Home Blog Page 91

ತುಮಕೂರು| ಮಾದರಿ ಆಗಬೇಕಿದ್ದ ಸರ್ಕಾರಿ ಕಚೇರಿಗಳೇ ಹೀಗೆ ಮಾಡಿದ್ರೆ ಹೇಗೆ? 44 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ! ಕ್ಲಿಯರ್ ಯಾವಾಗ?

0

ತುಮಕೂರು:- ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳು ವಿದ್ಯುತ್ ಬಿಲ್ ಪಾವತಿಸದೇ ಬರೋಬ್ಬರಿ 44 ಕೋಟಿ 05 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಕಳೆದ ವರ್ಷವೇ ಬಾಕಿ ವಿದ್ಯುತ್ ಬಿಲ್ ಪಾವತಿಸುವಂತೆ ಬೆಸ್ಕಾಂ ಸೂಚನೆ ನೀಡಿದ್ದರೂ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ವಹಿಸಿವೆ ಎನ್ನುವ ಆರೋಪ ಕೇಳಿಬಂದಿದೆ. ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಹಲವು ಪ್ರಮುಖ ಇಲಾಖೆಗಳು ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ಪಾವತಿಸದೇ ಉಳಿಸಿಕೊಂಡಿವೆ. ಕಳೆದ ನವೆಂಬರ್ ಅಂತ್ಯದೊಳಗೆ ಬಿಲ್ ಪಾವತಿಸುವಂತೆ ಬೆಸ್ಕಾಂ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ, ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ತಿಳಿದುಬಂದಿದೆ.

ತಿಂಗಳುಗಟ್ಟಲೆ ಬಿಲ್ ಕಟ್ಟದೇ ಇರುವುದರಿಂದ ಬಾಕಿ ಹಣ ವಸೂಲಿಗೆ ಬೆಸ್ಕಾಂ ಅಧಿಕಾರಿಗಳು ಸುಸ್ತಾಗಿದ್ದು, ಇದೀಗ ಸರ್ಕಾರಿ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ. ಶಾಲಾ ಶಿಕ್ಷಣ, ಕಂದಾಯ, ಸಮಾಜ ಕಲ್ಯಾಣ, ತೋಟಗಾರಿಕೆ ಸೇರಿದಂತೆ ಹಲವು ಇಲಾಖೆಗಳು ಕೋಟಿಗಟ್ಟಲೆ ಹಣ ಬಾಕಿ ಉಳಿಸಿಕೊಂಡ ಹಿನ್ನೆಲೆ ಬೆಸ್ಕಾಂ ಖಡಕ್ ಎಚ್ಚರಿಕೆ ನೀಡಿದೆ. ಸಾಮಾನ್ಯ ಜನರಿಗೆ ನಿಯಮ ಕಟ್ಟುನಿಟ್ಟಾಗಿ ಅನ್ವಯಿಸುವ ಸರ್ಕಾರದ ಇಲಾಖೆಗಳೇ ನಿಯಮ ಉಲ್ಲಂಘಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡ ಪ್ರಮುಖ ಇಲಾಖೆಗಳು:

ಜಲಸಂಪನ್ಮೂಲ ಇಲಾಖೆ – 17.73 ಕೋಟಿ ರೂ.

ಸಣ್ಣ ನೀರಾವರಿ ಇಲಾಖೆ – 12.72 ಕೋಟಿ ರೂ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – 3.63 ಕೋಟಿ ರೂ.

ನಗರಾಭಿವೃದ್ಧಿ ಇಲಾಖೆ – 2.65 ಕೋಟಿ ರೂ.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ – 1.85 ಕೋಟಿ ರೂ.

ಕಂದಾಯ ಮತ್ತು ಮುಜರಾಯಿ ಇಲಾಖೆ – 1.44 ಕೋಟಿ ರೂ.

ಶಾಲಾ ಶಿಕ್ಷಣ ಇಲಾಖೆ – 1.10 ಕೋಟಿ ರೂ.

ಸಮಾಜ ಕಲ್ಯಾಣ ಇಲಾಖೆ – 1.09 ಕೋಟಿ ರೂ.

ತೋಟಗಾರಿಕೆ ಇಲಾಖೆ – 37 ಲಕ್ಷ ರೂ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ – 34 ಲಕ್ಷ ರೂ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ – 31 ಲಕ್ಷ ರೂ.

ಗೃಹ ಇಲಾಖೆ – 23 ಲಕ್ಷ ರೂ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ – 11.97 ಲಕ್ಷ ರೂ.

ಲೋಕೋಪಯೋಗಿ ಇಲಾಖೆ – 7.56 ಲಕ್ಷ ರೂ.

ಕಾನೂನು ಇಲಾಖೆ – 6.11 ಲಕ್ಷ ರೂ.

ಅರಣ್ಯ ಇಲಾಖೆ – 8 ಲಕ್ಷ ರೂ.

ಇತರೆ ಇಲಾಖೆಗಳನ್ನು ಸೇರಿಸಿ ಒಟ್ಟು ಬಾಕಿ ಮೊತ್ತ 44.05 ಕೋಟಿ ರೂ.

ಬೆಂಗಳೂರು| ಒನ್-ವೇ ನಿಯಮ ಉಲ್ಲಂಘನೆ; ಬರೋಬ್ಬರಿ 23 ಸಾವಿರ ಕೇಸ್ ದಾಖಲು!

0

ಬೆಂಗಳೂರು: ಏಕಮುಖ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಜನವರಿ 21ರಿಂದ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 9 ದಿನಗಳಲ್ಲಿ 23,000ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ನಿನ್ನೆ ಮಾತ್ರ 3,000 ಪ್ರಕರಣ ದಾಖಲಾಗಿದ್ದು, ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ.

ಯಾವ ವಲಯದಲ್ಲಿ ಎಷ್ಟು?

ಉತ್ತರ: 329 (ಒಟ್ಟು 4,660)
ದಕ್ಷಿಣ: 1,327 (ಒಟ್ಟು 7,709)
ಪೂರ್ವ: 913 (ಒಟ್ಟು 6,832)
ಪಶ್ಚಿಮ: 499 (ಒಟ್ಟು 4,327)

ಏಕಮುಖ ಸಂಚಾರದಿಂದ ವಾಹನ ದಟ್ಟಣೆ, ಸವಾರರಿಗೆ ಸಮಸ್ಯೆ ಆಗುತ್ತಿದೆ ಎಂದು ಪ್ರಯಾಣಿಕರು ಸಂಚಾರ ಪೊಲೀಸರಿಗೆ ದೂರು ನೀಡುತ್ತಿದ್ದರು. ದಿನೇ ದಿನೇ ಒನ್‌ವೇ ಸವಾರರ ಕಿರಿಕಿರಿ ಜಾಸ್ತಿಯಾಗುತ್ತಿದ್ದಂತೆ ಪೊಲೀಸರು ಈಗ ಕಾರ್ಯಾಚರಣೆಗೆ ಇಳಿದಿದ್ದಾರೆ. ಒನ್ ವೇ ಸಂಚಾರದ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಯುತ್ತದೆ ಎಂದು ಟ್ರಾಫಿಕ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಸಿಎಂ–ಡಿಸಿಎಂ ಚಿತ್ರ ಬಳಸಿ ಅವಹೇಳನಕಾರಿ ಪೋಸ್ಟ್: ಬಿಜೆಪಿ ವಿರುದ್ಧ ದೂರು ದಾಖಲು

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕೆಲ ಸಚಿವರ ಚಿತ್ರಗಳನ್ನು ಬಳಸಿ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಪ್ರಕರಣದಲ್ಲಿ ಬಿಜೆಪಿ ವಿರುದ್ಧ ದೂರು ದಾಖಲಾಗಿದೆ.

ಈ ಪೋಸ್ಟ್ “ಕರ್ನಾಟಕವನ್ನು ಹಗಲಿರುಳು ಲೂಟಿ ಹೊಡೆಯುತ್ತಿರುವ ಸ್ಕ್ಯಾಮ್ ಸಾಮ್ರಾಜ್ಯದ ಅಸಲಿ ಕಥೆ” ಎಂಬ ಶೀರ್ಷಿಕೆ ಹೊಂದಿದ್ದು, “ಲೂಟಿ” ಮತ್ತು “ಸ್ಕ್ಯಾಮ್” ಎಂಬ ಪದಗಳನ್ನು ಹಿನ್ನಲೆಯಲ್ಲಿ ಬಳಸಲಾಗಿದೆ. ಕೆಪಿಸಿಸಿ ವಕೀಲರ ತಂಡದವರು, ಈ ಪೋಸ್ಟ್ ವ್ಯಕ್ತಿತ್ವ ಹರಣ ಮತ್ತು ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಉದ್ದೇಶ ಪಟ್ಟಿರುವುದಾಗಿ ದೂರು ನೀಡಿದ್ದಾರೆ.

ಈ ಪ್ರಕರಣ ಸಂಬಂಧ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಹರಡುವ ಅವಹೇಳನಕಾರಿ ವಿಷಯಗಳನ್ನು ಗುರುತಿಸಿ, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸವನ್ನು ಮುಂದುವರಿಸಿದ್ದಾರೆ.

ರಾಜ್ಯಸಭಾ ಸದಸ್ಯೆ ಪಿ.ಟಿ ಉಷಾ ಪತಿ ಶ್ರೀನಿವಾಸನ್ ನಿಧನ!

0

ತಿರುವನಂತಪುರಂ:- ರಾಜ್ಯಸಭಾ ಸದಸ್ಯೆ ಹಾಗೂ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​ಅಧ್ಯಕ್ಷೆ ಪಿ.ಟಿ. ಉಷಾ ಅವರ ಪತಿ ವಿ. ಶ್ರೀನಿವಾಸನ್ ನಿಧನರಾಗಿದ್ದಾರೆ.

ಶುಕ್ರವಾರ ನಡುರಾತ್ರಿ ತಿಕ್ಕೋಡಿ ಪೆರುಮಾಳ್‌ಪುರಂನಲ್ಲಿ ತಮ್ಮ ನಿವಾಸದಲ್ಲಿ ಕುಸಿದು ಬಿದ್ದು ನಿಧನರಾದರು. ಅವರನ್ನು ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ವೈದ್ಯರ ಪ್ರಯತ್ನವೂ ಫಲಕಾರಿಯಾಗಲಿಲ್ಲ. ಘಟನೆ ಸಮಯದಲ್ಲಿ ಉಷಾ ಮನೆಯಲ್ಲಿ ಇರಲಿಲ್ಲ ಎಂದು ಕುಟುಂಬದವರು ತಿಳಿಸಿದರು.

ಶ್ರೀನಿವಾಸನ್ ಕೇರಳದ ಮಲಪ್ಪುರಂ ಜಿಲ್ಲೆಯ ಪೊನ್ನಾನಿಯ ಕುಟ್ಟಿಕ್ಕಾಡ್‌ನ ವೆಂಗಲಿ ಥರಾವದ್‌ನಲ್ಲಿ ಜನಿಸಿದರು. ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ (CISF) ಡೆಪ್ಯೂಟಿ ಎಸ್‌ಪಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. 1991 ರಲ್ಲಿ ದೂರದ ಸಂಬಂಧದ ಮೂಲಕ ಪಿ.ಟಿ. ಉಷಾ ಅವರೊಂದಿಗೆ ಅವರ ವಿವಾಹ ನಡೆಯಿತು. ದಂಪತಿಗೆ ಡಾ. ಉಜ್ವಲ್ ವಿಘ್ನೇಶ್ ಎಂಬ ಪುತ್ರನಿದ್ದಾರೆ.

ಶ್ರೀನಿವಾಸನ್ ಅವರ ಅಕಾಲಿಕ ನಿಧನವು ಕುಟುಂಬ, ಸ್ನೇಹಿತರ ಹಾಗೂ ಕ್ರೀಡಾ ವಲಯದಲ್ಲಿ ತೀವ್ರ ಸಂತಾಪಕ್ಕೆ ಕಾರಣವಾಗಿದೆ. ಸಾರ್ವಜನಿಕರು ಮತ್ತು ಅಭಿಮಾನಿಗಳು ಉಷಾ ಅವರ ಕುಟುಂಬದೊಂದಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಅವರ ಜೀವನ ಮತ್ತು ಸೇವೆಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಹ ನಮನ ಸಲ್ಲಿಸಲಾಗಿದೆ.

ಹೋಂವರ್ಕ್ ಮಾಡಿಲ್ಲವೆಂದು ಬಾಲಕನಿಗೆ ಶಿಕ್ಷಕಿಯಿಂದ ಕ್ರೂರ ಹಲ್ಲೆ: ಪೋಷಕರಿಗೆ ಹೇಳಿದ್ರೆ ಕುತ್ತಿಗೆ ಹಿಸುಕುತ್ತೇನೆ’ ಎಂದು ಬೆದರಿಕೆ

0

ಬೆಂಗಳೂರು: ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ನಾಲ್ಕನೇ ತರಗತಿ ಓದುತ್ತಿದ್ದ ಬಾಲಕನ ಮೇಲೆ ಶಿಕ್ಷಕಿ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ಜನವರಿ 10ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ನಂದಿನಿ ಲೇಔಟ್‌ನಲ್ಲಿರುವ ವೀಣಾ ವಿದ್ಯಾ ಸಂಸ್ಥೆಯಲ್ಲಿ ನಡೆದಿದೆ.

ಶಿಕ್ಷಕಿ ಆಂಗ್ಲಿನ್ ಬಾಲಕನಿಗೆ ಬಾಸುಂಡೆ ಬರುವ ಮಟ್ಟಿಗೆ ಥಳಿಸಿದ್ದಾರೆ ಎಂದು ಆರೋಪಿಸಿ, ಬಾಲಕನ ತಾಯಿ ಲಕ್ಷ್ಮೀ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಲ್ಲೆಯ ಬಳಿಕ ಬಾಲಕ ಶಾಲೆಗೆ ಹೋಗಲು ನಿರಾಕರಿಸಿದ್ದಾನೆ ಎನ್ನಲಾಗಿದೆ.

ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ತಮ್ಮ ಮಗನನ್ನು ಹಾಸ್ಟೆಲ್‌ನಲ್ಲಿ ಬಿಟ್ಟು ಓದಿಸುತ್ತಿದ್ದರು. ಇತ್ತೀಚೆಗೆ ಮಗನನ್ನು ಭೇಟಿಯಾಗಲು ಬಂದ ವೇಳೆ, ಆತನ ಕೈ ಹಾಗೂ ದೇಹದ ಮೇಲೆ ಗಂಭೀರ ಬಾಸುಂಡೆ ಗುರುತುಗಳನ್ನು ಕಂಡು ಶಾಕ್ ಆಗಿದ್ದಾರೆ. ವಿಚಾರಿಸಿದಾಗ, ಹೋಂವರ್ಕ್ ಮಾಡದ ಕಾರಣಕ್ಕೆ ಇಂಗ್ಲಿಷ್ ಶಿಕ್ಷಕಿ ಆಂಗ್ಲಿನ್ ಮಗುವಿಗೆ ಥಳಿಸಿದ್ದಾಳೆ ಎಂದು ಬಾಲಕ ಅಳುತ್ತಾ ಹೇಳಿದ್ದಾನೆ.

ಪೋಷಕರಿಗೆ ವಿಷಯ ತಿಳಿಸಿದರೆ ಕುತ್ತಿಗೆ ಹಿಸುಕುವುದಾಗಿ ಬೆದರಿಕೆ ಹಾಕಿದ್ದರಿಂದ ಈವರೆಗೆ ಯಾರಿಗೂ ಹೇಳಲು ಸಾಧ್ಯವಾಗಲಿಲ್ಲ ಎಂದು ಬಾಲಕ ತಾಯಿಯ ಮುಂದೆ ಕಣ್ಣೀರಿಟ್ಟಿದ್ದಾನೆ.

ಈ ವಿಷಯ ತಿಳಿದ ಬಳಿಕ ಶಾಲಾ ಮುಖ್ಯಸ್ಥರನ್ನು ಪ್ರಶ್ನಿಸಿದರೂ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆ, ಆಕ್ರೋಶಗೊಂಡ ತಾಯಿ ಗುರುವಾರ ಪೊಲೀಸ್ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.

ಬೆಂಗಳೂರು| ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ!

0

ಬೆಂಗಳೂರು:- ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಕೆಜಿ ರಸ್ತೆಯ ಕಂದಾಯ ಭವನ ಬಳಿ ಜರುಗಿದೆ.

ತಡರಾತ್ರಿ 12.40 ರ ಸುಮಾರಿಗೆ ಈ ಘಟನೆ ನಡೆದಿದೆ. ಅಪಘಾತ ಎಸಗಿ ಅಪರಿಚಿತ ವಾಹನ ಚಾಲಕ ಪರಾರಿ ಆಗಿದ್ದಾನೆ. ಕೂಡಲೇ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದರು.

ಬಳಿಕ ಆಟೋದಲ್ಲಿ ಗಾಯಾಳುವನ್ನ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಡಿಕ್ಕಿ ಹೊಡೆದು ಎಸ್ಕೇಪ್ ಆದ ಅಪರಿಚಿತ ವಾಹನಕ್ಕೆ ಪೊಲೀಸರು ಶೋಧ ಕೈಗೊಂಡಿದ್ದಾರೆ. ಹಲಸೂರು ಗೇಟ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಗರ್ಭಿಣಿ ಸೊಸೆಯ ಕತ್ತು ಸೀಳಿ ಕೊಂದ ಮಾವ: ಆಸ್ತಿ ಲಾಲಸೆ ಬಿಚ್ಚಿಟ್ಟ ಪೊಲೀಸ್ ತನಿಖೆ

0

ರಾಯಚೂರು: ಚಿಕ್ಕ ಹಣಗಿ ಗ್ರಾಮದಲ್ಲಿ ಗರ್ಭಿಣಿ ಸೊಸೆ ರೇಖಾಳನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಪ್ರಕರಣದಲ್ಲಿ ಕೇವಲ ಕೌಟುಂಬಿಕ ಕಲಹವಲ್ಲ, ಆಸ್ತಿ ಲಾಲಸೆ ಮತ್ತು ಅಮಾನುಷ ಮನೋಭಾವವೇ ಕಾರಣ ಎಂಬುದು ಪೊಲೀಸರ ತನಿಖೆಯಿಂದ ಸ್ಪಷ್ಟವಾಗಿದೆ.

ಆರೋಪಿ ಸಿದ್ದಪ್ಪ ತನ್ನ ಸೊಸೆ ರೇಖಾ ತನ್ನ ಮಾತು ಕೇಳುತ್ತಿಲ್ಲ, ಆಸ್ತಿಗಾಗಿ ಪೋಷಕರ ಬಳಿ ಕೇಳುತ್ತಿಲ್ಲ ಎಂಬ ಕಾರಣಕ್ಕೆ ನಿತ್ಯ ಕಿರುಕುಳ ನೀಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರೂ ಆಕೆಯನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸಿಸಲಾಗುತ್ತಿತ್ತು ಎಂಬ ಅಂಶಗಳು ಬೆಳಕಿಗೆ ಬಂದಿವೆ.

ಮೃತಳ ತಂದೆ ಬಸವರಾಜ್ ಟಿವಿ9 ಸುದ್ದಿವಾಹಿನಿಗೆ ಪ್ರತಿಕ್ರಿಯಿಸಿ, “ನನ್ನ ಮಗಳು ಅನುಭವಿಸುತ್ತಿದ್ದ ಹಿಂಸೆಯನ್ನು ನಮ್ಮ ಬಳಿ ಹೇಳದೆ ಮೌನವಾಗಿ ಸಹಿಸಿಕೊಂಡಿದ್ದಳು. ಆಕೆಗೆ ಹುಟ್ಟುವ ಮಗು ನಮಗೆ ಬೇಡ ಎಂದು ಹೇಳಿದ್ದೇ ಅವರ ಕ್ರೂರ ಮನಸ್ಥಿತಿಯನ್ನು ತೋರಿಸುತ್ತದೆ” ಎಂದು ಕಣ್ಣೀರಿಟ್ಟಿದ್ದಾರೆ.

ಮಗುವಿನೊಂದಿಗೆ ತಾಯಿ ಬಲಿಯಾಗಿರುವ ಈ ಹತ್ಯೆ ಮಾನವೀಯತೆ ಇಲ್ಲದ ಕೃತ್ಯವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಮಲೆನಾಡಿನಲ್ಲಿ ಮಂಗನಕಾಯಿಲೆ ಆತಂಕ: ಚಿಕ್ಕಮಗಳೂರಿನಲ್ಲಿ 9 ಕೇಸ್ ಪತ್ತೆ, ಹೆಚ್ಚಿದ ಆತಂಕ!

0

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಚಳಿ ಕಡಿಮೆಯಾಗುತ್ತಿದ್ದಂತೆ ಈ ಪ್ರದೇಶದ ಜನರನ್ನು ಪ್ರತಿ ವರ್ಷ ಕಾಡುವ ಮಂಗನಕಾಯಿಲೆ ಮತ್ತೆ ಆತಂಕಕ್ಕೆ ಕಾರಣವಾಗಿದೆ.

ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ರೋಗ ಪತ್ತೆಯಾಗಿದ್ದು, ಈಗಾಗಲೇ ಶಿವಮೊಗ್ಗದಲ್ಲಿ ವರ್ಷದ ಮೊದಲ ಬಲಿ ಸಂಭವಿಸಿರುವುದು ಸಾರ್ವಜನಿಕರಲ್ಲಿ ಭೀತಿ ಹೆಚ್ಚಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ, ಶೃಂಗೇರಿ, ಕೊಪ್ಪ ಮತ್ತು ಚಿಕ್ಕಮಗಳೂರು ತಾಲೂಕುಗಳಲ್ಲಿ ಕೆ.ಎಫ್.ಡಿ ಲಕ್ಷಣಗಳು ಕಾಣಿಸಿಕೊಂಡಿವೆ. ಜಿಲ್ಲೆಯಲ್ಲಿ ಒಟ್ಟು 9 ಪ್ರಕರಣಗಳು ದೃಢಪಟ್ಟಿದ್ದು, ಇವತ್ತಿಗೆ 6 ಮಂದಿ ಗುಣಮುಖರಾಗಿದ್ದಾರೆ. ಉಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಕೊಪ್ಪ ಸರ್ಕಾರಿ ಆಸ್ಪತ್ರೆಯ ಕೆ.ಎಫ್.ಡಿ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಎನ್.ಆರ್. ಪುರ ತಾಲ್ಲೂಕಿನ ಬಾಳೆಹೊನ್ನೂರು ಮತ್ತು ಕೊಪ್ಪದ ಅರಳಿಕೊಪ್ಪದಲ್ಲಿ ಪ್ರತ್ಯೇಕ ಪ್ರಕರಣಗಳು ವರದಿಯಾಗಿವೆ. ವಿಶೇಷವಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಎನ್.ಆರ್. ಪುರ ತಾಲ್ಲೂಕಿನ ಮೇಗರಮಕ್ಕಿ ಗ್ರಾಮದವರು. ರೋಗ ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆ ಜಾಗೃತಿ ಕಾರ್ಯಾಚರಣೆ ನಡೆಸುತ್ತಿದೆ. ಈಗಾಗಲೇ ಸುಮಾರು 595ಕ್ಕೂ ಹೆಚ್ಚು ಜನರ ರಕ್ತದ ಮಾದರಿಗಳನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಆರೋಗ್ಯ ಇಲಾಖೆ ಸೂಚನೆ:-

ಜ್ವರ, ವಿಪರೀತ ಮೈ–ಕೈ ನೋವು ಪ್ರಮುಖ ಲಕ್ಷಣಗಳು. ಲಕ್ಷಣ ಕಾಣಿಸಿದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು. ಕಾಡು ಅಥವಾ ತೋಟಗಳಿಗೆ ಹೋಗುವ ಮುನ್ನ ಮೈ ಪೂರ್ತಿ ಮುಚ್ಚುವ ಬಟ್ಟೆ ಧರಿಸಬೇಕು ಮತ್ತು ಅರಣ್ಯ ಇಲಾಖೆಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು.

ಲಕ್ಕುಂಡಿ ಉತ್ಖನನ ಸ್ಥಳದಲ್ಲಿ ನಿಜ ಹಾವು ಪತ್ತೆ: ಮೂರು ಹೆಡೆ ನಾಗರ ಶಿಲೆಯ ಬಳಿಕ ಮತ್ತೊಂದು ಅಚ್ಚರಿ

0

ಗದಗ: ಐತಿಹಾಸಿಕ ಲಕ್ಕುಂಡಿಯ ಉತ್ಖನನ ಸ್ಥಳದಲ್ಲಿ ನಿಜವಾದ ಹಾವು ಪತ್ತೆಯಾಗಿರುವ ಘಟನೆ ತೀವ್ರ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ. ಲಕ್ಕುಂಡಿ ಉತ್ಖನನ ಪ್ರದೇಶದ ಬ್ಲಾಕ್–ಎ ವಿಭಾಗದಲ್ಲಿ ಹಾವು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ನಿನ್ನೆ ಮಾತ್ರ ಉತ್ಖನನ ಸ್ಥಳದಲ್ಲಿ ಮೂರು ಹೆಡೆಗಳಿರುವ ನಾಗರ ಶಿಲೆ ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ಇದೀಗ ನಿಜವಾದ ಹಾವು ಪತ್ತೆಯಾಗಿರುವುದು ಹಲವು ಅನುಮಾನಗಳು ಮತ್ತು ಚರ್ಚೆಗಳಿಗೆ ಕಾರಣವಾಗಿದೆ. ಈ ಬೆಳವಣಿಗೆ ಲಕ್ಕುಂಡಿಯ ಉತ್ಖನನ ಕಾರ್ಯಕ್ಕೆ ಮತ್ತಷ್ಟು ಮಹತ್ವ ತಂದಿದೆ.

ಹಾವು ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಉತ್ಖನನ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಯಲ್ಲಿ ಆತಂಕ ಹೆಚ್ಚಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದ ನಡುವೆ ಇಂತಹ ಬೆಳವಣಿಗೆಗಳು ಸ್ಥಳೀಯರ ಗಮನ ಸೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೇನು ಅಚ್ಚರಿಗಳು ಎದುರಾಗಲಿವೆ ಎಂಬ ಪ್ರಶ್ನೆ ಉದ್ಭವಿಸಿದೆ.

3 ಮದುವೆ…ಶ್ರೀಮಂತ ಹುಡುಗರೇ ಈಕೆ ಟಾರ್ಗೆಟ್; ಲಕ್ಷಾಂತರ ರೂ. ಲೂಟಿ, ಠಾಣೆ ಮೆಟ್ಟಿಲೇರಿದ ಗಂಡಂದಿರು!

0

ದೊಡ್ಡಬಳ್ಳಾಪುರ: ಪ್ರೀತಿ ಮತ್ತು ಮದುವೆ ಎಂಬ ವೇಷದಲ್ಲಿ ಪುರುಷರನ್ನು ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ಹಣ ವಂಚಿಸಿರುವ ಕಿರಾತಕ ಮಹಿಳೆಯೊಬ್ಬಳ ಅಸಲಿ ಮುಖ ದೊಡ್ಡಬಳ್ಳಾಪುರದಲ್ಲಿ ಬಯಲಾಗಿದೆ.

ಅಣಬೆ ಗ್ರಾಮದ ಸುಧಾರಾಣಿ ವಿರುದ್ಧ ಮೊದಲ ಮತ್ತು ಎರಡನೇ ಪತಿಯರಿಂದ ತನಿಖೆಗಾಗಿ ದೂರು ನೀಡಲಾಗಿದೆ. ಸುಧಾರಾಣಿ, ಹಣವಿರುವ ಪುರಷರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಾಳೆ ಎಂದು ಸಂತ್ರಸ್ತರು ಹೇಳಿದ್ದಾರೆ. ಈಗಾಗಲೇ ಮೂವರನ್ನು ಮದುವೆಯಾಗಿರುವ ಈಕೆ, ಇಬ್ಬರು ಪತಿಯರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾಳೆ ಎನ್ನಲಾಗಿದೆ.

ಮೊದಲ ಪತಿ ವೀರೆಗೌಡನೊಂದಿಗೆ ಇಬ್ಬರು ಮಕ್ಕಳು ಹುಟ್ಟಿದರೂ, “ಕಾರು ಮತ್ತು ಬುಲೆಟ್ ಓಡಿಸಲು ಬರಲ್ಲ” ಎಂಬ ಕ್ಷುಲ್ಲಕ ಕಾರಣವನ್ನು ಹೇಳಿ ಪತಿಯನ್ನೂ ಮಕ್ಕಳನ್ನೂ ತೊರೆದು ಹೋಗಿದ್ದಾಳೆ. ನಂತರ, ಡೆಲಿವರಿ ಬಾಯ್ ಅನಂತಮೂರ್ತಿಯನ್ನು ನಂಬಿಸಿ, ದೇವಸ್ಥಾನದಲ್ಲಿ ಮದುವೆಯಾಗಿದ್ದು, ಸುಮಾರು ಒಂದೂಕಾಲು ವರ್ಷಗಳ ಅವಧಿಯಲ್ಲಿ 15-20 ಲಕ್ಷ ರೂಪಾಯಿ ವಂಚನೆ ಮಾಡಿದ ಆರೋಪಗಳಿವೆ.

ಅನಂತಮೂರ್ತಿಯಿಂದ ಹಣ ಪಡೆದ ನಂತರ, ಮತ್ತೊಂದು ಮದುವೆಯಾಗಿದ್ದಾಳೆ ಎಂಬ ಮಾಹಿತಿ ಬಂದಿದೆ. ಇದೀಗ ಮೊದಲ ಮತ್ತು ಎರಡನೇ ಪತಿ ಒಟ್ಟಿಗೆ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ತೆರಳಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಸಂತ್ರಸ್ತರು ಸುಧಾರಾಣಿ ಕೇವಲ ಹಣಕ್ಕಾಗಿ ಶ್ರೀಮಂತರನ್ನು ಮತ್ತು ಅಮಾಯಕರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಾಳೆ ಎಂದು ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ಪೊಲೀಸ್ ಠಾಣೆ ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

error: Content is protected !!