಧಿಸಬೇಕು ಎಂದು ಹೇಳಿದರು.

ಕ್ರೀಡೆಯಿಂದ ಶಿಸ್ತು, ಚಾರಿತ್ರ್ಯ ವೃದ್ಧಿ: ಸಂಸದ ಬಸವರಾಜ ಬೊಮ್ಮಾಯಿ

0

ವಿಜಯಸಾಕ್ಷಿ ಸುದ್ದಿ, ಹಾವೇರಿ: ಜೀವನದಲ್ಲಿ ಯಾರು ಕ್ರೀಡೆಯನ್ನು ಮುಂದುವರೆಸಿಕೊಂಡು ಹೋಗುತ್ತಾರೆಯೋ ಅವರು ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಾಗಿರುತ್ತಾರೆ. ಅಷ್ಟೇ ಅಲ್ಲ, ಎಂಥಹ ಸಂದರ್ಭದಲ್ಲಿಯೂ ಸುಖ-ದುಃಖವನ್ನು ಸಮನಾಗಿ ಸ್ವೀಕರಿಸುವ ಚೈತನ್ಯ ಕ್ರೀಡಾ ಮನೋಭಾವದಿಂದ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ–ಗದಗ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಶುಕ್ರವಾರ ಹಾವೇರಿ ಜಿಲ್ಲೆಯ ಹಾನಗಲ್ಲ ನಗರದ ಜನತಾ ಶಿಕ್ಷಣ ಸಂಸ್ಥೆಯ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಸಂಸದ ಕ್ರೀಡಾ ಮಹೋತ್ಸವ 2025–26ರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಸಣ್ಣವರಿದ್ದಾಗ ಎಲ್ಲರೂ ಒಂದಿಲ್ಲೊಂದು ಕ್ರೀಡೆಯಲ್ಲಿ ತೊಡಗಿಸಿಕೊಂಡಿರುತ್ತೇವೆ. ಆದರೆ, ಅದನ್ನು ಮುಂದುವರೆಸಿಕೊಂಡು ಹೋಗುವುದಿಲ್ಲ. ಕ್ರೀಡೆಯೊಂದಿಗಿನ ನಂಟು ಜೀವನದ ಅರ್ಧದಲ್ಲಿಯೇ ನಿಂತು ಹೋಗುತ್ತದೆ. ಕ್ರೀಡೆಗೆ ವಯಸ್ಸಿನ ಮಿತಿ ಇಲ್ಲ ಎಂದು ಇಲ್ಲಿಗೆ ಬಂದಾಗಲೇ ಗೊತ್ತಾಯಿತು. ವೈಭವಿ ಮಹಿಳಾ ಮಂಡಳದವರು ಸ್ಫೂರ್ತಿಯಿಂದ, ಬಹಳ ಉತ್ಸಾಹದಿಂದ ಆಡಿದರು. ಮನಸ್ಸಿದ್ದರೆ ಕ್ರೀಡೆಯನ್ನು ಯಾವ ವಯಸ್ಸಿನಲ್ಲಿಯಾದರೂ ಆಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದೀರಿ. ಇಡೀ ದಿನ ಎಲ್ಲರೂ ಸಕ್ರಿಯರಾಗಿ ಕ್ರೀಡೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.

ಕ್ರೀಡೆಯಿಂದ ಶಿಸ್ತು, ಚಾರಿತ್ರ್ಯ ಬರುತ್ತದೆ. ಅದಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡೆಗೂ ಅಷ್ಟೇ ಮಹತ್ವ ಕೊಟ್ಟಿದ್ದಾರೆ. ಮೊದಲು ಫಿಟ್ ಇಂಡಿಯಾ, ನಂತರ ಖೇಲೋ ಇಂಡಿಯಾ, ಓಲಿಂಪಿಕ್ಸ್ ಬಂದಾಗ ಜೀತೋ ಇಂಡಿಯಾ ಇತ್ಯಾದಿಗಳ ಪರಿಣಾಮದಿಂದ ಟೋಕಿಯೋ ಓಲಿಂಪಿಕ್ಸ್‌ನಲ್ಲಿ ಭಾರತ ಹಿಂದೆಂದಿಗಿಂತಲೂ ಹೆಚ್ಚು ಪದಕಗಳನ್ನು ಗೆಲ್ಲಲು ಸಾಧ್ಯವಾಯಿತು. ಸಂಸದರ ಕ್ರೀಡಾ ಮಹೋತ್ಸವ ಬಹಳ ಯಶಸ್ವಿಯಾಗಿ ಜಿಲ್ಲೆಯಾದ್ಯಂತ ಕ್ರೀಡಾ ಸ್ಫೂರ್ತಿಯನ್ನು ಹುಟ್ಟುಹಾಕಿದೆ. ಮುಂದಿನ ವರ್ಷ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಕೊಟ್ಟು ಉತ್ತಮ ರೀತಿಯಲ್ಲಿ ನಡೆಸೋಣ ಎಂದು ಹೇಳಿದರು.

ಈ ಕ್ರೀಡೆ ಅತ್ಯಂತ ಯಶಸ್ವಿಯಾಗಲು ಕಾರಣರಾಗಿರುವ ಪಕ್ಷದ ಎಲ್ಲ ಮುಖಂಡರಿಗೆ, ಕ್ರೀಡಾಪಟುಗಳು, ರೆಫ್ರಿಯಾಗಿ ಬಂದಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶಿವರಾಜ ಸಜ್ಜನ, ಭಾರತೀಯ ಜನತಾ ಪಕ್ಷದ ಮಂಡಳದ ಅಧ್ಯಕ್ಷರಾದ ಮಹೇಶಕುಮಾರ ಕಮಡೊಳ್ಳಿ, ಮುಖಂಡರಾದ ಪದ್ಮನಾಭ ಕುಂದಾಪೂರ, ಬಿ.ಎಸ್. ಅಕ್ಕಿವಳ್ಳಿ, ಭೋಜರಾಜ ಕರೂದಿ, ಕಲ್ಯಾಣಕುಮಾರ ಶೆಟ್ಟರ, ರಾಘವೇಂದ್ರ ತಹಸೀಲ್ದಾರ, ಮಾಲತೇಶ ಸೊಪ್ಪಿನ, ಕೃಷ್ಣಾ ಇಳಿಗೇರ, ರಾಜಶೇಖರಗೌಡ ಕಟ್ಟೆಗೌಡ್ರ, ಚಂದ್ರಪ್ಪ ಹರಿಜನ, ಸಿದ್ದಲಿಂಗಪ್ಪ ಕಮಡೊಳ್ಳಿ, ಶಿವಲಿಂಗಪ್ಪ ತಲ್ಲೂರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಕ್ರೀಡೆ ಜೀವನಕ್ಕೆ ಬಹಳ ಹತ್ತಿರ. ಸೋಲಬಾರದು ಎಂದು ಆಡುವುದು ಅಂದರೆ ಒಂದು ರಕ್ಷಣಾತ್ಮಕ ಆಟ, ಇನ್ನೊಂದು ಗೆಲ್ಲಲೇಬೇಕೆಂದು ಆಡುವುದು ಆಕ್ರಮಣಕಾರಿ ಆಟ. ಬದುಕಿನಲ್ಲಿ ಗೆಲ್ಲಲೇಬೇಕೆಂದು ಆಟ ಆಡಬೇಕು, ಅಂದಾಗ ಮಾತ್ರ ಯಶಸ್ಸು ಸಿಗುತ್ತದೆ. ಸಕಾರಾತ್ಮಕ ಮನಸ್ಸು, ಕಠಿಣ ಪರಿಶ್ರಮ, ಗುರಿ ಇದ್ದರೆ ಯಶಸ್ಸು ಸಾಧ್ಯ ಎಂದು ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಸಭೆಗೆ ಗೈರು: ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ ವರ್ಗಾವಣೆ – ಸರ್ಕಾರ ಆದೇಶ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಭೆಗೆ ಗೈರಾಗಿದ್ದ ವಿಚಾರಕ್ಕೆ ಸಂಬಂಧಿಸಿ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಪಂಕಜ್ ಕುಮಾರ್ ಪಾಂಡೆ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಪಾಂಡೆ ಅವರನ್ನು ಡಿಪಿಎಆರ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಇದೇ ವೇಳೆ BWSSB ಚೇರ್ಮನ್ ಡಾ. ರಾಮ್ ಪ್ರಸಾತ್ ಮನೋಹರ್ ಅವರಿಗೆ ಕೆಪಿಟಿಸಿಎಲ್ ಎಂಡಿಯ ಹೆಚ್ಚುವರಿ ಹೊಣೆ ನೀಡಲಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದಿದ್ದ ಮಹತ್ವದ ಸಭೆಗೆ ಪಂಕಜ್ ಕುಮಾರ್ ಪಾಂಡೆ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಂದ ನೋಟಿಸ್ ಕೂಡ ನೀಡಲಾಗಿತ್ತು. ಸಭೆಗೆ ಗೈರಾಗಿದ್ದ ಕಾರಣ ಶಿಸ್ತು ಕ್ರಮ ಕೈಗೊಳ್ಳುವ ಚಿಂತನೆಯಲ್ಲೂ ಸರ್ಕಾರ ಇತ್ತು.

ಆದರೆ ಸಚಿವ ಕೆ.ಜೆ. ಜಾರ್ಜ್ ಹಿರಿಯ ಐಎಎಸ್ ಅಧಿಕಾರಿ ಪಾಂಡೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಪಾಂಡೆ ವಿರುದ್ಧ ಕ್ರಮ ಕೈಗೊಂಡರೆ ತಾವು ರಾಜೀನಾಮೆ ನೀಡುವುದಾಗಿ ಜಾರ್ಜ್ ಹೇಳಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಬಂದಿದ್ದವು.

ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಸ್ತು ಕ್ರಮ ಕೈಬಿಟ್ಟು, ವರ್ಗಾವಣೆ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಯುವಕರಿಗೆ ಸ್ಫೂರ್ತಿಯಾಗಿದ್ದ ಸಿ.ಜೆ. ರಾಯ್: ಸಾವಿರಾರು ಕೋಟಿ ಒಡೆಯ ಸಾವಿಗೆ ಶರಣಾಗಿದ್ದು ಏಕೆ?

0

ಬೆಂಗಳೂರು: ಕೇರಳ ಮೂಲದ ಖ್ಯಾತ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಸಿಇಒ ಸಿ.ಜೆ. ರಾಯ್ ಅವರು ಶುಕ್ರವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಸಂಚಲನ ಮೂಡಿಸಿದೆ. ಪದೇಪದೇ ಐಟಿ ಇಲಾಖೆ ದಾಳಿಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಈ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ.

ಬೆಂಗಳೂರು ನಗರದಲ್ಲಿ ಸಿ.ಜೆ. ರಾಯ್ ಹೆಸರಿನಲ್ಲಿ ಹಲವು ದೊಡ್ಡ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಇದ್ದವು. ಅವರ ಅಕಾಲಿಕ ಸಾವು ಉದ್ಯಮ ವಲಯದಲ್ಲಿ ಆಘಾತಕ್ಕೆ ಕಾರಣವಾಗಿದ್ದು, ಈ ಘಟನೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಶ್ರೀಮಂತ ಉದ್ಯಮಿ, ಬಹುಮುಖ ಸಾಧನೆ

ಸಿ.ಜೆ. ರಾಯ್ ಅವರು ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಹಾಗೂ ಸಂಸ್ಥಾಪಕರಾಗಿದ್ದರು. ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ಅವರು, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸಿದ್ದರು. ಜೊತೆಗೆ ಸ್ಲೋವಾಕ್ ಗಣರಾಜ್ಯದ ಗೌರವ ಕಾನ್ಸಲ್ ಆಗಿಯೂ ಕರ್ನಾಟಕ ಮತ್ತು ಕೇರಳದಲ್ಲಿ ಸೇವೆ ಸಲ್ಲಿಸಿದ್ದರು.

ಐಷಾರಾಮಿ ಕಾರುಗಳ ಸಂಗ್ರಹ

ಕಾರುಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ರಾಯ್, ದುಬೈ ಮತ್ತು ಭಾರತದಲ್ಲಿ ಹಲವು ದುಬಾರಿ ಐಷಾರಾಮಿ ಹಾಗೂ ಸ್ಪೋರ್ಟ್ಸ್ ಕಾರುಗಳನ್ನು ಹೊಂದಿದ್ದರು. ರೋಲ್ಸ್ ರಾಯ್ಸ್, ಲ್ಯಾಂಬೋರ್ಗಿನಿ, ಬುಗಾಟಿ ವೇರಾನ್ ಸೇರಿದಂತೆ ಅಪರೂಪದ ಕಾರುಗಳು ಅವರ ಸಂಗ್ರಹದಲ್ಲಿದ್ದವು.

ಚಿತ್ರ ನಿರ್ಮಾಣಕ್ಕೂ ಕೈಹಾಕಿದ್ದ ಉದ್ಯಮಿ

ಕಾನ್ಫಿಡೆಂಟ್ ಗ್ರೂಪ್ ಕೇವಲ ರಿಯಲ್ ಎಸ್ಟೇಟ್‌ಗೆ ಸೀಮಿತವಾಗಿರಲಿಲ್ಲ. ಸಿ.ಜೆ. ರಾಯ್ ಅವರ ಬಹುಮುಖ ಆಸಕ್ತಿಯಿಂದ ಸಂಸ್ಥೆ ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿತ್ತು. ಮಲಯಾಳಂ ಮತ್ತು ಕನ್ನಡದಲ್ಲಿ 11 ಚಿತ್ರಗಳನ್ನು ನಿರ್ಮಿಸಿದ್ದು, ‘ಮರಕ್ಕಾರ್’ ಎಂಬ ಅತಿ ದೊಡ್ಡ ಬಜೆಟ್‌ನ ಮಲಯಾಳಂ ಚಿತ್ರಕ್ಕೂ ಅವರು ನಿರ್ಮಾಪಕರಾಗಿದ್ದರು. 2006ರಲ್ಲಿ ‘ಐಡಿಯಾ ಸ್ಟಾರ್ ಸಿಂಗರ್’ ಜನಪ್ರಿಯ ಟಿವಿ ಕಾರ್ಯಕ್ರಮಕ್ಕೆ ಹಣಕಾಸು ಒದಗಿಸಿ ಕಾನ್ಫಿಡೆಂಟ್ ಗ್ರೂಪ್‌ನ್ನು ಪ್ರಚಾರ ಮಾಡಿದ್ದೂ ಗಮನಾರ್ಹ.

ಐಟಿ ದಾಳಿ ವೇಳೆ ನಡೆದ ದುರ್ಘಟನೆ

ಇಂದು ಬೆಳಗ್ಗೆ ಐಟಿ ಇಲಾಖೆ ಅಧಿಕಾರಿಗಳು ಎರಡು ಇನ್ನೋವಾ ಕಾರುಗಳಲ್ಲಿ ಬಂದ 8 ಸದಸ್ಯರ ತಂಡದೊಂದಿಗೆ ದಾಳಿ ನಡೆಸಿದ್ದರು. ಮಧ್ಯಾಹ್ನ ಕಚೇರಿಗೆ ಆಗಮಿಸಿದ ಸಿ.ಜೆ. ರಾಯ್ ಸುಮಾರು ಒಂದು ಗಂಟೆ ಕಾಲ ವಿಚಾರಣೆ ಎದುರಿಸಿದ್ದು, ಕೆಲ ದಾಖಲೆಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಬಳಿಕ ಮತ್ತಷ್ಟು ದಾಖಲೆ ತರಲು ರೂಮ್‌ಗೆ ತೆರಳಿದ ವೇಳೆ, ತಮ್ಮ ಪಿಸ್ತೂಲಿನಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಗುಂಡು ಹಾರಿಸಿದ ತಕ್ಷಣ ಐಟಿ ಅಧಿಕಾರಿಗಳು ಗನ್ ಕಿತ್ತುಕೊಂಡು ರಕ್ಷಣೆಗಾಗಿ ಪ್ರಯತ್ನಿಸಿದರೂ, ಅಷ್ಟರಲ್ಲಿ ರಾಯ್ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಹೆಚ್‌ಎಸ್‌ಆರ್ ಲೇಔಟ್‌ನ ನಾರಾಯಣ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ತನಿಖೆ ಮುಂದುವರಿಕೆ

ಘಟನೆಯ ಬಳಿಕ ಹಲವು ಅನುಮಾನಗಳು ಮೂಡಿವೆ. ಸಾಮಾನ್ಯವಾಗಿ ಐಟಿ ದಾಳಿ ವೇಳೆ ಅಗತ್ಯ ವಸ್ತುಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಆದರೆ ರಾಯ್ ಬಳಿಯಿದ್ದ ಗನ್ ವಶಕ್ಕೆ ಪಡೆಯಲಾಗಿರಲಿಲ್ಲ ಎಂಬುದು ಪ್ರಶ್ನೆ ಹುಟ್ಟುಹಾಕಿದೆ.

ಘಟನೆ ನಂತರ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಅವರು ಐಟಿ ಅಧಿಕಾರಿಗಳ ವಿಚಾರಣೆ ನಡೆಸಿದ್ದು, ದಾಳಿ ವೇಳೆ ಸಿಕ್ಕ ದಾಖಲೆಗಳನ್ನು ವಶಕ್ಕೆ ಪಡೆದು ಅಧಿಕಾರಿಗಳು ತೆರಳಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.

ಲೆಕ್ಕಕ್ಕಿದ್ದು ಆಟಕ್ಕಿಲ್ಲದಂತಾದ ವಾಚಿಂಗ್ ಟವರ್!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ನಿರ್ಮಿಸಿದ್ದ ಪೊಲೀಸ್ ಕಣ್ಗಾವಲು ಗೋಪುರ/ಪೊಲೀಸ್ ವಾಚಿಂಗ್ ಟವರ್ ಹಲವು ವರ್ಷಗಳಿಂದ ಉಪಯೋಗಿಸದೇ ಧೂಳು ತಿನ್ನುತ್ತಿದೆ.

ಗದಗ ಜಿಲ್ಲೆಯಲ್ಲಿಯೇ ಶೈಕ್ಷಣಿಕ, ಧಾರ್ಮಿಕ, ಔದ್ಯೋಗಿಕವಾಗಿ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಲಕ್ಷ್ಮೇಶ್ವರ ಪಟ್ಟಣದಲ್ಲಿ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಲಕ್ಷ್ಮೇಶ್ವರ ಪಟ್ಟಣ ನೆರೆಯ ಕುಂದಗೋಳ, ಶಿರಹಟ್ಟಿ, ಗದಗ, ಸವಣೂರ, ಶಿಗ್ಗಾಂವ, ಹಾವೇರಿ ತಾಲೂಕಿನ ಜನರಿಗೆ ಕೇಂದ್ರ ಸ್ಥಳವಾಗಿದ್ದರಿಂದ ವ್ಯಾಪಾರ, ಉದ್ಯೋಗ, ಶಿಕ್ಷಣ ಹೀಗೆ ಅನೇಕ ಕಾರಣಗಳಿಗಾಗಿ ಪಟ್ಟಣಕ್ಕೆ ಆಗಮಿಸುತ್ತಾರೆ. ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯೂ ಪಟ್ಟಣದಲ್ಲಿಯೇ ಹಾದು ಹೋಗಿದ್ದರಿಂದ ವಾಹನ ದಟ್ಟಣೆಯೂ ಹೆಚ್ಚಿರುತ್ತದೆ. ಅಲ್ಲದೇ ಮರಳು, ಮಣ್ಣು, ಎಂಸ್ಯಾಂಡ್, ಖಡಿ ಸಾಗಿಸುವ ವಾಹನಗಳು ಸಾಲುಗಟ್ಟಿರುತ್ತವೆ. ಇಂಜಿನಿಯರಿಂಗ್, ಪದವಿ, ಡಿಪ್ಲೋಮಾ, ಐಟಿಐ ಸೇರಿ ಕಾಲೇಜುಗಳು, ಹತ್ತಾರು ಶಾಲೆಗಳ ವಿದ್ಯಾರ್ಥಿಗಳು ಬರುತ್ತಾರೆ. ಬೆಳಿಗ್ಗೆಯಿಂದ ರಾತ್ರಿವರೆಗೂ ಮುಖ್ಯ ರಸ್ತೆಗಳು, ಮಾರುಕಟ್ಟೆ ರಸ್ತೆಗಳು ಜನ-ವಾಹನ ದಟ್ಟಣೆಯಿಂದ ಕೂಡಿರುತ್ತವೆ.

ಈ ನಿಟ್ಟಿನಲ್ಲಿ ಸಂಚಾರ ದಟ್ಟಣೆಯ ಜೊತೆಗೆ ಅಪಘಾತ, ಕಳ್ಳತನ, ಅಕ್ರಮ ಸಾಗಾಟ, ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವ ಮತ್ತು ನಿಗಾ ವಹಿಸುವ ನಿಟ್ಟಿನಲ್ಲಿ ಈ ಹಿಂದೆ ಲಕ್ಷ್ಮೇಶ್ವರ ಠಾಣೆಯ ಪಿಎಸ್‌ಐ ಆಗಿದ್ದ ರವಿಚಂದ್ರ ಬಡಫಕ್ಕೀರಪ್ಪನವರ ಸಾರ್ವಜನಿಕರ ಸಹಕಾರದಿಂದ ಲಕ್ಷಾಂತರ ರೂ ಖರ್ಚು ಮಾಡಿ ಟ್ರಾಫಿಕ್ ಸಮಸ್ಯೆ ಇರುವ ಪಟ್ಟಣದ ಶಿಗ್ಲಿ ನಾಕಾ ಮತ್ತು ದೂದಪೀರಾಂ ದರ್ಗಾದಲ್ಲಿ ಪೊಲೀಸ್ ಕಣ್ಗಾವಲು ಗೋಪುರಗಳ ವ್ಯವಸ್ಥೆ ಮಾಡಿದ್ದರು. ಇದರಲ್ಲಿ ಸಿಸಿ ಕ್ಯಾಮರಾ, ಧ್ವನಿವರ್ಧಕ, ಫ್ಯಾನ್, ಕುರ್ಚಿ ಸೇರಿ ಟ್ರಾಫಿಕ್ ಪೊಲೀಸರಿಗೆ ಅಗತ್ಯವಾಗಿದ್ದ ಎಲ್ಲ ವ್ಯವಸ್ಥೆ ಮಾಡಿದ್ದರು. ಸರದಿಯಂತೆ ಸಿಬ್ಬಂದಿ ನೇಮಿಸಿ ದಿನವೂ ಅತ್ಯಂತ ವ್ಯವಸ್ಥಿತವಾಗಿ ಸಂಚಾರ ದಟ್ಟಣೆ ನಿಯಂತ್ರಿಸಲಾಗುತ್ತಿತ್ತು. ಅಲ್ಲದೇ ಸವಾರರಿಗೆ ರಸ್ತೆ ನಿಯಮಗಳನ್ನು ತಿಳಿಸಿ ಜಾಗೃತಿ ಮೂಡಿಸುವ ಮತ್ತು ದಂಡ ವಿಧಿಸುವ ಕಾರ್ಯ ಮಾಡಲಾಗುತ್ತಿತ್ತು.

ಆದರೆ ಠಾಣೆಯ ಪಿಎಸ್‌ಐ ವರ್ಗಾವಣೆಗೊಂಡ ನಂತರ ಈ ಪೊಲೀಸ್ ಕಣ್ಗಾವಲು ಗೋಪುರಗಳು ನಿಷ್ಕ್ರಿಯಗೊಂಡವು. ಶಿಗ್ಲಿ ನಾಕಾದಲ್ಲಿದ್ದ ಟಾವರ್ ಹೊಸ ಬಸ್ ನಿಲ್ದಾಣದ ಶೌಚಾಲಯದ ಹತ್ತಿರ ಬಿಸಾಡಲಾಗಿತ್ತು. ಇತ್ತೀಚೆಗಷ್ಟೇ ಶಿಗ್ಲಿ ನಾಕಾದಲ್ಲಿ ರೈತರು ಸೇರಿ ವಿವಿಧ ಸಂಘಟನೆಯವರು ಅನಿರ್ದಿಷ್ಟಾವಧಿ ಪ್ರತಿಭಟನೆ, ಹೋರಾಟ ಮಾಡುತ್ತಿರುವುದನ್ನು ತಪ್ಪಿಸುವ ಉದ್ದೇಶದಿಂದ ಎಲ್ಲೋ ಧೂಳು ತಿನ್ನುತ್ತಾ ಬಿದ್ದಿದ್ದ ಗೋಪುರವನ್ನು ತಂದು ನಿಲ್ಲಿಸಲಾಗಿದೆ. ಬದಲಾಗಿ ಟ್ರಾಫಿಕ್ ನಿಯಂತ್ರಣದ ಉದ್ದೇಶಕ್ಕಲ್ಲ ಎಂಬುದು ವಿಷಾದದ ಸಂಗತಿ. ಇನ್ನಾದರೂ ಅತ್ಯಂತ ಅಗತ್ಯವಿರುವ ಈ ಪೊಲೀಸ್ ಕಣ್ಗಾವಲು ಗೋಪುರ ಮತ್ತೆ ಕಾರ್ಯ ನಿರ್ವಹಿಸುವಂತಾಗಬೇಕು. ಟ್ರಾಫಿಕ್ ಸಮಸ್ಯೆ, ಓವರ್ ಲೋಡ್ ಸಾಗಾಣಿಕೆ, ಅಪಘಾತ ತಡೆಗಟ್ಟುವ ಕ್ರಮಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಿಪಿಐ, ಪಿಎಸ್‌ಐ ತುರ್ತು ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಈ ಕುರಿತು ಸಿಪಿಐ ಬಿ.ವಿ. ನ್ಯಾಮಗೌಡ ಅವರನ್ನು ಸಂಪರ್ಕಿಸಲಾಗಿ, ಸಿಬ್ಬಂದಿಗಳ ಕೊರತೆಯಿಂದ ಪೊಲೀಸ್ ಕಣ್ಗಾವಲು ಗೋಪುರಗಳನ್ನು ಬಳಸಲಾಗಿಲ್ಲ. ಈ ಬಗ್ಗೆ ಚರ್ಚಿಸಿ ಗೋಪುರ ದುರಸ್ತಿ ಮಾಡಿಸಿ ಬಣ್ಣ ಹಚ್ಚಿ, ಸಿಬ್ಬಂದಿ ನೇಮಿಸಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.

ಮೇಲ್ಮನವಿ ಅವಧಿ ಮುಗಿಯುವ ಮುನ್ನ RTC ಬದಲಾವಣೆ ಕಾನೂನು ಬಾಹಿರ: ಹೈಕೋರ್ಟ್

0

ಬೆಂಗಳೂರು: ಸರ್ಕಾರದಿಂದ ಮಂಜೂರಾಗಿದ್ದ ಜಮೀನನ್ನು ಮಾರಾಟ ಮಾಡಿದ ಬಳಿಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ಪರಾಭಾರೆ ನಿಷೇಧ) ಕಾಯಿದೆ, ಪಿಟಿಸಿಎಲ್ ಕಾಯಿದೆ ಅಡಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಉಪವಿಭಾಗಾಧಿಕಾರಿಗಳು (SDO) ಹೊರಡಿಸುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಇರುವ ಅವಧಿ ಮುಗಿಯುವ ಮುನ್ನವೇ, ತಹಶೀಲ್ದಾರ್‌ಗಳು ಕಂದಾಯ ದಾಖಲೆಗಳನ್ನು (RTC) ಬದಲಾವಣೆ ಮಾಡುವುದು ಕಾನೂನು ಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದೇ ವೇಳೆ, ಉಪವಿಭಾಗಾಧಿಕಾರಿಗಳ ಆದೇಶದ ತಕ್ಷಣ ಯಾವುದೇ ಕಂದಾಯ ದಾಖಲೆ ಬದಲಾವಣೆ ಮಾಡಬಾರದು ಎಂಬುದಾಗಿ ತಹಶೀಲ್ದಾರ್‌ಗಳಿಗೆ ಸ್ಪಷ್ಟ ನಿರ್ದೇಶನ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ತಕ್ಷಣ ಸುತ್ತೋಲೆ ಹೊರಡಿಸಲು ನ್ಯಾಯಾಲಯ ಸೂಚಿಸಿದೆ. ಮೇಲ್ಮನವಿ ಸಲ್ಲಿಸಲು ಇರುವ ಅವಧಿ ಪೂರ್ಣಗೊಳ್ಳುವವರೆಗೂ ತಹಶೀಲ್ದಾರ್‌ಗಳು ಕಾಯಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪಿಟಿಸಿಎಲ್ ಕಾಯಿದೆಯಡಿ ಉಪವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ ದಿನವೇ ಕಂದಾಯ ದಾಖಲೆಗಳನ್ನು ಜಮೀನಿನ ಮೂಲ ಮಾಲೀಕರ ಹೆಸರಿಗೆ ಬದಲಾಯಿಸಿದ್ದ ತಹಶೀಲ್ದಾರ್ ಅವರ ಕ್ರಮವನ್ನು ಪ್ರಶ್ನಿಸಿ ಜಯಲಕ್ಷ್ಮಿ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.

ಉಪವಿಭಾಗಾಧಿಕಾರಿಗಳ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶ ಇರುವಾಗಲೇ, ಅದನ್ನು ಕಾಯದೆ ಕಂದಾಯ ದಾಖಲೆಗಳಲ್ಲಿ ಹೆಸರು ಬದಲಾವಣೆ ಮಾಡಿರುವ ಹಲವು ಪ್ರಕರಣಗಳು ನ್ಯಾಯಾಲಯದ ಗಮನಕ್ಕೆ ಬಂದಿವೆ. ಇಂತಹ ಪ್ರಕ್ರಿಯೆ ಸಂಪೂರ್ಣವಾಗಿ ಕಾನೂನು ಬಾಹಿರವಾಗಿದ್ದು, ಮುಂದುವರಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ಸ್ಪಷ್ಟವಾಗಿ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಸಹಾಯಕ ಆಯುಕ್ತರ ಆದೇಶ ಹೊರಬಿದ್ದ ಕೂಡಲೇ, ಮೇಲ್ಮನವಿ ಸಲ್ಲಿಸಲು ಇರುವ ಅವಧಿಯನ್ನು ಕಾಯದೇ ಕಂದಾಯ ದಾಖಲೆಗಳಲ್ಲಿ ಹೆಸರು ಬದಲಾಯಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಕಾನೂನು ವಿರೋಧಿ ನಡೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪಿಟಿಸಿಎಲ್ ಕಾಯಿದೆಯ ಸೆಕ್ಷನ್ 5 ಪ್ರಕಾರ, ಉಪವಿಭಾಗಾಧಿಕಾರಿಗಳು ವಿಚಾರಣೆ ನಡೆಸಿ ಅಕ್ರಮವಾಗಿ ವರ್ಗಾಯಿಸಲಾದ ಭೂಮಿಯನ್ನು ವಾಪಸ್ ಪಡೆದು, ಮೂಲ ಹಕ್ಕುದಾರರು ಅಥವಾ ಅವರ ಕಾನೂನು ವಾರಸುದಾರರಿಗೆ ಮರುಸ್ಥಾಪಿಸಲು ಆದೇಶ ನೀಡುವ ಅಧಿಕಾರ ಹೊಂದಿದ್ದಾರೆ.

ಆದರೆ, ಸೆಕ್ಷನ್ 5ಎ ಅಡಿ ಉಪವಿಭಾಗಾಧಿಕಾರಿಗಳ ಆದೇಶದ ವಿರುದ್ಧ ಮೂರು ತಿಂಗಳೊಳಗೆ ಜಿಲ್ಲಾಧಿಕಾರಿಗಳ ಮುಂದೆ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಈ ಅವಧಿ ಮುಗಿಯುವ ಮುನ್ನ ಕಂದಾಯ ದಾಖಲೆಗಳಲ್ಲಿ ಬದಲಾವಣೆ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಹೇಳಿ, ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ವಿಮಾನ ದುರಂತ ಪ್ರಕರಣ: ಅಜಿತ್ ಪವಾರ್ ಸಾವು, CID ಎಂಟ್ರಿ

0

ಮುಂಬೈ: ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರು ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಆರಂಭಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಮಾನ ಅವಘಡದ ಬಳಿಕ ಪುಣೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ಎಸ್ ಸೆಕ್ಷನ್ 194ರ ಅಡಿಯಲ್ಲಿ ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಲಾಗಿತ್ತು. ಇದೀಗ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದ್ದು, ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಜ.28ರ ಬೆಳಿಗ್ಗೆ ಬಾರಾಮತಿಯಲ್ಲಿ ಟೇಬಲ್‌ಟಾಪ್ ಏರ್‌ಸ್ಟ್ರಿಪ್‌ನ ಅಂಚಿನಿಂದ ಸುಮಾರು 200 ಮೀಟರ್ ದೂರದಲ್ಲಿ ಲಿಯರ್ಜೆಟ್–45 ವಿಮಾನ ಪತನಗೊಂಡಿತ್ತು. ಈ ದುರ್ಘಟನೆಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ (66) ಅವರ ವೈಯಕ್ತಿಕ ಭದ್ರತಾ ಅಧಿಕಾರಿ ವಿದೀಪ್ ಜಾಧವ್, ಫ್ಲೈಟ್ ಅಟೆಂಡೆಂಟ್ ಪಿಂಕಿ ಮಾಲಿ, ಕ್ಯಾಪ್ಟನ್ ಸುಮಿತ್ ಕಪೂರ್ ಹಾಗೂ ಸಹ–ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್ ಮೃತಪಟ್ಟಿದ್ದಾರೆ.

ದುರಂತದಲ್ಲಿ ಸಾವನ್ನಪ್ಪಿದ ಕ್ಯಾಪ್ಟನ್ ಸುಮಿತ್ ಕಪೂರ್ ಅವರಿಗೆ ಸುಮಾರು 15,000 ಗಂಟೆಗಳ ವಿಮಾನ ಹಾರಾಟದ ಅನುಭವವಿದ್ದು, ಸಹ–ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್ ಅವರಿಗೆ 1,500 ಗಂಟೆಗಳ ಹಾರಾಟದ ಅನುಭವವಿತ್ತು ಎಂದು ತಿಳಿದುಬಂದಿದೆ.

ಸಿಐಡಿ ಅಧಿಕಾರಿಗಳ ತಂಡ ಪುಣೆ ಗ್ರಾಮೀಣ ಪೊಲೀಸರಿಂದ ಅಪಘಾತಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಲಿದ್ದು, ನಂತರ ಬಾರಾಮತಿ ಏರ್‌ಸ್ಟ್ರಿಪ್ ಬಳಿಯ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ಇದೇ ವೇಳೆ ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಕೂಡ ಈ ವಿಮಾನ ಅಪಘಾತದ ಕುರಿತು ಔಪಚಾರಿಕ ತನಿಖೆಯನ್ನು ಆರಂಭಿಸಿದೆ ಎಂದು ತಿಳಿದುಬಂದಿದೆ.

ಶಾಲೆಯಲ್ಲಿ ನೀರು ಕುಡಿಯಲು ಹೋದ ವೇಳೆ ಕರೆಂಟ್ ಶಾಕ್: 5ನೇ ತರಗತಿ ವಿದ್ಯಾರ್ಥಿನಿ ಸಾವು

ರಾಯಚೂರು: ಶಾಲೆಯಲ್ಲಿ ಮಧ್ಯಾಹ್ನದ ಊಟದ ಸಮಯ ನೀರು ಕುಡಿಯಲು ಹೋದ ವೇಳೆ ಕರೆಂಟ್ ಶಾಕ್ ತಗುಲಿ 11 ವರ್ಷದ ವಿದ್ಯಾರ್ಥಿನಿ ಮೃತಪಟ್ಟಿರುವ ದುರ್ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕುರುಕುಂದಾ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಹರಿಜನ ವಾಡದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟ ಬಾಲಕಿಯನ್ನು ತನುಶ್ರೀ (11) ಎಂದು ಗುರುತಿಸಲಾಗಿದೆ. ತನುಶ್ರೀ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.

ಮಧ್ಯಾಹ್ನ ಊಟದ ವೇಳೆ ನೀರು ಕುಡಿಯಲು ತೆರಳಿದಾಗ, ಶಾಲೆಯ ಶುದ್ಧೀಕರಣ ಘಟಕಕ್ಕೆ ಸಂಪರ್ಕ ಕಲ್ಪಿಸಲು ಹಾಕಲಾಗಿದ್ದ ವಿದ್ಯುತ್ ವೈಯರ್ ತಗುಲಿ ಕರೆಂಟ್ ಶಾಕ್ ಹೊಡೆದಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಘಟನೆಯ ಬಳಿಕ ಶಾಲೆ ಆಡಳಿತ ಮಂಡಳಿ, ಮುಖ್ಯಶಿಕ್ಷಕ (ಎಚ್‌ಎಂ) ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ವಿರುದ್ಧ ಪಾಲಕರು ಹಾಗೂ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿನ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.

ಈ ಘಟನೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಫೆ. 1ರಂದು ಗದಗದಲ್ಲಿ ಕಾರ್ಯಕಾರಿ ಸಮಿತಿ ಸಭೆ

0

ವಿಜಯಸಾಕ್ಷಿ ಸುದ್ದಿ, ಗದಗ: ಫೆ. 1ರಂದು ಬೆಳಿಗ್ಗೆ 11 ಗಂಟೆಗೆ ನಗರದ ಭೀಮಸೇನ್ ಜೋಶಿ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ ತಿಳಿಸಿದರು.

ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ಜಿಲ್ಲೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ರಾಜ್ಯಮಟ್ಟದ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದ್ದು, ಪ್ರಮುಖವಾಗಿ ಎನ್‌ಪಿಎಸ್ ಬದಲಾಗಿ ಓಪಿಎಸ್ ಜಾರಿ ಮಾಡುವ ಕುರಿತು ಹೋರಾಟದ ರೂಪುರೇಷೆಗಳನ್ನು ಚರ್ಚಿಸಲಾಗುವುದು ಎಂದರು.

ರಾಜ್ಯ ಘಟಕದ ಕಾರ್ಯಕಾರಿ ಸಭೆಯನ್ನು ಗದಗಲ್ಲಿ ನಡೆಸಬೇಕು ಎನ್ನುವುದು ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ಇಚ್ಛೆಯಾಗಿತ್ತು. ಹೀಗಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಭೆಯಲ್ಲಿ ಹಿಂದಿನ ಮಹಾಸಭೆಯ ನಡವಳಿಗಳನ್ನು ದಾಖಲಿಸಲಾಗುವುದು. 2025-26ನೇ ಸಾಲಿನ ರಾಜ್ಯ ಮಟ್ಟದ ಕ್ರೀಡಾಕೂಟಗಳ ಆಯೋಜನೆಯ ಬಗ್ಗೆ ಚರ್ಚಿಸಲಾಗುವುದು. ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಮರುಸ್ಥಾಪಿಸುವ ಸಂಬಂಧ ಸರ್ಕಾರದ ಗಮನ ಸೆಳೆಯಲು ರಾಜ್ಯ ಮಟ್ಟದ ಸಮಾವೇಶ ನಡೆಸುವ ಬಗ್ಗೆ ಚರ್ಚೆ ನಡೆಯುವುದು.

ಸುದ್ದಿಗೋಷ್ಠಿಯಲ್ಲಿ ಡಿ.ಎಸ್. ತಳವಾರ, ಸಿದ್ದಪ್ಪ ಲಿಂಗದಾಳ, ಎಂ.ಎನ್. ನಿಟ್ಟಾಲಿ, ರಾಜು ಕಂಟಿಗೊಣ್ಣವರ, ಮುತ್ತು ಮಲ್ಲಶೆಟ್ಟಿ, ಎ.ಐ. ಗಾಡಗೋಳಿ, ಡಿ.ಎಸ್. ದುರ್ಗಣ್ಣವರ, ಕೆ.ಎಫ್. ಹಳ್ಯಾಳ, ಕರೀಂ ಸಾಬಸುಣಗಾರ, ಆರ್.ಎಂ. ನಿಂಬನಾಯ್ಕರ, ಎಂ.ಬಿ. ಗಾಣಗಿ, ಬಿ.ಎಸ್. ಕಮತರ ಇದ್ದರು.

ಸರ್ಕಾರಿ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಲ್ಲಿ ಆಗುತ್ತಿರುವ ತಾಂತ್ರಿಕ ಸಮಸ್ಯೆಗಳು, ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿ, ಸಿಸಿಆರ್ ನಿಯಮ ಬಗ್ಗೆ ಚರ್ಚಿಸಲಾಗುವುದು. ಅಂದು ಸಂಜೆ 4ಕ್ಕೆ ಸರ್ಕಾರಿ ನೌಕರ ಸಂಘ ಹುಟ್ಟುಹಾಕಿದ ಮೆರಿ ದೇವಾಸಿಯಾ ಹೆಸರಿನಲ್ಲಿ ಗೃಹ ನಿರ್ಮಾಣ ಸಂಘದ ಉದ್ಘಾಟನೆ ಜರುಗಲಿದೆ ಎಂದು ಬಸವರಾಜ ಬಳ್ಳಾರಿ ವಿವರಿಸಿದರು.

ಮಕ್ಕಳ ಬಾಲ್ಯ ನೆಮ್ಮದಿಯಿಂದ ಕೂಡಿರಲಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ 

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜ. 26ರಿಂದ ಮಾರ್ಚ್ 31ರವರೆಗೆ ನಡೆಯುತ್ತಿರುವ ಪ್ಯಾನ್ ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನ ಅಂಗವಾಗಿ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜನಜಾಗೃತಿ ಕಾರ್ಯಕ್ರಮದ ಉದ್ಘಾಟನೆ ಜರುಗಿತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳು ಬಾಲಕಾರ್ಮಿಕರಾಗುತ್ತಾರೆ. ಅಲ್ಲದೆ, ಬೇರೆ ಬೇರೆ ಅನೈತಿಕ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆ ಇರುತ್ತದೆ. ಬಾಲ ಕಾರ್ಮಿಕರು ಕಂಡುಬರುವ ಕಡೆಗೆ ದಾಳಿ ಮಾಡಿ ಬಾಲಕಾರ್ಮಿಕತೆ ನಿರ್ಮೂಲನೆ ಮಾಡಬೇಕು. ಅಂದಾಗ ಈ ಅಭಿಯಾನವು ಯಶಸ್ವಿಯಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ದೇವರ ಸಮಾನ. ಮಕ್ಕಳ ಬಾಲ್ಯ ನೆಮ್ಮದಿಯಿಂದ ಕೂಡಿರಬೇಕು. ಬಾಲಕಾರ್ಮಿಕತೆಯನ್ನು ತಡೆಗಟ್ಟಿ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಅವರಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು. ಈ ಪರಿಕಲ್ಪನೆ ನಮ್ಮಲ್ಲಿ ದೃಢವಾಗಿ ನಿಲ್ಲಬೇಕು ಎನ್ನುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ವಕೀಲರಾದ ಗುರುರಾಜ್ ಗೌರಿ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ್ ಸೋಮನಕಟ್ಟಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು, ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರಾದ ಸಂದೇಶ ಪಾಟೀಲ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಸನಾಯಕ, ಕಾರ್ಮಿಕ ನಿರೀಕ್ಷಕರು, ಮಕ್ಕಳ ಸಹಾಯವಾಣಿ ಕೋಆರ್ಡಿನೇಟರ್, ಸ್ಪಂದನ ಸ್ವಯಂ ಸೇವಾ ಸಂಸ್ಥೆಯವರು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

error: Content is protected !!