ಬೆಂಗಳೂರು: ಆರೋಗ್ಯ ಸುರಕ್ಷತಾ ದೃಷ್ಟಿಯಿಂದ ಕರ್ನಾಟಕದಲ್ಲಿ ಹಲವು ನಿಯಮಗಳನ್ನು ಜಾರಿಗೆ ತರಲಾಗಿದೆ. ಗೋಬಿ ಮಂಚೂರಿಗೆ ಬೆರೆಸುತ್ತಿದ್ದ ರಾಸಾಯನಿಕ ಬಣ್ಣವನ್ನು ಬಳಸದಂತೆ ನಿಷೇಧ ಹೇರಲಾಯಿತು.
ಕಾಟನ್ ಕ್ಯಾಂಡಿಗೂ ಅದೇ ನಿಯಮ ತರಲಾಯಿತು. ಇದೀಗ ರಾಜ್ಯದಾದ್ಯಂತ ಇನ್ಮುಂದೆ ಹೋಟೆಲ್, ರೆಸ್ಟೋರೆಂಟ್, ಉಪಾಹಾರ ಗೃಹಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಹೋಟೆಲ್, ರಸ್ತೆಬದಿ ತಿಂಡಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಬಳಸುವಂತಿಲ್ಲ. ಇನ್ಮುಂದೆ ಆಹಾರ ತಯಾರಿಕೆ, ವಿತರಣೆ ವೇಳೆ ಪ್ಲಾಸ್ಟಿಕ್ ಬಳಸಬಾರದು ಎಂದು ಗುಂಡೂರಾವ್ ಹೇಳಿದ್ದಾರೆ.
ಸುಮಾರು 251 ತಿಂಡಿ ಹೋಟೆಲ್, ಅಂಗಡಿಗಳಿಂದ ಸ್ಯಾಂಪಲ್ಸ್ ಪಡೆಯಲಾಗಿತ್ತು. ಅವುಗಳ ಪೈಕಿ 51 ಕಡೆ ಸಂಗ್ರಹಿಸಿದ್ದ ಸ್ಯಾಂಪಲ್ಸ್ ಅಸುರಕ್ಷಿತ ಎಂಬುದು ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅವುಗಳಲ್ಲಿ ಕಾರ್ಸಿನೋಜೆನಿಕ್ ಅಂಶ ಪತ್ತೆಯಾಗಿದೆ. ಪ್ಲಾಸ್ಟಿಕ್ ಬಳಕೆಯಿಂದ ಇಡ್ಲಿಯಲ್ಲಿ ಕಾರ್ಸಿನೋಜೆನಿಕ್ ಅಂಶ ಸೇರಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.