ನವದೆಹಲಿ:- ಜನವರಿ 11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್‌ನ ಪ್ರಸಿದ್ಧ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಲಿದ್ದು, ಈ ವೇಳೆ ‘ಸೋಮನಾಥ ಸ್ವಾಭಿಮಾನ ಪರ್ವ’ದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಜನವರಿ 8ರಿಂದ 11ರವರೆಗೆ ನಡೆಯಲಿರುವ ಈ ಪರ್ವವು ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಒಳಗೊಂಡಿದ್ದು, ಭಾರತದ ಪ್ರಾಚೀನ ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರೀಯ ಸ್ವಾಭಿಮಾನವನ್ನು ಬಲಪಡಿಸುವ ಉದ್ದೇಶ ಹೊಂದಿದೆ. ಧಾರ್ಮಿಕ ಅನುಷ್ಠಾನಗಳು, ಆಧ್ಯಾತ್ಮಿಕ ಪ್ರವಚನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಜಾಗೃತಿ ಅಭಿಯಾನಗಳು ಈ ಅವಧಿಯಲ್ಲಿ ನಡೆಯಲಿವೆ.
ಮೊಹಮ್ಮದ್ ಘಜನಿ ಸೋಮನಾಥ ದೇವಾಲಯವನ್ನು ಧ್ವಂಸಗೊಳಿಸಿದ 1000 ವರ್ಷಗಳನ್ನು ಸ್ಮರಿಸುವ ಈ ಕಾರ್ಯಕ್ರಮವು, ಅನೇಕ ಆಕ್ರಮಣಗಳ ನಡುವೆಯೂ ಪುನಃಪುನಃ ನಿರ್ಮಾಣಗೊಂಡು ನಿಂತಿರುವ ಸೋಮನಾಥ ದೇವಾಲಯದ ಸನಾತನ ಪರಂಪರೆ ಮತ್ತು ಆಸ್ತಿಕತೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿಯಲಿದೆ.



