ಬೆಂಗಳೂರು: ಒಂದನೇ ತರಗತಿ ಪ್ರವೇಶಕ್ಕೆ ನಿಗದಿಪಡಿಸಿರುವ 6 ವರ್ಷದ ವಯಸ್ಸಿನ ಮಿತಿಯನ್ನು ಈ ವರ್ಷವೂ ಸಡಿಲಿಸಬೇಕು ಎಂದು ಪೋಷಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಪೋಷಕರು ಮತ್ತು ವಿದ್ಯಾರ್ಥಿಗಳು ಬೆಂಗಳೂರಿನ ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ, ಶಾಲಾ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರು. ಮಕ್ಕಳು ಪ್ಲಕಾರ್ಡ್‌ಗಳನ್ನು ಹಿಡಿದು ವಯಸ್ಸಿನ ಮಿತಿ ಸಡಿಲಿಸುವಂತೆ ಮನವಿ ಮಾಡಿದರು.
ಪೋಷಕರು ಮಾತನಾಡಿ, ಈ ವರ್ಷದ ದಾಖಲಾತಿಗೆ ಕನಿಷ್ಠ 90 ದಿನಗಳ ವಯಸ್ಸಿನ ಸಡಿಲಿಕೆ ನೀಡಬೇಕು ಎಂದು ಒತ್ತಾಯಿಸಿದರು. ವಯಸ್ಸಿನ ಮಿತಿ ಸಮಸ್ಯೆಯಿಂದ ರಾಜ್ಯದ ಸುಮಾರು 2.30 ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ರಾಜ್ಯ ಶಿಕ್ಷಣ ನೀತಿ (SEP) ಪ್ರಕಾರ 90 ದಿನಗಳ ಸಡಿಲಿಕೆ ನೀಡಲು ಅವಕಾಶವಿರುವುದರಿಂದ, ಈ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ ನಿಯಮ ಸಡಿಲಿಸಬೇಕು ಎಂದು ಪೋಷಕರು ಸರ್ಕಾರವನ್ನು ಕೋರಿದ್ದಾರೆ.
ಶಿಕ್ಷಣ ಇಲಾಖೆ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಪೋಷಕರು, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

