Home Blog Page 83

ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ಪ್ರಾಥಮಿಕ ತನಿಖಾ ವರದಿ ಬಳಿಕ ಮುಂದಿನ ಕ್ರಮ – ಸಚಿವ ಜಿ. ಪರಮೇಶ್ವರ್

0

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಸದ್ಯ ಆತ್ಮಹತ್ಯೆ ಆಯಾಮದಲ್ಲೇ ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ತನಿಖಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ ಡಿಸೆಂಬರ್‌ನಲ್ಲಿ ಕೇರಳದ ಐಟಿ ಅಧಿಕಾರಿಗಳು ಸಿ.ಜೆ. ರಾಯ್ ಅವರ ಗ್ರೂಪ್ ಮೇಲೆ ದಾಳಿ ನಡೆಸಿದ್ದರು. ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವ ಗಡುವಿನ ಹಿನ್ನೆಲೆಯಲ್ಲಿ, ದುಬೈನಲ್ಲಿದ್ದ ರಾಯ್ ಅವರನ್ನು ಬೆಂಗಳೂರಿಗೆ ಕರೆಯಿಸಿಕೊಂಡಿದ್ದರು.

ಐಟಿ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ರಾಯ್ ಅವರ ಕಚೇರಿಗೆ ತೆರಳಿ ಹೇಳಿಕೆ ದಾಖಲಿಸಿಕೊಂಡಿದ್ದರು ಎಂದು ಸಚಿವರು ತಿಳಿಸಿದ್ದಾರೆ. ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಕಚೇರಿಗೆ ಅಧಿಕಾರಿಗಳು ತೆರಳಿದ್ದ ವೇಳೆ, ರಾಯ್ ಅವರು ಐದು ನಿಮಿಷದಲ್ಲಿ ಬರುತ್ತೇನೆ ಎಂದು ಹೇಳಿ ಕೊಠಡಿಯೊಳಗೆ ತೆರಳಿದ್ದರು.

20 ನಿಮಿಷವಾದರೂ ಹೊರಬಾರದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಾಗಿಲು ಒಡೆದು ನೋಡಿದಾಗ, ರಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದರ ಕುರಿತು ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.

ಆತ್ಮಹತ್ಯೆಗೆ ಕಾರಣವೇನು, ಯಾವ ಒತ್ತಡಗಳು ಇದ್ದವು ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ವರದಿ ಬಂದ ಬಳಿಕ ಹಲವು ವಿಚಾರಗಳು ಬೆಳಕಿಗೆ ಬರಲಿವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ಐಟಿ ದಾಳಿಯಿಂದ ಉದ್ಯಮಿಗಳಿಗೆ ಕಿರುಕುಳ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಈ ಹಂತದಲ್ಲಿ ಕಿರುಕುಳ ಆಯಾಮದ ಬಗ್ಗೆ ಯೋಚಿಸಿಲ್ಲ ಎಂದರು. ಸದ್ಯ ಆತ್ಮಹತ್ಯೆಗೆ ಕಾರಣವೇನು ಎಂಬುದರ ಕುರಿತು ಮಾತ್ರ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.

ರಾಯ್ ಅವರ ಸಹೋದರ ಬಾಬು ಅವರು, ಐಟಿ ಅಧಿಕಾರಿಗಳ ದಾಳಿ ಮತ್ತು ಒತ್ತಡವೇ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಪ್ರಾಥಮಿಕ ವಿಚಾರಣೆ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಹೇಳಿದ್ದಾರೆ.

Gold Rate: ಚಿನ್ನ–ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ: ಎರಡು ದಿನದಲ್ಲಿ ₹1,500ಕ್ಕೂ ಹೆಚ್ಚು ಇಳಿಕೆ!

0

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಭಾರೀ ಕುಸಿತ ಮುಂದುವರಿದಿದೆ. ನಿನ್ನೆ ಪ್ರತಿ ಗ್ರಾಂಗೆ ಸುಮಾರು ₹800 ಇಳಿಕೆಯಾಗಿದ್ದ ಚಿನ್ನದ ಬೆಲೆ, ಇಂದು (ಶನಿವಾರ) ಮತ್ತೊಮ್ಮೆ ₹920 ರಷ್ಟು ಕಡಿಮೆಯಾಗಿದೆ. ಹೀಗೆ ಎರಡು ದಿನಗಳಲ್ಲಿ ಚಿನ್ನದ ಬೆಲೆ ಒಟ್ಟಾರೆ ₹1,500ಕ್ಕೂ ಅಧಿಕ ಇಳಿಕೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಹಲವು ದೇಶಗಳಲ್ಲಿ ಕುಸಿತ ಕಂಡಿದೆ. ಇದರ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ತೀವ್ರವಾಗಿ ಇಳಿಕೆಯಾಗಿದೆ.

ಇನ್ನು ಬೆಳ್ಳಿ ಬೆಲೆಯೂ ಮಹಾಕುಸಿತ ಅನುಭವಿಸಿದೆ. ಒಂದೇ ದಿನದಲ್ಲಿ ಪ್ರತಿ ಗ್ರಾಂಗೆ ₹45 ರಷ್ಟು ಇಳಿಕೆಯಾದರೆ, ಕಳೆದ ಎರಡು ದಿನಗಳಲ್ಲಿ ಒಟ್ಟಾರೆ ₹60 ರಷ್ಟು ಬೆಳ್ಳಿ ಬೆಲೆ ಕುಸಿದಿದೆ.

ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,47,200 ಆಗಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,60,580 ತಲುಪಿದೆ. 100 ಗ್ರಾಂ ಬೆಳ್ಳಿ ಬೆಲೆ ₹35,000 ಇದೆ.

ಬೆಂಗಳೂರಿನಲ್ಲೂ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇಳಿಕೆ ದಾಖಲಾಗಿದ್ದು, 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,47,200 ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹35,000 ಇದೆ. ತಮಿಳುನಾಡು, ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲೂ ಬೆಳ್ಳಿ ಬೆಲೆ ಇದೇ ಮಟ್ಟದಲ್ಲಿ ಮುಂದುವರಿದಿದೆ.

ಭಾರತದಲ್ಲಿ ಚಿನ್ನ–ಬೆಳ್ಳಿ ಬೆಲೆ (ಜನವರಿ 31):

  • 24 ಕ್ಯಾರಟ್ ಚಿನ್ನ (1 ಗ್ರಾಂ): ₹16,058
  • 22 ಕ್ಯಾರಟ್ ಚಿನ್ನ (1 ಗ್ರಾಂ): ₹14,720
  • 18 ಕ್ಯಾರಟ್ ಚಿನ್ನ (1 ಗ್ರಾಂ): ₹12,044
  • ಬೆಳ್ಳಿ (1 ಗ್ರಾಂ): ₹350

ಬೆಂಗಳೂರಿನಲ್ಲಿ ಚಿನ್ನ–ಬೆಳ್ಳಿ ಬೆಲೆ:

  • 24 ಕ್ಯಾರಟ್ ಚಿನ್ನ (1 ಗ್ರಾಂ): ₹16,058
  • 22 ಕ್ಯಾರಟ್ ಚಿನ್ನ (1 ಗ್ರಾಂ): ₹14,720
  • ಬೆಳ್ಳಿ (1 ಗ್ರಾಂ): ₹350

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ):

  • ಬೆಂಗಳೂರು: ₹14,720
  • ಚೆನ್ನೈ: ₹14,900
  • ಮುಂಬೈ: ₹14,720
  • ದೆಹಲಿ: ₹14,735
  • ಕೋಲ್ಕತಾ: ₹14,720
  • ಕೇರಳ: ₹14,720
  • ಅಹ್ಮದಾಬಾದ್: ₹14,725
  • ಜೈಪುರ್: ₹14,735
  • ಲಕ್ನೋ: ₹14,735
  • ಭುವನೇಶ್ವರ: ₹14,720

ತುಮಕೂರು: 40ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ PSI..!

0

ತುಮಕೂರು: ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ವಾಹನವನ್ನು ಬಿಡುಗಡೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು ಮೂಲದ ವಕೀಲರ ವಾಹನವನ್ನು ಬಿಡುಗಡೆ ಮಾಡಲು ಪಿಎಸ್ಐ ಚೇತನ್ ಕುಮಾರ್ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿತ್ತು.

ನಿನ್ನೆ ರಾತ್ರಿ ಸುಮಾರು 11:30ರ ವೇಳೆಗೆ ಕ್ಯಾತಸಂದ್ರ ಸಮೀಪದ ನಮಸ್ತೆ ತುಮಕೂರು ಹೋಟೆಲ್‌ನಲ್ಲಿ 40 ಸಾವಿರ ರೂ. ಲಂಚ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಪಿಎಸ್ಐ ಚೇತನ್ ಕುಮಾರ್ ಅವರನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಲೋಕಾಯುಕ್ತ ಪೊಲೀಸರು ಪಿಎಸ್ಐಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮೊನ್ನೆಯಷ್ಟೆ ಚೀಟಿ ಅವ್ಯವಹಾರ ಪ್ರಕರಣದಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಬೆಂಗಳೂರಿನಲ್ಲಿ ಇನ್ಸ್ಪೆಕ್ಟರ್ ಒಬ್ಬರು ಇತ್ತೀಚೆಗೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಸಿನಿಮೀಯ ರೀತಿಯಲ್ಲಿ ಲೋಕಾಯುಕ್ತ ತಂಡ ಟ್ರ್ಯಾಪ್ ನಡೆಸಿ ಇನ್ಸ್ಪೆಕ್ಟರ್ ಗೋವಿಂದರಾಜು ಅವರನ್ನು ರೆಡ್ಹ್ಯಾಂಡ್ ಆಗಿ ಬಂಧಿಸಿತ್ತು.

ಚೀಟಿ ವ್ಯವಹಾರದಲ್ಲಿ ವಂಚನೆ ಆರೋಪದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲು ತೆರಳಿದ್ದ ಇನ್ಸ್ಪೆಕ್ಟರ್ ಗೋವಿಂದರಾಜು, 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ 1 ಲಕ್ಷ ರೂ. ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದರು.

ಮೋಳಕೇರಾದಲ್ಲಿ ಮತ್ತೆ ಸ್ಫೋಟ: ಶಾಲೆಗೆ ತೆರಳುತ್ತಿದ್ದ ಐದು ಮಕ್ಕಳು ಗಂಭೀರ ಗಾಯ- ಸ್ಥಳದಲ್ಲಿ ಭಯದ ವಾತಾವರಣ

0

ಬೀದರ್: ಮೋಳಕೇರಾ ಗ್ರಾಮದಲ್ಲಿ ಶುಕ್ರವಾರ ಬೆಳಂಬೆಳಿಗ್ಗೆ ಸಂಭವಿಸಿದ ಅನುಮಾನಾಸ್ಪದ ಸ್ಫೋಟ ಗ್ರಾಮದಲ್ಲಿ ಆತಂಕವನ್ನು ಮೂಡಿಸಿದೆ. ಮೋಳಗಿ ಮಾರಯ್ಯ ದೇವಸ್ಥಾನ ಕಡೆ ಹೋಗುತ್ತಿದ್ದ ಶಾಲಾ ಮಕ್ಕಳ ಮೇಲೆ ಈ ಸ್ಫೋಟ ಪರಿಣಾಮ ಬೀರಿದೆ.

ಘಟನೆಯಲ್ಲಿಯೇ ಅನ್ವರ್ ಸಾಬ್ (18) ಮತ್ತು ಜಬ್ಬಾರ್ ಸಾಬ್ (65) ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್‌ಗೆ ರವಾನಿಸಲಾಗಿದೆ. ಪರಿಜಾರ್ (8), ಅಜೀಜ್ (5), ಬುಶ್ರಾ (4) ಮಕ್ಕಳಿಗೆ ಸಣ್ಣ ಗಾಯಗಳಾದರೂ ತಕ್ಷಣ ಚಿಕಿತ್ಸೆ ನೀಡಲಾಗಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಫೋಟಕ್ಕೆ ಕಾರಣವಾದ ವಸ್ತು ಮಾದರಿಗಳನ್ನು ಸಂಗ್ರಹಿಸಲು ಸೋಕೋ (SOCO) ತಂಡ ಸ್ಥಳಕ್ಕೆ ಕರೆಯಲಾಗಿದೆ. ಹುಮ್ನಾಬಾದ್ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವುದು, ಭದ್ರತಾ ವ್ಯವಸ್ಥೆ ಕಠಿಣಗೊಳಿಸಿರುವುದು ಗಮನಾರ್ಹ.

ಕಳೆದ ಆರು ತಿಂಗಳಲ್ಲಿ ಇದೇ ಗ್ರಾಮದಲ್ಲಿ ಇದು ಎರಡನೇ ಸ್ಫೋಟ, ಇದರಿಂದ ಸ್ಥಳೀಯರು ಆತಂಕ ಮತ್ತು ಭಯದಲ್ಲಿ ಬದುಕುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಂಪೂರ್ಣ ಕಾರಣ ಮತ್ತು ಪೈಪೋಟಿ/ಸಂಬಂಧಿತ ವ್ಯಕ್ತಿಗಳನ್ನು ಗುರುತಿಸಲು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಮುರುಘಾಶ್ರೀಗೆ ಮತ್ತೊಂದು ಕಾನೂನು ಸಂಕಷ್ಟ: ಮಠದ 4 ನಿವೇಶನ ಅಕ್ರಮ ಮಾರಾಟ ಆರೋಪ

0

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಮುರುಘಾಮಠದ ಮಾಜಿ ಪೀಠಾಧಿಪತಿ ಮುರುಘಾಶ್ರೀ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮುರುಘಾಮಠಕ್ಕೆ ಸೇರಿದ ನಾಲ್ಕು ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪದಡಿ ಮುರುಘಾಶ್ರೀ ವಿರುದ್ಧ ಹೊಸದುರ್ಗ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.

ಮುರುಘಾಮಠದ ಆಡಳಿತ ಸಮಿತಿ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ಅವರು ಈ ಸಂಬಂಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಸರ್ಕಾರದಿಂದ ನೇಮಕಗೊಂಡಿರುವ ಮಠದ ಆಡಳಿತ ಸಮಿತಿಗೆ ಪ್ರಕಾಶ್ ಎಂಬುವರಿಂದ ನಿವೇಶನ ಮಾರಾಟದ ಕುರಿತು ದೂರು ಬಂದ ಹಿನ್ನೆಲೆ ವಿಷಯವನ್ನು ಪರಿಶೀಲಿಸಲಾಗಿದ್ದು, ಬಳಿಕ ನ್ಯಾಯಾಲಯವನ್ನು ಸಂಪರ್ಕಿಸಲಾಗಿದೆ.

ಕೋರ್ಟ್‌ನಿಂದ ನಿರ್ಬಂಧ ಇದ್ದರೂ ಮುರುಘಾಶ್ರೀ ಅವರು ಹೊಸದುರ್ಗದ ಎಂ. ಮಂಜುನಾಥ್ ಅವರಿಗೆ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ನೀಡಿದ್ದು, ಅದರ ಮೂಲಕ ಮಠಕ್ಕೆ ಸೇರಿದ ನಾಲ್ಕು ನಿವೇಶನಗಳನ್ನು ಮಮತಾ ಮತ್ತು ನಳಿನಿ ಎಂಬವರಿಗೆ ಮಾರಾಟ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜನವರಿ 30ರಂದು ಮುರುಘಾಮಠದ ಆಡಳಿತ ಸಮಿತಿ ಅಧಿಕೃತವಾಗಿ ಹೊಸದುರ್ಗ ನ್ಯಾಯಾಲಯವನ್ನು ಸಂಪರ್ಕಿಸಿದ್ದು, ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿಯಲಿದೆ.

ಮುರುಘಾಶ್ರೀ ವಿರುದ್ಧ ಈಗಾಗಲೇ ಫೋಕ್ಸೋ ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಾಗಿದ್ದು, ಆ ಪ್ರಕರಣದಲ್ಲಿ ಅವರು ಎ1 ಆರೋಪಿಯಾಗಿದ್ದಾರೆ. ಈ ಹಿನ್ನೆಲೆ ಅವರ ಮೇಲೆ ಆಸ್ತಿ ವಹಿವಾಟಿಗೆ ಸಂಬಂಧಿಸಿದಂತೆ ಕೋರ್ಟ್ ನಿರ್ಬಂಧ ವಿಧಿಸಿತ್ತು. ಆ ನಿರ್ಬಂಧವನ್ನು ಉಲ್ಲಂಘಿಸಿ ನಿವೇಶನ ಮಾರಾಟ ಮಾಡಲಾಗಿದೆ ಎಂಬುದು ಆಡಳಿತ ಸಮಿತಿಯ ಆರೋಪವಾಗಿದೆ.

ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನ ಪಲ್ಟಿ: 8 ಕರುಗಳು ಸ್ಥಳದಲ್ಲೇ ಸಾವು, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪುಟ್ಟ ಕರುಗಳ ದೇಹ

0

ಮಂಡ್ಯ: ನಾಗಮಂಗಲದಿಂದ ಮೈಸೂರಿನ ಕಸಾಯಿಖಾನೆಗೆ 34 ಎಳೆ ಕರುಗಳನ್ನು ಸಾಗಿಸುತ್ತಿದ್ದ ವಾಹನ ಪಲ್ಟಿಯಾದ ಪರಿಣಾಮ 8 ಎಳೆ ಕರುಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಾಗಮಂಗಲ ತಾಲೂಕಿನ ಬಸರಾಳು ನಾಗಮಂಗಲ ರಸ್ತೆಯ ಎಗ್ಗಟ್ಟಿ ಗೇಟ್ ಬಳಿ ನಡೆದಿದೆ.

ಸ್ಕಾರ್ಪಿಯೋ ವಾಹನದಲ್ಲಿ ಅಕ್ರಮವಾಗಿ ಹೆಚ್ಚಿನ ಸಂಖ್ಯೆಯ ಎಳೆ ಕರುಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ವಾಹನ ಪಲ್ಟಿಯಾದ ಪರಿಣಾಮ 34 ಕರುಗಳ ಪೈಕಿ 8 ಕರುಗಳು ಸಾವನ್ನಪ್ಪಿದ್ದು, ಹಲವು ಕರುಗಳಿಗೆ ಗಾಯಗಳಾಗಿವೆ.

ಮೃತ ಕರುಗಳ ದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಘಟನೆ ಸಂಭವಿಸಿದ ತಕ್ಷಣ ಚಾಲಕ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ನಾಗಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.

ಕೊಟ್ಟೂರಿನಲ್ಲಿ ಭೀಕರ ಟ್ರಿಪಲ್ ಮರ್ಡರ್: ಮಗನಿಂದಲೇ ತಂದೆ–ತಾಯಿ–ತಂಗಿ ಹತ್ಯೆ, ಆರೋಪಿಯನ್ನು ಸ್ಥಳಕ್ಕೆ ಕರೆತಂದ ಪೊಲೀಸರು

0

ವಿಜಯನಗರ: ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಮಗನಿಂದಲೇ ತಂದೆ, ತಾಯಿ ಹಾಗೂ ತಂಗಿಯನ್ನು ಹತ್ಯೆ ಮಾಡಿದ ಭೀಕರ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ಆರೋಪಿ ಅಕ್ಷಯ್‌ನನ್ನು ಬೆಂಗಳೂರಿನಿಂದ ಕೊಟ್ಟೂರಿಗೆ ಕರೆತಂದು ಪೊಲೀಸರು ಮಹತ್ವದ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ವಿಜಯನಗರ ಜಿಲ್ಲೆಯ ಕೊಟ್ಟೂರಿಗೆ ಕರೆತಂದಿದ್ದಾರೆ. ಆರೋಪಿ ಅಕ್ಷಯ್‌ನ್ನು ಕೊಟ್ಟೂರಿನ ಎಲ್.ಬಿ. ಬಡಾವಣೆಯಲ್ಲಿರುವ ಅವರ ನಿವಾಸಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿ ಆತಂಕಕಾರಿ ಬೆಳವಣಿಗೆಗಳು ಕಂಡುಬಂದಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮನೆಯ ಹಾಲ್‌ನಲ್ಲೇ ತಂದೆ–ತಾಯಿ–ತಂಗಿಯ ಮೂರು ಶವಗಳನ್ನು ಹೂತು ಹಾಕಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಸಹಾಯಕ ಆಯುಕ್ತ (ಎಸಿ) ಹಾಗೂ ತಹಸೀಲ್ದಾರ್ ಅವರ ಸಮ್ಮುಖದಲ್ಲಿ ಮೃತದೇಹಗಳನ್ನು ಹೊರತೆಗೆಯಲು ಸಿದ್ಧತೆ ನಡೆಸಲಾಗಿದೆ.

ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದು, ಫೊರೆನ್ಸಿಕ್ ತಂಡ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಇದ್ದಾರೆ. ಈ ಭೀಕರ ಪ್ರಕರಣ ಕೊಟ್ಟೂರು ಪಟ್ಟಣದಲ್ಲಿ ಭಯ ಮತ್ತು ಆತಂಕವನ್ನು ಮೂಡಿಸಿದೆ.

ಬೆಂಗಳೂರು, ದಕ್ಷಿಣ ಕರ್ನಾಟಕದಲ್ಲಿ ವಾಯು ಗುಣಮಟ್ಟ ಸಾಧಾರಣ: ಮಧ್ಯಾಹ್ನ ಬಿಸಿಲು ಹೆಚ್ಚಳ

0

ಬೆಂಗಳೂರು: ಕರ್ನಾಟಕದಾದ್ಯಂತ ಇಂದು (ಜನವರಿ 31, 2026) ವಾಯು ಗುಣಮಟ್ಟ ಸಾಧಾರಣ ಮಟ್ಟದಲ್ಲಿದೆಯಾದರೂ, ಮಹಾನಗರಗಳಲ್ಲಿ ಅಲ್ಪ ಸುಧಾರಣೆ ಕಂಡುಬಂದಿದೆ. ಮುಂಜಾನೆಯ ಮಂಜಿನ ಪ್ರಮಾಣ ಕಡಿಮೆಯಾಗಿರುವುದರಿಂದ ಮಾಲಿನ್ಯಕರ ಗಾಳಿಗಳು ಹಾಗೂ ಕಣಗಳು ಹತೋಟಿಗೆ ಬಂದಿವೆ.

ನಗರದ ಸಿಲ್ಕ್ ಬೋರ್ಡ್, ಪೀಣ್ಯ ಮತ್ತು ವೈಟ್‌ಫೀಲ್ಡ್ ಭಾಗಗಳಲ್ಲಿ ಮಾಲಿನ್ಯ ಮಟ್ಟ 160–170 ರ ಹಾಸುಪಾಸಿನಲ್ಲಿದ್ದು, ಹತ್ತಿರದ ಪ್ರದೇಶಗಳಿಗಿಂತ ಗಾಳಿ ಇನ್ನೂ ಕಳಪೆಯಾಗಿದ್ದು, ಜಯನಗರ ಮತ್ತು ಪದ್ಮನಾಭನಗರದಲ್ಲಿ ಗಾಳಿ ತುಸು ಶುದ್ಧವಾಗಿದೆ. ಮಂಗಳೂರು ಮತ್ತು ಉಡುಪಿ ಭಾಗಗಳಲ್ಲಿ ವಾಯು ಗುಣಮಟ್ಟ ‘ಕಳಪೆ’ ಹಂತದಲ್ಲೇ ಮುಂದುವರಿದಿದೆ. ಉಸಿರಾಟದ ಸಮಸ್ಯೆ ಇರುವವರು ಹೊರಗಡೆ ಸಂಚರಿಸುವಾಗ ಎಚ್ಚರವಾಗಿರಬೇಕಾಗಿದೆ.

ಮಧ್ಯಾಹ್ನ ಬಿಸಿಲು ಹೆಚ್ಚಾಗುತ್ತಿದ್ದಂತೆ ಗಾಳಿಯ ವೇಗ ಕೂಡ ಹೆಚ್ಚಾಗುತ್ತಿದ್ದು, AQI ಮಟ್ಟ ಇನ್ನೂ 10–15 ಪಾಯಿಂಟ್‌ಗಳಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ವೈಟ್‌ಫೀಲ್ಡ್ ಮತ್ತು ಮಹದೇವಪುರದಲ್ಲಿ ಮೆಟ್ರೋ ಕಾಮಗಾರಿ ಮತ್ತು ವಾಹನ ದಟ್ಟಣೆಯಿಂದಾಗಿ AQI 180+ (ಕಳಪೆ) ಇದೆ.

ಪೀಣ್ಯ ಕೈಗಾರಿಕಾ ಪ್ರದೇಶದ ಪರಿಣಾಮವಾಗಿ ಇಲ್ಲಿ ಮಾಲಿನ್ಯ 195 ರಷ್ಟು ತಲುಪಿದೆ. ಜಯನಗರ ಮತ್ತು ಮಲ್ಲೇಶ್ವರ ಪ್ರದೇಶಗಳಲ್ಲಿ ಹಸಿರು ಪ್ರದೇಶಗಳಿರುವುದರಿಂದ ಗಾಳಿಯ ಗುಣಮಟ್ಟ ಉತ್ತಮವಾಗಿದ್ದು, AQI 110–125 (ಸಾಧಾರಣ)ವಾಗಿದೆ. ಮೆಜೆಸ್ಟಿಕ್ ಮತ್ತು ಸಿಲ್ಕ್ ಬೋರ್ಡ್‌ನಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ AQI 175 ದಾಟಿದೆ.

ಮಧ್ಯಾಹ್ನದ ಅವಧಿಯಲ್ಲಿ ರಾಜ್ಯಾದ್ಯಂತ ಬಿಸಿಲಿನ ತೀವ್ರತೆ ಹೆಚ್ಚುವ ಸಾಧ್ಯತೆ ಇದೆ. ಮಧ್ಯಾಹ್ನ 1:00 ರಿಂದ 3:30 ರವರೆಗೆ ತಾಪಮಾನವು 30°C–31°C ತಲುಪಲಿದೆ. ಶುಷ್ಕ ಗಾಳಿ ಬೀಸುತ್ತಿರುವುದರಿಂದ ಬಿಸಿಲಿನ ತಾಪ ಹೆಚ್ಚು ಅನಿಸುವ ಸಾಧ್ಯತೆ ಇದೆ. ಬೆಳಗಾವಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಧ್ಯಾಹ್ನ ತಾಪಮಾನವು 34°C ದಾಟಬಹುದು.

ಬಿಸಿಲಿನ ತೀವ್ರತೆಗೆ ಸಂಬಂಧಿಸಿದಂತೆ, ಬೆಂಗಳೂರು ಮತ್ತು ಮಂಗಳೂರಿನಲ್ಲಿ AQI 10–20 ಪಾಯಿಂಟ್‌ಗಳಷ್ಟು ಸುಧಾರಣೆ ಕಾಣಲಿದೆ. ಬೆಳಗಿನ ಸಮಯದೊಂದಿಗೆ ಹೋಲಿಸಿದರೆ ಮಧ್ಯಾಹ್ನದ ವಾತಾವರಣ ಉಸಿರಾಟಕ್ಕೆ ಹೆಚ್ಚು ಸುರಕ್ಷಿತವಾಗಿರುತ್ತದೆ. ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ಮಧ್ಯಾಹ್ನದ ನಂತರ ಭಾಗಶಃ ಮೋಡ ಕವಿದ ವಾತಾವರಣವಿರಬಹುದು, ಆದರೆ ಮಳೆಯ ಸಂಭವ ಇಲ್ಲ. ತಜ್ಞರು ಮಧ್ಯಾಹ್ನ 12–3 ಗಂಟೆಯವರೆಗೆ ಹೆಚ್ಚು ಬಿಸಿಲು ಇದ್ದು, ನಿರ್ಜಲೀಕರಣ (Dehydration) ತಪ್ಪಿಸಲು ಹೆಚ್ಚು ನೀರು ಕುಡಿಯುವಂತೆ ಸೂಚಿಸಿದ್ದಾರೆ.

ಫಿನಾಯಿಲ್ ಹೇಳಿಕೆ ಸುಳ್ಳಾಯ್ತು! ಮೈಸೂರಿನಲ್ಲಿ ಎನ್ಸಿಬಿಗೆ ಸಿಕ್ಕ ಹೈಟೆಕ್ ಡ್ರಗ್ಸ್ ಲ್ಯಾಬ್ – ರಾಜ್ಯ ಸರ್ಕಾರಕ್ಕೆ ಮುಖಭಂಗ

0

ಮೈಸೂರು: ಮೈಸೂರಿನಲ್ಲಿ ಪತ್ತೆಯಾಗಿದ್ದು ಕೇವಲ ಫಿನಾಯಿಲ್ ಫ್ಯಾಕ್ಟರಿ ಎಂಬ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕೃತ ಪ್ರಕಟಣೆ ತೀವ್ರ ಹಿನ್ನಡೆಯನ್ನುಂಟುಮಾಡಿದೆ. ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಫಿನಾಯಿಲ್ ಫ್ಯಾಕ್ಟರಿ ಹೆಸರಲ್ಲಿ ಹೈಟೆಕ್ ರಹಸ್ಯ ಡ್ರಗ್ಸ್ ಲ್ಯಾಬ್ ಕಾರ್ಯನಿರ್ವಹಿಸುತ್ತಿತ್ತು ಎಂದು ಎನ್ಸಿಬಿ ಸ್ಪಷ್ಟಪಡಿಸಿದೆ.

ಗುಜರಾತ್ ಮತ್ತು ಕರ್ನಾಟಕದಲ್ಲಿ ಹರಡಿದ್ದ ಮಾದಕ ದ್ರವ್ಯ ಜಾಲವನ್ನು ಎನ್ಸಿಬಿ ಭೇದಿಸಿದ್ದು, ಸುಮಾರು 10 ಕೋಟಿ ರೂ. ಮೌಲ್ಯದ 35 ಕೆಜಿ ಮೆಫೆಡ್ರೋನ್ (MD), 1.8 ಕೆಜಿ ಅಫೀಮು ಹಾಗೂ 25.6 ಲಕ್ಷ ರೂ. ನಗದು ವಶಪಡಿಸಿಕೊಂಡಿದೆ. ರಾಜಸ್ಥಾನದ ಜಾಲೋರ್ ಜಿಲ್ಲೆಯ ಮಹೇಂದ್ರ ಕುಮಾರ್ ವಿಷ್ಣೋಯ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಎನ್ಸಿಬಿ ಮಾಹಿತಿ ಪ್ರಕಾರ, ಜೈಲಿನಲ್ಲಿದ್ದಾಗಲೇ ಡ್ರಗ್ಸ್ ತಯಾರಿಕೆ ಕಲಿತ ಮಹೇಂದ್ರ ಕುಮಾರ್, ಜಾಮೀನಿನ ಮೇಲೆ ಹೊರಬಂದ ನಂತರ ಮೈಸೂರಿನಲ್ಲಿ ಈ ರಹಸ್ಯ ಡ್ರಗ್ಸ್ ಲ್ಯಾಬ್ ಸ್ಥಾಪಿಸಿದ್ದ. ದಾಳಿ ವೇಳೆ ಅತ್ಯಾಧುನಿಕ ಉಪಕರಣಗಳು ಮತ್ತು ಡ್ರಗ್ಸ್ ತಯಾರಿಕೆಗೆ ಬೇಕಾದ ವಸ್ತುಗಳು ಪತ್ತೆಯಾಗಿವೆ.

ಈ ಹಿಂದೆ ಗೃಹ ಸಚಿವರು “ಇಲ್ಲಿ ಯಾವುದೇ ಮಾದಕ ವಸ್ತು ಪತ್ತೆಯಾಗಿಲ್ಲ” ಎಂದು ಸ್ಥಳೀಯ ಪೊಲೀಸರ ವರದಿಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಕೇಂದ್ರ ಸಂಸ್ಥೆಯಾದ ಎನ್ಸಿಬಿ ಇದೀಗ ಸಂಪೂರ್ಣ ಡ್ರಗ್ಸ್ ಉತ್ಪಾದನಾ ಘಟಕ ಪತ್ತೆಯಾಗಿದೆ ಎಂದು ಬಹಿರಂಗಪಡಿಸಿರುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದ್ದು, ರಾಜ್ಯದ ಗುಪ್ತಚರ ವ್ಯವಸ್ಥೆ ಮತ್ತು ಸ್ಥಳೀಯ ತನಿಖೆಯ ಮೇಲೂ ಪ್ರಶ್ನೆ ಎತ್ತಿದೆ.

ಬಂಧಿತ ಆರೋಪಿಗಳ ವಿರುದ್ಧ NDPS ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಿಸಲಾಗಿದ್ದು, ಮೈಸೂರಿನ ಘಟಕಕ್ಕೆ ರಾಸಾಯನಿಕ ಪೂರೈಕೆ ಮಾಡುತ್ತಿದ್ದ ಜಾಲದ ಕುರಿತು ತನಿಖೆ ಮುಂದುವರಿದಿದೆ. ‘ನಶಾ ಮುಕ್ತ ಭಾರತ’ ಅಭಿಯಾನದಡಿ ದೇಶಾದ್ಯಂತ ಇಂತಹ ರಹಸ್ಯ ಡ್ರಗ್ಸ್ ಘಟಕಗಳ ಮೇಲೆ ನಿಗಾ ಇಡಲಾಗುತ್ತದೆ ಎಂದು ಎನ್ಸಿಬಿ ತಿಳಿಸಿದೆ.

“ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ರಿ” – ಸಿಜೆ ರಾಯ್ ನೆನೆದು ಬಿಗ್‌ಬಾಸ್ ವಿನ್ನರ್ ಹನುಮಂತು ಭಾವುಕ

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿಜೆ ರಾಯ್ (CJ Roy) ಅವರ ನಿಧನಕ್ಕೆ ಬಿಗ್‌ಬಾಸ್ ಸೀಸನ್ 11ರ ವಿನ್ನರ್ ಹನುಮಂತು ಭಾವುಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು, ನಿಮ್ಮ ಋಣವನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದು ಹನುಮಂತು ಇನ್‌ಸ್ಟಾಗ್ರಾಂನಲ್ಲಿ ನೋವಿನ ಪದಗಳಲ್ಲಿ ಬರೆದುಕೊಂಡಿದ್ದಾರೆ.

ಹನುಮಂತು ತಮ್ಮ ಪೋಸ್ಟ್‌ನಲ್ಲಿ, ಸರಿಗಮಪ ಸೀಸನ್ 12ರಲ್ಲಿ ರನ್ನರ್ ಅಪ್ ಆಗಿದ್ದ ವೇಳೆ ಸಿಜೆ ರಾಯ್ ಅವರು ಹಣ ನೀಡಿ ನನ್ನ ಜೀವನಕ್ಕೆ ಹೊಸ ದಾರಿ ತೋರಿಸಿದರು. ನಂತರ ಬಿಗ್‌ಬಾಸ್ ಸೀಸನ್ 11ರಲ್ಲಿ ಗೆದ್ದಾಗಲೂ ಪ್ರೀತಿಯಿಂದ ಹಣ ನೀಡಿ ಸಂಭ್ರಮಿಸಿದ್ದರು. ನಿಮ್ಮ ಈ ಉಪಕಾರವನ್ನು ನಾನು ಎಂದಿಗೂ ಮರೆತೇನು ಸಾಧ್ಯವಿಲ್ಲ ಸರ್ ಎಂದು ಹೇಳಿದ್ದಾರೆ.

ಸಿಜೆ ರಾಯ್ ಅವರ ಅಗಲಿಕೆಯ ಸುದ್ದಿ ಕೇಳಿ ಮನಸ್ಸು ತುಂಬಾ ಭಾರವಾಗಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಮಿಸ್ ಯು ರಾಯ್ ಸರ್ ಎಂದು ಹನುಮಂತು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಸಿಜೆ ರಾಯ್ ಅವರು ಹನುಮಂತುಗೆ ಹಣ ನೀಡಿದ್ದ ಸಂದರ್ಭದ ವಿಡಿಯೋವನ್ನು ಹನುಮಂತು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಶುಕ್ರವಾರ (ಜ.31) ಮಧ್ಯಾಹ್ನ ಸುಮಾರಿಗೆ ಐಟಿ ದಾಳಿ ವೇಳೆ ಸಿಜೆ ರಾಯ್ ಅವರು ತಮ್ಮ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

error: Content is protected !!