Home Blog Page 9

₹80 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಕುಂದ್ರಳ್ಳಿ ಗ್ರಾಮದಲ್ಲಿ ಮುಖ್ಯಮಂತ್ರಿಗಳ ಮೂಲಸೌಲಭ್ಯ ಅಭಿವೃದ್ಧಿ ಯೋಜನೆ (ಸಿಎಂಐಡಿಪಿ) ಅಡಿಯಲ್ಲಿ ₹80 ಲಕ್ಷ ವೆಚ್ಚದಲ್ಲಿ ಅಡರಕಟ್ಟಿ–ಕುಂದ್ರಳ್ಳಿ–ನಾದಿಗಟ್ಟಿ ಜಿಲ್ಲಾ ಮುಖ್ಯ ರಸ್ತೆಯ ಆಯ್ದ ಭಾಗದಲ್ಲಿ ನಿರ್ಮಾಣವಾಗಲಿರುವ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಡಾ. ಚಂದ್ರು ಲಮಾಣಿ ಭೂಮಿಪೂಜೆ ನೆರವೇರಿಸಿದರು.

ಭೂಮಿಪೂಜೆ ಬಳಿಕ ಮಾತನಾಡಿದ ಅವರು, ಶಾಸಕನಾದ ಬಳಿಕ ತಾಲೂಕಿನ ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿಪಡಿಸಲು ವಿವಿಧ ಯೋಜನೆಗಳಡಿ ಅನುದಾನ ತಂದು ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ವಿರೋಧ ಪಕ್ಷದ ಸರ್ಕಾರವಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕೊರತೆಯಾಗದಂತೆ ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು.

ಬಟ್ಟೂರ–ಕುಂದ್ರಳ್ಳಿ ಸಂಪರ್ಕ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿದ್ದು, ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಇದೀಗ ಸ್ಪಂದಿಸಲಾಗಿದೆ. ಅಡರಕಟ್ಟಿ–ಕುಂದ್ರಳ್ಳಿ–ನಾದಿಗಟ್ಟಿ ಜಿಲ್ಲಾ ಮುಖ್ಯ ರಸ್ತೆಯು ಗದಗ, ಹೊಸಪೇಟೆ ಸೇರಿದಂತೆ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಕಾಮಗಾರಿ ಪೂರ್ಣಗೊಂಡರೆ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.

ಕ್ಷೇತ್ರದ ಹಲವು ರಸ್ತೆಗಳು ಇನ್ನೂ ಅಭಿವೃದ್ಧಿ ನಿರೀಕ್ಷೆಯಲ್ಲಿದ್ದು, ಹಿಂದುಳಿದ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲವ್ವ ಕಳಸದ, ಉಪಾಧ್ಯಕ್ಷೆ ಮಲ್ಲವ್ವ ತಳವಾರ, ಮಂಜುನಾಥ ಗೌರಿ, ಮಂಜಪ್ಪ ಕಳಸದ, ಗಂಗಾಧರ ಮೆಣಸಿನಕಾಯಿ, ಕಲ್ಲಪ್ಪ ಹಡಪದ, ಶಂಕರ ಲಮಾಣಿ, ಈಶ್ವರ ಲಮಾಣಿ, ರುದ್ರಯ್ಯ ಶಿಲವಂತಮಠ, ಸುರೇಶ ಲಮಾಣಿ, ಬಸವರಾಜ ಲಮಾಣಿ, ಬಸನಗೌಡ ಪಾಟೀಲ, ಹಾಲಪ್ಪ ಹಂಗನಕಟ್ಟಿ, ಅಭಿವೃದ್ಧಿ ಅಧಿಕಾರಿ ಹನಮಂತಪ್ಪ ಲಮಾಣಿ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮಲ್ಲಿಕಾರ್ಜುನ ಮೇತ್ರಿ, ಗುತ್ತಿಗೆದಾರ ರಾಜು ಅಂಗಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ನನ್ನ ಅಧಿಕಾರಾವಧಿಯಲ್ಲಿ ತಾಲೂಕಿನ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇನೆ. ಹಿಂದುಳಿದ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಸರ್ಕಾರ ಇನ್ನಷ್ಟು ವಿಶೇಷ ಅನುದಾನ ನೀಡಬೇಕು.”

– ಡಾ. ಚಂದ್ರು ಲಮಾಣಿ, ಶಾಸಕ

ಮಹಿಳಾ ಆರೋಗ್ಯ ಸೇವೆಗೆ ಡಾ. ಪ್ರಭಾ ದೇಸಾಯಿಗೆ ಗೌರವ

0

ವಿಜಯಸಾಕ್ಷಿ ಸುದ್ದಿ, ಗದಗ: ವೈದ್ಯರು ಕೇವಲ ರೋಗಕ್ಕೆ ಚಿಕಿತ್ಸೆ ನೀಡುವವರಲ್ಲ, ರೋಗಿಗಳ ಬದುಕಿಗೆ ಹೊಸ ಭರವಸೆ ನೀಡುವ ದೇವತಾಸಮಾನ ವ್ಯಕ್ತಿತ್ವಗಳಾಗಿದ್ದಾರೆ ಎಂದು ಜೈಂಟ್ಸ್ ಗ್ರೂಪ್ ಆಫ್ ಸಖಿ ಸಹೇಲಿ ಗದಗ ಅಧ್ಯಕ್ಷೆ ಶ್ರೀಮತಿ ಹೇಮ ಪೊಂಗೋಲಿಯ ಹೇಳಿದರು.

ವೈದ್ಯರ ದಿನಾಚರಣೆ ಅಂಗವಾಗಿ ಜೈಂಟ್ಸ್ ಗ್ರೂಪ್ ಆಫ್ ಸಖಿ ಸಹೇಲಿ ವತಿಯಿಂದ ಸಮಾಜಸೇವೆ ಹಾಗೂ ಮಹಿಳಾ ಆರೋಗ್ಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಖ್ಯಾತ ಸ್ತ್ರೀರೋಗ ತಜ್ಞೆ, ಎಂಡೋಸ್ಕೋಪಿ ಶಸ್ತ್ರಚಿಕಿತ್ಸಕಿ ಹಾಗೂ ಸ್ಪರ್ಶ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥೆ ಡಾ. ಪ್ರಭಾ ಡಿ. ದೇಸಾಯಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕಳೆದ ಎರಡು ದಶಕಗಳಿಂದ ಮಹಿಳಾ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಪ್ರಭಾ ದೇಸಾಯಿ ಅವರು ಅನೇಕ ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ‘ಸುವರ್ಣ ಸಾಧಕಿ–2026’ ಪ್ರಶಸ್ತಿಗೂ ಆಯ್ಕೆಯಾಗಿದ್ದಾರೆ. ಗದಗ ಆಬ್ಸ್ಟೆಟ್ರಿಕ್ ಮತ್ತು ಗೈನಕಾಲಜಿಕಲ್ ಸೊಸೈಟಿ (GOGS) ಅಧ್ಯಕ್ಷೆಯಾಗಿ ಎರಡು ಬಾರಿ ಸೇವೆ ಸಲ್ಲಿಸಿರುವ ಅವರು ವೈದ್ಯಕೀಯ ಶಿಕ್ಷಣ, ಸಂಶೋಧನೆ ಹಾಗೂ ಉಚಿತ ಮಹಿಳಾ ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ ಸಮಾಜಮುಖಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಶಂಸಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶ್ರೀಮತಿ ಚಂದ್ರಕಲಾ ಸ್ಥಾವರಮಠ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಶ್ರೀಮತಿ ನಿರ್ಮಲಾ ಪಾಟೀಲ ಹಾಗೂ ಶ್ರೀಮತಿ ಆಶಾ ಪಟ್ಟಣಶೆಟ್ಟಿ ಪರಿಚಯಿಸಿದರು. ಖಜಾಂಚಿ ಅನುರಾಧ ಅಮಾತ್ಯಗೌಡರ ಸ್ವಾಗತಿಸಿದರು. ಸದಸ್ಯೆಯರಾದ ರೇಖಾ ರೊಟ್ಟಿ ಮತ್ತು ಶಶಿಕಲಾ ಮಾಲಿಪಾಟೀಲ ಉಪಸ್ಥಿತರಿದ್ದರು.

ಸಾಯಿ ಮಂದಿರದಲ್ಲಿ ಜು. 19ರಿಂದ ಗುರು ಪೂರ್ಣಿಮೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿಯ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗದ ವತಿಯಿಂದ “ಶ್ರೀ ಗುರು ಪೂರ್ಣಿಮೋತ್ಸವ–2026” ಅಂಗವಾಗಿ ಜುಲೈ 19ರಿಂದ 29ರವರೆಗೆ ಹಾತಲಗೇರಿ ರಸ್ತೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಭಕ್ತಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಉತ್ಸವದ ಅಂಗವಾಗಿ ಜುಲೈ 19ರಿಂದ 28ರವರೆಗೆ ಪ್ರತಿದಿನ ಸಂಜೆ 7ರಿಂದ 8 ಗಂಟೆಯವರೆಗೆ ಹಿರಿಯ ಆಧ್ಯಾತ್ಮಿಕ ಚಿಂತಕ ಡಾ. ಎಸ್.ಬಿ. ಶೆಟ್ಟರ ಅವರಿಂದ ಶ್ರೀ ಸಾಯಿ ಸಚ್ಚರಿತ್ರೆ ಪ್ರವಚನ ಮಾಲಿಕೆ ನಡೆಯಲಿದೆ. ಸಾಯಿಬಾಬರ ಜೀವನ ಸಂದೇಶ, ಗುರುಭಕ್ತಿ, ಸೇವೆ, ಸತ್ಯ, ಸದಾಚಾರ ಹಾಗೂ ಮಾನವೀಯ ಮೌಲ್ಯಗಳ ಕುರಿತು ಭಕ್ತರಿಗೆ ಪ್ರವಚನ ನೀಡಲಾಗುವುದು.

ಜುಲೈ 22ರಿಂದ 28ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾಮೂಹಿಕ ಶ್ರೀ ಸಾಯಿ ಸಚ್ಚರಿತ್ರೆ ಪಾರಾಯಣ ಕಾರ್ಯಕ್ರಮ ನಡೆಯಲಿದೆ.

ಜುಲೈ 26ರಂದು ಬೆಳಿಗ್ಗೆ 9 ಗಂಟೆಯಿಂದ ಜೋಳಿಗೆ ಭಿಕ್ಷೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶ್ರೀ ಸಾಯಿ ಮಂದಿರದಿಂದ ವಿವೇಕಾನಂದ ಬಡಾವಣೆ ಹಾಗೂ ಕರಿಯಮ್ಮಕಲ್ಲ ಬಡಾವಣೆ ಮಾರ್ಗವಾಗಿ ಶ್ರೀ ರಾಘವೇಂದ್ರಸ್ವಾಮಿ ಮಠದ ಮೂಲಕ ಮೆರವಣಿಗೆ ಮರಳಿ ಮಂದಿರಕ್ಕೆ ಆಗಮಿಸಲಿದೆ.

ಉತ್ಸವದ ಸಮಾರೋಪದ ಅಂಗವಾಗಿ ಜುಲೈ 29ರಂದು ಶ್ರೀ ಶಿರಡಿ ಸಾಯಿಬಾಬಾರ ಸಮಾಧಿ ಶತಾಬ್ದಿ ಸ್ಮರಣೋತ್ಸವ ಹಾಗೂ ಗುರು ಪೂರ್ಣಿಮೆ ವಿಶೇಷ ಆಚರಣೆ ನಡೆಯಲಿದ್ದು, ಕಾಕಡ ಆರತಿ, ಮಂಗಳಸ್ನಾನ, ರುದ್ರಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಸಾಮೂಹಿಕ ಶ್ರೀ ಸಾಯಿ ಸತ್ಯನಾರಾಯಣ ಪೂಜೆ, ಧೂಪಾರತಿ ಹಾಗೂ ಶೇಜಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಭಕ್ತರು ಮಹಾಅನ್ನಸಂತರ್ಪಣೆಗಾಗಿ ದವಸ-ಧಾನ್ಯ ಅಥವಾ ನಗದು ರೂಪದಲ್ಲಿ ದೇಣಿಗೆ ನೀಡಬಹುದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಾಯಿನಾಥರ ಕೃಪೆಗೆ ಪಾತ್ರರಾಗುವಂತೆ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಜನಪದ ಕಲೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ: ಬಸವರಾಜ ಬಳ್ಳಾರಿ

0

ವಿಜಯಸಾಕ್ಷಿ ಸುದ್ದಿ, ಗದಗ: ಜನಪದ ಕಲೆ, ತಾತ್ವಿಕ ವಿಚಾರ ಮತ್ತು ಸಂಗೀತದ ಸೊಗಡನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಿದ ‘ತಾತ್ವಿಕ ಜನಪದ ಸೌರಭ’ ಕಾರ್ಯಕ್ರಮ ನಗರದ ಹೊಸಪೇಟೆ ಚಕ್‌ನ ಕಾಳಿಕಾದೇವಿ ಸಮುದಾಯ ಭವನದಲ್ಲಿ ಸಾಂಸ್ಕೃತಿಕ ರಂಗು ತುಂಬಿತು. ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ಸಾಂಪ್ರದಾಯಿಕ ಕಲೆ ಹಾಗೂ ಕಲಾವಿದರನ್ನು ಉಳಿಸಿ ಬೆಳೆಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಸಾಂಸ್ಕೃತಿಕ ಸಂಘಟನೆಗಳು ಹಾಗೂ ಕಲಾವಿದರು ಅವುಗಳ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಕಳೆದ 15 ವರ್ಷಗಳಿಂದ ಸಮಾಜಮುಖಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ರಂಗಾಸಕ್ತಿ ಬೆಳೆಸುತ್ತಿದ್ದು, ಗದುಗಿನ ಸಾಂಸ್ಕೃತಿಕ ವಲಯದಲ್ಲಿ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತ ಸೂರಜ್ ಮಯೇಕರ ಅವರು ‘ಮಣ್ಣಿನ ಕಲಾಕೃತಿಗಳು’ ವಿಷಯದ ಕುರಿತು ಉಪನ್ಯಾಸ ನೀಡಿದರು. ಶಿವು ಭಜಂತ್ರಿ ಮತ್ತು ತಂಡ ಹಾಗೂ ಬಂಜಾರ ಅಕಾಡೆಮಿ ಸದಸ್ಯೆ ಸಾವಿತ್ರಿ ಲಮಾಣಿ ಅವರ ತಾತ್ವಿಕ ಜನಪದ ಗಾಯನ ಸಭಿಕರ ಮನಗೆದ್ದಿತು.

ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ ಜನಪದ ಸಂಸ್ಕೃತಿಯ ಬೆಳವಣಿಗೆಯ ಕುರಿತು ಮಾತನಾಡಿದರು. ಬೆಟಗೇರಿ ಶ್ರೀಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶ್ರೀಧರ ಕೊಣ್ಣೂರ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸುರೇಶ ಕೊಪ್ಪದ, ಡಾ. ದತ್ತಪ್ರಸನ್ನ ಲ. ಪಾಟೀಲ, ವಿಶ್ವನಾಥ ಯ. ಕಮ್ಮಾರ, ಎನ್.ಐ. ಪತ್ತಾರ, ಶ್ರೀನಿವಾಸ ಹುಬ್ಬಳ್ಳಿ, ವಿಶ್ವನಾಥ ಬೇಂದ್ರೆ, ಸತೀಶ ಹೊರಪೇಟೆ, ಪ್ರಕಾಶ ಬಡಿಗೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಶ್ರೀಮತಿ ಸಾವಿತ್ರಿ ಲಮಾಣಿ ಪ್ರಾರ್ಥಿಸಿದರು. ಅಶೋಕ ಸುತಾರ ಸ್ವಾಗತಿಸಿದರು. ಮೌನೇಶ ಸಿ. ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವನಾಥ ಯ. ಕಮ್ಮಾರ ಕಾರ್ಯಕ್ರಮ ನಿರೂಪಿಸಿದರು.

“ಸಾಂಪ್ರದಾಯಿಕ ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸಾಂಸ್ಕೃತಿಕ ಸಂಘಟನೆಗಳು ಹಾಗೂ ಕಲಾವಿದರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು.”

– ಡಾ. ಬಸವರಾಜ ಬಳ್ಳಾರಿ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಒಣಗುತ್ತಿರುವ ಬೆಳೆಗಳ ಪರಿಶೀಲಿಸಿದ ಜಿಲ್ಲಾಧಿಕಾರಿ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬೆಳೆಗಳು ಬಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಗುರುವಾರ ಗದಗ ಹಾಗೂ ರೋಣ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರ ಹೊಲಗಳಲ್ಲೇ ಬೆಳೆಗಳ ಸ್ಥಿತಿಗತಿ ಪರಿಶೀಲಿಸಿದರು. ರೈತರೊಂದಿಗೆ ನೇರವಾಗಿ ಸಂವಾದ ನಡೆಸಿದ ಅವರು, ಆತಂಕ ಪಡಬಾರದು ಎಂದು ಧೈರ್ಯ ತುಂಬಿದರೆ, ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರಂತರ ಬೆಳೆ ಮೇಲ್ವಿಚಾರಣೆ ನಡೆಸುವಂತೆ ಸೂಚನೆ ನೀಡಿದರು.

ಗದಗ ತಾಲೂಕಿನ ದುಂದೂರ ಕ್ರಾಸ್, ಗಂಗಿಮಡಿ–ಹಿರೇಹಂದಿಗೋಳ ರಸ್ತೆ, ಹರ್ಲಾಪೂರ ಹಾಗೂ ಕೋಟುಮುಚಗಿ ಗ್ರಾಮಗಳಲ್ಲಿ ಹೆಸರು, ಉದ್ದು, ಶೇಂಗಾ, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳ ಬೆಳವಣಿಗೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಬಳಿಕ ರೋಣ ತಾಲೂಕಿನ ನರೇಗಲ್ ಗ್ರಾಮದಲ್ಲಿ ಮಳೆ ಕೊರತೆಯಿಂದ ಒಣಗುತ್ತಿರುವ ಬೆಳೆಗಳನ್ನು ವೀಕ್ಷಿಸಿದರು.

ಹೊಲಗಳಲ್ಲೇ ರೈತರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿಗಳು, ಮಳೆ ಕೊರತೆಯಿಂದ ಉಂಟಾಗುತ್ತಿರುವ ಹಾನಿಯನ್ನು ದಾಖಲಿಸಿ ರೈತರಿಗೆ ತಕ್ಷಣ ತಾಂತ್ರಿಕ ಸಲಹೆ ಹಾಗೂ ಅಗತ್ಯ ನೆರವು ಒದಗಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಹವಾಮಾನ ವೈಪರೀತ್ಯ, ಕೀಟ ಹಾಗೂ ರೋಗಬಾಧೆ ಕಂಡುಬಂದರೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾಹಿತಿ ನೀಡಿ, ಜಿಲ್ಲೆಯಲ್ಲಿ 3,13,719 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಇದುವರೆಗೆ 2,57,401 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜೂನ್ 1ರಿಂದ ಜುಲೈ 16ರವರೆಗೆ 121.4 ಮಿ.ಮೀ. ವಾಡಿಕೆ ಮಳೆಯ ಬದಲಿಗೆ ಕೇವಲ 82.50 ಮಿ.ಮೀ. ಮಳೆಯಾಗಿದ್ದು, ಶೇ.32.04ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ತಿಳಿಸಿದರು.

ಜುಲೈ 22ರವರೆಗೆ ಬೆಳೆ ವಿಮೆ ನೋಂದಣಿ ಅವಕಾಶ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ–ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಹೆಸರು ಹಾಗೂ ಹತ್ತಿ ಬೆಳೆಗಳಿಗೆ ಜುಲೈ 22ರವರೆಗೆ ಬೆಳೆ ವಿಮೆ ನೋಂದಾಯಿಸಿಕೊಳ್ಳಲು ಅವಕಾಶವಿದೆ. ಅರ್ಹ ರೈತರು ಈ ಸೌಲಭ್ಯದ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.

“ರೈತರು ಯಾವುದೇ ರೀತಿಯ ಸಂಕಷ್ಟಕ್ಕೆ ಸಿಲುಕದಂತೆ ಅಧಿಕಾರಿಗಳು ನಿರಂತರವಾಗಿ ಹೊಲಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿ ಪರಿಶೀಲಿಸಬೇಕು. ರೈತರಿಗೆ ಅಗತ್ಯ ತಾಂತ್ರಿಕ ಸಲಹೆ, ಇಲಾಖೆಯ ಸೌಲಭ್ಯ ಹಾಗೂ ಮಾರ್ಗದರ್ಶನವನ್ನು ಸಮಯಕ್ಕೆ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ.”

– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ, ಗದಗ

ಬಿಡದಿ ಭೂಸ್ವಾಧೀನ ವಿವಾದ: ಸಿಎಂ ವಿರುದ್ಧ ವಿಜಯೇಂದ್ರ ತೀವ್ರ ವಾಗ್ದಾಳಿ

0

ವಿಜಯಸಾಕ್ಷಿ ಸುದ್ದಿ, ಗದಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಯ ಘನತೆಗೆ ತಕ್ಕಂತೆ ನಡೆದುಕೊಳ್ಳದೆ, ರಿಯಲ್ ಎಸ್ಟೇಟ್ ಏಜೆಂಟ್‌ನಂತೆ ವರ್ತಿಸುತ್ತಿದ್ದಾರೆ. ಬಿಡದಿಯಲ್ಲಿ ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಮೂಲಕ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಸ್ವಯಂಪ್ರೇರಣೆಯಿಂದ ಭೂಮಿ ನೀಡಿದರೆ ಮಾತ್ರ ಭೂಸ್ವಾಧೀನ ಮಾಡಬೇಕು. ಆದರೆ, ಬಿಡದಿಯಲ್ಲಿ ರಾತ್ರಿ ವೇಳೆ ಗೂಂಡಾಗಳನ್ನು ರೈತರ ಮನೆಗಳಿಗೆ ಕಳುಹಿಸಿ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಕನಕಪುರದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಪ್ರಸ್ತಾಪವೂ ರಿಯಲ್ ಎಸ್ಟೇಟ್ ಲಾಬಿಯ ಭಾಗವಾಗಿದೆ. ತುಮಕೂರು ಅಥವಾ ಮಧ್ಯ ಕರ್ನಾಟಕ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ರಾಜ್ಯದ ಬಹುತೇಕ ಜನರಿಗೆ ಅನುಕೂಲವಾಗಲಿದೆ. ಆದರೆ, ತಮ್ಮ ರಾಜಕೀಯ ಹಾಗೂ ವೈಯಕ್ತಿಕ ಹಿತಾಸಕ್ತಿಗಾಗಿ ಕನಕಪುರವನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಿಂದೂಗಳ ಮೇಲಿನ ದೌರ್ಜನ್ಯ, ಕೊಲೆ ಹಾಗೂ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಿತಿಮೀರಿದೆ ಎಂದು ಆರೋಪಿಸಿದ ಅವರು, ಹಾವೇರಿ, ರಟ್ಟಿಹಳ್ಳಿ, ಯಲ್ಲಾಪುರ ಹಾಗೂ ಕೊಪ್ಪಳದ ಘಟನೆಗಳನ್ನು ಉಲ್ಲೇಖಿಸಿ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.

ಎಸ್‌ಐಆರ್ (ವಿಶೇಷ ಸಮಗ್ರ ಪರಿಷ್ಕರಣೆ) ಕಾರ್ಯವನ್ನು ಬಿಜೆಪಿ ಸವಾಲಾಗಿ ಸ್ವೀಕರಿಸಿದ್ದು, ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಮನೆಮನೆಗೆ ತೆರಳಿ ಕೆಲಸ ಮಾಡುತ್ತಿದ್ದಾರೆ. ಇದೇ ವೇಳೆ ಅಕ್ರಮ ವಲಸಿಗರಿಗೆ ಪಿಆರ್‌ಸಿ ನೀಡುತ್ತಿರುವುದು ಖಂಡನೀಯ ಎಂದು ಹೇಳಿದರು.

ರಾಜ್ಯದಲ್ಲಿ ಭೀಕರ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದರೂ ಕೃಷಿ ಸಚಿವರೇ ಇಲ್ಲದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಪ್ರಧಾನಿಗೆ ಪತ್ರ ಬರೆದು ರಾಜಕೀಯ ಮಾಡುವ ಬದಲು ರೈತರಿಗೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರದ ಜನವಿರೋಧಿ ಆಡಳಿತ, ರೈತ ವಿರೋಧಿ ನೀತಿ ಹಾಗೂ ಕಾನೂನು ಸುವ್ಯವಸ್ಥೆ ವೈಫಲ್ಯ ಖಂಡಿಸಿ ಜುಲೈ 17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಜಯೇಂದ್ರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಮುಖಂಡರಾದ ಶರಣು ತಳ್ಳಿಕೇರಿ, ಲಿಂಗರಾಜ ಪಾಟೀಲ, ಫಕ್ಕಿರೇಶ ರಟ್ಟಿಹಳ್ಳಿ, ಎಂ.ಎಸ್. ಕರಿಗೌಡ್ರ, ಎಂ.ಎಂ. ಹಿರೇಮಠ, ಭೀಮಸಿಂಗ್ ರಾಠೋಡ್, ಉಷಾ ದಾಸರ, ಸ್ವಾತಿ ಅಕ್ಕಿ, ನಿರ್ಮಲಾ ಕೊಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಗದಗ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿತ್ತನೆ ಮಾಡಿದರೂ ಮೊಳಕೆ ಬರುತ್ತಿಲ್ಲ. ರೈತರ ರಕ್ಷಣೆಗೆ ಸರ್ಕಾರ ತಕ್ಷಣ ಧಾವಿಸಬೇಕು. ಪ್ರಧಾನಿಗೆ ಪತ್ರ ಬರೆದು ಕೈಕಟ್ಟಿ ಕುಳಿತರೆ ರೈತರ ಕಣ್ಣೀರು ಒರೆಸಲು ಸಾಧ್ಯವಿಲ್ಲ.”

– ಬಿ.ವೈ. ವಿಜಯೇಂದ್ರ, ರಾಜ್ಯಾಧ್ಯಕ್ಷ, ಬಿಜೆಪಿ

ಗೃಹಜ್ಯೋತಿ ಫಲಾನುಭವಿಗಳಿಗೆ ಮರು ಪರಿಶೀಲನೆ ಕಡ್ಡಾಯ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲಾತಿ ಮರು ಪರಿಶೀಲನೆ ಕಾರ್ಯ ತಾಲೂಕಿನ ಪಿಂಜಾರ್ ಹೆಗ್ಡಳ್ ಗ್ರಾಮದಲ್ಲಿ ಆರಂಭಗೊಂಡಿದ್ದು, ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಒದಗಿಸಿ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಪರಶುರಾಮ್ ಹೆಗ್ಡಳ್ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯು ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ಜಾರಿಯಲ್ಲಿದ್ದು, ಅರ್ಹ ಫಲಾನುಭವಿಗಳಿಗೆ ಮುಂದೆಯೂ ಯೋಜನೆಯ ಸೌಲಭ್ಯ ನಿರಂತರವಾಗಿ ದೊರೆಯಬೇಕೆಂಬುದು ಸರ್ಕಾರದ ಆಶಯವಾಗಿದೆ ಎಂದು ಹೇಳಿದರು.

ಅನಧಿಕೃತ ವಿದ್ಯುತ್ ಬಳಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ರಾಜ್ಯಾದ್ಯಂತ ಫಲಾನುಭವಿಗಳ ದಾಖಲಾತಿ ಮರು ಪರಿಶೀಲನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕೆಇಬಿ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.

ಫಲಾನುಭವಿಗಳು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಇತ್ತೀಚಿನ ವಿದ್ಯುತ್ ಬಿಲ್, ಭಾವಚಿತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಅಧಿಕಾರಿಗಳಿಗೆ ನೀಡುವ ಮೂಲಕ ಪರಿಶೀಲನಾ ಕಾರ್ಯಕ್ಕೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಉಪನಾಯಕನಹಳ್ಳಿ ಶಾಖಾಧಿಕಾರಿ ಶ್ರೀನಿವಾಸ್, ಲೈನ್‌ಮ್ಯಾನ್ ವಿನಾಯಕ, ಮೆಕ್ಯಾನಿಕ್ ಪ್ರವೀಣ್, ಗ್ರಾಮ ಪ್ರಮುಖರಾದ ರವಿಯಪ್ಪ ರೆಡ್ಡಿ, ಕೆ. ಪರಮೇಶ್, ಕೇಶವರಾಯನಬಂಡಿ ದುರುಗಪ್ಪ, ಅಂಗಡಿ ಮಂಜಪ್ಪ, ಸೋಮು ಜಂಗ್ಲಿ, ಬಡಿಗೇರ್ ವಿನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಅರ್ಹ ಫಲಾನುಭವಿಗಳಿಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ನಿರಂತರವಾಗಿ ದೊರೆಯಬೇಕು. ಆದ್ದರಿಂದ ದಾಖಲಾತಿ ಮರು ಪರಿಶೀಲನೆಗೆ ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ನೀಡಿ ಅಧಿಕಾರಿಗಳಿಗೆ ಸಹಕರಿಸಬೇಕು.”

– ಪರಶುರಾಮ್ ಹೆಗ್ಡಳ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ

ಪೊಲೀಸ್ ನೇಮಕಾತಿಗೆ ಅರ್ಜಿ ಸಲ್ಲಿಸಲು ತೆರಳಿದ್ದ ಯುವತಿ ನಾಪತ್ತೆ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಮನೆಯಿಂದ ತೆರಳಿದ್ದ 24 ವರ್ಷದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಧಾರವಾಡದಲ್ಲಿ ನಡೆದಿದ್ದು, ಆಕೆಯ ಪತ್ತೆಗೆ ಧಾರವಾಡ ಉಪನಗರ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ಧಾರವಾಡದ ಕೆಸಿಡಿ ಸರ್ಕಲ್ ಸಮೀಪದ ಪಿಡಬ್ಲ್ಯುಡಿ ಕ್ವಾರ್ಟರ್ಸ್ ನಿವಾಸಿ, ಸರ್ಕಾರಿ ನೌಕರ ರಾಜಣ್ಣ ರೇವಪ್ಪ ಲೋಣಿ ಅವರ ಪುತ್ರಿ ರೂಪಾ ರಾಜಣ್ಣ ಲೋಣಿ (24) ಜುಲೈ 13ರಂದು ಸಂಜೆ ಸುಮಾರು 4.45ಕ್ಕೆ “ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ತೆರಳಿದ್ದರು. ಆದರೆ, ಬಳಿಕ ಮನೆಗೆ ವಾಪಸ್ಸಾಗದೆ ನಾಪತ್ತೆಯಾಗಿದ್ದಾರೆ.

ಕುಟುಂಬಸ್ಥರು ಸಂಬಂಧಿಕರು, ಸ್ನೇಹಿತರು ಹಾಗೂ ಪರಿಚಿತರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ರಾಜಣ್ಣ ಲೋಣಿ ಅವರು ಧಾರವಾಡ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಠಾಣೆಯಲ್ಲಿ ಅಪರಾಧ ಸಂಖ್ಯೆ 167/2026ರಡಿ ಮಹಿಳೆ ಕಾಣೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ರೂಪಾ ಸುಮಾರು 5 ಅಡಿ 3 ಇಂಚು ಎತ್ತರ, ಬೆಳ್ಳನೆಯ ಮೈಬಣ್ಣ, ದುಂಡು ಮುಖ, ನೀಟಾದ ಮೂಗು, ಕಪ್ಪು ಕೂದಲು ಹಾಗೂ ತೆಳುವಾದ ಮೈಕಟ್ಟು ಹೊಂದಿದ್ದಾರೆ. ಮನೆಯಿಂದ ಹೊರಡುವಾಗ ಗುಲಾಬಿ ಹಾಗೂ ಬಿಳಿ ಬಣ್ಣ ಮಿಶ್ರಿತ ಚೂಡಿದಾರ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.

ಯುವತಿ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಂಟ್ರೋಲ್ ರೂಮ್ (100 / 0836-2233555), ಧಾರವಾಡ ಉಪನಗರ ಪೊಲೀಸ್ ಠಾಣೆ (0836-2233511 / 9480802033) ಅಥವಾ ಕುಟುಂಬಸ್ಥರ ಮೊಬೈಲ್ ಸಂಖ್ಯೆ 9901951719ಗೆ ಮಾಹಿತಿ ನೀಡುವಂತೆ ಧಾರವಾಡ ಉಪನಗರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ವಿದ್ಯುತ್ ಇಲ್ಲದೆ ಕಂಗಾಲಾದ ರೈತರು: ಹೆಸ್ಕಾಂ ಕಚೇರಿಗೆ ಬೀಗ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೆ ನೀರಾವರಿ ಬೆಳೆಗಳು ಒಣಗುತ್ತಿವೆ ಎಂದು ಆರೋಪಿಸಿ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಗುರುವಾರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಕಚೇರಿಗೆ ಬೀಗ ಜಡಿದು ತೀವ್ರ ಪ್ರತಿಭಟನೆ ನಡೆಸಿದರು. ಈ ವೇಳೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ರೈತರು, ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು.

ಮಳೆಯ ಕೊರತೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ರೈತರಿಗೆ ನೀರಾವರಿಯೇ ಆಸರೆಯಾಗಿದ್ದು, ಹಗಲಿನಲ್ಲಿ ಐದು ಗಂಟೆ ವಿದ್ಯುತ್ ನೀಡುವುದಾಗಿ ಹೇಳಿದರೂ ಮಧ್ಯದಲ್ಲೇ ಕೈಕೊಡುತ್ತಿದೆ. ರಾತ್ರಿ ಎರಡು ಗಂಟೆಗೆ ವಿದ್ಯುತ್ ನೀಡುವುದಾಗಿ ಸಂದೇಶ ಕಳುಹಿಸಿದರೂ ಮಧ್ಯರಾತ್ರಿವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ರೈತರು ಆರೋಪಿಸಿದರು.

ಲೈನ್‌ಮೆನ್‌, ಸೆಕ್ಷನ್ ಅಧಿಕಾರಿಗಳು ಹಾಗೂ ಮೇಲಾಧಿಕಾರಿಗಳಿಗೆ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಕಚೇರಿ ದೂರವಾಣಿ ಸದಾ ಸ್ವಿಚ್‌ಆಫ್ ಆಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ತಮ್ಮ ಅಹವಾಲು ಯಾರಿಗೆ ಸಲ್ಲಿಸಬೇಕು ಎಂದು ಪ್ರಶ್ನಿಸಿದರು.

ಒಂದು ಟ್ರಾನ್ಸ್‌ಫಾರ್ಮರ್‌ಗೆ ನಿಗದಿತ ಸಂಖ್ಯೆಗಿಂತ ಹೆಚ್ಚು ವಿದ್ಯುತ್ ಸಂಪರ್ಕಗಳನ್ನು ನೀಡಿರುವುದರಿಂದ ಮೊದಲು ಮೋಟಾರ್ ಚಾಲನೆ ಮಾಡಿದವರಿಗೆ ಮಾತ್ರ ನೀರು ದೊರೆಯುತ್ತಿದ್ದು, ಉಳಿದವರು ಚಾಲನೆ ಮಾಡಿದ ಕೂಡಲೇ ಟ್ರಿಪ್ ಆಗುತ್ತಿದೆ. ನಿಯಮ ಉಲ್ಲಂಘಿಸಿ ಹಣ ಪಡೆದು ಬೇಕಾಬಿಟ್ಟಿ ಸಂಪರ್ಕಗಳನ್ನು ನೀಡಲಾಗಿದೆ ಎಂದು ರೈತರು ಗಂಭೀರ ಆರೋಪ ಮಾಡಿದರು.

ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಎಇಇ ಆಂಜನೇಯಪ್ಪ ರೈತರನ್ನು ಸಮಾಧಾನಪಡಿಸಲು ಯತ್ನಿಸಿದರೂ, ರೈತರ ಆಕ್ರೋಶಕ್ಕೆ ಗುರಿಯಾದರು. ನೀರಿನ ಕೊರತೆಯಿಂದ ಮೆಕ್ಕೆಜೋಳ ಸೇರಿದಂತೆ ಬೆಳೆಗಳು ಒಣಗುತ್ತಿದ್ದು, ರೈತರ ನಷ್ಟಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದರು.

ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಪ್ರತಿಭಟನೆಗೆ ಬೆಂಬಲ ಸೂಚಿಸಿ, ರೈತರ ಸಮಸ್ಯೆಗೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ, ಲೋಕೇಶ ಸುತಾರ ಸೇರಿದಂತೆ ಹಲವರು ಹಾಜರಿದ್ದರು.

ಪ್ರತಿಭಟನೆಯಲ್ಲಿ ಹರದಗಟ್ಟಿ, ಆಡರಕಟ್ಟಿ, ಮುನಿಯನ ತಾಂಡಾ, ಉಂಡೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರಾದ ಇಮಾಮಹುಸೇನ ದೊಡ್ಡಮನಿ, ಸುರೇಶ ಮಾಳಗಿಮನಿ, ರಾಮಪ್ಪ ಲಮಾಣಿ, ನೂರಅಹ್ಮದ ದೊಡ್ಡಮನಿ, ರವಿ ಲಮಾಣಿ, ಮಹಮ್ಮದಸಾಬ್ ದೊಡ್ಡಮನಿ, ಶಿವಪ್ಪ ಲಮಾಣಿ, ಬಸವರಾಜ ಲಮಾಣಿ, ಕೃಷ್ಣಾ ಲಮಾಣಿ, ಸೋಮು ಉಮಚಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತಿಭಟನೆ ವೇಳೆ ಕೆಲ ರೈತರು ವಿಷದ ಬಾಟಲಿಗಳನ್ನು ಹಿಡಿದು ಬಂದಿದ್ದು, ಪರಿಸ್ಥಿತಿ ಗಂಭೀರವಾಗುವ ಮುನ್ನ ಪೊಲೀಸರು ಅವುಗಳನ್ನು ವಶಪಡಿಸಿಕೊಂಡರು.

“ಈ ಬಾರಿ ಮಳೆ ಇಲ್ಲದೆ ಈಗಾಗಲೇ ಕಂಗಾಲಾಗಿದ್ದೇವೆ. ಉಳಿದಿರುವ ಸ್ವಲ್ಪ ಬೆಳೆಯನ್ನಾದರೂ ನೀರಾವರಿ ಮೂಲಕ ಉಳಿಸಿಕೊಳ್ಳಬೇಕೆಂದರೆ ಅದಕ್ಕೂ ಅವಕಾಶವಿಲ್ಲದಂತಾಗಿದೆ. ವಿದ್ಯುತ್ ಪೂರೈಕೆ ಮಾಡುವವರು ರೈತರನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಬೆಳೆಗಳು ಕಣ್ಣೆದುರೇ ಒಣಗುತ್ತಿವೆ. ನಾವೇ ರೈತರು ಬೆಳೆ ಬೆಳೆಯದಿದ್ದರೆ ನೀವೇನು ತಿನ್ನುತ್ತೀರಾ? ನಮಗೆ ಇಂತಹ ವಿದ್ಯುತ್ ಸಂಪರ್ಕವೇ ಬೇಡ, ಎಲ್ಲವನ್ನೂ ಕಿತ್ತುಕೊಂಡು ಹೋಗಿ.”

– ದೇವಪ್ಪ ಲಮಾಣಿ (ಮಾಳಗಿಮನಿ), ರೈತ, ಹರದಗಟ್ಟಿ

ಉತ್ತರ ಕರ್ನಾಟಕ ರೈತರಿಗೆ ಗುಡ್ ನ್ಯೂಸ್; ಬೆಳೆ ವಿಮೆ ನೋಂದಣಿ ಅವಧಿ ಜುಲೈ 31ರವರೆಗೆ ವಿಸ್ತರಣೆ!

ಹುಬ್ಬಳ್ಳಿ: ಮಳೆ ಕೊರತೆಯಿಂದ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಲು ತೊಂದರೆ ಎದುರಿಸುತ್ತಿದ್ದ ಉತ್ತರ ಕರ್ನಾಟಕದ ರೈತರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ.

ಧಾರವಾಡ, ಗದಗ, ಹಾವೇರಿ ಹಾಗೂ ಬಾಗಲಕೋಟೆ ಜಿಲ್ಲೆಗಳ ರೈತರಿಗೆ ಬೆಳೆ ವಿಮೆ ನೋಂದಣಿ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ.

ಈ ಮೊದಲು ಬೆಳೆ ವಿಮೆ ನೋಂದಣಿಗೆ ಜುಲೈ 15 ಕೊನೆಯ ದಿನವಾಗಿತ್ತು. ಆದರೆ ಮಳೆ ಅಭಾವದ ಹಿನ್ನೆಲೆಯಲ್ಲಿ ರೈತರು ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದು, ಬೆಳೆ ವಿಮೆ ಪಾವತಿಸುವಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು.

ಈ ಸಮಸ್ಯೆಯನ್ನು ಗಮನಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರೊಂದಿಗೆ ಚರ್ಚಿಸಿ, ನೋಂದಣಿ ಅವಧಿ ವಿಸ್ತರಿಸುವಂತೆ ಮನವಿ ಮಾಡಿದ್ದರು.

ಧಾರವಾಡ ಲೋಕಸಭಾ ಕ್ಷೇತ್ರದ ರೈತರು ಹಾಗೂ ಶಾಸಕರಾದ ಸಿ.ಸಿ. ಪಾಟೀಲ್, ಎಂ.ಆರ್. ಪಾಟೀಲ್ ಸೇರಿದಂತೆ ಹಲವರು ಈ ಸಮಸ್ಯೆಯನ್ನು ಜೋಶಿ ಅವರ ಗಮನಕ್ಕೆ ತಂದಿದ್ದರು. ಬಳಿಕ ರಾಜ್ಯ ಕೃಷಿ ಇಲಾಖೆ ಜುಲೈ 15ರಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಪ್ರಸ್ತಾವನೆ ಸಲ್ಲಿಸಿದ ಕೇವಲ 24 ಗಂಟೆಗಳಲ್ಲೇ ಕೇಂದ್ರ ಸರ್ಕಾರ ಸ್ಪಂದಿಸಿ, ರೈತರ ಹಿತದೃಷ್ಟಿಯಿಂದ ಬೆಳೆ ವಿಮೆ ನೋಂದಣಿ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಿದೆ ಎಂದು ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಮಳೆ ಕೊರತೆ ಹಾಗೂ ತಾಂತ್ರಿಕ ಕಾರಣಗಳಿಂದ ಬೆಳೆ ವಿಮೆ ಮಾಡಿಸಿಕೊಳ್ಳಲಾಗದ ಅರ್ಹ ರೈತರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಸಚಿವರು ಮನವಿ ಮಾಡಿದ್ದಾರೆ.