ಪ್ರಯಾಣಿಕರೇ ಸಾರಿಗೆ ಸಂಸ್ಥೆಯ ಜೀವಾಳ

0
ksrtc
Spread the love

ವಿಜಯಸಾಕ್ಷಿ ಸುದ್ದಿ, ಗದಗ : ರಸ್ತೆ ಸಾರಿಗೆ ನೌಕರರು ಕರ್ತವ್ಯ ನಿರ್ವಹಣೆಯಲ್ಲಿ ಸಾರ್ವಜನಿಕರಿಗೆ ಗೌರವದಿಂದ ವರ್ತಿಸುವ ಮೂಲಕ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ನೀಡಬೇಕೆಂದು ವಾ.ಕ.ರ.ಸಾ ಸಂಸ್ಥೆಯ ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಂ. ದೇವರಾಜ ಅಭಿಪ್ರಾಯಪಟ್ಟರು.

ಅವರು ಗುರುವಾರ ಗದಗ ಹೊಸ ಬಸ್‌ನಿಲ್ದಾಣದ ಸಭಾಂಗಣದಲ್ಲಿ ಸೇವಾ ನಿವೃತ್ತರಾದ ಸಾರಿಗೆ ನಿಯಂತ್ರಕ ಶಶಿಧರ ಕೊಡಕೇರಿ ಅವರಿಗೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರಿಗೆ ನೌಕರರಲ್ಲಿ ಅದರಲ್ಲೂ ವಿಶೇಷವಾಗಿ ಬಸ್ ಡ್ರೈವರ್, ಕಂಡಕ್ಟರ್ ಹಾಗೂ ಕಂಟ್ರೋಲರ್ ಪ್ರಯಾಣಿಕರೊಂದಿಗೆ ತಾಳ್ಮೆ, ಸಹನೆಯಿಂದ ವರ್ತಿಸಬೇಕು. ಪ್ರಯಾಣಿಕರಿಗೆ ಸಹಕಾರ ನೀಡಿ ಅಗತ್ಯ ಮಾಹಿತಿ ನೀಡಬೇಕು, ಪ್ರಯಾಣಿಕರೇ ಸಂಸ್ಥೆಯ ಜೀವಾಳ ಎಂದರು.

ಗದಗ ಹೊಸ ಬಸ್‌ನಿಲ್ದಾಣದಲ್ಲಿ ಸಾರಿಗೆ ನಿಯಂತ್ರಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತರಾಗುತ್ತಿರುವ ಕೊಡಕೇರಿ ಅವರ ನಿವೃತ್ತಿಯ ಬದುಕು ನೆಮ್ಮದಿಯಿಂದ ಕೂಡಿರಲಿ, ನಿವೃತ್ತಿಯ ಬಳಿಕ ಅವರಿಗೆ ಸಂಸ್ಥೆಯಿಂದ ಸಿಗಬಹುದಾದ ಸೌಲಭ್ಯಗಳನ್ನು ಕಾನೂನಿನ ಚೌಕಟ್ಟಿಗೊಳಪಟ್ಟು ಪೂರೈಸುವದಾಗಿ ಹೇಳಿದರಲ್ಲದೆ ಶಶಿಧರ ಕೊಡಕೇರಿ-ಶ್ರೀಮತಿ ಪ್ರೇಮಾ ಕೊಡಕೇರಿ ದಂಪತಿಗಳನ್ನು ಸನ್ಮಾನಿಸಿ ಶುಭ ಕೋರಿದರು.

ನಿವೃತ್ತ ಅಧಿಕಾರಿ ಪಿ.ಎಂ. ತೆರದಾಳ, ಮಲ್ಲಪ್ಪ ಹೊಸೂರ, ಭೀಮಪ್ಪ ಆಸಂಗಿ, ಗಣೇಶ ಕೊಡಕೇರಿ ಮಾತನಾಡಿದರು. ವೇದಿಕೆಯ ಮೇಲೆ ಸಂಸ್ಥೆಯ ವಿಭಾಗೀಯ ಸಂಚಲನಾಧಿಕಾರಿ ಪಿ.ವೈ. ಗಡೇದ, ಕಾರ್ಮಿಕ ಮುಖಂಡರಾದ ಶಾಂತಣ್ಣ ಮುಳವಾಡ, ಎಂ.ಆಂಜನೇಯ, ಎಸ್.ಕೆ. ಅಯ್ಯನಗೌಡ್ರ, ಬಿ.ಎಚ್. ರಾಮೇನಹಳ್ಳಿ, ಯು.ಟಿ. ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.

ಯಮನೂರ ಹಳ್ಳಿ ಸ್ವಾಗತಿಸಿದರು. ಸಂತೋಷ ಕುಲಕರ್ಣಿ ನಿರೂಪಿಸಿದರು. ಎಸ್.ಕೆ. ಅಯ್ಯನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಆಂಜನೇಯ ವಂದಿಸಿದರು. ಸಮಾರಂಭದಲ್ಲಿ ಸಾರಿಗೆ ಸಂಸ್ಥೆಯ ಕಾರ್ಮಿಕ ಮುಖಂಡರು, ನೌಕರರು, ಕೊಡಕೇರಿ ಕುಟುಂಬದವರು, ಅಭಿಮಾನಿಗಳು ಪಾಲ್ಗೊಂಡಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೊಡಕೇರಿ, ಸಂಸ್ಥೆ ನನಗೆ ಉದ್ಯೋಗ ಕೊಟ್ಟು ನನ್ನ ಭವಿಷ್ಯವನ್ನು ರೂಪಿಸಿದೆ. ಸಂಸ್ಥೆಯನ್ನು ಮರೆಯಲಾರೆ ಎಂದರಲ್ಲದೆ ಸಾರಿಗೆ ಸಂಸ್ಥೆಯಲ್ಲಿ ತಾಳ್ಮೆ, ಸಹನೆ ಮುಖ್ಯವಾಗಿದ್ದು, ಹೊಸ ತಲೆಮಾರಿನ ನೌಕರರು ಇದನ್ನು ರೂಢಿಸಿಕೊಳ್ಳಬೇಕೆಂದರು.


Spread the love

LEAVE A REPLY

Please enter your comment!
Please enter your name here