ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟ ಜಾಲವನ್ನು ಭೇದಿಸಿರುವ ಪೊಲೀಸರು, ಬರೋಬ್ಬರಿ 5.87 ಕೋಟಿ ರೂಪಾಯಿ ಮೌಲ್ಯದ 5.87 ಕೆಜಿ MDMA ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಕೆಂಚೇನಹಳ್ಳಿ ಬಳಿ ಕೆಲವರು ಮಾದಕ ವಸ್ತುಗಳನ್ನು ಮಾರಾಟ ಮಾಡಲು ಕಾಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಯಲಹಂಕ ನ್ಯೂಟೌನ್ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಗಂಗೊಂಡನಹಳ್ಳಿಯ 28 ವರ್ಷದ ಕಾರು ಮೆಕ್ಯಾನಿಕ್ ಇಮ್ರಾನ್ ಪಾಷಾ ಹಾಗೂ ಹೊಸಕೋಟೆಯ 27 ವರ್ಷದ ಆಯೇಷಾ ಸಿದ್ದಿಕಿ ಬಂಧಿತ ಆರೋಪಿಗಳು. ಇವರಿಂದ 5.72 ಕೆಜಿ MDMA ವಶಪಡಿಸಿಕೊಳ್ಳಲಾಗಿದೆ.
ನವದೆಹಲಿಯಿಂದ ವಿಮಾನದಲ್ಲಿ ಬಂದು ಡ್ರಗ್ಸ್ ಸಾಗಾಟ!
ವಿಚಾರಣೆ ವೇಳೆ ಆರೋಪಿಗಳ ಡ್ರಗ್ಸ್ ಸಾಗಾಟದ ಜಾಲ ಬಯಲಾಗಿದೆ. ನವದೆಹಲಿಯಿಂದ ಮಾದಕ ವಸ್ತುಗಳ ಪಾರ್ಸೆಲ್ ತಂದುಕೊಟ್ಟರೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಇವರಿಗೆ ಆಮಿಷವೊಡ್ಡಲಾಗಿತ್ತು ಎನ್ನಲಾಗಿದೆ. ಅದರಂತೆ ಇಬ್ಬರೂ ವಿಮಾನದ ಮೂಲಕ ನವದೆಹಲಿಗೆ ತೆರಳಿ, ಅಲ್ಲಿನ ಪೂರೈಕೆದಾರರಿಂದ ಮಾದಕ ವಸ್ತುಗಳನ್ನು ಪಡೆದುಕೊಂಡಿದ್ದರು. ಬಳಿಕ ಹರಿಯಾಣ ನೋಂದಣಿಯ ಟ್ಯಾಕ್ಸಿಯಲ್ಲಿ ಬೆಂಗಳೂರಿಗೆ ಸಾಗಾಟ ಮಾಡಿದ್ದರು ಎಂದು ತಿಳಿದುಬಂದಿದೆ.
ಈ ಜಾಲದ ಹಿಂದೆ ಯಾರಿದ್ದಾರೆ? ಆರೋಪಿಗಳಿಗೆ ಡ್ರಗ್ಸ್ ಪೂರೈಕೆ ಮಾಡಿದವರು ಯಾರು? ಬೆಂಗಳೂರಿನಲ್ಲಿ ಈ ಮಾದಕ ವಸ್ತುಗಳನ್ನು ಯಾರಿಗೆ ತಲುಪಿಸಬೇಕಿತ್ತು? ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಭಾರತಿನಗರ ಪೊಲೀಸರಿಂದ ಮತ್ತೊಂದು ಕಾರ್ಯಾಚರಣೆ:
ಇನ್ನೊಂದೆಡೆ, ಭಾರತಿನಗರ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿ 150.43 ಗ್ರಾಂ MDMA ವಶಪಡಿಸಿಕೊಂಡಿದ್ದಾರೆ. ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿಸಿ, ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಎರಡೂ ಪ್ರಕರಣಗಳನ್ನು ಸೇರಿ ಪೊಲೀಸರು ಒಟ್ಟು 5 ಕೆಜಿ 870 ಗ್ರಾಂನಷ್ಟು MDMA ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಡ್ರಗ್ಸ್ ಜಾಲದ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ.









