Home Blog Page 96

ಶ್ರದ್ಧೆ, ಪರಿಶ್ರಮ, ಜ್ಞಾನ: ಶ್ರೀಮಂತರಾಗುವ ಮೂರು ಕೀಲಿಗಳು!

0

ಶ್ರೀಮಂತರಾಗಬೇಕೆಂಬ ಆಸೆ ಪ್ರತಿಯೊಬ್ಬರಲ್ಲೂ ಇದೆ. ಆದರೆ ಅದನ್ನು ಸಾಧಿಸುವ ಸರಿಯಾದ ಮಾರ್ಗದ ಬಗ್ಗೆ ಬಹಳ ಜನರಿಗೆ ತಿಳಿದಿಲ್ಲ.

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಬಡತನವನ್ನು ನಿವಾರಿಸಿ ಶ್ರೀಮಂತರಾಗಲು ಅನುಸರಿಸಬೇಕಾದ ಮುಖ್ಯ ಅಭ್ಯಾಸಗಳನ್ನು ವಿವರಿಸಿದ್ದಾರೆ.

ಚಾಣಕ್ಯರ ಪ್ರಕಾರ, ಶ್ರೀಮಂತಿಕೆಗೆ:

  • ಪೂರ್ಣ ಶ್ರದ್ಧೆ ಮತ್ತು ಪರಿಶ್ರಮ – ಪ್ರತಿದಿನ ಶ್ರದ್ಧೆಯಿಂದ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.
  • ಯೋಚನೆಯೊಂದಿಗೆ ನಿರ್ಧಾರ – ವ್ಯರ್ಥ ಖರ್ಚು, ಸಾಲ ತಪ್ಪಿಸಬೇಕು; ನಿರ್ಧಾರಗಳು ಭವಿಷ್ಯ ನಿರ್ಧರಿಸುತ್ತವೆ.
  • ಸಮಯದ ಮೌಲ್ಯ ಅರಿತುಕೊಳ್ಳಿ – ಸೋಮಾರಿತನ ಬಿಡಿ, ಕೆಲಸ ಸಮಯಕ್ಕೆ ಪೂರ್ಣಗೊಳಿಸಿ.
  • ನಿರಂತರ ಕಲಿಕೆ – ಹೊಸದನ್ನು ಪ್ರತಿದಿನ ಕಲಿಯಿರಿ, ಜ್ಞಾನವು ಶ್ರೇಷ್ಠ ಸಂಪತ್ತು.
  • ಆತ್ಮವಿಶ್ವಾಸ – ಸವಾಲುಗಳಿಗೆ ಧೈರ್ಯದಿಂದ ಎದುರಿಸಿ.
  • ಹಣದ ಬುದ್ಧಿವಂತಿಕೆ – ಸಂಪಾದನೆ ಮಾಡುತ್ತಾ, ವ್ಯರ್ಥ ಖರ್ಚು ತಡೆಯಿರಿ.
  • ರಹಸ್ಯತೆಯ ಭದ್ರತೆ – ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳ್ಳುವವರೆಗೆ ಹಂಚಿಕೊಳ್ಳಬೇಡಿ.
  • ಕಠಿಣ ಪರಿಶ್ರಮ – ಕಷ್ಟಪಟ್ಟು ಕೆಲಸ ಮಾಡುವ ಅಭ್ಯಾಸ ಅಗತ್ಯ; ಸುಲಭ ಮಾರ್ಗಗಳು ಯಶಸ್ಸಿಗೆ ತಡೆಯಾಗುತ್ತವೆ.

ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿದರೆ, ಕಡು ಬಡತನದಲ್ಲಿದ್ದರೂ ಶ್ರೀಮಂತಿಕೆಗೆ ದಾರಿ ತೋರುವ ಸಾಧ್ಯತೆ ಹೆಚ್ಚು.

 

ಶಿಲ್ಪಕಲೆಯ ಸಾಧನೆಗೆ ಶಿಲ್ಪಿ ಸುಮಲತಾ ಕವಲೂರರಿಗೆ ಗೌರವ ಡಾಕ್ಟರೇಟ್

0

ಲಕ್ಕುಂಡಿ: ಕಳೆದ 23 ವರ್ಷಗಳಿಂದ ಶಿಲ್ಪಕಲೆಯಲ್ಲಿ ಅನನ್ಯ ಸಾಧನೆಗೈದ ಶಿಲ್ಪಿ ಸುಮಲತಾ ವಿ. ಕವಲೂರ ಅವರಿಗೆ ಏಷ್ಯಾ ಇಂಟರ್ನ್ಯಾಷನಲ್ ರಿಸರ್ಚ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

ಸಾಂಪ್ರದಾಯಿಕ ಶಿಲ್ಪಕಲೆಯ ವಿವಿಧ ಮಾಧ್ಯಮಗಳಾದ ಕಲ್ಲು, ಮರ, ಮಣ್ಣು ಹಾಗೂ ಪಿ.ಒ.ಪಿ ಮೂಲಕ ಅನೇಕ ಕೃತಿಗಳನ್ನು ರೂಪಿಸಿ ಗಮನಸೆಳೆದಿರುವ ಸುಮಲತಾ ಅವರು ಶಿಲ್ಪಕಲೆಯನ್ನು ತಮ್ಮ ಜೀವನ ವೃತ್ತಿಯಾಗಿಸಿಕೊಂಡಿದ್ದಾರೆ. ನೂರಾರು ಪ್ರಶಸ್ತಿಗಳು ಹಾಗೂ ಸನ್ಮಾನಗಳಿಗೆ ಪಾತ್ರರಾಗಿರುವ ಅವರ ಸಾಧನೆಯನ್ನು ಗುರುತಿಸಿ ಫೆಬ್ರವರಿ 28, 2026ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರು ರಾಜ್ಯ, ದಕ್ಷಿಣ ವಲಯ ಮತ್ತು ರಾಷ್ಟ್ರೀಯ ಮಟ್ಟದ ಶಿಬಿರಗಳು ಹಾಗೂ ಪ್ರದರ್ಶನಗಳಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಮೆರೆದಿದ್ದಾರೆ. ನಾಗಪುರದಲ್ಲಿ ನಡೆದ ದಕ್ಷಿಣ ವಲಯ ಶಿಬಿರ ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

ಲಕ್ಕುಂಡಿ ಗ್ರಾಮದ ವೀರಭದ್ರಪ್ಪ ಕವಲೂರ ಹಾಗೂ ಗಂಗೂಬಾಯಿ ವಿ. ಕವಲೂರ ದಂಪತಿಗಳ ಪುತ್ರಿಯಾಗಿರುವ ಸುಮಲತಾ ಅವರು, ಶಿಲ್ಪರತ್ನ ಪ್ರಶಸ್ತಿ, ವಿಶ್ವಕರ್ಮ ಶಿಲ್ಪಿ ಬ್ರಹ್ಮ ಪ್ರಶಸ್ತಿ ಸೇರಿದಂತೆ ಅನೇಕ ರಾಜ್ಯ ಮಟ್ಟದ ಗೌರವಗಳಿಗೆ ಪಾತ್ರರಾಗಿದ್ದಾರೆ.

ಮೂಲತಃ ಲಕ್ಕುಂಡಿಯವರಾದ ಅವರು, ಗ್ರಾಮದ ಐತಿಹಾಸಿಕ ದೇವಾಲಯಗಳ ಶಿಲ್ಪಕಲೆಯನ್ನು ಆಧರಿಸಿ ವಿಶೇಷ ಪ್ರದರ್ಶನಗಳನ್ನು ಆಯೋಜಿಸಿರುವುದು ಗಮನಾರ್ಹವಾಗಿದೆ. ಗೌರವ ಡಾಕ್ಟರೇಟ್ ಪಡೆದ ಅವರಿಗೆ ಶಿಲ್ಪಕಲೆ ಹಾಗೂ ಕೆತ್ತನೆ ಕ್ಷೇತ್ರದ ವಿವಿಧ ಸಂಘಟನೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಇರಾನ್‌ನ ಮಧ್ಯಂತರ ಸರ್ವೋಚ್ಚ ನಾಯಕರಾಗಿ ಹಿರಿಯ ಧರ್ಮಗುರು ಅಯತೊಲ್ಲಾ ಅರಾಫಿ ನೇಮಕ!

0

ಇರಾನ್/ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕ–ಇಸ್ರೇಲ್ ಜಂಟಿ ದಾಳಿಯಲ್ಲಿ ಸಾವನ್ನಪ್ಪಿದ ನಂತರ, ಮಧ್ಯಂತರ ಸರ್ವೋಚ್ಚ ನಾಯಕತ್ವಕ್ಕೆ ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಜಾ ಅರಾಫಿ ನೇಮಕಗೊಂಡಿದ್ದಾರೆ.

ಖಮೇನಿಯವರ ಮೃತ್ಯು ಬಳಿಕ ಶಾಶ್ವತ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಾಗುವವರೆಗೆ, ಮಧ್ಯಂತರ ಮಂಡಳಿಯು ರಾಜ್ಯದ ಎಲ್ಲಾ ಅಧಿಕಾರಗಳನ್ನು ಚಲಾಯಿಸುತ್ತಿದೆ. ಈ ಮಂಡಳಿಯು ನ್ಯಾಯಶಾಸ್ತ್ರಜ್ಞ ಸದಸ್ಯರು ಮತ್ತು ಧರ್ಮಗುರುಗಳೊಂದಿಗೆ ದೇಶದ ರಾಜಕೀಯ, ಧಾರ್ಮಿಕ ಹಾಗೂ ಸೈನಿಕ ವ್ಯವಹಾರಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ.

1989ರಿಂದ ಇರಾನ್ ಸರ್ವೋಚ್ಚ ನಾಯಕರಾಗಿ ಅಧಿಕಾರ ಹೊಂದಿದ್ದ 86 ವರ್ಷದ ಖಮೇನಿ ಅಮೆರಿಕ–ಇಸ್ರೇಲ್ ಜಂಟಿ ಏರ್‌ಸ್ಟ್ರೈಕ್‌ನಲ್ಲಿ ಬಲಿಯಾಗಿದ್ದಾರೆ. ಅವರ ಸಾವಿನಿಂದಾಗಿ ದೇಶದ ರಾಜಕೀಯ ಹಾಗೂ ಅಂತಾರಾಷ್ಟ್ರೀಯ ಸ್ಥಿತಿ ತೀವ್ರ ತಳಮಳಕ್ಕೆ ಒಳಗಾಗಿದೆ.

ಮಡಿಕೇರಿಯಲ್ಲಿ ಕಾಡಾನೆ ದಾಳಿ: 17 ವರ್ಷದ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

ಮಡಿಕೇರಿ: ಮಡಿಕೇರಿ ತಾಲ್ಲೂಕಿನ ಬೆಟ್ಟತೂರು ಗ್ರಾಮದಲ್ಲಿ ಶನಿವಾರ ಸಂಜೆ ಭೀಕರ ಕಾಡಾನೆ ದಾಳಿಗೆ 17 ವರ್ಷದ ವಿದ್ಯಾರ್ಥಿನಿ ಪೂಜಾ ಬಲಿಯಾಗಿದ್ದಾರೆ.

ಮಡಿಕೇರಿ ಸಂತ ಮೈಕೆಲ್ ಶಾಲೆಯ ಪ್ರಥಮ PUC ಯಲ್ಲಿದ್ದ ಪೂಜಾ, ಸಂಜೆ 5:30ಕ್ಕೆ ಕಾಲೇಜು ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಬಸ್ಸಿನಿಂದ ಇಳಿದು ದಾರಿಯಲ್ಲಿ ಸಾಗುತ್ತಿದ್ದಾಗ, ಕಾಡಾನೆ ಏಕಾಏಕಿ ಅವರ ಮೇಲೆ ದಾಳಿ ನಡೆಸಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯುವತಿಯ ಶವವನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಘಟನೆಯ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿ ಪೂಜಾ ಹತ್ಯೆ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕಾಡಾನೆ ದಾಳಿಯ ಸಂದರ್ಭದಲ್ಲಿ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.  ಈ ಘಟನೆ ಗ್ರಾಮದಲ್ಲಿ ಭಾರೀ ದುಃಖ, ಆತಂಕ ಮತ್ತು ಆಕ್ರೋಶ ಮೂಡಿಸಿದೆ.

ಕೈಗಾ ಅಣು ವಿದ್ಯುತ್ ಯೋಜನೆ ವಿಸ್ತರಣೆ: 5–6ನೇ ಘಟಕ ಕಾಂಕ್ರೀಟಿಕರಣಕ್ಕೆ ಅಜಿತ್ ಕುಮಾರ್ ಮೊಹಂತಿ ಚಾಲನೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿರುವ ಕೈಗಾ ಅಣು ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ 21 ಸಾವಿರ ಕೋಟಿ ರೂ. ವೆಚ್ಚದ 5 ಮತ್ತು 6ನೇ ಅಣು ವಿದ್ಯುತ್ ಘಟಕಗಳ ನಿರ್ಮಾಣ ಕಾರ್ಯ ಮುಂದುವರಿದಿದೆ. ಭಾನುವಾರ ಕಾಂಕ್ರೀಟಿಕರಣ ಕಾರ್ಯಕ್ಕೆ ಅಣು ಶಕ್ತಿ ಆಯೋಗದ ಅಧ್ಯಕ್ಷ ಅಜಿತ್ ಕುಮಾರ್ ಮೊಹಂತಿ ಚಾಲನೆ ನೀಡಿದರು.

2000ರಲ್ಲಿ ಸ್ಥಾಪಿತವಾದ ಈ ಕೇಂದ್ರದಲ್ಲಿ ಈಗಾಗಲೇ ನಾಲ್ಕು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 2,280 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ನಡೆಯುತ್ತಿದೆ. ವಿದ್ಯುತ್ ಬೇಡಿಕೆ ಹೆಚ್ಚಳದ ಹಿನ್ನೆಲೆ ತಲಾ 700 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಹೊಸ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.

2030ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಎನ್‌ಪಿಸಿ ನಿರ್ದೇಶಕ ವಿನೋದ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹೊಸ ಘಟಕಗಳ ಆರಂಭದಿಂದ ಸ್ಥಳೀಯರಿಗೆ 1400 ರಿಂದ 1600 ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆ ಇದೆ.

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ: ಸಿಲುಕಿದವರ ರಕ್ಷಣೆಗೆ ಸಹಾಯವಾಣಿ – ಕೋಲಾರ ಜಿಲ್ಲಾಧಿಕಾರಿ ಮಾಹಿತಿ

0

ಕೋಲಾರ: ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ 201ಕ್ಕೂ ಹೆಚ್ಚು ಇರಾನಿಯನ್ನರು ಸಾವನ್ನಪ್ಪಿದ್ದಾರೆ. ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮನೈ ಹತ್ಯೆಯಾದರೆಂಬ ವರದಿಗಳು ಹೊರಬಿದ್ದಿವೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಹಲವೆಡೆ ವಿಮಾನ ಹಾರಾಟ ರದ್ದಾಗಿದೆ.

ಪರಿಣಾಮವಾಗಿ ದುಬೈ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಕನ್ನಡಿಗರು ಹಾಗೂ ಭಾರತೀಯರು ಸಿಲುಕಿದ್ದಾರೆ. ಅವರ ರಕ್ಷಣೆಗೆ ಕೋಲಾರ ಜಿಲ್ಲಾಡಳಿತ ಸಹಾಯವಾಣಿ ಪ್ರಕಟಿಸಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದ್ದಾರೆ.

ಕತಾರ್, ಬಹ್ರೇನ್, ಜೋರ್ಡಾನ್, ಇರಾಕ್, ಕುವೈತ್ ಹಾಗೂ ಪ್ಯಾಲೆಸ್ಟೈನ್ ದೇಶಗಳ ಸಹಾಯವಾಣಿ ಸಂಖ್ಯೆಗಳು ಪ್ರಕಟವಾಗಿದ್ದು, ಅಗತ್ಯವಿದ್ದರೆ ಸಂಪರ್ಕಿಸಲು ಮನವಿ ಮಾಡಲಾಗಿದೆ.

ಇದೇ ವೇಳೆ ಕೋಲಾರ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಕೇಂದ್ರ ಆರಂಭಿಸಲಾಗಿದ್ದು, 9740050061 ಮತ್ತು 9606241449 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.

ದುಬೈನಲ್ಲಿ ಸಿಲುಕಿರುವ ಬಳ್ಳಾರಿ ಜಿಲ್ಲೆಯ 50ಕ್ಕೂ ಹೆಚ್ಚು ಜನರ ನೆರವಿಗೆ ಮಾಜಿ ಸಚಿವ ಬಿ. ನಾಗೇಂದ್ರ ಮುಂದಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಡಿಯೋ ಕಾಲ್ ಮೂಲಕ ಸಿಲುಕಿದವರ ಜೊತೆ ಮಾತನಾಡಿ ಧೈರ್ಯ ತುಂಬಿದ್ದಾರೆ.

ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷ ಕಿರಣ್ ಗೌಡ ಕೂಡ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಸಹಾಯಕ್ಕಾಗಿ 971 52 699 5413 ಸಂಖ್ಯೆಗೆ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಭಾರತೀಯರ ಮೇಲೂ ತೀವ್ರವಾಗಿ ತಟ್ಟಿದ್ದು, ಸಿಲುಕಿರುವವರ ಸುರಕ್ಷಿತ ವಾಪಸ್ಸಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಭಾರತದಂತೆಯೇ ಈ ದೇಶಗಳಲ್ಲೂ ಹೋಳಿ ಹಬ್ಬ ಸಂಭ್ರಮದಿಂದ ಆಚರಿಸಲಾಗುತ್ತೆ!

0

ಭಾರತದಲ್ಲಿ ಅತ್ಯಂತ ಸಂಭ್ರಮದ ಹಬ್ಬಗಳಲ್ಲಿ ಹೋಳಿ ಒಂದು. ಈ ವರ್ಷ ಮಾರ್ಚ್ 3 ಮತ್ತು 4ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ.

ಹಬ್ಬದ ಸಮಯದಲ್ಲಿ ಜನರು ಪರಸ್ಪರ ಬಣ್ಣಗಳನ್ನು ಮೈಮೇಲೆ ಹಚ್ಚಿಕೊಂಡು ಸಂತೋಷವನ್ನು ಹಂಚಿಕೊಳ್ಳುತ್ತಾರೆ. ಯಾವುದೇ ಜಾತಿ-ಮತ ಭೇದವಿಲ್ಲದೆ ಜನರು ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಪಾಲ್ಗೊಳ್ಳುತ್ತಾರೆ. ಭಾರತೀಯರಂತೆ, ವಿಶ್ವದ ನಾನಾ ಭಾಗಗಳಲ್ಲಿಯೂ ಹೋಳಿ ಹಬ್ಬವನ್ನು ಉತ್ಸಾಹದಿಂದ ಆಚರಿಸಲಾಗುತ್ತದೆ. ನೇಪಾಳದಲ್ಲಿ ಫಾಗು ಪೂರ್ಣಿಮಾ ಎಂದು ಕರೆಯಲ್ಪಡುವ ಹಬ್ಬವನ್ನು ಹಿಂದೂ ಮತ್ತು ಬೌದ್ಧ ಸಮುದಾಯಗಳು ಆಚರಿಸುತ್ತಾರೆ.

ಬಾಂಗ್ಲಾದೇಶದಲ್ಲಿ ಡೋಲ್ ಪೂರ್ಣಿಮಾ ಅಥವಾ ವಸಂತ ಹಬ್ಬದಂತೆ, ರಾಧಾ-ಕೃಷ್ಣ ಮೆರವಣಿಗೆಗಳು ಮತ್ತು ಸಾಂಪ್ರದಾಯಿಕ ಹಾಡುಗಳು ನಡೆಯುತ್ತವೆ. ಪಾಕಿಸ್ತಾನದಲ್ಲಿ ಸಿಂಧ್ ಪ್ರಾಂತ್ಯದ ಹಿಂದೂ ಸಮುದಾಯ ದೇವಾಲಯಗಳಲ್ಲಿ ಹೋಳಿ ಆಚರಿಸುತ್ತಾರೆ. ಮಾರಿಷಸ್, ಫಿಜಿ, ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಭಾರತೀಯ ಮೂಲದ ಜನರು ಹೋಳಿ ಮೇಳ, ಫಾಗ್ವಾ ಹಬ್ಬ, ನೃತ್ಯ ಮತ್ತು ಸಂಗೀತದೊಂದಿಗೆ ಹಬ್ಬವನ್ನು ಆಚರಿಸುತ್ತಾರೆ.

ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಲಂಡನ್, ಲೀಸೆಸ್ಟರ್ ಮುಂತಾದ ನಗರಗಳಲ್ಲಿ ಹೋಳಿ ಸಂಭ್ರಮದಾಯಕವಾಗಿ ಆಯೋಜಿಸಲಾಗುತ್ತದೆ. ಅಮೆರಿಕ ಮತ್ತು ಕೆನಡಾದಲ್ಲಿಯೂ ಉತಾಹ್, ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ ಮುಂತಾದ ನಗರಗಳಲ್ಲಿ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಭಾರತೀಯ ಸಮುದಾಯಗಳು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ, ಬಣ್ಣ, ನೃತ್ಯ ಮತ್ತು ಸಂಸ್ಕೃತಿಯ ಆಕರ್ಷಕ ಮೇಳವನ್ನಾಗಿ ಮಾಡುತ್ತವೆ.

ಫ್ಲೈಟ್ ರದ್ದು, ಕನ್ನಡಿಗರ ಪರದಾಟ: ದುಬೈನಲ್ಲಿ ಸಿಲುಕಿದವರಿಗೆ ಸಹಾಯ ಹಸ್ತ ಚಾಚಿದ ಒಕ್ಕಲಿಗರ ಸಂಘ

0

ಹಾಸನ: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಸಂಘರ್ಷದ ಪರಿಣಾಮ ದುಬೈ ಹಾಗೂ ಅಬುಧಾಬಿಯಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಇದರಿಂದ 50ಕ್ಕೂ ಹೆಚ್ಚು ಕನ್ನಡಿಗರು ದುಬೈನಲ್ಲಿ ಸಿಲುಕಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

ದುಬೈ ಒಕ್ಕಲಿಗರ ಸಂಘ ತುರ್ತು ನೆರವಿಗಾಗಿ ಮುಂದಾಗಿದ್ದು, ಸಂಘದ ಅಧ್ಯಕ್ಷ ಯತೀಶ್ ಸಹಾಯಕ್ಕಾಗಿ +971555114205 ಸಂಖ್ಯೆಗೆ ಸಂಪರ್ಕಿಸಬೇಕೆಂದು ಮನವಿ ಮಾಡಿದ್ದಾರೆ.

ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯ ಪ್ರವಾಸಿಗರು ವಾಪಸ್ಸಾಗಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. 20 ಮಹಿಳೆಯರು ಮತ್ತು 30 ಪುರುಷರು ದುಬೈನಲ್ಲಿ ಉಳಿದಿದ್ದಾರೆ.

ಬಾಗಲಕೋಟೆಯ ಬೀಳಗಿ ಮೂಲದ ಗಿರೀಶ್ ಕೆರೂರು ಪ್ಯಾರಿಸ್‌ಗೆ ತೆರಳುವ ವೇಳೆ ಅಬುಧಾಬಿಯಲ್ಲಿ ಸಿಲುಕಿದ್ದು, ತಮ್ಮ ಸ್ಥಿತಿಗತಿಯನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಹಾಗೂ ನಗರ ಶಾಸಕ ನಾರಾ ಭರತ್ ರೆಡ್ಡಿ ಈ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆದಿದ್ದಾರೆ. ಮಾರ್ಚ್ 2ರವರೆಗೆ ವಿಮಾನ ಹಾರಾಟ ಇರುವುದಿಲ್ಲ ಎಂಬ ಮಾಹಿತಿ ದೊರೆತಿದೆ.

ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಕನ್ನಡಿಗರ ಮೇಲೂ ತೀವ್ರವಾಗಿ ತಟ್ಟಿದ್ದು, ಎಲ್ಲರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳುವಂತೆ ಒತ್ತಾಯಗಳು ಕೇಳಿಬರುತ್ತಿವೆ.

ಚುನಾವಣೆಗೆ ಮುನ್ನ ಪುದುಚೇರಿಯಲ್ಲಿ 2,700 ಕೋಟಿ ಯೋಜನೆಗಳಿಗೆ ಚಾಲನೆ: ಡಿಎಂಕೆ–ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

0

ಪುದುಚೇರಿ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ಚಟುವಟಿಕೆ ಜೋರಾಗಿರುವ ನಡುವೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ಭೇಟಿ ನೀಡಿ ₹2,700 ಕೋಟಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡಿಎಂಕೆ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್ ಮತ್ತು ಡಿಎಂಕೆ ಆಡಳಿತದ ಅವಧಿಯಲ್ಲಿ ಪುದುಚೇರಿಯ ಜನರು ಭ್ರಷ್ಟಾಚಾರ, ಅಪರಾಧ ಮತ್ತು ಯಾತನೆ ಅನುಭವಿಸಿದರು. ಗೂಂಡಾಗಳು ಮತ್ತು ಮಾದಕವಸ್ತು ಮಾಫಿಯಾಗಳು ಬೀದಿಗಳನ್ನು ಆಳುತ್ತಿದ್ದವು,” ಎಂದು ಆರೋಪಿಸಿದರು.

“ಕಾಂಗ್ರೆಸ್ ಪುದುಚೇರಿಯನ್ನು ದೆಹಲಿಯ ಒಂದು ಕುಟುಂಬಕ್ಕೆ ಎಟಿಎಂ ಆಗಿ ಪರಿವರ್ತಿಸಿತು. ಡಿಎಂಕೆ ಹಗರಣಗಳ ಸುದೀರ್ಘ ಪಟ್ಟಿ ಹೊಂದಿದೆ. ಈ ಎರಡೂ ಪಕ್ಷಗಳು ಪುದುಚೇರಿಯ ಅಭಿವೃದ್ಧಿಗೆ ಅಡ್ಡಿಯಾಗಿವೆ,” ಎಂದು ಹೇಳಿದರು.

ಪುದುಚೇರಿ ಮತ್ತೆ ಭ್ರಷ್ಟಾಚಾರ ಮತ್ತು ಅಪರಾಧದ ಯುಗಕ್ಕೆ ಮರಳಬೇಕೇ? ಜನರು ಅದನ್ನು ಬಯಸುವುದಿಲ್ಲ ಎಂದು ಅವರು ಹೇಳಿದರು. 2047ರೊಳಗೆ ಭಾರತ ಮತ್ತು ಪುದುಚೇರಿಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ ಎಂದರು.

ಕೇಂದ್ರವು ನಗರ ಮತ್ತು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ. ಪ್ರವಾಸೋದ್ಯಮ ಪುದುಚೇರಿಯ ಶಕ್ತಿ ಎಂದು ಬಣ್ಣಿಸಿದ ಪ್ರಧಾನಿ, ಆಧ್ಯಾತ್ಮಿಕ, ಪರಿಸರ ಹಾಗೂ ಆರೋಗ್ಯ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದರು.

ಖಮೇನಿ ಹತ್ಯೆ ಖಂಡಿಸಿ ಪಾಕಿಸ್ತಾನದಲ್ಲಿ ಹಿಂಸಾಚಾರ: ಕರಾಚಿಯಲ್ಲಿ ರಾಯಭಾರಿ ಕಚೇರಿ ಮೇಲೆ ದಾಳಿ, 10 ಮಂದಿ ಸಾವು

0

ಕರಾಚಿ: ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಪ್ರೀಂ ನಾಯಕ ಅಯಾತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಕರಾಚಿಯಲ್ಲಿರುವ ರಾಯಭಾರಿ ಕಚೇರಿ ಮೇಲೆ ನೂರಾರು ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಕೈಯಲ್ಲಿ ಕೋಲು ಹಾಗೂ ಕಲ್ಲುಗಳನ್ನು ಹಿಡಿದು ಕಚೇರಿಯತ್ತ ನುಗ್ಗಿದ ಗುಂಪು ಕಲ್ಲು ತೂರಾಟ ನಡೆಸಿದ ಪರಿಣಾಮ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಖಮೇನಿ ಹತ್ಯೆಗೆ ಅಮೆರಿಕವೇ ಕಾರಣ ಎಂದು ಆರೋಪಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆಗಳು ಓಪನ್ ಫೈರಿಂಗ್ ನಡೆಸಿದವು ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ, ಅಮೆರಿಕ ಮಿತ್ರ ರಾಷ್ಟ್ರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಸಂದೇಶ ರವಾನಿಸಿದ್ದು, “ಮಿತ್ರ ರಾಷ್ಟ್ರಗಳ ಮೇಲೆ ದಾಳಿ ನಡೆದರೆ ತೀವ್ರ ಪ್ರತಿಕ್ರಿಯೆ ನೀಡಲಾಗುವುದು” ಎಂದು ಹೇಳಿದ್ದಾರೆ.

ಪಾಕಿಸ್ತಾನದ ಹಲವೆಡೆ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಕರಾಚಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಕ್ರಮಗಳ ವಿರುದ್ಧ ಪ್ರತಿಭಟನೆಗಳು ಮುಂದುವರಿದಿವೆ. ಅಮೆರಿಕ–ಇಸ್ರೇಲ್ ದಾಳಿಯಲ್ಲಿ 200 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದಕ್ಕೆ ಪ್ರತಿಯಾಗಿ ಇರಾನ್ ಬಲವಾದ ಪ್ರತ್ಯುತ್ತರ ನೀಡುವುದಾಗಿ ಘೋಷಿಸಿದೆ. ಪ್ರದೇಶದಲ್ಲಿನ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಹೇಳಲಾಗುತ್ತಿದೆ.

ಉತ್ತರಾಧಿಕಾರಿಗಳ ಪೈಕಿ ಖಮೇನಿ ಅವರ ಎರಡನೇ ಪುತ್ರ ಮೊಜ್ತಬಾ ಖಮೇನಿ ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. 1969ರಲ್ಲಿ ಜನಿಸಿದ ಅವರು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಾಗೂ ಇರಾನ್ ಧಾರ್ಮಿಕ ವ್ಯವಸ್ಥೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.

error: Content is protected !!