Home Blog Page 95

ಕೈಗಾ 5–6ನೇ ಘಟಕಗಳಿಗೆ ಚಾಲನೆ: ಸಂಪೂರ್ಣ ಸ್ವದೇಶಿ 700 ಮೆಗಾವಾಟ್ ರಿಯಾಕ್ಟರ್‌ಗಳ ಸ್ಥಾಪನೆ

ಬೆಂಗಳೂರು: ರಕ್ಷಣಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣಾಮ ಬೀರಿರುವ ‘ಮೇಕ್ ಇನ್ ಇಂಡಿಯಾ’ ಯೋಜನೆ ಇದೀಗ ಅಣುಶಕ್ತಿ ಕ್ಷೇತ್ರದಲ್ಲೂ ಮಹತ್ವದ ಹೆಜ್ಜೆ ಇಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾಮಗಾರಿಗೆ ಅಧಿಕೃತ ಚಾಲನೆ ನೀಡಲಾಗಿದೆ. ಈ ಘಟಕಗಳಲ್ಲಿ ಸ್ಥಾಪನೆಯಾಗುವ 700 ಮೆಗಾವಾಟ್ ಸಾಮರ್ಥ್ಯದ ಪ್ರೆಷರೈಸ್ಡ್ ಹೆವಿ ವಾಟರ್ ರಿಯಾಕ್ಟರ್‌ಗಳು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಾಣಗೊಳ್ಳುತ್ತಿರುವುದು ವಿಶೇಷವಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಕೈಗಾ ಘಟಕದ ಸೈಟ್ ನಿರ್ದೇಶಕ ಬಿ. ವಿನೋದ್ ಕುಮಾರ್ ಅವರು, ಮೇಕ್ ಇನ್ ಇಂಡಿಯಾ ಯೋಜನೆಯಡಿ ಈ ರಿಯಾಕ್ಟರ್‌ಗಳನ್ನು ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಫ್ಲೀಟ್ ಮೋಡ್‌ನಲ್ಲಿ 10 ಅಣು ವಿದ್ಯುತ್ ಯೋಜನೆಗಳಿಗೆ ಅನುಮೋದನೆ ನೀಡಿದ್ದು, 700 ಮೆಗಾವಾಟ್ ಸಾಮರ್ಥ್ಯದ ರಿಯಾಕ್ಟರ್‌ಗಳನ್ನು ಗುಜರಾತ್, ರಾಜಸ್ಥಾನ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಸ್ಥಾಪಿಸಲಾಗುತ್ತಿದೆ. ಇದರಿಂದ ಮೊದಲ ಬಾರಿಗೆ ಈ ಪ್ರಮಾಣದ ಸ್ವದೇಶೀ ರಿಯಾಕ್ಟರ್‌ಗಳನ್ನು ವ್ಯಾಪಕವಾಗಿ ಅಳವಡಿಸಲಾಗುತ್ತಿದೆ ಎಂದರು.

ಹಳೆಯ ಒಪ್ಪಂದದ ಪ್ರಕಾರ ರಾಜ್ಯಕ್ಕೆ ಉತ್ಪಾದಿತ ವಿದ್ಯುತ್‌ನ ಶೇ.20ರಷ್ಟು ಪಾಲು ಸಿಗುತ್ತಿತ್ತು. ಆದರೆ ಹೊಸ ಯೋಜನೆಯಡಿ ಕರ್ನಾಟಕಕ್ಕೆ ಶೇ.50ರಷ್ಟು ವಿದ್ಯುತ್ ಪಾಲು ಲಭ್ಯವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಸ್ತುತ ಕೈಗಾ ಅಣು ವಿದ್ಯುತ್ ಕೇಂದ್ರದ ಸ್ಥಾಪಿತ ಸಾಮರ್ಥ್ಯ 880 ಮೆಗಾವಾಟ್ ಆಗಿದೆ. 5 ಮತ್ತು 6ನೇ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಿದ ಬಳಿಕ ಒಟ್ಟು ಸಾಮರ್ಥ್ಯ 2,280 ಮೆಗಾವಾಟ್‌ಗೆ ಏರಲಿದೆ.

ರಾಜ್ಯದಲ್ಲಿ ಇನ್ನೂ 7,000 ಮೆಗಾವಾಟ್ ಹೆಚ್ಚುವರಿ ಸಾಮರ್ಥ್ಯ ಅಭಿವೃದ್ಧಿಗೆ ಸಿದ್ಧತೆ ನಡೆಯುತ್ತಿದ್ದು, ಎಲ್ಲವೂ ಯೋಜನೆಯಂತೆ ನಡೆದರೆ ಕರ್ನಾಟಕಕ್ಕೆ ಮತ್ತೊಂದು ಮಹತ್ವದ ಅಣು ವಿದ್ಯುತ್ ಯೋಜನೆ ದೊರೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ನೂತನ ಘಟಕಗಳ ಕಾಮಗಾರಿಗೆ ಅಣುಶಕ್ತಿ ಆಯೋಗದ ಅಧ್ಯಕ್ಷ ಅಜಿತ್ ಕುಮಾರ್ ಮೊಹಾಂತಿ ಹಾಗೂ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್) ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಭುವನ್ ಚಂದ್ರ ಪಾಠಕ್ ಉಪಸ್ಥಿತರಿದ್ದರು. ಈ ಘಟಕಗಳು ಮುಂದಿನ ಐದು ವರ್ಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆಗೆ ಬರಲಿವೆ ಎಂದು ತಿಳಿಸಲಾಗಿದೆ.

Iran Israel War: ಭಾರತದಲ್ಲಿ ಹಿಂಸಾಚಾರ ಸಾಧ್ಯತೆ: ಎಲ್ಲಾ ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ

0

ನವದೆಹಲಿ: ಇರಾನ್ – ಅಮೆರಿಕ – ಇಸ್ರೇಲ್ ನಡುವೆ ನಡೆದ ದಾಳಿ–ಪ್ರತಿದಾಳಿಗಳ ಹಿನ್ನೆಲೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ಬೆಳವಣಿಗೆಗಳ ಪರಿಣಾಮವಾಗಿ ದೇಶದಲ್ಲಿ ಸಂಭಾವ್ಯ ಹಿಂಸಾಚಾರ ಉಂಟಾಗುವ ಸಾಧ್ಯತೆಯನ್ನು ಮನಗಂಡು, ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ಸುತ್ತೋಲೆ ಜಾರಿ ಮಾಡಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆಬ್ರವರಿ 28ರಂದು ಕಳುಹಿಸಲಾದ ಪತ್ರದಲ್ಲಿ, ಜಾಗತಿಕ ಬೆಳವಣಿಗೆಗಳ ಪರಿಣಾಮವಾಗಿ ದೇಶದ ಕೆಲ ಭಾಗಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇರುವುದಾಗಿ ಸೂಚಿಸಲಾಗಿದೆ. ವಿಶೇಷವಾಗಿ ಧಾರ್ಮಿಕ ಕೂಟಗಳಲ್ಲಿ ಉದ್ರೇಕಿತ ಭಾಷಣಗಳ ಮೂಲಕ ಅಶಾಂತಿ ಪ್ರಚೋದಿಸುವ ಪ್ರಯತ್ನಗಳಿರಬಹುದೆಂಬ ಆತಂಕ ವ್ಯಕ್ತಪಡಿಸಲಾಗಿದೆ.

ರಾಜ್ಯ ಸರ್ಕಾರಗಳು ಹಾಗೂ ಭದ್ರತಾ ಸಂಸ್ಥೆಗಳು ಗರಿಷ್ಠ ಎಚ್ಚರಿಕೆಯಿಂದ ಇರಬೇಕು. ಅಶಾಂತಿ ಉಂಟುಮಾಡುವ ಅಥವಾ ಉದ್ವಿಗ್ನತೆ ಕೆರಳಿಸುವ ಮೂಲಭೂತ ಪ್ರಚಾರಕರನ್ನು ಗುರುತಿಸಿ ಮೇಲ್ವಿಚಾರಣೆ ಮಾಡಬೇಕೆಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಗುಪ್ತಚರ ಹಾಗೂ ಭದ್ರತಾ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವಾಲಯ ಒತ್ತಿ ಹೇಳಿದೆ. ಜಾಗತಿಕ ಬೆಳವಣಿಗೆಗಳನ್ನು ಬಳಸಿಕೊಂಡು ಸ್ಥಳೀಯರ ಭಾವನೆಗಳನ್ನು ಕೆರಳಿಸುವ ಅಪಾಯಗಳ ಮೇಲೆ ವಿಶೇಷ ನಿಗಾ ವಹಿಸಲಾಗುತ್ತಿದೆ ಎಂದು ದೆಹಲಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದರೊಂದಿಗೆ ಯುದ್ಧಪೀಡಿತ ಪ್ರದೇಶಗಳಲ್ಲಿ ಇರುವ ಭಾರತೀಯ ನಾಗರಿಕರ ಸುರಕ್ಷತೆ ಖಚಿತಪಡಿಸಿಕೊಳ್ಳುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ದೇಶಾದ್ಯಂತ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.

IND vs WI: ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಜಯ: ಸೂರ್ಯಕುಮಾರ್ ಯಾದವ್ ಹೇಳಿದ್ದೇನು..?

0

ಕೊಲ್ಕತ್ತಾ: ಟಿ20 ವಿಶ್ವಕಪ್‌ನ ನಿರ್ಣಾಯಕ ಸೂಪರ್-8 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡ 5 ವಿಕೆಟ್‌ಗಳ ಜಯ ಸಾಧಿಸಿದೆ.

ಟಾಸ್ ಗೆದ್ದ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ 20 ಓವರ್‌ಗಳಲ್ಲಿ 195 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.

196 ರನ್‌ಗಳ ಗುರಿ ಬೆನ್ನತ್ತಿದ ಭಾರತ ಪರ ಸಂಜು ಸ್ಯಾಮ್ಸನ್ ಅಜೇಯ 97 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿದರು. ಅವರ ಹೊನಲು ಬ್ಯಾಟಿಂಗ್ ನೆರವಿನಿಂದ ಭಾರತ 19.2 ಓವರ್‌ಗಳಲ್ಲಿ 199 ರನ್‌ಗಳಿಸಿ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಪಂದ್ಯದ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್, ಇದು ‘ಮಾಡು ಇಲ್ಲವೇ ಮಡಿ’ ಪಂದ್ಯವಾಗಿತ್ತು. ಇಂತಹ ಒತ್ತಡದ ಸಂದರ್ಭದಲ್ಲಿ ಆಟಗಾರರು ತೋರಿದ ಧೈರ್ಯ ಹಾಗೂ ತಂಡದ ಆಟ ಪ್ರಶಂಸನೀಯ ಎಂದು ಹೇಳಿದರು.

ಸಂಜು ಸ್ಯಾಮ್ಸನ್ ಕುರಿತು ಮಾತನಾಡಿದ ಅವರು, “ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ ಎಂಬುದು ನನ್ನ ನಂಬಿಕೆ. ಸಂಜು ಕಠಿಣ ಪರಿಶ್ರಮ ಪಟ್ಟಿದ್ದಾರೆ. ಅವಕಾಶ ಸಿಕ್ಕಾಗ ಅದನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೌಲರ್‌ಗಳ ಪ್ರದರ್ಶನಕ್ಕೂ ನಾಯಕ ಮೆಚ್ಚುಗೆ ಸೂಚಿಸಿದರು. ಯೋಜನೆಗಳ ಪ್ರಕಾರ ಬೌಲಿಂಗ್ ಮಾಡಿರುವುದು ತಂಡಕ್ಕೆ ಲಾಭವಾಗಿದೆ. ಈಡನ್ ಗಾರ್ಡನ್ಸ್‌ನಲ್ಲಿ ಇಬ್ಬನಿಯ ನಡುವೆ 200 ರನ್ ಬೆನ್ನಟ್ಟುವುದು ಕಷ್ಟಕರವಲ್ಲ ಎಂಬುದು ನಮಗೆ ತಿಳಿದಿತ್ತು ಎಂದು ಹೇಳಿದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ಬ್ಯಾಟಿಂಗ್‌ಗೆ ಸಹಕಾರಿಯಾಗಿದ್ದು, ಬ್ಯಾಟರ್‌ಗಳು ಸಣ್ಣ-ಸಣ್ಣ ಪಾಲುದಾರಿಕೆಗಳನ್ನು ಕಟ್ಟಿಕೊಂಡು ಪಂದ್ಯವನ್ನು ಆಳಕ್ಕೆ ತೆಗೆದುಕೊಂಡರು. ಇದರ ಫಲವಾಗಿ ಗುರಿಯನ್ನು ಯಶಸ್ವಿಯಾಗಿ ಸಾಧಿಸಲು ಸಾಧ್ಯವಾಯಿತು ಎಂದರು.

ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್‌ಗೆ ಪ್ರವೇಶಿಸಿದ್ದು, ಮುಂದಿನ ಪಂದ್ಯ ಮುಂಬೈನಲ್ಲಿ ನಡೆಯಲಿದೆ. ಆದರೆ ಅದಕ್ಕಿಂತ ಮೊದಲು ವಿಶ್ರಾಂತಿ ಪಡೆದು ನಂತರ ಸೆಮಿಫೈನಲ್‌ ಬಗ್ಗೆ ಚಿಂತನೆ ನಡೆಸುವುದಾಗಿ ನಾಯಕ ತಿಳಿಸಿದ್ದಾರೆ.

ತವರಿನಲ್ಲಿ ಆಡುತ್ತಿರುವುದರಿಂದ ಒತ್ತಡ ಇರುವುದು ಸಹಜ. ಆದರೆ ಆ ಒತ್ತಡವನ್ನು ಸರಿಯಾಗಿ ನಿಭಾಯಿಸುವುದು ಮುಖ್ಯ. ನಿರ್ಣಾಯಕ ಪಂದ್ಯದಲ್ಲಿ ಅದನ್ನು ಸಾಧಿಸಿದ್ದೇವೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.

ಮಧ್ಯಪ್ರಾಚ್ಯ ಬಿಕ್ಕಟ್ಟು: ಷೇರು ಮಾರುಕಟ್ಟೆ ಕುಸಿತ, ಚಿನ್ನದ ಬೆಲೆ ಇಳಿಕೆ – ಬೆಳ್ಳಿ ಏರಿಕೆ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ ದೇಶೀಯ ಷೇರು ಮಾರುಕಟ್ಟೆಗಳು ಭಾರೀ ಕುಸಿತ ಕಂಡಿವೆ. ಹೂಡಿಕೆದಾರರ ಆತಂಕದ ನಡುವೆ ಅಮೂಲ್ಯ ಲೋಹಗಳ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಚಿನ್ನದ ಬೆಲೆಯಲ್ಲಿ ಆರಂಭಿಕ ಇಳಿಕೆ ದಾಖಲಾಗಿದ್ದರೆ, ಬೆಳ್ಳಿ ಬೆಲೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ಮಾರ್ಚ್ 2, 2026 (ಸೋಮವಾರ) ರಂದು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 3,290 ರೂಪಾಯಿ ಇಳಿಕೆ ಕಂಡು 1,69,800 ರೂಪಾಯಿಗೆ ತಲುಪಿದೆ. 1 ಗ್ರಾಂ ಚಿನ್ನದ ಬೆಲೆ 329 ರೂಪಾಯಿ ಇಳಿಕೆಯಾಗಿದ್ದು, 16,980 ರೂಪಾಯಿ ದಾಖಲಾಗಿದೆ.

ಅದೇ ರೀತಿ, 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 300 ರೂಪಾಯಿ ಇಳಿಕೆ ಕಂಡು 15,565 ರೂಪಾಯಿಗೆ ತಲುಪಿದೆ. 10 ಗ್ರಾಂ ಚಿನ್ನದ ಬೆಲೆ 1,55,650 ರೂಪಾಯಿಯಾಗಿ ನಿಗದಿಯಾಗಿದೆ.

ಇನ್ನೊಂದೆಡೆ, ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಕೆಜಿ ಬೆಳ್ಳಿಯ ಬೆಲೆ 35,000 ರೂಪಾಯಿ ಏರಿಕೆ ಕಂಡು 3,30,000 ರೂಪಾಯಿಗೆ ತಲುಪಿದೆ. ಇದು ಇತ್ತೀಚಿನ ಅವಧಿಯ ಗರಿಷ್ಠ ಮಟ್ಟವೆಂದು ವ್ಯಾಪಾರ ವಲಯಗಳು ತಿಳಿಸಿವೆ.

ಜಾಗತಿಕ ಅಸ್ಥಿರತೆಯ ಪರಿಣಾಮವಾಗಿ ಸುರಕ್ಷಿತ ಹೂಡಿಕೆ ಎಂದೇ ಪರಿಗಣಿಸಲ್ಪಡುವ ಚಿನ್ನದ ಬೆಲೆಯಲ್ಲಿ ಮುಂದಿನ ದಿನಗಳಲ್ಲಿ ಏರಿಕೆ ಸಾಧ್ಯತೆ ಇದೆ ಎಂಬ ಮುನ್ಸೂಚನೆಗಳೂ ವ್ಯಕ್ತವಾಗಿವೆ. ಹೂಡಿಕೆದಾರರು ಮಾರುಕಟ್ಟೆಯ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಳ: ಉತ್ತರ ಕರ್ನಾಟಕಕ್ಕೆ ‘ಹೀಟ್ ಅಲರ್ಟ್’

ಬೆಂಗಳೂರು: ಕಳೆದ ವರ್ಷ ಭಾರಿ ಮಳೆ ಹಾಗೂ ದಾಖಲೆ ಮಟ್ಟದ ಚಳಿ ಅನುಭವಿಸಿದ್ದ ರಾಜ್ಯದ ಜನತೆಗೆ ಇದೀಗ ತೀವ್ರ ಬಿಸಿಲಿನ ಸರದಿ ಎದುರಾಗಿದೆ. ಈ ವರ್ಷ ವಾಡಿಕೆಗಿಂತ ಹೆಚ್ಚು ತಾಪಮಾನ ದಾಖಲಾಗುವ ಸಾಧ್ಯತೆ ಇದ್ದು, ಬಿಸಿಗಾಳಿಯ ತೀವ್ರತೆ ಕೂಡ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಐಎಂಡಿ ಪ್ರಕಾರ, ಮಾರ್ಚ್‌ನಿಂದ ಮೇ ತಿಂಗಳವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಲಿದೆ. ಸಾಮಾನ್ಯ ದಿನಗಳಿಗಿಂತ 3ರಿಂದ 15 ದಿನಗಳವರೆಗೆ ಹೆಚ್ಚುವರಿ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ.

ವಿಶೇಷವಾಗಿ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಎಚ್ಚರಿಕೆ ನೀಡಲಾಗಿದೆ. ರಾಯಚೂರು, ಬಳ್ಳಾರಿ, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 2ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ 40ರಿಂದ 43 ಡಿಗ್ರಿವರೆಗೆ ತಲುಪುವ ಈ ಭಾಗಗಳಲ್ಲಿ ಈ ಬಾರಿ ಇನ್ನಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.

ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಾಪಮಾನ ಜೊತೆಗೆ ಆರ್ದ್ರತೆಯ ಪ್ರಮಾಣವೂ ಹೆಚ್ಚಿರಲಿದೆ. ಇದರಿಂದ ಜನರಿಗೆ ಅತಿಯಾದ ಬೆವರು, ಸುಸ್ತು ಹಾಗೂ ಅಸಹನೆ ಹೆಚ್ಚಾಗುವ ಸಾಧ್ಯತೆ ಇದೆ.

ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.

ಹವಾಮಾನ ತಜ್ಞರ ಪ್ರಕಾರ, ಸಮಭಾಜಕ ಪೆಸಿಫಿಕ್ ಮಹಾಸಾಗರದಲ್ಲಿ ಪ್ರಸ್ತುತ ದುರ್ಬಲ ‘ಲಾ-ನಿನಾ’ ಪರಿಸ್ಥಿತಿ ಇದೆ. ಆದರೆ ಜಾಗತಿಕ ಮಾದರಿಗಳ ಪ್ರಕಾರ, ಈ ಪರಿಸ್ಥಿತಿ ಶಿಥಿಲಗೊಂಡು ಮುಂದಿನ ದಿನಗಳಲ್ಲಿ ‘ಎಲ್-ನಿನೋ’ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಇದರಿಂದ ಉಷ್ಣತೆ ಹೆಚ್ಚಾಗುವ ಸಾಧ್ಯತೆ ಇದೆ.

ಮಾರ್ಚ್‌ನಿಂದ ಮೇವರೆಗೆ ಬಿಸಿಗಾಳಿಯ ತೀವ್ರತೆ ಜನರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ವೃದ್ಧರು, ಮಕ್ಕಳು, ರಸ್ತೆಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಬಿಸಿಲಿನ ತೀವ್ರತೆಯಿಂದ ದೇಹದ ನೀರಿನ ಪ್ರಮಾಣ ಕಡಿಮೆಯಾಗುವುದು, ಹೀಟ್ ಸ್ಟ್ರೋಕ್ ಹಾಗೂ ದೌರ್ಬಲ್ಯ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜನರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ- ನಟ ವಿಜಯ ದೇವರಕೊಂಡ ಮದುವೆ ರೆಸಿಪ್ಷನ್‌ಗೆ ಆಹ್ವಾನಿತರಿಗೆ ಮಾತ್ರ ಪ್ರವೇಶ

ಹೈದರಾಬಾದ್: ದೇಶಾದ್ಯಂತ ಭಾರೀ ಕುತೂಹಲ ಹುಟ್ಟಿಸಿದ ವಿಜಯ್ ದೇವರಕೊಂಡ–ರಶ್ಮಿಕಾ ಮಂದಣ್ಣ ವಿವಾಹ ಆರತಕ್ಷತೆ ಇದೀಗ ಕಠಿಣ ಭದ್ರತಾ ವಲಯದಲ್ಲಿ ನಡೆಯಲಿದೆ. ಮಾರ್ಚ್ 4ರಂದು ನಡೆಯುವ ಕಾರ್ಯಕ್ರಮವನ್ನು ‘Invite Only’ ಆಗಿ ನಿರ್ವಹಿಸಲು ದಂಪತಿ ನಿರ್ಧರಿಸಿದ್ದಾರೆ.

ಅಧಿಕೃತ ಹೇಳಿಕೆಯ ಪ್ರಕಾರ, ಸಾರ್ವಜನಿಕ ಉತ್ಸಾಹ, ಅಭಿಮಾನಿಗಳ ಅಪಾರ ಸೇರ್ಪಡೆ ಹಾಗೂ ಭದ್ರತಾ ಆತಂಕಗಳನ್ನು ಗಮನಿಸಿ ಸ್ಥಳೀಯ ಪೊಲೀಸರೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜನದಟ್ಟಣೆ, ಟ್ರಾಫಿಕ್ ಸಮಸ್ಯೆ ಮತ್ತು ಉನ್ನತ ಮಟ್ಟದ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಸುರಕ್ಷತಾ ಸವಾಲುಗಳನ್ನು ತಪ್ಪಿಸಲು ಅತಿಥಿ ಪಟ್ಟಿಯನ್ನು ಸೀಮಿತಗೊಳಿಸಲಾಗಿದೆ.

ಆರಂಭಿಕ ಯೋಜನೆಯಂತೆ ದಕ್ಷಿಣ ಮತ್ತು ಉತ್ತರ ಭಾರತೀಯ ಚಿತ್ರರಂಗದ ಪ್ರಮುಖ ತಾರೆಗಳು ಹಾಗೂ ಕೆಲವು ರಾಜಕೀಯ ಗಣ್ಯರು ಭಾಗವಹಿಸುವ ನಿರೀಕ್ಷೆ ಇತ್ತು. ಆದರೆ ಅಂತಿಮವಾಗಿ ಭದ್ರತೆಯನ್ನು ಆದ್ಯತೆಗೊಟ್ಟು ಆಯ್ದ ಅತಿಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

“ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳಿಗೆ ನಾವು ಸದಾ ಕೃತಜ್ಞರು. ನಮ್ಮ ಆಚರಣೆ ಸುರಕ್ಷಿತವಾಗಿರಲು ನಿಮ್ಮ ಸಹಕಾರ ಅಗತ್ಯ,” ಎಂದು ವಿಜಯ್ ಮತ್ತು ರಶ್ಮಿಕಾ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಹೈದರಾಬಾದ್‌ಗೆ ವಾಪಸಾದ ದಂಪತಿ ತಮ್ಮ ನಿವಾಸದ ಹೊರಗೆ ಮಾಧ್ಯಮಗಳಿಗೆ ಸಂಕ್ಷಿಪ್ತವಾಗಿ ಪ್ರತಿಕ್ರಿಯಿಸಿ ಸಿಹಿತಿಂಡಿಗಳನ್ನು ಹಂಚಿದರು. ನಂತರ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಈ ಭೇಟಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿವೆ.

ಕ್ರಿಕೆಟ್ ಜಗಳ ದುರಂತ ಅಂತ್ಯ: ಸಂಕೇತ್ ಹತ್ಯೆ ಪ್ರಕರಣದಲ್ಲಿ ₹15 ಲಕ್ಷ ಪರಿಹಾರ ಘೋಷಿಸಿದ ಸಿಎಂ

0

ಶಿವಮೊಗ್ಗ: ಕ್ರಿಕೆಟ್ ಪಂದ್ಯಾವಳಿಯಲ್ಲಿ ಉಂಟಾದ ಸಣ್ಣ ಜಗಳ ದುರಂತ ಅಂತ್ಯ ಕಂಡಿದ್ದು, ಸ್ನೇಹಿತನ ಪರ ನಿಂತಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್ ಗುಂಪು ಹಲ್ಲೆಗೆ ಬಲಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬವನ್ನು ಭೇಟಿ ಮಾಡಿ ₹15 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಗೆ ತೆರಳುವ ಮುನ್ನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸಂಕೇತ್ ಅವರ ತಂದೆ-ತಾಯಿಯನ್ನು ಭೇಟಿಯಾದ ಮುಖ್ಯಮಂತ್ರಿಗಳು, ಸರ್ಕಾರದ ವತಿಯಿಂದ ₹10 ಲಕ್ಷ ಹಾಗೂ ಸಚಿವ ಮಧು ಬಂಗಾರಪ್ಪ ಅವರ ವೈಯಕ್ತಿಕ ₹5 ಲಕ್ಷ ಸಹಾಯಧನದ ಚೆಕ್‌ನ್ನು ಸಂಕೇತ್ ತಂದೆ ಶಿವಕುಮಾರ್ ಅವರಿಗೆ ವಿತರಿಸಿದರು.

ಶಿವಮೊಗ್ಗದ ಸುಳೇಬೈಲು ಪ್ರದೇಶದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ವೇಳೆ ಜಗಳ ಉಂಟಾಗಿ, ಅದು ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಸ್ನೇಹಿತನಿಗೆ ಬೆಂಬಲವಾಗಿ ನಿಂತ ಸಂಕೇತ್ ಮೇಲೆ ಬಾಲಕರ ಗುಂಪೊಂದು ದಾಳಿ ನಡೆಸಿತ್ತು. ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಜೀವ ಉಳಿಯಲಿಲ್ಲ.

ಕುಟುಂಬದ ನೋವನ್ನು ಹಂಚಿಕೊಂಡ ಮುಖ್ಯಮಂತ್ರಿ, ಸರ್ಕಾರದಿಂದ ಅಗತ್ಯ ನೆರವು ಮತ್ತು ಬೆಂಬಲ ಒದಗಿಸುವ ಭರವಸೆ ನೀಡಿದ್ದಾರೆ. ಪ್ರಕರಣದ ಸಂಬಂಧ ತನಿಖೆ ಮುಂದುವರೆದಿದೆ.

ಫೋನ್ ಕಾಲ್‌ಗಳ ಹಾದಿ ಬೆನ್ನಟ್ಟಿದ ಪೊಲೀಸರು: ಯುವಕನ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್-ನಾಲ್ವರು ಅರೆಸ್ಟ್

0

ಗದಗ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪ ನಡೆದ ಮಹ್ಮದ್ ಫಾರೂಕ್ ಶೇಖಸನದಿ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ನಿಶ್ಚಿತಾರ್ಥವಾದ ಯುವತಿಯ ಪ್ರಿಯಕರನೇ ಸಂಚು ರೂಪಿಸಿ ಹತ್ಯೆ ನಡೆಸಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.

ಕೊಲೆಯಾದ ಮಹ್ಮದ್ ಫಾರೂಕ್ ಅವರಿಗೆ ಸುಮಾರು ಒಂದೂವರೆ ತಿಂಗಳ ಹಿಂದೆ ನಿಶ್ಚಿತಾರ್ಥವಾಗಿತ್ತು. ಆದರೆ, ನಿಶ್ಚಿತಾರ್ಥವಾದ ಯುವತಿಯನ್ನು ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ದಾವಲಸಾಬ್ ಮಕಾಂದಾರ್, ಫಾರೂಕ್ ಅವರನ್ನು ಸಂಪರ್ಕಿಸಿ ತನ್ನ ಪ್ರೀತಿಯ ವಿಚಾರ ತಿಳಿಸಿದ್ದಾನೆ ಎನ್ನಲಾಗಿದೆ. ಈ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಜಗಳವೂ ನಡೆದಿತ್ತು.

ಘಟನೆಯ ದಿನ ದಾವಲಸಾಬ್ ಫಾರೂಕ್‌ಗೆ ಫೋನ್ ಕರೆ ಮಾಡಿ ಜಮೀನಿಗೆ ಕರೆಯಿಸಿಕೊಂಡಿದ್ದಾನೆ. ಬಳಿಕ ಕಾರಿನಲ್ಲಿ ಬಂದ ನಾಲ್ವರು ಆರೋಪಿಗಳು ಫಾರೂಕ್ ಜೊತೆ ಜಗಳವಾಡಿ, ಕೊಡಲಿಯಿಂದ ಹೊಡೆದು ಭೀಕರವಾಗಿ ಹತ್ಯೆ ನಡೆಸಿದ್ದಾರೆ. ಕೊಲೆ ಬಳಿಕ ಮುಳಗುಂದ ಸಮೀಪದ ಹಳ್ಳದಲ್ಲಿ ಕೊಡಲಿಯನ್ನು ಬಿಸಾಕಿ ಪರಾರಿಯಾಗಿದ್ದರು.

ಹತ್ಯೆಯಾದ ಮಹ್ಮದ್ ಫಾರೂಕ್

ಈ ಪ್ರಕರಣ ಸಂಬಂಧ ಧಾರವಾಡ ಜಿಲ್ಲೆಯ ಅಣ್ಣಿಗೇರಿ ನಿವಾಸಿ ದಾವಲಸಾಬ್ ಮಕಾಂದಾರ್, ಮಕಬೂಲಸಾಬ್ ಹಾಗೂ ಇಬ್ಬರು ಅಪ್ರಾಪ್ತರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಆರೋಪಿಗಳನ್ನು ಕಾನೂನು ಸಂಘರ್ಷಕ್ಕೆ ಒಳಪಡಿಸಲಾಗಿದೆ.

ಫೋನ್ ಕಾಲ್‌ಗಳ ಹಾದಿ ಬೆನ್ನಟ್ಟಿದ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಶ್ರೀಮಂತರು ಸ್ವಯಂ ಪ್ರೇರಿತರಾಗಿ ಗ್ಯಾರಂಟಿ ಯೋಜನೆ ತ್ಯಜಿಸಬೇಕು: ಎಂ.ಬಿ ಪಾಟೀಲ್

ಬೆಂಗಳೂರು: ಶ್ರೀಮಂತರು ಸ್ವಯಂ ಪ್ರೇರಿತರಾಗಿ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುವುದನ್ನು ಬಿಡಬೇಕು ಎಂದು ಸಚಿವ ಎಂ.ಬಿ. ಪಾಟೀಲ್ ಒತ್ತಾಯಿಸಿದ್ದಾರೆ.

ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀಮಂತರು ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳುವುದು ಸರಿಯಲ್ಲ ಎಂಬ ಡಿಕೆ ಸುರೇಶ್ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದರು. ಗ್ಯಾರಂಟಿ ಯೋಜನೆಗಳ ಲಾಭವನ್ನು ಅರ್ಹ ಬಿಪಿಎಲ್ ಕುಟುಂಬಗಳು ಮಾತ್ರ ಪಡೆಯಬೇಕು, ಶ್ರೀಮಂತರು ಅದನ್ನು ಸ್ವಯಂ ಇಚ್ಛೆಯಿಂದ ತ್ಯಜಿಸಬೇಕು ಎಂಬುದು ತಮ್ಮ ಅಭಿಪ್ರಾಯವೂ ಹೌದು ಎಂದು ಹೇಳಿದರು.

ಇದೇ ವೇಳೆ ಗ್ಯಾರಂಟಿ ಯೋಜನೆಗಳು ರಾಜ್ಯ ಸರ್ಕಾರಕ್ಕೆ ಹೊರೆಯಾಗುತ್ತಿವೆ ಎಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ್, ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಯೂ ಸಮಾನವಾಗಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು. ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗಳು ಅಭಿವೃದ್ಧಿಯ ಭಾಗವಾಗಿದ್ದು, ಅವುಗಳಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುವುದಿಲ್ಲ ಎಂದು ಹೇಳಿದರು. ರಾಜ್ಯದ ಮುಖ್ಯಮಂತ್ರಿಗಳು ಹಣಕಾಸು ವಿಷಯದಲ್ಲಿ ಅನುಭವಿಗಳಾಗಿದ್ದು, ಈಗಾಗಲೇ ಹಲವು ಬಜೆಟ್‌ಗಳನ್ನು ಮಂಡಿಸಿರುವವರು; ಅವರು ಹಣಕಾಸನ್ನು ಸಮರ್ಥವಾಗಿ ನಿರ್ವಹಿಸಲಿದ್ದಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಪರೀಕ್ಷೆ ಮುಗಿಸಿ ಬಂದ ಪಿಯುಸಿ ವಿದ್ಯಾರ್ಥಿನಿ ಮೇಲೆ ಸೋದರ ಮಾವನಿಂದ ಹಲ್ಲೆ!

0

ಮೈಸೂರು: ಹಳೆಯ ದ್ವೇಷದ ಹಿನ್ನೆಲೆ ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಕ್ರೂರ ಹಲ್ಲೆ ನಡೆದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಪಾಳ್ಯಾ ಗ್ರಾಮದಲ್ಲಿ ನಡೆದಿದೆ.

ಪೂರ್ಣಿಮಾ ಎಂಬ ವಿದ್ಯಾರ್ಥಿನಿ ಪರೀಕ್ಷೆ ಮುಗಿಸಿ ಮನೆಗೆ ಬಂದಿದ್ದ ವೇಳೆ, ಆಕೆಯ ಸೋದರ ಮಾವ ಸೋಮಣ್ಣ ಏಕಾಏಕಿ ಮನೆಗೆ ನುಗ್ಗಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ನೀನು ಓದಬಾರದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಬಾರದು ಎಂಬ ದ್ವೇಷದಿಂದಲೇ ಹಲ್ಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪೂರ್ಣಿಮಾ ಸೋದರ ಮಾವನ ಆಶ್ರಯದಲ್ಲೇ ಬೆಳೆದಿದ್ದರೂ ಸಹ, ಶಿಕ್ಷಣ ಮುಂದುವರಿಸುತ್ತಿರುವುದಕ್ಕೆ ಕೋಪಗೊಂಡು ಈ ಕೃತ್ಯ ಎಸಗಲಾಗಿದೆ ಎನ್ನಲಾಗಿದೆ. ಯುವತಿಯ ನೆರವಿಗೆ ಬಂದ ಕುಟುಂಬಸ್ಥರ ಮೇಲೆಯೂ ಸೋಮಣ್ಣ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡ ಪೂರ್ಣಿಮಾಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೋಮಣ್ಣ ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!