ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ ಪ್ರಕರಣದ ಕುರಿತು ತನಿಖೆ ನಡೆಸಿದ್ದ ಬಿಜೆಪಿ ಸತ್ಯಶೋಧನಾ ಸಮಿತಿಯು ತನ್ನ ಮಧ್ಯಂತರ ವರದಿಯನ್ನು ಇಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸಲ್ಲಿಸಿದೆ. ಪರಿಷತ್ ಸದಸ್ಯ ಸಿ.ಟಿ. ರವಿ ನೇತೃತ್ವದ ತ್ರಿಸದಸ್ಯ ಸಮಿತಿಯು ನಾಲ್ಕು ದಿನಗಳ ಆಂತರಿಕ ತನಿಖೆ ನಡೆಸಿ ವರದಿ ಸಿದ್ಧಪಡಿಸಿದೆ.
ಸಿ.ಟಿ. ರವಿ, ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಎನ್. ಮಹೇಶ್ ಅವರನ್ನೊಳಗೊಂಡ ಸಮಿತಿಯು ಸಾಂದರ್ಭಿಕ ಸಾಕ್ಷ್ಯಗಳು, ಮೂಲಗಳಿಂದ ಸಂಗ್ರಹಿಸಿದ ಮಾಹಿತಿ, ಅನುಮಾನಾಸ್ಪದ ಬೆಳವಣಿಗೆಗಳು ಹಾಗೂ ಶಂಕಿತ ಶಾಸಕರಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಮೂರು ಪುಟಗಳ ವರದಿ ಸಿದ್ಧಪಡಿಸಿದೆ. ಈ ವರದಿಯನ್ನು ಬಿಜೆಪಿ ರಾಜ್ಯ ಕಚೇರಿಯಲ್ಲಿ ಸೀಲ್ಡ್ ಕವರ್ನಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಲ್ಲಿಸಲಾಯಿತು.
ವರದಿ ಸಲ್ಲಿಕೆಯ ಬಳಿಕ ಸಿ.ಟಿ. ರವಿ ಹಾಗೂ ಬಿ.ವೈ. ವಿಜಯೇಂದ್ರ ಅವರು ಪ್ರತ್ಯೇಕವಾಗಿ ಸಭೆ ನಡೆಸಿ ವರದಿಯ ಪ್ರಮುಖ ಅಂಶಗಳ ಕುರಿತು ಚರ್ಚೆ ನಡೆಸಿದರು.
ಸಮಿತಿ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಮೈತ್ರಿ ಪಕ್ಷಗಳ ಒಟ್ಟು 12 ಶಾಸಕರು ಅಡ್ಡ ಮತದಾನ ನಡೆಸಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಪೈಕಿ ಒಂದು ಅಸಿಂಧು ಮತ ದಾಖಲಾಗಿದ್ದು, ಬಿಜೆಪಿಯಿಂದ ಒಂದು ಅಸಿಂಧು ಮತ ಸೇರಿದಂತೆ ಒಟ್ಟು ನಾಲ್ಕು ಅಡ್ಡ ಮತಗಳು ದಾಖಲಾಗಿವೆ ಎಂದು ಉಲ್ಲೇಖಿಸಲಾಗಿದೆ. ಉಳಿದ ಅಡ್ಡ ಮತಗಳು ಜೆಡಿಎಸ್ನಿಂದ ಆಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಆದರೆ, ಅಡ್ಡ ಮತದಾನ ಮಾಡಿದ ಶಾಸಕರ ಹೆಸರುಗಳನ್ನು ವರದಿಯಲ್ಲಿ ಉಲ್ಲೇಖಿಸಿಲ್ಲ. ಕೇವಲ ಅಡ್ಡ ಮತಗಳ ಸಂಖ್ಯೆಯನ್ನು ಮಾತ್ರ ದಾಖಲಿಸಲಾಗಿದ್ದು, ಅನುಮಾನ ಇರುವ ಶಾಸಕರ ಮೇಲೆ ಮುಂದಿನ ದಿನಗಳಲ್ಲಿ ತೀವ್ರ ನಿಗಾ ವಹಿಸುವಂತೆ ಸಮಿತಿ ಶಿಫಾರಸು ಮಾಡಿದೆ.
ವರದಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, “ಅಡ್ಡ ಮತದಾನ ಪ್ರಕರಣದ ಕುರಿತು ಆಂತರಿಕ ಸತ್ಯಶೋಧನೆ ನಡೆಸಲು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದರು. ಶೀಘ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ನಾಲ್ಕು ದಿನಗಳಲ್ಲೇ ತನಿಖೆ ಪೂರ್ಣಗೊಳಿಸಿ ವರದಿ ನೀಡಿದ್ದೇವೆ. ಸಮಿತಿಯ ಮೂವರು ಸದಸ್ಯರಿಗೂ ಒಮ್ಮತವಾಗಿರುವ ಅಂಶಗಳನ್ನು ಮಾತ್ರ ವರದಿಯಲ್ಲಿ ದಾಖಲಿಸಿದ್ದೇವೆ” ಎಂದು ತಿಳಿಸಿದರು.
“ಅಡ್ಡ ಮತದಾನ ಪ್ರಜಾಪ್ರಭುತ್ವ ವಿರೋಧಿ ನಡೆ. ಇಂತಹ ಘಟನೆಗಳ ಬಗ್ಗೆ ಕಾಂಗ್ರೆಸ್ ಪ್ರಶ್ನಿಸುವ ನೈತಿಕತೆ ಹೊಂದಿಲ್ಲ. ಮುಂದಿನ ಕ್ರಮದ ಬಗ್ಗೆ ರಾಜ್ಯಾಧ್ಯಕ್ಷರು ಹಾಗೂ ಬಿಜೆಪಿ ಕೋರ್ ಕಮಿಟಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಅಗತ್ಯವಿದ್ದರೆ ವರದಿಯನ್ನು ಪಕ್ಷದ ಹೈಕಮಾಂಡ್ಗೂ ಸಲ್ಲಿಸಲಾಗುತ್ತದೆ” ಎಂದು ಸಿ.ಟಿ. ರವಿ ಹೇಳಿದರು.



