ವಿಜಯಸಾಕ್ಷಿ ಸುದ್ದಿ, ಮುಳಗುಂದ : ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಪಿಎಸ್‌ಐ ವಿ.ಎಸ್. ಚವಡಿ ಅವರ ಅಧ್ಯಕ್ಷತೆಯಲ್ಲಿ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ವಿ.ಎಸ್. ಚವಡಿ, ಮೊಹರಂ ಸೌಹಾರ್ದತೆಯ ಹಬ್ಬವಾಗಿದ್ದು, ಶಾಂತಿ-ಸುವ್ಯವಸ್ಥೆಯಿಂದ ಹಬ್ಬ ಆಚರಣೆ ಮಾಡಬೇಕು. ಹೆಜ್ಜೆ ಮೇಳಗಳಿಗೆ ಧ್ವನಿವರ್ಧಕ ಬಳಸುವವರು ಕಡ್ಡಾಯವಾಗಿ ಪರವಾನಿಗೆ ತೆಗೆದುಕೊಳ್ಳಬೇಕು. ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಸತತ ಮಳೆ ಇರುವುದರಿಂದ ಅಲೈದೇವರು ಸೇರುವ ನಿಗದಿತ ಸ್ಥಳಗಳ ಸುತ್ತಮುತ್ತ ಮನೆಗಳ ಮಾಳಿಗೆ ಮೇಲೆ ಯಾರೂ ಹತ್ತಬಾರದು. ಹಿರಿಯರ ಮಾರ್ಗದರ್ಶನದಲ್ಲಿ ಹಬ್ಬ ಆಚರಿಸಿ ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಅಂಜುಮನ್ ಕಮಿಟಿ ಸದಸ್ಯ ಎ.ಡಿ. ಮುಜಾವರ ಮಾತನಾಡಿ, ಪಟ್ಟಣದಲ್ಲಿ ಸೌಹಾರ್ದತೆಯ ವಾತಾವರಣವಿದ್ದು, ಶಾಂತಿ-ಸುವ್ಯವಸ್ಥೆಯಿಂದ ಹಬ್ಬ ಆಚರಣೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಅಂಜುಮನ್ ಕಮಿಟಿಯ ಅಧ್ಯಕ್ಷ ತಾಜುದ್ದೀನ ಕಿಂಡ್ರಿ ಮಾತನಾಡಿದರು. ಜಿಲಾನಿ ಮುಲ್ಲಾ, ಇಮಾಮಹುಸೇನ ಖಾಜಿ, ದಾವಲಸಾಬ ಲಕ್ಷ್ಮೇಶ್ವರ, ಮಹ್ಮದ ರಫೀಕ ದಲೀಲ, ಎಎಸ್‌ಐ ಈಶ್ವರ ಸಾದರ, ಚಿಂಚಲಿ ಗ್ರಾಮದ ಹಿರಿಯರು, ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.