Home Blog Page 91

ಫ್ಯೂಯಲ್ ಕಂಟ್ರೋಲ್ ಸ್ವಿಚ್ ದೋಷ: ಬೆಂಗಳೂರಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಹಾರಾಟ ರದ್ದು!

0

ನವದೆಹಲಿ:- ಫ್ಯೂಯಲ್ ಕಂಟ್ರೋಲ್ ಸ್ವಿಚ್‌ (ಇಂಧನ ನಿಯಂತ್ರಣ ಸ್ವಿಚ್) ನಲ್ಲಿ ತಾಂತ್ರಿಕ ದೋಷ ಪತ್ತೆಯಾದ ಹಿನ್ನೆಲೆಯಲ್ಲಿ, ಲಂಡನ್‌ನಿಂದ ಬೆಂಗಳೂರಿಗೆ ಹಾರಾಟ ನಡೆಸಲು ನಿಗದಿಯಾಗಿದ್ದ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ನಿಗದಿಯಂತೆ AI132 ಸಂಖ್ಯೆಯ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಲಂಡನ್‌ನಿಂದ ಬೆಂಗಳೂರಿಗೆ ಹೊರಡಬೇಕಾಗಿತ್ತು. ಆದರೆ ಹಾರಾಟಕ್ಕೆ ಮುಂಚಿತವಾಗಿ ಪೈಲಟ್‌ಗಳು ಕಡ್ಡಾಯ ಕಾರ್ಯವಿಧಾನ ಪರಿಶೀಲನೆ ನಡೆಸುವ ವೇಳೆ ಫ್ಯೂಯಲ್ ಕಂಟ್ರೋಲ್ ಸ್ವಿಚ್‌ನಲ್ಲಿ ದೋಷ ಕಂಡುಬಂದಿದೆ. ಈ ಬಗ್ಗೆ ಪೈಲಟ್‌ಗಳು ತಕ್ಷಣವೇ ವಿಮಾನಯಾನ ಸಂಸ್ಥೆಗೆ ವರದಿ ಮಾಡಿದರು.

ಪೈಲಟ್‌ಗಳ ವರದಿ ಸ್ವೀಕರಿಸಿದ ತಕ್ಷಣವೇ ಎಚ್ಚೆತ್ತ ಏರ್ ಇಂಡಿಯಾ, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನ ಹಾರಾಟವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿತು. ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ, “ನಮ್ಮ ಪೈಲಟ್‌ಗಳಲ್ಲಿ ಒಬ್ಬರು ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷವಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಪೈಲಟ್‌ಗಳ ಕಾಳಜಿಗಳಿಗೆ ಆದ್ಯತೆ ನೀಡಿ ಪರಿಶೀಲನೆ ನಡೆಸಲು OEM (ವಿಮಾನ ಬಿಡಿಭಾಗ ತಯಾರಿಕಾ ಸಂಸ್ಥೆ) ಜೊತೆ ಸಮನ್ವಯ ಮಾಡಿಕೊಳ್ಳಲಾಗುತ್ತಿದೆ” ಎಂದು ತಿಳಿಸಿದೆ.

ಇದಲ್ಲದೆ, ಈ ವಿಷಯವನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA)ದ ಗಮನಕ್ಕೂ ತರಲಾಗಿದೆ. ವಿಮಾನ ತಯಾರಕರೊಂದಿಗೆ ಸೇರಿ ಹೆಚ್ಚಿನ ತಾಂತ್ರಿಕ ಪರಿಶೀಲನೆಗಳು ನಡೆಯುತ್ತಿವೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.

ಬೆಳಗಾವಿಯಲ್ಲಿ ಮರಗಳ ಮಾರಣಹೋಮ; ಸೋಲಾರ್ ಪ್ಲಾಂಟ್‌ ಹೆಸರಲ್ಲಿ ಗುಡ್ಡ ಅಗೆದು ಅರಣ್ಯ ನಾಶ!

0

ಬೆಳಗಾವಿ:- ತಾಲ್ಲೂಕಿನ ಬಡಲಾ ಅಂಕಲಗಿ ಗ್ರಾಮದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಕ್ಷೇತ್ರದ ಕೌರಿ ಗುಡ್ಡದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣದ ಹೆಸರಿನಲ್ಲಿ ಸಾವಿರಾರು ಮರಗಳ ಮಾರಣಹೋಮವೇ ನಡೆದಿದೆ.

ಕಳೆದ ಒಂದೂವರೆ ತಿಂಗಳಿಂದ 40 ಎಕರೆಗೂ ಹೆಚ್ಚು ಪ್ರದೇಶವನ್ನು ಅಗೆದು ಹಾಳು ಮಾಡಲಾಗಿದೆ. ಈ ಗುಡ್ಡದಲ್ಲಿ ಶ್ರೀಗಂಧ, ತೇಗು, ವಿವಿಧ ಹಣ್ಣಿನ ಮರಗಳು, ಮತ್ತು ನವಿಲು ಸೇರಿದಂತೆ ಹಲವು ಪ್ರಾಣಿ-ಪಕ್ಷಿಗಳು ವಾಸಿಸುತ್ತಿದ್ದರೂ, ಅರಣ್ಯ ಇಲಾಖೆಯಿಂದ ಅನುಮತಿ ಸಿಗದೆ ಇಂತಹ ಹಾನಿ ನಡೆಯುತ್ತಿದೆ. ಸ್ಥಳೀಯ ರೈತರು ತಡೆಗಟ್ಟಲು ಪ್ರಯತ್ನಿಸಿದಾಗ ಜೆಸಿಬಿ ಬಳಸಿ ಮರಗಳನ್ನು ಕಟ್ ಮಾಡುವ ಕಾರ್ಯ ಮುಂದುವರಿಸಿದ್ದು ಅಲ್ಲದೇ, ಅವರಿಗೆ ಬೆದರಿಕೆ ಕೂಡ ಹಾಕಿದ್ದಾರೆ.

ಸ್ಥಳಕ್ಕೆ ಅರಣ್ಯ ಮತ್ತು ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಗಳನ್ನು ಕಟಾವು ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಕಲಿಕೆಯಲ್ಲಿ ನಿಧಾನಗತಿಯ ವಿದ್ಯಾರ್ಥಿಗಳಿಗೆ ಉತ್ತೇಜನ

0

ವಿಜಯಸಾಕ್ಷಿ ಸುದ್ದಿ, ಗದಗ: ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಮತ್ತು ಕಲಿಕೆಯಲ್ಲಿ ನಿಧಾನಗತಿಯ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಗದಗ ಜಿಲ್ಲಾ ಉಪನಿರ್ದೇಶಕರು ಹಾಗೂ ಅಭಿವೃದ್ಧಿ ತಂಡವು ಹಾತಲಗೇರಿ ಸರ್ಕಾರಿ ಪ್ರೌಢಶಾಲೆ (ಖಒSಂ)ಗೆ ವಿಶೇಷ ಭೇಟಿ ನೀಡಿತು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ ಜಿ.ಎಂ. ಮುಂದಿನಮನಿ ನೇತೃತ್ವದಲ್ಲಿ ಉಪನ್ಯಾಸಕರಾದ ಎಸ್.ಆರ್. ನದಾಫ್, ಜಿ.ಡಿ. ದಾಸರ, ವಾಯ್.ಕೆ. ಹಂದ್ರಾಳ, ಸುಧಾ ಬನ್ನಿಕಲ್ ಹಾಗೂ ಹಿರಿಯ ಉಪನ್ಯಾಸಕರಾದ ಬಿ.ಎಫ್. ಅರವಟಗಿ ಉಪಸ್ಥಿತರಿದ್ದು, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಶ್ನೋತ್ತರಗಳ ಮೂಲಕ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಿ, ಪರೀಕ್ಷೆಗೆ ಸಜ್ಜಾಗುವಂತೆ ಪ್ರೇರೇಪಿಸಿದರು.

ನಂತರ ತಂಡವು ಊರಿನ ಹಿರಿಯರು ಮತ್ತು ಶಿಕ್ಷಣ ಪ್ರೇಮಿಗಳೊಂದಿಗೆ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ, ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಪಾಲಕರೊಂದಿಗೆ ಚರ್ಚಿಸಿತು. ಟಿ.ವಿ. ಮತ್ತು ಮೊಬೈಲ್ ಬಳಕೆ ನಿಯಂತ್ರಿಸಿ, ಜಾತ್ರೆ–ಹಬ್ಬಗಳಲ್ಲಿ ಕಾಲಹರಣ ಮಾಡದೆ ವೇಳಾಪಟ್ಟಿಯಂತೆ ಅಭ್ಯಾಸ ನಡೆಸುವಂತೆ ಸೂಚಿಸಲಾಯಿತು. ರಾಜ್ಯ ಮಟ್ಟದ 3ನೇ ಪೂರ್ವ ಸಿದ್ಧತಾ ಪರೀಕ್ಷೆಗೆ ಗಂಭೀರವಾಗಿ ತಯಾರಿ ನಡೆಸುವಂತೆ ಮಾರ್ಗದರ್ಶನ ನೀಡಲಾಯಿತು.

ಪರೀಕ್ಷಾ ಅವಧಿಯಲ್ಲಿ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳುವುದು ಹಾಗೂ ಉಳಿದ 44 ದಿನಗಳನ್ನು ಕ್ರಿಯಾ ಯೋಜನೆಯಂತೆ ಸಮರ್ಪಕವಾಗಿ ಬಳಸಿಕೊಳ್ಳುವಂತೆ ಮಕ್ಕಳಿಗೆ ತಿಳಿಸಲಾಯಿತು. ಮನೆವಾರ್ಷಿಕ ಪರೀಕ್ಷೆಯನ್ನು ನಿರ್ಭಯವಾಗಿ ಎದುರಿಸಿ, 40+ ಗುರಿ ಸಾಧಿಸುವಂತೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲೆಯ ಒಟ್ಟಾರೆ ಗುಣಾತ್ಮಕ ಫಲಿತಾಂಶ ಹೆಚ್ಚಿಸುವ ದಿಶೆಯಲ್ಲಿ ಈ ಮನೆ ಭೇಟಿ ಕಾರ್ಯಕ್ರಮ ಮಹತ್ವದ ಹೆಜ್ಜೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಶೇ. 100ರಷ್ಟು ಕರ ವಸೂಲಾತಿಗೆ ಸೂಚನೆ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ತಾಲೂಕಿನಲ್ಲಿ ಕರವಸೂಲಿ ಪ್ರಮಾಣ ಕಡಿಮೆ ಇರುವ ಕಾರಣ ಫೆಬ್ರವರಿ ತಿಂಗಳಲ್ಲಿ ಕರವಸೂಲಿ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ. ಈ ತಿಂಗಳ ಪೂರ್ತಿ ಅಭಿಯಾನ ಹಮ್ಮಿಕೊಂಡು ಶೇ. 100ರಷ್ಟು ಪ್ರಗತಿ ಸಾಧಿಸಬೇಕು ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ.ಕಂದಕೂರು ಹೇಳಿದರು.

ತಾಲೂಕಿನ ಕುಂಟೋಜಿ ಗ್ರಾ.ಪಂ ಸೋಮವಾರ ಭೇಟಿ ನೀಡಿ ಕರವಸೂಲಿ ಮಾಸಾಚರಣೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ವೇಳೆ ಪಿಡಿಒ, ಪಂಚಾಯಿತಿ ಸಿಬ್ಬಂದಿಗಳ ಜೊತೆಗೆ ಮನೆ ಮನೆಗೆ ಭೇಟಿ ನೀಡಿ ತೆರಿಗೆ ಕಟ್ಟಲು ಸಾರ್ವಜನಿಕರಿಗೆ ಮನವಿ ಮಾಡಿದರು. ಎಲ್ಲಾ ಸಿಬ್ಬಂದಿಗಳು ಫೆ. 2ರಿಂದ 28ರವರೆಗೂ ನಿರಂತರ ಪ್ರತಿ ದಿನ ಒಂದು ತಿಂಗಳ ಕಾಲ ಕರವಸೂಲಿ ಮಾಡಿ ಶೇ. 100ರಷ್ಟು ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.

ಕುಂಟೋಜಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ದಾಖಲಾತಿ ಪರಿಶೀಲಿಸಿದರು. ನಂತರ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಕಾರ್ಯನಿರ್ವಹಣೆಯನ್ನು, ಸ್ವಚ್ಛತೆ ಮತ್ತು ಆಹಾರ ಗುಣಮಟ್ಟವನ್ನು ಪರಿಶೀಲಿಸಿದರು. ಮಕ್ಕಳಿಗೆ ಪೌಷ್ಟಿಕ ಹಾಗೂ ಗುಣಮಟ್ಟದ ಆಹಾರ ನೀಡುವಂತೆ ಸೂಚಿಸಿದರು.

ಕುಂಟೋಜಿ ಗ್ರಾ.ಪಂ ವ್ಯಾಪ್ತಿಯ ಗೌಡಗೇರಿ ಗ್ರಾಮ ಪ್ರಧಾನಮಂತ್ರಿ ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗೌಡಗೇರಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ನಂತರ ಶಾಲೆಗೆ ಭೇಟಿ ನೀಡಿ ಮಕ್ಕಳ ದಾಖಲಾತಿ, ಕಲಿಕಾ ಗುಣಮಟ್ಟ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಪಿಡಿಒ ವಿಶ್ವನಾಥ ರಾಠೋಡ, ಮುದುಕಪ್ಪ ದೊಣ್ಣೆಗುಡ್ಡ, ಹುಸೇನಸಾಬ ತೋಟದ, ಪರಸಪ್ಪ ರಾಠೋಡ, ಹನುಮಂತ ಡೊಳ್ಳಿನ, ಗ್ರಾಮಸ್ಥರು, ಪಂಚಾಯತ ಸಿಬ್ಬಂದಿಗಳು ಇದ್ದರು.

ನೌಕರರು ಒತ್ತಡದಿಂದ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ನೌಕರರ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಠಿಣ ಕಾನೂನು ರೂಪಿಸುವ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಹೊಸ ಕಾನೂನು ರೂಪುಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.

ನಗರದ ಪಂಡಿತ್ ಭೀಮಸೇನ ಜೋಶಿ ರಂಗಮಂದಿರದಲ್ಲಿ ಭಾನುವಾರ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ 2.73 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಇರುವ ನೌಕರರು ಒತ್ತಡದಿಂದ ಕೆಲಸ ನಿರ್ವಹಿಸುವುದರ ಜೊತೆಗೆ ನೆಮ್ಮದಿ, ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ, ನೌಕರರ ಮೇಲೆ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಬಳಿ ಚರ್ಚಿಸಿದ್ದು, ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡಿದರೆ 50 ಸಾವಿರ ರೂ ದಂಡ, ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸಲು ಆಗ್ರಹಿಸಿದ್ದೇವೆ ಎಂದು ತಿಳಿಸಿದರು.

ಸರ್ಕಾರಿ ನೌಕರರು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಪಡೆಯಲು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ಹಂತ ಹಂತವಾಗಿ ಕ್ರಮವಹಿಸಲಾಗುವುದು. ಈ ಯೋಜನೆ ಬಗ್ಗೆ ಟೀಕೆ ಮಾಡಿದರೆ ವೈಯಕ್ತಿಕವಾಗಿ ತಮ್ಮನ್ನು ತಾವೇ ಟೀಕೆ ಮಾಡಿಕೊಂಡಂತೆ. ಈ ಯೋಜನೆ ಅಡಿ ಪ್ರಸ್ತುತ 222 ಆಸ್ಪತ್ರೆಗಳು ಸೇವೆ ಒದಗಿಸುತ್ತಿವೆ. ಅವುಗಳನ್ನು 400 ಆಸ್ಪತ್ರೆಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕರು ಟಿಇಟಿ ಪರೀಕ್ಷೆ ಬರೆಯಬೇಕು ಎಂಬ ಆದೇಶ ಕೈಬಿಡುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಲಾಗಿದೆ. ಈವರೆಗೆ 96 ಸಾವಿರ ಮಂದಿ ಶಿಕ್ಷಕರು ಇದಕ್ಕೆ ಸಹಿ ಹಾಕಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಸಹಿ ಮಾಡಿ ಕೊಟ್ಟರೆ ಪ್ರಕರಣ ಗೆಲ್ಲಲು ನೆರವಾಗಲಿದೆ. ವಕೀಲ ಚಂದ್ರಶೇಖರ್ ಅವರ ಶುಲ್ಕವನ್ನು ರಾಜ್ಯ ಸಂಘದಿಂದಲೇ ಪಾವತಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ವಿವಿಧ ಭಾಗಗಳಲ್ಲಿರುವ ಸಂಘದ ನಿವೇಶನಗಳು ಹಾಗೂ ಕಟ್ಟಡಗಳ ದಾಖಲೆಗಳನ್ನು ಸರಿಯಾಗಿ ಸಂರಕ್ಷಿಸಬೇಕು. ಲೀಸ್ ಅವಧಿ ಮುಗಿದ ಸ್ಥಳಗಳಲ್ಲಿ ಮರು ಲೀಸ್ ಪ್ರಕ್ರಿಯೆ ಕೈಗೊಳ್ಳಬೇಕು. ಅನಗತ್ಯವಾಗಿ ಡ್ರಾ ಮಾಡಲಾದ ಸಂದ ಹಣವನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಗಡಿನಾಡ ಕನ್ನಡ ಉತ್ಸವ, ನೌಕರರ ದಿನಾಚರಣೆ, ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಆಯೋಜನೆ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದವು.

“ರಾಜ್ಯ ಸರ್ಕಾರ ನೌಕರರ ಸಂಘ ತನ್ನ ಇತಿ-ಮಿತಿಯೊಳಗೆ ನೌಕರರ ಹಿತ ಕಾಪಾಡುವ ಕೆಲಸ ಮಾಡುತ್ತಿದೆ. ಟೀಕೆಗಳಿಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ. ಸಾಧನೆಗಳೇ ಮಾತನಾಡಬೇಕು ಎಂಬುದು ನನ್ನ ನಿಲುವು”
– ಸಿ.ಎಸ್. ಷಡಾಕ್ಷರಿ.
ನೌಕರರ ಸಂಘದ ರಾಜ್ಯಾಧ್ಯಕ್ಷ.

ಒಪಿಎಸ್ ಮರುಜಾರಿಗೆ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ಹಳೇ ಪಿಂಚಣಿ ಯೋಜನೆ (ಒಪಿಎಸ್) ಮರುಜಾರಿಗೆ ಆಗ್ರಹಿಸಿ ಬೃಹತ್ ಸಮಾವೇಶ ನಡೆಸಲು ನೌಕರರೊಂದಿಗೆ ಚರ್ಚಿಸಿ, ನಿರ್ಧರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ 2.93 ಲಕ್ಷ ಮಂದಿ ಎನ್‌ಪಿಎಸ್ ನೌಕರರು ಇದ್ದಾರೆ. ಒಪಿಎಸ್‌ಗಾಗಿ ಸರ್ಕಾರ ಶೇ. 10ರಷ್ಟು ಮೊತ್ತ ನೀಡಿದರೆ ವರ್ಷಕ್ಕೆ 3 ಸಾವಿರ ಕೋಟಿ ರೂ ಹೊರೆ ಆಗುತ್ತದೆ. ಆದರೆ, ರಾಜ್ಯದಲ್ಲಿ 2.73 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಅದರಿಂದ ಸುಮಾರು 2,500 ಕೋಟಿ ರೂ ಉಳಿತಾಯ ಆಗುತ್ತಿದೆ. ಎನ್‌ಪಿಎಸ್ ಕಮಿಟಿ ಅಧ್ಯಕ್ಷರಾದ ಉಮಾ ಮಹಾದೇವನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತಿಳಿಸಿಕೊಡಲಾಗಿದೆ. ಎನ್‌ಪಿಎಸ್‌ನಿಂದ ಒಪಿಎಸ್ ಆಗಬೇಕು. ಅದು ಬಿಟ್ಟು ಬೇರೆ ಯಾವುದೇ ನಿರ್ಣಯಕ್ಕೂ ಒಪ್ಪುವುದಿಲ್ಲ ಎಂಬುದನ್ನು ತಿಳಿಸಲಾಗಿದೆ ಎಂದರು.

ಒಪಿಎಸ್ ಜಾರಿಗೆ ಆಗ್ರಹಿಸಿ ಎನ್‌ಪಿಎಸ್ ನೌಕರರು ಪ್ರತಿಭಟನೆ ಆಯೋಜನೆಗೆ ಒತ್ತಡ ಹೇರುತ್ತಿರುವ ವಿಷಯವನ್ನು ಸಿಎಂ ಗಮನಕ್ಕೂ ತರಲಾಗಿದೆ. ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲೂ ಈ ವಿಷಯ ಪ್ರಸ್ತಾಪಿಸಿದ್ದು, ಈ ಬಗ್ಗೆ ಶೀಘ್ರವೇ ವರದಿ ತರಿಸಿಕೊಂಡು ಸಚಿವ ಸಂಪುಟದಲ್ಲಿ ಮಂಡಿಸಿ, ಎನ್‌ಪಿಎಸ್ ಅನ್ನು ಒಪಿಎಸ್ ಮಾಡುವಂತೆ ಮುಖ್ಯಮಂತ್ರಿ ಅವರಿಗೂ ಒತ್ತಾಯಿಸಲಾಗಿದೆ ಎಂದರು.

ಈ ಸಂಬಂಧ ಸರ್ಕಾರದ ಗಮನ ಸೆಳೆಯಲು ರಾಜ್ಯದ ಎಲ್ಲಾ ಎನ್‌ಪಿಎಸ್ ನೌಕರರನ್ನು ಒಂದೆಡೆ ಸೇರಿಸಿ ಸಮಾವೇಶ ಮಾಡುವ ಉದ್ದೇಶವಿದೆ. ಪ್ರತಿಭಟನೆಯನ್ನು ಯಾವಾಗ, ಹೇಗೆ ಮಾಡಬೇಕು ಎಂಬುದರ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ, ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಮಹಿಳಾ ನೌಕರರ ಸಂಘಟನೆಗೆ ಬಲ ತುಂಬಿ

0

ವಿಜಯಸಾಕ್ಷಿ ಸುದ್ದಿ, ಗದಗ: ಮಹಿಳಾ ನೌಕರರ ಆತ್ಮಸ್ಥೈರ್ಯ ಹೆಚ್ಚಿಸುವ ಮತ್ತು ಅವರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘವು ಬಲಿಷ್ಠವಾಗಿ ಹೊರಹೊಮ್ಮುತ್ತಿದ್ದು, ಶೀಘ್ರದಲ್ಲೇ ಗದಗ ಜಿಲ್ಲೆಯಲ್ಲೂ ಸಂಘಟನೆಯ ಕಾರ್ಯ ಚಟುವಟಿಕೆಗಳು ಆರಂಭವಾಗಲಿವೆ ಎಂದು ಸಂಘದ ರಾಜ್ಯ ಅಧ್ಯಕ್ಷೆ ರೋಶನಿ ಗೌಡ ತಿಳಿಸಿದರು.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 20 ಜಿಲ್ಲೆಗಳಲ್ಲಿ ಈಗಾಗಲೇ ಸಂಘಟನೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಲೂಕು ಮಟ್ಟದ ಘಟಕಗಳೂ ರಚನೆಯಾಗಿವೆ. ಈಗ ಗದಗ ಜಿಲ್ಲೆಯ ಮಹಿಳಾ ನೌಕರರನ್ನು ಒಗ್ಗೂಡಿಸಲು ಸಿದ್ಧತೆ ನಡೆಸಲಾಗಿದೆ ಎಂದರು.

ಸಂಘಟನೆಯ ಪ್ರಮುಖ ಬೇಡಿಕೆಯಾಗಿದ್ದ ಋತುಚಕ್ರ ರಜೆಯನ್ನು ರಾಜ್ಯ ಸರ್ಕಾರವು ಮಂಜೂರು ಮಾಡಿರುವುದು ದೊಡ್ಡ ಯಶಸ್ಸು. ಕೇವಲ ಸರ್ಕಾರಿ ನೌಕರರು ಮಾತ್ರವಲ್ಲದೆ, ಖಾಸಗಿ ವಲಯದ ಮಹಿಳೆಯರಿಗೂ ಈ ಸೌಲಭ್ಯ ಸಿಗುವಂತೆ ಮಾಡಿರುವುದು ಹೆಮ್ಮೆಯ ವಿಷಯ. ಇದಕ್ಕಾಗಿ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಸಹಿತ ಸಂಪುಟದ ಅನೇಕ ಸಚಿವರನ್ನು ಸನ್ಮಾನಿಸಲಾಗಿದೆ ಎಂದರು.

ಅದೇ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 13ನ್ನು ಮಹಿಳಾ ನೌಕರರ ದಿನವನ್ನಾಗಿ ಆಚರಿಸಲು ಸರಕಾರ ಘೋಷಣೆ ಮಾಡಿರುವುದು ಸಂಘಟನೆಯ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದರು.

ಕಚೇರಿ ಮತ್ತು ಕುಟುಂಬದ ಜವಾಬ್ದಾರಿಗಳ ನಡುವೆ ಸಿಲುಕುವ ಮಹಿಳಾ ನೌಕರರ ಮಾನಸಿಕ ಒತ್ತಡ ನಿವಾರಣೆಗಾಗಿ ಸಂಘಟನೆಯು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಗದಗ ಜಿಲ್ಲೆಯ ಎಲ್ಲಾ ಮಹಿಳಾ ನೌಕರರು ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಹಕ್ಕುಗಳ ರಕ್ಷಣೆಗೆ ಕೈಜೋಡಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಖಜಾಂಚಿ ವೀಣಾ ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಎಂ. ಆಶಾರಾಣಿ ಹಾಗೂ ಮಹಿಳಾ ನೌಕರರ ಉಪಸ್ಥಿತರಿದ್ದರು.

ಮಾದಕ ಮರಣಮಾರ್ಗ, ಜಾಗೃತಿ ಜೀವನಮಾರ್ಗ

ಯೌವನವೆಂದರೆ ಯತ್ನದ ಯುಗ, ಯಶಸ್ಸಿನ ಯಾತ್ರೆ, ಯೋಚನೆಯ ಯೋಗ. ಆದರೆ ಇಂದಿನ ಕಾಲಘಟ್ಟದಲ್ಲಿ ಕೆಲ ಯುವಕರು ಯೋಗ್ಯ ದಾರಿಯನ್ನು ಬಿಟ್ಟು ಮಾದಕ ಮೃಗತೃಷ್ಣೆಯ ಕಡೆಗೆ ಮರುಳಾಗುತ್ತಿರುವುದು ಮನಕಲುಕುವ ಸಂಗತಿ.

ಮಾದಕ ಪದಾರ್ಥಗಳು ಮೊದಲು ಮಧುರ ಮೃಗಜಾಲದಂತೆ ಮಿಂಚುತ್ತವೆ; ನಂತರ ಮನುಜ ಮನಸ್ಸನ್ನು ಮಂಕುಗೊಳಿಸಿ, ಮೌಲ್ಯಗಳನ್ನು ಮಣ್ಣಾಗಿಸುತ್ತವೆ. ಒಂದು ಕ್ಷಣದ ಕುತೂಹಲ, ಜೀವನದ ಕುಸಿತಕ್ಕೆ ಕಾರಣವಾಗಬಹುದು; ಒಂದು ಸಣ್ಣ ಸವಿಗೆ ಸಂಪೂರ್ಣ ಸುಖವನ್ನು ಸವೆಸಬಹುದು. ಈ ಭಯಾನಕ ಸತ್ಯವನ್ನು ಸಮಾಜದ ಮುಂದೆ ಸ್ಪಷ್ಟವಾಗಿ ಚಿತ್ರಗಳ ಮೂಲಕ ಚಿತ್ರೀಕರಿಸಿರುವವರು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ. ಅವರ ಚಿತ್ರಗಳು ಕೇವಲ ರೇಖೆಗಳಲ್ಲ. ಅವು ಜಾಗೃತಿಯ ಜ್ವಾಲೆ, ಜೀವನದ ಜಾಗೃತಿ ಘಂಟೆ.

ಸಿರಿಂಜ್‌ನ ಸಂಕೇತ, ಕತ್ತಲೆಯ ಕೈಗಳ ಹಿಡಿತ, ಕನಸುಗಳನ್ನು ಕುಸಿಯುವ ಗುಳಿಗೆಗಳ ಚಿತ್ರಣ… ಹೀಗೆ ಪ್ರತಿ ಚಿತ್ರವೂ ಪ್ರಾಸಂಗಿಕ ಸಂದೇಶವನ್ನು ಪ್ರಬಲವಾಗಿ ಸಾರುತ್ತದೆ: “Stop on drugs” ಎಂಬುದು ಕೇವಲ ವಾಕ್ಯವಲ್ಲ, ಭವಿಷ್ಯವನ್ನು ಬಾಚಿಕೊಳ್ಳುವ ಬಲವಾದ ಬದ್ಧತೆ. ಡಾ. ನಂದಾ ಹಣಬರಟ್ಟಿ ಅವರ ಕಲಾಶ್ರಮ ಯುವಜನತೆಗೆ ಎಚ್ಚರಿಕೆಯ ಸಂದೇಶವಾಗಿದೆ. ಅವರ ಕಲಾಕೃತಿ ಹೇಳುವುದು ಒಂದೇ ಮಾತು- `ಮಾದಕ ಮದ ಕ್ಷಣಿಕ, ಅದರ ಮಸಿ ಶಾಶ್ವತ.’

ಮಾದಕ ವ್ಯಸನವು ವ್ಯಕ್ತಿಯ ಪ್ರಗತಿಯನ್ನು ಪತನಗೊಳಿಸುವ ಪಾತಾಳ; ಕುಟುಂಬದ ಕನಸುಗಳನ್ನು ಕರಗಿಸುವ ಕಹಿ ಕತ್ತಲೆ. ಒಬ್ಬ ಯುವಕನ ವ್ಯಸನ, ಒಟ್ಟು ಮನೆಯ ವ್ಯಥೆ; ಒಂದು ಮನೆ ಕುಸಿದರೆ, ಸಮಾಜವೇ ಕುಂದುತ್ತದೆ. ಯುವ ಶಕ್ತಿಯು ದೇಶದ ಸಂಪತ್ತು. ಅದು ಮಲಿನ ಮಾದಕಕ್ಕೆ ಮಣಿದರೆ, ಭವಿಷ್ಯವೇ ಮಸುಕಾಗುತ್ತದೆ. ಆದರೆ ಜಾಗೃತಿಯ ಜ್ಯೋತಿ ಜ್ವಲಿಸಿದರೆ, ಯುವ ಮನಗಳು ಯಶಸ್ಸಿನ ಯುಗವನ್ನು ನಿರ್ಮಿಸಬಲ್ಲವು.

ಪೋಷಕರು ಪ್ರೀತಿ ನೀಡಿ ಪಥ ತೋರಬೇಕು; ಶಿಕ್ಷಕರು ಶಿಸ್ತು ನೀಡಿ ಶಕ್ತಿ ತುಂಬಬೇಕು; ಸಮಾಜವು ಸಹಕಾರ ನೀಡಿ ಸದುದ್ದೇಶ ಬೆಳೆಸಬೇಕು. ಈ ಕಾರ್ಯ ಪ್ರಾಮಾಣಿಕವಾದಲ್ಲಿ ಮಾದಕ ಮಾರುಕಟ್ಟೆ ಮಣಿಯುತ್ತದೆ.

ಚಿತ್ರಗಳು ಮಾತಾಡುತ್ತವೆ-ಮೌನದಲ್ಲೇ ಮಹತ್ವದ ಸಂದೇಶ ಸಾರುತ್ತವೆ. ಡಾ. ನಂದಾ ಹಣಬರಟ್ಟಿ ಅವರ ಈ ಕಲಾ ಪ್ರಯತ್ನ ಸಮಾಜದ ಮನಸ್ಸಿಗೆ ಮದ್ದು, ಯುವಜನತೆಗೆ ದಿಕ್ಕು, ಭವಿಷ್ಯಕ್ಕೆ ಬೆಳಕು.

ಬನ್ನಿ, ಮನಸ್ಸಿನಲ್ಲಿ ದೃಢ ನಿರ್ಧಾರ ಮಾಡೋಣ: ಮಾದಕಕ್ಕೆ ಮುತ್ತಿಗೆ ಹಾಕೋಣ, ಮೌಲ್ಯಗಳಿಗೆ ಮುಕುಟ ಹಾಕೋಣ. ಮಾದಕವನ್ನು ತಳ್ಳಿ, ಮಾನವೀಯತೆಯನ್ನು ತಾಳಿ-ಇದೇ ಜೀವನದ ಜಯಗಾನ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಮಾದಕ ವ್ಯಸನದ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಿದಲ್ಲಿ ಮಾತ್ರ ಯಶಸ್ಸು ಸಾಧ್ಯ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದ್ದಾರೆ. ಈ ಮಾತು ಕೇವಲ ಮನವಿ ಅಲ್ಲ, ಸಾಮಾಜಿಕ ಸಂವೇದನೆಯ ಸತ್ಯಸಾಕ್ಷಿ.

ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಅವರು, `ಮಾದಕ ವ್ಯಸನವು ಯುವಜನರ ಭವಿಷ್ಯವನ್ನು ಭಸ್ಮಗೊಳಿಸುವ ಭೀಕರ ಬೆಂಕಿ. ಅದನ್ನು ಆರಿಸಲು ಕಾನೂನು ಕ್ರಮಗಳ ಜೊತೆಗೆ ಕುಟುಂಬ ಹಾಗೂ ಸಮಾಜದ ಕಾಳಜಿಯ ಕೈಗಳು ಕೂಡ ಅಗತ್ಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.

-ವಸಂತ ಬಿ. ಮಡ್ಲೂರ
ಸಹಾಯಕ ನಿರ್ದೇಶಕರು,
ವಾರ್ತಾ ಇಲಾಖೆ, ಗದಗ.

ಮಾಚಿದೇವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಮಡಿವಾಳ ಮಾಚಿದೇವರು 12ನೇ ಶತಮಾನದ ಪ್ರಸಿದ್ಧ ವಚನಕಾರರು. ತಮ್ಮ ಕಾಯಕ ನಿಷ್ಠೆಯಿಂದ ಹಾಗೂ ವಚನಗಳ ಮೂಲಕ ಸಮಾಜದಲ್ಲಿ ತಾರತಮ್ಯ, ಅಂಕು-ಡೊಂಕುಗಳನ್ನು ತಿದ್ದಿ ಸಮಾಜ ಸುಧಾರಣೆಗಾಗಿ ಶ್ರಮಿಸಿದ್ದಾರೆ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಡಿವಾಳ ಮಾಚಿದೇವರು ಜಗಜ್ಯೋತಿ ಬಸವಣ್ಣನವರ ತತ್ವಗಳಿಂದ ಪ್ರೇರಿತರಾದವರು. ಸಮಾಜದಲ್ಲಿ ಸಮಾನತೆಗಾಗಿ ತಮ್ಮ ವಚನಗಳ ಮೂಲಕ ಹೋರಾಡಿದವರು. ಶರಣರ ಬಟ್ಟೆಗಳನ್ನು ಮಡಿ ಮಾಡುವುದು ಇವರ ಕಾಯಕವಾಗಿತ್ತು. ಕಾಯಕನಿಷ್ಠ, ಸದಾಚಾರವುಳ್ಳವರ ಶಿವಶರಣರ ಬಟ್ಟೆಗಳನ್ನು ಮಾತ್ರ ಮಡಿ ಮಾಡುವ ನಿಷ್ಠುರ ವಚನಕಾರರಾಗಿದ್ದರು. ಇವರ ವಚನಗಳಲ್ಲಿನ ಸಂದೇಶಗಳು ಸಾರ್ವಕಾಲಿಕವಾಗಿವೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಡಿವೈಎಸ್‌ಪಿ ವಿದ್ಯಾಧರ ನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ರಾಜು ಕಂಠಿಗೊಣ್ಣವರ, ಶ್ರೀಧರ ಚಿನಗುಂಡಿ ಸೇರಿದಂತೆ ಸಮಾಜದ ಗಣ್ಯರು, ಹಿರಿಯರು, ಪ್ರಮುಖರು ಹಾಜರಿದ್ದರು.

ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಶಿರಗುಂಪಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಸುಜಾತಾ ಮಡಿವಾಳರ ಉಪನ್ಯಾಸ ನೀಡಿ, ಮಡಿವಾಳ ಮಾಚಿದೇವರು ವೀರನಿಷ್ಠೆಯ ಶರಣರಾಗಿದ್ದರು. ವಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ ಪರ್ವತಯ್ಯ – ಸುಜ್ಞಾನವ್ವ ದಂಪತಿಗಳ ಪುತ್ರರಾಗಿ ಜನಿಸಿದರು. ಕಲ್ಯಾಣ ಇವರ ಕಾರ್ಯಕ್ಷೇತ್ರವಾಗಿತ್ತು. ಆರಾಧ್ಯದೈವ ಕಲ್ಲಿನಾಥವಾಗಿದ್ದು, ಕಾವ್ಯ ಪುರಾಣಗಳಲ್ಲಿ ಇವರನ್ನು ವೀರಭದ್ರನ ಅವತಾರವೆಂದು ಬಣ್ಣಿಸಲಾಗಿದೆ. ಶರಣರ ಬಟ್ಟೆಗಳನ್ನು ಶುಚಿ ಮಾಡುವುದು ಇವರ ಕಾಯಕವಾಗಿತ್ತು. ಇವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಅಸ್ಪೃಶ್ಯತೆ, ಅಂಧಕಾರ, ಮೂಢನಂಬಿಕೆ, ಅನಾಚಾರಗಳನ್ನು ಹೋಗಲಾಡಿಸಿ ಸಮಾಜ ಸುಧಾರಣೆಗಾಗಿ ಶ್ರಮಿಸಿದರು ಎಂದು ತಿಳಿಸಿದರು.

ಹೋಮ ಹವನಗಳಿಗೆ ವೈಜ್ಞಾನಿಕ ಹಿನ್ನೆಲೆಯಿದೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಧಾರ್ಮಿಕ ಕಾರ್ಯಗಳಲ್ಲಿ ನೆರವೇರಿಸುವ ಹೋಮ-ಹವನಗಳಿಗೆ ವೈಜ್ಞಾನಿಕ ಹಿನ್ನೆಲೆ ಇದೆ. ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಹೋಮ-ಹವನಗಳನ್ನು ನೆರವೇರಿಸಿದರೆ ಮುಂಬರುವ ಅನೇಕ ನಷ್ಟಗಳನ್ನು ತಪ್ಪಿಸಬಹುದು ಎಂದು ಅರುಣ ಜಿ. ಕುಲಕರ್ಣಿ (ಕುರಗಡ್ಡಿ) ಹೇಳಿದರು.

ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದಿರುವ 116ನೇ ವರ್ಷದ ಶ್ರೀ ಗುರುಪ್ರತಿಪದೆ ಉತ್ಸವದ ಅಂಗವಾಗಿ ಸೋಮವಾರ ಜರುಗಿದ ಲಘುರುದ್ರ ಸ್ವಾಹಾಕಾರ ಹೋಮದ ಪೂರ್ಣಾಹುತಿ ನಂತರ ಅವರು ಮಾತನಾಡಿದರು.

ನರೇಗಲ್ಲದ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಶ್ರೀ ಗುರುಪ್ರತಿಪದೆ ಉತ್ಸವವು ಯಾವುದೇ ವಿಘ್ನವಿಲ್ಲದೆ 116 ವರ್ಷಗಳವರೆಗೆ ಸಾಗಿ ಬಂದಿರುವುದು ಶ್ರೀ ಗುರು ದತ್ತಾತ್ರೇಯನ ಆಶೀರ್ವಾದವೇ ಕಾರಣ. ಲಘುರುದ್ರ ಸ್ವಾಹಾಕಾರ ಹೋಮವು ವಿಶೇಷವಾಗಿ ರುದ್ರ ದೇವರಿಗೆ ಪ್ರೀತಿಯ ಹೋಮವಾಗಿದೆ. ಇದರಿಂದ ಕಾಲಕಾಲಕ್ಕೆ ಮಳೆ-ಬೆಳೆಗಳು ಆಗಿ ದೇಶವು ಸುಭಿಕ್ಷವಾಗುತ್ತದೆ. ಅಷ್ಟೇ ಅಲ್ಲದೆ ಜನರೂ ಕೂಡ ಶಾಂತಿ, ನೆಮ್ಮದಿಯಿಂದ ಇರಲು ಸಹಕಾರಿಯಾಗಿದೆ ಎಂದರು.

ಡಾ. ಕೃಷ್ಣಾ ಕಾಳೆ ದಂಪತಿಗಳು ಲಘುರುದ್ರ ಸ್ವಾಹಾಕಾರದ ಭಕ್ತಿಸೇವೆಯನ್ನು ವಹಿಸಿದ್ದರು. ವಿ.ಆರ್. ಗ್ರಾಮಪುರೋಹಿತ ಹೋಮದ ನೇತೃತ್ವ ವಹಿಸಿದ್ದರು. ಅರ್ಚಕ ಶ್ರೀವಲ್ಲಭಭಟ್ಟ ಸದರಜೋಶಿ, ಉಪಾಧ್ಯಕ್ಷ ಆದರ್ಶ ಕುಲಕರ್ಣಿ, ಕಾರ್ಯದರ್ಶಿ ರಘುನಾಥ ಕೊಂಡಿ, ಎಸ್.ಎಚ್. ಕುಲಕರ್ಣಿ, ಅರುಣ ಕುಲಕರ್ಣಿ, ಅರುಣ ಗ್ರಾಮಪುರೋಹಿತ, ನಾಗೇಶಭಟ್ ಗ್ರಾಮಪುರೋಹಿತ, ಅಜಿತ ಕುಲಕರ್ಣಿ, ನಾಗರಾಜ ನಾಡಗೇರ, ಸೋಮನಾಥ ಗ್ರಾಮಪುರೋಹಿತ, ಪ್ರಶಾಂತ ಗ್ರಾಮಪುರೋಹಿತ, ಶ್ರೀಧರ ಗ್ರಾಮಪುರೋಹಿತ, ಜಗದೀಶ ಜ್ಯೋಷಿ, ಅಭಿಷೇಕ ಜೋಷಿ, ರಾಮಚಂದ್ರ ಕುಲಕರ್ಣಿ, ಹರೀಶ ಕುಲಕರ್ಣಿ, ಸುಮಂತ ಕುಲಕರ್ಣಿ, ರಾಮಕೃಷ್ಣ ಸದರಜೋಶಿ, ಪವನ ಗ್ರಾಮಪುರೋಹಿತ, ಅನುಪ ಕುಲಕರ್ಣಿ ಮುಂತಾದವರಿದ್ದರು.

error: Content is protected !!