Home Blog Page 88

ಉತ್ತರ ಕರ್ನಾಟಕಕ್ಕೆ ಸಚಿವ ಸ್ಥಾನದಲ್ಲಿ ಪ್ರಾತಿನಿಧ್ಯ ಬೇಕು: ಯಲ್ಲಪ್ಪ ಎಚ್. ಬಾಬರಿ

ವಿಜಯಸಾಕ್ಷಿ ಸುದ್ದಿ, ಗದಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ರೋಣ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಹಾಗೂ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಆಗ್ರಹಿಸಿದ್ದಾರೆ.

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಿ.ಎಸ್. ಪಾಟೀಲರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದು, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪರಿಣಾಮಕಾರಿಯಾಗಿ ಪ್ರಸ್ತಾಪಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿರುವ ಯಲ್ಲಪ್ಪ ಬಾಬರಿ, “ಕ್ಷೇತ್ರದ ಜನರ ಆಶೋತ್ತರಗಳಿಗೆ ಸದಾ ಸ್ಪಂದಿಸುವ ನಾಯಕ ಜಿ.ಎಸ್. ಪಾಟೀಲರು. ಅವರ ಅನುಭವ ಮತ್ತು ಬದ್ಧತೆಯನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದರೆ ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯ ಸಿಗುತ್ತದೆ” ಎಂದು ಹೇಳಿದ್ದಾರೆ.

ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ದೊರೆತರೆ ರೋಣ ಕ್ಷೇತ್ರ ಮಾತ್ರವಲ್ಲದೆ ಇಡೀ ಗದಗ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂಬ ಅಭಿಪ್ರಾಯ ಕಾರ್ಯಕರ್ತರಲ್ಲಿ ವ್ಯಕ್ತವಾಗಿದೆ.

ನೀರಾವರಿ, ಕೃಷಿ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಜಿ.ಎಸ್. ಪಾಟೀಲರು ವಿಶೇಷ ಕಾಳಜಿ ಹೊಂದಿದ್ದು, ಅವರ ನೇತೃತ್ವದಿಂದ ಜಿಲ್ಲೆಗೆ ಹೆಚ್ಚಿನ ಯೋಜನೆಗಳು ಸಿಗುವ ವಿಶ್ವಾಸವಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.

“ಅನುಭವ, ಹಿರಿತನ ಮತ್ತು ಜನಪರ ಕಾಳಜಿಯನ್ನು ಪರಿಗಣಿಸಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು.”

ಯಲ್ಲಪ್ಪ ಎಚ್. ಬಾಬರಿ

ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್: ಹೋರಾಟಕ್ಕೆ ಸಿಕ್ಕ ಜಯ

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿರುವುದನ್ನು ಎಐಡಿಎಸ್ಓ (ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ) ಸ್ವಾಗತಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಎಐಡಿಎಸ್ಓ ಗದಗ ಜಿಲ್ಲಾ ಸಂಚಾಲಕಿ ಎಂ. ಶಾಂತಿ, “ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸಬೇಕು ಎಂಬ ಬೇಡಿಕೆಗೆ ದಶಕಗಳಿಂದ ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದರು. ಸರ್ಕಾರದ ಈ ಘೋಷಣೆ ವಿದ್ಯಾರ್ಥಿ ಹೋರಾಟಕ್ಕೆ ಸಂದ ಮಹತ್ವದ ಜಯವಾಗಿದೆ” ಎಂದು ತಿಳಿಸಿದ್ದಾರೆ.
ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತಲೇ, ಹೊಸ ಶೈಕ್ಷಣಿಕ ವರ್ಷದ ಆರಂಭದಿಂದಲೇ ಈ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಎಐಡಿಎಸ್ಓ ಸರ್ಕಾರವನ್ನು ಆಗ್ರಹಿಸಿದೆ.
ವಿದ್ಯಾರ್ಥಿಗಳ ಶಿಕ್ಷಣದ ಹಕ್ಕು ಹಾಗೂ ಸಂಚಾರದ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಎಂ. ಶಾಂತಿ ಮನವಿ ಮಾಡಿದ್ದಾರೆ.

ಶ್ರೀ ಕಾಳಿದಾಸ ಸಂಸ್ಥೆಗೆ ರಜತ ಕಿರೀಟ

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಬೆಳಕು ಹಂಚುತ್ತಾ 25 ವರ್ಷದ ಸಾರ್ಥಕ ಪಯಣ ಪೂರೈಸಿರುವ ಗದುಗಿನ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ಇದೀಗ ರಜತ ಮಹೋತ್ಸವದ ಸಂಭ್ರಮಕ್ಕೆ ಕಾಲಿಟ್ಟಿದೆ. 2002ರಲ್ಲಿ ಆರಂಭವಾದ ಸಂಸ್ಥೆ 2027ಕ್ಕೆ 25 ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷವನ್ನು “ರಜತೋತ್ಸವ ವರ್ಷ”ವನ್ನಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಜತ ಮಹೋತ್ಸವ ಸಮಿತಿ ಉಸ್ತುವಾರಿ ಡಾ. ಜಿ.ಬಿ. ಪಾಟೀಲ, ಜೂನ್ 7ರಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಅಮೃತ ಹಸ್ತದಿಂದ ರಜತ ಮಹೋತ್ಸವ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.
ಪ್ರಸ್ತುತ ಸಂಸ್ಥೆಯ ಅಡಿಯಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳು, ಮೆಟ್ರಿಕ್ ಪೂರ್ವ ಮತ್ತು ನಂತರದ ವಸತಿ ನಿಲಯಗಳು, ಮಹಿಳಾ ವಸತಿ ನಿಲಯ ಹಾಗೂ ಐಟಿಐ ಕಾಲೇಜುಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ವೈದ್ಯಕೀಯ, ವಿಜ್ಞಾನ-ತಂತ್ರಜ್ಞಾನ, ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಹಾಗೂ ಕೇಂದ್ರ ಪಠ್ಯಕ್ರಮದ ಶಾಲಾ-ಕಾಲೇಜುಗಳನ್ನು ಆರಂಭಿಸುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ನಿವೃತ್ತ ನ್ಯಾಯಾಧೀಶರಾದ ಎಸ್.ಜಿ. ಪಲ್ಲೇದ ಮಾತನಾಡಿ, ರಜತೋತ್ಸವದ ಅಂಗವಾಗಿ ಸಂಸ್ಥೆಯ ಸಾಕ್ಷ್ಯಚಿತ್ರದ ವಿಡಿಯೋ ಕ್ಲಿಪ್ ಬಿಡುಗಡೆಗೊಳ್ಳಲಿದ್ದು, ನೂತನ ಕಟ್ಟಡದ ಆವರಣದಲ್ಲಿ 25 ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಲಾಗುವುದು ಎಂದರು.
ಬಳಿಕ ಬಯಲು ಆಂಜನೇಯ ದೇವಸ್ಥಾನದ ಆವರಣದ ವೇದಿಕೆಯಲ್ಲಿ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಭಕ್ತ ಸಾಗರವನ್ನು ಉದ್ದೇಶಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು.
ರಜತೋತ್ಸವ ಕಾರ್ಯಕ್ರಮದಲ್ಲಿ ಸದ್ಭಾವನಾ ಪ್ರಶಸ್ತಿ ಪುರಸ್ಕೃತ ಹಿರಿಯ ಸಂತ-ರಾಜಕಾರಣಿ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ, ರಾಜ್ಯ ವಿದ್ಯುತ್ ನಿಗಮದ ನಿರ್ದೇಶಕ ಹಾಗೂ ಅಭಿಯಂತರರ ಸಂಘದ ಅಧ್ಯಕ್ಷ ಸಿ. ಬಸವಣ್ಣ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾದ ಚಂದ್ರಶೇಖರ ನುಗ್ಗಲಿ ಅವರನ್ನು ಸನ್ಮಾನಿಸಲಾಗುವುದು.
ರಜತೋತ್ಸವದ ಅಂಗವಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ 90 ಶೇಕಡಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
ಇದಲ್ಲದೆ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಯುವಜನರಿಗೆ ದೇಶಿ ಕ್ರೀಡೋತ್ಸವ, ಮಹಿಳಾ ಸಬಲೀಕರಣ ಕಾರ್ಯಕ್ರಮಗಳು, ಸಾಂಸ್ಕೃತಿಕ ಸ್ಪರ್ಧೆಗಳು, ಕಾನೂನು ಅರಿವು, ಅಪರಾಧ ತಡೆ ಜಾಗೃತಿ ಕಾರ್ಯಕ್ರಮಗಳು, ಸಾವಯವ ಕೃಷಿ ತರಬೇತಿ, ಉದ್ಯೋಗ ಮೇಳ, ವೃತ್ತಿ ಮಾರ್ಗದರ್ಶನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಶಿಬಿರಗಳನ್ನು ಆಯೋಜಿಸಲು ಯೋಜಿಸಲಾಗಿದೆ.
ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಜಾನಪದ ಜಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ವರ್ಷಪೂರ್ತಿ ನಡೆದ ಎಲ್ಲಾ ಚಟುವಟಿಕೆಗಳನ್ನು ಒಳಗೊಂಡ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಬಿ.ಬಿ. ಭಾವಿಕಟ್ಟಿ, ಫಕೀರಪ್ಪ ಹೆಬಸೂರ, ಆರ್.ಡಿ. ಕಡ್ಲಿಕೊಪ್ಪ, ನೀಲಕಂಠ ಮರಡಿ, ವೈ.ಬಿ. ಭಾನಾಪೂರ, ಆರ್.ಎಂ. ನಿಂಬನಾಯ್ಕ, ಎಸ್.ಡಿ. ಸಿಂಗಟಾಲಕೇರಿ, ಎಸ್.ಎಸ್. ಕರಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
 “ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಸಂಸ್ಥೆಯ ಮಹದಾಸೆ; ಶಿಕ್ಷಣದ ಜೊತೆಗೆ ಸಮಾಜಮುಖಿ ಮೌಲ್ಯಗಳನ್ನೂ ಬೆಳೆಸುವುದು ನಮ್ಮ ಗುರಿ”
ಡಾ. ಜಿ.ಬಿ. ಪಾಟೀಲ, ರಜತ ಮಹೋತ್ಸವ ಸಮಿತಿ ಉಸ್ತುವಾರಿ

ಪುರಸಭೆ ಮಳಿಗೆ ಟೆಂಡರ್ ವಿಳಂಬಕ್ಕೆ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪುರಸಭೆ ವ್ಯಾಪ್ತಿಯ ಹೊಸ ಬಸ್ ನಿಲ್ದಾಣದ ಎದುರಿನ ವಾಣಿಜ್ಯ ಮಳಿಗೆಗಳ ಗುತ್ತಿಗೆ ಅವಧಿ ಮೂರು ವರ್ಷಗಳ ಹಿಂದೆಯೇ ಮುಕ್ತಾಯಗೊಂಡಿದ್ದರೂ ಹೊಸ ಟೆಂಡರ್ ಪ್ರಕ್ರಿಯೆ ಆರಂಭಿಸದಿರುವುದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ತಕ್ಷಣ ಹೊಸ ಟೆಂಡರ್ ಕರೆಯದಿದ್ದರೆ ಜೂನ್ 9ರಿಂದ ಪುರಸಭೆ ಮಳಿಗೆಗಳ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಜಯ ಕರ್ನಾಟಕ ಸಂಘಟನೆ ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕು ಉಸ್ತುವಾರಿ ರಮೇಶ್ ಹಂಗನಕಟ್ಟಿ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ ಬಸವರಾಜ ಹಿರೇಮನಿ ಎಚ್ಚರಿಕೆ ನೀಡಿದರು.

ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಹೊಸ ಬಸ್ ನಿಲ್ದಾಣದ ಎದುರಿನ 19 ವಾಣಿಜ್ಯ ಮಳಿಗೆಗಳ ಗುತ್ತಿಗೆ ಅವಧಿ 30-03-2023ರಂದು ಅಂತ್ಯಗೊಂಡಿದೆ. ಈ ಕುರಿತು ಈ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು. ಅಂದಿನ ಮುಖ್ಯಾಧಿಕಾರಿಗಳು 15 ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರೂ, ಮೂರು ತಿಂಗಳು ಕಳೆದರೂ ಯಾವುದೇ ಕ್ರಮ ಜರುಗಿಲ್ಲ ಎಂದು ಆರೋಪಿಸಿದರು.

ಕೇವಲ ಅರ್ಜಿ ಸ್ವೀಕರಿಸಿರುವುದಾಗಿ ಹೇಳುವುದನ್ನು ಬಿಟ್ಟು ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಹೊಸ ಟೆಂಡರ್ ಕರೆಯದೆ ವಿಳಂಬ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2023ರಿಂದ 2026ರವರೆಗೆ ಪುರಸಭೆಯಲ್ಲಿ ಕಾರ್ಯನಿರ್ವಹಿಸಿದ ಮುಖ್ಯಾಧಿಕಾರಿಗಳ ಪಾತ್ರವನ್ನು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.

ಜೂನ್ 9ರಿಂದ ಪುರಸಭೆ ಮಳಿಗೆಗಳ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಸಂಘಟನೆಗಳು ಎಚ್ಚರಿಸಿವೆ.

ಬಳಿಕ ತಹಸೀಲ್ದಾರ ಧನಂಜಯ ಎಂ. ಹಾಗೂ ಪಿಎಸ್‌ಐ ನಾಗರಾಜ ಗಡದ ಅವರಿಗೆ ಸಹ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಭರಮಣ್ಣ ಶೇರಸೂರಿ, ಸುರೇಶ್ ಹಟ್ಟಿ, ಬಸಣ್ಣ ಮೆಲ್ಮುರಿ, ಮಂಜುನಾಥ ಮುಳಗುಂದ, ಮಹಾಂತೇಶ ಗುದ್ನಾಳ, ಮಹೇಶ್ ಸೂರಣಗಿ, ಸಂಜೀವ ಶೇರಸೂರಿ, ಮೈಲಾರಪ್ಪ ಹೆಗ್ಗಣವರ ಸೇರಿದಂತೆ ಎರಡೂ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

“ಪುರಸಭೆ ಮಳಿಗೆಗಳನ್ನು ಸುಪರ್ದಿಗೆ ಪಡೆದು ಹೊಸ ಟೆಂಡರ್ ಕರೆಯುವವರೆಗೆ ಹೋರಾಟ ಮುಂದುವರಿಯಲಿದೆ”

ಬಸವರಾಜ ಹಿರೇಮನಿ, ಜಿಲ್ಲಾ ಅಧ್ಯಕ್ಷರು

ತಂಬಾಕಿನ ‘ಟ್ರೆಂಡ್’ಗೆ ಯುವಜನತೆ ಬಲಿ

ವಿಜಯಸಾಕ್ಷಿ ಸುದ್ದಿ, ಗದಗ: ಆಕರ್ಷಕ ಪ್ಯಾಕಿಂಗ್‌, ಬಣ್ಣ, ಸುವಾಸನೆ ಮತ್ತು ಡಿಜಿಟಲ್ ಪ್ರಚಾರದ ಮೂಲಕ ಯುವಜನರನ್ನು ತಂಬಾಕು ವ್ಯಸನದ ಬಲೆಗೆ ಸೆಳೆಯುತ್ತಿರುವ ಕುರಿತು ಗದಗದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಗಂಭೀರ ಕಳವಳ ವ್ಯಕ್ತವಾಯಿತು.

“ಆಕರ್ಷಣೆಯನ್ನು ಬಹಿರಂಗಪಡಿಸುವುದು – ನಿಕೋಟಿನ್ ಮತ್ತು ತಂಬಾಕು ವ್ಯಸನವನ್ನು ಎದುರಿಸುವುದು” ಎಂಬ ಘೋಷವಾಕ್ಯದೊಂದಿಗೆ ಜೂನ್ 3ರಂದು ಜಿಲ್ಲಾ ಎಸ್.ವಿ.ಟಿ ಪ್ಯಾರ್ ಮೆಡಿಕಲ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಜಿಲ್ಲಾ ಎನ್‌ಸಿಡಿ ಘಟಕ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ದಿವಾಣಿ ನ್ಯಾಯಾಧೀಶ ಸಿ.ಎಸ್. ಶಿವನಗೌಡ್ರ, ತಂಬಾಕು ವ್ಯಸನದಿಂದ ಉಂಟಾಗುವ ರೋಗಗಳು ಹಾಗೂ ಸಾವುಗಳನ್ನು ನಿಯಂತ್ರಿಸಲು ನಿರಂತರ ಜಾಗೃತಿ ಕಾರ್ಯಕ್ರಮಗಳು ಅತ್ಯಗತ್ಯ ಎಂದು ಹೇಳಿದರು.

ಶಾಲೆ ಹಾಗೂ ಕಾಲೇಜುಗಳಲ್ಲಿ ತಂಬಾಕು ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಮೂಲಕವೇ ತಂಬಾಕು ಮುಕ್ತ ಯುವ ಪೀಳಿಗೆ ನಿರ್ಮಾಣ ಸಾಧ್ಯ ಎಂದು ತಿಳಿಸಿದರು. ಜೊತೆಗೆ ತಂಬಾಕು ನಿಯಂತ್ರಣ ಕಾಯ್ದೆ (ಕೋಟ್ಪಾ-2003) ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಬೇಕೆಂದು ಅಭಿಪ್ರಾಯಪಟ್ಟರು.

ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೀತ್ ಖೋನಾ ಮಾತನಾಡಿ, ತಂಬಾಕು ಉತ್ಪನ್ನಗಳನ್ನು ವಿವಿಧ ಬಣ್ಣ, ಫ್ಲೇವರ್, ಸುವಾಸನೆ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಯುವಜನರನ್ನು ಸೆಳೆಯುವ ರೀತಿಯಲ್ಲಿ ಮಾರುಕಟ್ಟೆಗೆ ತರಲಾಗುತ್ತಿದೆ ಎಂದು ಹೇಳಿದರು.

ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು ಸೇರಿದಂತೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಅವರು ಎಚ್ಚರಿಸಿದರು.

ಜಿಲ್ಲಾ ಆಸ್ಪತ್ರೆಯ ರೂಂ ನಂ.189ರಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಉಚಿತ ಆಪ್ತ ಸಮಾಲೋಚನೆ ಹಾಗೂ ಔಷಧೋಪಚಾರ ಸೇವೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಎಸ್.ವಿ.ಟಿ ಪ್ಯಾರ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ವಿನಯ ಕುಬಸದ್ ಮಾತನಾಡಿ, ಇಂತಹ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅತ್ಯಂತ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಈ ಮಾಹಿತಿಯನ್ನು ಕುಟುಂಬ ಹಾಗೂ ಸಮಾಜಕ್ಕೆ ತಲುಪಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ್ ಚವ್ಹಾಣ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಗೋಪಾಲ ಸುರಪುರ, ಬಸಮ್ಮ ಚಿತ್ತರಗಿ, ರೇಷ್ಮಾ ಎನ್. ನದಾಫ್, ಪಂಪಾಮತಿ, ವಿರೇಶ ಮದಕಟ್ಟಿ, ಶಿವಕುಮಾರ ಬಗಾಡೆ ಹಾಗೂ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಎಂ. ರಬ್ಬನಗೌಡ ನಿರೂಪಿಸಿದರು.

ಶಾಲೆ ಸುತ್ತ ತಂಬಾಕು ಮಾರಾಟ ಕಂಡರೆ 112ಕ್ಕೆ ಕರೆ

ಉಪ ಪೊಲೀಸ್ ವರಿಷ್ಠಾಧಿಕಾರಿ ಎಂ.ಐ. ಸಜ್ಜನವರ ಮಾತನಾಡಿ, ಶಾಲೆಗಳ ಸುತ್ತಮುತ್ತ 100 ಗಜ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಕಂಡುಬಂದಲ್ಲಿ ಅಥವಾ ಕೋಟ್ಪಾ ಕಾಯ್ದೆ ಉಲ್ಲಂಘನೆಯಾದಲ್ಲಿ 112ಕ್ಕೆ ಕರೆ ಮಾಡಿದರೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಡ್ರಗ್ ಫ್ರೀ ಆ್ಯಪ್ ಮೂಲಕ ಕಾನೂನುಬಾಹಿರ ಮಾದಕ ವಸ್ತುಗಳ ಬಳಕೆ, ಸಂಗ್ರಹಣೆ ಹಾಗೂ ಉತ್ಪಾದನೆ ಕುರಿತು ಸಾರ್ವಜನಿಕರು ದೂರು ನೀಡಬಹುದಾಗಿದೆ ಎಂದು ಹೇಳಿದರು.

“ನಿಕೋಟಿನ್ ದೇಹದ ಪ್ರತಿಯೊಂದು ಅಂಗದ ಮೇಲೂ ದುಷ್ಪರಿಣಾಮ ಬೀರುತ್ತದೆ; ತಂಬಾಕು ಕ್ಯಾನ್ಸರ್ ಸೇರಿದಂತೆ ಮಾರಕ ರೋಗಗಳಿಗೆ ಕಾರಣ”

 ಡಾ. ಪ್ರೀತ್ ಖೋನಾ, ತಾಲೂಕು ಆರೋಗ್ಯಾಧಿಕಾರಿ

“ತಂಬಾಕು ವ್ಯಸನದ ವಿರುದ್ಧ ಜಾಗೃತಿ ಮೂಡಿಸದಿದ್ದರೆ ಮುಂದಿನ ಪೀಳಿಗೆಯ ಆರೋಗ್ಯವೇ ಅಪಾಯಕ್ಕೆ ಸಿಲುಕಲಿದೆ”

 ಸಿ.ಎಸ್. ಶಿವನಗೌಡ್ರ, ಹಿರಿಯ ದಿವಾಣಿ ನ್ಯಾಯಾಧೀಶರು

ಅಧಿಕ ಯೂರಿಯಾ ಬಳಕೆ ಅಪಾಯದ ಗಂಟೆ

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ರೈತರು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದರ ಜೊತೆಗೆ ಮಣ್ಣಿನ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ರಸಗೊಬ್ಬರಗಳನ್ನು ವೈಜ್ಞಾನಿಕ ರೀತಿಯಲ್ಲಿ ಹಾಗೂ ಶಿಫಾರಸು ಮಾಡಿದ ಪ್ರಮಾಣದಲ್ಲಿ ಬಳಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕರೆ ನೀಡಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ ಯೂರಿಯಾ ಬಳಕೆ ಶಿಫಾರಸು ಪ್ರಮಾಣಕ್ಕಿಂತ ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಮಣ್ಣಿನ ಫಲವತ್ತತೆ ಕುಸಿತ, ಪೋಷಕಾಂಶಗಳ ಅಸಮತೋಲನ, ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ ಹಾಗೂ ಪರಿಸರ ಮಾಲಿನ್ಯದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಆದ್ದರಿಂದ ರೈತರು ಮಣ್ಣಿನ ಪರೀಕ್ಷೆ ಆಧಾರಿತ ಪೋಷಕಾಂಶ ನಿರ್ವಹಣೆಯನ್ನು ಅನುಸರಿಸಬೇಕು ಎಂದು ತಿಳಿಸಿದ್ದಾರೆ.

ಮಣ್ಣಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಗೋಮಯ ಗೊಬ್ಬರ, ಕಾಂಪೋಸ್ಟ್, ವರ್ಮಿ ಕಾಂಪೋಸ್ಟ್, ಹಸಿರು ಗೊಬ್ಬರ, ಜೈವಿಕ ಗೊಬ್ಬರ ಹಾಗೂ ಬೆಳೆ ಅವಶೇಷಗಳಿಂದ ತಯಾರಿಸಲಾದ ಸಾವಯವ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ.

ಸಾವಯವ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಸಾವಯವ ಇಂಗಾಲದ ಪ್ರಮಾಣ ಹೆಚ್ಚಾಗಿ, ಮಣ್ಣಿನ ರಚನೆ, ನೀರು ಹಿಡಿದಿಡುವ ಸಾಮರ್ಥ್ಯ ಹಾಗೂ ಸೂಕ್ಷ್ಮಜೀವಿಗಳ ಚಟುವಟಿಕೆ ಉತ್ತಮಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ರೈತರು “ಸರಿಯಾದ ಗೊಬ್ಬರ, ಸರಿಯಾದ ಪ್ರಮಾಣ, ಸರಿಯಾದ ಸಮಯ ಹಾಗೂ ಸರಿಯಾದ ವಿಧಾನ” ಎಂಬ ತತ್ವದ ಅನುಸರಣೆಯಿಂದ ಗೊಬ್ಬರ ಬಳಕೆಯ ದಕ್ಷತೆ ಹೆಚ್ಚುವುದರ ಜೊತೆಗೆ ಉತ್ಪಾದನಾ ವೆಚ್ಚವೂ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ನ್ಯಾನೋ ಯೂರಿಯಾ ಬಳಕೆಯನ್ನು ಉತ್ತೇಜಿಸಲಾಗುತ್ತಿದ್ದು, ಇದರ ಬಳಕೆಯಿಂದ ಸಸ್ಯಗಳಿಗೆ ಸಾರಜನಕ ಪೋಷಕಾಂಶ ಪರಿಣಾಮಕಾರಿಯಾಗಿ ದೊರೆಯುತ್ತದೆ. ರಾಸಾಯನಿಕ ಯೂರಿಯಾ ಮೇಲಿನ ಅವಲಂಬನೆ ಕಡಿಮೆಯಾಗುವುದರ ಜೊತೆಗೆ ಗೊಬ್ಬರ ಬಳಕೆಯ ದಕ್ಷತೆ ಹೆಚ್ಚುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಇಲಾಖೆಯ ಶಿಫಾರಸಿನಂತೆ ನ್ಯಾನೋ ಯೂರಿಯಾವನ್ನು ಬಳಸುವಂತೆ ರೈತರಿಗೆ ಸಲಹೆ ನೀಡಲಾಗಿದೆ.

ಬೆಳೆವಾರು ಶಿಫಾರಸು ಮಾಡಿದ ಪ್ರಮಾಣದಲ್ಲಿ ಮಾತ್ರ ಗೊಬ್ಬರ ಬಳಸಬೇಕು. ರಸಗೊಬ್ಬರಗಳ ಜೊತೆಗೆ ಸಾವಯವ ಗೊಬ್ಬರ ಹಾಗೂ ಜೈವಿಕ ಗೊಬ್ಬರಗಳ ಸಮಗ್ರ ಬಳಕೆಗೆ ಆದ್ಯತೆ ನೀಡಬೇಕು ಎಂದು ತಿಳಿಸಲಾಗಿದೆ.

ಕೃಷಿ ಇಲಾಖೆ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ತಾಂತ್ರಿಕ ಸಲಹೆಗಳನ್ನು ಪಡೆದು ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ರೈತರಿಗೆ ಅಗತ್ಯ ಪ್ರಮಾಣದ ಗೊಬ್ಬರ ಲಭ್ಯವಾಗುವಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಜಿಲ್ಲೆಯ ಸಮಸ್ತ ರೈತರು ಸಮತೋಲಿತ ರಸಗೊಬ್ಬರ ಬಳಕೆ, ಸಾವಯವ ಕೃಷಿ ಪದ್ಧತಿಗಳ ಅಳವಡಿಕೆ ಹಾಗೂ ನ್ಯಾನೋ ಯೂರಿಯಾ ಬಳಕೆಯ ಮೂಲಕ ಮಣ್ಣಿನ ಆರೋಗ್ಯವನ್ನು ಕಾಪಾಡಿ ಸುಸ್ಥಿರ ಕೃಷಿಯತ್ತ ಹೆಜ್ಜೆ ಇಡಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕರೆ ನೀಡಿದ್ದಾರೆ.

“ಮಣ್ಣಿನ ಆರೋಗ್ಯವೇ ಕೃಷಿಯ ಆಧಾರ… ಸಮತೋಲಿತ ಗೊಬ್ಬರ ಬಳಕೆ ನಮ್ಮ ಜವಾಬ್ದಾರಿ”

ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

ಕಾಳಸಂತೆ ಕಂಡರೆ ಮಾಹಿತಿ ನೀಡಿ

ಕಾಳಸಂತೆ, ಅಕ್ರಮ ಸಂಗ್ರಹಣೆ ಅಥವಾ ಅಧಿಕ ದರದಲ್ಲಿ ಗೊಬ್ಬರ ಮಾರಾಟದಂತಹ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಕೃಷಿ ಇಲಾಖೆ ಅಥವಾ ಜಿಲ್ಲಾ ಆಡಳಿತದ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಅಭಿವೃದ್ಧಿಯ ಹರಿಕಾರನಿಗೆ ಅನ್ಯಾಯ? ಹೆಚ್.ಕೆ. ಕೈಬಿಟ್ಟ ಹೈಕಮಾಂಡ್ ವಿರುದ್ಧ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸಚಿವ ಸಂಪುಟದ ಮೊದಲ ಪಟ್ಟಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ, ಗದುಗಿನ ಅಭಿವೃದ್ಧಿಯ ಹರಿಕಾರ ಹಾಗೂ ಮಾಜಿ ಸಚಿವ ಹೆಚ್.ಕೆ. ಪಾಟೀಲರಿಗೆ ಸ್ಥಾನ ನೀಡದಿರುವುದು ಗದಗ ಕಾಂಗ್ರೆಸ್ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಕಾಂಗ್ರೆಸ್ ಮುಖಂಡ ಸೈಯದ್ ಖಾಲಿದ್ ಕೊಪ್ಪಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ ಪ್ರಮಾಣ ವಚನ ಸ್ವೀಕರಿಸಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಆದರೆ ಪ್ರಾಮಾಣಿಕ, ಅನುಭವಿ ಹಾಗೂ ದಕ್ಷ ಆಡಳಿತಗಾರರಾದ ಹೆಚ್.ಕೆ. ಪಾಟೀಲರನ್ನು ಮೊದಲ ಸಚಿವ ಸಂಪುಟ ಪಟ್ಟಿಯಿಂದ ಹೊರಗಿಡಲಾಗಿದೆ. ಇದು ಗದಗ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ಭಾರೀ ಶಾಕ್ ನೀಡಿದೆ” ಎಂದು ಹೇಳಿದ್ದಾರೆ.

ಕಾನೂನು ಹಾಗೂ ಪ್ರವಾಸೋದ್ಯಮ ಸಚಿವರಾಗಿ ರಾಜ್ಯ ಮಟ್ಟದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಹೆಚ್.ಕೆ. ಪಾಟೀಲರು, ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅನೇಕ ಜನಪರ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಜಾರಿಗೆ ತಂದಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ನಾಯಕರನ್ನು ಕಡೆಗಣಿಸಿರುವುದು ಬೇಸರ ಮೂಡಿಸಿದೆ ಎಂದು ಖಾಲಿದ್ ಕೊಪ್ಪಳ ಹೇಳಿದ್ದಾರೆ.

“ಪಕ್ಷ ಸಂಕಷ್ಟದಲ್ಲಿದ್ದಾಗ ನಿಷ್ಠೆಯಿಂದ ದುಡಿದ ಹಿರಿಯ ನಾಯಕರಿಗೆ ನ್ಯಾಯ ಸಿಗಲೇಬೇಕು. ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಹೆಚ್.ಕೆ. ಪಾಟೀಲರಿಗೆ ಅವಕಾಶ ನೀಡುವ ಮೂಲಕ ಹೈಕಮಾಂಡ್ ತಪ್ಪು ಸರಿಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.

“ಒಂದು ವೇಳೆ ಹೆಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡದಿದ್ದರೆ, ಅಲ್ಪಸಂಖ್ಯಾತ ಘಟಕದಲ್ಲಿನ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಸೈಯದ್ ಖಾಲಿದ್ ಕೊಪ್ಪಳ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌: ಸರ್ಕಾರದಿಂದ ಅಧಿಕೃತ ಆದೇಶ!

ಬೆಂಗಳೂರು: ರಾಜ್ಯದ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿರುವ ಕರ್ನಾಟಕ ಸರ್ಕಾರ, ಉಚಿತ ಬಸ್‌ ಪಾಸ್‌ ಯೋಜನೆಯನ್ನು ಜಾರಿಗೊಳಿಸುವ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಘೋಷಿಸಲಾಗಿದ್ದ ಈ ಮಹತ್ವಾಕಾಂಕ್ಷಿ ಯೋಜನೆಗೆ ಇದೀಗ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೂನ್ 3ರಂದು ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಹಲವು ಜನಪರ ತೀರ್ಮಾನಗಳನ್ನು ಪ್ರಕಟಿಸಿದ್ದರು. ಅವುಗಳಲ್ಲಿ ರಾಜ್ಯದ ಎಲ್ಲಾ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಯೋಜನೆಯೂ ಪ್ರಮುಖವಾಗಿತ್ತು. ಈ ಘೋಷಣೆಗೆ ಅನುಗುಣವಾಗಿ ಸರ್ಕಾರ ಇದೀಗ ಅಧಿಕೃತ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶದ ಪ್ರಕಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯೂಕೆಆರ್‌ಟಿಸಿ) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ವ್ಯಾಪ್ತಿಯ ಬಸ್‌ಗಳಲ್ಲಿ ಸಂಚರಿಸುವ ರಾಜ್ಯದ ಎಲ್ಲಾ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಸೌಲಭ್ಯ ಒದಗಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ.

ಈ ಯೋಜನೆಯಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಸಂಚಾರ ನಡೆಸುವುದು ಇನ್ನಷ್ಟು ಸುಲಭವಾಗಲಿದೆ. ಪ್ರತಿದಿನ ಶಾಲೆ ಮತ್ತು ಕಾಲೇಜುಗಳಿಗೆ ತೆರಳಲು ಖರ್ಚಾಗುವ ಪ್ರಯಾಣ ವೆಚ್ಚದಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆರ್ಥಿಕ ನೆರವು ದೊರೆಯಲಿದೆ. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ.

ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್. ಅವರು ಹೊರಡಿಸಿರುವ ಆದೇಶದಲ್ಲಿ, ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿವರವಾದ ಮಾರ್ಗಸೂಚಿಗಳು, ಅರ್ಹತಾ ಮಾನದಂಡಗಳು, ಪಾಸ್‌ ವಿತರಣಾ ವಿಧಾನ, ಷರತ್ತುಗಳು ಮತ್ತು ನಿಬಂಧನೆಗಳನ್ನು ಪ್ರತ್ಯೇಕ ಆದೇಶದ ಮೂಲಕ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ರಾಜ್ಯ ಸರ್ಕಾರದ ಈ ನಿರ್ಧಾರವನ್ನು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ವಲಯದವರು ಸ್ವಾಗತಿಸಿದ್ದು, ಶಿಕ್ಷಣಕ್ಕೆ ಉತ್ತೇಜನ ನೀಡುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ಉಚಿತ ಬಸ್‌ ಪಾಸ್‌ ಯೋಜನೆ ಜಾರಿಗೆ ಬಂದರೆ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ನೇರ ಪ್ರಯೋಜನವಾಗಲಿದ್ದು, ಶಿಕ್ಷಣದ ಪ್ರವೇಶವನ್ನು ಮತ್ತಷ್ಟು ಸುಗಮಗೊಳಿಸುವ ನಿರೀಕ್ಷೆ ವ್ಯಕ್ತವಾಗಿದೆ.

 

22 ದಿನಗಳಲ್ಲಿ ಮಂತ್ರಾಲಯ ರಾಯರ ಹುಂಡಿಗೆ ₹4.35 ಕೋಟಿ ಕಾಣಿಕೆ! ಭಕ್ತರ ಭಕ್ತಿ ವೈಭವ

ರಾಯಚೂರು: ಕಲಿಯುಗ ಕಾಮಧೇನು ಎಂದೇ ಖ್ಯಾತಿ ಪಡೆದಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರ ಭಕ್ತಿ ವೈಭವ ಮತ್ತೊಮ್ಮೆ ಅನಾವರಣಗೊಂಡಿದೆ.

ಮಠದಲ್ಲಿ ಕಳೆದ 22 ದಿನಗಳ ಅವಧಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆ ಹುಂಡಿಗಳ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಒಟ್ಟು ₹4.35 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.

ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾಗಿದ್ದ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡಿ ಗುರುರಾಯರ ದರ್ಶನ ಪಡೆದಿದ್ದರು. ಪರಿಣಾಮವಾಗಿ ಅಲ್ಪ ಅವಧಿಯಲ್ಲೇ ಹುಂಡಿಗೆ ಕೋಟ್ಯಂತರ ರೂಪಾಯಿ ಕಾಣಿಕೆ ಹರಿದು ಬಂದಿದೆ.

ಹುಂಡಿ ಎಣಿಕೆ ವೇಳೆ ಒಟ್ಟು ₹4,25,25,136 ಕಾಣಿಕೆ ಸಂಗ್ರಹವಾಗಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ ₹4,19,97,861 ಮೌಲ್ಯದ ಕರೆನ್ಸಿ ನೋಟುಗಳು ಹಾಗೂ ₹15,27,275 ಮೌಲ್ಯದ ನಾಣ್ಯಗಳು ಸೇರಿವೆ. ಇದರ ಜೊತೆಗೆ ಭಕ್ತರು 46 ಗ್ರಾಂ ಚಿನ್ನ ಮತ್ತು 750 ಗ್ರಾಂ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ.

ಮಂತ್ರಾಲಯ ರಾಯರ ಮಠದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಕರಸೇವಕರು ಹಾಗೂ ಭಜನಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು. ಎಣಿಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗಿದ್ದು, ಅಧಿಕಾರಿಗಳ ಸಮ್ಮುಖದಲ್ಲಿ ಸಂಪೂರ್ಣ ಕಾರ್ಯ ಮುಗಿಯಿತು.

ಈ ವೇಳೆ ಕರ್ನೂಲು ಜಿಲ್ಲಾ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತ ಸುಧಾಕರ ರೆಡ್ಡಿ ಸೇರಿದಂತೆ ಶ್ರೀಮಠದ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದು ಎಣಿಕೆ ಕಾರ್ಯದ ಮೇಲ್ವಿಚಾರಣೆ ನಡೆಸಿದರು.

ಭಕ್ತರ ನಂಬಿಕೆ ಮತ್ತು ಗುರುರಾಯರ ಮೇಲಿನ ಅಪಾರ ಭಕ್ತಿಯ ಪ್ರತೀಕವಾಗಿ ಈ ಬಾರಿ ಹುಂಡಿಗೆ ದಾಖಲೆ ಪ್ರಮಾಣದ ಕಾಣಿಕೆ ಹರಿದು ಬಂದಿರುವುದು ಮಠದ ಆಡಳಿತ ಮಂಡಳಿಯಲ್ಲಿ ಸಂತಸ ಮೂಡಿಸಿದೆ.

 

ನೈಋತ್ಯ ರೈಲ್ವೆ ಪೊಲೀಸರ ಭರ್ಜರಿ ಬೇಟೆ: 49 ಮಕ್ಕಳ ರಕ್ಷಣೆ, ಲಕ್ಷಾಂತರ ಮೌಲ್ಯದ ಅಕ್ರಮ ವಸ್ತು ಜಪ್ತಿ

ಹುಬ್ಬಳ್ಳಿ: ಪ್ರಯಾಣಿಕರ ಸುರಕ್ಷತೆ, ರೈಲ್ವೆ ಆವರಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯ ರೈಲ್ವೆ ರಕ್ಷಣಾ ಪಡೆ ಮೇ 2026ರ ಅವಧಿಯಲ್ಲಿ ಗಮನಾರ್ಹ ಸಾಧನೆ ದಾಖಲಿಸಿದೆ.

ಮಕ್ಕಳ ರಕ್ಷಣೆ, ಕಳೆದುಹೋದ ವಸ್ತುಗಳ ಪತ್ತೆ, ಮಾದಕ ವಸ್ತುಗಳು ಹಾಗೂ ಅಕ್ರಮ ಮದ್ಯ ಸಾಗಣೆ ವಿರುದ್ಧ ಕೈಗೊಂಡ ಕಾರ್ಯಾಚರಣೆಗಳ ಮೂಲಕ ಆರ್‌ಪಿಎಫ್ ತನ್ನ ಕಾರ್ಯಕ್ಷಮತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಆರ್‌ಪಿಎಫ್‌ನ ‘ನನ್ಹೆ ಫರಿಷ್ಠೇ’ ಅಭಿಯಾನದಡಿ ಮೇ ತಿಂಗಳಲ್ಲಿ 12 ಬಾಲಕಿಯರು ಸೇರಿದಂತೆ ಒಟ್ಟು 49 ಮಕ್ಕಳನ್ನು ರಕ್ಷಿಸಲಾಗಿದೆ. ರೈಲು ನಿಲ್ದಾಣಗಳು ಹಾಗೂ ರೈಲುಗಳಲ್ಲಿ ಅಪಾಯದ ಪರಿಸ್ಥಿತಿಯಲ್ಲಿದ್ದ, ದಾರಿ ತಪ್ಪಿದ್ದ ಅಥವಾ ಕಾಣೆಯಾಗಿದ್ದ ಮಕ್ಕಳನ್ನು ಗುರುತಿಸಿ ಸುರಕ್ಷಿತವಾಗಿ ರಕ್ಷಿಸಿ, ಸಂಬಂಧಿತ ಇಲಾಖೆಗಳು ಹಾಗೂ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸಿ ಪುನರ್ವಸತಿ ಕಲ್ಪಿಸಲಾಗಿದೆ. ಈ ಕಾರ್ಯಾಚರಣೆ ಮಕ್ಕಳ ಸುರಕ್ಷತೆಗಾಗಿ ಆರ್‌ಪಿಎಫ್‌ನ ಬದ್ಧತೆಯನ್ನು ತೋರಿಸಿದೆ.

ಇದೇ ಅವಧಿಯಲ್ಲಿ ರೈಲು ಪ್ರಯಾಣಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಚಿನ್ನಾಭರಣ ಸೇರಿದಂತೆ ವಿವಿಧ ಅಮೂಲ್ಯ ವಸ್ತುಗಳನ್ನು ಪತ್ತೆಹಚ್ಚುವಲ್ಲಿಯೂ ಆರ್‌ಪಿಎಫ್ ಯಶಸ್ವಿಯಾಗಿದೆ. ಒಟ್ಟು ₹50.34 ಲಕ್ಷ ಮೌಲ್ಯದ ಕಳೆದುಹೋದ ವಸ್ತುಗಳನ್ನು ಪತ್ತೆಹಚ್ಚಿ ಅವುಗಳ ಮಾಲೀಕರಿಗೆ ಹಿಂದಿರುಗಿಸಲಾಗಿದೆ. ಇದರಿಂದ ಪ್ರಯಾಣಿಕರಲ್ಲಿ ರೈಲ್ವೆ ಭದ್ರತಾ ಸಿಬ್ಬಂದಿಯ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚಿದೆ.

ಮಾದಕ ವಸ್ತುಗಳ ವಿರುದ್ಧವೂ ಆರ್‌ಪಿಎಫ್ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿದೆ. ವಿವಿಧ ತಪಾಸಣೆ ಹಾಗೂ ದಾಳಿಗಳ ವೇಳೆ ₹63.80 ಲಕ್ಷ ಮೌಲ್ಯದ ಗಾಂಜಾ ಮತ್ತು ಅಕ್ರಮ ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ಅಕ್ರಮ ಮದ್ಯ ಸಾಗಣೆ ವಿರುದ್ಧ ಕೈಗೊಂಡ ಕಾರ್ಯಾಚರಣೆಯಲ್ಲಿ ₹83.31 ಲಕ್ಷ ಮೌಲ್ಯದ 1,458 ಮದ್ಯದ ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಹಲವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ‘ಆಪರೇಷನ್ ಡಿಗ್ನಿಟಿ’ ಅಡಿಯಲ್ಲಿ ಸಂಕಷ್ಟದಲ್ಲಿದ್ದ ಮೂವರು ವೃದ್ಧರನ್ನು ರಕ್ಷಿಸಿ ಅಗತ್ಯ ನೆರವು ಹಾಗೂ ಪುನರ್ವಸತಿ ಸೌಲಭ್ಯ ಒದಗಿಸಲಾಗಿದೆ. ನಿರ್ಗತಿಕರು, ಹಿರಿಯ ನಾಗರಿಕರು ಹಾಗೂ ನೆರವಿನ ಅಗತ್ಯವಿರುವ ವ್ಯಕ್ತಿಗಳ ರಕ್ಷಣೆಗೆ ಆರ್‌ಪಿಎಫ್ ವಿಶೇಷ ಆದ್ಯತೆ ನೀಡುತ್ತಿದೆ.

ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರತಿದಿನ 36ರಿಂದ 40 ಎಕ್ಸ್‌ಪ್ರೆಸ್ ಮತ್ತು ವಿಶೇಷ ರೈಲುಗಳಿಗೆ ಆರ್‌ಪಿಎಫ್ ಸಿಬ್ಬಂದಿ ಭದ್ರತಾ ಬೆಂಗಾವಲು ಒದಗಿಸುತ್ತಿದ್ದಾರೆ. ರೈಲುಗಳಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವುದು, ಮಹಿಳೆಯರು ಹಾಗೂ ಹಿರಿಯ ನಾಗರಿಕರ ಸುರಕ್ಷತೆ ಖಚಿತಪಡಿಸುವುದು ಮತ್ತು ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸುವುದು ಈ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ.

ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಆರ್‌ಪಿಎಫ್ ಸಿಬ್ಬಂದಿ ಕೈಗೊಂಡಿರುವ ಈ ವಿವಿಧ ಕಾರ್ಯಾಚರಣೆಗಳು ಪ್ರಯಾಣಿಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ನೀಡಲಾಗುತ್ತಿರುವ ಮಹತ್ವವನ್ನು ಪ್ರತಿಬಿಂಬಿಸುತ್ತವೆ. ಆರ್‌ಪಿಎಫ್ ಸಿಬ್ಬಂದಿಯ ಸೇವಾ ಮನೋಭಾವ, ಕಾರ್ಯನಿಷ್ಠೆ ಮತ್ತು ಅಪರಾಧ ನಿಯಂತ್ರಣ ಕ್ರಮಗಳನ್ನು ನೈಋತ್ಯ ರೈಲ್ವೆ ಆಡಳಿತ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೇ ರೀತಿಯ ಕಾರ್ಯಾಚರಣೆಗಳು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಮುಂದುವರಿಯಲಿವೆ ಎಂದು ತಿಳಿಸಿದೆ.

error: Content is protected !!