Home Blog Page 92

ಬೆಂಗಳೂರಿಗರ ಗಮನಕ್ಕೆ; ಈ ಎರಡು ದಿನ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ!

0

ಬೆಂಗಳೂರು:- ರಾಜಧಾನಿ ಬೆಂಗಳೂರು ನಗರದ ವಿವಿಧೆಡೆ ಫೆಬ್ರವರಿ 5 ಮತ್ತು 6ರಂದು ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಜಲಮಂಡಳಿ ಕೋರಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತುರ್ತು ನಿರ್ವಹಣಾ ಕಾಮಗಾರಿ ನಡೆಸಲಿರುವ ಹಿನ್ನೆಲೆ, ಫೆಬ್ರವರಿ 5 ಮತ್ತು 6 ರಂದು ನಗರದ ವಿವಿಧ ಭಾಗಗಳಲ್ಲಿ ಕಾವೇರಿ ನೀರು ಪೂರೈಕೆ ವ್ಯತ್ಯಯವಾಗಲಿದೆ.

BWSSB ಅಧ್ಯಕ್ಷ ಡಾ.ವಿ. ರಾಮ್ ಪ್ರಸಾದ್ ಮನೋಹರ್ ತಿಳಿಸಿದಂತೆ, 1200ಎಂಎಂ, 900ಎಂಎಂ ಮತ್ತು 700ಎಂಎಂ ವ್ಯಾಸದ ನೀರು ಸರಬರಾಜು ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಡೆಯಲಿದೆ. ಈ ಕಾರಣಕ್ಕೆ, ಫೆಬ್ರವರಿ 5 ಶುಕ್ರವಾರ ಬೆಳಗ್ಗೆ 6 ರಿಂದ ಫೆಬ್ರವರಿ 6 ಬೆಳಗ್ಗೆ 6 ಗಂಟೆಯವರೆಗೆ (ಒಟ್ಟು 24 ಗಂಟೆ) ಮೊದಲನೆಯ ಮತ್ತು ಎರಡನೆಯ ಹಂತದ ಜಲರೇಚಕ ಯಂತ್ರಗಾರ ಸ್ಥಗಿತಗೊಳಿಸಲಾಗುತ್ತದೆ. ಮಂಡಳಿ ಸೂಚನೆಯಂತೆ, ನಾಗರಿಕರು ಮುಂಜಾಗ್ರತೆಯಾಗಿ ನೀರನ್ನು ಸಂಗ್ರಹಿಸಿಕೊಳ್ಳಬೇಕು ಎಂದು ಕೋರಿದೆ.

ಯಾವ್ಯಾವ ಏರಿಯಾದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ?

ಮಾಗಡಿ ರಸ್ತೆ, ಕದ್ರೆನಹಳ್ಳಿ, ಗಂಗಾಧರ ನಗರ, ಪ್ರಗತಿಪುರ, ಪದ್ಮನಾಭ ನಗರ, ಆರ್.ಕೆ ಲೇಔಟ್, ಚಿಕ್ಕಲ್ಲಸಂದ್ರ, ಹನುಮಗಿರಿ ನಗರ, ಮುನೇಶ್ವರ ನಗರ, ಬೇಂದ್ರೆನಗರ, ಕುಮಾರಸ್ವಾಮಿ ಬಡಾವಣೆ (1 & 2ನೇ ಹಂತ), ಚಂದ್ರನಗರ, ಮಾರುತಿ ಬಡಾವಣೆ, ವಿಠ್ಠಲ್ ನಗರ, ಇಸ್ರೋ ಬಡಾವಣೆ, ಟೀಚರ್ಸ್ ಕಾಲೋನಿ, ಯಲಚೇನಹಳ್ಳಿ, ಕನಕಪುರ ಮುಖ್ಯರಸ್ತೆ, ಇಲಿಯಾಸ್ ನಗರ, ಪೂರ್ಣ ಪ್ರಜ್ಞಾ ಬಡಾವಣೆ, ಮಿನಜ್ ನಗರ, ಉತ್ತರಹಳ್ಳಿ,

ಕೆ.ಎಸ್.ಆರ್.ಟಿ.ಸಿ ಬಡಾವಣೆ, ಅಂಕಪ್ಪ ಬಡಾವಣೆ, ಗುಮ್ಮಯ್ಯ ಬಡಾವಣೆ, ಬನಶಂಕರಿ 5ನೇ ಹಂತ, ಅಶೋಕ್ ನಗರ ಪೈಪ್‌ಲೈನ್ ರಸ್ತೆ, ಜಯನಗರ, ತಿಲಕ್ ನಗರ, ಮಾಧವನ ಪಾರ್ಕ್, ಹೊಂಬೇಗೌಡ ನಗರ, ಲಕ್ಕಸಂದ್ರ, ಶಾಂತಿನಗರ ಲೇಔಟ್, ಜೆಕೆಪುರ, ಅಕ್ಕಿತಿಮ್ಮನಹಳ್ಳಿ, ಜಗಜೀವನ ರಾಮನಗರ, ವಾಲ್ಮೀಕಿ ನಗರ, ಮಾವಳ್ಳಿ, ಶಂಕರಪುರಂ, ಕೆಂಪೇಗೌಡನಗರ, ಬನಗಿರಿ, ಯಡಿಯೂರು, ಇಟ್ಟಮಡು, ಎಸ್‌ಬಿಎಂ ಕಾಲೋನಿ, ಹೊಸಕೆರೆಹಳ್ಳಿ, ಐಟಿಐ ಲೇಔಟ್, ಶ್ರೀನಿವಾಸ ನಗರ, ಡಿಸೋಜಾ ನಗರ, ಕೆರೆಕೋಡಿ, ಮುನೇಶ್ವರ ನಗರ, ಜೆಪಿನಗರ (1,2,3ನೇ ಹಂತ), ಮಾರೇನಹಳ್ಳಿ, ಭೈರಸಂದ್ರ, ಎಲ್‌ಐಸಿ ಕಾಲೋನಿ, ಸಿದ್ದಾಪುರ, ವಿಲ್ಸ್‌ನ್ ಗಾರ್ಡನ್, ನಿಮಾನ್ಸ್ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.

ನಾಗರಿಕರ ಗಮನಕ್ಕೆ; ಬೆಂಗಳೂರಿನ ಈ ಭಾಗಗಳಲ್ಲಿ ಫೆ.3, 4ರಂದು ಪವರ್ ಕಟ್!

0

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಫೆ.3, 4ರಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

66/11 ಕೆ.ವಿ ಬಾಣಸವಾಡಿಯ ಉಪಕೇಂದ್ರದ 66ಕೆ.ವಿ ಲೈನ್‌ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಎಲ್ಲೆಲ್ಲಿ ಪವರ್ ಕಟ್!?

ಕಮ್ಮನಹಳ್ಳಿ ಮೇನ್ ರೋಡ್, ಸಿಎಂಆರ್ ರೋಡ್, ಬಾಬುಸಾಪಾಳ್ಯ, ಬಾಲಚಂದ್ರ ಲೇಔಟ್, ಫ್ಲವರ್ ಗಾರ್ಡನ್, ಎಂಎಂ ಗಾರ್ಡನ್, ಆರ್ಕಾವತಿ ಲೇಔಟ್, ಅಂಜನಾದ್ರಿ ಲೇಔಟ್ ಎನ್‌ಕ್ಲೇವ್, ಹೆಚ್‌ಆರ್‌ಬಿಆರ್ ಲೇಔಟ್ 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, ಸರ್ವೀಸ್ ರೋಡ್, ದಿವ್ಯ ಉನ್ನತಿ ಲೇಔಟ್, ವಿಜಯೇಂದ್ರ ಗಾರ್ಡನ್, ಮಲ್ಲಪ್ಪ ಲೇಔಟ್, ಪ್ರಕೃತಿ ಟೌನ್‌ಶಿಪ್, ಬಾಲಾಜಿ ಲೇಔಟ್, ಜಿಎನ್‌ಆರ್ ಗಾರ್ಡನ್, ಚೆಲೆಕರೆ, ಚೆಲೆಕರೆ ವಿಲೇಜ್, ಸಮುದ್ರಿಕಾ ಎನ್‌ಕ್ಲೇವ್, 100 ಅಡಿ ರಸ್ತೆ, 80 ಅಡಿ ರಸ್ತೆ, ಸುಬ್ಬಯ್ಯನಪಾಳ್ಯ, ಹೊರಮಾವು, ಮುನಿರೆಡ್ಡಿ ಲೇಔಟ್, ವಿಜಯ ಬ್ಯಾಂಕ್ ಕಾಲೋನಿ, ನಿಸರ್ಗ ಕಾಲೋನಿ, ನಂದನಂ ಕಾಲೋನಿ, ಅಮರ್ ಏಜೆನ್ಸಿ ಲೇಔಟ್, ಪಿ & ಟಿ ಲೇಔಟ್, ಪಪ್ಪಯ್ಯ ಲೇಔಟ್, ಕೊಕನಟ್ ಗ್ರೋವ್ ಲೇಔಟ್, ಆಶೀರ್ವಾದ್ ಕಾಲೋನಿ, ಶಕ್ತಿ ನಗರ, ಹೆಣ್ಣೂರು ವಿಲೇಜ್, ಬೈರವೇಶ್ವರ ಲೇಔಟ್, ಚಿಕ್ಕಣ್ಣ ಲೇಔಟ್, ಸಿಎಂಆರ್ ಲೇಔಟ್, ಹೆಣ್ಣೂರು ಕ್ರಾಸ್, ಕೆಂಚಪ್ಪ ಗಾರ್ಡನ್, ಬೃಂದಾವನ ಲೇಔಟ್, ಹೊಯ್ಸಳ ನಗರ, ಬೃಂದಾವನ ಅವೆನ್ಯೂ ಹೆರಿಟೇಜ್, ವಿನಾಯಕ ಲೇಔಟ್,

ಜಯಂತಿ ಗ್ರಾಮ, ಬಿಡಿಎ ಕಾಂಪ್ಲೆಕ್ಸ್ ಎದುರು, ನರೇಂದ್ರ ಟೆಂಟ್ ಹತ್ತಿರ, ಓಎಂಬಿಆರ್ ಲೇಔಟ್ (ಭಾಗ), ಕಸ್ತೂರಿ ನಗರ (ಭಾಗ), ಪಿಲ್ಲರೆಡ್ಡಿ ನಗರ (ಭಾಗ), ಕರಾವಳ್ಳಿ ರಸ್ತೆ, ರಾಮಯ್ಯ ಲೇಔಟ್, ಅಜ್ಮಲ್ಲಪ್ಪ ಲೇಔಟ್, ದೊಡ್ಡ ಬಾಣಸವಾಡಿ, ರಾಮಮೂರ್ತಿ ನಗರ ಮೇನ್ ರೋಡ್, ಬಿ. ಚನ್ನಸಂದ್ರ, ನಂಜಪ್ಪ ಗಾರ್ಡನ್, ಅಗಾರೆ ಮೇನ್ ರೋಡ್, ದೊಡ್ಡಯ್ಯ ಲೇಔಟ್, ಬ್ಯಾಂಕ್ ಅವೆನ್ಯೂ, ಆರ್.ಎಸ್. ಪಾಳ್ಯ, ಎಡಿಎಂಸಿ ಮಿಲಿಟರಿ ಗೇಟ್, ಮುನಿಸ್ವಾಮಿ ರಸ್ತೆ, ಮುನಿ ವೀರಪ್ಪ ರಸ್ತೆ, ಕುಳ್ಳಪ್ಪ ಸರ್ಕಲ್, ರಾಜಕುಮಾರ್ ಪಾರ್ಕ್, ಮೇಘನಾ ಪಾಳ್ಯ, ಮುನಿಸ್ವಾಮಪ್ಪ ಲೇಔಟ್, ಯೇಶ್ ಎನ್‌ಕ್ಲೇವ್, ಬಂಜಾರಾ ಲೇಔಟ್, ವಿಜಯಲಕ್ಷ್ಮೀ ಲೇಔಟ್, ಟ್ರಿನಿಟಿ ಎನ್‌ಕ್ಲೇವ್, ಸಂಕಲ್ಪ ಲೇಔಟ್, ಗ್ರೀನ್ ಗಾರ್ಡನ್ ಫೇಸ್-2, ಸಮೃದ್ಧಿ ಲೇಔಟ್, ಬೆಥೆಲ್ ಲೇಔಟ್, ಎಸ್‌ಎಲ್‌ವಿ ಲೇಔಟ್, ಎಸ್‌ಎಲ್‌ಎಸ್ ಸ್ಪೆನ್ಸರ್ ಅಪಾರ್ಟ್ಮೆಂಟ್ಸ್, ಡಿಎಸ್-ಮ್ಯಾಕ್ಸ್ ಅಪಾರ್ಟ್ಮೆಂಟ್ಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಗೊಳ್ಳಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

ಮಂಗಳೂರು| ಪಿಲಿಕುಳ ಝೂ ಅವ್ಯವಸ್ಥೆಗೆ ಗರಂ ಆದ ಹೈಕೋರ್ಟ್​​: ನೋಡಿಕೊಳ್ಳದಿದ್ದರೆ ಬಂದ್ ಮಾಡಿ ಎಂದ ಪೀಠ!

0

ಮಂಗಳೂರು: ಕರಾವಳಿಗರ ಮೆಚ್ಚಿನ ಪ್ರವಾಸಿ ತಾಣವಾದ ಪಿಲಿಕುಳ ಮೃಗಾಲಯ ಕಳೆದ ಕೆಲ ವರ್ಷಗಳಿಂದ ತೀವ್ರ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದ್ದು, ಈ ಸ್ಥಿತಿ ಕಂಡು ಹೈಕೋರ್ಟ್ ನ್ಯಾಯಾಧೀಶರೇ ಅಚ್ಚರಿಗೊಂಡಿದ್ದಾರೆ.

ವನ್ಯಜೀವಿ ಸಂರಕ್ಷಕ ಭುವನ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಪ್ರಾಣಿಗಳು ನರಳುತ್ತಿರುವ ಫೋಟೋಗಳನ್ನು ಪರಿಶೀಲಿಸಿದ ನ್ಯಾಯಪೀಠ ಸರ್ಕಾರದ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತುಕ್ಕು ಹಿಡಿದ ಪಂಜರಗಳು, ಮಲಿನ ನೀರು, ಅಶುಚಿ ವಾತಾವರಣ ಮತ್ತು ಮೇಲಿಂದ ಮೇಲೆ ಪ್ರಾಣಿಗಳ ಸಾವುಗಳು ಪಿಲಿಕುಳ ಝೂವಿನ ದುಸ್ಥಿತಿಯನ್ನು ಬಹಿರಂಗಪಡಿಸುತ್ತಿವೆ.

ಲೈಸೆನ್ಸ್ ಅವಧಿ 2025ರ ಡಿಸೆಂಬರ್‌ನಲ್ಲೇ ಮುಕ್ತಾಯವಾದರೂ ಯಾವುದೇ ಪರವಾನಗಿ ಇಲ್ಲದೆ ಮೃಗಾಲಯ ನಡೆಸಲಾಗುತ್ತಿದೆ ಎಂಬ ಆರೋಪ ಗಂಭೀರವಾಗಿದೆ. ಪ್ರಾಣಿಗಳಿಗೆ ಸೂಕ್ತ ಆರೈಕೆ ನೀಡಲು ಸಾಧ್ಯವಾಗದಿದ್ದರೆ ಮೃಗಾಲಯವನ್ನು ಬಂದ್ ಮಾಡಬೇಕು ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿರುವ ನ್ಯಾಯಾಲಯ, ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿದೆ.

ಹೆಲಿಕಾಪ್ಟರ್ ಮೂಲಕ ಭೂಗರ್ಭದಲ್ಲಿನ ಚಿನ್ನ ನಿಕ್ಷೇಪ ಶೋಧ; ಮಹತ್ವದ ಮಾಹಿತಿ ಬಿಚ್ಚಿಟ್ಟ ಡಿಸಿ!

0

ಚಿಕ್ಕಬಳ್ಳಾಪುರ: ಹೆಲಿಕಾಪ್ಟರ್ ಮೂಲಕ ಭೂಗರ್ಭದಲ್ಲಿನ ಬಂಗಾರ, ಖನಿಜ ನಿಕ್ಷೇಪಗಳ ಶೋಧ ಕಾರ್ಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆಯುತ್ತಿದೆ.

ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (ಜಿಎಸ್‌ಐ) ವತಿಯಿಂದ ಹೆಲಿಕಾಪ್ಟರ್ ಮೂಲಕ ಭೂಗರ್ಭದಲ್ಲಿರುವ ಚಿನ್ನ ಸೇರಿದಂತೆ ವಿವಿಧ ಖನಿಜ ನಿಕ್ಷೇಪಗಳ ಶೋಧ ಕಾರ್ಯ ನಡೆಯುತ್ತಿದೆ.

ಅತ್ಯಾಧುನಿಕ ವೈಜ್ಞಾನಿಕ ಸಾಧನಗಳು, ಜಿಐಎಸ್ ಹಾಗೂ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ ಬಳಸಿ ಈ ಏರಿಯಲ್ ಸರ್ವೆ ಕೈಗೊಳ್ಳಲಾಗಿದ್ದು, ಕೆಜಿಎಫ್ ಗೋಲ್ಡ್ ಮೈನಿಂಗ್ ಬೆಟ್ಟ ಸಾಲಿಗೆ ಹೊಂದಿಕೊಂಡಿರುವ ಈ ಜಿಲ್ಲೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಈ ಹಿಂದೆ ಬಾಗೇಪಲ್ಲಿ ಮತ್ತು ಗುಡಿಬಂಡೆ ಪ್ರದೇಶಗಳಲ್ಲಿ ಬಂಗಾರದ ಕಣಗಳು ಪತ್ತೆಯಾಗಿದ್ದ ಹಿನ್ನೆಲೆ ಈ ಅಧ್ಯಯನಕ್ಕೆ ಬಲ ನೀಡಿದೆ. ಜಿಲ್ಲಾಧಿಕಾರಿ ಜಿ.ಪ್ರಭು ಅವರಂತೆ, 2019–20ರಲ್ಲಿ ನಡೆದ ಪ್ರಾಥಮಿಕ ಸರ್ವೆಯ ಆಧಾರದಲ್ಲಿ ಈಗ ಆಳವಾದ ಅಧ್ಯಯನ ನಡೆಯುತ್ತಿದ್ದು, ಮೇ 31ರವರೆಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸರ್ವೆ ಮುಂದುವರಿಯಲಿದೆ.

ಜಿಲ್ಲಾಧಿಕಾರಿ ಜಿ.ಪ್ರಭು ಹೇಳಿದ್ದೇನು?

ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ.ಪ್ರಭು ಪ್ರತಿಕ್ರಿಯಿಸಿದ್ದು, ಜಿಲ್ಲೆಯಲ್ಲಿ 2019-2020ರಲ್ಲಿ ಸರ್ವೆ ಕಾರ್ಯ ನಡೆದಿತ್ತು. ಆ ಸರ್ವೆ ಆಧರಿಸಿ ಈಗ ಆಳ ಅಧ್ಯಯನ ನಡೆದಿದೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಭೌಗೋಳಿಕ ಮಾಹಿತಿ ವ್ಯವಸ್ಥೆ ವಿಭಾಗ ಹಾಗೂ ರಿಮೋಟ್ ಸೆನ್ಸಿಂಗ್ ವಿಭಾಗದಿಂದ ಸರ್ವೆ ನಡೆಯುತ್ತಿದೆ ಎಂದರು.

ಮೂಲ ಲೋಹಗಳು ಸೇರಿದಂತೆ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಸೇರಿದಂತೆ ಲೋಹಗಳ ಇರುವಿಕೆಯ ಬಗ್ಗೆ ಸರ್ವೆ ಮಾಡಲಾಗುತ್ತಿದ್ದು, ಮೇ 31ರವರೆಗೂ ಸರ್ವೆ ನಡೆಯುತ್ತೆ. ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸರ್ವೆ ನಡೆಯಲಿದ್ದು, ಹೆಲಿಕಾಪ್ಟರ್ ತೀರ ಕೆಳ ಹಂತದಲ್ಲಿ ಸಂಚಾರ ಮಾಡಲಿದೆ. ಹೀಗಾಗಿ ಸಾರ್ವಜನಿಕರು ಭಯ ಬೀಳದಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ದೇವಸ್ಥಾನದಲ್ಲಿ ಸುಪ್ರಭಾತ ಹಾಡು ಹಾಕಿದ್ದಕ್ಕೆ ಗಲಾಟೆ ಮಾಡಿಕೊಂಡ ಹಿಂದೂ-ಮುಸ್ಲಿಂ ಯುವಕರು!

0

ದೊಡ್ಡಬಳ್ಳಾಪುರ:- ದೊಡ್ಡಬಳ್ಳಾಪುರ ನಗರದ ಶಾಂತಿನಗರ ಪ್ರದೇಶದಲ್ಲಿ ಸುಪ್ರಭಾತ ಹಾಡನ್ನು ಜೋರಾಗಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಹಾಗೂ ಮುಸ್ಲಿಂ ಯುವಕರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಜರುಗಿದೆ.

ಮನೆಯೊಳಗೆ ತಾಯಿ ವಿಶ್ರಾಂತಿಯಲ್ಲಿ ಇದ್ದ ಕಾರಣ ಧ್ವನಿ ಕಡಿಮೆ ಮಾಡುವಂತೆ ಮುಸ್ಲಿಂ ಯುವಕ ಕೇಳಿಕೊಂಡಿದ್ದಾನೆ ಎನ್ನಲಾಗಿದ್ದು, ಇದಕ್ಕೆ ಹಿಂದೂ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ತೀವ್ರಗೊಂಡು ಗಲಾಟೆಯ ವಾತಾವರಣ ನಿರ್ಮಾಣವಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಎರಡೂ ಕಡೆಯವರನ್ನು ಕರೆಸಿ ಶಾಂತಿ ಸಭೆ ನಡೆಸಿದ್ದಾರೆ.

ದೇವಾಲಯದ ಪೂಜಾರಿಯಿಂದ ದೂರು ದಾಖಲಾಗಿದ್ದು, ಸಾರ್ವಜನಿಕ ಶಾಂತಿ ಕಾಪಾಡುವಂತೆ ಎಲ್ಲರಿಗೂ ಸೂಚನೆ ನೀಡಲಾಗಿದೆ. ಸದ್ಯ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದ್ದು, ಪ್ರದೇಶದಲ್ಲಿ ಶಾಂತಿಯುತ ವಾತಾವರಣ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ತೆರಿಗೆ ಪಾಲು ಶೇ.4.131ಕ್ಕೆ ಏರಿಕೆ; ಕಾಂಗ್ರೆಸ್ ಆರೋಪಕ್ಕೆ ಪ್ರಹ್ಲಾದ್ ಜೋಶಿ ತಿರುಗೇಟು!

0

ಹುಬ್ಬಳ್ಳಿ: ಕೇಂದ್ರ ಸರ್ಕಾರವು ಕರ್ನಾಟಕದ ತೆರಿಗೆ ಪಾಲನ್ನು ಶೇ.3.647ರಿಂದ ಶೇ.4.131ಕ್ಕೆ ಹೆಚ್ಚಿಸಿರುವುದರಿಂದ ರಾಜ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ಹಂಚಿಕೆ ದೊರೆಯಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯವಾಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಗಳು ಸಂಪೂರ್ಣವಾಗಿ ಅಸಂಬದ್ಧವಾಗಿದ್ದು, ಯಾವುದೇ ವಾಸ್ತವಾಂಶಾಧಾರವಿಲ್ಲ ಎಂದು ತಳ್ಳಿಹಾಕಿದರು. 2026–27ರ ಕೇಂದ್ರ ಬಜೆಟ್ ಪ್ರಕಾರ, ಕರ್ನಾಟಕಕ್ಕೆ ಒಟ್ಟು ₹63,049 ಕೋಟಿ ರೂ. ತೆರಿಗೆ ಹಂಚಿಕೆ ಮಾಡಲಾಗಿದ್ದು, ಇದು ಕಳೆದ ವರ್ಷದ ಹಂಚಿಕೆಗಿಂತ ಹೆಚ್ಚಾಗಿದೆ. 16ನೇ ಹಣಕಾಸು ಆಯೋಗದ ವರದಿ ಪ್ರಕಾರ, ರಾಜ್ಯಗಳಿಗೆ ನೀಡಲಾಗುವ ತೆರಿಗೆ ಹಂಚಿಕೆಯ ಪ್ರಮಾಣವನ್ನು ಶೇ.41ರಲ್ಲಿಯೇ ಮುಂದುವರಿಸಲಾಗಿದೆ.

ಆದರೆ ತೆರಿಗೆ ಹಂಚಿಕೆಯ ಸೂತ್ರದಲ್ಲಿ ಕೆಲವು ಬದಲಾವಣೆಗಳು ಆಗಿರುವುದರಿಂದ ವಿವಿಧ ರಾಜ್ಯಗಳ ಪಾಲಿನಲ್ಲಿ ವ್ಯತ್ಯಾಸ ಉಂಟಾಗಿದೆ. ಈ ಹೊಸ ಸೂತ್ರದ ಅನುಸಾರ ಕರ್ನಾಟಕಕ್ಕೂ ಹೆಚ್ಚುವರಿ ತೆರಿಗೆ ಪಾಲು ದೊರೆತಿದ್ದು, ಇದರಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ನೆರವಾಗಲಿದೆ ಎಂದು ಜೋಶಿ ಹೇಳಿದರು. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ನ್ಯಾಯಯುತವಾಗಿ ತೆರಿಗೆ ಹಂಚಿಕೆ ಮಾಡುತ್ತಿದ್ದು, ಕರ್ನಾಟಕದ ಹಿತಾಸಕ್ತಿಯನ್ನು ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯಪಾಲರ ಭಾಷಣದ ಮೂಲಕ ಸುಳ್ಳುಗಳನ್ನು ಹೇಳಿಸಿದ ಸರ್ಕಾರ: ಆರ್.ಅಶೋಕ್ ಕಿಡಿ

0

ಬೆಂಗಳೂರು: ರಾಜ್ಯಪಾಲರ ಭಾಷಣದ ಮೂಲಕ ಕಾಂಗ್ರೆಸ್‌ ಸರ್ಕಾರ ಕೇವಲ ಸುಳ್ಳುಗಳನ್ನೇ ಹೇಳಿಸಿದೆ. ಸಿಎಂ ಸಿದ್ದರಾಮಯ್ಯನವರು ಹುಲಿಯಾ ಬದಲು ಇಲಿಯಾ ಆಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಮಾತನಾಡಿದ ಅವರು, ವಿಬಿ ಜಿ ರಾಮ್‌ ಜಿ ಕಾಯ್ದೆಗೆ ರಾಷ್ಟ್ರಪತಿ ಸಹಿ ಹಾಕಿ ಜಾರಿಯಾಗಿದೆ. ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆದುಹಾಕಿದ್ದೇಕೆ ಎಂದು ಕಾಂಗ್ರೆಸ್‌ ನಾಯಕರು ಪ್ರಶ್ನಿಸುತ್ತಿದ್ದಾರೆ. ರಾಮನ ಹೆಸರನ್ನು ಕಂಡರೆ ಕಾಂಗ್ರೆಸ್‌ಗೆ ಆಗಲ್ಲ. ಇದೇ ಕಾರಣಕ್ಕೆ ರಾಮನಗರ ಜಿಲ್ಲೆಯ ಹೆಸರನ್ನು ಬದಲಿಸಲಾಗಿದೆ.

ರಾಮಲಿಂಗಾರೆಡ್ಡಿ ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಈಗ ಅಲ್ಲಿ ಜಿಲ್ಲೆಯೇ ಇಲ್ಲ. ಮಹಾತ್ಮ ಗಾಂಧೀಜಿಯವರು ರಘುಪತಿ ರಾಘವ ರಾಜಾರಾಮ್‌ ಎಂದು ಹೇಳಿದ್ದರು. ಕಾಂಗ್ರೆಸ್‌ ಸರ್ಕಾರ ಕೇಂದ್ರದ ವಿರುದ್ಧ 18 ನಿರ್ಣಯಗಳನ್ನು ತೆಗೆದುಕೊಂಡಿದೆ. ಹೀಗೆ ಎಲ್ಲಕ್ಕೂ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುತ್ತಿದ್ದಾರೆ ಎಂದರು.

ಮಾಜಿ ಪ್ರಧಾನಿಗಳಾದ ಜವಹರಲಾಲ್‌ ನೆಹರು 17 ಬಾರಿ, ಇಂದಿರಾಗಾಂಧಿ 29 ಬಾರಿ, ರಾಜೀವ್‌ಗಾಂಧಿ 10 ಬಾರಿ ಸೇರಿದಂತೆ ಕಾಂಗ್ರೆಸ್‌ ಪಕ್ಷ 72 ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದೆ. ಮಾಜಿ ಅಟಲ್‌ ಬಿಹಾರಿ ವಾಜಪೇಯಿ 14 ಬಾರಿ ಹಾಗೂ ಪ್ರಧಾನಿ ನರೇಂದ್ರ ಮೋದಿ 8 ಬಾರಿ ತಿದ್ದುಪಡಿ ಮಾಡಿದ್ದಾರೆ.

ಅತಿ ಹೆಚ್ಚು ಬಾರಿ ತಿದ್ದುಪಡಿ ಮಾಡಿದ ಕಾಂಗ್ರೆಸ್‌ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ. “ಸಂವಿಧಾನವು ನಿರಂತರವಾಗಿರಬೇಕೆಂದರೆ ನಾವು ಅದನ್ನು ಬದಲಾಯಿಸುತ್ತಿರಬೇಕೆಂದು” ಜವಹರಲಾಲ್‌ ನೆಹರು ಹೇಳಿದ್ದರು. ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಂವಿಧಾನದ ಬಗ್ಗೆ ಬೇಜಾರಾಗಿ ಅದನ್ನು ಸುಟ್ಟುಹಾಕುತ್ತೇನೆಂದು ಹೇಳಿದ್ದರು ಎಂದರು.

GST , ಆದಾಯ ತೆರಿಗೆ ಕಟ್ಟುತ್ತಿರುವ ಮಹಿಳೆಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್!

0

ಬೆಂಗಳೂರು: ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಕಟ್ಟುತ್ತಿದ್ದಾರೆ ಎಂದು ಸುಮಾರು 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುತ್ತಿಲ್ಲ. ಈ ಪೈಕಿ ಸುಮಾರು 20 ಸಾವಿರ ಫಲಾನುಭವಿಗಳ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗಿದ್ದು, ಇನ್ನು ಉಳಿದವರ ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ವಿಶೇಷ ಅಧಿವೇಶನದ ವಿಧಾನ ಪರಿಷತ್‌ ಕಲಾಪದಲ್ಲಿ ಸದಸ್ಯರಾದ ಪಿ.ಎಚ್‌.ಪೂಜಾರ‌ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಇಲಾಖೆಗಳ ದಾಖಲೆಯಲ್ಲೂ ಇದೇ ರೀತಿ ತೋರಿಸುತ್ತಿದ್ದು, ಇದರಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದು, ಸರ್ಕಾರದ ಹಾಗೂ ನಮ್ಮ ಇಲಾಖೆಯದ್ದು ಯಾವುದೇ ತಪ್ಪಿಲ್ಲ ಎಂದರು.

ರಾಜ್ಯದಲ್ಲಿ ಸುಮಾರು 1.26 ಕೋಟಿ ಫಲಾನುಭವಿಗಳಿದ್ದು, ಕೆಲ ಫಲಾನುಭವಿಗಳು ಕೆಲವೊಂದು ವ್ಯವಹಾರ ನಡೆಸುವಾಗ ಜಿಎಸ್‌ಟಿ, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಗೃಹಲಕ್ಷ್ಮೀಗಾಗಿಯೇ ನಿರ್ಮಿಸಲಾಗಿರುವ ಸಾಫ್ಟ್‌ ವೇರ್‌ನಲ್ಲಿ ಜಿಎಸ್‌ಟಿ, ಆದಾಯ ತೆರಿಗೆ ಅಂತ ತೋರಿಸಿದರೆ ಬದಲಾವಣೆ ಮಾಡಲು ಸಾಧ್ಯವಿಲ್ಲ. ಗೃಹಲಕ್ಷ್ಮೀ ಯೋಜನೆ ನಿರಂತರ ಪ್ರಕ್ರಿಯೆ, ಈಗಾಗಲೇ ಆದಾಯ ತೆರಿಗೆ ಜಿಎಸ್‌ಟಿ ಕೌನ್ಸಿಲ್‌ ಗಮನಕ್ಕೂ ತರಲಾಗಿದೆ ಎಂದರು.

ಅಪ್ಪ, ಅಜ್ಜನ ಕರ್ಮಭೂಮಿ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ: ನಿಖಿಲ್ ಕುಮಾರಸ್ವಾಮಿ

0

ಚಿಕ್ಕಮಗಳೂರು: ರಾಮನಗರ ನಮ್ಮ ತಂದೆಯ ಕರ್ಮಭೂಮಿ ಮತ್ತು ನಮ್ಮ ತಾತನಿಗೆ ರಾಜಕೀಯ ಮರುಜನ್ಮ ನೀಡಿದ ಪುಣ್ಯಭೂಮಿ, ಹಾಗಾಗಿ ಆ ಮಣ್ಣನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಮನಗರ ಜಿಲ್ಲೆ ನನ್ನ ತಂದೆಯವರ ಕರ್ಮಭೂಮಿ. 1994ರಲ್ಲಿ ಹಾಸನದಿಂದ ಬಂದಂತಹ ನಮ್ಮ ತಾತ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ರಾಜಕೀಯವಾಗಿ ಮರುಜನ್ಮ ನೀಡಿದ ಪುಣ್ಯ ಭೂಮಿ ಅದು. ಅಂತಹ ಮಣ್ಣನ್ನು ಬಿಟ್ಟು ನಾನು ಎಲ್ಲಿಗೂ ಹೋಗುವುದಿಲ್ಲ’ ಎಂದು ಭಾವುಕರಾಗಿ ನುಡಿದರು.

ರಾಮನಗರದಲ್ಲಿ ನನ್ನನ್ನೇ ನಂಬಿರುವ ಸಾವಿರಾರು ಕಾರ್ಯಕರ್ತರಿದ್ದಾರೆ

ರಾಮನಗರದಲ್ಲಿನ ತಮ್ಮ ರಾಜಕೀಯ ಅಸ್ತಿತ್ವದ ಬಗ್ಗೆ ಮಾತನಾಡಿದ ನಿಖಿಲ್, ‘ಪಕ್ಷದ ಹಿರಿಯ ಮುಖಂಡರಿದ್ದಾರೆ ಮತ್ತು ನಮ್ಮ ಕುಟುಂಬವನ್ನು ಪ್ರೀತಿಸುವ ಒಂದು ದೊಡ್ಡ ವರ್ಗವೇ ಅಲ್ಲಿದೆ. ಅವರನ್ನು ನಡುನೀರಿನಲ್ಲಿ ಕೈಬಿಟ್ಟು ಬೇರೆ ಕ್ಷೇತ್ರಕ್ಕೆ ವಲಸೆ ಹೋಗುವ ಜಾಯಮಾನ ನಮ್ಮದಲ್ಲ. ಬೇರೆ ಯಾವುದೇ ಕ್ಷೇತ್ರದಲ್ಲಿ ನಾನು ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆ

ದೇವೇಗೌಡರ ಕುಟುಂಬ ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅಪಾರ ಶ್ರಮ ಹಾಕಿದೆ. ಅಲ್ಲಿನ ನೀರಾವರಿ, ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯಗಳ ವೃದ್ಧಿಗೆ ನಾವು ಪ್ರಾಮಾಣಿಕವಾಗಿ ದುಡಿದಿದ್ದೇವೆ. ಈ ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆಯಾಗಲಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಜನರ ವಿಶ್ವಾಸಗಳಿಸುತ್ತೇವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಸೋಲು-ಗೆಲುವು ಸಹಜ

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷಕ್ಕೆ ಸಣ್ಣಪುಟ್ಟ ಹಿನ್ನೆಡೆಗಳಾಗಿರಬಹುದು, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ರಾಜಕೀಯದಲ್ಲಿ ಏರುಪೇರುಗಳು ಸರ್ವೇ ಸಾಮಾನ್ಯ. ಕಳೆದ ನಾಲ್ಕು ಚುನಾವಣೆಗಳಲ್ಲಿ ರಾಮನಗರದ ಜನತೆ ನಮ್ಮ ಕೈಬಿಟ್ಟಿರಲಿಲ್ಲ. ಆದರೆ ಕೆಲವೊಮ್ಮೆ ಕಾಲಘಟ್ಟದಲ್ಲಿ ಬದಲಾವಣೆಗಳಾಗುತ್ತವೆ. ಅದೆಲ್ಲವನ್ನೂ ನಾವು ಸಮತೋಲನದಿಂದ ಸ್ವೀಕರಿಸಬೇಕು ಎಂದು ತಿಳಿಸಿದರು.

ಜಾತಿಗಣತಿಯು ಕೇವಲ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ನಡೆಯಬೇಕೇ ಹೊರತು, ಇದು ರಾಜಕೀಯ ಉದ್ದೇಶದ ತಂತ್ರವಾಗಬಾರದು. ಸರ್ಕಾರದ ಲೋಪದೋಷಗಳು ಹಾಗೂ ಸಮಸ್ಯೆಗಳು ಎದುರಾದಾಗ ಜನರನ್ನು ದಿಕ್ಕು ತಪ್ಪಿಸಲು ಇಂತಹ ವಿಚಾರಗಳನ್ನು ಮುನ್ನೆಲೆಗೆ ತರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು,

ಜಾತಿಗಣತಿಯನ್ನು ನಾವು ಸ್ವಾಗತಿಸುತ್ತೇವೆ, ಆದರೆ ಈ ವರದಿಯು ಅತ್ಯಂತ ಪಾರದರ್ಶಕವಾಗಿರಬೇಕು, ಜನಪರವಾಗಿರಬೇಕೇ ಹೊರತು ರಾಜಕೀಯ ಪ್ರೇರಿತವಾಗಿರಬಾರದು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

BREAKING: ಅನುಮಾನಾಸ್ಪದವಾಗಿ 4ನೇ ಮಹಡಿಯಿಂದ ಬಿದ್ದು ಯುವಕ ಸಾವು!

0

ಬೆಂಗಳೂರು: ಬೆಂಗಳೂರಿನ ಭಾರತಿನಗರದ ಫ್ರೂಟ್ಸ್ ಮಾರ್ಕೆಟ್ ಬಳಿ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತನನ್ನು ಇರ್ಫಾನ್ ಮುಲ್ಲಾನಿ (26) ಎಂದು ಗುರುತಿಸಲಾಗಿದೆ.

ಜನವರಿ 30ರಂದು ಈ ಘಟನೆ ನಡೆದಿದ್ದು, ಇರ್ಫಾನ್ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಅಚಾನಕ್ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಯಾರಾದರೂ ಮೇಲಿಂದ ತಳ್ಳಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.

ಘಟನೆ ಸಂಬಂಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣವಾಗಿ ದೂರು ದಾಖಲಿಸಿಕೊಳ್ಳಲಾಗಿದೆ. ಸಾವಿಗೆ ನಿಖರ ಕಾರಣ ತಿಳಿಯಲು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

 

error: Content is protected !!