ಉಡುಪಿ: ತಾಯಿಯ ಮಡಿಲಲ್ಲಿದ್ದ ಒಂದೂವರೆ ವರ್ಷದ ಕಂದಮ್ಮನ ತಲೆ ಮೇಲೆ ತೆಂಗಿನಕಾಯಿ ಬಿದ್ದು ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ಹೆರಂಜಾಲು ಗ್ರಾಮದಲ್ಲಿ ನಡೆದಿದೆ.
ಮೃತ ಮಗುವನ್ನು ದಕ್ಷ ಎಂದು ಗುರುತಿಸಲಾಗಿದೆ. ಪ್ರಶಾಂತ್ ಮತ್ತು ಸುಚಿತ್ರಾ ದಂಪತಿಯ ಎರಡನೇ ಪುತ್ರನಾಗಿದ್ದ ದಕ್ಷನ ಅಕಾಲಿಕ ಸಾವಿನಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಮಾಹಿತಿಯ ಪ್ರಕಾರ, ಸುಚಿತ್ರಾ ಅವರು ತಮ್ಮ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ಮನೆಯ ಸಮೀಪದ ತೆಂಗಿನ ಮರದ ಕೆಳಗೆ ಕುಳಿತಿದ್ದರು. ಈ ವೇಳೆ ಅಚಾನಕ್ ಆಗಿ ಮರದಿಂದ ಉದುರಿದ ತೆಂಗಿನಕಾಯಿ ಮಗುವಿನ ತಲೆಯ ಮೇಲೆ ಬಿದ್ದಿದೆ. ಪರಿಣಾಮ ದಕ್ಷ ಗಂಭೀರವಾಗಿ ಗಾಯಗೊಂಡಿದ್ದಾನೆ.
ತಕ್ಷಣ ಸ್ಥಳೀಯರ ನೆರವಿನಿಂದ ಮಗುವನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಘಟನೆಯಿಂದ ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಕಂದಮ್ಮನ ಅಕಾಲಿಕ ಮರಣಕ್ಕೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ಪ್ರಕರಣ ಸಂಬಂಧ ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.



