ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಪೆರೋಲ್ ನೀಡಲು ಸಾಧ್ಯವಿಲ್ಲ ಎಂದು ಕಾರಾಗೃಹ ಇಲಾಖೆ ಸ್ಪಷ್ಟಪಡಿಸಿದೆ. ಇಂತಹ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಪೆರೋಲ್ ಮಂಜೂರು ಮಾಡುವ ಅಧಿಕಾರ ಕಾರಾಗೃಹ ಇಲಾಖೆಗೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಟುಂಬಸ್ಥರು ಪುಣ್ಯತಿಥಿಯ ಅಂಗವಾಗಿ ಪೂಜೆ ನೆರವೇರಿಸಲು ಪ್ರಜ್ವಲ್ ರೇವಣ್ಣ ಅವರನ್ನು ಜೈಲಿನಿಂದ ಹೊರತರುವ ಪ್ರಯತ್ನ ನಡೆಸಿದ್ದರು. ಆದರೆ, ಕಾರಾಗೃಹ ಇಲಾಖೆ ಅಧಿಕಾರ ವ್ಯಾಪ್ತಿಯ ಮಿತಿಯನ್ನು ಉಲ್ಲೇಖಿಸಿ ಪೆರೋಲ್ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಈ ಹಿನ್ನೆಲೆಯಲ್ಲಿ, ಪೆರೋಲ್ ಮಂಜೂರು ಮಾಡುವಂತೆ ನ್ಯಾಯಾಲಯದ ಮೊರೆ ಹೋಗುವ ಕುರಿತು ಕುಟುಂಬಸ್ಥರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. 15 ದಿನಗಳ ಪೆರೋಲ್ ದೊರೆತರೆ, 30ರಂದು ನಡೆಯಲಿರುವ ಪುಣ್ಯತಿಥಿ ಅಥವಾ ಅದಕ್ಕೂ ಮುನ್ನದ ದಿನ ಸಮಾಧಿ ಬಳಿ ಕರೆದುಕೊಂಡು ಹೋಗಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸುವ ಉದ್ದೇಶ ಕುಟುಂಬದದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ, ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಅವರನ್ನು ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರು ಭೇಟಿ ಮಾಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿ ನೀಡಿತ್ತು.
ನ್ಯಾಯಾಲಯದ ಆದೇಶದಂತೆ, ಜೈಲು ಮುಖ್ಯ ಅಧೀಕ್ಷಕರು ಕಾರಾಗೃಹ ನಿಯಮಾವಳಿಗೆ ಅನುಗುಣವಾಗಿ ಭೇಟಿಗೆ ಅವಕಾಶ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ. ಭೇಟಿ ವೇಳೆ ಜೈಲು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಯಾವುದೇ ಕಾರಣಕ್ಕೆ ಭೇಟಿಗೆ ಅವಕಾಶ ನಿರಾಕರಿಸಿದರೆ, ಅದರ ಕಾರಣವನ್ನು ಸಂಬಂಧಿತ ಕೈದಿಗೆ ಲಿಖಿತ ರೂಪದಲ್ಲಿ ತಿಳಿಸಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ನಿರ್ದೇಶನ ನೀಡಿದೆ.



