Home Blog Page 84

ಫಿನಾಯಿಲ್ ಹೇಳಿಕೆ ಸುಳ್ಳಾಯ್ತು! ಮೈಸೂರಿನಲ್ಲಿ ಎನ್ಸಿಬಿಗೆ ಸಿಕ್ಕ ಹೈಟೆಕ್ ಡ್ರಗ್ಸ್ ಲ್ಯಾಬ್ – ರಾಜ್ಯ ಸರ್ಕಾರಕ್ಕೆ ಮುಖಭಂಗ

0

ಮೈಸೂರು: ಮೈಸೂರಿನಲ್ಲಿ ಪತ್ತೆಯಾಗಿದ್ದು ಕೇವಲ ಫಿನಾಯಿಲ್ ಫ್ಯಾಕ್ಟರಿ ಎಂಬ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕೃತ ಪ್ರಕಟಣೆ ತೀವ್ರ ಹಿನ್ನಡೆಯನ್ನುಂಟುಮಾಡಿದೆ. ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಫಿನಾಯಿಲ್ ಫ್ಯಾಕ್ಟರಿ ಹೆಸರಲ್ಲಿ ಹೈಟೆಕ್ ರಹಸ್ಯ ಡ್ರಗ್ಸ್ ಲ್ಯಾಬ್ ಕಾರ್ಯನಿರ್ವಹಿಸುತ್ತಿತ್ತು ಎಂದು ಎನ್ಸಿಬಿ ಸ್ಪಷ್ಟಪಡಿಸಿದೆ.

ಗುಜರಾತ್ ಮತ್ತು ಕರ್ನಾಟಕದಲ್ಲಿ ಹರಡಿದ್ದ ಮಾದಕ ದ್ರವ್ಯ ಜಾಲವನ್ನು ಎನ್ಸಿಬಿ ಭೇದಿಸಿದ್ದು, ಸುಮಾರು 10 ಕೋಟಿ ರೂ. ಮೌಲ್ಯದ 35 ಕೆಜಿ ಮೆಫೆಡ್ರೋನ್ (MD), 1.8 ಕೆಜಿ ಅಫೀಮು ಹಾಗೂ 25.6 ಲಕ್ಷ ರೂ. ನಗದು ವಶಪಡಿಸಿಕೊಂಡಿದೆ. ರಾಜಸ್ಥಾನದ ಜಾಲೋರ್ ಜಿಲ್ಲೆಯ ಮಹೇಂದ್ರ ಕುಮಾರ್ ವಿಷ್ಣೋಯ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಎನ್ಸಿಬಿ ಮಾಹಿತಿ ಪ್ರಕಾರ, ಜೈಲಿನಲ್ಲಿದ್ದಾಗಲೇ ಡ್ರಗ್ಸ್ ತಯಾರಿಕೆ ಕಲಿತ ಮಹೇಂದ್ರ ಕುಮಾರ್, ಜಾಮೀನಿನ ಮೇಲೆ ಹೊರಬಂದ ನಂತರ ಮೈಸೂರಿನಲ್ಲಿ ಈ ರಹಸ್ಯ ಡ್ರಗ್ಸ್ ಲ್ಯಾಬ್ ಸ್ಥಾಪಿಸಿದ್ದ. ದಾಳಿ ವೇಳೆ ಅತ್ಯಾಧುನಿಕ ಉಪಕರಣಗಳು ಮತ್ತು ಡ್ರಗ್ಸ್ ತಯಾರಿಕೆಗೆ ಬೇಕಾದ ವಸ್ತುಗಳು ಪತ್ತೆಯಾಗಿವೆ.

ಈ ಹಿಂದೆ ಗೃಹ ಸಚಿವರು “ಇಲ್ಲಿ ಯಾವುದೇ ಮಾದಕ ವಸ್ತು ಪತ್ತೆಯಾಗಿಲ್ಲ” ಎಂದು ಸ್ಥಳೀಯ ಪೊಲೀಸರ ವರದಿಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಕೇಂದ್ರ ಸಂಸ್ಥೆಯಾದ ಎನ್ಸಿಬಿ ಇದೀಗ ಸಂಪೂರ್ಣ ಡ್ರಗ್ಸ್ ಉತ್ಪಾದನಾ ಘಟಕ ಪತ್ತೆಯಾಗಿದೆ ಎಂದು ಬಹಿರಂಗಪಡಿಸಿರುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದ್ದು, ರಾಜ್ಯದ ಗುಪ್ತಚರ ವ್ಯವಸ್ಥೆ ಮತ್ತು ಸ್ಥಳೀಯ ತನಿಖೆಯ ಮೇಲೂ ಪ್ರಶ್ನೆ ಎತ್ತಿದೆ.

ಬಂಧಿತ ಆರೋಪಿಗಳ ವಿರುದ್ಧ NDPS ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಿಸಲಾಗಿದ್ದು, ಮೈಸೂರಿನ ಘಟಕಕ್ಕೆ ರಾಸಾಯನಿಕ ಪೂರೈಕೆ ಮಾಡುತ್ತಿದ್ದ ಜಾಲದ ಕುರಿತು ತನಿಖೆ ಮುಂದುವರಿದಿದೆ. ‘ನಶಾ ಮುಕ್ತ ಭಾರತ’ ಅಭಿಯಾನದಡಿ ದೇಶಾದ್ಯಂತ ಇಂತಹ ರಹಸ್ಯ ಡ್ರಗ್ಸ್ ಘಟಕಗಳ ಮೇಲೆ ನಿಗಾ ಇಡಲಾಗುತ್ತದೆ ಎಂದು ಎನ್ಸಿಬಿ ತಿಳಿಸಿದೆ.

“ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ರಿ” – ಸಿಜೆ ರಾಯ್ ನೆನೆದು ಬಿಗ್‌ಬಾಸ್ ವಿನ್ನರ್ ಹನುಮಂತು ಭಾವುಕ

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿಜೆ ರಾಯ್ (CJ Roy) ಅವರ ನಿಧನಕ್ಕೆ ಬಿಗ್‌ಬಾಸ್ ಸೀಸನ್ 11ರ ವಿನ್ನರ್ ಹನುಮಂತು ಭಾವುಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು, ನಿಮ್ಮ ಋಣವನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದು ಹನುಮಂತು ಇನ್‌ಸ್ಟಾಗ್ರಾಂನಲ್ಲಿ ನೋವಿನ ಪದಗಳಲ್ಲಿ ಬರೆದುಕೊಂಡಿದ್ದಾರೆ.

ಹನುಮಂತು ತಮ್ಮ ಪೋಸ್ಟ್‌ನಲ್ಲಿ, ಸರಿಗಮಪ ಸೀಸನ್ 12ರಲ್ಲಿ ರನ್ನರ್ ಅಪ್ ಆಗಿದ್ದ ವೇಳೆ ಸಿಜೆ ರಾಯ್ ಅವರು ಹಣ ನೀಡಿ ನನ್ನ ಜೀವನಕ್ಕೆ ಹೊಸ ದಾರಿ ತೋರಿಸಿದರು. ನಂತರ ಬಿಗ್‌ಬಾಸ್ ಸೀಸನ್ 11ರಲ್ಲಿ ಗೆದ್ದಾಗಲೂ ಪ್ರೀತಿಯಿಂದ ಹಣ ನೀಡಿ ಸಂಭ್ರಮಿಸಿದ್ದರು. ನಿಮ್ಮ ಈ ಉಪಕಾರವನ್ನು ನಾನು ಎಂದಿಗೂ ಮರೆತೇನು ಸಾಧ್ಯವಿಲ್ಲ ಸರ್ ಎಂದು ಹೇಳಿದ್ದಾರೆ.

ಸಿಜೆ ರಾಯ್ ಅವರ ಅಗಲಿಕೆಯ ಸುದ್ದಿ ಕೇಳಿ ಮನಸ್ಸು ತುಂಬಾ ಭಾರವಾಗಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಮಿಸ್ ಯು ರಾಯ್ ಸರ್ ಎಂದು ಹನುಮಂತು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಸಿಜೆ ರಾಯ್ ಅವರು ಹನುಮಂತುಗೆ ಹಣ ನೀಡಿದ್ದ ಸಂದರ್ಭದ ವಿಡಿಯೋವನ್ನು ಹನುಮಂತು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಶುಕ್ರವಾರ (ಜ.31) ಮಧ್ಯಾಹ್ನ ಸುಮಾರಿಗೆ ಐಟಿ ದಾಳಿ ವೇಳೆ ಸಿಜೆ ರಾಯ್ ಅವರು ತಮ್ಮ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಲೇಬರ್ ಶೆಡ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ 4 ಮಂದಿ ಕೂಲಿ ಕಾರ್ಮಿಕರು ಸಾವು

0

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ನಾಲ್ವರು ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಲೇಬರ್ ಶೆಡ್‌ನ ರೂಮ್‌ನಲ್ಲಿ ನಾಲ್ವರೂ ಮಲಗಿದ್ದ ಸ್ಥಿತಿಯಲ್ಲೇ ಮೃತರಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮುತ್ಸಂದ್ರ ಗ್ರಾಮದ ಛೋಟಾಸಾಬ್ ಅವರಿಗೆ ಸೇರಿದ ಲೇಬರ್ ಶೆಡ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತರು ಅಸ್ಸಾಂ ರಾಜ್ಯದ ಮೂಲದವರಾಗಿದ್ದಾರೆ. ಅವರು ಕೋಕಾಕೋಲಾ ವೇರ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಸೌಲಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಲ್ವರು ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ಹಿನ್ನೆಲೆ ಕುರಿತು ತನಿಖೆ ಮುಂದುವರಿದಿದೆ.

40 ಸಾವಿರ ಕೋಟಿ ಬ್ಯಾಂಕ್ ವಂಚನೆ: RCOM ಮಾಜಿ ಅಧ್ಯಕ್ಷ ಪುನೀತ್ ಗಾರ್ಗ್‌ ಇಡಿ ಬಂಧನ

0

ನವದೆಹಲಿ: ಸುಮಾರು ₹40,000 ಕೋಟಿ ಮೌಲ್ಯದ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (RCOM) ಮಾಜಿ ಅಧ್ಯಕ್ಷ ಪುನೀತ್ ಗಾರ್ಗ್ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದೆ. ಪ್ರಕರಣದ ಆರ್ಥಿಕ ಅಂಶಗಳು ಮತ್ತು ಹಣ ವರ್ಗಾವಣೆಯ ಜಾಡು ಪತ್ತೆಹಚ್ಚುವ ಉದ್ದೇಶದಿಂದ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಆಗಸ್ಟ್ 21 ರಂದು ಸಿಬಿಐ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ), 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ), 420 (ವಂಚನೆ) ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿತ್ತು. ಅದೇ ಪ್ರಕರಣದ ಆಧಾರದಲ್ಲಿ ಇಡಿ ಹಣದ ಅಕ್ರಮ ವರ್ಗಾವಣೆ ತನಿಖೆ ನಡೆಸುತ್ತಿದೆ.

ಪುನೀತ್ ಗಾರ್ಗ್ ಅವರು 2006ರಿಂದ 2013ರವರೆಗೆ ಆರ್‌ಸಿಒಎಂ ಅಧ್ಯಕ್ಷರಾಗಿ ಕಂಪನಿಯ ಜಾಗತಿಕ ಉದ್ಯಮ ವ್ಯವಹಾರಗಳನ್ನು ನಿರ್ವಹಿಸಿದ್ದರು. ಬಳಿಕ 2014 ರಿಂದ 2017ರವರೆಗೆ ಅಧ್ಯಕ್ಷರಾಗಿ (ನಿಯಂತ್ರಣ ವ್ಯವಹಾರಗಳು) ಕಾರ್ಯನಿರ್ವಹಿಸಿದ್ದರು. ಅಕ್ಟೋಬರ್ 2017ರಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡ ಅವರು, 2019ರಿಂದ 2025ರವರೆಗೆ ಆರ್‌ಸಿಒಎಂನ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ಬಂಧನದ ಬಳಿಕ ಪುನೀತ್ ಗಾರ್ಗ್ ಅವರನ್ನು ಶುಕ್ರವಾರ ರೌಸ್ ಅವೆನ್ಯೂ ಕೋರ್ಟ್‌ನ ಪಿಎಂಎಲ್‌ಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಅಪರಾಧದ ಉಳಿದ ಹಣವನ್ನು ಪತ್ತೆಹಚ್ಚಲು, ಇತರ ಆರೋಪಿಗಳನ್ನು ಗುರುತಿಸಲು ಮತ್ತು ಸಂಪೂರ್ಣ ಹಣ ವರ್ಗಾವಣೆ ಸರಪಳಿಯನ್ನು ಬಹಿರಂಗಪಡಿಸುವ ಉದ್ದೇಶದಿಂದ ನ್ಯಾಯಾಲಯವು ಅವರನ್ನು ಒಂಬತ್ತು ದಿನಗಳ ಇಡಿ ಕಸ್ಟಡಿಗೆ ಒಪ್ಪಿಸಿದೆ.

ಸಿಜೆ ರಾಯ್ ಡೈರಿಯಲ್ಲಿ ನಟಿಯರು–ರಾಜಕಾರಣಿಗಳ ಹೆಸರು! ಆತ್ಮಹತ್ಯೆ ಹಿಂದಿದೆಯಾ ಬೇರೆಯದ್ದೇ ರಹಸ್ಯ?

0

ಬೆಂಗಳೂರು: ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್‌ ಮ್ಯಾನೇಜಿಂಗ್ ಡೈರೆಕ್ಟರ್ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ಹೊಸ ಅನುಮಾನಗಳು ಮೂಡುತ್ತಿವೆ. ಆತ್ಮಹತ್ಯೆಗೆ ಮುನ್ನ ಅವರು ಯಾರೊಂದಿಗೆ ಮಾತನಾಡಿದ್ದರು? ಅಥವಾ ಯಾರಿಗಾದರೂ ಮೆಸೇಜ್ ಕಳುಹಿಸಿದ್ದರಾ? ಎಂಬ ಅಂಶಗಳ ಬಗ್ಗೆ ಪೊಲೀಸರು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ.

ಕಾನ್ಫಿಡೆಂಟ್ ಗ್ರೂಪ್ ಎಂಡಿ ನೀಡಿದ ದೂರಿನ ಪ್ರಕಾರ, ಆತ್ಮಹತ್ಯೆಗೆ ಮುನ್ನ ರಾಯ್ ತಮ್ಮ ತಾಯಿಯೊಂದಿಗೆ ಮಾತನಾಡಬೇಕೆಂದು ಹೇಳಿದ್ದಾರೆ. ಅಲ್ಲದೆ, ತಮ್ಮ ಗನ್‌ಮ್ಯಾನ್‌ಗೆ ಯಾರನ್ನೂ ಒಳಗೆ ಬಿಡದಂತೆ ಸೂಚಿಸಿದ್ದರು. ಆದರೆ, ಆತ್ಮಹತ್ಯೆಗೆ ಮುನ್ನ ನಿಜಕ್ಕೂ ತಾಯಿಯೊಂದಿಗೆ ಮಾತನಾಡಿದರೋ ಅಥವಾ ಬೇರೆ ಯಾರೊಂದಿಗಾದರೂ ಸಂಪರ್ಕ ಹೊಂದಿದ್ದರೋ ಎಂಬುದು ಸದ್ಯ ಪೊಲೀಸರ ಪ್ರಮುಖ ಅನುಮಾನವಾಗಿದೆ.

ಈ ಹಿನ್ನೆಲೆಯಲ್ಲಿ ರಾಯ್ ಬಳಿಯಿದ್ದ ಐಫೋನ್ ಹಾಗೂ ಆ್ಯಂಡ್ರಾಯ್ಡ್ ಸೇರಿ ಎರಡು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ಸಿಐಡಿ ಸೈಬರ್ ಸೆಲ್‌ಗೆ ರವಾನಿಸಿದ್ದಾರೆ. ಎರಡೂ ಮೊಬೈಲ್‌ಗಳಿಗೆ ಪಾಸ್‌ವರ್ಡ್ ಇರುವುದರಿಂದ ಕೋರ್ಟ್ ಅನುಮತಿ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸುವ ಅಗತ್ಯವಿದೆ. ಸದ್ಯ ಸೈಬರ್ ಸೆಲ್ ಮೂಲಕ ಮೊಬೈಲ್ ಡೇಟಾ ರಿಕವರಿ ಪ್ರಕ್ರಿಯೆ ಆರಂಭಿಸಲಾಗಿದೆ.

ಇನ್ನೂ ನಿನ್ನೆ (ಜ.31) ರಾತ್ರಿ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಪತ್ತೆಯಾದ ಸಿಜೆ ರಾಯ್ ಅವರ ಡೈರಿಯನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಡೈರಿಯಲ್ಲಿ ಕೆಲ ನಟಿಯರು, ಮಾಡೆಲ್‌ಗಳು ಹಾಗೂ ರಾಜಕಾರಣಿಗಳ ಹೆಸರುಗಳು ದಾಖಲಾಗಿರುವುದು ಪತ್ತೆಯಾಗಿದೆ. ಈ ಹೆಸರುಗಳು ಕೇವಲ ಈವೆಂಟ್ ಅಥವಾ ವೃತ್ತಿಪರ ವಿಚಾರಕ್ಕೆ ಸಂಬಂಧಿಸಿದ್ದೇ? ಅಥವಾ ಬೇರೆ ಹಿನ್ನೆಲೆ ಇದೆಯೇ? ಎಂಬುದರ ಬಗ್ಗೆ ಪೊಲೀಸರು ಇಂಚಿಂಚೂ ಪರಿಶೀಲನೆ ನಡೆಸುತ್ತಿದ್ದಾರೆ.

CJ Roy: ಡಾ. ಸಿ.ಜೆ. ರಾಯ್ ಇಚ್ಛೆಯಂತೆ ಬನ್ನೇರುಘಟ್ಟದಲ್ಲಿ ಅಂತ್ಯಸಂಸ್ಕಾರ!

0

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಡಾ. ಸಿ.ಜೆ. ರಾಯ್ ಅವರ ಇಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರ್ಯಾಂಡ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಿಂದೆ ತಮ್ಮ ಆಪ್ತರ ಬಳಿ ವ್ಯಕ್ತಪಡಿಸಿದ್ದ ಆಶಯದಂತೆ, ಡಾ. ಸಿ.ಜೆ. ರಾಯ್ ಅವರ ಅಂತ್ಯಸಂಸ್ಕಾರವನ್ನು ಬನ್ನೇರುಘಟ್ಟದ ಕಾಸಾಗ್ರ್ಯಾಂಡ್ನಲ್ಲಿ ನೆರವೇರಿಸಲಾಗುತ್ತದೆ. ಮೃತ ರಾಯ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಕೋರಮಂಗಲದಲ್ಲಿರುವ ವೈಟ್ ಹೌಸ್ನಲ್ಲಿ ಇಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ವೈಟ್ ಗೋಲ್ಡ್ ಸಂಸ್ಥೆಯ ಮಾಲೀಕ ಹಾಗೂ ರಾಯ್ ಅವರ ಸಹೋದರ ಬಾಬು ಜೋಸೆಫ  ಒಡೆತನದ  ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಡಾ. ಸಿ.ಜೆ. ರಾಯ್ ಅವರ ಅಂತ್ಯಕ್ರಿಯೆ ಇಂದು ಸಂಜೆ ಬನ್ನೇರುಘಟ್ಟದ ಕಾಸಾಗ್ರ್ಯಾಂಡ್ನಲ್ಲಿ ನಡೆಯುವ ಸಾಧ್ಯತೆ ಇದ್ದು, ನಾಡಿನ ಪ್ರಮುಖ ಉದ್ಯಮಿಗಳು, ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಉತ್ಖನನ ಧೂಳಿಗೆ ಶಾಲಾ ಮಕ್ಕಳ ಆರೋಗ್ಯ ಹಾಳು! ಲಕ್ಕುಂಡಿಯಲ್ಲಿ ಎಲ್‌ಕೆಜಿ–ಯುಕೆಜಿ ಪುಟಾಣಿಗಳಲ್ಲಿ ಅನಾರೋಗ್ಯ, ಪೋಷಕರ ಆಕ್ರೋಶ

0

ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯದಿಂದ ಉಂಟಾದ ಧೂಳಿನ ಪರಿಣಾಮ ಶಾಲಾ ಮಕ್ಕಳು ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

ಲಕ್ಕುಂಡಿ ಕೋಟೆಯ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಇರುವ ಸ್ವಾಮಿ ವಿವೇಕಾನಂದ ಖಾಸಗಿ ಶಾಲೆಯ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಯ ಪುಟ್ಟಪುಟ್ಟ ಮಕ್ಕಳು ಉತ್ಖನನ ಧೂಳಿನಿಂದ ಅಸ್ವಸ್ಥರಾಗಿದ್ದಾರೆ.

ಧೂಳಿನ ಪರಿಣಾಮ ಮಕ್ಕಳಿಗೆ ವಾಂತಿ, ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಹಲವು ಮಕ್ಕಳು ಡಸ್ಟ್ ಅಲರ್ಜಿಯಿಂದ ನರಳುತ್ತಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ಕೆಲ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಲು ಸಾಧ್ಯವಾಗಿಲ್ಲ.

ಉತ್ಖನನದಿಂದ ನಿರಂತರವಾಗಿ ಏಳುತ್ತಿರುವ ಧೂಳು ಮಕ್ಕಳ ಆರೋಗ್ಯಕ್ಕೆ ಗಂಭೀರ ಅಪಾಯ ತಂದೊಡ್ಡಿದೆ ಎಂಬ ಆರೋಪ ಪೋಷಕರಿಂದ ಕೇಳಿಬಂದಿದೆ. ಶಾಲಾ ಆವರಣದ ಬಳಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ಉತ್ಖನನ ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಪುಟ್ಟ ಮಕ್ಕಳ ಆರೋಗ್ಯದ ಬಗ್ಗೆ ಯಾರಿಗೂ ಕಾಳಜಿ ಇಲ್ಲವೇ?” ಎಂದು ಪ್ರಶ್ನಿಸಿರುವ ಪೋಷಕರು, ತಕ್ಷಣವೇ ಉತ್ಖನನ ಕಾರ್ಯ ನಿಲ್ಲಿಸಿ ಮಕ್ಕಳಿಗೆ ಸುರಕ್ಷಿತ ವಾತಾವರಣ ಒದಗಿಸುವಂತೆ ಆಗ್ರಹಿಸಿದ್ದಾರೆ.
ಘಟನೆ ಕುರಿತು ಸಂಬಂಧಿಸಿದ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದ್ದು, ಮಕ್ಕಳ ಆರೋಗ್ಯದ ರಕ್ಷಣೆಗಾಗಿ ತುರ್ತು ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಎದುರಾಗಿದೆ.

ಸತ್ಯಕ್ಕೆ ಗೌರವ ಕೊಡ್ತೇನೆ, ನಾನು ಕಳ್ಳತನ ಮಾಡಿಲ್ಲ, ಕೊಲೆ ಮಾಡಿಲ್ಲ: ರಾಜೀವ್ ಗೌಡ ಫಸ್ಟ್ ರಿಯಾಕ್ಷನ್

0

ಚಿಕ್ಕಬಳ್ಳಾಪುರ: ಜೈಲಿಂದ ಬಿಡುಗಡೆ ಬಳಿಕ ಉಚ್ಛಾಟಿತ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದು, ಸತ್ಯಕ್ಕೆ ಗೌರವ ಕೊಡ್ತೇನೆ, ನಾನು ಕಳ್ಳತನ ಮಾಡಿಲ್ಲ, ಕೊಲೆ ಮಾಡಿಲ್ಲ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಆರೋಪಿಸಿದರು.

ಶಿಡ್ಲಘಟ್ಟ ನನ್ನ ಕರ್ಮಭೂಮಿ ಎಂದು ಹೇಳಿದ ರಾಜೀವ್ ಗೌಡ, ಇಲ್ಲಿನ ಜನರಿಗಾಗಿ ಮಾಡಿದ ಹೋರಾಟ ಮತ್ತು ತ್ಯಾಗವೇ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಆದ್ರೂ ಕೂಡ ಮುಂದಿನ ದಿನಗಳಲ್ಲಿಯೂ ಜನರಿಗಾಗಿ ಹೋರಾಟ ಮಾಡುತ್ತೇನೆ ಎಂದರು.

ಇನ್ನೂ ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜೀವ್ ಗೌಡ, ತಾವು ಎಲ್ಲಿಯೂ ಕೂಡ ಪಕ್ಷದ ವಿಚಾರವಾಗಿ ಮಾತನಾಡಿಲ್ಲ ಎಂದು ಹೇಳಿದರು. ಈ ಕುರಿತು ಹೈಕಮ್ಯಾಂಡ್ ಬಳಿ ತೆರಳಿ ಮನವಿ ಮಾಡುವುದಾಗಿ ತಿಳಿಸಿದರು. ದೇವರು ಇದ್ದಾನೆ ಎಂದು ಹೇಳಿದ ರಾಜೀವ್ ಗೌಡ, ಅವರು ಮಾಡಿದ ಕರ್ಮವನ್ನು ಅವರು ಅನುಭವಿಸುತ್ತಾರೆ ಎಂದರು. ತಾವು ಅನುಭವಿಸಿದ ನೋವನ್ನು ಪಿತೂರಿ ಮಾಡಿದವರು ಅನುಭವಿಸುತ್ತಾರೆ ಎಂದು ಹೇಳಿದರು.

ಪೌರಾಯುಕ್ತೆ ಬೆದರಿಕೆ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ತಾವು ಮಾತನಾಡಿದ್ದು ಬೇರೆ ಉದ್ದೇಶದಿಂದ, ಆದರೆ ಅದನ್ನು ಬೇರೆ ರೀತಿಯಲ್ಲಿ ಪ್ರಚಾರ ಮಾಡಲಾಗಿದೆ ಎಂದರು. ಕಾರಣಾಂತರಗಳಿಂದ ಆ ರೀತಿಯಲ್ಲಿ ಆಗಿದೆ ಎಂದು ಹೇಳಿದರು. ಪೌರಾಯುಕ್ತೆಯೊಂದಿಗೆ ನಡೆದ ಮಾತುಕತೆ ವೈಯಕ್ತಿಕ ಉದ್ದೇಶದಿಂದಲ್ಲ, ಸಂಪೂರ್ಣವಾಗಿ ಜನರಿಗಾಗಿ ಎಂದು ಸ್ಪಷ್ಟಪಡಿಸಿದರು.

ಉದ್ಯಮಿ ರಾಯ್ ಆತ್ಮಹತ್ಯೆ ಬಗ್ಗೆ ತನಿಖೆ ನಡೆಸಿ, ಸತ್ಯಾಂಶ ಬಹಿರಂಗ ಮಾಡಲಾಗುವುದು: ಡಿ.ಕೆ. ಶಿವಕುಮಾರ್

0

ಕನಕಪುರ: “ಉದ್ಯಮಿ ಸಿ.ಜೆ. ರಾಯ್ ಅವರ ಸಾವಿನ ಪ್ರಕರಣವನ್ನು ತನಿಖೆ ಮಾಡಿಸಿ, ಸತ್ಯಾಂಶವನ್ನು ಬಹಿರಂಗಗೊಳಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು. ಕನಕೋತ್ಸವದ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.

ರಾಯ್ ಅವರ ಸಾವಿನ ಬಗ್ಗೆ ಕೇಳಿದಾಗ, “ಅಧಿಕಾರಿಗಳು ಅನೇಕ ಪ್ರಶ್ನೆ ಕೇಳುವಾಗ, ಐದು ನಿಮಿಷ ಸಮಯ ನೀಡಿ ಎಂದು ಹೇಳಿ ಈ ರೀತಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ. ಕೇರಳದಿಂದ ವಿಚಾರಣೆಗೆ ಒಂದು ತಂಡ ಬಂದಿತ್ತು ಎಂಬ ಮಾಹಿತಿ ಇದೆ.

ಈ ಬಗ್ಗೆ ದೆಹಲಿಯಿಂದಲೂ ವರದಿ ಕೇಳಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ. ರಾಯ್ ಅವರು ಒಳ್ಳೆಯ ಉದ್ಯಮಿಗಳಾಗಿದ್ದರು, ಈ ರೀತಿ ಆಗಬಾರದಿತ್ತು” ಎಂದು ಪ್ರತಿಕ್ರಿಯಿಸಿದರು.

ಒತ್ತಡ ನಿವಾರಣೆಗೆ ನೌಕರರು ಕ್ರೀಡೆಗಳಲ್ಲಿ ಪಾಲ್ಗೊಳ್ಳಿ: ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿರುವ ಸರ್ಕಾರಿ ನೌಕರರಿಗೆ ನಿರಂತರ ಕಾರ್ಯದಿಂದಾಗಿ ಮಾನಸಿಕ ಮತ್ತು ದೈಹಿಕ ಒತ್ತಡಗಳು ಉಂಟಾಗುವುದು ಸಾಮಾನ್ಯ. ಇವುಗಳ ನಿಯಂತ್ರಣ ಮತ್ತು ಆರೋಗ್ಯಕರ ಜೀವನ ಮತ್ತು ಗುಣಮಟ್ಟದ ಸೇವೆಗಾಗಿ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಮತ್ತು ನೌಕರರು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಮತ್ತು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಹೇಳಿದರು.

ಅವರು ಶುಕ್ರವಾರ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಘಟದಿಂದ ಆಯೋಜಿಸಿದ್ದ 2026-27ನೇ ಸಾಲಿನ ಜಿಲ್ಲಾ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ನೌಕರರು ಕಚೇರಿ ಕೆಲಸಕ್ಕೆ ಸೀಮಿತರಾಗದೇ, ಕ್ರೀಡೆ, ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸಬೇಕು. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಬೇಕು ಮತ್ತು ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ರಾಜ್ಯ ಸರಕಾರವು ಸರ್ಕಾರಿ ನೌಕರರ ಆರೋಗ್ಯ ಸಂರಕ್ಷಣೆ ಹಾಗೂ ಸಕಾಲದಲ್ಲಿ ಸಹಾಯಕ್ಕಾಗಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಎಲ್ಲ ಸರ್ಕಾರಿ ನೌಕರರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ನೌಕರರ ಕ್ರೀಡೆ, ಸಾಂಸ್ಕೃತಿಕ ಕಾರ್ಯಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆಯಿಂದ ಅನುದಾನ, ಅಗತ್ಯ ಸೌಕರ್ಯಗಳನ್ನು ಪೂರೈಸಿ, ಪ್ರೋತ್ಸಾಹ ನೀಡಲಾಗುತ್ತಿದೆ. ನೌಕರರ ನಿರಂತರ ಶ್ರಮ ಹಾಗೂ ಕಾರ್ಯ ವೈಖರಿಯಿಂದ ಸರ್ಕಾರಿ ಸೇವೆಗಳು ಸಾರ್ವಜನಿಕರಿಗೆ ತಲುಪುತ್ತಿವೆ. ನೌಕರರು ಶಿಸ್ತು, ಸಂಯಮದಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಪೂರ್ಣಿಮಾ ನಾಯ್ಡು ಹಾಗೂ ವಿರೇಶ ಬ್ಯಾಹಟ್ಟಿ ಮಾತನಾಡಿದರು. ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ರಮೇಶ ಲಿಂಗದಾಳ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ಸುರೇಶ ಜಟ್ಟೆನ್ನವರ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕ್ರೀಡಾ ಕಾರ್ಯದರ್ಶಿ ಪಿ.ಎಫ್. ಗುಡೇನಕಟ್ಟಿ ವಂದಿಸಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಭಾಗವಹಿಸಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಧಾರವಾಡ ತಹಸೀಲ್ದಾರ ಡಾ. ಡಿ.ಎಚ್. ಹೂಗಾರ, ಧಾರವಾಡ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಂಗಾಧರ ಕಂದಕೂರ, ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ಮೋಹನ ಶಿವಣ್ಣನವರ, ಧಾರವಾಡ ಗ್ರಾಮೀಣ ಮತ್ತು ನಗರ ಕ್ಷೇತ್ರಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ, ಸಂಘದ ಗೌರವಾಧ್ಯಕ್ಷ ಪ್ರಕಾಶ ಹಳಪೇಟ, ರಾಜ್ಯ ಪರಿಷತ್ ಸದಸ್ಯ ದೇವಿದಾಸ ಶಾಂತಿಕರ, ಖಜಾಂಚಿ ಮಂಜುನಾಥ ಯಡಹಳ್ಳಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ಹೊಲ್ತಿಕೋಟಿ, ನೌಕರ ಸಂಘದ ತಾಲೂಕುಗಳ ಅಧ್ಯಕ್ಷರಾದ ವಿ.ಎಫ್. ಚುಳಕಿ, ಡಾ. ಪ್ರಲ್ಹಾದ ಗೆಜ್ಜಿ, ಜಗದೀಶ ವಿರಕ್ತಮಠ, ವಿಠ್ಠಲ ರಂಗಣ್ಣವರ, ಎಂ.ಎ. ತಹಸೀಲ್ದಾರ, ಮುತ್ತಪ್ಪ ಅಣ್ಣಿಗೇರಿ, ಹಿರಿಯ ಉಪಾಧ್ಯಕ್ಷರಾದ ರಾಜಶೇಖರ ಕೋನರಡ್ಡಿ, ರಾಜಶೇಖರ ಹೊನ್ನಪ್ಪನವರ, ಗಿರೀಶ ಚೌಡಕಿ, ಡಾ. ಸುರೇಶ ಹಿರೇಮಠ, ಮಿಲಿಂದಕುಮಾರ್ ಎಂ.ನಾಯ್ಕ, ಕ್ರೀಡಾ ಕಾರ್ಯದರ್ಶಿಗಳಾದ ಸುರೇಶ ಜಟ್ಟೆನ್ನವರ, ಪಿ.ಎಫ್. ಗುಡೇನಕಟ್ಟಿ, ಅಯ್ಯಪ್ಪ ಮೊಖಾಶಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಪಿ.ಬಿ. ಕುರಬೆಟ್, ಚಂದ್ರಶೇಖರ ತಿಗಡಿ ಇದ್ದರು.

ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಕ್ರೀಡಾಕೂಟದ ಧ್ವಜಾರೋಹಣ ನೇರವೇರಿಸಿದರು. ಮಹಾಪೌರರಾದ ಜ್ಯೋತಿ ಪಾಟೀಲ ಪಾರಿವಾಳ ಹಾರಿ ಬಿಟ್ಟರು. ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಸ್.ಆರ್. ಪಾಟೀಲ ಕ್ರೀಡಾಪಟು ಯಲ್ಲೂನಾಯಕ ಹಮಾಣಿ ಅವರ ತಂಡದಿಂದ ಕ್ರೀಡಾಜ್ಯೋತಿ ಸ್ವೀಕರಿಸಿದರು.

ಮಹಾಪೌರರಾದ ಜ್ಯೋತಿ ಪಾಟೀಲ ಮಾತನಾಡಿ, ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಮುಖ್ಯವಾಗಿದೆ. ಇಂದಿನ ಜನಕಲ್ಯಾಣ ಸರಕಾರಗಳು ಜನಸಾಮಾನ್ಯರ ಸಮಗ್ರ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ. ಅವುಗಳನ್ನು ಅರ್ಹರಿಗೆ ತಲುಪಿಸುವ ಮೂಲಕ ನಿಗದಿತ ಗುರಿ ಸಾಧಿಸಬೇಕು ಎಂದು ಹೇಳಿದರು.

error: Content is protected !!