ರಾಮನಗರ, ಆ.19: ವೃಷಭಾವತಿ ನದಿಯಲ್ಲಿ ₹500 ಮುಖಬೆಲೆಯ ನೋಟುಗಳ ಕಂತೆಗಳು ತೇಲುತ್ತಿರುವುದು ಕಂಡು ರಾಮನಗರದ ವೃಷಭಾಪುರ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಸಲಿ ಹಣ ಎಂದು ಭಾವಿಸಿ ಸ್ಥಳೀಯರು ಪರಿಶೀಲಿಸಿದಾಗ, ನೋಟುಗಳೆಲ್ಲವೂ ನಕಲಿ ಎಂಬುದು ಪತ್ತೆಯಾಗಿದೆ.
ವೃಷಭಾಪುರ ಗ್ರಾಮದ ಬಳಿ ನದಿಯಲ್ಲಿ ಬರೋಬ್ಬರಿ 20 ಕಂತೆ ₹500 ನೋಟುಗಳು ನೀರಿನಲ್ಲಿ ಬಿದ್ದಿದ್ದವು. ನೋಟುಗಳ ಕಂತೆಗಳನ್ನು ಕಂಡ ಗ್ರಾಮಸ್ಥರು ಅಚ್ಚರಿಗೊಂಡು ಸ್ಥಳಕ್ಕೆ ಧಾವಿಸಿದ್ದರು.
ಆದರೆ ಪರಿಶೀಲನೆ ನಡೆಸಿದಾಗ ಅಪರಿಚಿತರು ಎಸೆದು ಹೋಗಿರುವ ನೋಟುಗಳು ನಕಲಿ ಎಂಬುದು ಬೆಳಕಿಗೆ ಬಂದಿದೆ. ಇಷ್ಟೊಂದು ಪ್ರಮಾಣದ ನಕಲಿ ನೋಟುಗಳು ನದಿಗೆ ಹೇಗೆ ಬಂದವು ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೇ ರಾಮನಗರದ ದೊಡ್ಡೇರಿ ಗ್ರಾಮದ ಬಳಿ ಫಾರ್ಮ್ಹೌಸ್ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ಔಷಧಿಗಳ ಮರುಪ್ಯಾಕಿಂಗ್ ಜಾಲ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ನದಿಯಲ್ಲಿ ನಕಲಿ ನೋಟುಗಳ ಕಂತೆಗಳು ಪತ್ತೆಯಾಗಿರುವುದು ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿದೆ.
ನಕಲಿ ನೋಟುಗಳನ್ನು ಯಾರು ತಂದು ನದಿಗೆ ಎಸೆದರು? ಇದರ ಹಿಂದೆ ಯಾವುದೇ ಜಾಲವಿದೆಯೇ? ಎಂಬ ಪ್ರಶ್ನೆಗಳಿಗೆ ತನಿಖೆಯ ಬಳಿಕ ಉತ್ತರ ಸಿಗಬೇಕಿದೆ.



