ನವದೆಹಲಿ:– ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ 75ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಮೋದಿಗೆ ಫೋನ್ ಕರೆ ಮಾಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ ಮಾಡಿದ್ದಾರೆ.
ಟ್ರಂಪ್ ಶುಭಾಶಯಕ್ಕೆ ಮೋದಿ ಧನ್ಯವಾದ ತಿಳಿಸಿದ್ದಾರೆ. ಭಾರತ-ಅಮೆರಿಕ ಸಂಬಂಧಗಳನ್ನು ಉತ್ತಮಗೊಳಿಸುವ ಬದ್ಧತೆ ಮತ್ತು ಉಕ್ರೇನ್ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ಅಮೆರಿಕದ ನಿಲುವಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ಪ್ರಧಾನಿ ಒತ್ತಿ ಹೇಳಿದ್ದಾರೆ.
ನಿಮ್ಮಂತೆಯೇ ನಾನು ಕೂಡ ಭಾರತ-ಯುಎಸ್ ಸಮಗ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಎತ್ತರಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರದತ್ತ ನಿಮ್ಮ ಉಪಕ್ರಮಗಳನ್ನು ನಾವು ಬೆಂಬಲಿಸುತ್ತೇವೆ ಎಂದು ಪ್ರಧಾನಿ ಮೋದಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಟ್ರಂಪ್ ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ, ಪ್ರಧಾನಿ ಮೋದಿಯವರೊಂದಿಗೆ ಸಂಭಾಷಣೆ ಅದ್ಭುತವಾಗಿತ್ತು. ಉಕ್ರೇನ್-ರಷ್ಯಾ ಯುದ್ಧವನ್ನು ಪರಿಹರಿಸುವಲ್ಲಿ ಅಮೆರಿಕದ ಉಪಕ್ರಮಗಳಿಗೆ ಭಾರತದ ಬೆಂಬಲಕ್ಕಾಗಿ ಮೋದಿ ಅವರನ್ನು ಶ್ಲಾಘಿಸುತ್ತೇನೆಂದು ತಿಳಿಸಿದ್ದಾರೆ.