ವಾಷಿಂಗ್ಟನ್: ಹಾರಾಟದ ವೇಳೆ ಪ್ರಯಾಣಿಕನೊಬ್ಬ ವಿಮಾನದ ನಿರ್ಗಮನ ದ್ವಾರವನ್ನು ತೆರೆಯಲು ಯತ್ನಿಸಿದ ಘಟನೆ ಅಮೆರಿಕನ್ ಏರ್ಲೈನ್ಸ್ ವಿಮಾನದಲ್ಲಿ ನಡೆದಿದೆ. ಪ್ರಯಾಣಿಕನ ಅನುಚಿತ ವರ್ತನೆಯಿಂದಾಗಿ ವಿಮಾನವನ್ನು ಅರಿಜೋನಾದ ಫೀನಿಕ್ಸ್ನಲ್ಲಿರುವ ಸ್ಕೈ ಹಾರ್ಬರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಲ್ಯಾಂಡಿಂಗ್ ಮಾಡಲಾಗಿದೆ.
ಸ್ಯಾನ್ ಡಿಯಾಗೋದಿಂದ ಚಿಕಾಗೋಗೆ ತೆರಳುತ್ತಿದ್ದ ಅಮೆರಿಕನ್ ಏರ್ಲೈನ್ಸ್ನ AA1494 ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕನ ಅಶಿಸ್ತಿನ ವರ್ತನೆಯ ಹಿನ್ನೆಲೆಯಲ್ಲಿ ವಿಮಾನವನ್ನು ಫೀನಿಕ್ಸ್ಗೆ ತಿರುಗಿಸಲಾಗಿದೆ ಎಂದು ಅಮೆರಿಕನ್ ಏರ್ಲೈನ್ಸ್ ತಿಳಿಸಿದೆ.
ಫೀನಿಕ್ಸ್ ಪೊಲೀಸರ ಪ್ರಕಾರ, ಪ್ರಯಾಣಿಕನೊಬ್ಬ ತನ್ನ ನಿಗದಿತ ಆಸನದಿಂದ ಎದ್ದು ವಿಮಾನದ ಮುಂಭಾಗಕ್ಕೆ ತೆರಳಿದ್ದಾನೆ. ತನ್ನ ಆಸನಕ್ಕೆ ಹಿಂತಿರುಗುವಂತೆ ವಿಮಾನ ಸಿಬ್ಬಂದಿ ಸೂಚಿಸಿದರೂ ಆತ ಅದನ್ನು ನಿರಾಕರಿಸಿದ್ದಾನೆ. ಬಳಿಕ ವಿಮಾನದ ನಿರ್ಗಮನ ದ್ವಾರವನ್ನು ತೆರೆಯಲು ಯತ್ನಿಸಿದ್ದಾನೆ.
ಈ ವೇಳೆ ವಿಮಾನ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರು ಒಟ್ಟಾಗಿ ಆತನನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಎಲ್ಲರೂ ಸೇರಿ ಆತನನ್ನು ನೆಲಕ್ಕೆ ಕೆಡವಿ ಹಿಡಿದಿದ್ದಾರೆ. ಬಳಿಕ ವಿಮಾನವು ಮುಂಜಾನೆ ಸುಮಾರು 1 ಗಂಟೆಗೆ ಫೀನಿಕ್ಸ್ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಘಟನೆಯಲ್ಲಿ ಸಂಬಂಧಪಟ್ಟ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇತರ ಯಾವುದೇ ಪ್ರಯಾಣಿಕರು ಅಥವಾ ವಿಮಾನ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಿದ ಬಳಿಕ ವಿಮಾನವು ತನ್ನ ಪ್ರಯಾಣವನ್ನು ಮುಂದುವರಿಸಿದೆ.
ವಿಮಾನ ಲ್ಯಾಂಡ್ ಆದ ನಂತರ ಕಾನೂನು ಜಾರಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಲು ನೆರವಾಗಿದ್ದಾರೆ ಎಂದು ಅಮೆರಿಕನ್ ಏರ್ಲೈನ್ಸ್ ಹೇಳಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಕೂಡ ಘಟನೆಯ ಮಾಹಿತಿಯನ್ನು ದೃಢಪಡಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರಯಾಣಿಕನನ್ನು ಬಂಧಿಸಿಲ್ಲ ಎಂದು ಫೀನಿಕ್ಸ್ ಪೊಲೀಸರು ತಿಳಿಸಿದ್ದಾರೆ. ಆದರೆ, ಪ್ರಕರಣದ ಕುರಿತು ಎಫ್ಬಿಐಗೆ ಮಾಹಿತಿ ನೀಡಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ವರದಿಗಳು ತಿಳಿಸಿವೆ.









