Home Blog Page 88

ಅಪ್ರಾಪ್ತರ ಮದ್ಯಪಾನಕ್ಕೆ ಹೈಕೋರ್ಟ್ ಬ್ರೇಕ್: ವಯಸ್ಸಿನ ಪರಿಶೀಲನೆ ಕಡ್ಡಾಯ, ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

ಬೆಂಗಳೂರು: ಪಬ್ ಮತ್ತು ಬ್ರೀವರಿಗಳಲ್ಲಿ ಅಪ್ರಾಪ್ತರು ಮದ್ಯಪಾನ ಮಾಡುವ ಪ್ರವೃತ್ತಿಗೆ ಕರ್ನಾಟಕ ಹೈಕೋರ್ಟ್ ಗಂಭೀರ ಕಡಿವಾಣ ಹಾಕಿದೆ. ಅಪ್ರಾಪ್ತರನ್ನು ಮದ್ಯಪಾನದ ವ್ಯಸನದಿಂದ ರಕ್ಷಿಸುವುದು ಆಡಳಿತ ಮಂಡಳಿಯ ನೈತಿಕ ಹಾಗೂ ಕಾನೂನುಬದ್ಧ ಕರ್ತವ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಬ್ರೀವರಿಗಳಿಗೆ ಗ್ರಾಹಕರು ಪ್ರವೇಶಿಸುವಾಗಲೇ ಅವರ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಸೂಚಿಸಿದೆ. ಜೊತೆಗೆ ಮದ್ಯ ಸರಬರಾಜು ಮಾಡುವ ಸಂದರ್ಭದಲ್ಲೂ ಸಿಬ್ಬಂದಿಗಳು ಎಚ್ಚರಿಕೆ ವಹಿಸಬೇಕು ಎಂದು ಆದೇಶಿಸಿದೆ.

“ಅಪ್ರಾಪ್ತರಿಗೆ ಮದ್ಯ ನೀಡಲಾಗುವುದಿಲ್ಲ” ಎಂಬ ಎಚ್ಚರಿಕೆ ಫಲಕಗಳನ್ನು ಪ್ರತಿಯೊಂದು ಬ್ರೀವರಿಯಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು. ಅಪ್ರಾಪ್ತರು ಕದ್ದುಮುಚ್ಚಿ ಮದ್ಯಪಾನ ಮಾಡಿದರೂ ಸಹ, ಅದರ ಹೊಣೆಗಾರಿಕೆ ಸಂಪೂರ್ಣವಾಗಿ ಬ್ರೀವರಿ ಆಡಳಿತ ಮಂಡಳಿಯ ಮೇಲಿದೆ ಎಂದು ನ್ಯಾಯಾಲಯ ಹೇಳಿದೆ. ಈ ಜವಾಬ್ದಾರಿಯಿಂದ ಮಾಲೀಕರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದೇ ವೇಳೆ, ರಾಜರಾಜೇಶ್ವರಿ ನಗರದ ಬ್ರೀವರಿ ಮಾಲೀಕ ವಿ. ಚಿಟ್ಟಿಬಾಬು ವಿರುದ್ಧ ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡಿದ ಆರೋಪದಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಅಪ್ರಾಪ್ತರನ್ನು ಮದ್ಯಪಾನದ ದುಷ್ಪರಿಣಾಮಗಳಿಂದ ಕಾಪಾಡುವುದು ಸಮಾಜದ ಹಿತದೃಷ್ಟಿಯಿಂದ ಅತ್ಯಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮೈಸೂರು ವಿವಿ ಕಾರ್ಯಕ್ರಮ ರದ್ದು: ರಾಜ್ಯ ಸರ್ಕಾರ ವಿರುದ್ಧ ವಿಜಯೇಂದ್ರ ಆಕ್ರೋಶ

ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಶೈಕ್ಷಣಿಕ ಅಧಿವೇಶನ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ರದ್ದುಪಡಿಸಿರುವ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ಯಾಮ್ ಪ್ರಕಾಶ್ ಮುಖರ್ಜಿ ಫೌಂಡೇಶನ್ ವತಿಯಿಂದ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಅಧಿವೇಶನವನ್ನು ಆಯೋಜಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರ ಏಕಾಏಕಿ ಕಾರ್ಯಕ್ರಮವನ್ನು ರದ್ದುಪಡಿಸುವಂತೆ ಆದೇಶ ನೀಡಿದ್ದು, ಉಪಕುಲಪತಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

ಈ ಕ್ರಮವನ್ನು ಖಂಡಿಸಿದ ವಿಜಯೇಂದ್ರ, “ಇದು ದ್ವೇಷದ ರಾಜಕಾರಣ. ವಿಶ್ವವಿದ್ಯಾಲಯದಲ್ಲಿ ನಡೆಯುವ ಶೈಕ್ಷಣಿಕ ಕಾರ್ಯಕ್ರಮಕ್ಕೂ ತಡೆ ನೀಡುತ್ತಿರುವುದು ಸರಿಯಲ್ಲ” ಎಂದು ಹೇಳಿದ್ದಾರೆ.ಇದಲ್ಲದೆ, “ದ್ವೇಷ ಭಾಷಣದ ಬಗ್ಗೆ ಮಸೂದೆ ತರುವ ಸರ್ಕಾರವೇ ಇದೀಗ ಇಂತಹ ಕ್ರಮ ಕೈಗೊಳ್ಳುತ್ತಿದೆ. ಇದನ್ನೇ ದ್ವೇಷದ ರಾಜಕಾರಣವೆಂದು ಪರಿಗಣಿಸಬಹುದು” ಎಂದು ಟೀಕಿಸಿದರು.

ಶೈಕ್ಷಣಿಕ ಕ್ಷೇತ್ರದಲ್ಲಿಯೂ ರಾಜಕೀಯ ಹಸ್ತಕ್ಷೇಪ ಮಾಡುವುದು ರಾಜ್ಯ ಸರ್ಕಾರಕ್ಕೆ ಶೋಭೆ ತರಲ್ಲ ಎಂದು ಅಭಿಪ್ರಾಯಪಟ್ಟ ಅವರು, ಸಂಬಂಧಪಟ್ಟ ಸಚಿವರು ತಕ್ಷಣ ಮಧ್ಯಪ್ರವೇಶಿಸಿ, ಕಾರ್ಯಕ್ರಮ ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಹೈಕಮಾಂಡ್ ತೀರ್ಮಾನಿಸುವವರೆಗೂ ನಾನೇ ಸಿಎಂ: ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ಹೈಕಮಾಂಡ್ ತೀರ್ಮಾನ ಮಾಡುವವರೆಗೂ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪುನರುಚ್ಚರಿಸಿದರು.

ಬಜೆಟ್‌ಗೆ ಉತ್ತರಿಸುವ ವೇಳೆ ಸದನದಲ್ಲಿ ಡಿ.ಕೆ. ಶಿವಕುಮಾರ್ ಹೆಸರು ಹಾಗೂ ಸ್ಪೀಕರ್ ಯು.ಟಿ. ಖಾದರ್ ಸಂಬಂಧಿತ ವಿಚಾರಗಳನ್ನು ಪ್ರಸ್ತಾಪಿಸಿ ವಿಪಕ್ಷ ಸದಸ್ಯರು ಸಿಎಂಗೆ ಕಾಲೆಳೆಯಲು ಯತ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ನಮ್ಮಲ್ಲಿ ಎಲ್ಲ ಶಾಸಕರಿಗೂ ಸಿಎಂ ಆಗುವ ಅರ್ಹತೆ ಇದೆ. ಯಾರಾದರೂ ಸಿಎಂ ಆದರೂ ನನಗೆ ಸಂತೋಷವೇ” ಎಂದು ಹೇಳಿದರು.

“ಹೈಕಮಾಂಡ್ ಎಲ್ಲಿಯವರೆಗೆ ಇರಬೇಕು ಎಂದು ತೀರ್ಮಾನಿಸುತ್ತದೆಯೋ, ಅಲ್ಲಿವರೆಗೆ ನಾನು ಸಿಎಂ ಆಗಿರುತ್ತೇನೆ. ಅದೇ ರೀತಿಯಾಗಿ ಖಾದರ್ ಸ್ಪೀಕರ್ ಆಗಿ ಮುಂದುವರಿಯುತ್ತಾರೆ. ವಿಪಕ್ಷಗಳು ಏನೇ ಮಾಡಿದರೂ ಅವರು ಮಣಿಯುವವರಲ್ಲ,” ಎಂದು ಹೇಳಿದರು.

ವಿಪಕ್ಷ ನಾಯಕರ ಮೇಲೆ ವ್ಯಂಗ್ಯವಾಡಿದ ಸಿಎಂ, “ಎಲ್ಲರಿಗೂ ಕನಸುಗಳಿರುತ್ತವೆ. ಆರ್. ಅಶೋಕ್‌ಗೂ ಸಿಎಂ ಆಗುವ ಕನಸು ಇದೆ. ಆದರೆ ಅದಕ್ಕೆ ವಿಜಯೇಂದ್ರ ಅವಕಾಶ ಕೊಡಲಾರರು. ಅಶೋಕ್ ಸಿಎಂ ಆದರೂ ಸಂತೋಷ, ಬೆಲ್ಲದ್ ಆದರೂ ಸಂತೋಷ,” ಎಂದು ಹೇಳಿದರು.

ಈ ವೇಳೆ ಸದಸ್ಯ ಸುನೀಲ್ ಕುಮಾರ್, “ಡಿ.ಕೆ. ಶಿವಕುಮಾರ್ ಸಿಎಂ ಆದರೂ ಖುಷಿ ಅಂತ ಹೇಳಿ ಸರ್, ನೋಡೋಣ,” ಎಂದು ಸವಾಲು ಹಾಕಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, “ನೋಡಪ್ಪ, ಹೈಕಮಾಂಡ್ ತೀರ್ಮಾನ ಮಾಡುವವರೆಗೆ ನಾನೇ ಸಿಎಂ. ನಮ್ಮಲ್ಲಿ ಯಾರೇ ಸಿಎಂ ಆದರೂ ಸಂತೋಷವೇ” ಎಂದು ಸ್ಪಷ್ಟಪಡಿಸಿದರು.

Ram Navami: ನಾನ್‌ ವೆಜ್ ಪ್ರಿಯರಿಗೆ ಕಹಿ ಸುದ್ದಿ: ಮಾರ್ಚ್ 27ರಂದು ಮಾಂಸ ಮಾರಾಟ ನಿಷೇಧ

ಬೆಂಗಳೂರು: ರಾಮನವಮಿ ಹಬ್ಬದ ಅಂಗವಾಗಿ ಮಾರ್ಚ್ 27ರಂದು ನಗರದಲ್ಲಿ ಮಾಂಸ ಮಾರಾಟ ಹಾಗೂ ಪ್ರಾಣಿವಧೆಗೆ ನಿಷೇಧ ಹೇರಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಹತ್ವದ ಸುತ್ತೋಲೆ ಹೊರಡಿಸಿದೆ.

ಹಿಂದೂ ಧಾರ್ಮಿಕ ಹಬ್ಬಗಳು ಮತ್ತು ಮಹಾತ್ಮರ ಜಯಂತಿಗಳ ಸಂದರ್ಭಗಳಲ್ಲಿ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗದಂತೆ ಈ ರೀತಿಯ ನಿರ್ಬಂಧಗಳನ್ನು ಜಾರಿಗೊಳಿಸುವುದು ಪದ್ಧತಿಯಾಗಿದ್ದು, ಅದೇ ಹಿನ್ನೆಲೆಯಲ್ಲಿ ರಾಮನವಮಿಗೂ ಈ ಕ್ರಮ ಕೈಗೊಳ್ಳಲಾಗಿದೆ.

ಸುತ್ತೋಲೆಯಲ್ಲಿ ತಿಳಿಸಿದಂತೆ, ಜಿಬಿಎ ವ್ಯಾಪ್ತಿಯಲ್ಲಿರುವ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ, ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಾಗರಿಕರು ಮತ್ತು ವ್ಯಾಪಾರಿಗಳು ಆದೇಶವನ್ನು ಪಾಲಿಸುವಂತೆ ಹಾಗೂ ಸಹಕರಿಸುವಂತೆ ಅಪರ ನಿರ್ದೇಶಕರು (ಪಶುಪಾಲನೆ) ಮನವಿ ಮಾಡಿದ್ದಾರೆ.

ರಾಮನವಮಿ ಸೇರಿದಂತೆ ಪ್ರಮುಖ ಹಿಂದೂ ಹಬ್ಬಗಳ ದಿನಗಳಲ್ಲಿ ಮಾಂಸ ಮಾರಾಟ ನಿಷೇಧಕ್ಕೆ ಧಾರ್ಮಿಕ, ಸಾಮಾಜಿಕ ಹಾಗೂ ಆಡಳಿತಾತ್ಮಕ ಕಾರಣಗಳಿದ್ದು, ಇಂತಹ ನಿರ್ಬಂಧಗಳು ರಾಜ್ಯದಿಂದ ರಾಜ್ಯಕ್ಕೆ, ನಗರದಿಂದ ನಗರಕ್ಕೆ ಬದಲಾಗುತ್ತವೆ. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಅಧಿಕಾರಿಗಳು ಆದೇಶಗಳನ್ನು ಜಾರಿಗೊಳಿಸುತ್ತಾರೆ.

ರಾಮನವಮಿಯಂದು ನಗರದಲ್ಲಿನ ಶ್ರೀರಾಮ ಮಂದಿರಗಳು, ಆಂಜನೇಯ ದೇವಾಲಯಗಳು ಹಾಗೂ ಮಠಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ವಿವಿಧ ಬಡಾವಣೆಗಳಲ್ಲಿ ಸ್ಥಳೀಯ ಸಂಘಟನೆಗಳು ಕೋಸಂಬರಿ, ಪಾನಕ ಹಾಗೂ ಮಜ್ಜಿಗೆ ವಿತರಣೆ ಮಾಡುವುದೂ ರೂಢಿಯಾಗಿದೆ.

ಮಾಜಿ ಶಾಸಕರ ಪುತ್ರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಅಕ್ರಮ ಸಂಬಂಧಕ್ಕೆ ನಡೀತಾ ಕೊಲೆ? ಮೂವರು ಅರೆಸ್ಟ್

0

ಧಾರವಾಡ: ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಇದು ಪೂರ್ವನಿಯೋಜಿತ ಕೊಲೆ ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ರೈಲ್ವೆ ಟ್ರ್ಯಾಕ್ ಸಮೀಪದ ದಟ್ಟ ಅರಣ್ಯ ಪ್ರದೇಶದಲ್ಲಿ ಕಾರಿನೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ರಾಜು ಬೋಳಶೆಟ್ಟಿ ಅವರ ಶವ ಪತ್ತೆಯಾಗಿತ್ತು. ಘಟನೆ ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು.

ತನಿಖೆ ವೇಳೆ ಹೊರಬಂದ ಮಾಹಿತಿಯ ಪ್ರಕಾರ, ರಾಜು ಬೋಳಶೆಟ್ಟಿ ಒಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ದೈಹಿಕ ಸಂಪರ್ಕಕ್ಕಾಗಿ ಆಕೆಗೆ ಹಣ ನೀಡುತ್ತಿದ್ದು, ಸುಮಾರು 2 ಲಕ್ಷ ರೂಪಾಯಿಗೂ ಹೆಚ್ಚು ಹಣ ನೀಡಲಾಗಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ.

ಘಟನೆಯ ದಿನವೂ ರಾಜು ಬೋಳಶೆಟ್ಟಿ ಮಹಿಳೆಯನ್ನು ಹೊಲಕ್ಕೆ ಕರೆದಿದ್ದು, ಇದೇ ವೇಳೆ ಮಹಿಳೆ, ಆಕೆಯ ಮಗ ಹಾಗೂ ಆಕೆಯ ಪ್ರಿಯಕರ ಸೇರಿ ಕೊಲೆ ನಡೆಸಿರುವುದಾಗಿ ತಿಳಿದುಬಂದಿದೆ.

ಕೊಲೆ ಬಳಿಕ ಆರೋಪಿಗಳು ರಾಜು ಬೋಳಶೆಟ್ಟಿ ಅವರದೇ ಕಾರಿನಲ್ಲಿ ಶವವನ್ನು ರಾಮಾಪುರ ಅರಣ್ಯ ಪ್ರದೇಶಕ್ಕೆ ಕರೆತಂದು, ಕಾರಿನ ಹಿಂದಿನ ಸೀಟಿನಲ್ಲಿ ಇಟ್ಟು, ಸುಮಾರು 10 ಲೀಟರ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಂತರ ಪರಾರಿಯಾಗಿದ್ದ ಮೂವರನ್ನೂ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಚುರುಕಿನ ಕಾರ್ಯಾಚರಣೆಯಿಂದ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಪಾಲಿಕೆಗಳ ಬಜೆಟ್; ಹಣಕಾಸು ಕೊರತೆ ಇರುವ ಪಾಲಿಕೆಗಳಿಗೆ ರಾಜ್ಯ ಸರ್ಕಾರದಿಂದ ನೆರವು: ಡಿ.ಕೆ. ಶಿವಕುಮಾರ್

ಬೆಂಗಳೂರು: ಬಜೆಟ್ ಮಂಡನೆಗೆ ಹಣಕಾಸಿನ ಕೊರತೆ ಇರುವ ಪಾಲಿಕೆಗಳಿಗೆ ರಾಜ್ಯ ಸರ್ಕಾರ ನೆರವು ನೀಡಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದ ಆವರಣದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗೆ ಬುಧವಾರ ಪ್ರತಿಕ್ರಿಯೆ ನೀಡಿದರು.

ಪಾಲಿಕೆ ಬಜೆಟ್ ವಿಚಾರವಾಗಿ ಕೇಳಿದಾಗ, “ಬೆಂಗಳೂರಿನ ಐದು ಪಾಲಿಕೆಗಳು ಪ್ರತ್ಯೇಕ ಬಜೆಟ್ ಮಂಡಿಸಲಿದ್ದು, ಉತ್ತಮ ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಶಾಸಕರ ಜತೆಗೂ ಚರ್ಚೆ ಮಾಡಲಾಗಿದೆ. ವಿಕೇಂದ್ರಿಕರಣದಿಂದಾಗಿ ಆಯಾ ಪಾಲಿಕೆಗಳ ಅನುದಾನ ಬೇರೆಡೆಗೆ ವರ್ಗಾವಣೆ ಆಗುವುದಿಲ್ಲ” ಎಂದು ಹೇಳಿದರು.

“ಇದು ಖಾಲಿ ಚೊಂಬಲ್ಲ, ತುಂಬಿದ ಕೊಡ”: ಬಜೆಟ್ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ – ವಿರೋಧ ಪಕ್ಷದ ಟೀಕೆಗೆ ತಿರುಗೇಟು

ಬೆಂಗಳೂರು: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸುದೀರ್ಘ ಉತ್ತರ ನೀಡಲು ಆರಂಭಿಸಿದರು. ಈ ಬಾರಿ ಬಜೆಟ್ ಚರ್ಚೆಯಲ್ಲಿ ಒಟ್ಟು 50 ಸದಸ್ಯರು ಭಾಗವಹಿಸಿದ್ದು ವಿಶೇಷವಾಗಿದ್ದು, ಒಟ್ಟಾರೆ 24 ಗಂಟೆ 45 ನಿಮಿಷಗಳ ಕಾಲ ಚರ್ಚೆ ನಡೆದಿದೆ.

‘ನಾನು ಇದುವರೆಗೆ 17 ಬಾರಿ ಬಜೆಟ್ ಮಂಡಿಸಿ ಉತ್ತರ ನೀಡಿದ್ದೇನೆ. ಆದರೆ ಇಷ್ಟು ದೊಡ್ಡ ಮಟ್ಟದ ಚರ್ಚೆ ನಡೆದಿರುವುದು ಇದೇ ಮೊದಲ ಬಾರಿ’ ಎಂದು ಸಿಎಂ ತಿಳಿಸಿ, ಚರ್ಚೆಗೆ ಅವಕಾಶ ಮಾಡಿಕೊಟ್ಟ ಸಭಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.

ಚರ್ಚೆಯಲ್ಲಿ ಪಾಲ್ಗೊಂಡವರ ವಿವರ ನೀಡಿದ ಸಿಎಂ, ವಿರೋಧ ಪಕ್ಷದ 21 ಸದಸ್ಯರು ಒಟ್ಟು 12 ಗಂಟೆ 49 ನಿಮಿಷ ಮಾತನಾಡಿದ್ದಾರೆ ಎಂದು ತಿಳಿಸಿದರು. ಆಡಳಿತ ಪಕ್ಷದ ಸದಸ್ಯರು 8 ಗಂಟೆ 43 ನಿಮಿಷ ಹಾಗೂ ಜೆಡಿಎಸ್ ಸದಸ್ಯರು 2 ಗಂಟೆ 55 ನಿಮಿಷಗಳ ಕಾಲ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಒಬ್ಬರೇ 3 ಗಂಟೆ 6 ನಿಮಿಷಗಳ ಕಾಲ ಮಾತನಾಡಿದ್ದಾರೆ ಎಂದು ಅಂಕಿ-ಅಂಶ ನೀಡಿದರು.

ವಿರೋಧ ಪಕ್ಷದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ವಿಪಕ್ಷ ನಾಯಕರು ಆಳವಾದ ಅಧ್ಯಯನ ಮಾಡಿಲ್ಲ. ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಶೀರ್ಷಿಕೆಗಳು ಬರಲೆಂಬ ಉದ್ದೇಶದಿಂದ ಪದಗಳನ್ನು ಬಳಸಿದ್ದಾರೆ’ ಎಂದು ವ್ಯಂಗ್ಯವಾಡಿದರು. ಟೀಕೆ ಮಾಡಿದ ಆಡಳಿತ, ವಿಪಕ್ಷ, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರಾದ ಸೋಮಶೇಖರ್ ಮತ್ತು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಹ ಅಭಿನಂದನೆ ಸಲ್ಲಿಸಿದರು.

‘ಯಾರು ಎಷ್ಟೇ ಟೀಕೆ ಮಾಡಿದರೂ ಮಾವಿನ ಹಣ್ಣು ಬೇವಿನ ಹಣ್ಣಾಗಲು ಸಾಧ್ಯವಿಲ್ಲ. ರಾಜ್ಯದ ಜನರು ಬುದ್ಧಿವಂತರಾಗಿದ್ದು, ಮಾವಿನ ಹಣ್ಣನ್ನು ಮಾವಿನ ಹಣ್ಣು ಎಂದೇ ಕರೆಯುತ್ತಾರೆ’ ಎಂದು ಹೇಳುವ ಮೂಲಕ ತಮ್ಮ ಬಜೆಟ್ ಜನಪರವಾಗಿದೆ ಎಂದು ಸಮರ್ಥಿಸಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ‘ನಾನು ಮಾವಿನ ಹಣ್ಣು ಎಂದೇ ಹೇಳಿದ್ದೇನೆ, ಆದರೆ ಅದು ಸ್ವಲ್ಪ ಹುಳಿಯಾಗಿದೆ ಎಂದಷ್ಟೇ’ ಎಂದು ಟಾಂಗ್ ನೀಡಿದರು.

ಇನ್ನೂ, ವಿಪಕ್ಷಗಳು ಬಜೆಟ್ ಅನ್ನು ‘ಕ್ರೆಡಿಟ್ ಕಾರ್ಡ್ ಬಜೆಟ್’ ಹಾಗೂ ‘ಖಾಲಿ ಚೊಂಬು’ ಎಂದು ಟೀಕಿಸಿದ್ದಕ್ಕೆ ಸಿಎಂ ತೀಕ್ಷ್ಣವಾಗಿ ಉತ್ತರಿಸಿದರು. ‘ಇದು ಖಾಲಿ ಚೊಂಬು ಅಲ್ಲ, ಭರ್ತಿ ಚೊಂಬು. ನಮ್ಮ ಬಜೆಟ್ ತುಂಬಿದ ಕೊಡವಿನಂತೆ ಇದ್ದು, ಅದು ಎಂದಿಗೂ ಖಾಲಿಯಾಗುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಕ್ಕಿಂನಲ್ಲಿ ಭೂಕುಸಿತ ದುರಂತ: ಚುಂಗ್ ಥಾಂಗ್ʼನಲ್ಲಿ ಸಿಲುಕಿದ 200 ಪ್ರವಾಸಿಗರು

0

ಗ್ಯಾಂಗ್ಟಾಕ್: ಉತ್ತರ ಸಿಕ್ಕಿಂನಲ್ಲಿ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿ, ಸುಮಾರು 200ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿರುವ ಘಟನೆ ನಡೆದಿದೆ.

ಮಂಗಳವಾರ ರಾತ್ರಿ ಚುಂಗ್ಥಾಂಗ್ಲಾಚೆನ್ ಮಾರ್ಗದ ಹಲವೆಡೆ ಭೂಕುಸಿತ ಸಂಭವಿಸಿದ್ದು, ಲಾಚೆನ್ ಕಡೆಗೆ ತೆರಳುತ್ತಿದ್ದ ಪ್ರವಾಸಿಗರು ಮಧ್ಯದಲ್ಲೇ ಸಿಲುಕಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ ಪ್ರವಾಸಿಗರಿಗೆ ಐಟಿಬಿಪಿ ಶಿಬಿರ ಹಾಗೂ ಸ್ಥಳೀಯ ಗುರುದ್ವಾರದಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಗಿದೆ ಎಂದು ಮಂಗನ್ ಜಿಲ್ಲೆಯ ಕಲೆಕ್ಟರ್ ಅನಂತ್ ಜೈನ್ ತಿಳಿಸಿದ್ದಾರೆ.

ಭೂಕುಸಿತದಿಂದ ರಸ್ತೆಗಳ ಮೇಲೆ ಬಿದ್ದಿರುವ ಮಣ್ಣು ಮತ್ತು ಕಲ್ಲುಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಹವಾಮಾನ ಸ್ಥಿತಿಗತಿಗಳನ್ನು ಅವಲಂಬಿಸಿ ಮಾರ್ಗವನ್ನು ಸುರಕ್ಷಿತ ಎಂದು ಘೋಷಿಸಿದ ಬಳಿಕವೇ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸಲಾಗುತ್ತಿದೆ. ಇತ್ತೀಚಿನ ಭಾರೀ ಹಿಮಪಾತದ ಹಿನ್ನೆಲೆ ತ್ಸೊಮ್ಗೊ ಸರೋವರ ಮತ್ತು ನಾಥುಲಾ ಪಾಸ್ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

2023ರಲ್ಲಿ ಸಂಭವಿಸಿದ್ದ ಹಿಮನದಿ ಸರೋವರ ಪ್ರವಾಹದಿಂದ ಹಾನಿಗೊಂಡ ಲಾಚೆನ್ ಮಾರ್ಗವನ್ನು ಇತ್ತೀಚೆಗೆ ಮಾರ್ಚ್ 9ರಂದು ಮತ್ತೆ ತೆರೆಯಲಾಗಿತ್ತು.

ಗ್ಯಾಸ್ ಬುಕ್ಕಿಂಗ್ ನಿಯಮ ಬದಲಾವಣೆ ವರದಿ ಸುಳ್ಳು; ಕೇಂದ್ರ ಸರ್ಕಾರ ಸ್ಪಷ್ಟನೆ

0

ನವದೆಹಲಿ: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ವರದಿಗಳು ತಪ್ಪು ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಈ ಕುರಿತು ಇಂಡಿಯನ್ ಆಯಿಲ್ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಎಲ್ಪಿಜಿ ರಿಫಿಲ್ ಬುಕ್ಕಿಂಗ್ ಅವಧಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ತಿಳಿಸಿದೆ. ಸದ್ಯ ಜಾರಿಯಲ್ಲಿರುವ ನಿಯಮಗಳು ಯಥಾಸ್ಥಿತಿಯಲ್ಲೇ ಮುಂದುವರಿಯುತ್ತಿವೆ ಎಂದು ಹೇಳಿದೆ.

ದೇಶಾದ್ಯಂತ ಎಲ್ಪಿಜಿ ಸರಬರಾಜಿನಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸಾಕಷ್ಟು ಸ್ಟಾಕ್ ಲಭ್ಯವಿದೆ. ಹೀಗಾಗಿ ಗ್ರಾಹಕರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಪಿಎಂ ಉಜ್ವಲ ಯೋಜನೆ (PMUY) ಅಡಿಯಲ್ಲಿ 45 ದಿನ, ನಗರ ಪ್ರದೇಶಗಳಲ್ಲಿ 25 ದಿನ ಹಾಗೂ ಗ್ರಾಮೀಣ ಭಾಗಗಳಲ್ಲಿ 45 ದಿನಗಳ ಬುಕ್ಕಿಂಗ್ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಅಧಿಕೃತ ಸಂಸ್ಥೆಗಳ ಮಾಹಿತಿಯನ್ನೇ ನಂಬುವಂತೆ ಹಾಗೂ ಗಾಬರಿಯಲ್ಲಿ ಗ್ಯಾಸ್ ಬುಕ್ಕಿಂಗ್ ಮಾಡುವುದನ್ನು ತಪ್ಪಿಸುವಂತೆ ಇಂಡಿಯನ್ ಆಯಿಲ್ ಮನವಿ ಮಾಡಿದೆ.

ಪೊಲೀಸ್ ಇನ್ʼಸ್ಪೆಕ್ಟರ್ ನಿಂದಲೇ ಲೈಂಗಿಕ ಕಿರುಕುಳ? ಚಿನ್ನ, ಮುದ್ದು ಹೇಳಿ ಕೊಲೆ ಬೆದರಿಕೆ ಆರೋಪ!

0

ಬೆಂಗಳೂರು: ನಗರದ ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾಪಣ್ಣ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ದೂರು ಸಲ್ಲಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ದೂರುದಾರೆಯ ಪ್ರಕಾರ, ಇನ್ಸ್‌ಪೆಕ್ಟರ್ ಪಾಪಣ್ಣ ಕಚೇರಿ ಹಾಗೂ ವೈಯಕ್ತಿಕ ಮೊಬೈಲ್ ಸಂಖ್ಯೆಯಿಂದ ಹಲವಾರು ಬಾರಿ ಕರೆ ಮಾಡಿ ಕಿರುಕುಳ ನೀಡಿದ್ದಾರೆ. ‘ಚಿನ್ನ, ಮುದ್ದು, ಬಂಗಾರಿ’ ಎಂದು ಕರೆಯುವುದರ ಜೊತೆಗೆ ಅಸಭ್ಯವಾಗಿ ಮಾತನಾಡಿ, ವಾಟ್ಸಪ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾಗಿ ಆರೋಪಿಸಲಾಗಿದೆ.

ಇದಲ್ಲದೆ, ಪ್ರಕರಣ ಬಹಿರಂಗಪಡಿಸಿದರೆ ಸಂತ್ರಸ್ತೆ ಮತ್ತು ಅವರ ಮಕ್ಕಳನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮನೆಗೆ ಬರುವುದಾಗಿ ಹೇಳಿ ಹಲವಾರು ಬಾರಿ ಕರೆ ಮಾಡಿ ಕಿರುಕುಳ ನೀಡಿರುವುದಾಗಿ ಕೂಡ ಆರೋಪಿಸಲಾಗಿದೆ.

ಸಂತ್ರಸ್ತೆ ಈ ಆರೋಪಗಳಿಗೆ ಸಂಬಂಧಿಸಿದಂತೆ ವಾಟ್ಸಪ್ ಸಂದೇಶಗಳ ಸ್ಕ್ರೀನ್‌ಶಾಟ್‌ಗಳು, ಕರೆ ವಿವರಗಳು ಹಾಗೂ ಆಡಿಯೋ ದಾಖಲೆಗಳನ್ನು ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ್ದಾರೆ.

ಈ ದೂರಿನ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸುವ ಸಾಧ್ಯತೆ ಇದೆ. ಆರೋಪ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ಆಗ್ರಹಿಸಿದ್ದಾರೆ. ಪ್ರಕರಣವು ಈಗ ಆರೋಪದ ಹಂತದಲ್ಲಿದ್ದು, ತನಿಖೆ ಪೂರ್ಣಗೊಂಡ ಬಳಿಕ ನಿಜಸ್ಥಿತಿ ಸ್ಪಷ್ಟವಾಗಲಿದೆ.

error: Content is protected !!