Home Blog Page 88

ಚಂದ್ರಗ್ರಹಣ ಸ್ಪೆಷಲ್ ವೇಳಾಪಟ್ಟಿ: ಓಂಕಾರೇಶ್ವರ ದೇವಾಲಯದಲ್ಲಿ ಗರ್ಭಗುಡಿ ತಾತ್ಕಾಲಿಕ ಮುಚ್ಚಳಿಕೆ

0

ಮಡಿಕೇರಿ: ಹೋಳಿ ಹುಣ್ಣಿಮೆಯ ದಿನ ಸಂಭವಿಸುತ್ತಿರುವ ವರ್ಷದ ಮೊದಲ ಚಂದ್ರಗ್ರಹಣ 2026 ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷ ಚರ್ಚೆಗೆ ಗ್ರಾಸವಾಗಿದೆ. ಗ್ರಹಣದ ಬಳಿಕ ಹಲವು ರಾಶಿಗಳಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಬಹುದು ಎಂದು ಅರ್ಚಕರು ಅಭಿಪ್ರಾಯಪಟ್ಟಿದ್ದಾರೆ. ಇದೇ ಹಿನ್ನೆಲೆಯಲ್ಲಿ ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯ ಪೂಜಾ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ.

ಮಾರ್ಚ್ 3ರಂದು ಬೆಳಗ್ಗೆ 9 ಗಂಟೆಯೊಳಗೆ ಗ್ರಹಣ ಶುದ್ಧೀಕರಣ ಮತ್ತು ಸಂಪ್ರೋಕ್ಷಣೆ ಪೂರ್ಣಗೊಳ್ಳಲಿದೆ. ನಂತರ ಗರ್ಭಗುಡಿ ಬಾಗಿಲುಗಳನ್ನು ಮುಚ್ಚಿ, ಗ್ರಹಣ ಅವಧಿಯಲ್ಲಿ ಯಾವುದೇ ವಿಧಿ ವಿಧಾನ ನಡೆಯುವುದಿಲ್ಲ.

ಗ್ರಹಣ ಮುಗಿದ ಬಳಿಕ ಸಂಜೆ 7 ಗಂಟೆ ನಂತರ ದೇವಾಲಯದಲ್ಲಿ ವಿಶೇಷ ಆಲಯಾರ್ಚನೆ, ಅಭಿಷೇಕ ಮತ್ತು ಸಂಪ್ರೋಕ್ಷಣೆ ಶಾಂತಿ ಕಾರ್ಯಗಳು ಜರುಗಲಿವೆ. ಧಾರ್ಮಿಕ ಶಿಸ್ತಿನಂತೆ ಎಲ್ಲ ವಿಧಿವಿಧಾನಗಳನ್ನು ನೆರವೇರಿಸಿ ನಂತರವೇ ಸಾಮಾನ್ಯ ದರ್ಶನ ವ್ಯವಸ್ಥೆ ಮುಂದುವರಿಸಲಾಗುತ್ತದೆ.

ಮರುದಿನ ಬೆಳಗ್ಗೆ 6 ಗಂಟೆಯಿಂದಲೇ ಶುದ್ಧಿ ಕಾರ್ಯಗಳು ಹಾಗೂ ಶಾಂತಿ ಪೂಜೆಗಳು ಪ್ರಾರಂಭವಾಗಲಿದ್ದು, ಭಕ್ತರಿಗೆ ದರ್ಶನ ಅವಕಾಶ ಕಲ್ಪಿಸಲಾಗುತ್ತದೆ. ಗ್ರಹಣದ ಸಂದರ್ಭ ಭಕ್ತರು ಪ್ರಕಟಿತ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೇವಾಲಯ ಆಡಳಿತ ವಿನಂತಿಸಿದೆ.

Israel–Iran War: ನೆತನ್ಯಾಹು ಕಚೇರಿ ಸೇರಿ ಪ್ರಮುಖ ನೆಲೆಗಳ ಮೇಲೆ ಕ್ಷಿಪಣಿ ದಾಳಿ!

0

ಟೆಲ್ ಅವೀವ್: ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಮತ್ತಷ್ಟು ಗಂಭೀರಗೊಂಡಿದ್ದು, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಇಂದು ಟೆಲ್ ಅವೀವ್‌ನಲ್ಲಿರುವ ಇಸ್ರೇಲ್ ಪ್ರಧಾನಿ ಕಚೇರಿಗೆ ದಾಳಿ ನಡೆಸಿರುವುದಾಗಿ ತಿಳಿಸಿದೆ.

ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿರುವ ಹಿನ್ನೆಲೆಯಲ್ಲಿ, ಪ್ರತೀಕಾರವಾಗಿ ಇಸ್ರೇಲ್ ಹಾಗೂ ಇತರೆ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೆ ಇರಾನ್ ದಾಳಿಯನ್ನು ತೀವ್ರಗೊಳಿಸಿದೆ ಎಂದು ಹೇಳಲಾಗಿದೆ.

ಇರಾನ್ ನೀಡಿದ ಮಾಹಿತಿಯಂತೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ, ಹೈಫಾ ನಗರದಲ್ಲಿನ ಭದ್ರತಾ ಮತ್ತು ಸೈನಿಕ ಕೇಂದ್ರಗಳು ಹಾಗೂ ಪೂರ್ವ ಜೆರುಸಲೆಮ್ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.

‘ಜಿಯೋನಿಸ್ಟ್ ಆಡಳಿತದ ಕ್ರಿಮಿನಲ್ ಪ್ರಧಾನಿಯ ಕಚೇರಿ ಹಾಗೂ ವಾಯುಪಡೆಯ ಕಮಾಂಡರ್ ಪ್ರಧಾನ ಕಚೇರಿಯನ್ನು ಗುರಿಯಾಗಿಸಲಾಗಿದೆ’ ಎಂದು ಇರಾನ್ ಹೇಳಿದೆ. ದಾಳಿಯಲ್ಲಿ ಖೈಬರ್ ಕ್ಷಿಪಣಿಗಳನ್ನು ಬಳಸಲಾಗಿದೆ ಎಂಬ ಮಾಹಿತಿ ನೀಡಲಾಗಿದೆ.

ಇನ್ನೊಂದೆಡೆ, ಅಮೆರಿಕ–ಇಸ್ರೇಲಿ ಏರ್‌ಸ್ಟ್ರೈಕ್‌ಗಳಿಂದ ಇರಾನಿನಲ್ಲಿ ಕನಿಷ್ಠ 555 ಜನರು ಸಾವನ್ನಪ್ಪಿರುವುದಾಗಿ ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿ ತಿಳಿಸಿದೆ. ಶನಿವಾರದಿಂದ ಅಮೆರಿಕ ಮತ್ತು ಇಸ್ರೇಲ್ ಇರಾನಿನಾದ್ಯಂತ ದಾಳಿಗಳನ್ನು ಮುಂದುವರಿಸುತ್ತಿವೆ.

ಖಮೇನಿ ಹತ್ಯೆಯಿಂದ ಪ್ರಾರಂಭವಾದ ಈ ಸಂಘರ್ಷ ಇದೀಗ ಸಂಪೂರ್ಣ ಪ್ರದೇಶವನ್ನು ಆವರಿಸಿದೆ. ದುಬೈ, ಬಹ್ರೇನ್, ಇರಾಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸ್ಫೋಟಗಳ ಸದ್ದು ಕೇಳಿಬರುತ್ತಿದೆ ಎಂದು ವರದಿಗಳು ತಿಳಿಸಿವೆ.

ಯುದ್ಧಪೀಡಿತ ದೇಶಗಳಿಂದ ಕನ್ನಡಿಗರು ಎಲ್ಲಾ ಭಾರತೀಯರು ಸುರಕ್ಷಿತವಾಗಿ ವಾಪಸ್ ಬರುತ್ತಾರೆ: ಹೆಚ್.ಡಿ. ಕುಮಾರಸ್ವಾಮಿ

ಮೈಸೂರು: ಕೊಲ್ಲಿ ಪ್ರದೇಶದಲ್ಲಿ ಉಂಟಾಗಿರುವ ಉದ್ವಿಗ್ನತೆಯಲ್ಲಿ ಸಿಲುಕಿಕೊಂಡಿರುವ ಎಲ್ಲಾ ಕನ್ನಡಿಗರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಕೇಂದ್ರ ಸರಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು; ಈ ಹಿಂದೆ ಇಂಥದೇ ಅನೇಕ ಸಂದರ್ಭಗಳಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಏರ್ ಲಿಫ್ಟ್ ಮಾಡಿತ್ತು. ಈ ಬಾರಿಯೂ ಎಲ್ಲರನ್ನೂ ಸುರಕ್ಷಿತವಾಗಿ ವಾಪಸ್ ಕರೆ ತರಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಪ್ರಧಾನಿಗಳು ಕ್ರಮ ವಹಿಸಿದ್ದಾರೆ ಎಂದು ಹೇಳಿದರು.

ನಾನು ಕೂಡ ದುಬೈ ಸೇರಿದಂತೆ ಯುದ್ಧ ಕಾರ್ಮೋಡ ಇರುವ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ಸಂಪರ್ಕಿಸಿದ್ದೇನೆ. ಎಲ್ಲರೂ ಸುರಕ್ಷಿತರಾಗಿದ್ದಾರೆ. ಅವರೆಲ್ಲರೂ ಸುರಕ್ಷಿತವಾಗಿ ವಾಪಸ್ ಬರಲಿದ್ದಾರೆ. ಯಾವುದೇ ಅನುಮಾನ ಬೇಡ ಎಂದು ಅವರು ಹೇಳಿದರು.

ಇರಾನ್ ವಿರುದ್ಧ ಅಮೆರಿಕ ಜೊತೆ ಕೈಜೋಡಿಸಲು ಬ್ರಿಟನ್-ಫ್ರಾನ್ಸ್-ಜರ್ಮನಿ ಸಿದ್ಧ

0

ನ್ಯೂಯಾರ್ಕ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ, ಇರಾನ್ನಿಂದ ಸಂಭವಿಸಬಹುದಾದ ಪ್ರತೀಕಾರಾತ್ಮಕ ಮಿಲಿಟರಿ ಕ್ರಮಗಳನ್ನು ಎದುರಿಸಲು ಅಮೆರಿಕ ಜೊತೆ ಕೈಜೋಡಿಸಲು ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಸಿದ್ಧವಾಗಿವೆ.

ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಜರ್ಮನಿ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಸಂಯುಕ್ತ ಹೇಳಿಕೆಯಲ್ಲಿ, ಮಿತ್ರ ರಾಷ್ಟ್ರಗಳ ಗುರಿಗಳ ವಿರುದ್ಧ ಇರಾನ್ ಅಜಾಗರೂಕ ದಾಳಿಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ದಾಳಿಗಳು ನಾಗರಿಕರು ಮತ್ತು ಆ ಪ್ರದೇಶದಲ್ಲಿ ನಿಯೋಜಿಸಲಾದ ಸೈನಿಕರಿಗೆ ನೇರ ಬೆದರಿಕೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

ಮೂರು ರಾಷ್ಟ್ರಗಳು ತಮ್ಮ ಹಾಗೂ ಮಿತ್ರರಾಷ್ಟ್ರಗಳ ಹಿತಾಸಕ್ತಿಗಳನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧರಿರುವುದಾಗಿ ಹೇಳಿವೆ. ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತಡೆಯಲು ಇರಾನ್‌ನ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶದಿಂದ ಅಮೆರಿಕ ಮತ್ತು ಪ್ರಾದೇಶಿಕ ಮಿತ್ರರಾಷ್ಟ್ರಗಳೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿವೆ.ಆದರೆ ಯಾವುದೇ ನಿರ್ದಿಷ್ಟ ಸೈನಿಕ ಕಾರ್ಯಾಚರಣೆಗಳ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.

ಸೈಪ್ರಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸರಣಿ ದಾಳಿಗಳು ನಡೆದಿರುವ ವರದಿಗಳ ಬೆನ್ನಲ್ಲೇ ಈ ಹೇಳಿಕೆಗಳು ಬಂದಿವೆ. ಬ್ರಿಟನ್ ರಕ್ಷಣಾ ಸಚಿವಾಲಯವು ಅಕ್ರೋಟಿರಿ ನೆಲೆಯಲ್ಲಿರುವ ತನ್ನ ಮಿಲಿಟರಿ ತಾಣದ ಮೇಲೆ ಶಂಕಿತ ಡ್ರೋನ್ ದಾಳಿ ನಡೆದಿರುವುದಾಗಿ ತಿಳಿಸಿದೆ.

ಇದೇ ವೇಳೆ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಫ್ರೆಂಚ್ ನೌಕಾ ತಾಣದ ಹ್ಯಾಂಗರ್‌ಗೆ ಡ್ರೋನ್ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಿದ್ದು, ಮುಂದಿನ ಬೆಳವಣಿಗೆಗಳತ್ತ ವಿಶ್ವದ ಗಮನ ಕೇಂದ್ರೀಕೃತವಾಗಿದೆ.

ಪಾಕಿಸ್ತಾನದ ಪ್ರತಿಯೊಬ್ಬ ಆಟಗಾರನಿಗೂ 50 ಲಕ್ಷ ರೂ. ದಂಡ..! ಯಾಕೆ ಗೊತ್ತಾ..?

0

ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನ್ ರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರರಿಗೆ 50 ಲಕ್ಷ ರೂಪಾಯಿ ದಂಡ ವಿಧಿಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಂದಾಗಿದೆ ಎಂದು ವರದಿಯಾಗಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನ್ ತಂಡ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಆದರೆ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ, ಸೂಪರ್-8 ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿತ್ತು. ಈ ಹೀನಾಯ ಪ್ರದರ್ಶನದ ಹಿನ್ನೆಲೆ ಆಟಗಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮಂಡಳಿ ನಿರ್ಧರಿಸಿದೆ.

ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಆಟಗಾರರಿಗೆ ನೀಡಲಾಗುತ್ತಿದ್ದ ಹೆಚ್ಚುವರಿ ಸವಲತ್ತುಗಳನ್ನು ಕಡಿತಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮುಂದಿನಿಂದ ಮೈದಾನದ ಪ್ರದರ್ಶನ ಆಧಾರಿತವಾಗಿಯೇ ಹಣಕಾಸಿನ ಲಾಭಗಳು ಹಾಗೂ ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದ್ದಾರೆ.

2025-26ರ ಕೇಂದ್ರ ಗುತ್ತಿಗೆಯಲ್ಲಿ ಹಿರಿಯ ಆಟಗಾರರಾದ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಝ್ವಾನ್ ಅವರನ್ನು ‘A’ ವರ್ಗದಿಂದ ‘B’ ವರ್ಗಕ್ಕೆ ಇಳಿಸಲಾಗಿದೆ. ಕಳಪೆ ಫಾರ್ಮ್ ಇದರ ಪ್ರಮುಖ ಕಾರಣವೆಂದು ತಿಳಿದುಬಂದಿದೆ.

ಇದೇ ವೇಳೆ, ಕೆಲಸದ ಒತ್ತಡ ನಿರ್ವಹಣೆ ಹೆಸರಿನಲ್ಲಿ ವಿದೇಶಿ ಲೀಗ್‌ಗಳಲ್ಲಿ ಆಡಲು ನೀಡಲಾಗುವ ಎನ್‌ಒಸಿ (NOC) ಗಳ ಮೇಲೂ ನಿರ್ಬಂಧ ಹೇರಲಾಗಿದೆ.

ಆಟಗಾರರಿಗೆ ವಿಧಿಸಲಿರುವ ದಂಡ ಹಾಗೂ ಶಿಸ್ತು ಕ್ರಮಗಳು ಪಾಕಿಸ್ತಾನ್ ತಂಡದ ಮನೋಭಾವ ಮತ್ತು ಮುಂದಿನ ಸರಣಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಇರಾನ್–ಇಸ್ರೇಲ್ ಉದ್ವಿಗ್ನತೆ: ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕ್ರಮ – ಕೃಷ್ಣ ಭೈರೇಗೌಡ

ಬೆಂಗಳೂರು: ಇರಾನ್ಇಸ್ರೇಲ್ ಯುದ್ಧದ ಪರಿಣಾಮವಾಗಿ ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಕರ್ನಾಟಕದವರ ರಕ್ಷಣೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಯಾರೂ ಆತಂಕಪಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಸಿಲುಕಿರುವ ಪ್ರತಿಯೊಬ್ಬರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಭರವಸೆ ನೀಡಿದರು.

ಶನಿವಾರದಿಂದಲೇ ಸಹಾಯವಾಣಿ ಆರಂಭಿಸಲಾಗಿದ್ದು, ಇದುವರೆಗೆ 109 ಮಂದಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ದೆಹಲಿಯಲ್ಲಿರುವ ರಾಜ್ಯದ ರೆಸಿಡೆಂಟ್ ಕಮೀಷನರ್ ಕೂಡ ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಸಿಲುಕಿರುವವರಿಗೆ ಮುಖ್ಯವಾಗಿ ಮೂರು ಆತಂಕಗಳಿವೆ – ಅವರನ್ನು ಹೇಗೆ ವಾಪಸ್ ಕರೆಸಿಕೊಳ್ಳಲಾಗುತ್ತದೆ? ವಿಶೇಷ ವಿಮಾನ ವ್ಯವಸ್ಥೆ ಇರಬಹುದೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಈ ಕುರಿತು ಸಚಿವರು, “ಪ್ರಸ್ತುತ ಏರ್ ಟ್ರಾಫಿಕ್ ನಿಷೇಧಗೊಂಡಿದೆ. ವಿಮಾನ ಸಂಚಾರ ಪುನರಾರಂಭವಾದ ಕೂಡಲೇ ಕೇಂದ್ರ ಸರ್ಕಾರ ಕೈಗೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ ಸಿಗುತ್ತದೆ. ಏರ್ ಟ್ರಾಫಿಕ್ ಕ್ಲಿಯರ್ ಆಗುವವರೆಗೆ ತೆರವು ಕಾರ್ಯ ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ಶಾಂತವಾಗಿ ಇರಬೇಕು,” ಎಂದು ಮನವಿ ಮಾಡಿದರು.

ಕೋರಮಂಗಲ ಪಾಸ್ ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ!

ಬೆಂಗಳೂರು: ನಗರದಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳ ಸರಣಿ ಮುಂದುವರಿದಿರುವ ನಡುವೆಯೇ, ಕೋರಮಂಗಲದಲ್ಲಿರುವ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಘಟನೆ ಆತಂಕಕ್ಕೆ ಕಾರಣವಾಯಿತು.

ಇಂದು ಬೆಳಗ್ಗೆ ಕಚೇರಿಯ ಅಧಿಕೃತ ಇ-ಮೇಲ್ ವಿಳಾಸಕ್ಕೆ ತಮಿಳು ಭಾಷೆಯಲ್ಲಿ ಸಂದೇಶ ರವಾನಿಸಲಾಗಿದ್ದು, “ಅಜ್ಮಲ್ ಕಸಬ್‌ಗೆ ಮರಣದಂಡನೆ ವಿಧಿಸಿರುವ ನಿಮ್ಮನ್ನು ಬಿಡುವುದಿಲ್ಲ. ಕೆಲವೇ ಹೊತ್ತಿನಲ್ಲಿ ಕಚೇರಿಯಲ್ಲಿ ಇರಿಸಿರುವ ಸ್ಫೋಟಕಗಳು ಸ್ಫೋಟಗೊಳ್ಳಲಿವೆ” ಎಂದು ಬೆದರಿಕೆ ಹಾಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಲ್ಲಿ ಉಲ್ಲೇಖಿಸಿರುವ ಅಜ್ಮಲ್ ಕಸಬ್ 26/11 ಮುಂಬೈ ದಾಳಿಯ ದೋಷಿಯಾಗಿದ್ದರು.

ವಿಷಯ ತಿಳಿಯುತ್ತಿದ್ದಂತೆಯೇ ಕರ್ನಾಟಕ ಪೊಲೀಸ್ ಸಿಬ್ಬಂದಿ, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಸ್ಥಳಕ್ಕೆ ದೌಡಾಯಿಸಿತು. ಕಚೇರಿಯಲ್ಲಿದ್ದ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ತಕ್ಷಣವೇ ಹೊರಗೆ ಕಳುಹಿಸಿ ಕಟ್ಟಡದ ಸಂಪೂರ್ಣ ತಪಾಸಣೆ ನಡೆಸಲಾಯಿತು.

ಭದ್ರತಾ ಕಾರಣದಿಂದ ದೈನಂದಿನ ಪಾಸ್‌ಪೋರ್ಟ್ ವಿತರಣಾ ಪ್ರಕ್ರಿಯೆಯನ್ನು ಕೆಲಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಸುದೀರ್ಘ ಪರಿಶೀಲನೆಯ ಬಳಿಕ ಕಟ್ಟಡದಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಸಂದೇಶ ಎಂಬುದು ಖಚಿತವಾದ ನಂತರ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯ ಭದ್ರತೆ ಖಚಿತಪಡಿಸಿಕೊಂಡು ಒಬ್ಬೊಬ್ಬರನ್ನೇ ಕಚೇರಿಯೊಳಗೆ ಬಿಡಲಾಗುತ್ತಿದ್ದು, ಸ್ಥಗಿತಗೊಂಡಿದ್ದ ಪಾಸ್‌ಪೋರ್ಟ್ ಸೇವೆಗಳು ಪುನಃ ಆರಂಭಗೊಂಡಿವೆ. ಇ-ಮೇಲ್ ಎಲ್ಲಿಂದ ಬಂದಿದೆ ಹಾಗೂ ಇದರ ಹಿಂದಿನ ಉದ್ದೇಶವೇನು ಎಂಬುದರ ಕುರಿತು ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದೇಣಿಗೆ ವಿವಾದದಿಂದ ಗಲಾಟೆ: ಶಿಕಾರಿಪುರದಲ್ಲಿ ಉದ್ವಿಗ್ನ ಪರಿಸ್ಥಿತಿ, ಪೊಲೀಸ್ ಬಿಗಿ ಬಂದೋಬಸ್ತ್

0

ಶಿವಮೊಗ್ಗ: ರಂಜಾನ್ ಹಬ್ಬದ ದೇಣಿಗೆ ಸಂಗ್ರಹ ವಿಚಾರವಾಗಿ ನಡೆದ ವಿವಾದವು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ಗಲಾಟೆ ನಡೆದಿದೆ.

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ದೇಣಿಗೆ ಸಂಗ್ರಹ ನಿರ್ಧಾರಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ ನಂತರ ಗಲಾಟೆ ಆರಂಭವಾಗಿದೆ. ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ಗಂಭೀರ ಸ್ವರೂಪ ಪಡೆದುಕೊಂಡು, ಸಾರ್ವಜನಿಕ ರಸ್ತೆಯಲ್ಲೇ ಕಲ್ಲು ತೂರಾಟ ನಡೆದಿದೆ.

ಈ ವೇಳೆ ವಾಹನ ಸವಾರರು ಆತಂಕಗೊಂಡಿದ್ದು, ರಸ್ತೆ ಸಂಚಾರ ಸಂಪೂರ್ಣವಾಗಿ ಕೆಲಕಾಲ ಸ್ಥಗಿತಗೊಂಡಿತ್ತು. ಮಾಹಿತಿ ಪಡೆದ ತಕ್ಷಣ ಶಿಕಾರಿಪುರ ಪಟ್ಟಣ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ 10 ಜನರನ್ನು ಬಂಧಿಸಲಾಗಿದ್ದು, ಪರಸ್ಪರ ದೂರು ಹಾಗೂ ಪ್ರತಿದೂರು ದಾಖಲಾಗಿವೆ. ಪಟ್ಟಣದಲ್ಲಿ ಶಾಂತಿ ಕಾಪಾಡಲು ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ಹಾವೇರಿ: ‘ಹೋರಿ’ ಟ್ರೋಲ್ ವಿಚಾರಕ್ಕೆ ಯುವಕನ ಮೇಲೆ ಹಲ್ಲೆ – ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಥಳಿತ, ವಿಡಿಯೋ ವೈರಲ್

0

ಹಾವೇರಿ: ಸಾಮಾಜಿಕ ಜಾಲತಾಣದಲ್ಲಿ ‘ಕೊಬ್ಬರಿ ಹೋರಿ’ ಕುರಿತು ಟ್ರೋಲ್ ಮಾಡಿದ ಆರೋಪದ ಹಿನ್ನೆಲೆ ಯುವಕನೊಬ್ಬನ ಮೇಲೆ ಮನ ಬಂದಂತೆ ಹಲ್ಲೆ ನಡೆಸಿರುವ ಘಟನೆ ಹಾವೇರಿ ತಾಲೂಕಿನ ನಾಗಿನಮಟ್ಟಿ ಗ್ರಾಮದಲ್ಲಿ ನಡೆದಿದೆ.

ತುಡ್ನೂರು ಮೂಲದ ಮಧು ಎಂಬ ಯುವಕನ ಮೇಲೆ ಈ ಹಲ್ಲೆ ನಡೆದಿದ್ದು, NTC ಸರ್ಕಾರ್ ಹೋರಿ ಕುರಿತು ಕೆಟ್ಟದಾಗಿ ಟ್ರೋಲ್ ಮಾಡಿದ್ದಾನೆ ಎಂದು ಆರೋಪಿಸಿ ಕೆಲವರು ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆಗೈದಿದ್ದಾರೆ ಎನ್ನಲಾಗಿದೆ.

ನಾಗಿನಮಟ್ಟಿಯಲ್ಲಿ ನಡೆಯುತ್ತಿದ್ದ ಹೋರಿ ಬೆದರಿಸುವ ಸ್ಪರ್ಧೆಗೆ ಭಾಗವಹಿಸಲು ಬಂದಿದ್ದ ಮಧುವನ್ನು, ಹಬ್ಬ ಮುಗಿದ ಬಳಿಕ ಕರೆದುಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಹಲ್ಲೆ ನಡೆಸಿದ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ.

“ಕೆಟ್ಟದಾಗಿ ಟ್ರೋಲ್ ಮಾಡ್ತಿದ್ದವನಿಗೆ ಪೂಜೆ ಆಗಿದೆ” ಎಂಬ ಶೀರ್ಷಿಕೆಯಿಂದ ವಿಡಿಯೋ ಹರಿದಾಡುತ್ತಿದ್ದು, ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆ ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ಕುರಿತು ತನಿಖೆ ಮುಂದುವರಿದಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 

ಇದು ನಾನು ಕಾಯುತ್ತಿದ್ದ ದಿನ! ದೇಶಕ್ಕಾಗಿ ಕನಸಿನ ಇನಿಂಗ್ಸ್ ಆಡಿದ ಸಂಜು ಸ್ಯಾಮ್ಸನ್ ಭಾವುಕ

0

ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್ ಅವರ ಅದ್ಭುತ ಬ್ಯಾಟಿಂಗ್ ಆಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ 20 ಓವರ್‌ಗಳಲ್ಲಿ 195 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಭಾರತ ಪರ ಸಂಜು ಸ್ಯಾಮ್ಸನ್ ಕೇವಲ 50 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 12 ಫೋರ್‌ಗಳೊಂದಿಗೆ ಅಜೇಯ 97 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ ಆಡಿದರು.

ಸ್ಯಾಮ್ಸನ್ ಅವರ ಅಜೇಯ ಇನಿಂಗ್ಸ್ ನೆರವಿನಿಂದ ಭಾರತ 19.2 ಓವರ್‌ಗಳಲ್ಲಿ 199 ರನ್‌ಗಳಿಸಿ 5 ವಿಕೆಟ್‌ಗಳ ಗೆಲುವು ಸಾಧಿಸಿತು. ನಿರೀಕ್ಷೆಯಂತೆ ಈ ಪಂದ್ಯದಲ್ಲಿ ಮಿಂಚಿದ ಸ್ಯಾಮ್ಸನ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಲಭಿಸಿತು.

ಪಂದ್ಯದ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, “ನಾನು ಕ್ರಿಕೆಟ್ ಆಡಲು ಆರಂಭಿಸಿದ ದಿನದಿಂದ ದೇಶಕ್ಕಾಗಿ ಆಡಬೇಕು ಎಂಬ ಕನಸು ಕಂಡಿದ್ದೆ. ಇಂತಹ ಒಂದು ಇನಿಂಗ್ಸ್ ಆಡುವುದು ನನ್ನ ಕನಸಾಗಿತ್ತು. ಇಂದು ಅದು ನನಸಾಗಿದೆ,” ಎಂದು ಸಂತಸ ವ್ಯಕ್ತಪಡಿಸಿದರು.

“ನನ್ನ ಕ್ರಿಕೆಟ್ ಪ್ರಯಾಣದಲ್ಲಿ ಹಲವಾರು ಏರಿಳಿತಗಳು ಇದ್ದವು. ಕೆಲವೊಮ್ಮೆ ನನ್ನನ್ನೇ ನಾನು ಪ್ರಶ್ನಿಸಿದ್ದೆ – ನಾನು ಇಂತಹ ಇನಿಂಗ್ಸ್ ಆಡಬಹುದೇ ಎಂದು. ಆದರೆ ನಾನು ನನ್ನ ಮೇಲೆ ನಂಬಿಕೆ ಇಟ್ಟುಕೊಂಡಿದ್ದೆ. ಇಂದು ಆ ನಂಬಿಕೆ ಫಲ ನೀಡಿದೆ. ಇಂತಹ ಅವಕಾಶ ನೀಡಿದ ದೇವರಿಗೆ ಧನ್ಯವಾದಗಳು,” ಎಂದು ಅವರು ಹೇಳಿದರು.

ಸಂಜು ಸ್ಯಾಮ್ಸನ್ ಅವರ ಈ ಅದ್ಭುತ ಪ್ರದರ್ಶನದೊಂದಿಗೆ ಭಾರತ ತಂಡ ಟೂರ್ನಿಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

error: Content is protected !!