Home Blog Page 88

ರಾಮನಗರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರೀ ಅಕ್ರಮ: ನಿಷ್ಪಕ್ಷಪಾತ ತನಿಖೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹ

ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.

ಈ ಬೆಳವಣಿಗೆ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ವಿರುದ್ಧವಾಗಿದ್ದು, ಪ್ರಕರಣದ ಕುರಿತು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಪ್ರಲ್ಹಾದ ಜೋಶಿ, ಕೇಂದ್ರ ಚುನಾವಣಾ ಆಯೋಗ ನಿಗದಿಪಡಿಸಿರುವ ವಿಶೇಷ ನಿಯಮಾವಳಿ ಮತ್ತು ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಲಾಗಿದೆ ಎಂದು ಆರೋಪಿಸಿದರು.

ಸ್ಥಳೀಯ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ರಾಜಕೀಯ ಉದ್ದೇಶಕ್ಕಾಗಿ ದುರುಪಯೋಗಪಡಿಸಿಕೊಳ್ಳಲಾಗಿದ್ದು, ಇಡೀ ಪ್ರಕ್ರಿಯೆಯೇ ಕಾನೂನುಬಾಹಿರ ಮತ್ತು ನಿಯಮಬಾಹಿರವಾಗಿದೆ ಎಂದು ಟೀಕಿಸಿದರು.

ಸ್ವತಂತ್ರವಾಗಿ ಹಾಗೂ ಪಾರದರ್ಶಕವಾಗಿ ನಡೆಯಬೇಕಾದ ಸಾಂವಿಧಾನಿಕ ಪ್ರಕ್ರಿಯೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ನೇರ ಹಸ್ತಕ್ಷೇಪ ಮಾಡಿದೆ ಎಂದು ಆರೋಪಿಸಿದ ಅವರು, ರಾಜಕೀಯ ಲಾಭಕ್ಕಾಗಿ ಮತದಾರರ ಪಟ್ಟಿಯನ್ನು ತಮಗೆ ಅನುಕೂಲವಾಗುವಂತೆ ತಿರುಚುವ ಉದ್ದೇಶದಿಂದ ಮೇಲ್ಮಟ್ಟದಲ್ಲೇ ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂದು ದೂರಿದರು.

ಈ ಪರಿಷ್ಕರಣೆ ಪ್ರಕ್ರಿಯೆ ರಾಜಕೀಯ ಪ್ರಭಾವಕ್ಕೆ ಒಳಗಾಗಿದ್ದು, ಸ್ಥಳೀಯ ಆಡಳಿತದ ಮೇಲೆ ತೀವ್ರ ಒತ್ತಡ ಹೇರಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದರು. ಸಾಮಾನ್ಯ ಮತದಾರರ ಹಕ್ಕು ಮತ್ತು ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನದ ಹಿಂದೆ ಯಾರ ಹಿತಾಸಕ್ತಿ ಅಡಗಿದೆ ಎಂಬುದನ್ನು ತನಿಖೆ ಮೂಲಕ ಬಹಿರಂಗಪಡಿಸಬೇಕಾಗಿದೆ ಎಂದು ಹೇಳಿದರು.

ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಹಾಗೂ ಪಾವಿತ್ರ್ಯವನ್ನು ಕಾಪಾಡಲು ತಕ್ಷಣವೇ ನಿಷ್ಪಕ್ಷಪಾತ, ಪಾರದರ್ಶಕ ಮತ್ತು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಜನರ ಮುಂದಿಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆಗೆ ಹೊಸ ಮಾದರಿ? ಕೋಲಾರದಲ್ಲಿ ಸಾರ್ವಜನಿಕರನ್ನೇ ಕರೆಸಿ ಅರ್ಜಿ ಭರ್ತಿ ಮಾಡಿಸುತ್ತಿರುವ BLOಗಳು

0

ಕೋಲಾರ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕೋಲಾರದಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಕಾರ್ಯವೈಖರಿ ವಿವಾದಕ್ಕೆ ಕಾರಣವಾಗಿದೆ. ಮನೆಮನೆ ಸಮೀಕ್ಷೆ ನಡೆಸುವ ಬದಲು ಸಾರ್ವಜನಿಕರನ್ನೇ ಅಂಗನವಾಡಿ ಕೇಂದ್ರ, ಸಮುದಾಯ ಭವನ ಹಾಗೂ ಶಾಲೆಗಳಿಗೆ ಕರೆಸಿ ಅರ್ಜಿ ಭರ್ತಿ ಮಾಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

ನಗರದ ಬಹುತೇಕ ಬಡಾವಣೆಗಳಲ್ಲಿ ಕಳೆದ ಎರಡು ದಿನಗಳಿಂದ ಇದೇ ಮಾದರಿಯ ಕ್ಯಾಂಪ್‌ಗಳು ನಡೆಯುತ್ತಿವೆ. BLOಗಳು ಸ್ಥಳೀಯ ಕೇಂದ್ರಗಳಲ್ಲಿ ಟೇಬಲ್ ಹಾಕಿಕೊಂಡು ಕುಳಿತು ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಸಂಬಂಧಿತ ಅರ್ಜಿಗಳನ್ನು ಸ್ವೀಕರಿಸುತ್ತಿದ್ದಾರೆ.

ಕುರುಬರಪೇಟೆ ಬಡಾವಣೆಯಲ್ಲೂ ಇದೇ ವಿಧಾನ ಅನುಸರಿಸಲಾಗುತ್ತಿದ್ದು, ಸಾರ್ವಜನಿಕರು ನೇರವಾಗಿ ಅಂಗನವಾಡಿ ಕೇಂದ್ರಕ್ಕೆ ತೆರಳಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಮನೆಮನೆ ಪರಿಶೀಲನೆ ಕಡ್ಡಾಯವಾಗಿರುವ ಸಂದರ್ಭದಲ್ಲೇ ಈ ಪರ್ಯಾಯ ವಿಧಾನ ಅನುಸರಿಸಿರುವುದು ಚುನಾವಣಾ ಆಯೋಗದ ಮಾರ್ಗಸೂಚಿಗಳ ಪಾಲನೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಂಜನಾಂದ್ರಿ ಬೆಟ್ಟಕ್ಕೆ ರಾಹುಲ್ ದ್ರಾವಿಡ್ ದಂಪತಿ ಭೇಟಿ: 75 ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆದ ಮಾಜಿ ಆಟಗಾರ

ಕೊಪ್ಪಳ: ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಪತ್ನಿಯೊಂದಿಗೆ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಹನುಮ ದೇವರ ದರ್ಶನ ಪಡೆದರು.

ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು ಏರಿ ದೇವಸ್ಥಾನ ತಲುಪಿದ ದ್ರಾವಿಡ್ ದಂಪತಿ, ಹನುಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ದೇವಾಲಯದಲ್ಲಿ ಕೆಲಕಾಲ ಕಾಲ ಕಳೆಯುವ ಮೂಲಕ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದರು.

ಇದಕ್ಕೂ ಮುನ್ನ ಬುಧವಾರ ರಾಹುಲ್ ದ್ರಾವಿಡ್ ಅವರು ವಿಶ್ವವಿಖ್ಯಾತ ಹಂಪಿ ಕ್ಷೇತ್ರಕ್ಕೆ ಭೇಟಿ ನೀಡಿ ವಿರೂಪಾಕ್ಷೇಶ್ವರ ದೇವರ ದರ್ಶನ ಪಡೆದಿದ್ದರು. ಪ್ರವಾಸದ ವೇಳೆ ಸಾಸಿವೆಕಾಳು ಗಣೇಶ, ಹೇಮಕೂಟ, ಕೃಷ್ಣ ದೇವಸ್ಥಾನ, ಉಗ್ರ ನರಸಿಂಹ ಹಾಗೂ ಬಡವಿಲಿಂಗ ದೇವಾಲಯಗಳಿಗೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಬಳಿಕ ಮಧ್ಯಾಹ್ನ ಚಕ್ರತೀರ್ಥದಲ್ಲಿರುವ ಕೋದಂಡರಾಮ ದೇವಾಲಯ, ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನ ಹಾಗೂ ಅಚ್ಯುತರಾಯ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕ್ಲರ್ಕ್ ಶವ ಪತ್ತೆ!

ಬೆಂಗಳೂರು: ನಗರದ ಆರ್‌ಟಿ ನಗರ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಭಾಸ್ಕರ್ ದೇವಾಡಿಗ ಎಂದು ಗುರುತಿಸಲಾಗಿದ್ದು, ಅವರು ಎರಡು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೂಲತಃ ಕುಂದಾಪುರ ತಾಲ್ಲೂಕಿನ ಸಾಲಿಗ್ರಾಮದವರಾಗಿದ್ದ ಭಾಸ್ಕರ್ ದೇವಾಡಿಗ ಅವರು ಬಾರ್ ಕೌನ್ಸಿಲ್‌ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಸುಮಾರು ಹತ್ತು ವರ್ಷಗಳ ಹಿಂದೆ ಅವರ ಪತ್ನಿ ಮೃತಪಟ್ಟಿದ್ದು, ಆ ಬಳಿಕ ಅವರು ಒಂಟಿಯಾಗಿಯೇ ಜೀವನ ನಡೆಸುತ್ತಿದ್ದರು.

ಘಟನೆ ನಡೆದ ಸಂದರ್ಭದಲ್ಲಿ ಮಗಳು ತವರು ಮನೆಗೆ ತೆರಳಿದ್ದ ಕಾರಣ ಭಾಸ್ಕರ್ ದೇವಾಡಿಗ ಅವರು ಮನೆಯಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ. ಇದೇ ವೇಳೆ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಈ ಸಂಬಂಧ ಭಾಸ್ಕರ್ ದೇವಾಡಿಗ ಅವರ ತಂಗಿ ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.

ಬೆಳೆ ಬೆಳೆಯದಿರಿ ಎಂಬ ಸಿಎಂ ಹೇಳಿಕೆ ರೈತರ ಆತ್ಮಸ್ಥೈರ್ಯ ಕುಗ್ಗಿಸಿದೆ: ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ‘ನೀರಿನ ಕೊರತೆ ಇರುವುದರಿಂದ ಬೆಳೆ ಬೆಳೆಯದಿರಿ’ ಎಂದು ನೀಡಿರುವ ಹೇಳಿಕೆ ರೈತರ ಆತ್ಮಸ್ಥೈರ್ಯ ಕುಗ್ಗಿಸುವಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.

ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರಗಾಲದ ಮುನ್ಸೂಚನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಆಶ್ಚರ್ಯ ಮತ್ತು ನೋವು ಉಂಟುಮಾಡಿದೆ ಎಂದು ಹೇಳಿದರು.

ಪ್ರಕೃತಿ ವೈಪರೀತ್ಯದ ಸಂದರ್ಭದಲ್ಲಿ ಸರ್ಕಾರ ರೈತರಿಗೆ ಧೈರ್ಯ, ಭರವಸೆ ಮತ್ತು ನೆರವು ನೀಡಬೇಕಾದ ಹೊಣೆಗಾರಿಕೆ ಹೊಂದಿದೆ. ಆದರೆ ರೈತರಿಗೆ ಬೆಳೆ ಬೆಳೆಯಬೇಡಿ ಎಂದು ಹೇಳುವುದು ಸರಿಯಾದ ಸಂದೇಶವಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಮುಂದಿನ 15ರಿಂದ 20 ದಿನಗಳಲ್ಲಿ ಮಳೆ ಬೀಳುವ ಸಾಧ್ಯತೆ ಇರುವ ಬಗ್ಗೆ ಆಶಾಭಾವನೆ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಹೇಳಿಕೆ ನೀಡಿರುವುದು ಸರಿಯಲ್ಲ. ಸರ್ಕಾರದ ಮಾತು ಕೇಳಿ ರೈತರು ಬಿತ್ತನೆ ಮಾಡದೇ ಇದ್ದರೆ ಅದರ ಹೊಣೆ ಯಾರು ಹೊರುತ್ತಾರೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಶೇ.50ರಿಂದ 60ರಷ್ಟು ಮಳೆಯ ಕೊರತೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಯಾವ ರೀತಿಯ ಪೂರ್ವಸಿದ್ಧತೆ ಮಾಡಿಕೊಂಡಿದೆ ಎಂದು ಪ್ರಶ್ನಿಸಿದ ವಿಜಯೇಂದ್ರ, ಜಿಲ್ಲಾಧಿಕಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆಯೇ, ಜಾನುವಾರುಗಳ ರಕ್ಷಣೆಗೆ ವಿಶೇಷ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಬರಗಾಲದ ಮುನ್ಸೂಚನೆ ಹೊಸದಾಗಿ ಬಂದ ವಿಚಾರವಲ್ಲ. ಇಷ್ಟೊಂದು ದಿನ ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಳ್ಳದೇ ಈಗ ರೈತರ ಮೇಲೆ ಹೊಣೆ ಹೊರಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು. ರೈತರ ಹಿತಾಸಕ್ತಿಗಿಂತ ಸರ್ಕಾರ ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಟೀಕಿಸಿದರು.

ಕಾವೇರಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುವ ವಿಚಾರವನ್ನೂ ಪ್ರಸ್ತಾಪಿಸಿದ ವಿಜಯೇಂದ್ರ, ರಾಜ್ಯದ ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ಇಂತಹ ನಿರ್ಧಾರಗಳನ್ನು ಏಕೆ ಕೈಗೊಳ್ಳಲಾಗುತ್ತಿದೆ ಎಂದು ಪ್ರಶ್ನಿಸಿದರು.

ಇದೇ ವೇಳೆ, ಎಸ್‌ಐಆರ್ (Special Intensive Revision) ಪ್ರಕ್ರಿಯೆ ಹಿನ್ನೆಲೆಯಲ್ಲಿ ಆಗಸ್ಟ್ ಮಧ್ಯಭಾಗದಲ್ಲಿ ಮುಂಗಾರು ಅಧಿವೇಶನ ನಡೆಸುವುದಾಗಿ ಸರ್ಕಾರ ಹೇಳಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ಶಾಸಕರು ಮನೆ ಮನೆಗೆ ತೆರಳಿ ಎಸ್‌ಐಆರ್ ಕಾರ್ಯ ನಡೆಸಬೇಕೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು.

ತಾಕತ್ ಇದ್ದರೆ ತಮಿಳುನಾಡಿಗೆ ಪಾದಯಾತ್ರೆ ಮಾಡಿ: ಸಿಎಂ ವಿರುದ್ಧ ಆರ್. ಅಶೋಕ್ ಸವಾಲು

ಬೆಂಗಳೂರು: ಮೇಕೆದಾಟು ಯೋಜನೆಗೆ ತಮಿಳುನಾಡು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾಕತ್ತಿದ್ದರೆ ತಮಿಳುನಾಡಿಗೆ ಪಾದಯಾತ್ರೆ ನಡೆಸಿ ನಿಮ್ಮ ಬದ್ಧತೆಯನ್ನು ಸಾಬೀತುಪಡಿಸಿ ಎಂದು ಸವಾಲು ಹಾಕಿದ್ದಾರೆ.

ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಆರ್. ಅಶೋಕ್, ಅಧಿಕಾರಕ್ಕೆ ಬರಲು ಮೇಕೆದಾಟು ಪಾದಯಾತ್ರೆ ನಡೆಸಿದ್ದ ಡಿ.ಕೆ. ಶಿವಕುಮಾರ್ ಅವರು ಈಗ ತಮಿಳುನಾಡು ಕಾಂಗ್ರೆಸ್ ನಾಯಕರ ಹೇಳಿಕೆ ಎದುರು ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

“ಚುನಾವಣೆಗೆ ಮುನ್ನ ಮೇಕೆದಾಟು ಯೋಜನೆ ಹೆಸರಿನಲ್ಲಿ ಪಾದಯಾತ್ರೆ ನಡೆಸಿದ್ದ ನೀವು, ಈಗ ನಿಮ್ಮದೇ ಪಕ್ಷದ ತಮಿಳುನಾಡು ಘಟಕದ ಅಧ್ಯಕ್ಷರು ‘ಮೇಕೆದಾಟು ಯೋಜನೆಗೆ ಒಂದು ಇಟ್ಟಿಗೆ ಹಾಕಲೂ ಬಿಡುವುದಿಲ್ಲ’ ಎಂದು ಹೇಳಿದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ನಿಜವಾಗಿಯೂ ಕನ್ನಡಿಗರ ಹಿತದ ಬಗ್ಗೆ ಕಾಳಜಿ ಇದ್ದರೆ ಚೆನ್ನೈಗೆ ಪಾದಯಾತ್ರೆ ನಡೆಸಿ, ತಮಿಳುನಾಡು ಕಾಂಗ್ರೆಸ್ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿ ನಿಮ್ಮ ರಾಜಕೀಯ ಬದ್ಧತೆಯನ್ನು ಸಾಬೀತುಪಡಿಸಿ” ಎಂದು ಅಶೋಕ್ ಸವಾಲು ಹಾಕಿದ್ದಾರೆ.

ಮೇಕೆದಾಟು ಪಾದಯಾತ್ರೆ ಕೇವಲ ಚುನಾವಣಾ ಲಾಭಕ್ಕಾಗಿ ನಡೆಸಿದ ರಾಜಕೀಯ ನಾಟಕವಾಗಿತ್ತೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ. ಕಾವೇರಿ ಕೊಳ್ಳದ ರೈತರು ಹಾಗೂ ಬೆಂಗಳೂರಿನ ಕೋಟ್ಯಂತರ ಜನರ ಕುಡಿಯುವ ನೀರಿನ ಹಕ್ಕಿಗಿಂತ ಕಾಂಗ್ರೆಸ್ ಹೈಕಮಾಂಡ್ ಮತ್ತು ತಮಿಳುನಾಡಿನ ಮೈತ್ರಿ ರಾಜಕಾರಣವೇ ಮುಖ್ಯವಾಗಿದೆಯೇ ಎಂದು ಟೀಕಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಮೇಕೆದಾಟು ಯೋಜನೆ ಜಾರಿಗೊಳಿಸುವ ಇಚ್ಛಾಶಕ್ತಿಯೇ ಇಲ್ಲ ಎಂದು ಆರೋಪಿಸಿರುವ ಅಶೋಕ್, ತಮಿಳುನಾಡು ಕಾಂಗ್ರೆಸ್‌ನ ಹೇಳಿಕೆಯನ್ನು ಖಂಡಿಸಲು ಸಹ ರಾಜ್ಯ ಕಾಂಗ್ರೆಸ್ ನಾಯಕರು ಮುಂದಾಗದಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಈ ವಿಚಾರದಲ್ಲಿ ಸರ್ಕಾರದ ನಿಲುವಿಗೆ ರಾಜ್ಯದ ಜನರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಡೇ ಕೇರ್ ಕ್ರೌರ್ಯ ಪ್ರಕರಣ: ಸಿಸಿಟಿವಿ ದೃಶ್ಯ ಆಧರಿಸಿ ಪ್ರಮುಖ ಆರೋಪಿ ವಿಜಯಲಕ್ಷ್ಮೀ ಸೇರಿ ಇಬ್ಬರ ಬಂಧನ

ಬೆಂಗಳೂರು: ಬ್ರೂಕ್‌ಫೀಲ್ಡ್‌ನಲ್ಲಿರುವ ಬೇಬಿ ಕೇರ್ ಕೇಂದ್ರದಲ್ಲಿ ಮಕ್ಕಳ ಮೇಲೆ ದೈಹಿಕ ಹಿಂಸೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್‌ಎಎಲ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿಗಳಾದ ಮಂಜುಳಾ ಹಾಗೂ ವಿಜಯಲಕ್ಷ್ಮೀ ರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಲಾಗಿದೆ.

ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಭವಾನಿ, ಸಿಂಧು ಹಾಗೂ ಬಿಂದು ಅವರ ಪಾತ್ರದ ಕುರಿತು ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಹೆಚ್ಚಿನ ವಿಚಾರಣೆಗಾಗಿ ಈ ಮೂವರಿಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಬ್ರೂಕ್‌ಫೀಲ್ಡ್‌ನ ಬೇಬಿ ಕೇರ್ ಕೇಂದ್ರದಲ್ಲಿ ಮಕ್ಕಳಿಗೆ ಆಯಾಗಳು ದೈಹಿಕವಾಗಿ ಹಿಂಸೆ ನೀಡುತ್ತಿರುವ ದೃಶ್ಯಗಳು ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಈ ವಿಡಿಯೊಗಳನ್ನು ಮಕ್ಕಳ ಸಹಾಯವಾಣಿ (ಚೈಲ್ಡ್ ಹೆಲ್ಪ್‌ಲೈನ್) ಅಧಿಕಾರಿಗಳು ಪರಿಶೀಲಿಸಿ, ಮಕ್ಕಳ ಮೇಲೆ ಕ್ರೌರ್ಯ ಎಸಗಿರುವ ಆರೋಪದಡಿ ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ದೂರಿನ ಆಧಾರದ ಮೇಲೆ ಮಂಜುಳಾ, ವಿಜಯಲಕ್ಷ್ಮೀ, ಭವಾನಿ, ಸಿಂಧು ಹಾಗೂ ಬಿಂದು ಸೇರಿ ಐವರು ಆಯಾಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಪೊಲೀಸರು ಉಳಿದ ಆರೋಪಿಗಳ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ತನಿಖೆಯ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

ರೇಣುಕಾಸ್ವಾಮಿ ಕೇಸ್‌ನ ಸಾಕ್ಷಿಗೆ ಬೆದರಿಕೆ: ಮೂವರು ಅರೆಸ್ಟ್ – ತನಿಖೆ ವೇಳೆ ಹಲವು ವಿಚಾರಗಳು ಬಹಿರಂಗ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ನೀಡಿದ ಪ್ರಕರಣ ಈಗ ಹೊಸ ಹಂತಕ್ಕೆ ತಲುಪಿದೆ. ಕಾಮಾಕ್ಷಿಪಾಳ್ಯ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಹಲವು ಶಂಕಾಸ್ಪದ ಅಂಶಗಳು ಬೆಳಕಿಗೆ ಬಂದಿವೆ.

ಸಾಕ್ಷಿದಾರ ಸಂದೀಪ್ ಅವರಿಗೆ ಕೋರ್ಟ್‌ನಲ್ಲಿ ಹೇಳಿಕೆ ಬದಲಾಯಿಸುವಂತೆ ಒತ್ತಡ ಹೇರಲಾಗಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಪುನೀತ್ ಪ್ರಮುಖವಾಗಿದ್ದು, ವಿಚಾರಣೆ ವೇಳೆ ಆತ “ನನಗೆ ಏನೂ ಗೊತ್ತಿಲ್ಲ” ಎಂದು ಹೇಳಿಕೆ ನೀಡಿದ್ದಾನೆ.

ತನಿಖೆಯ ಪ್ರಕಾರ, ಸಂದೀಪ್ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಕೋರ್ಟ್ ವಿಚಾರಣೆ ಕುರಿತು ವಿವರವಾಗಿ ಪ್ರಶ್ನಿಸಿ, ನಿರ್ದಿಷ್ಟ ಹೇಳಿಕೆ ನೀಡುವಂತೆ ಬೆದರಿಕೆ ಹಾಕಲಾಗಿದೆ. ಜೊತೆಗೆ ವಾಟ್ಸಪ್ ಕರೆ ಮೂಲಕ ವಕೀಲರಿಂದಲೂ ಒತ್ತಡ ಬಂದಿದೆ ಎಂಬ ಆರೋಪವಿದೆ.

ಇದೇ ವೇಳೆ, ಪ್ರಕರಣದಲ್ಲಿ ನಿರ್ಮಾಪಕರ ಪಾತ್ರದ ಶಂಕೆ ವ್ಯಕ್ತವಾಗಿದ್ದು, ಅವರ ಸಂಪರ್ಕ ಕುರಿತು ಪೊಲೀಸರು ದಾಖಲೆ ಸಂಗ್ರಹಿಸುತ್ತಿದ್ದಾರೆ. ಆರೋಪಿಗಳ ಮೊಬೈಲ್‌ಗಳನ್ನು FSLಗೆ ಕಳುಹಿಸಲಾಗಿದ್ದು, ಡಿಜಿಟಲ್ ಸಾಕ್ಷ್ಯ ಪರಿಶೀಲನೆ ನಡೆಯುತ್ತಿದೆ.

ಪುನೀತ್ ಮೊಬೈಲ್‌ನಿಂದ ದೊರೆಯುವ ಡೇಟಾ ಪ್ರಕರಣದ ದಿಕ್ಕನ್ನು ಬದಲಾಯಿಸಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಮತ್ತಷ್ಟು ರಾಜಕೀಯ ಮತ್ತು ಚಿತ್ರರಂಗ ಸಂಬಂಧಿತ ತಿರುವು ಪಡೆಯುವ ಸಾಧ್ಯತೆ ಇದೆ.

ಅಧಿಕಾರ ನಂತರ ಮೊದಲ ಕುಟುಂಬ ಭೇಟಿ: ಸಿದ್ದರಾಮಯ್ಯ–ಡಿಕೆಶಿ ನಡುವೆ ಉಪಹಾರ ಕೂಟ, ರಾಜಕೀಯ ಒಗ್ಗಟ್ಟು ಪ್ರದರ್ಶನ

ಬೆಂಗಳೂರು: ಮುಖ್ಯಮಂತ್ರಿ ಆಗಿ ಒಂದು ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ಕುಟುಂಬ ಸಮೇತರಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

ಕನಕಪುರಕ್ಕೆ ತೆರಳುವ ಮುನ್ನ ಸಿಎಂ ಡಿಕೆ ಶಿವಕುಮಾರ್, ಅವರ ಪತ್ನಿ ಉಷಾ ಶಿವಕುಮಾರ್ ಹಾಗೂ ಸಹೋದರ ಡಿಕೆ ಸುರೇಶ್ ಸೇರಿದಂತೆ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಉಪಹಾರ ಕೂಟದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಡಿಕೆ ಸುರೇಶ್ ಅವರು ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು ಎಂಬುದು ಗಮನಾರ್ಹವಾಗಿದೆ. ನಂತರ ಇಬ್ಬರು ನಾಯಕರು ಹಾಗೂ ಕುಟುಂಬ ಸದಸ್ಯರು ಒಟ್ಟಿಗೆ ಉಪಹಾರ ಸೇವಿಸಿ ಅನೌಪಚಾರಿಕ ಮಾತುಕತೆ ನಡೆಸಿದರು.

ಈ ವೇಳೆ ಪರಸ್ಪರ ಉಡುಗೊರೆ ವಿನಿಮಯವೂ ನಡೆದಿದ್ದು, ನಾಯಕರು ಪರಸ್ಪರ ಗೌರವ ಹಾಗೂ ಬಾಂಧವ್ಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜಕೀಯವಾಗಿ ಮಹತ್ವದ ಈ ಭೇಟಿ, ರಾಜ್ಯದ ನಾಯಕತ್ವದೊಳಗಿನ ಒಗ್ಗಟ್ಟು ಮತ್ತು ಸೌಹಾರ್ದ ಸಂದೇಶವಾಗಿ ಪರಿಗಣಿಸಲಾಗುತ್ತಿದೆ.

ಮಳೆ ಬಂದರೆ ನೆನೆಯಲು ಇಷ್ಟವೇ? ಇದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೆನು ಗೊತ್ತಾ..?

ಮಳೆಗಾಲ ಆರಂಭವಾದರೆ ತಂಪಾದ ಗಾಳಿ, ಚಿಟಪಟ ಮಳೆಹನಿಗಳು ಮತ್ತು ಆಹ್ಲಾದಕರ ವಾತಾವರಣ ಎಲ್ಲರ ಮನಸ್ಸನ್ನೂ ಸೆಳೆಯುತ್ತವೆ. ಈ ಸಂದರ್ಭದಲ್ಲಿ ಮಳೆಯಲ್ಲಿ ನೆನೆಯಬೇಕು ಎಂಬ ಆಸೆ ಹಲವರಲ್ಲಿ ಮೂಡುತ್ತದೆ. ಆದರೆ ಜ್ವರ ಅಥವಾ ಇತರ ಆರೋಗ್ಯ ಸಮಸ್ಯೆಗಳ ಭಯದಿಂದ ಅನೇಕರು ಹಿಂದೇಟು ಹಾಕುತ್ತಾರೆ.

ತಜ್ಞರ ಪ್ರಕಾರ, ಸೀಮಿತ ಅವಧಿಯವರೆಗೆ ಮಳೆಯಲ್ಲಿ ನೆನೆಯುವುದು ಕೆಲ ಆರೋಗ್ಯಕರ ಅನುಭವಗಳನ್ನು ನೀಡಬಹುದು. ಆದರೆ ಅತಿಯಾದ ಸಮಯ ಮಳೆಯಲ್ಲಿ ಕಳೆಯುವುದು ಸೂಕ್ತವಲ್ಲ. ಹಾಗಾದರೆ ಮಳೆಯಲ್ಲಿ ನೆನೆಯುವುದರಿಂದ ಸಿಗುವ ಪ್ರಯೋಜನಗಳು ಯಾವುವು ಮತ್ತು ಯಾವ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು ಎಂಬುದನ್ನು ತಿಳಿಯೋಣ.

ಮಳೆಯಲ್ಲಿ ನೆನೆಯುವುದರಿಂದ ಸಿಗಬಹುದಾದ ಪ್ರಯೋಜನಗಳು

ಕೂದಲಿನ ಸ್ವಚ್ಛತೆಗೆ ನೆರವು

ಮಳೆನೀರು ನೆತ್ತಿಯ ಮೇಲಿರುವ ಧೂಳು ಮತ್ತು ಕಲ್ಮಶವನ್ನು ತೊಳೆಯಲು ಸಹಾಯ ಮಾಡುತ್ತದೆ ಎಂದು ಕೆಲ ತಜ್ಞರು ಹೇಳುತ್ತಾರೆ. ಇದರಿಂದ ಕೂದಲು ತಾಜಾತನವನ್ನು ಪಡೆದು ಮೃದುತ್ವ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಸುರಿಯುವ ಮಳೆನೀರು ಯಾವಾಗಲೂ ಶುದ್ಧವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಒತ್ತಡ ಕಡಿಮೆ ಮಾಡಲು ಸಹಕಾರಿ

ಮಳೆಯಲ್ಲಿ ಕೆಲ ಹೊತ್ತು ನೆನೆಯುವುದು ಮನಸ್ಸಿಗೆ ನೆಮ್ಮದಿ ನೀಡುವ ಅನುಭವವಾಗಬಹುದು. ಪ್ರಕೃತಿಯೊಂದಿಗೆ ಸಮಯ ಕಳೆಯುವುದರಿಂದ ಒತ್ತಡ ಕಡಿಮೆಯಾಗಲು ಮತ್ತು ಮನಸ್ಥಿತಿ ಸುಧಾರಿಸಲು ನೆರವಾಗುತ್ತದೆ. ಇದರಿಂದ ಉತ್ತಮ ನಿದ್ರೆಯೂ ದೊರೆಯಬಹುದು.

ಮಾನಸಿಕ ಆರೋಗ್ಯಕ್ಕೆ ಉತ್ತೇಜನ

ಮಳೆಹನಿಗಳ ಸ್ಪರ್ಶ ಮತ್ತು ತಂಪಾದ ವಾತಾವರಣ ಮನಸ್ಸಿಗೆ ಉಲ್ಲಾಸ ನೀಡಬಹುದು. ದೈನಂದಿನ ಒತ್ತಡದಿಂದ ಸ್ವಲ್ಪ ಹೊತ್ತು ದೂರವಿರಲು ಇದು ನೆರವಾಗುವುದರಿಂದ ಮಾನಸಿಕ ನೆಮ್ಮದಿ ಹೆಚ್ಚಾಗುವ ಸಾಧ್ಯತೆಯಿದೆ.

ಚರ್ಮಕ್ಕೆ ತಂಪಿನ ಅನುಭವ

ಬೇಸಿಗೆಯ ಬಿಸಿಲಿನಿಂದ ಉಂಟಾಗುವ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ತಂಪಾದ ಮಳೆನೀರು ಸಹಕಾರಿಯಾಗಬಹುದು. ಇದರಿಂದ ದೇಹಕ್ಕೆ ತಾಜಾತನದ ಅನುಭವ ಸಿಗುತ್ತದೆ. ಆದರೆ ಸೂಕ್ಷ್ಮ ಚರ್ಮ ಹೊಂದಿರುವವರು ಅಥವಾ ಚರ್ಮದ ಸಮಸ್ಯೆ ಇರುವವರು ಎಚ್ಚರಿಕೆ ವಹಿಸುವುದು ಅಗತ್ಯ.

ಮಳೆನೀರಿನಲ್ಲಿ ವಿಟಮಿನ್ ಬಿ12 ನೇರವಾಗಿ ದೊರೆಯುತ್ತದೆ ಎಂಬುದಕ್ಕೆ ವೈಜ್ಞಾನಿಕವಾಗಿ ದೃಢವಾದ ಸಾಕ್ಷ್ಯಗಳು ಲಭ್ಯವಿಲ್ಲ. ಆದ್ದರಿಂದ ವಿಟಮಿನ್ ಬಿ12ಗಾಗಿ ಮಳೆನೀರನ್ನು ಅವಲಂಬಿಸುವುದು ಸೂಕ್ತವಲ್ಲ. ಅಗತ್ಯವಿದ್ದರೆ ವೈದ್ಯರ ಸಲಹೆಯಂತೆ ಆಹಾರ ಅಥವಾ ಪೂರಕಗಳನ್ನು ಸೇವಿಸುವುದು ಉತ್ತಮ.

ಮಳೆಯಲ್ಲಿ ನೆನೆಯುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು

  • 15 ರಿಂದ 20 ನಿಮಿಷಗಳಿಗಿಂತ ಹೆಚ್ಚು ಸಮಯ ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಿ.
  • ಮಳೆಯಲ್ಲಿ ನೆನೆದ ತಕ್ಷಣ ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ ಮತ್ತು ಒದ್ದೆಯಾದ ಬಟ್ಟೆಗಳನ್ನು ಬದಲಾಯಿಸಿ.
  • ದೇಹವನ್ನು ಬೆಚ್ಚಗಿರಿಸಲು ಬಿಸಿ ಸೂಪ್, ಹಾಲು ಅಥವಾ ಚಹಾ ಸೇವಿಸಬಹುದು.
  • ಮೊದಲ ಮಳೆಯ ಸಮಯದಲ್ಲಿ ಸಾಧ್ಯವಾದಷ್ಟು ನೆನೆಯುವುದನ್ನು ತಪ್ಪಿಸುವುದು ಉತ್ತಮ. ಆರಂಭಿಕ ಮಳೆಯಲ್ಲಿ ವಾತಾವರಣದಲ್ಲಿರುವ ಧೂಳು ಮತ್ತು ಮಾಲಿನ್ಯ ನೀರಿನೊಂದಿಗೆ ಬೆರೆಯುವ ಸಾಧ್ಯತೆ ಇರುತ್ತದೆ.
  • ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ಜ್ವರ ಅಥವಾ ಉಸಿರಾಟದ ಸಮಸ್ಯೆ ಇರುವವರು ಮಳೆಯಲ್ಲಿ ನೆನೆಯುವ ಮೊದಲು ಎಚ್ಚರಿಕೆ ವಹಿಸಬೇಕು.

ಮಳೆಗಾಲದ ಸೊಬಗನ್ನು ಸವಿಯುವುದು ಖಂಡಿತ ಖುಷಿಯ ವಿಚಾರ. ಆದರೆ ಆರೋಗ್ಯದ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ಮಿತವಾಗಿ ಮಳೆಯಲ್ಲಿ ನೆನೆಯುವುದೇ ಉತ್ತಮ.