Home Blog Page 95

ಪರೀಕ್ಷೆ ಮುಗಿಸಿ ಬಂದ ಪಿಯುಸಿ ವಿದ್ಯಾರ್ಥಿನಿ ಮೇಲೆ ಸೋದರ ಮಾವನಿಂದ ಹಲ್ಲೆ!

0

ಮೈಸೂರು: ಹಳೆಯ ದ್ವೇಷದ ಹಿನ್ನೆಲೆ ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಕ್ರೂರ ಹಲ್ಲೆ ನಡೆದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಪಾಳ್ಯಾ ಗ್ರಾಮದಲ್ಲಿ ನಡೆದಿದೆ.

ಪೂರ್ಣಿಮಾ ಎಂಬ ವಿದ್ಯಾರ್ಥಿನಿ ಪರೀಕ್ಷೆ ಮುಗಿಸಿ ಮನೆಗೆ ಬಂದಿದ್ದ ವೇಳೆ, ಆಕೆಯ ಸೋದರ ಮಾವ ಸೋಮಣ್ಣ ಏಕಾಏಕಿ ಮನೆಗೆ ನುಗ್ಗಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ನೀನು ಓದಬಾರದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಬಾರದು ಎಂಬ ದ್ವೇಷದಿಂದಲೇ ಹಲ್ಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪೂರ್ಣಿಮಾ ಸೋದರ ಮಾವನ ಆಶ್ರಯದಲ್ಲೇ ಬೆಳೆದಿದ್ದರೂ ಸಹ, ಶಿಕ್ಷಣ ಮುಂದುವರಿಸುತ್ತಿರುವುದಕ್ಕೆ ಕೋಪಗೊಂಡು ಈ ಕೃತ್ಯ ಎಸಗಲಾಗಿದೆ ಎನ್ನಲಾಗಿದೆ. ಯುವತಿಯ ನೆರವಿಗೆ ಬಂದ ಕುಟುಂಬಸ್ಥರ ಮೇಲೆಯೂ ಸೋಮಣ್ಣ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡ ಪೂರ್ಣಿಮಾಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೋಮಣ್ಣ ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇರಾನ್ – ಇಸ್ರೇಲ್ ಯುದ್ಧ: ಅಬುಧಾಬಿ ಏರ್‌ಪೋರ್ಟ್‌ನಲ್ಲಿ ಸಿಲುಕಿಕೊಂಡ ಡ್ರೋನ್‌ ಪ್ರತಾಪ್‌

ಇರಾನ್–ಇಸ್ರೇಲ್ ಯುದ್ಧದ ಹಿನ್ನೆಲೆ ಗಲ್ಫ್ ರಾಷ್ಟ್ರಗಳ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಹಲವು ವಿಮಾನಗಳು ರದ್ದಾಗಿದ್ದು, ದುಬೈ ಸೇರಿದಂತೆ ಯುಎಇ ಭಾಗಗಳಲ್ಲಿ ಅನೇಕರ ಕನ್ನಡಿಗರು ಸಂಕಷ್ಟಕ್ಕೊಳಗಾಗಿದ್ದಾರೆ.

ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಪ್ರತಿದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆದಿರುವುದಾಗಿ ವರದಿಯಾಗಿದೆ. ಇದರ ಪರಿಣಾಮವಾಗಿ ಏರ್‌ಸ್ಪೇಸ್ ಸಂಪೂರ್ಣವಾಗಿ ಮುಚ್ಚಲಾಗಿದ್ದು, ವಿಮಾನ ಹಾರಾಟ ಸ್ಥಗಿತಗೊಂಡಿದೆ.

ಈ ನಡುವೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಸೇರಿದಂತೆ 150ಕ್ಕೂ ಹೆಚ್ಚು ಕನ್ನಡಿಗರು ದುಬೈನಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

ಫೆಬ್ರವರಿ 28ರಂದು ಬೆಂಗಳೂರಿಗೆ ವಾಪಸ್ಸಾಗಬೇಕಿದ್ದ ಡ್ರೋನ್ ಪ್ರತಾಪ್, ಸದ್ಯ ಅಬುಧಾಬಿ ವಿಮಾನ ನಿಲ್ದಾಣದಲ್ಲೇ ಇದ್ದಾರೆ. “ನಾವು ಇಂದು ರಾತ್ರಿ ಬೆಂಗಳೂರಿಗೆ ಹೊರಡಬೇಕಿತ್ತು. ಆದರೆ ಎಲ್ಲಾ ವಿಮಾನಗಳು ಕ್ಯಾನ್ಸಲ್ ಆಗಿವೆ. ಏರ್‌ಸ್ಪೇಸ್ ಸಂಪೂರ್ಣವಾಗಿ ಕ್ಲೋಸ್ ಮಾಡಿದ್ದಾರೆ. ಈಗ ಏರ್‌ಪೋರ್ಟ್‌ನಲ್ಲಿ ಕಾಯುವುದರ ಹೊರತು ಮಾರ್ಗವಿಲ್ಲ,” ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.

ಬುರ್ಜ್ ಖಲೀಫಾ ಸಮೀಪದಿಂದ ವಿಡಿಯೋ ಹಂಚಿಕೊಂಡಿರುವ ಪ್ರತಾಪ್, “ನಗರದಲ್ಲಿ ಸಾಮಾನ್ಯ ದಿನಗಳಂತೆಯೇ ಸಂಚಾರ ಇದೆ. ಆದರೆ ಯುದ್ಧದ ಆತಂಕ ಜನರಲ್ಲಿ ಕಂಡು ಬರುತ್ತಿದೆ,” ಎಂದು ಹೇಳಿದ್ದಾರೆ.

ಸದ್ಯ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಸೇವೆ ಪುನರಾರಂಭವಾಗುವ ನಿರೀಕ್ಷೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಮಾಹಿತಿಗಳ ವಿರುದ್ಧ ಇರಾನ್ ಸರ್ಕಾರ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.

ಕುಟುಂಬದೊಂದಿಗೆ ಅಬುಧಾಬಿಯಲ್ಲಿ ಸಿಲುಕಿದ ಹಾವೇರಿ ಮೂಲದ ತಜ್ಞ!

ಹಾವೇರಿ: ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ಆತಂಕ ದಿನೇದಿನೇ ಹೆಚ್ಚುತ್ತಿದೆ.

ಅದರಂತೆ ಹಾವೇರಿ ಜಿಲ್ಲೆಯ ಮೂಲದ ತಾಂತ್ರಿಕ ತಜ್ಞರೊಬ್ಬರ ಕುಟುಂಬ ಅಬುಧಾಬಿಯಲ್ಲಿ ಸಿಲುಕಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಎಂಜಿನಿಯರ್ ರಾಘವೇಂದ್ರ ಕುದುರಿ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸದ್ಯ ಅಬುಧಾಬಿಯಲ್ಲಿ ನೆಲೆಸಿದ್ದಾರೆ.

ಅಲ್ಲಿನ ಪರಿಸ್ಥಿತಿ ಅತ್ಯಂತ ಭಯಾನಕವಾಗಿದ್ದು, ಕ್ಷಿಪಣಿ ದಾಳಿಯ ಪರಿಣಾಮ ಕಟ್ಟಡಗಳು ನಡುಗುತ್ತಿರುವ ಅನುಭವವಾಗುತ್ತಿದೆ ಎಂದು ರಾಘವೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ. ಸ್ನಾನಗೃಹದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಬಾಗಿಲುಗಳು ತೀವ್ರವಾಗಿ ಅಲುಗಾಡುತ್ತಿವೆ. ನಾವು ಇರುವ ಕಟ್ಟಡದ ಮೇಲೆ ನಡೆದ ದಾಳಿಯ ದೃಶ್ಯ ಕಂಡು ಕೆಲ ಹೊತ್ತು ಭಯದಿಂದ ಸ್ಥಬ್ಧರಾಗಿದ್ದೆವು ಎಂದು ಅವರು ತಿಳಿಸಿದ್ದಾರೆ.

ಮೊದಲು ತಾವೊಬ್ಬರೇ ಅಬುಧಾಬಿಯಲ್ಲಿ ಕೆಲಸಕ್ಕಾಗಿ ನೆಲೆಸಿದ್ದೆ, ಒಂದು ತಿಂಗಳ ಹಿಂದಷ್ಟೇ ಪತ್ನಿ ಹಾಗೂ ಮಕ್ಕಳನ್ನು ಕರೆಸಿಕೊಂಡಿದ್ದೇನೆ. ಆದರೆ ಈಗ ಯುದ್ಧದ ಭೀತಿಯಿಂದ ಕುಟುಂಬದ ಸುರಕ್ಷತೆ ಬಗ್ಗೆ ಗಂಭೀರ ಚಿಂತೆ ಕಾಡುತ್ತಿದೆ. ಕೂಡಲೇ ನಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಂತೆ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಬಳಿ ಮನವಿ ಮಾಡುತ್ತಿದ್ದೇವೆ ಎಂದು ರಾಘವೇಂದ್ರ ಕುದುರಿ ತಿಳಿಸಿದ್ದಾರೆ.

ಕ್ಷಿಪಣಿ ದಾಳಿಯಿಂದ ವಿಮಾನ ಸಂಚಾರ ಸ್ಥಗಿತ: ಬೆಂಗಳೂರಿನ ದಂಪತಿ ಅಬುಧಾಬಿಯಲ್ಲಿ ಲಾಕ್!

ಅಬುಧಾಬಿ/ಬೆಂಗಳೂರು: ಇರಾನ್–ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ಮಗಳ ಹುಟ್ಟುಹಬ್ಬ ಆಚರಣೆಗೆ ವಿದೇಶ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ದಂಪತಿ ಅಬುಧಾಬಿಯಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.

ರಣ್ ಮತ್ತು ಸುನೀತ ದಂಪತಿ ಫೆಬ್ರವರಿ 23ರಂದು ಮಗಳ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಬೆಂಗಳೂರಿನಿಂದ ದುಬೈಗೆ ಪ್ರಯಾಣ ಬೆಳೆಸಿದ್ದರು. ದುಬೈಯಲ್ಲಿರುವ ಬುರ್ಜ್ ಖಲೀಫಾ ಎದುರು ಮಗಳ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು.

ಶನಿವಾರ ಬೆಂಗಳೂರಿಗೆ ಮರಳಲು ಟಿಕೆಟ್ ಕಾಯ್ದಿರಿಸಲಾಗಿದ್ದು, ಮಧ್ಯಾಹ್ನ ಅಬುಧಾಬಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರವೇಶ ಪ್ರಕ್ರಿಯೆ ಕೂಡ ಪೂರ್ಣಗೊಳಿಸಿದ್ದರು. ಆದರೆ ಅಷ್ಟರಲ್ಲಿ ಕ್ಷಿಪಣಿ ದಾಳಿ ಆರಂಭವಾದ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡು ದಂಪತಿ ಅಲ್ಲಿಯೇ ಸಿಲುಕಿದ್ದಾರೆ. ಸುರಕ್ಷಿತವಾಗಿ ನಮ್ಮ ನಾಡಿಗೆ ಮರಳಿದರೆ ಸಾಕು ಎಂಬ ಭಯದೊಂದಿಗೆ ಪ್ರತಿಕ್ಷಣ ಕಳೆಯುತ್ತಿರುವುದಾಗಿ ದಂಪತಿ ನೋವು ವ್ಯಕ್ತಪಡಿಸಿದ್ದಾರೆ.

ಸುನೀತ ಅವರು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರ ಶೀಘ್ರ ಕ್ರಮ ಕೈಗೊಂಡು ನಮ್ಮನ್ನು ಸುರಕ್ಷಿತವಾಗಿ ಕರೆತರಬೇಕು ಎಂದು ದಂಪತಿ ಮನವಿ ಮಾಡಿದ್ದಾರೆ. ವಿಮಾನ ನಿಲ್ದಾಣದಲ್ಲೇ ಒಂದು ದಿನ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಳಿಕ ಅಲ್ಲಿನ ಅಧಿಕಾರಿಗಳು ಅವರನ್ನು ಹೋಟೆಲ್‌ಗೆ ಸ್ಥಳಾಂತರಿಸಿದ್ದಾರೆ. ಆದರೂ ಯುದ್ಧದ ಆತಂಕದ ನಡುವೆ ಹೋಟೆಲ್‌ನಲ್ಲೇ ಆಶ್ರಯ ಪಡೆದಿರುವ ದಂಪತಿ, ಭಯಭೀತ ವಾತಾವರಣದಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ.

ಒಂದೇ ದಾಳಿಯಲ್ಲಿ ಇರಾನ್‌ನ 48 ನಾಯಕರು ಸಾವು: ಡೊನಾಲ್ಡ್ ಟ್ರಂಪ್ ಘೋಷಣೆ

0

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ ವಿರುದ್ಧ ನಡೆಯುತ್ತಿರುವ ಅಮೆರಿಕ–ಇಸ್ರೇಲ್ ಜಂಟಿ ಸೈನಿಕ ದಾಳಿ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.

ಒಂದೇ ದಾಳಿಯಲ್ಲಿ ಇರಾನ್‌ನ 48 ನಾಯಕರು ಸಾವನ್ನಪ್ಪಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಾರ್ಯಾಚರಣೆ ನಿರೀಕ್ಷೆಗೂ ಮೀರಿದ ವೇಗದಲ್ಲಿ ಹಾಗೂ ಯಶಸ್ವಿಯಾಗಿ ಸಾಗುತ್ತಿದೆ ಎಂದು ತಿಳಿಸಿದ ಟ್ರಂಪ್‌, ಮುಂದಿನ ಗುರಿಗಳೂ ಅಮೆರಿಕಕ್ಕೆ ಸ್ಪಷ್ಟವಾಗಿವೆ ಎಂದು ಹೇಳಿದ್ದಾರೆ.

ಇರಾನ್‌ ದೊಡ್ಡ ದೇಶವಾಗಿರುವುದರಿಂದ ಈ ಸೈನಿಕ ಕಾರ್ಯಾಚರಣೆ ನಾಲ್ಕು ವಾರಗಳವರೆಗೆ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. ನಮ್ಮ ಗುರಿಗಳು ಸಂಪೂರ್ಣವಾಗಿ ಸಾಧಿಸುವವರೆಗೆ ಯುದ್ಧ ಕಾರ್ಯಾಚರಣೆಗಳು ಪೂರ್ಣ ಬಲದಿಂದ ಮುಂದುವರಿಯಲಿವೆ ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ, ಇರಾನ್‌ ಜೊತೆ ಮುಂದಿನ ಹಂತದ ಮಾತುಕತೆಗಳಿಗೆ ಅಮೆರಿಕ ಸಿದ್ಧವಿದೆ ಎಂದ ಅವರು, ಆದರೆ ಅವರು ಈಗಲ್ಲ, ಕಳೆದ ವಾರವೇ ಮಾತುಕತೆಗೆ ಬರಬೇಕಿತ್ತು ಎಂದು ಕಠಿಣ ಸಂದೇಶ ರವಾನಿಸಿದ್ದಾರೆ.

ಮಧ್ಯಪ್ರಾಚ್ಯ ಉದ್ವಿಗ್ನತೆ: ದುಬೈನಲ್ಲಿ ಸಿಲುಕಿದ ಸೋನಲ್ ಚೌಹಾಣ್ – ಸಹಾಯಕ್ಕೆ ಮನವಿ

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡ ಯುದ್ಧ ಪರಿಸ್ಥಿತಿಯಿಂದ ಯುಎಇ ಸೇರಿದಂತೆ ಹಲವು ದೇಶಗಳಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡಿದೆ. ಪರಿಣಾಮವಾಗಿ ದುಬೈ ಮತ್ತು ಅಬುದಾಭಿಯಲ್ಲಿ ಸಾವಿರಾರು ಭಾರತೀಯರು ಸಿಲುಕಿದ್ದಾರೆ.

ಬಾಲಿವುಡ್ ನಟಿ ಸೋನಲ್ ಚೌಹಾಣ್ ಕೂಡ ದುಬೈನಲ್ಲಿ ಸಿಲುಕಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮೂಲಕ ಸಹಾಯ ಕೋರಿದ್ದಾರೆ. ಸುರಕ್ಷಿತವಾಗಿ ಭಾರತಕ್ಕೆ ಮರಳಲು ಸರ್ಕಾರದ ನೆರವು ಹಾಗೂ ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದ್ದಾರೆ.

ಕನ್ನಡದ ಶಿವಲಿಂಗ ಸೇರಿದಂತೆ ಹಿಂದಿ, ತೆಲುಗು ಚಿತ್ರಗಳಲ್ಲಿ ನಟಿಸಿರುವ ಸೋನಲ್, ‘ಜನ್ನತ್’ ಚಿತ್ರದ ಮೂಲಕ ಖ್ಯಾತಿ ಪಡೆದಿದ್ದರು.

ಯುದ್ಧ ಭೀತಿ ಹಿನ್ನೆಲೆಯಲ್ಲಿ ಹಲವು ಅರಬ್ ರಾಷ್ಟ್ರಗಳ ವೈಮಾನಿಕ ಮಾರ್ಗಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದು, ಸಾವಿರಾರು ಭಾರತೀಯರು ವಾಪಸ್ಸಿಗೆ ಕಾಯುತ್ತಿದ್ದಾರೆ.

ಇಸ್ರೇಲ್–ಅಮೆರಿಕ ದಾಳಿ: ಇರಾನ್ ಸರ್ವೋಚ್ಚ ನಾಯಕ ಖಮನೈ ಹತ್ಯೆ

0

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮನೈ ಮೃತಪಟ್ಟಿದ್ದಾರೆ ಎಂಬ ವರದಿಗಳು ಲಭ್ಯವಾಗಿವೆ.

ಅಣು ಕಾರ್ಯಕ್ರಮ ವಿಚಾರವಾಗಿ ಉಲ್ಬಣಗೊಂಡ ಸಂಘರ್ಷದ ನಡುವೆ ಈ ದಾಳಿ ನಡೆದಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿದೆ. ಇದೇ ವೇಳೆ ಇರಾನ್ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಅವರ ನಿವಾಸದ ಮೇಲೆ ಟೆಹ್ರಾನ್ ಹೊರವಲಯದ ನರ್ಮಕ್ ಪ್ರದೇಶದಲ್ಲಿ ಕ್ಷಿಪಣಿ ದಾಳಿ ನಡೆದಿದ್ದು, ಅವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

2005ರಿಂದ 2013ರವರೆಗೆ ಅಧ್ಯಕ್ಷರಾಗಿದ್ದ ಅಹ್ಮದಿನೆಜಾದ್ ಅವರ ಸಾವಿನ ಸುದ್ದಿ ಜಾಗತಿಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಈ ಘಟನೆಗಳ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ.

ಗದಗ| ಕ್ಷುಲ್ಲಕ ವಿಚಾರಕ್ಕೆ ಜಗಳ: ಅಕ್ಕ-ಅಳಿಯ ಹೊಡೆದ ಏಟಿಗೆ ಯುವಕ ಸ್ಥಳದಲ್ಲೇ ಸಾವು, FIR ದಾಖಲು!

0

ಗದಗ: ಕ್ಷುಲ್ಲಕ ವಿಚಾರಕ್ಕೆ ಶುರುವಾದ ಕುಟುಂಬ ಜಗಳವು ಯುವಕನೋರ್ವನ ಸಾವಿನಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಮುಂಡರಗಿ ಪಟ್ಟಣದ ಎಸ್‌.ಎಸ್‌. ಪಾಟೀಲ್ ನಗರದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಎಸ್‌.ಎಸ್‌. ಪಾಟೀಲ್ ನಗರ ನಿವಾಸಿ ವಸಂತ ಪರಸಪ್ಪ ಭಜಂತ್ರಿ (26) ಮೃತ ದುರ್ದೈವಿ. ಪೊಲೀಸರ ಪ್ರಾಥಮಿಕ ತನಿಖೆಗಳ ಪ್ರಕಾರ, ಮೃತ ಯುವಕ ದುಡಿಯದೇ ನಿತ್ಯವೂ ಕುಡಿತದ ಚಟಕ್ಕೆ ದಾಸನಾಗಿದ್ದ. ಅಷ್ಟೇ ಅಲ್ಲದೇ ಕುಡಿದ ಮತ್ತಲ್ಲಿ ಮನೆಯವರಿಗೆ ಅವಾಚ್ಯವಾಗಿ ಬೈಯುತ್ತಿದ್ದ ಎನ್ನಲಾಗಿದೆ.

ಇದೇ ವಿಚಾರವಾಗಿ ಶುರುವಾದ ಗಲಾಟೆಯಲ್ಲಿ ಕುಟುಂಬಸ್ಥರು ಅದ ಅಕ್ಕ ಮಂಜವ್ವ ರಮೇಶ ಬಜಂತ್ರಿ (34) ಹಾಗೂ ಅಳಿಯ ಶ್ರೀಕಾಂತ ರಮೇಶ ಬಜಂತ್ರಿ (20) ಆತನಿಗೆ ಹೊಡೆದ ಪರಿಣಾಮ, ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಘಟನೆಯ ಮಾಹಿತಿ ತಿಳಿದು ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಶ್ರದ್ಧೆ, ಪರಿಶ್ರಮ, ಜ್ಞಾನ: ಶ್ರೀಮಂತರಾಗುವ ಮೂರು ಕೀಲಿಗಳು!

0

ಶ್ರೀಮಂತರಾಗಬೇಕೆಂಬ ಆಸೆ ಪ್ರತಿಯೊಬ್ಬರಲ್ಲೂ ಇದೆ. ಆದರೆ ಅದನ್ನು ಸಾಧಿಸುವ ಸರಿಯಾದ ಮಾರ್ಗದ ಬಗ್ಗೆ ಬಹಳ ಜನರಿಗೆ ತಿಳಿದಿಲ್ಲ.

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಬಡತನವನ್ನು ನಿವಾರಿಸಿ ಶ್ರೀಮಂತರಾಗಲು ಅನುಸರಿಸಬೇಕಾದ ಮುಖ್ಯ ಅಭ್ಯಾಸಗಳನ್ನು ವಿವರಿಸಿದ್ದಾರೆ.

ಚಾಣಕ್ಯರ ಪ್ರಕಾರ, ಶ್ರೀಮಂತಿಕೆಗೆ:

  • ಪೂರ್ಣ ಶ್ರದ್ಧೆ ಮತ್ತು ಪರಿಶ್ರಮ – ಪ್ರತಿದಿನ ಶ್ರದ್ಧೆಯಿಂದ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.
  • ಯೋಚನೆಯೊಂದಿಗೆ ನಿರ್ಧಾರ – ವ್ಯರ್ಥ ಖರ್ಚು, ಸಾಲ ತಪ್ಪಿಸಬೇಕು; ನಿರ್ಧಾರಗಳು ಭವಿಷ್ಯ ನಿರ್ಧರಿಸುತ್ತವೆ.
  • ಸಮಯದ ಮೌಲ್ಯ ಅರಿತುಕೊಳ್ಳಿ – ಸೋಮಾರಿತನ ಬಿಡಿ, ಕೆಲಸ ಸಮಯಕ್ಕೆ ಪೂರ್ಣಗೊಳಿಸಿ.
  • ನಿರಂತರ ಕಲಿಕೆ – ಹೊಸದನ್ನು ಪ್ರತಿದಿನ ಕಲಿಯಿರಿ, ಜ್ಞಾನವು ಶ್ರೇಷ್ಠ ಸಂಪತ್ತು.
  • ಆತ್ಮವಿಶ್ವಾಸ – ಸವಾಲುಗಳಿಗೆ ಧೈರ್ಯದಿಂದ ಎದುರಿಸಿ.
  • ಹಣದ ಬುದ್ಧಿವಂತಿಕೆ – ಸಂಪಾದನೆ ಮಾಡುತ್ತಾ, ವ್ಯರ್ಥ ಖರ್ಚು ತಡೆಯಿರಿ.
  • ರಹಸ್ಯತೆಯ ಭದ್ರತೆ – ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳ್ಳುವವರೆಗೆ ಹಂಚಿಕೊಳ್ಳಬೇಡಿ.
  • ಕಠಿಣ ಪರಿಶ್ರಮ – ಕಷ್ಟಪಟ್ಟು ಕೆಲಸ ಮಾಡುವ ಅಭ್ಯಾಸ ಅಗತ್ಯ; ಸುಲಭ ಮಾರ್ಗಗಳು ಯಶಸ್ಸಿಗೆ ತಡೆಯಾಗುತ್ತವೆ.

ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿದರೆ, ಕಡು ಬಡತನದಲ್ಲಿದ್ದರೂ ಶ್ರೀಮಂತಿಕೆಗೆ ದಾರಿ ತೋರುವ ಸಾಧ್ಯತೆ ಹೆಚ್ಚು.

 

ಶಿಲ್ಪಕಲೆಯ ಸಾಧನೆಗೆ ಶಿಲ್ಪಿ ಸುಮಲತಾ ಕವಲೂರರಿಗೆ ಗೌರವ ಡಾಕ್ಟರೇಟ್

0

ಲಕ್ಕುಂಡಿ: ಕಳೆದ 23 ವರ್ಷಗಳಿಂದ ಶಿಲ್ಪಕಲೆಯಲ್ಲಿ ಅನನ್ಯ ಸಾಧನೆಗೈದ ಶಿಲ್ಪಿ ಸುಮಲತಾ ವಿ. ಕವಲೂರ ಅವರಿಗೆ ಏಷ್ಯಾ ಇಂಟರ್ನ್ಯಾಷನಲ್ ರಿಸರ್ಚ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

ಸಾಂಪ್ರದಾಯಿಕ ಶಿಲ್ಪಕಲೆಯ ವಿವಿಧ ಮಾಧ್ಯಮಗಳಾದ ಕಲ್ಲು, ಮರ, ಮಣ್ಣು ಹಾಗೂ ಪಿ.ಒ.ಪಿ ಮೂಲಕ ಅನೇಕ ಕೃತಿಗಳನ್ನು ರೂಪಿಸಿ ಗಮನಸೆಳೆದಿರುವ ಸುಮಲತಾ ಅವರು ಶಿಲ್ಪಕಲೆಯನ್ನು ತಮ್ಮ ಜೀವನ ವೃತ್ತಿಯಾಗಿಸಿಕೊಂಡಿದ್ದಾರೆ. ನೂರಾರು ಪ್ರಶಸ್ತಿಗಳು ಹಾಗೂ ಸನ್ಮಾನಗಳಿಗೆ ಪಾತ್ರರಾಗಿರುವ ಅವರ ಸಾಧನೆಯನ್ನು ಗುರುತಿಸಿ ಫೆಬ್ರವರಿ 28, 2026ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರು ರಾಜ್ಯ, ದಕ್ಷಿಣ ವಲಯ ಮತ್ತು ರಾಷ್ಟ್ರೀಯ ಮಟ್ಟದ ಶಿಬಿರಗಳು ಹಾಗೂ ಪ್ರದರ್ಶನಗಳಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಮೆರೆದಿದ್ದಾರೆ. ನಾಗಪುರದಲ್ಲಿ ನಡೆದ ದಕ್ಷಿಣ ವಲಯ ಶಿಬಿರ ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

ಲಕ್ಕುಂಡಿ ಗ್ರಾಮದ ವೀರಭದ್ರಪ್ಪ ಕವಲೂರ ಹಾಗೂ ಗಂಗೂಬಾಯಿ ವಿ. ಕವಲೂರ ದಂಪತಿಗಳ ಪುತ್ರಿಯಾಗಿರುವ ಸುಮಲತಾ ಅವರು, ಶಿಲ್ಪರತ್ನ ಪ್ರಶಸ್ತಿ, ವಿಶ್ವಕರ್ಮ ಶಿಲ್ಪಿ ಬ್ರಹ್ಮ ಪ್ರಶಸ್ತಿ ಸೇರಿದಂತೆ ಅನೇಕ ರಾಜ್ಯ ಮಟ್ಟದ ಗೌರವಗಳಿಗೆ ಪಾತ್ರರಾಗಿದ್ದಾರೆ.

ಮೂಲತಃ ಲಕ್ಕುಂಡಿಯವರಾದ ಅವರು, ಗ್ರಾಮದ ಐತಿಹಾಸಿಕ ದೇವಾಲಯಗಳ ಶಿಲ್ಪಕಲೆಯನ್ನು ಆಧರಿಸಿ ವಿಶೇಷ ಪ್ರದರ್ಶನಗಳನ್ನು ಆಯೋಜಿಸಿರುವುದು ಗಮನಾರ್ಹವಾಗಿದೆ. ಗೌರವ ಡಾಕ್ಟರೇಟ್ ಪಡೆದ ಅವರಿಗೆ ಶಿಲ್ಪಕಲೆ ಹಾಗೂ ಕೆತ್ತನೆ ಕ್ಷೇತ್ರದ ವಿವಿಧ ಸಂಘಟನೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

error: Content is protected !!